೨೦೦೫ ರಲ್ಲಿ ದೆಹಲಿಯಲ್ಲಿ ನಾವು ಕಳೆದ 'ದೀಪಾವಳಿ' ನಿಜಕ್ಕೂ ಅತ್ಯಂತ ದುರದೃಷ್ಟಕರ !
ಹೋದ ವರ್ಷ ಏಕೋ ದೀಪಾವಳಿಗೆ ದಿಲ್ಲೀಗೆ ಹೋಗೋಣ ಅನ್ನಿಸಿತ್ತು. ಇದುವರ್ಗೂ ಹೇಗೊ ಪ್ರತಿ ಬೇಸ್ಗೆ ಮತ್ತು ಕ್ರಿಸ್ಮಸ್ ರಜೆಯಲ್ಲಿ ಊರು ಮತ್ತೆ ನಮ್ಮೂರಿಗೆ (ಮುಂಬೈ) ವಾಪಸ್ ಹೀಗೇ ನಡೆದಿತ್ತು. ಹೇಗಿದ್ದರೂ ರವಿಗೆ ಇದು ಅವನ M.B.A; ಡಿಗ್ರಿ ಯ ಕೊನೆಯ ವರ್ಷ ತಾನೆ. ಹೋದ ಸಾರಿ ಬಂದಾಗ್ಲೂ 'ಒಮ್ಮೆ ಬಂದು ಹೋಗಿ' ಅಂದಿದ್ದ. ಚಿಕ್ಕ ಮಗ ಪ್ರಕಾಶ ಈಗ * ನಲ್ಲಿದಾನೆ. ಮನೆಯಲ್ಲಿ ನಾವಿಬ್ಬರೆ. ಇಲ್ಲಿದ್ರೇನು, ಡೆಲ್ಲಿಗ್ ಹೋದ್ರೇನು ಎಲ್ಲಾ ಒಂದೆ. ೧೭ ನೆಯ ಅಕ್ಟೋಬರ್, ಬೆಳಗಿನ 'ಸ್ಪೈಸ್ ಜೆಟ್ 'ನಲ್ಲಿ ಹೊರಟೇ ಬಿಟ್ಟೆವು. ಹೋದಬಾರಿ ನಾವು 'ಡೆಕ್ಕನ್ ಏರ್ವೇಸ್ನ'ಲ್ಲಿ ಬೆಂಗಳೂರಿನಿಂದ ಮುಂಬೈ ಗೆ ಬಂದಾಗ ಕಿಟಕಿ ಸೀಟಿಗೆ 'ಕ್ಯೂ'ನಲ್ಲಿ ಓಡಿದ್ದರ ನೆನೆಪು ಇಂದಿಗೂ ಇದೆ. ಸ್ಪೈಸ್ ಜೆಟ್ಟಿನ್ನಲ್ಲಾದರೋ ಎಲ್ಲಾ ಸುವ್ಯವಸ್ಥೆ. ಪ್ರಯಾಣನೂ ಚೆನ್ನಾಗಿತ್ತು. ದಿಲ್ಲಿ ಯಲ್ಲಿ ನಾವು ಇಳಿದಾಗ ರವಿ ರೆಡಿಯಾಗಿ ಬಂದಿದ್ದ. ಅವನ ಜೊತೆ ನಾವು ಕರೋಲ್ ಬಾಗಿನಲ್ಲಿದ್ದ ನಮ್ಮ Southern Hotels,ಗೆ ೩೦ ನಿಮಿಷದಲ್ಲಿ ಮುಟ್ಟಿದೆವು. ಅಲ್ಲಿಗೆ ದೆಹಲಿ ರೈಲ್ವೆ ನಿಲ್ದಾಣವೂ ಹತ್ತಿರ. ಕರೋಲ್ ಬಾಗ್, ಪಹಾಡ್ ಗಂಜ್, ಬಳಿ ಇತ್ತು. ಪಂಜಾಬಿಗಳು ಹೆಚ್ಚಾಗಿ ವಾಸಿಸುವ ಜಾಗ. ಅಲ್ಲೆಲ್ಲಾ ಪಂಜಾಬೀ ಧಾಬಾಗಳು, ಮಾರಾಟದ ಮಳಿಗೆಗಳು ಇದ್ದವು. ದೊಡ್ಡ ವ್ಯಾಪಾರಸ್ಥಳ. ಆಟೋ ಸ್ಪೇರ್ಪಾರ್ಟ್ಸ್,ಶಾಪುಗಳು ಮೋಟಾರ್ ಕಾರುಗಳ ಷೋರೂಂ ಗಳು ಇದ್ದವು. ನಮ್ಮ Hotel, ಆರ್ಯಸಮಾಜ ರಸ್ತೆಯಲ್ಲಿತ್ತು. ನಮ್ಮ ಹೋಟೆಲ್ ೪ ಅಂತಸ್ತಿನ ಕಟ್ಟಡ. ಕೆಳಗಡೆ ಮ್ಯಾನೇಜರ್ ಕೌಂಟರ್ ಇತ್ತು. ಅದಕ್ಕೆ ತಾಗಿಸಿದಂತೆ ಕಾಮತ್ ಹೋಟೆಲ್. ಅಲ್ಲಿಯೇ ಎಲ್ಲರಿಗೂ ಊಟ ತಿಂಡಿಯ ವ್ಯವಸ್ಥೆ. ಹೋಟೆಲ್ ಮೊದಲನೇ ಫ್ಲೋರ್ ನಲ್ಲಿ ಒಂದು 'ಆಂಧ್ರ ಡಿಲಕ್ಸ್' ಹೋಟೆಲ್ ಇತ್ತು. ಆ ಹೋಟೆಲ್ ನಲ್ಲಿ ಕೊಡುವ ಊಟ ನಮಗೆ ಹೆಚ್ಚಾಗುತ್ತಿತ್ತು. ಅಲ್ಲಿನ ಊಟ ನಮಗೆ ಸರೀಹೋಗಲಿಲ್ಲ. ನಮಗೆ ಬೇಕಾದ ವ್ಯಂಜನಗಳು ಅಲ್ಲಿರಲಿಲ್ಲ. ಒಂದು ದಿನ ಅಲ್ಲಿ ಊಟ ಮಾಡಿದಮೇಲೆ ಈ ಅನುಭವ ಬಂತು. ಮೇಲಿನ ಅಂತಸ್ತಿನಲ್ಲೆಲ್ಲಾ ರೂಂಗಳು. ನಮ್ಮ ರೂಂ ಮೊದಲಿನ ಮಹಡಿಯಲ್ಲಿತ್ತು. ನಾವು ಸ್ನಾನ ಮಾಡಿ ಕಾಮತ್ ಹೋಟೆಲ್ ನಲ್ಲಿ ಊಟಮಾಡಿದೆವು. 