‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!

‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!

ಬರಹ

*"ಸಿನೇಮಾ ಕಲೆಯಲ್ಲ; ಕುಸುರಿ ಕೆಲಸ. ಬೇಕೋ ಬೇಡವೋ ಅದು ರಾಜಕೀಯ ಬಣ್ಣ ಬಳಿದುಕೊಳ್ಳುತ್ತದೆ. ಹಾಗಾಗಿ ಸಿನೇಮಾ ಮಾಡುವ ಪ್ರತಿಯೊಬ್ಬರಿಗೂ ಜವಾಬ್ದಾರಿ ಇರುತ್ತದೆ..ಅದು ಹೆಚ್ಚಿನ ಜವಾಬ್ದಾರಿ!"

*"ಸಿನೇಮಾ ಹುಟ್ಟಿದಾರಭ್ಯದಿಂದಲೂ ಉದ್ಯಮವೇ. ಹಾಗಾಗಿ ಹಣ ಮಾಡುವ ದಾರಿಯನ್ನೇ ಅದು ಸದಾ ಹುಡುಕುತ್ತದೆ. ರಿಮೇಕ್ ಹಾವಳಿ, ಅನ್ಯ ದೇಶಗಳ ಸಿನೇಮಾ ಕದ್ದು ಹಕ್ಕುಸ್ವಾಮ್ಯ ಪ್ರಶ್ನಿಸುವುದು ಸಾಮಾನ್ಯವಾಗುತ್ತಿದೆ. ಅಂತಾರಾಷ್ಟ್ರೀಯ ಹಕ್ಕುಸ್ವಾಮ್ಯ ಚಳುವಳಿಗೆ ಚಾಲನೆ ನೀಡುವುದು ಅಂದುಕೊಂಡಷ್ಟು ಸುಲಭವಲ್ಲ. ಸಿನೇಮಾ ಮಾಡುವವರ ಆತ್ಮಗೌರವದ ಪ್ರಶ್ನೆ ಇದು."

*ತಮ್ಮ ಚಿತ್ರಗಳನ್ನೇ ಸ್ವತ: ವಿಮರ್ಶಿಸಿಕೊಂಡ ಆ ನಿರ್ದೇಶಕ ಮಹಾನುಭಾವ.."ಸಿನೇಮಾ ಎಂದೂ ಸತ್ಯ ನುಡಿಯುವುದಿಲ್ಲ. ನಿರ್ದೇಶಕರ, ತಂತ್ರಜ್ಞರ ಹಸ್ತಕ್ಷೇಪ ಎಲ್ಲದರಲ್ಲೂ ಇದ್ದೇ ಇರುತ್ತದೆ. ಅಸಹಜವಾದದ್ದು ಯಾವತ್ತಿಗೂ ಸತ್ಯವಲ್ಲ."

ಯಾರು ಈ ಮಹಾನುಭಾವ....?

ಗೋವಾ ರಾಜ್ಯದ ಪಣಜಿಯಲ್ಲಿ ಸದ್ಯ ೩೯ ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಆ ಉತ್ಸವದಲ್ಲಿ ಜೀವಮಾನದ ಶ್ರೇಷ್ಠ ಸಾಧನೆಗಾಗಿ ಪ್ರಶಸ್ತಿ ಪಡೆದ ಅಮೇರಿಕೆಯ ಹೆಸರಾಂತ ನಿರ್ದೇಶಕ ಜಾನ್ ಲೆಂಡಿಸ್ ಲೆಹಿರಿ ತಮ್ಮ ಅಭಿನಂದನೆಯ ಪರ ಕೃತಜ್ಞತಾ ಭಾಷಣದಲ್ಲಿ ಹೇಳಿದ ಮೌಲ್ಯಯುತ ಮಾತುಗಳಿವು.

ಈ ಚಲನಚಿತ್ರೋತ್ಸವದಲ್ಲಿ ಅವರ ಆಚಾರ್ಯಕೃತಿಗಳಾದ (ಚಲನಚಿತ್ರಗಳಾದ) ‘ಆನ್ ಅಮೇರಿಕನ್ ವರ್ ಉಲ್ಫ್ ಇನ್ ಲಂಡನ್’, ‘ಕಮಿಂಗ್ ಟು ಅಮೇರಿಕಾ: ದಿ ಬ್ಲ್ಯೂಸ್ ಬ್ರದರ್ ೨೦೦೦’ ಸೇರಿದಂತೆ ಒಟ್ಟು ೫ ಚಿತ್ರಗಳು ಪ್ರದರ್ಶನ ಕಂಡವು.

