ಜನಪದರ ಸೃಷ್ಟಿ: ಮಕ್ಕಳ ಹುಣ್ಣಿಮೆ.(ತುಳುನಾಡ ಜೋಕುಲೆ ಪರ್ಬ)

ಜನಪದರ ಸೃಷ್ಟಿ: ಮಕ್ಕಳ ಹುಣ್ಣಿಮೆ.(ತುಳುನಾಡ ಜೋಕುಲೆ ಪರ್ಬ)

ಬರಹ

ಅನಾದಿಕಾಲದಿಂದಲೂ ಮಾನವನಿಗೆ ಸಾವಿನ ಭಯವು ಪೀಡಿಸುತ್ತಾ ಬಂದಿದೆ. ಸಾವು ಇಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲವಂತೆ. ಆತ್ಮೀಯರ ಅಗಲುವಿಕೆಯ ಶೂನ್ಯವನ್ನು ತುಂಬಲು ವರ್ಷದಲ್ಲಿ ಹಲವು ಆಚರಣೆಗಳು ಇವೆ. ಗತಿಸಿದ ಹಿರಿಯರ ಸದ್ಗತಿಗಾಗಿ ಎಲ್ಲಾ ಧರ್ಮಗಳು ಒಂದಲ್ಲ ಒಂದು ದಿನಗಳನ್ನು ಆಯ್ಕೆ ಮಾಡಿವೆ. ಅವುಗಳಲ್ಲಿ ಪಿತೃಪಕ್ಷದ ಮಹಾಲಯ ಅಮಾವಾಸ್ಯೆ, ಎಳ್ಳು ಅಮಾವಾಸ್ಯೆ ಮುಖ್ಯವಾದವುಗಳು.ವಯಸ್ಕರು ಮರಣಹೊಂದುವುದಕ್ಕೂ, ಮಕ್ಕಳು ಸಾಯುವುದಕ್ಕೂ ವ್ಯತ್ಯಾಸವಿದೆ. ಶಿಶುಮರಣದ ನೋವನ್ನು ತಾಯಿಯಾದವಳು ಬದುಕಿನುದ್ದಕ್ಕೂ ಅನುಭವಿಸುತ್ತಾಳೆ. ಈ ಅನಿಶ್ಚಿತ ನೋವು ಶಮನಕ್ಕೆ ಜನಪದೀಯರ ಶೋಧನೆಯೇ ಮಕ್ಕಳ ಹುಣ್ಣಿಮೆ (ಜೋಕುಲೆ ಪುಣ್ಣಿಮೆ)ಎನ್ನಬಹುದು. ಇದು ಕಾರ್ತೀಕ ಮಾಸದ ಹುಣ್ಣಿಮೆ.
ಕುಟುಂಬದಲ್ಲಿ ಮೃತಪಟ್ಟವರಿಗಾಗಿ ದೀಪಾವಳಿಯಲ್ಲಿ ಜನಪದರು ಅವಲಕ್ಕಿ ಹಾಕುತ್ತಾರೆ. ಸದ್ಗತಿಗಾಗಿ ತುಳುನಾಡಿನಲ್ಲಿ ಈ ಆಚರಣೆ ಕಂಡುಬರುತ್ತದೆ. ಅಮಾವಾಸ್ಯೆಯಂದು ಬೆಳಗಿನ ಜಾವ ಹಕ್ಕಿಗಳ ಕಲರವದ ಮೊದಲು ಮೃತಪಟ್ಟ ಮಹಿಳೆಯರಿಗೆ ಅಗೇಲು ಹಾಕಿದರೆ ಪಾಡ್ಯದಂದು ಗಂಡಸರಿಗೆ ಬಡಿಸುತ್ತಾರೆ. ಆದರೆ ತಮ್ಮ ಮನೆಯಲ್ಲಿ ಮೃತಪಟ್ಟ ಮಕ್ಕಳಿಗೆ ಜನಪದರು ಅಮಾವಾಸ್ಯೆಯಂದು ಸ್ಮರಿಸಲು ಇಷ್ಟಪಡುವುದಿಲ್ಲಾ. ಹುಣ್ಣಿಮೆಯ ಬೆಳದಿಂಗಳ ವರೆಗೂ ಕಾಯುತ್ತಾರೆ. ದೀಪಾವಳಿಯ ಬಳಿಕ ಬರುವ ಕಾರ್ತೀಕ ಮಾಸದ ಹುಣ್ಣಿಮೆಯೇ ಮಕ್ಕಳ ಹುಣ್ಣಿಮೆ (ಜೋಕುಲೆ ಪರ್ಬ). ಅಂದು ಮೃತಪಟ್ಟ ಮಕ್ಕಳ ನೆನಪಿಗಾಗಿ ದೋಸೆ ಮಾಡಲಾಗುತ್ತದೆ. ಕಾಯಿಲೆ ಕಸಾಲೆಗಳಿಗೆ (ಕಸಾಯಿಗಳಿಗೆ) ಮುಗ್ಧ ಮಕ್ಕಳು ಬಲಿಯಾಗುವುದು ಹೆತ್ತವರಿಗೆ ಬಾರೀ ನೋವು ತರುತ್ತಿತ್ತು. ತಮ್ಮ ಕರುಳಕುಡಿಗಳು ಕಣ್ಣೆದುರೇ ಮಸಣ ಸೇರುವುದನ್ನು ತಡೆಯಲು ಪೂರ್ವಜರು ಮಾಡಿದ ಪ್ರಯತ್ನ ಸಫಲವಾಗುತ್ತಿರಲಿಲ್ಲವೆಂದೇ ಕಾಣುತ್ತದೆ. ಆದ್ದರಿಂದ ಮೃತರಾದ ಮಕ್ಕಳ ನೆನಪಿನಲ್ಲಿ ಹುಣ್ಣಿಮೆಯಂದು ದೋಸೆ, ಅವಲಕ್ಕಿ, ಬಾಳೆಹಣ್ಣುಗಳನ್ನು ತಂದು ಎಲ್ಲರೂ ತಿಂದು ನೋವು ಮರೆಯುತ್ತಾರೆ.
ದೇವರಿಗೂ ದೋಸೆ ಇಷ್ಟ:- ಗ್ರಾಮಿಣ ಜನರ ದೀಪಾವಳಿಯು ಕಾವೇರಿ ಸಂಕ್ರಾಂತಿಯಂದು ಆರಂಭವಾಗಿ ಮಕ್ಕಳ ಹುಣ್ಣಿಮೆ(ಕೊಡಿ ಪರ್ಬ)ಗೆ ಅಂತ್ಯವಾಗುತ್ತದೆ. ದೇವರು ದೀಪಾವಳಿಗೆ ಮಕ್ಕಳನ್ನು ತಮ್ಮ ತಮ್ಮ ತಾಯಂದಿರು ಮಾಡಿದ ದೋಸೆ ತನ್ನಿ ಎಂದು ಆಜ್ಞಾಪಿಸುತ್ತಾನಂತೆ. ಯಾರ ಮನೆಯಲ್ಲಿ ದೋಸೆ ಇಲ್ಲವೋ ಆ ಮಕ್ಕಳ ತಿಗವನ್ನು ಬಿಸಿಯಾದ ಕಾವಲಿಗೆ ಕಾಯಿಸಿ ಇಡುತ್ತಾನಂತೆ. ಮಕ್ಕಳಿಗೆ ಆಗುವ ಹಿಂಸೆಯನ್ನು ತಾಯಿಯಾದವಳು ಸಹಿಸಿಯಾಳೇ? ಆದ್ದರಿಂದ ಚತುರ್ದಶಿಯಂದು ರಾತ್ರಿ (ಹುಣ್ಣಿಮೆಯ ಹಿಂದಿನ ದಿನ) ಅಕ್ಕಿಯನ್ನು ರುಬ್ಬುಕಲ್ಲಿನಲ್ಲಿ ಕಡೆಯುತ್ತಾರೆ. ಮತ್ತೆ ಅದೇ ಗುಂಡಿಯಲ್ಲಿ ಒಂದು ಗೆರೆಟೆಯಲ್ಲಿ ಸ್ವಲ್ಪ ಹಿಟ್ಟನ್ನು ಇಡುತ್ತಾಳೆ. ಮಕ್ಕಳು ಆ ಲೋಕದಿಂದ ಬಂದು ಹಿಟ್ಟು ನೋಡಿ ದೋಸೆಯನ್ನು ಹೊಟ್ಟೆ ತುಂಬಾ ತಿನ್ನುತ್ತಾರಂತೆ. ತನ್ನ ಮಕ್ಕಳು ಮರಣವಾದರೆ ಮಾತ್ರ ಆ ತಾಯಿ ಈ ಆಚರಣೆ ಮಾಡುತ್ತಾಳೆ. ಉಳಿದ ಮನೆಗಳಲ್ಲಿ ಈ ಆಚರಣೆ ಇರುವುದಿಲ್ಲಾ. ದೀಪಾವಳಿಯಲ್ಲಿ ಅವಲಕ್ಕಿ ಹಾಕುವುದು ಒಂದು ಪ್ರಧಾನ ಆಚರಣೆ ಹಾಗೂ ಮಕ್ಕಳ ಹುಣ್ಣಿಮೆ ಕೂಡಾ ಮಹತ್ವಪೂರ್ಣವಾಗಿದೆ.

ಸಿಂಧುಶ್ರೀ ನೆಲ್ಯಾಡಿಯವರ ಲೇಖನ.