’ಮಯೂರ’ ನೋಡಿದಿರಾ?

’ಮಯೂರ’ ನೋಡಿದಿರಾ?

ಬರಹ

ಪ್ರಜಾವಾಣಿ ಗುಂಪಿನ ’ಮಯೂರ’ ಮಾಸಪತ್ರಿಕೆ ಹತ್ತು ಹಲವು ವರ್ಷಗಳಿಂದ ಕನ್ನಡಿಗರ ಮನ-ಮನೆ ಬೆಳಗಿಸುತ್ತಲೇ ಬಂದಿದೆ. ಈಗಿನಂತೆ ಬೆರಳ ತುದಿಯಲ್ಲಿ ಮಾಹಿತಿ ಸಿಗದಿರುವ ಕಾಲದಿಂದಲೂ ಮಯೂರ ಸಾಹಿತ್ಯಾಸಕ್ತರ ಮನೆಗಳ ಟೀಪಾಯಿಗಳ ಮೇಲೆ ತನ್ನ ಸ್ಥಾನ ಭದ್ರ ಮಾಡಿಕೊಂಡೇ ಬಂದಿದೆ. ಅದೆಷ್ಟೋ ವರ್ಷಗಳಿಂದ ಅದರಲ್ಲಿ ಪ್ರಕಟವಾಗುತ್ತಿರುವ ಅಂಗೈಯಲ್ಲಿ ಅರಮನೆ ಮತ್ತು ಬುತ್ತಿ ಚಿಗುರು ಸ್ಥಿರ ಶೀರ್ಷಿಕೆಗಳನ್ನಂತೂ ಎಲ್ಲ ಬಗೆಯ ಓದುಗರೂ ಇಷ್ಟ ಪಟ್ಟು ಓದುತ್ತಲೇ ಬಂದಿದ್ದಾರೆ. ಕಲ್ಪನೆ ಚಿತ್ರ ಕವನ ಸ್ಪರ್ಧೆಯಲ್ಲಿ ಕವಿತೆ ಬರೆಯುತ್ತಲೇ ಈಗ ಹೆಸರಾಂತ ಕವಿಗಳಾದವರು ಹಲವರಿದ್ದಾರೆ. ಈ ಪತ್ರಿಕೆ ತಿಂಗಳ ಕತೆಗೆ ಪ್ರಕಟಿಸುವ ವಿಮರ್ಶೆ ಕೂಡ ಸೂಕ್ಷ್ಮ ಓದುಗರ ವಿಮರ್ಶಾ ಪ್ರಜ್ಞೆಯನ್ನು ವಿಸ್ತರಿಸಿದೆ.

ಖಾಸಗೀ ದೂರದರ್ಶನ ವಾಹಿನಿಗಳು ಮನರಂಜನಾ ಕ್ಷೇತ್ರವನ್ನು ಆಳಲು ಪ್ರಾರಂಭಿಸಿದ ಬಳಿಕ ಕನ್ನಡದ ಓದುಗ ವಲಯ ಕ್ಷೀಣಿಸುತ್ತ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ. ಸಿನಿಮಾ ಎಂಬ ಮಾಯಾಲೋಕವಂತೂ ಸಾಂಸ್ಕೃತಿಕ ವಲಯವನ್ನು ಸಂಕರಗೊಳಿಸಿ, ಓದು ಬರಹಗಳನ್ನು ಇನ್ನಿಲ್ಲದಂತೆ ಹೊಸಕಿಹಾಕುತ್ತಲೇ ಫ್ಯಾಂಟಸಿಯ ಲೋಕಕ್ಕೆ ಒಯ್ಯುತ್ತಿದೆ. ಸೂಕ್ಷ್ಮ ಮನಸ್ಸು ಮತ್ತು ಅಭಿವ್ಯಕ್ತಿಯ ಗೀಳಿದ್ದವರಂತೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗೆ ಖಾಸಗೀ ಪ್ರಸಾರದ ಸಾಹಿತ್ಯ ಪತ್ರಿಕೆಗಳನ್ನೇ ಅವಲಂಬಿಸುವ ಅನಿವಾರ್ಯತೆಯಲ್ಲಿದ್ದರು. ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಎಲ್ಲ ಪತ್ರಿಕೆಗಳೂ ಒಂದಲ್ಲ ಒಂದು ಸಿದ್ಧಾಂತ ಮತ್ತು ಉಳಿಯಬೇಕಾದ ಅನಿವಾರ್ಯತೆಗಳಿಂದ ತಮ್ಮ ಸ್ವರೂಪ ಮತ್ತು ಒಳಹೂರಣಗಳನ್ನು ಬದಲಿಸುತ್ತಲೇ ಬಂದಿರುವುದೂ ತಿಳಿದ ವಿಚಾರವೇ!