ಗೌರವಾನ್ವಿತ ನಿರ್ದೇಶಕ ಲೆಹಿರಿ ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಲು ನನ್ನ ಬಳಿ ಪ್ರಬಲ ಕಾರಣಗಳಿವೆ.

ಮುಂಬೈ ಮೇಲೆ ನಡೆದ, ಆದರೆ ದೇಶದ ಭದ್ರತಾ ವ್ಯವಸ್ಥೆಗೆ ಮರ್ಮಾಘಾತ ನೀಡಿದ ರಾಕ್ಷಸ ಉಗ್ರರ ವ್ಯವಸ್ಥಿತ ದಾಳಿಗಳು..ಅದರಲ್ಲೂ ಟಾಟಾ ಸಮೂಹದ ಒಡೆತನಕ್ಕೆ ಸೇರಿದ ಮುಂಬೈ ಮುಕುಟ ಹೊಟೇಲ್ ತಾಜಮಹಲ್ ಮೇಲೆ ನಡೆದ ದಾಳಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸರಾವ್ ‘ವಿ’ದೇಶಮುಖ! ಅವರು ಚಲನಚಿತ್ರದ ‘ಕ್ಲ್ಯಮ್ಯಾಕ್ಸ್ ಪ್ಲಾಟ್’; ಅಥವಾ ಬಾಲಿವುಡ್ ಜಗತ್ತಿಗೆ ಒಳ್ಳೆಯ ‘ಸ್ಕ್ರಿಪ್ಟ್’ ಆಗಬಹುದು ಎಂದು ಭಾವಿಸಿದಂತಿದೆ!

ಜವಾಬ್ದಾರಿಯುತ ಸ್ಥಾನದಲ್ಲಿರುವ (ಆದರೆ, ಕ್ಷಮಿಸಿ..ಬೇಜವಾಬ್ದಾರಿ) ಮುಖ್ಯಮಂತ್ರಿ ‘ವಿ’ದೇಶಮುಖ್ ಉಗ್ರರ ದಾಳಿಗೆ ತುತ್ತಾದ ಎಲ್ಲ ಸ್ಥಳಗಳಿಗೆ ಭಾನುವಾರ ಭೇಟಿ ನೀಡಿದರು. ಅಷ್ಟು ಬಿಟ್ಟು ಈ ರಾಜಕಾರಣಿಗಳಿಂದ ಇನ್ನಾವ ಕೆಲಸ ಸಾಧ್ಯವಿದೆ? ಆ ಮಾತು ಬೇರೆ! ಎಲ್ಲ ಸಮಸ್ಯೆಗಳ ಮೂಲವೇ ಅವರು.. ಆದರೆ ಜೊತೆಗೆ ತಮ್ಮ ಮಗ, ಬಾಲಿವುಡ್ ಉದಯೋನ್ಮುಖ ತಾರೆ ರಿತೇಶ್ ದೇಶಮುಖ್ ಹಾಗು ಹೆಸರಾಂತ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರನ್ನು ಸಹ ಕರೆದೊಯ್ದರು! ಬಹುಶ: ಉಗ್ರರ ದಾಳಿಯ ‘ಫಸ್ಟ್ ಹ್ಯಾಂಡ್ ಇನ್ ಫಾರ್ಮೇಷನ್’ ಹಾಗು ‘ಫಸ್ಟ್ ಹ್ಯಾಂಡ್’ ನೋಟ ಇವರಿಗೆ ಒದಗಿಸಿಕೊಡುವುದು ಅವರಿಗೆ ಮುಖ್ಯಮಂತ್ರಿಯ ಬಹುಮುಖ್ಯ ಕರ್ತವ್ಯಗಳಲ್ಲಿ ಒಂದು ಎಂಬ ಭಾವನೆ ಇತ್ತು!

