ಮುದುಕಿ ವೇಶದ ಕೊಲೆಗಾರ - ಲೇಡಿ ಡಾಕ್ಟರ್ ಕತೆ ಹೇಳುವದು.
"ನಾನು ಮಗುವಾಗಿದ್ದಾಗಿಂದಲೂ ನನ್ನ ತಂದೆ-ತಾಯಿಗೆ ನನ್ನ ನೋಡಿಕೊಳ್ಳಲು, ಪುರಸೊತ್ತಿರಲಿಲ್ಲ, ಅವರು ಯಾವಗಲೂ ’ಬಿಜಿ’ ಇರೋರು, ಹಾಗಾಗಿ ನಾನು ತಂದೆ-ತಾಯಿ ಇದ್ದೂ ದಿಕ್ಕಿಲ್ಲದವರಂತೆಯೇ ಬೆಳೆದದ್ದು", ಈ ಮಾತು ಹೇಳುವಾಗ ಅವನ ದನಿಯಲ್ಲಿ ನಡುಕವಿತ್ತು. ಮರುಕದಿಂದ ಅವನ ಮಾತು ಕೇಳುತ್ತಿದ್ದೆ, ನಾನು. ನನ್ನ ಟೇಬಲ್ಲಿನ ಎಡ ಮಗ್ಗುಲಲ್ಲಿ ಕೊಂಚ ದೂರ ಇರುವ ಸೋಫಾ ಮೇಲೆ ಕುಳಿತು ಆತ ಹೇಳುತ್ತಿದ್ದ.
ಇವೊತ್ತು ಸಂಜೆ ಹೊತ್ತಿಗೆಲ್ಲ, ಮೊದಲೇ ಗೊತ್ತುಪಡಿಸಿದ್ದ, ಎಲ್ಲ ರೋಗಿಗಳನ್ನೂ ನೋಡಿಯಾಗಿತ್ತು. ಇನ್ನೇನು ಹೊರಡಲನುವಾಗಿದ್ದಾಗ, ನನ್ನ ರೆಸೆಪ್ಶನಿಸ್ಟ್ ಫೋನ್ ಮಾಡಿ, ಒಬ್ಬ ನನ್ನನ್ನು ನೋಡಲೇಬೇಕೆಂದು ಬಂದಿದ್ದು, ತುಂಬ ಅರ್ಜಂಟ್ ಅಂತೆ ಅಂದಳು. ಸರಿ, ಕತ್ತಲು ಕವಿಯುವದರೊಳಗೆ, ನೋಡಿ ಮುಗಿಸಿ, ಹೋಗೋಣ ಅಂತ ಒಳಗೆ ಬರಹೇಳಿದೆ.
"ಡಾಕ್ಟರ್, ಹಲವು ದಿನಗಳಿಂದ ಸುದ್ದಿಯಲ್ಲಿರುವ, ಮುದುಕಿ ವೇಶದ ಸರಣಿ ಕೊಲೆಗಾರನ ಬಗ್ಗೆ ನೀವು ಕೇಳಿರಬಹುದು" ಅಂದ. ’ಹೌದು, ಕೇಳಿದಿನಿ, ಪೇಪರ್ನಲ್ಲೂ ಓದಿದಿನಿ’ ಅಂದೆ. "ಅವನು ಕೊಲೆ ಮಾಡುವ ಮುನ್ನ, ಕೊಲೆ ಆಗುವವರು ಯಾರು ಅನ್ನುವದು ನನಗೆ ಮೊದಲೇ ಗೊತ್ತಾಗುತ್ತೆ", "ಹೇಗೆ?", "ಕೊಲೆ ಆಗುತ್ತಿರುವ ನೋಟ ನನ್ನ ಕಣ್ ಮುಂದೆ ಕಟ್ಟಿದ ಹಾಗೆ ಮೂಡುತ್ತದೆ, ಆಗ ನನಗೆ ತುಂಬ, ಹೆದರಿಕೆ, ದುಗುಡ ಆಗುತ್ತದೆ, ಮೈ ಮೇಲೆ ಎಚ್ಚರ ಇಲ್ಲದಂತಾಗುತ್ತದೆ."
ನನಗೆ ಒಮ್ಮೆಲೆ, ದುಗುಡ ಆದರೂ, ತೋರಗೊಡದೇ, "ಹಾಗಿದ್ದರೆ, ಆ ಕೊಲೆಗಾರ ಯಾರು ಅಂತ, ಪೋಲಿಸರಿಗೆ ತಿಳಿಸಬಹುದಲ್ಲ" ಅಂದೆ. ’ಇಲ್ಲ ಡಾಕ್ಟರ್, ಆತ ಮುಕಕ್ಕೆ, ಮುದುಕಿಯ ಮುಕವಾಡ ಹಾಕಿರುತ್ತಾನೆ, ಯಾರು ಅಂತ ಗೊತ್ತಾಗೋದಿಲ್ಲ’ ಅಂದ. "ನಿಮ್ಮ ತಂದೆ ತಾಯಿಗೆ, ಈ ಸಂಗತಿ ಹೇಳಿದ್ದೀರ", "ಇಲ್ಲ ಡಾಕ್ಟರ್, ಅವರಿಗೆ ಗೊತ್ತಾದರೆ, ತುಂಬ ಆತಂಕ ಪಡುತ್ತಾರೆ".
ನಾನು ಕೇಳುವದನ್ನು ಮುಂದಿವರಿಸಿದೆ,
"ನಿಮಗೆ ಗೆಳೆಯರು ಇಲ್ಲವೇ?"
"ಇದ್ದರು, ಈಗಿಲ್ಲ"
"ಅಂದರೆ?"
"ನನಗೆ ಒಬ್ಬ ಒಳ್ಳೆಯ ಗರ್ಲ್ ಫ್ರೆಂಡ್ ಇದ್ದಳು, ಆಕೆಯ ಗೆಳೆಯ/ಗೆಳತಿಯರೆಲ್ಲ ನನಗೆ ಗೆಳೆಯರಾಗಿದ್ದರು. ಅವರೆಲ್ಲ ನನ್ನ ಜೊತೆ ಇದ್ದಾಗ, ನಾನು ತುಂಬ ಸಂತಸದಿಂದಿದ್ದೆ. ಒಂದು ದಿನ, ನನ್ನ ಗರ್ಲ್ ಫ್ರೆಂಡ್ ಜೊತೆ ಇದ್ದಾಗ, ನನಗೆ ಮುದುಕಿ ವೇಶದ ಸರಣಿ ಕೊಲೆಗಾರ, ಕೊಲ್ಲುತ್ತಿರುವ ನೋಟ, ಕಣ್ಣಿಗೆ ಕಟ್ಟಿದಂತೆ ಕಾಣತೊಡಗಿತು, ಅದು ಸ್ಕೂಲ್ ಟೀಚರ್ ಒಬ್ಬಳ ಕೊಲೆಯ ನೋಟ. ನನ್ನ ಮೈಯಲ್ಲ ನಡುಕ ಬಂದು, ನನ್ನ ಮೇಲೆ ನನಗೇ ಹಿಡಿತವಿಲ್ಲದೇ, ಹೇಗೇಗೋ ಆಡತೊಡಗಿದೆ. ನನ್ನ ಗೆಳತಿ ಹೆದರಿಕೊಂಡಳು."
"ಆಮೇಲೆ?"
"ಮರುದಿವಸ, ನಾನು ಸ್ಕೂಲ್ ಬಳಿ ಹೋದೆ, ಅಲ್ಲಿ ನನಗೆ ಕಂಡಂತೆಯೇ ಕೊಲೆ ನಡೆದು ಹೋಗಿತ್ತು, ಆಕೆಯ ಮೈಯ ಒಂದೊಂದು ಪಾಲು ಸ್ಕೂಲಿನ ಸುತ್ತ, ಒಂದೊಂದು ಕಡೆ ಸಿಕ್ಕವು, ಆದರೆ ಒಂದು ಭಾಗವಂತು ಎಸ್ಟು ಹುಡುಕಿದರೂ ಸಿಗಲಿಲ್ಲ"
"ಯಾವ ಭಾಗ?"
"ರುಂಡ!!"
"ವಿಶಯ ತಿಳಿದಾಗಿಂದ ನನ್ನನ್ನು ಪೂರ್ತಿ ಅವಾಯ್ಡ್ ಮಾಡಹತ್ತಿದಳು. ಆಕೆ ಗೆಳೆಯ/ಗೆಳತಿಯರೆಲ್ಲ ನನ್ನಿಂದ ದೂರವಾದರು, ನಾನು ಮತ್ತೆ ಒಂಟಿಯಾದೆ", ಅವನ ಕಣ್ಣಲ್ಲಿ ನೀರಾಡುತ್ತಿತ್ತು. ನನಗೆ ಸಣ್ಣಗೆ ನಡುಕ ಶುರುವಾಗಿತ್ತು. ಅಸ್ಟರಲ್ಲಿ ಸಂಜೆ ಮುಗಿದು, ಮಬ್ಬುಗತ್ತಲು ಕವಿದಿತ್ತು, ಆಗಲೇ ಸೆಕ್ರೆಟರಿ ಫೋನ್ ಮಾಡಿ, ತಾನು ಹೊರಡುವದಾಗಿ ಹೇಳಿದಳು, ’ಇನ್ನೇನು, ಕೌನ್ಸೆಲಿಂಗ್ ಮುಗಿಯುತ್ತೆ, ಕೊಂಚ ಹೊತ್ತು, ಇರಲಾಗದೇ?’ ಎಂದೆ, ತನಗೆ ಒಂದು ಮುಕ್ಕೆ ಕೆಲಸವಿದ್ದು, ಹೋಗಲೇಬೇಕೆಂದು, ಹೋದಳು. ೫ನೇ ಫ್ಲೋರ್ನಲ್ಲಿನ ನನ್ನ ಕ್ಲಿನಿಕ್ನಲ್ಲಿ ಇದೀಗ ಆ ವೆಕ್ತಿಯೊಂದಿಗೆ ನಾನೊಬ್ಬಳೇ ಅನ್ನುವದನ್ನು ತಿಳಿದೂ, ನಾನು ಮನಸ್ಸನ್ನು ಗಟ್ಟಿ ಮಾಡಿಕೊಂಡೆ.
"ಸರಿ, ಮುಂದೆ?" ಅಂದೆ.
"ಮುಂದೆ, ಕೆಲ ದಿವಸಗಳ ನಂತರ, ನನ್ನ ಗರ್ಲ್ ಫ್ರೆಂಡ್ಳನ್ನೇ ಆತ ಕೊಲೆ ಮಾಡುವಂತೆ, ನನಗೆ ಕಂಡಿತು. ಅದನ್ನು ತಪ್ಪಿಸಲೇ ಬೇಕು ಅಂತ, ನಾನು ತುಂಬಾ ಜತನಪಟ್ಟೆ, ಆದರೆ ನಾನು ಹೋಗುವದರೊಳಗೆ ಕೊಲೆ ನಡೆದು ಹೋಗಿತ್ತು. ತುಂಬಾ ನೊಂದೆ ಡಾಕ್ಟರ್"
"ಹೀಗೆ ನಿಮಗೇನೇ ಯಾಕೆ ಆಗುತ್ತೆ, ಅನ್ನೋದರ ಬಗ್ಗೆ, ನಿಮಗೆ ಏನು ಅನಿಸುತ್ತೆ?" ಅಂದೆ.
"ಗೊತ್ತಿಲ್ಲ ಡಾಕ್ಟರ್, ನನಗೇ ತಿಳಿಯದೇ ಯಾವುದೋ ಮಾನಸಿಕ ರೋಗಕ್ಕೆ ಬಲಿಯಾಗಿ, ಸೈಕೋಪಾತ್ನಂತೆ ಎಲ್ಲಿ ನಾನೇ ಇದನ್ನೆಲ್ಲ ಮಾಡ್ತಿದಿನೇನೋ ಅನಿಸುತ್ತೆ ಕೆಲವೊಮ್ಮೆ.."