ತುಷಾರ ಈಶ್ವರಯ್ಯನವರು ಸಂಪಾದಿಸುತ್ತಿದ್ದ ಕಾಲಕ್ಕೂ ನಂತರ ಚಿರಂಜೀವಿ ಅದರ ಸಂಪಾದಕರಾದ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಾದುದು ಅದರ ಓದುಗರೆಲ್ಲರಿಗೂ ತಿಳಿದ ವಿಚಾರವೇ. ಜಿ.ಎನ್.ರಂಗನಾಥರಾವ್, ಎಂ.ಬಿ.ಸಿಂಗ್ ಸುಧಾ ಪತ್ರಿಕೆಯನ್ನು ರೂಪಿಸುತ್ತಿದ್ದ ಪರಿಯೇ ಬೇರೆ. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಂತೂ ಕನ್ನಡ ಸಾಹಿತ್ಯ ಚರಿತ್ರೆಯ ಹಲವು ಘಟ್ಟಗಳಲ್ಲಿ ಸಕ್ರಿಯ ಪಾತ್ರ ವಹಿಸಿ ಪೋಷಿಸಿ, ಬೆಳಸಿದೆ.

ಸದ್ಯ ಲಭ್ಯವಿರುವ ಕನ್ನಡ ಮಾಸಿಕಗಳತ್ತ  ಒಂದು ಅವಲೋಕನ ಮಾಡಿದರೆ ವರ್ತಮಾನದಲ್ಲಿ ಸಾಹಿತ್ಯವನ್ನೇ ಪ್ರಮುಖ ವಿಚಾರವಾಗಿಸಿಕೊಂಡಿರುವ ಪತ್ರಿಕೆಗಳು ಬೆರಳೆಣಿಕೆಯಷ್ಟೇ! ಮಕ್ಕಳಿಗೆ, ಮಹಿಳೆಯರಿಗೆ, ಆರೋಗ್ಯಕ್ಕೆ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಪತ್ರಿಕೆಗಳು ಸಿಗುತ್ತವಾದರೂ ಬರಿಯ ಸಾಹಿತ್ಯದ ಆರಾಧನೆಗೆ ಟೊಂಕ ಕಟ್ಟಿರುವ ಪತ್ರಿಕೆಗಳೂ ವಿರಳವೇ, ಅದೂ ಈ ಪೈಪೋಟಿಯ ಕಾಲದಲ್ಲಿ! ಕನ್ನಡ ಸಾಹಿತ್ಯದ ಓಟ ಎತ್ತಕಡೆಗೆ ಸಾಗುತ್ತಿದೆ ಎಂದು ಅರಿಯಬೇಕಾದರೆ ಅದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕತೆ, ಕಾದಂಬರಿ ಮತ್ತು ಕಾವ್ಯಗಳ ಓದಿನಿಂದ ಮಾತ್ರ. ಆದರೆ ಕೆಲವು ಪತ್ರಿಕೆಗಳು ತಮ್ಮ ಸಿದ್ಧಾಂತವನ್ನು ನಂಬಿರುವ ಮತ್ತು ಅವರೊಂದಿಗೆ ನಿಕಟತೆಯನ್ನು ಹೊಂದಿರುವ ಕೆಲವರ ಬರಹಗಳನ್ನು ಮಾತ್ರ ಪ್ರಕಟಿಸುತ್ತಿರುವುದರಿಂದ  ಇಂಥ ಒಂದು ಅಧ್ಯಯನಕ್ಕೆ ಪೂರಕವಾದ ವಾತಾವರಣವೇ ಕನ್ನಡದ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸುವ ಸಾಹಿತ್ಯ ವಾರ್ಷಿಕಗಳನ್ನು ಈ ಮಾತಿನ ಋಜುವಾತಾಗಿ ನೋಡಬಹುದು.  