ಇದು ನಮ್ಮ ಕರ್ನಾಟಕದ ಸರಕಾರಿ ಶಾಲೆಯಲ್ಲಿ ಪ್ರೌಢ ಶಾಲೆ ಓದುತ್ತಿರುವ ಹುಡುಗನಿಗೂ ತಿಳಿಯುತ್ತದೆ. ಅದೇನೆಂದರೆ, ರಾಜ್ಯದ ಮುಖ್ಯಮಂತ್ರಿಗಳಾಗಿ ಅವರು ಈ ಉಗ್ರರ ದಾಳಿಗೆ ತುತ್ತಾದ ಸ್ಥಳಗಳಿಗೆ ನೀಡುವ ಭೇಟಿ ಅತ್ಯಂತ ಮಹತ್ವದ್ದು. ಅಲ್ಲಿ ಅವರು ಪಡೆಯುವ ಪ್ರಥಮ ಮಾಹಿತಿ ಹಾಗು ಸ್ಥಳದ ಸಮೀಕ್ಷೆ ಕೇವಲ ಅವರ ಮೂಲಭೂತ ಹಕ್ಕು. ಈ ‘ಪ್ರಿವಿಲೆಡ್ಜ್’ ಬೇರೆ ಯಾರಿಗೂ ಲಭ್ಯವಿರಲಾರದು. ಈ ಶಿಷ್ಠಾಚಾರದ ಭೇಟಿಯ ಸಂದರ್ಭದಲ್ಲಿ ಸ್ಥಳದಲ್ಲಿ ಉಪಸ್ಥಿತರಿರುವ ಅಧಿಕಾರಿಗಳಿಂದ ಅವರು ಪಡೆದುಕೊಳ್ಳುವ ವಿವಿಧ ಕೋನಗಳ ಮಾಹಿತಿ ಅತ್ಯಂತ ಗೌಪ್ಯದ್ದು. ಹಾಗು ‘ಆಫಿಸಿಯಲ್ ಸಿಕ್ರೇಸಿ ಕಾನೂನು’ ಅಡಿಯಲ್ಲಿ ಸಹ ಸರಕಾರ ಸಾರ್ವಜನಿಕರಿಗೆ ತನಿಖೆ ಸಂಪನ್ನಗೊಳ್ಳುವ ವರೆಗೆ ತಡೆಹಿಡಿಯಬಹುದು.

ಹಾಗೆಯೇ..ಅಲ್ಲಿ ಅವರು ಕ್ರೊಢೀಕರಿಸಿಕೊಳ್ಳುವ ಮಾಹಿತಿ ಕೇಂದ್ರಕ್ಕೂ (ತಮ್ಮ ಖುರ್ಚಿ ಉಳಿಸಿಕೊಳ್ಳುವ ದೃಷ್ಟಿಯಿಂದ ಇಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ..ಅದು ಇಟಲಿಯ ಮೇಡಂಗೆ ಮುಖ್ಯವಾಗಿ) ನೀಡಬೇಕು..ರಾಜ್ಯದ ಪಾಲಕ ರಾಜ್ಯಪಾಲರಿಗೂ ಮೊದಲು, ನಂತರದ ಬೆಳವಣಿಗೆಗಳನ್ನು, ಸಾಧನೆ ಹಾಗು ವೈಫಲ್ಯಗಳನ್ನು ಹಾಗು ಭವಿಷ್ಯದಲ್ಲಿ ಸರಕಾರ ಇಡಲಿರುವ ಹೆಜ್ಜೆಗಳ ಕುರಿತು ವಿಲಾಸರಾವ್ ವಿವರಿಸಬೇಕು. ದೇಶ ಹಾಗು ಆರಿಸಿ ಕಳುಹಿಸಿದ ತಮ್ಮ ರಾಜ್ಯದ ಜನಕ್ಕೂ ಸತ್ಯನಿಷ್ಠವಾದ ಮಾಹಿತಿ ನೀಡಬೇಕಿರುವ ನೈತಿಕ ಜವಾಬ್ದಾರಿ ಅವರ ಮೇಲಿರುವುದರಿಂದ ಈ ಭೇಟಿಗೆ ವಿಶೇಷ ಮಹತ್ವವಿತ್ತು.

