ಹಾವೇ..ಹಾವೇ..ಏನೀ..ನಿನ್ನಯ ಠಾವೇ!

ಹಾವೇ..ಹಾವೇ..ಏನೀ..ನಿನ್ನಯ ಠಾವೇ!

ಬರಹ

‘ಹಾವು ನಿಮ್ಮ ಕಣ್ಣಿಗೆ ಬಿದ್ದರೆ ಏನು ಮಾಡುತ್ತೀರಿ?’

‘ಅಯ್ಯೋ..ಮಾರಾಯಾ..ಮೊದಲು ದೊಡ್ಡ ದೊಣ್ಣೆಯನ್ನು ಹುಡುಕುತ್ತೇನೆ. ಕೈಗೆ ಸಿಕ್ಕ ತಕ್ಷಣ ಆ ಹಾವನ್ನು ಹುಟ್ಟಲಿಲ್ಲ ಎನಿಸಿಬಿಡುತ್ತೇನೆ..’ ಅಂದ ನನ್ನ ಗೆಳೆಯ ಲಿಂಗರಾಜ. ‘ಅಯ್ಯೋ ಪಾಪಿ..ಹಂಗ್ಯಾಕೋ ಮಾಡ್ತಿ?’ ಅಂತ ತುಸು ವ್ಯಗ್ರನಾಗಿ ಕೇಳಿದೆ. ‘ಯಾಕಂದ್ರ..ಜೀವಂತವಾಗಿ ಅದನ್ನ ನನಗ ಹಿಡೀಲಿಕ್ಕೆ ಬರುದುಲ್ಲ!’ ಅಂತ ನಗೆಯಾಡಿದ.

‘ಜೀವಂತ ಸಿಕ್ರ ಏನ್ ಮಾಡ್ತಿ?’ ಅಂತ ಮರು ಪ್ರಶ್ನಿಸಿದೆ. ಲಿಂಗರಾಜ್ ಅಂದ.. ‘ನಮ್ಮ ಊರ ಮುಂದಿನ ಗೋಸಾವಿ ಲಖನ್ ಕರೀತೇನಿ. ಅವ ಬಂದು ಅದನ್ನ ಹಿಡಕೊಂಡು ಹೋಗತಾನ. ಹಲ್ಲಿನೊಳಗಿನ ವಿಷ ತಗದು ಬಾಟಲಿಯೊಳಗ ಇಟಗೊಳ್ಳತಾನ. ತನ್ನ ನಾಟಿ ವೈದ್ಯಕೀಯಕ್ಕ ಬಳಸತಾನ. ಆಮೇಲೆ ಚೆಂದ ಚರ್ಮ ಸುಲದು ಅದರ ಮಾಂಸ ಪಲ್ಲೆ, ಸಾರು ಮಾಡತಾನ. ಮನಿ ಮಂದಿ ಕತ್ತರಿಸಿ ಹೊಡಿತಾರ..೨ ದಿವಸ ಬಿಟ್ಟು ಹಾವಿನ ಚರ್ಮ ಒಣಗಿಸಿ, ಮಾದರ ದ್ಯಾಮಣ್ಣಗ ಕೊಡತಾನ. ನನಗ ಅವ ಹಾವಿನ ಚರ್ಮದೊಳಗ ಚೆಂದಾನ ಗೌಡ್ರ ಚಪ್ಪಲಿ ಮಾಡಿ ಕೊಡತಾನ. ಮೆಟ್ಟಿಗೊಂಡು ಅಡ್ಡಾಡಿದರ ನನ್ನ ಖದರು ನೋಡಬೇಕು ನೀನು. ಹಿಂದಕ ಒಂದ ಸೊಂಟದ ಬೆಲ್ಟ್ ಮಾಡಿಸಿಕೊಂಡಿದ್ದೆ..ನೋಡಿದವರೆಲ್ಲ ಕೇಳಿದ್ರು..ಫಾರೆನ್ ನಿಂದ ತರಿಸೀನಿ ಅಂದಿದ್ದೆ!" ಅಂತ ಹುಬ್ಬೇರಿಸಿದ.