ನನ್ನ ನಡುಕ ಹೆಚ್ಚಿತು, ಟೇಬಲ್ ಮೇಲಿದ್ದ, ಹಣ್ಣು ಕುಯ್ಯುವ ಜಾಕುವನ್ನು, ಮರೆ ಮಾಡಿ, ಕೈಯಲ್ಲಿ ಮುಚ್ಚಿ ಹಿಡಿದುಕೊಂಡೆ, ಹೆದರಿಕೆಯನ್ನು ತೋರಗೊಡದೆ, "ನೋಡು, ನಿನಗೆ ನಿಕ್ಕುವ ಹೆಲ್ಪ್ ಮಾಡುವೆ, ಆದರೆ, ಇದನ್ನು ಮೊದಲು ನಿಮ್ಮ ತಂದೆ ತಾಯಿಯರಿಗೆ ತಿಳಿಸಬೇಕು" ಅಂತ. ಇನ್ನೊಂದು ಕೈಯಿಂದ ಫೋನ್ ರಿಸೀವರ್ ಎತ್ತಿದೆ. "ಇಲ್ಲ ಡಾಕ್ಟರ್, ನಾನು ನಿಮ್ಮ ಬಳಿ ತೋರಿಸಿಕೊಳ್ಳಲು ಬರಲಿಲ್ಲ, ಮುದುಕಿ ವೇಶದ ಕೊಲೆಗಾರನ ಮುಂದಿನ ಬಲಿ ನೀವೇ, ಅದಕ್ಕೆ ಎಚ್ಚರದಿಂದಿರಿ, ಅಂತ ಹೇಳಲು ಬಂದೆ"!!.. ಅನ್ನುತ್ತ ಆ ವೆಕ್ತಿ ಬಳಿ ಬಂದ. ಚಾಕು ಮುಂದೆ ಮಾಡಿ, ಹೆದರಿಸಿದೆ, ಬೆದರಿಸಿದೆ, ಆತ ಹೆದರಿದಂತೆ ಕಾಣಲಿಲ್ಲ, "ನನ್ನನ್ನು ನಂಬಿ" ಅನ್ನುತ್ತ ಬಳಿ ಬರತೊಡಗಿದ.. ಟೇಬಲ್ ಮೇಲಿದ್ದ ರೆಸಿಪ್ಟ್ ಚುಚ್ಚುವ ಮುಳ್ಳು, ಅವನಿಗೆ ಹೇಗೋ ನಾಟಿತು.
ಹೇಗೋ, ಬಡಜೀವ ಬದುಕಿತು ಅಂತ, ಲಿಫ್ಟ್ ಕಡೆ ಓಡಿದೆ. ಆತ ನೋವಿನಲ್ಲೂ, ನನ್ನ ಹಿಂಬಾಲಿಸಿ ಬಂದ. ಲಿಫ್ಟ್ ಬಟನ್ ಎಸ್ಟು ಅದುಮಿದರೂ ಬರವಲ್ಲದು ಬೇರೆ, ಆ ವೆಕ್ತಿ ಹತ್ತಿರ ಹತ್ತಿರ ಬರುತ್ತಿದೆ, ಲಿಫ್ಟ್ ಇನ್ನೂ ಒಂದನೇ ಫ್ಲೋರ್ ನಲ್ಲಿದೆ.. ಆ ವೆಕ್ತಿ ಇನ್ನೂ ಹತ್ತಿರ ಬಂತು!!.. ಲಿಫ್ಟ್ ಬರುತ್ತಿದೆ.. ೨..೩...೪...೫..
ಲಿಫ್ಟ್ ತೆರೆದುಕೊಂಡಿತು..
ಮುದುಕಿ ವೇಶದ ವೆಕ್ತಿಯೊಬ್ಬ ದೊಡ್ಡ ಚಾಕುವಿನೊಂದಿಗೆ ಲಿಫ್ಟ್ ನಲ್ಲಿ ನಿಂತಿತ್ತು!!!