ಡ್ಯಾಶರ್

ಡ್ಯಾಶರ್

ಬರಹ

ಗೂಗಲ್ ನಲ್ಲಿ ಏನೋ ಹುಡುಕುತ್ತಾ ಕಳೆದುಹೋಗಿದ್ದ ನನಗೆ ಆಕಸ್ಮಿಕವಾಗಿ ದೊರಕಿದ್ದು [:http://www.inference.phy.cam.ac.uk/dasher/|ಈ ಪುಟ]. ತಂತ್ರಾಂಶದ ಹೆಸರು - 'ಡ್ಯಾಶರ್'. ಆಶ್ಚರ್ಯವೇನಲ್ಲದಂತೆ ಉಬುಂಟು/ಡೆಬಿಯನ್ ರೆಪಾಸಿಟರಿಯಲ್ಲಿ ದೊರಕಿ ಈ ತಂತ್ರಾಂಶ ನನಗೆ ಆಪ್ಟ್ ಉಪಯೋಗಿಸಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡಲು ಸಾಧ್ಯವಾಯಿತು. (ಮೈಕ್ರೊಸಾಫ್ಟಿನ ಎಲ್ಲ ಆಪರೇಟಿಂಗ್ ಸಿಸ್ಟಮ್ ಗಳಿಗೂ ಹಾಗೂ ಮ್ಯಾಕ್ ಓಎಸ್ ಎಕ್ಸ್ ಗೂ ಈ ತಂತ್ರಾಂಶ ಲಭ್ಯವಿದೆ). ಒಟ್ಟಾರೆ ೧೦ ಎಮ್ ಬಿ ಗಿಂತ ಒಂದಷ್ಟು ಹೆಚ್ಚು ಗಾತ್ರದ ಡೌನ್ಲೋಡ್.

ಡ್ಯಾಶರ್ ಒಂದು ಕುತೂಹಲಕಾರಿ ತಂತ್ರಾಂಶ. ಇದರ ಪ್ರಾಜೆಕ್ಟ್ ಪುಟದಲ್ಲಿ ಇದರ ವಿವರ ಹೀಗಿದೆ:

ಡ್ಯಾಶರ್ ಒಂದು ಮಾಹಿತಿ-ಸಾಮರ್ಥ್ಯವುಳ್ಳ ಬರವಣಿಗೆ ಇಂಟರ್ಫೇಸ್ (ಸಾಧನ). ಇದನ್ನು ನಡೆಸಲು ಬಳಸಿರುವುದು ಪ್ರಾಕೃತಿಕ ಎಡೆಬಿಡದ (continuous) ಪಾಂಯ್ಟಿಂಗ್ ಗೆಸ್ಚರುಗಳು. ಡ್ಯಾಶರ್ ಸಂಪೂರ್ಣ ಕೀಲಿಮಣೆಯನ್ನುಪಯೋಗಿಸಲಾಗದ ಪರಿಸ್ಥಿತಿಗಳಲ್ಲಿ ಉಪಯೋಗಿಸಲು ಸಾಧ್ಯಾವಗುವಂತ ಕಾಂಪಿಟೆಟಿವ್ ಬರಹ ಸಾಧನ. ಇದರ ಉಪಯೋಗ:
*‌ ಪಾಮ್ ಟಾಪ್ ಕಂಪ್ಯೂಟರ್ ಗಳಲ್ಲಿ
* ಧರಿಸಬಲ್ಲ, ಕೈಯಲ್ಲಿ ಹಿಡಿದು ತಿರುಗಾಡಬಲ್ಲ ಕಂಪ್ಯೂಟರ್ ಗಳಲ್ಲಿ
*‌ ಕಂಪ್ಯೂಟರನ್ನು ಒಂದೇ ಕೈಯಲ್ಲಿ ಜಾಯ್ಸ್ಟಿಕ್ ಅಥವ ಟಚ್ ಸ್ಕ್ರೀನ್, ಟ್ರಾಕ್ ಬಾಲ್ ಅಥವಾ ಮೌಸ್ ಉಪಯೋಗಿಸುವಾಗ
* ಕೈಯನ್ನು ಬಳಸದೆಯೇ ಕಂಪ್ಯೂಟರ್ ಬಳಸುವಾಗ ( ಹೆಡ್-ಮೌಸ್ ಅಥವಾ ಐ ಟ್ರಾಕರ್ ಬಳಸುವಾಗ)