'ಓಹ್ ! ದಿಲ್ಲೀನಲ್ಲಿ ರಾಗಿಮುದ್ದೆ ! ರಾಗಿ ರೊಟ್ಟಿ ! ರೆಡಿ'ಇತ್ತು. ಆ ಭರ್ಜರಿ ಊಟದ ನಂತರ ಮತ್ತೆ ರೂಂಗೆ ಬಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಮಲಗಿದೆವು. ಸಾಯಂಕಾಲ ಕಾಫಿ ತಿಂಡಿಯ ನಂತರ ಕರೋಲ್ ಬಾಗಿನ ಅಕ್ಕ ಪಕ್ಕದ ಜಾಗಗಳನ್ನು ನೋಡಿಕೊಂಡು ಬಂದೆವು. ಹತ್ತಿರದಲ್ಲೇ 'ಸಂಕಟಮೋಚನ ಮಾರುತಿ ಮಂದಿರ' ಇತ್ತು. ದೆಹಲಿಯಲ್ಲೆ ೧೦೮ ಅಡಿ ಎತ್ತರದ ಅತಿ ಎತ್ತರದ ಮೂರ್ತಿ. ಜನ ದೀಪಾವಳಿ ಹಬ್ಬದ ಸಡಗರದಲ್ಲಿದ್ದರು. 'ರಂಜಾನ್' ಹಬ್ಬದ ಉಪವಾಸದನಂತರ (ಇಫ್ತಾರ್) ಜನ ಹೊರಗೆ ಬಂದು ತಿಂಡಿ ತಿನಸುಗಳನ್ನು ತಿನ್ನುವುದರಲ್ಲಿ ಮಗ್ನರಾಗಿದ್ದರು. ಹತ್ತಿರದಲ್ಲೇ ಕೆಲವು ಗುರುದ್ವಾರಗಳು ಇದ್ದವು. ಅವೆಲ್ಲಾ ಅಚ್ಚುಕಟ್ಟಾಗಿದ್ದು ನಾವೂ ಒಂದೆರಡು ಬಾರಿ ಹೋಗಿದ್ದೆವು. ರವಿ ರಾತ್ರಿ ಅಲ್ಲೇ ನಮ್ಮ ರೂಂನಲ್ಲೇ ಮಲಗಿದ್ದ. ಮುಂಜಾನೆ ನಾವು 'ದೆಹಲಿ ದರ್ಶನಕ್ಕೆ' ಹೊರಟೆವು. ರವಿ ನಮ್ಮನ್ನು ಬೀಳ್ಕೊಟ್ಟು ತಾನು ಐ.ಐ.ಟಿ ಗೆ ವಾಪಸ್ಸು ತನ್ನ ಬೈಕಿನಲ್ಲಿ ಹೊರಟ. ವೋಲ್ವೊ ಬಸ್ಸಿನ, 'ದೆಹಲಿ ಯಾತ್ರೆ' ಚೆನ್ನಾಗಿತ್ತು. ಲಾಲ್ ಕಿಲಾ, ಇಂಡಿಯಾ ಗೇಟ್, ರಾಜ್ ಘಾಟ್, ಮಹಾತ್ಮಗಾಂಧಿಯವರ ಸಮಾಧಿ, ರಾಜೀವ್ ಗಾಂಧಿ, ನೆಹ್ರು, ಸಂಜಯಗಾಂಧಿ, ಇಂದಿರಾಗಂಧಿ, ಇವರುಗಳ ಸಮಾಧಿ ಸ್ಥಳಗಳು, ಇಂದಿರಾಜೀ ಅವರ ಹತ್ಯೆ ಸ್ಥಳ- ಇದನ್ನು ಒಂದು ಸ್ಮಾರಕದಂತೆ ರಕ್ಷಿಸಿದ್ದಾರೆ. ನ್ಯಾಶನಲ್ ಮ್ಯೂಸಿಯಮ್, ಜಾಮಾಮಸ್ಜಿದ್, ಪಾರ್ಲಿಮೆಂಟ್ ಭವನ್, ರಾಷ್ಟ್ರಪತಿ ಭವನ, ಡೆಲ್ಲಿ ಮೆಟ್ರೊ, ಕಾನಾಟ್ ಪ್ಲೇಸ್, ಬಿರ್ಲಾ ಮಂದಿರ ಇತ್ಯಾದಿ. ಮಾರನೆದಿನ, ರವಿ ತಯಾರಾಗಿ ಬೆಳೆಗ್ಯೆಯೇ ಬಂದ. ನಾವೆಲ್ಲಾ ಒಟ್ಟಿಗೆ ವೋಲ್ವೊ ಬಸ್ಸಿನಲ್ಲಿ, ಜೈಪುರ್, ಆಗ್ರ, ಫತೆಪುರ್ ಸಿಕ್ರಿ, ಮಥುರ ಎಲ್ಲಾ ನೋಡಿಕೊಂಡು ಬಂದೆವು. ಜೈಪುರದಲ್ಲಿ, ಈಗಿನ ರಾಣಿ ಗಾಯತ್ರಿ ದೇವಿ ಯಿಂದ ಹಿಡಿದು, ಹವಾಮಹಲ್, ಅಲ್ಲಿನ ರಾಣಾರ ಎಲ್ಲಾ ಮಹಲ್ಲುಗಳು, ಜಂತರ್ ಮಂತರ್, ಬಿರ್ಲಾಮಂದಿರ, ಲೇಕ್ ಪ್ಯಾಲೇಸ್, ಆಗ್ರದ ತಾಜ್ಮಹಲ್, ಅಲ್ಲಿನ ಅನೇಕ ಮಹಲ್ಲುಗಳು, ಮಥುರದ ಕೃಷ್ಣ ಮಂದಿರ, ವೃಂದಾವನ, ಇತ್ಯಾದಿ. ಹೋದಲ್ಲೆಲ್ಲಾ ಕೆಲವು ಖರಿದಿ ನಡದೇ ಇತ್ತು. ರವಿ ತನಗೆ ಪ್ರಿಯವಾದ ತಾಜ್ ಮಹಲ್ ಖರೀದಿಸಿದನು. ಅಮೃತ ಶಿಲೆಯ ಪುಟ್ಟ ಮಾಡೆಲ್ ಶೊ ಕೇಸ್ ನಲ್ಲಿಡಲು ತುಂಬಾ ಚೆನ್ನಾಗಿತ್ತು. ಮತ್ತೆ ಮುಂಜಾನೆ ಲಕ್ಷ್ಮಣ್ ಝೂಲ, ಹೃಷಿಕೆಷ್, ಶಿವಾನಂದಶ್ರಮ, ಅಲ್ಲಿನ ರೋಪ್ವೆ, ಹರಿದ್ವಾರ, ಗಂಗಾನದಿಯಲ್ಲಿ ಸ್ನಾನ, ಅಲ್ಲಿನ ಅನೇಕ ಮಂದಿರಗಳಲ್ಲಿ ಪೂಜೆ ಇವುಗಳು ನಮಗೆ ಧನ್ಯತಾ ಭಾವನೆಯನ್ನು ಕೊಟ್ಟವು. ಬಿರ್ಲಾ ಮಂದಿರವನ್ನು ಬಿಟ್ಟು ಬೇರೆ ಯಾವ ದೇವಸ್ಥಾನಗಳೂ ನಮ್ಮ ದಕ್ಷಿಣದ ವಾಸ್ತುಶಿಲ್ಪಕ್ಕೆ ಸರಿಸಮನಾಗಿ ಕಾಣಿಸಲಿಲ್ಲ. ಆದರೆ ಮನಸ್ಸಿಗೆ ಸಿಕ್ಕ ಶಾಂತಿ, ಮತ್ತು ಪುರಾಣದ ಅನುಭವಗಳನ್ನು ಮೆಲುಕು ಹಾಕಿದಾಗ ಮನಸ್ಸಿಗೆ ಆಹ್ಲಾದವನ್ನು ತರುತ್ತಿತ್ತು. ವಾಪಸ್ ದೆಹಲಿಗೆ ಬಂದಾಗ ರಾತ್ರಿಯಾಗಿತ್ತು. ರವಿ ಊಟ ಮುಗಿಸಿಕೊಂಡು ಬೈಕಿನಲ್ಲಿ ತನ್ನ ಹಾಸ್ಟೆಲ್ಲಿಗೆ ಹೋದ. ನಮಗೆ ಇನ್ನೂ ವಾರಣಾಸಿ, ಬುದ್ಧಗಯಗಳನ್ನು ನೋಡುವ ಆಸೆಯಿತ್ತು. ರವಿ ಅಲ್ಲಿಗೆಲ್ಲಾ ಬರಲು ಸಾಧ್ಯವೇ ? ಇಷ್ಟು ಬಂದದ್ದೇ ಅತಿ ಹೆಚ್ಚು. ಆದರೆ ರವಿಯನ್ನು ಬಿಟ್ಟು ನಾವು ಎಲ್ಲೂ ಹೋಗಲು ಮನಸ್ಸು ಬರಲಿಲ್ಲ. ಆಮೇಲೆ ನಾವು ದೆಹಲಿಯಲ್ಲೇ ಕಳೆದ ದಿನಗಳೇ ಹೆಚ್ಚು. ನಾವು ಇನ್ನೊಂದು ದಿನ ನಮ್ಮ ಆಫೀಸನ್ನು ನೋಡಿಕೊಂಡು ಬರಲು ಐ.ಸಿ.ಆರ್ ಆಫೀಸ್, ಕೃಷಿ ಭವನಕ್ಕೆ ಹೋದೆವು. ಅಲ್ಲೇ ನಾವು ಇರಲು ಕೇಳಿದ್ದೆವು. ಆದರೆ, ಯಾವುದೋ ಕೃಷಿ ಸಂಬಂಧದ ಕಾರ್ಯಕ್ರಮದಿಂದ ಅಲ್ಲಿ ಸ್ಥಳ ದೊರಯಲಿಲ್ಲ. ನಾವು ದೆಹಲಿಯ 'ಕರ್ನಾಟಕ ಸಂಘ'ದಲ್ಲಿ ಊಟ ಮುಗಿಸಿದೆವು ಮತ್ತೂ ಕೆಲವು ನಮಗೆ ಬೇಕಾದ ಹಾಗೆ ಸುತ್ತಾಡಿ ಹೋಟೆಲ್ಗೆ ಬಂದೆವು. ಸ್ವೀಟ್, ಬಟ್ಟೆ ಬರೆ ಖರೀದಿಸಿದೆವು. ಮಧ್ಯಾನ್ಹ ಎದ್ದು ಕಾಫಿ ಕುಡಿದಿದ್ದಾಯ್ತು. ಟೀವಿ ಆನ್ ಮಾಡಿದ್ರೆ, N.D.T.V ರಿಪೋರ್ಟರ್ ಗಳು ಜೋರಾಗಿ ಕೂಗಿಕೊಂಡು ಸುದ್ದಿ ಹೇಳುತ್ತಿದ್ದರು. ಏನೂ ಸ್ಪಶ್ಟವಾಗಿ ಕೇಳಿಸುತ್ತಿರಲಿಲ್ಲ. ಕಾಣಿಸುತ್ತಲೂ ಇರಲಿಲ್ಲ. ಅಲ್ಲಿ ನಿಧಾನವಾಗಿ ಮುಗಿಲಿಗೇರುತ್ತಿದ್ದ ದಟ್ಟವಾದ ಕಪ್ಪು ಹೊಗೆ, ಹೆಣ್ಣುಮಕ್ಕಳು ಮಕ್ಕಳ ಚೀರಾಟ, ಜನರ ಚೆಲ್ಲಾಪಿಲ್ಲಿ ಓಡಾಟ, ನಮಗೆ ಥಟ್ಟನೆ, ೧೯೯೩ ರ 'ಮುಂಬೈ ಸರಣಿ ಬಾಂಬ್ ಸ್ಪೋಟ'ದ ಸನ್ನಿವೇಶವನ್ನು ನೆನಪಿಗೆ ತರುತ್ತಿತ್ತು. "ರಾಮೇಶ್ವರಕ್ ಹೋದ್ರು ಶನಿ ಕಾಟ ತಪ್ಲಿಲ್ಲಾ" ಅಂತಾರಲ್ಲ ಹಾಗೆ ! ಏನೋ ಮುಜುಗರ. ಅದೇ ಜಾಗದಿಂದ ಬಂದ ನಮ್ಮ ಹೋಟೆಲ್ಲಿನ ಡ್ರೈವೆರ್, ಕಣ್ಣನ್ ತಾನು ಕಂಡ 'ನರಕಸದೃಶ'ದೃಷ್ಯವನ್ನು ವಿವರಿಸಿದರು. ಅದನ್ನು ಕೇಳುತ್ತಿದ್ದಂತೆಯೇ ಎಲ್ಲರೂ ತಮ್ಮ ತಮ್ಮ ಕೋಣೆಗೆ ಓಡಿ ಟೀವಿ ಆನ್ ಮಾಡಿ ನೋಡಿದರು. ಸ್ವಲ್ಪ ಸಮಯದಲ್ಲೇ ಕರೆಂಟ್ ಮಾಯವಾಯಿತು. ಕತ್ತಲಲ್ಲಿ ಕೆಳಗೆ ಇಳಿಯಲು ಭಯ. ಲಿಫ್ಟ್ ಬೇರೆ ಇಲ್ಲ. ಸುಮಾರು ಸಮಯದ ಮೇಲೆ ಕರೆಂಟ್ ಬಂತು. ಮುಂಬೈಗೆ ಪ್ರಕಾಶ್ ವಾಪಸ್ ಬಂದಿದ್ದ; ಅಷ್ಟರಲ್ಲೇ ಟೀವಿ ನೊಡಿದ್ದ ಅವನು ಗಾಬರಿಯಾಗಿ ನಮ್ಮ ಹೋಟೆಲ್ ಗೆ ಸತತವಾಗಿ ಫೋನ್ ಮಾಡ್ತಾನೇ ಇದಾನೆ ನಮಗೆ ಸಿಕ್ತಿಲ್ಲ. ಮಾನೇಜರ್ ಕೆಳ್ಗಿದ್ದವನು ನಮ್ಮ ರೂಮಿಗೆ ಸಂಪರ್ಕಿಸಲು ಯತ್ನಿಸಿದರೆ ಟೆಲಿಫೋನ್ ಕೆಟ್ಟಿದೆ. ಸ್ವಲ್ಪ ಹೊತ್ತಿಗೆ ರೊಹಿತ್ ಬಂದು ರಿಪೇರಿ ಮಾಡ್ದ. ಆಗಲೇ ರವಿ ಮಾಡಿದ ಫೋನೂ ಬಂತು. ಬೈಕಿನಲ್ಲಿ ಬರುತ್ತಿರುವುದಾಗಿ ತಿಳಿಸಿ "ರೂಮ್ ನಿಂದ ಎಲ್ಲೂ ಹೊರಗೆ ಹೋಗಬೇಡಿ" ಎಂದು ಹೇಳಿದ. ಅವನಿಗೂ ಸರಿಯಾಗಿ ವಿಷಯ ತಿಳಿದಿರಲಿಲ್ಲ. ೨ ಕಡೆ ಸ್ಪೋಟ ಆಗಿದೆ ಅಂತ ಮಾತ್ರ ಹೇಳ್ತಿದ್ರು. ಸಾವು ನೋವಿನ ವಿವರ ಇನ್ನೂ ಸಿಕ್ಕಿರಲಿಲ್ಲ. "ಅದ್ಸರಿ. ನೀಯಾಕ್ ಬರ್ತಿದಿಯಪ್ಪ, ಅದೂ ಬೈಕಿನಮೇಲೆ,ಮಧ್ಯೆ ಸಿಖಾಕ್ಕೋಂಡ್ರೆ ಕಷ್ಟ, ಇವತ್ತು ಬೇಡ ನಾಳೆ ನೋಡೋಣ " ಅಂದ್ರೆ ಕೇಳಬೇಕಲ್ಲ. ಅವನಾಗಲೇ ಮಧ್ಯ ದಾರಿಯಲ್ಲಿದ್ದ. ಆತಂಕವಾದಿಗಳು ಎಲ್ಲಾ ತಮ್ಮ ಲೆಖ್ಖಾಚಾರದಂತೆ, ಸರೋಜಿನಿ ಮಾರ್ಕೆಟ್ ನಂತಹ ಹಲವು ಜನನಿಬಿಡವಾದ ಜಾಗ ಗಳಲ್ಲಿ ಬಿಳಿ ಮಾರುತಿ ಕಾರಿನಲ್ಲಿ ಬಾಂಬ್ ಗಳನ್ನು ಇಟ್ಟಿದ್ದರು. ೧. ೩-೩೦ ಕ್ಕೆ, ಹಳೆ ದೆಹಲಿಯ ಚಾಂದನಿ ಚೌಕದಲ್ಲಿ ೨. ೫-೩೮ ಪಹಾಡ್ ಗಂಜ್ ಬಳಿ ಸತ್ತವರ ಸಂಖ್ಯೆ :೧೮, ಗಾಯಗೊಂಡವರು : ೬೦ ೩. ೫-೫೨ ಡಿ.ಟಿ.ಸಿ. ಬಸ್ಸಿನಲ್ಲ್ ಗೋವಿಂದ್ ನಗರದ ಬಳಿ. ಇಲ್ಲಿ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ಗಳು ತೀವ್ರ ವಾಗಿ ಗಾಯಗೊಂಡರು. ಡ್ರೈವರ್ ಸಿಂಗ್ ರವರು ತಮ್ಮ ಜೀವವನ್ನು ಲೆಕ್ಕಿಸದೆ ತಮಗೆ ಬಸ್ಸಿನ ಸೀಟಿನ ಕೆಳಗೆ ಕಾಂಡ ಬಾಂಬನ್ನು ಎತ್ತಿ ಹೊರಗೆ ಬಿಸಾಡುದುವುದರ ಮೂಲಕ ಬಸ್ಸಿನ ಪ್ರಯಾಣಿಕರ ಜೀವವನ್ನು ಉಳಿಸಿದರು. ಇಲ್ಲಿ ಯಾರೂ ಸಾಯಲಿಲ್ಲ. ಗಾಯಗೊಂಡವರು :೪. ಡ್ರೈವರ್ ಸಿಂಗ್ ಅವರು ತಮ್ಮ ಈ ಪ್ರಯತ್ನದಲ್ಲಿ ಒಂದು ಕಣ್ಣು ಕಳೆದುಕೊಂಡರು. ಕಾಲಿಗೆ, ಸೊಂಟಕ್ಕೆ ಬಲವಾದ ಏಟು ಬಿದ್ದು ಅವರು ಉಳಿಯುವುದೇ ದುಸ್ತರವಾಗಿತ್ತು. ಔಷಧಿ ಉಪಚಾರಗಳ ನಂತರ ಈಗ ಉತ್ತಮಗೊಂಡಿದ್ದಾರೆ. ಇಂತಹ ತ್ಯಾಗಶೀಲರಿಂದಲೇ ಕಲಿಯುಗದಲ್ಲೂ ಪ್ರಪಂಚ ಮುಂದುವರೆದಿದೆ ! ಕೊನೆಯದಾಗಿ ೫-೫೬ ರಲ್ಲಿ ಸರೋಜಿನಿ ನಗರದ ಮಾರ್ಕೆಟ್ ನಲ್ಲಾದ ಸ್ಫೋಟ ಅತ್ಯಂತ ತೀವ್ರ ಪ್ರಮಾಣದ್ದು. ಅಲ್ಲಿ ೪೩ ಕ್ಕೂ ಹೆಚ್ಚು ಜನ ಮರಣ ಹೊಂದಿದ್ದರು. ಬೆಳಗಿನ ಪೇಪರ್ ನಲ್ಲಿ ವರದಿಯಾದಂತೆ, ಒಟ್ಟು ಸತ್ತವರ ಸಂಖ್ಯೆ ೬೧, ಗಾಯಗೊಂಡವರು ೧೫೫ ಕ್ಕೂ ಹೆಚ್ಚು. ಇಲ್ಲಿ ಅಕಸ್ಮತ್ತಾಗಿ ಗ್ಯಾಸ್ ಸಿಲಿಂಡರ್ ಸ್ಟಾಲ್ ಬಳಿ ಆದ ಸ್ಫೋಟದಿಂದ ಸಿಲೆಂಡರ್ ಗಳು ಸಿಡಿದು ಅನಾಹುತಕ್ಕೆ ನಾಂದಿಯಾಗಿತ್ತು. ಬಿಳಿ ಮಾರುತಿ ಕಾರ್ ಡಿಕ್ಕಿಯಲ್ಲಿ ಬಾಂಬ್ ಇಟ್ಟಿದ್ದರಂತೆ. ೮ ನಿಮಿಷಗಳ ಅಂತರದಲ್ಲಿ ೩ ಕಡೆ ಸ್ಪೋಟ. ೫-೩೮ ರಲ್ಲಿ, ೫-೫೨ ರಲ್ಲಿ, ೫-೫೬ ರಲ್ಲಿ. ಮಧ್ಯಾನ್ಹ ೩-೩೦ ಕ್ಕೆ ಚಾಂದನಿ ಚೌಕ್ ನಲ್ಲಿ ಪ್ರಥಮ ಸ್ಪೋಟ ಆಗಬೇಕಾಗಿತ್ತು. ಆದರೆ, ಪೋಲೀಸರು ಪತ್ತೆ ಹಚ್ಚಿ ಅದನ್ನು ಮೊದೆಲೇ ನಿಷ್ಕ್ರಿಯಗೊಳಿಸಿದರು. M.L, M.L, O.P ಸ್ಟಾಲ್ ಗಳಹತ್ತಿರ ಬೃಹತ್ ಸ್ಪೊಟದಿಂದ ರಕ್ತಪಾತ ಮರಣ ; ಸ್ಟಾಂಪೀಡ್ನಿಂದ ಇನ್ನೂ ಹೆಚ್ಚಾಗಿತ್ತು. ಫುಟ್ಪಾತ್ ಬದಿ ಯಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮೆಹಂದಿ, ಡ್ರೆಸ್ ಮೆಟೀರಿಯಲ್,ನಣ್ಣ ಬಣ್ಣದ ದಿವಾಳಿಯ ಕಂದೀಲುಗಳು, ಲಕ್ಷ್ಮಿ ಗಣಪತಿ, ವಿಗ್ರಹಗಳು, ಫೋಟೋಗಳು, ಚಾಟ್ ಭೇಲ್ಪುರಿ , ಐಸ್ಕ್ರೀಮ್ , ಪಾನೀಪುರಿ ಹಾಗೂ ಸಮೋಸ ಅಂಗಡಿಗಳು ರೆಡಿಮೇಡ್ ಗಾರ್ಮೆಂಟ್ ಇವೆಲ್ಲಾ ಹಿಂದೆ ಇಲ್ಲಿ ಇತ್ತೇ ಎನ್ನುವಷ್ಟು ಊಹಿಸಲೂ ಸಾಧ್ಯವಾಗದೇ ಹೋಯಿತು.ಸುಟ್ಟು ಕರಕಾಗಿ ಹೋಗಿತ್ತು. ರಕ್ತ ಮಡುಗಟ್ಟಿತ್ತು. ಸತ್ತವರ ರುಂಡ, ಮುಂಡ, ಕೈಕಾಲುಗಳು, ತುಟಿಗಳು ಎಲ್ಲೆಡೆ ಹರಡಿಕೊಂಡಿದ್ದವು. ಶವಗಳ ರಾಶಿ. ಕಾರು, ಮೋಟಾರುಕಾರುಗಳ ಹರಿದು ತುಂಡಾದ ಚೂರು ಚೂರಾದ ಭಾಗಗಳು. ಗಾಜಿನ ಪುಡಿ. ಪೋಲೀಸ್ ಪೇದೆಗಳು ಮತ್ತು ಪ್ಯಾರ ಮಿಲಿಟರಿ ದಳದವರು, ಗಾಯಾಳುಗಳನ್ನು ಆಂಬುಲೆನ್ಸೆ ಗಳಲ್ಲಿ ಮಲಗಿಸಿ ಆಸ್ಪತ್ರೆಗಳಿಗೆ ಸಾಗಿಸುತ್ತಿದ್ದರು. ಪೋಲೀಸರು ಎಲ್ಲಾ ಸಕ್ರಿಯವಾಗಿ ಅಲ್ಲೆಲ್ಲಾ ಪಹರೆ ನಡೆಸುತ್ತಿದ್ದರು. ಅವರು ತೆಗೆದುಕೊಂಡ ಕೆಲವು ಎಚ್ಚರಿಕೆ ಕ್ರಮಗಳೂ ಶ್ಲಾಘನೀಯ ! ೧. ತಕ್ಷಣವೇ ದೆಹಲಿಯ ಗಡಿಗಳನ್ನು ಬಂದ್ ಮಾಡಿದರು. ಎಲ್ಲೆಲ್ಲೂ ಪೋಲೀಸರ ಸರ್ಪ ಕಾವಲು ವಿಧಿಸಿದರು. ೨. ಸಾರ್ವಜನಿಕರಿಗೆ ಮನೆಯಿಂದ ಹೊರಗೆ ಹೆಚ್ಚಾಗಿ ಓಡಾಡಕೂಡದೆಂದು ನಿಷೇಧಾಜ್ಞೆ . ದೆಹಲಿಯ ಎಲ್ಲಾ ಮಾರುಕಟ್ಟೆಗಳನ್ನು ಮುಚ್ಚಲು ಆಜ್ಞೆ. ೩. ಬೂಗತ ಮೆಟ್ರೋ ರೈವೆಯಲ್ಲಿ ಬಿಗಿ ಸುರಕ್ಷೆ ಬಂದೋಬಸ್ತು. ಇತ್ಯಾದಿ. ಬೆಳಗಿನ ವರ್ತಮಾನಪತ್ರಿಕೆಗಳಲ್ಲಿ ಪೂರ್ತಿ ಇದೇ ಸುದ್ದಿ. ಜನರ ಸಂಕಟಗಳ ವಿವರ. ಕೆಲವರು ತಾಯಿಯನ್ನು ಕಲೆದುಕೊಂಡರೆ, ಕೆಲವರು ತಮ್ಮ ಹೆಣ್ಣು ಮಕ್ಕಳನ್ನು. ಹೆಚ್ಚಾಗಿ ಹೆಂಗಸರು ಮಕ್ಕಳೇ ವಿಧಿ ವಷರಾಗಿರುವುದು. ಆಸ್ತಿ ಪಾಸ್ತಿಗಳ ನಷ್ಟವಂತೂ ಹೇಳತೀರದು. ೩೦ ನೇ ತಾರೀಖಿನ ಬೆಳಿಗ್ಯೆ ನಾವು ಹೋಟೆಲ್ ನ ಹಣ ಪಾವತಿಮಾಡಿ ರವಿಯ ಕಾಲೇಜ್ ಕ್ಯಾಂಪಸ್ ಗೆ ಹೊರಟೆವು. ರವಿಯೂ ಆವೇಳೆಗೆ ಬಂದಿದ್ದ.