ಕನ್ನಡ ಕಾವ್ಯದ ಹೊಸ ಬೆಳೆಗಳನ್ನು ಯಥಾವತ್ತಾಗಿ ಪ್ರಕಟಿಸಿ ಹೊಸ ಬರಹಗಾರರನ್ನು ಪರಿಚಯಿಸಿದ ಕೀರ್ತಿ ’ಭಾವನಾ’ ಮಾಸಿಕಕ್ಕೆ ಸಲ್ಲುತ್ತದೆ. ಜಯಂತ ಕಾಯ್ಕಿಣಿಯವರ  ಪ್ರೀತಿ ಮತ್ತು ಪರಿಶ್ರಮದಿಂದ ಸಿದ್ಧಗೊಳ್ಳುತ್ತಿದ್ದ ಭಾವನಾ ವ್ಯಾಪಾರಿ ದೃಷ್ಟಿಕೋನದ ಕಾರಣ ಅಕಾಲ ಮರಣಕ್ಕೆ ತುತ್ತಾಯಿತು. ಜಯಂತ್ ಹೊಸ ಪತ್ರಿಕೆ ತಂದು ಭಾವನಾದ ಸ್ಥಾನ ತುಂಬುವ ಸುದ್ದಿ ಬರಿಯ ಸುದ್ದಿಯಾಗೇ ಉಳಿಯಿತು. ಕೆಲಕಾಲ ಸ್ಥಗಿತವಾಗಿದ್ದ ಹೊಸಬರಹಗಾರರ ಹೊಸ ಸಂವೇದನಗಳಿಗೆ ಜೀವ ಬಂದದ್ದು ಜಿ.ಪಿ.ಬಸವರಾಜು  ಮಯೂರದ ಸಾರಥ್ಯ ವಹಿಸಿದ ಮೇಲೆ. ಸ್ವತಃ ಕವಿ ಮತ್ತು ಕತೆಗಾರರೂ ಆಗಿರುವ ಜೀ.ಪಿ ಮಯೂರದ ಬರಹಗಳ ಆಯ್ಕೆಯ ವಿಧಾನವನ್ನೇ ಬದಲಿಸಿ ಕಡೇಯುಸಿರೆಳೆದ ಭಾವನಾಕ್ಕೆ ಬದಲಿಯೊಂದನ್ನು ಕಾಣಿಸಿದರು.

ಮತ್ತೀಗ ಮಯೂರ ಬದಲಾಗಿದೆ. ಪ್ರಜಾವಾಣಿಯಲ್ಲೀಗ ಹುಡುಗರ ದಂಡೇ ತುಂಬಿರುವುದರಿಂದ ಹೊಸ ತಲೆಮಾರಿನ ತವಕ ತಲ್ಲಣಗಳನ್ನು ಅರಿತು ಆ ಬಳಗದ ಪತ್ರಿಕೆಗಳಲ್ಲಿ ಲೇಖನ/ಕವಿತೆ/ಕತೆಗಳು ಆಯ್ಕೆಯಾಗುವುದರಿಂದ ಮಾಯವಾಗಿದ್ದ ಯುವ ಪ್ರತಿಭೆಗಳ ಪ್ರದರ್ಶನಕ್ಕೆ ಸ್ಠಳಸಿಕ್ಕಂತಾಗಿದೆ. ಅದು ಈ ಬಾರಿಯ ದೀಪಾವಳಿ ಕಥಾಸ್ಪರ್ಧೆಯ ಬಹುಮಾನ ಗಳಿಸಿದ ಕತೆಗಳ ಆಯ್ಕೆಯ ಮೂಲಕವೇ ಗುರುತಿಸಬಹುದು. ತಂತ್ರಜ್ಞಾನ ಸಿದ್ಧಿಸಿರುವ ಈ ಕಾಲದಲ್ಲಿ ಪತ್ರಿಕೆಯೊಂದನ್ನು ಅದ್ದೂರಿಯಾಗಿ ಪ್ರಕಟಿಸಬಹುದಾದರೂ ಒಳಹೂರಣವನ್ನು ರುಚಿವಂತರು ಮಾತ್ರ ರೂಪಿಸಬಹುದು. ಅದನ್ನು ಪ್ರಜಾವಾಣಿಯ ಯುವ ಪತ್ರಕರ್ತರು ಸಾಧಿಸಿ ತೋರಿಸಿದ್ದಾರೆ.

ಮಯೂರದ ಸಂಪಾದಕರಾಗಿದ್ದ ಜೀ.ಪಿ.ಬಸವರಾಜು ನಿವೃತ್ತರಾದ ನಂತರದ ಈ ಎರಡು ತಿಂಗಳ ಮಯೂರ ಅವರು ಬಿಟ್ಟುಹೋದ ಸಂಸ್ಥಾನ ಅವರಷ್ಟೇ ಸಾಹಿತ್ಯ ಪ್ರೀತಿ ಮತ್ತು ಜವಾಬ್ದಾರಿಯನ್ನು ಇಟ್ಟುಕೊಂಡಿರುವವರಿಗೆ ಸಿಕ್ಕಿದೆ ಎಂದು ಶೃತಪಡಿಸಿದೆ.