ಸಾಧಾರಣವಾಗಿ, ಹಾಗೂ ನಿಶ್ವಿತವಾಗಿ ಇದನ್ನು ನಿಮ್ಮ ಕಂಪ್ಯೂಟರಿನಲ್ಲುಪಯೋಗಿಸುವಾಗ ಅಷ್ಟೊಂದು ಆಹ್ಲಾದಕರವೆನಿಸದು. (ಆದರಿದು ಹ್ಯಾಂಡ್ ಹೆಲ್ಡ್, ಪೋರ್ಟಬಲ್ ಉಪಕರಣಗಳಲ್ಲಿ ಯುನಿಕೋಡ್ ಟೈಪ್ ಮಾಡಲು ಈಗಿನಂತೆ ಒಳ್ಳೆಯ ಸಾಧನ).
ಎಲ್ಲಕ್ಕಿಂತ ಚೆಂದದ ವಿಷಯವೆಂದರೆ ಈ ತಂತ್ರಾಂಶದ ಯುನಿಕೋಡ್ ಸಪೋರ್ಟ್. ಇದು ಯುನಿಕೋಡ್ ಕನ್ನಡ, ಯುನಿಕೋಡ್ ಹಿಂದಿ, ಹಾಗೂ ಹಲವು ಇನ್ನಿತರ ಭಾಷೆಗಳನ್ನೂ ಟೈಪಿಸುವ ಸವಲತ್ತು ಕೊಡುತ್ತದೆ!

ಡ್ಯಾಶರ್

ಡ್ಯಾಶ್ ಮಾಡಿಕೊಂಡು ಹೋಗಲು ನೀವೂ ಸಿದ್ಧರೇ?

ಈ ತಂತ್ರಾಂಶ ಹಾಕಿಕೊಂಡು ನಾನು ಮೊದಲು ಬರೆಯಲು ಪ್ರಯತ್ನಿಸಿದ್ದು ನನ್ನ ಹೆಸರನ್ನು (ಸಹಜವಲ್ಲವೇ? ;)
ನಾನು 'ಹ' ಕಡೆಗೆ ಮೌಸ್ ಕರ್ಸರಿನ ಪ್ರಯಾಣ ಬೆಳೆಸಿ, ಅಲ್ಲಿಂದ 'ರ' ಕಡೆ ದಂಡು ನಡೆಸಿಕೊಂಡು ಹೋಗಿ, ಅದರ ಪಕ್ಕದಲ್ಲೇ ತೇಲುತ್ತಾ ಬಂದ ಗ್ಲಿಫ್ ಗಳನ್ನು ಆಯ್ಕೆ ಮಾಡಿಕೊಂಡೆ. ಒಂದು ತರಹದ ದೃಷ್ಯವ್ಯೂಹದೊಳಗೆ ಹೊಕ್ಕಂತಿತ್ತು, ಈ ಅನುಭವ. ಬಹುಶಃ ಟಚ್ ಸ್ಕ್ರೀನಿನಲ್ಲಿ ನಮ್ಮ ಕೈ ಬೆರಳುಗಳನ್ನು ಮಾತ್ರ ಉಪಯೋಗಿಸಿ ಅಕ್ಷರಗಳನ್ನಾರಿಸುವಂತಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತೋ ಏನೋ. (ಹಾಗೊಂದು ಟಚ್ ಸ್ಕ್ರೀನಿನಲ್ಲಿ ನಾವು ನೋಡುವ ಸೈ-ಫೈ ಚಲನಚಿತ್ರಗಳಲ್ಲಿ ತೋರಿಸುವ ತಂತ್ರಜ್ಞಾನ ನಮ್ಮ ಮುಂದೆ ಬರುವ ದಿನ ದೂರವಿಲ್ಲವಷ್ಟೆ). ಆದರೂ ಎಂತಹ ತಂತ್ರಜ್ಞಾನ ಬದಲಾದರೂ ಸಹ, ಪ್ರತಿಯೊಂದು ಅಕ್ಷರವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಈ ವಿಧಾನ ಅದೆಷ್ಟು ಬೋರು ಹೊಡೆಸದೆ ಇರುತ್ತೋ ಕಾಣೆ.