ಐ ಐ ಟಿ ಇರುವುದು ಮಧ್ಯ ದೆಹಲಿ. ಅಲ್ಲಿನ ನಿರ್ಭಯ ಪ್ರಶಂತ ವಾತಾವರಣ ಹಚ್ಚ ಹಸುರಿನ ವನಸಿರಿಯ ಮಧ್ಯೆ ಹಾಸ್ಟೆಲ್ ಗಳು, ಲೈಬ್ರರಿ ಕಟ್ಟಡಗಳು, ಮತ್ತು ವಿಧ್ಯಾರ್ಥಿಗಳಿಗೆ ಜಿಮ್ ,ಈಜುವಕೊಳ, ಟೆನ್ನಿಸ್ ಕೋರ್ಟ್ಗಳು ಮುದ ನೀಡಿದವು. ದೆಹಲಿಯಲ್ಲಿ 'ರೆಡ್ ಅಲರ್ಟ್' ಮಾಡಿರುವುದರಿಂದ, ಹೊರಗೆ ಹೋಗುವುದಾದರೂ ಎಲ್ಲಿಗೆ ? ಮೇಲಾಗಿ ಕ್ಯಾಂಪಸ್ ನಿಂದ ಹೊರಗೆ ಹೊಗಲು ಅನುಮತಿ ಬೇರೆ ಇಲ್ಲ. ರವಿ, 'ಹಾಗೇನಿಲ್ಲ, ಬೇಕಾದ್ರೆ ಹತ್ತಿರದ ಚಿಕ್ಕ ಮಾರ್ಕೆಟ್ ಗೆ ಹೋಗೋಣ ಎಂದ'. ಬಂದ್, ಗಲಾಟೆ, ಬಾಂಬ್ ಸ್ಪೋಟ, ಈ ಎಲ್ಲ ಅನುಭವ ಸಾಕಷ್ಟು ಇದ್ದ ನಮಗೆ ಸಾಕಾಗಿತ್ತು. ಏನೂ ಬೇಡ ಬಿಡಪ್ಪ ಎಂದೆವು. ಐ.ಐ.ಟಿ ಯ ಕ್ಯಾಂಟೀನ್ ನಲ್ಲಿ ಊಟಕ್ಕೆ ಕುಳಿತಾಗ ಒಬ್ಬ ವಿದೇಶಿ ವ್ಯಕ್ತಿ ನಮ್ಮ ಹತ್ತಿರ ಬಂದು ತನ್ನ ಪರಿಚಯ ಮಾಡಿಕೊಂಡ. ಅವ್ನೂ ಅದೇ ಕಟ್ಟಡದಲ್ಲೇ ಇದ್ದ. ತನ್ನ ಪಿ.ಎಚ್.ಡಿ ಗಾಗಿ ಡಾ.ಮೈ.ಶ.ಗು. ಅವರಜೊತೆಯಲ್ಲಿ ಕೆಲಸಮಾಡುತ್ತಿದ್ದನಂತೆ. ಆದರೆ ಬಾಂಬ್ ಬ್ಲಾಸ್ಟ್ ನಲ್ಲಿ ಪ್ರೊಫೆಸರ್ ಸಾಹೇಬರ ಪತ್ನಿ ಮತ್ತು ಎಳೆ ಪ್ರಾಯದ ಮಗಳು ಶಾಪಿಂಗ್ ಮಾಡಲು ಸರೋಜಿನಿ ಮಾರ್ಕೆಟ್ ಗೆ, ಕಾರಿನಲ್ಲಿ ಹೋದವರು ಇದುವರೆಗೂ ಪತ್ತೆಯಾಗಿಲ್ಲ. ಅವರ ಕಾರೂ ಪುಡಿ ಪುಡಿಯಾಗಿದೆ ! ಕಾರಿನ್ ನಂಬರ್ ಪ್ಲೇಟ್ ಸಿಕ್ಕಿತಂತೆ ! ಇವನು ಅವರನ್ನು ಎಷ್ಟು ಸಂತೈಸಿದರೂ ಈ ಆಘಾತದಿಂದ ಅವರು ಇದುವರೆವಿಗೂ ಚೇತರಿಸಿಕೊಂಡಿಲ್ಲ. ಇಂತಹ ಸಮಯದಲ್ಲಿ ಅವರಿಗೆ ತೊಂದರೆ ಕೊಡಲು ಇಚ್ಛಿಸದೆ, ಸ್ವಲ್ಪದಿನ ತನ್ನ ದೇಶಕ್ಕೆ ವಾಪಸ್ಸಾಗಿ ಮತ್ತೆ ಭೇಟಿ ಮಾಡುವುದಾಗಿ ತಿಳಿಸಿದ. ಹೀಗೆ ಪ್ರತಿಯೊಬ್ಬರ ಕಥೆ -ವ್ಯಥೆ, ನಮಗೆ ಬೇಸರ ತಂದಿತ್ತು. ಬಿರ್ಲಾ ಮಂದಿರದಲ್ಲಿ ಭೇಟಿಯಾಗಿದ್ದ ನನ್ನ ಗೆಳೆಯ ಹಾಗೂ ಅವನ ಪರಿವಾರ ಪಹಾಡ್ ಗಂಜ್ ನಲ್ಲೇ ತಂಗಿದ್ದರು. ಮುಂದೆ ಅವರು ವೈಷ್ಣವದೇವಿಗೆ ಹೋಗುವ ಸಿದ್ಧತೆ ಇತ್ತು. ಅವರ ಗತಿ ಏನಾಯಿತೋ ತಿಳಿಯಲಿಲ್ಲ. ನಾವು ಅವನ ವಿಳಾಸ ಕೇಳಬೇಕಾಗಿತ್ತು. ನಮ್ಮ ವಿಳಾಸವನ್ನೂ ನಾವು ಅವರಿಗೆ ತಿಳಿಸಿರಲಿಲ್ಲ. ಯಾರು ಯಾರಿಗೂ ದೀಪಾವಳಿಯ ಶುಭ ಕೋರುವ ಪರಿಸ್ತಿತಿಯಲ್ಲಿರಲಿಲ್ಲ. ನಮಗಂತು ಇದೊಂದು ಮರೆಯಲಾರದ ದುರದೃಷ್ಟಕರ ದೀಪಾವಳಿ ! ರವಿಗೂ ನಾವು ದೀಪಾವಳಿಯ ಶುಭ ಹೇಳಲಿಲ್ಲ. ಮತ್ತೊಮ್ಮೆ 'ಸಂಕಟ ಮೋಚನ ಹನುಮಾನ್ ಮಂದಿರ'ಕ್ಕೆ ಹೋಗಿ ಬಂದೆವು. ಮಾರನೆಯ ದಿನ ( ೦೧-೧೧-೨೦೦೫)ನಾವು ರಾಜಧಾನಿ ಎಕ್ಸ್ ಪ್ರೆಸ್ಸ್ ನಲ್ಲಿ ಹೊರಟು ಮುಂಬೈ ಗೆ ಮಾರನೆ ದಿನ ಬಂದೆವು. ನಮ್ಮನ್ನು ಬಿಡಲು ದೆಹಲಿಯಲ್ಲಿ ರವಿ ಬಂದಿದ್ದರೆ ಮುಂಬೈನಲ್ಲಿ ಸ್ವಾಗತಿಸಲು ಪ್ರಕಾಶ್ ಬಂದಿದ್ದ. ಅವನನ್ನು ೩ ತಿಂಗಳ ನಂತರ ಬೇಟಿಯಾದ ಆನಂದ ಒಂದು ಕಡೆಯಾದರೆ, ರವಿ ಒಬ್ಬನನ್ನೆ ದೆಹಲಿಯಲ್ಲಿ ಬಿಟ್ಟು ಬಂದಿದ್ದಕ್ಕಾಗೆ ಮನಸ್ಸಿಗೆ ದುಗುಡ ! ನಮಗೋಸ್ಕರ ಅವನು ಎಷ್ಟು ಬಾರಿ ಹೋಟೆಲ್ಗೆ ಬಂದಿದ್ದ. ನಾವಿಬ್ಬರೇ ಏನು ನೋಡ್ತಿದ್ವೋ ಬಿಡ್ತಿದ್ವೋ ಗೊತ್ತಿಲ್ಲ. ಅವನು ಬಂದು ಎಲ್ಲಾ ತೋರಿಸಿದ್ದು ನಮಗೆ ಅತ್ಯಂತ ಸಂತೋಷ ಸಮಾಧಾನ ತಂದಿತ್ತು. ನ್ಯಾಷನಲ್ ಮ್ಯೂಸಿಯಮ್ ನಲ್ಲಂತೂ ಅವನು ತುಂಬಾ ಚೆನ್ನಾಗಿ ವಿವರಿಸಿದ.ವಿಷಯಗಳನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡಿದಾನೆ ! ಮುಂಬೈನಲ್ಲಿ ನಾವು ವಾಪಸ್ ಬಂದಾಗ ನಮಗೆ ಜನ ಜೀವನ ಸಾಮಾನ್ಯ ವಾಗಿ ತೊರಿಬಂತು. ಎಲ್ಲಾ ಬಗೆ ಬಗೆಯ ಪೋಷಾಕಿನಲ್ಲಿ ಮಕ್ಕಳು, ಹೆಂಗೆಳೆಯರು ಮೆರೆಯುತ್ತಿದ್ದರು. ಎಲ್ಲಿ ನೋಡಿದರು ಝಗ ಝಗಿಸುವ ವಿದ್ಯುತ್ ದೀಪಗಳು, ಸಿಹಿ ತಿಂಡಿಗಳ ಶಾಪ್ ಗಳು, ಡ್ರೆಸ್ ಮೆಟೀರಿಯಲ್ ಗಳ ಬೃಹತ್ ಮಳಿಗೆಗಳು ಇತ್ಯಾದಿ. ಆದರೆ ಮುಂಬೈ ಜನರಿಗೆ ದೇಶದ ರಾಜಧಾನಿಯಲ್ಲಾದ 'ಹಾಡ್ಸ್', ಇದ್ಯಾವುದರ ಅರಿವಿದ್ದಂತೆ ತೋರಲಿಲ್ಲ ! ಅವರೆಲ್ಲಾ ಅದ್ಧೂರಿಯಾಗಿ ತಮ್ಮ 'ದಿವಾಲಿ' ಹಬ್ಬದ ಸಂಭ್ರಮದಲ್ಲಿ ತೊಡಗಿದ್ದರು. "ಪಡೊಸಿನವರು ದಿವಾಲೀ ಮುಬಾರಕ್" ಅಂದ್ರು. ಫೋನ್ನಲ್ಲಿ ಸ್ನೇಹಿತರೆಲ್ಲರೂ ದಿವಾಲಿಯ ಶುಭಾಷಯದ ಸಂದೇಶಗಳನ್ನು ಕೋರುವವರೇ ! ನಾವೂ ಪ್ರತಿಯಾಗಿ ಎಲ್ಲರಿಗೂ ಶುಭಾಷಯಕೊರಿ, ಪ್ರಕಾಶನಿಗೆ ದೆಹಲಿಯಿಂದ ತಂದ ಸಿಹಿ ಕೊಟ್ಟು, ಅವರ ಸಂಭ್ರಮದ ಪ್ರವಾಹದಲ್ಲಿ ತೇಲಿಹೋದೆವು !
-’ರೆಡಿಫ್ ಮೇಲ್,’ ಸೌಜನ್ಯದಿಂದ