ಡಿಸೆಂಬರ್ ತಿಂಗಳ ಮಯೂರ ಯುವೋದಯ ಎಂಬ ಉಪಶೀರ್ಷಿಕೆ ಹೊತ್ತು ಸಂಪೂರ್ಣ ಸಾಹಿತ್ಯಪುಟಗಳಿಂದ ಕಂಗೊಳಿಸುತ್ತಿದೆ. ತಿಂಗಳ ಕತೆಗೆ ಎರಡು ಸಾವಿರ ರೂಪಾಯಿಗಳ ಸಂಭಾವನೆಯ ಆಮಿಷವನ್ನೂ ಒಡ್ಡಿದೆ! ಸಾರ್ಥಕ ಕವಿತೆಗಳ ಜೊತೆಗೇ ಎರಡು  ಪ್ರಬಂಧಗಳು, ಅದರ ಜೊತೆಗೆ ಹಿತವೆನ್ನಿಸುವ ಕತೆಗಳು. ಸದ್ಯದ ಸಾಹಿತ್ಯ ಮತ್ತು ವಿಮರ್ಶೆಯನ್ನು ಕುರಿತಂತೆ ನಾಡಿನ ಉದ್ದಗಲದ ಯುವ ಸಾಹಿತಿಗಳ ಅಭಿಪ್ರಾಯ ಕೂಡ. ಸಿನಿಮಾ ಲೇಖನದ ಜೊತೆಗೇ ತಿಂಗಳ ಹೊತ್ತಿಗೆಯಲ್ಲಿ ಹೊಸ ಕವನ ಸಂಕಲನವೊಂದರ  ಮೂತಿಗೂ ಇಕ್ಕಲಾಗಿದೆ!

ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳ ದಾಖಲೆ ಸಿಕ್ಕುವುದು ಆಯಾಕಾಲದ ಸಾಹಿತ್ಯ ಕೃತಿಗಳಿಂದ. ಅದನ್ನು ಅರಿತಿರುವ ಪ್ರಜಾವಾಣಿ ಮಯೂರವನ್ನು ರೂಪಿಸುವುದಕ್ಕೆ ಉಲ್ಲಾಸ ಮತ್ತು ಯೌವನ ತುಂಬಿರುವ ಬಳಗಕ್ಕೆ ಜವಾಬ್ದಾರಿ ಹೊರಿಸಿದೆ. ಆ ಬಳಗ ತಾನು ಯಾರಿಗೂ ಕಡಿಮೆ ಇಲ್ಲ ಎಂದು ಸಾಬೀತು ಪಡಿಸಿದೆ.

ಈತನಕ  ಮಯೂರ ನೋಡದೇ ಇದ್ದರೆ ಕೊಂಡು ಓದಿ. ಬರಿಯ ಏಳೇ ರೂಪಾಯಿಗೆ ಸಮೃದ್ಧ ಸಾಹಿತ್ಯ ಪಾಕವನ್ನು ಸವಿಯುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಜೊತೆಗೇ ನಿಮ್ಮ ಕವಿತೆ/ಕತೆ ಹೊಸ ಅನುಭವ ಮತ್ತು ಹೊಸ ಜಗತ್ತುಗಳು ಕಲಿಸಿದ ಪಾಠಗಳಿಂದ ವ್ಯುತ್ಪನ್ನವಾಗಿದ್ದರೆ ಕಳಿಸಿಕೊಡಿ. ಹೊಸತನ ಮತ್ತು ತಾಜಾ ಬರಹಗಳನ್ನು ಓದಲು ಬಯಸುವರಿಗೆ ಒಂದು ರಿಲೀಫ್ ನೀಡಿ.

ಈ ಲೇಖನ  ಖಂಡಿತ ಮಯೂರದ ಸಂಪಾದಕ ಮಂಡಳಿಗೆ ಕಸಿವಿಸಿ ಮಾಡಬಹುದು. ಆದ್ರೆ ಓದುಗರೇ ಕಡಿಮೆಯಾಗುವ ಕಾರಣಕ್ಕೆ ಭಾವನಾದಂತೆ ಇದೂ ಆಗಬಾರದೆನ್ನುವ ಕಾರಣಕ್ಕೆ ಮತ್ತು ಹೊಸ ಸಂಪಾದಕ ಮಂಡಳಿಗೆ ಶುಭ ಹಾರೈಸುವ ಸಲುವಾಗಿ ಈ ಲೇಖನ.