ಒಂದೊಂದೇ ಅಕ್ಷರವನ್ನಟ್ಟಿಕೊಂಡು ಹೋಗುವುದು ಬಹಳ ಬೋರು ಹೊಡೆಸುವ ಸಂಗತಿಯಾಗಬಹುದು. ಇದು ಕಂಪ್ಯೂಟರಿನಲ್ಲಿ ಬರವಣಿಗೆಯ ಅತಿ ಕ್ಲಿಷ್ಟಕರ ಪದ್ಧತಿಯೂ ಆಗಬಹುದು (ಕೈಲಿದ್ದ ತುತ್ತನ್ನು ತಲೆಯ ಹಿಂಬದಿಯಿಂದ ಕೈಯಾಡಿಸಿ ತಿಂದಂತೆ). ಆದರೆ ಬೇರೆ ಸಾಧನಗಳೇ ಇಲ್ಲದ ಪುಟ್ಟ ಪುಟ್ಟ ಗಣಕಗಳಲ್ಲಿ, ಬೇರೆ ಸಾಧನಗಳನ್ನು ಇದ್ದೂ ಬಳಸಲಾಗದ ಸ್ಥಿತಿಯಲ್ಲಿ ಇದು ಬಹಳ ಉಪಕಾರಿ. ಅಲ್ಲದೆ ಕಣ್ಣಿಗೆ ಅಹಿತಕರವೆನಿಸಬಹುದು, ಮೊದಲ ನೋಟಕ್ಕೆ. ಆದರದು ಬಳಕೆಗೆ ಒಗ್ಗಿದಾಗ ಸರಿಹೋಗಿಬಿಡಬಹುದು. ಪ್ರಾಜೆಕ್ಟಿನ ಕರ್ತೃವರ್ಯರು ಇದನ್ನುಪಯೋಗಿಸುವಲ್ಲಿ ಪಳಗಿದರೆ ಒಂದು ನಿಮಿಷಕ್ಕೆ ೩೯ ಶಬ್ಧಗಳನ್ನು ಬರೆಯಬಹುದು ಎಂದು ಪ್ರತಿಪಾದಿಸಿದ್ದಾರೆ. ಏನೇ ಇರಲಿ, ನನಗಂತೂ ಯುನಿಕೋಡ್ ಟೈಪ್ ಮಾಡಲು ಕೀ ಮ್ಯಾಪ್ ಇಲ್ಲದೆ, ಇನ್ಪುಟ್ ಮೆಥಡ್ ಇಲ್ಲದೇ ಬರಿ ಅಕ್ಷರಗಳನ್ನಟ್ಟಿಸಿಕೊಂಡು ಹೋಗಿ ವಾಕ್ಯಗಳನ್ನು ಸೃಷ್ಟಿಸಬಹುದೆಂಬುದು ಸಂತಸ ತಂದಿತು.

ಈ‌ ತಂತ್ರಾಂಶ ಮಕ್ಕಳ ಆಟಕ್ಕೆ ಬಹಳ ಚೆನ್ನಾಗಿರುತ್ತದೆ... ಅಥವ ಹ್ಯಾಂಡ್ ಹೆಲ್ಡ್ ಗಳನ್ನು ಹಿಡಿದು 'ಫೀಲ್ಡ್ ವರ್ಕ್' ಎಂದು ಹೋಗುವವರಿಗೆ ಉಪಯೋಗವಾಗುತ್ತದೆ - ಮಾಡಬೇಕಾದುದಿಷ್ಟೆ... ಜೇಬಿನಿಂದ ನಿಮ್ಮ ಪುಟ್ಟ ಹ್ಯಾಂಡ್ ಹೆಲ್ಡ್ ಗಣಕವನ್ನು ಹೊರತೆಗೆದು ಅಕ್ಷರಗಳ ಹಿಂದೆ ವ್ಯೂಹದಲ್ಲಿ 'ಡ್ಯಾಶ್' ಮಾಡಿಕೊಂಡು ಹೋಗುವುದು! :)