ಕೇಳಿ ನಾನು ಮೂಗು ಏರಿಸೋದು ಬಾಕಿ. ಹುತ್ತಿಗೆ, ಕಲ್ಲು ನಾಗರಕ್ಕ ಹಾಲೆರುವ ನಾವು ಜೀವಂತ ನಾಗರ ಕಂಡಾಗ ಹಿಂಗ್ಯಾಕ? ಅಂದ್ರ ಅದು ‘ಮಾಬ್ ಫೋಬಿಯಾ’ ಲೆಕ್ಕ ಅಂತಾರ ತಜ್ಞರು. ಅಂದ್ರ ಮಾಡಬೇಕು ಅಂತ ಮಾಡುದಲ್ಲ. ಗುಂಪುಗೂಡಿದ ನಾಲ್ಕು ಜನ ಹೆಂಗ ಹೇಳ್ತಾರ ಹಂಗ ತಿಳಿದವನೂ ತಲೆಯಾಡಿಸಿ ‘ಹುಂ’ ಗುಟ್ಟುದು ಅಂತ. ಹಿರಿಯರ ಈ ಚಾಳಿ ಮಕ್ಕಳಿಗೆ ಬರೋದು ಏನು ತಡ ಇಲ್ಲ ಅಂತ ಬ್ಯಾರೆ ಹೇಳಬೇಕಾಗಿಲ್ಲ.

ಆದ್ರ ನಮ್ಮ ಧಾರವಾಡದ ಗಂಗಾಧರ ಕಲ್ಲೂರ್ ಮಕ್ಕಳಿಗೆ ಪರಿಸರ ಹಾಗು ಅದರ ಭಾಗಗಳಾದ ಈ ಪ್ರಾಣಿ-ಪಕ್ಷಿಗಳ ಪ್ರತಿ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಅವುಗಳ ಪ್ರತಿ ಕಾಳಜಿ, ತಿಳಿವಳಿಕೆ ಹಾಗು ಸೂಕ್ತ ಪ್ರಥಮ ಚಿಕಿತ್ಸೆಯ ಪರಿ ಹೇಳಿಕೊಟ್ಟು, ಮನುಷ್ಯನಿಗೆ ಮನುಷ್ಯನೇ ಶತ್ರು..ಹೊರತು ಪ್ರಾಣಿಗಳಲ್ಲ. ಪ್ರಾಣಿಗಳು ಅವನ ಬದುಕಿಗೆ ಪೂರಕವಾಗಿದ್ದು, ಪ್ರೇರಕ ಸಹ ಆಗಿವೆ ಎಂದು ಮನವರಿಕೆ ಮಾಡಿಸುವಲ್ಲಿ ಪ್ರಯತ್ನ ಜಾರಿ ಇರಿಸಿದ್ದಾರೆ.