ಆದರೆ.. ಶಿವಾ, ಸತ್ಯ, ಕಂಪನಿ, ಆಗ್ ಮೊದಲಾದವು ಸೇರಿದಂತೆ ಮುಂಬೈ ಪಾತಕಿಗಳ, ಸರಣಿ ಹಂತಕರ ಹಾಗು ಅನಾಗರಿಕ ಭೂಗತಜಗತ್ತಿನ ಆಗುಹೋಗುಗಗಳನ್ನು ವೈಭವೀಕರಿಸಿ, ಕಮರ್ಶಿಯಲ್ ಚಿತ್ರಗಳನ್ನು ನಿರ್ಮಿಸುವಲ್ಲಿ ಹೆಸರುವಾಸಿಯಾಗಿರುವ ರಾಮ್ ಗೋಪಾಲ್ ವರ್ಮಾ ಅವರನ್ನು ರಾಜ್ಯದ ಮುಖ್ಯಮಂತ್ರಿಗಳು ಅಂತಹ ಸ್ಥಳಗಳಿಗೆ ಕರೆದೊಯ್ಯುತ್ತಾರೆ ಎಂದರೆ.. ಅದೂ.. ಇನ್ನೂ. ನಮ್ಮ ಅರೆ ಸೈನಿಕ ಪಡೆಗಳು, ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು, ಬಾಂಬ್ ಪತ್ತೆ ದಳದ ತಂತ್ರಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಣತರು ಹಾಗು ಮುಂಬೈ ಪೊಲೀಸ್, ವಿಶೇಷ ರಕ್ಷಣಾ ಪಡೆಗಳು ಆ ಸ್ಥಳಗಳಲ್ಲಿ ಸ್ಫೋಟಕಗಳಿಗಾಗಿ, ಬಂದೂಕು-ಗುಂಡುಗಳಿಗಾಗಿ ಹಾಗು ಪಾಪ ಸತ್ತವರ ಶವಗಳಿಗಾಗಿ ಶೋಧಕಾರ್ಯದಲ್ಲಿ ಹಗಲು-ರಾತ್ರಿ ತೊಡಗಿಕೊಂಡು, ಬಹು ಮುಖ್ಯ ಮಾಹಿತಿಗಳನ್ನು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿರುವಾಗ.. ಈ ‘ವಿ’ದೇಶಮುಖ್ ಹೀಗೆ ನಡೆದುಕೊಳ್ಳುವುದು ಅವರ ಸ್ಥಾನಕ್ಕೆ ಭೂಷಣವೇ?

"I think commonsense is such a thing; which is always uncommonly found!"

ಕೆಲ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಹೇಳುವುದಾದರೆ..ರಾಮ್ ಗೋಪಾಲ್ ವರ್ಮಾ ಅವರು ಮುಖ್ಯಮಂತ್ರಿಗಳ ಪುತ್ರ ಬಾಲಿವುಡ್ ‘ಚಿರಾಗ್’ ರಿತೇಶ್ ದೇಶಮುಖ ದ್ವಾರಾ ಅನುಚಿತ ಪ್ರಭಾವ ಬೀರಿ ಈ ಛಾನ್ಸ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ವಿಶೇಷ ಎಂದರೆ, ಸ್ಮಶಾನ ಸದೃಶ ವಾತಾವರಣ ನಿರ್ಮಿಸಿ, ೪,೬೦೦ ಕೋಟಿ ರುಪಾಯಿಗಳ ಹಾನಿ ಮಾಡಿದ ಉಗ್ರರ ಅಟ್ಟಹಾಸದ ಪರಿಯನ್ನು ತೋರಿಸಲು ತಮ್ಮೊಂದಿಗೆ ಮುಖ್ಯಮಂತ್ರಿಗಳು.. ಸ್ವತ: ‘ಸೋನಿಯಾ ಮೇಡಂ’ ಅವರ ಪ್ರಧಾನಮಂತ್ರಿ ಸರದಾರ್ ಮನಮೋಹನ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್, ನಿನ್ನೆ ತಲೆ ದಂಡ ನೀಡಲಾದ ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್ ಅಥವಾ ಸದ್ಯ ಗೃಹಮಂತ್ರಾಲಯಕ್ಕೆ ಕೊರಳೊಡ್ಡಿ ತಮ್ಮ ಅದೃಷ್ಠ ಪರೀಕ್ಷಿಸಲಿರುವ ಈಗಾಗಲೇ ಬೆಲೆಗಳನ್ನೆಲ್ಲ ಏರಿಸಿ, ತನ್ಮೂಲಕ ನಮ್ಮ ಪಿತ್ಥ ಏರಿಸಿರುವ ಮಾಜಿ ವಿತ್ತಮಂತ್ರಿ ಪಿ.ಚಿದಂಬರಂ, ರಕ್ಷಣಾ ಮಂತ್ರಿ.. ಹಾಗು ಇನ್ನೂವರೆಗೂ ಏಕೆ? ಎನ್ನದ ಎ.ಕೆ.ಆಂಟನಿ, ೩ ರಕ್ಷಣಾ ಪಡೆಗಳ ಹಿರಿಯ ಅಧಿಕಾರಿಳು, ‘ರಾ’, ‘ಎನ್.ಎಸ್.ಜಿ’, ‘ಸಿ.ಬಿ.ಐ’, ರಾಜ್ಯದ ‘ಸಿ.ಐ.ಡಿ’, ‘ಸಿ.ಓ.ಡಿ’ ಚಾಣಾಕ್ಷ ಅಧಿಕಾರಿಗಳನ್ನು ಕರೆದುಕೊಂಡು ಸ್ಥಳದ ಭೇಟಿಗೆ ಹೊರಡುವುದಕ್ಕಿಂತ..ಈ ಬಾಲಿವುಡ್ ಜಗತ್ತಿನ ಬೆಳ್ಳಿ ತೆರೆಯ ನಾಯಕರನ್ನು ಕರೆದೊಯ್ಯುವುದು ಸೂಕ್ತ ಎಂದು ಮಗ ರಿತೇಶ್ ಮೂಲಕ ವರ್ಮಾ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಸುವಲ್ಲಿ ಯಶಸ್ವಿಯಾದದ್ದು!

ಇನ್ನೊಂದು ಚೋದ್ಯ ನೋಡಿ..ಸದಾ ಕರ್ನಾಟಕದೊಂದಿಗೆ ಗಡಿ ಸಮಸ್ಯೆ ಉಲ್ಲೇಖಿಸಿ ಗಾಳಿಗುದ್ದುವ ಮಾತಿನಮಲ್ಲ, ಮಹಾರಾಷ್ಟ್ರದ ಗೃಹಮಂತ್ರಿ ಆರ್.ಆರ್.ಪಾಟೀಲ ಸಾಹೇಬ್ರು! ಭಾನುವಾರ ಸುದ್ದಿಗೋಷ್ಠಿಯಲ್ಲಿ.."ನೋಡಿ..ಇಂತಹ ದೊಡ್ಡ ದೊಡ್ಡ ಶಹರಗಳಲ್ಲಿ ಅಂತಹ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಅದನ್ನೇ ಮಾಧ್ಯಮಗಳು ದೊಡ್ಡದು ಮಾಡಿ ಬಿತ್ತರಿಸಬಾರದು. ಸರಕಾರಕ್ಕೆ ಸಹಕಾರ ನೀಡಿ ಬೆಂಬಲಿಸಬೇಕು"! ಅಂದರು..ಹಾಗಿದ್ದರೆ ಮಾಧ್ಯಮಗಳಿಗೆ ತಲೆ ಇಲ್ಲ ಅಂತ ಅವರು ಪರೋಕ್ಷವಾಗಿ ಸಾರಿದ್ದಾರೆ! ಮಾಧ್ಯಮಗಳು ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ!

ನನಗೆ ಸಂಜೆಯ ವೇಳೆ ಗೆಳೆಯರೊಬ್ಬರು ಈ ಎಲ್ಲ ನಾಟಕೀಯ ಬೆಳವಣಿಗೆ ಗಮನಿಸಿ ಈ ಎಸ್.ಎಂ.ಎಸ್ ಕಳುಹಿಸಿದ್ದಾರೆ. ಓದಿ..
"Where is Raj Thakeray now? tell him that 427 Additional National Security Guard Commanadoes from DELHI (NORTH INDIA!) have been sent to Mumabi to fight against TERRORRISTS. Why not the MAHAARASHTRA NAVANIRMAANA SENAA sending it's great soldiers who are good at vandalising the public property? please keep this message forwarding till it reaches it's bloody leader"!

ಬರ್ಟೆಂಡ್ ರಸೆಲ್ ತತ್ವಜ್ಞಾನಿ. ಆತ ‘ಇಂಪ್ಯಾಕ್ಟ್ ಆಫ್ ಸೈನ್ಸ್ ಆನ್ ದಿ ಸೊಸಾಯಿಟಿ’ ಎಂಬ ಗ್ರಂಥದಲ್ಲಿ ಧೀರ್ಘ ಛೀಮಾರಿ ಹಾಕಿ ಉಲ್ಲೇಖಿಸಿ ಬರೆದು ೬೦ ವರ್ಷಗಳೇ ಗತಿಸಿವೆ ಎಂದು ಚಿಂತಕ ಡಾ.ಕೆ.ಎಸ್.ನಾರಾಯಣಾಚಾರ್ಯ ಹೇಳುತ್ತಾರೆ. "ಒಂದು ಮೇಜಿನ ಮೇಲೆ ಗೂಂಡಾ ವಿದ್ಯಾರ್ಥಿಯೋರ್ವ ತನ್ನ ಪಿಸ್ತೂಲ್ ಇಟ್ಟು, ಮೇಷ್ಟ್ರಿಗೆ ತೋರಿಸಿ ಹೇಳುತ್ತಾನೆ. ‘ಇಂದಿನಿಂದ ಸೂರ್ಯ ಹುಟ್ಟುವುದು ಪಶ್ಚಿಮದಲ್ಲಿಯೇ"! ಆಗ ಮೇಷ್ಟ್ರು ಏನು ಮಾಡುತ್ತಾರೆ?

ಇದು ಸುಳ್ಳಿಗೆ ಸತ್ಯದ ಮೇಲಿರುವ ಶಕ್ತಿ! "ವಂದೇ ಮಾತರಂ"