ಇತ್ತೀಚೆಗೆ ನಿರುಪದ್ರವಿ, ವಿಷ ರಹಿತ ಕೆರೆಯ ಹಾವುವೊಂದು ಧಾರವಾಡದ ಶಾಲೆಯ ಆವರಣವೊಂದಕ್ಕೆ ನುಗ್ಗಿತು. ಮಗುವೊಂದು ಅದನ್ನು ಗಮನಿಸಿ, ಚೀರಿದ್ದೇ ತಡ..ಮೇಷ್ಟ್ರು..ಒಂಟಿಗಾಲಿನ ಮೇಲೆ ದೊಣ್ಣೆ ಹುಡುಕಲು ಅನುವಾದರು. ಮಕ್ಕಳು ಆಗಂತುಕ ಅಥಿತಿಯ ಆಗಮನದಿಂದ ಬಾಲವಿಲ್ಲದ ಮಂಗನಂತಾದರು. ಇಡೀ ಶಾಲೆ ಹಾವು ಎಲ್ಲಿಯೂ ತೂರಿಕೊಂಡು ಅವಿತುಕೊಳ್ಳದಂತೆ ಕಾಳಜಿ ವಹಿಸುತ್ತ, ದಿಕ್ಕಿಗೊಬ್ಬರು ನಿಂತು ಟ್ರಾಫಿಕ್ ಪೇದೆಗಳಾದರು. ಅಷ್ಟರಲ್ಲಿ ಯಾರೋ ಗಂಗಾಧರ್ ಕಲ್ಲೂರ್ ಅವರಿಗೆ ಮಾಹಿತಿ ನೀಡಿದರು. ಪರಿಸರ ಸ್ನೇಹಿಯಾಗಿ ಬದುಕಬೇಕು ಎಂದು ವೃತ ತೊಟ್ಟ ಅವರು, ಸೈಕಲ್ ಮೇಲೆ ಶಾಲೆ ತಲುಪುವ ವೇಳೆ ಅರ್ಧ ಗಂಟೆ ಸಮಯ ಹಿಡಿದಿತ್ತು.

ಆದರೂ ಇಳಿದವರೇ..ಗಿಡಕ್ಕೆ ಓರೆಯಾಗಿ ಸೈಕಲ್ ಆನಿಸಿಟ್ಟು, ಮಕ್ಕಳನ್ನು ಚದುರಿಸುತ್ತ ಮುಂದೆ ಹೋದರು. ಸೈಕಲ್ ಬಾರ್ ಗಾತ್ರದ ಕೇರಿ ಹಾವು, ಆಗಾಗ ತನ್ನ ಟಿಸಿಲೊಡೆದ ನಾಲಿಗೆ ಹೊರಹಾಕಿ, ವಾಸನೆ, ರುಚಿಯ ಮೂಲಕ ರಸ್ತೆ ಲೆಕ್ಕ ಹಾಕುತ್ತಿತ್ತು. ಛಂಗನೇ ನೆಗೆದವರೆ ಕಲ್ಲೂರ್ ಹಾವಿನ ಬಾಲ ಅದುಮಿ ಹಿಡಿದು ಗಾಳಿಯಲ್ಲಿ ಎತ್ತಿದರು. ಕೈಯಲ್ಲಿ ಬಡಿಗೆ ಹಿಡಿದು ತನ್ನ ಬಾಲದ ಮೂಲಕ ಮೇಲೆರದಂತೆ ಅದುಮಿ ಹಿಡಿದು ಹಾವನ್ನು ಪರೀಕ್ಷಿಸಿದರು. ‘ಇದು ವಿಷದ ಹಾವಲ್ಲ’ ಎಂದು ಘೋಷಿಸಿದರು. ಕೈಯಲ್ಲಿನ ಬಡಿಗೆ ಪಕ್ಕಕ್ಕೆ ಚೆಲ್ಲಿ, ಕೈ ಮೇಲೆ ಹತ್ತಿಸಿಕೊಂಡರು. ಮಾಸ್ತರ್ ನಿಟ್ಟುಸಿರು ಬಿಟ್ಟರು. ಮಕ್ಕಳು ರೋಮಾಂಚನಕ್ಕೆ ಒಳಗಾದರು.

ಎಲ್ಲರನ್ನು ಬಯಲಿನಲ್ಲಿ ಕೂಡಿಸಿದ ಪ್ರೊ.ಕಲ್ಲೂರ್, ಹಾವಿನ ಬಗ್ಗೆ ಮಕ್ಕಳಿಗೆ ಅಲ್ಲಿಯೇ ತಿಳಿ ಹೇಳಿದರು. ಹಾವು ಯಾವತ್ತೂ ವಾತಾನುಕೂಲಿತ ವ್ಯವಸ್ಥೆ ಇರುವ ಇರುವೆಗಳ ತಂಪಾದ ಹುತ್ತಿನಲ್ಲಿ ವಾಸಿಸುತ್ತದೆ. ಅದು ಶೀತ ರಕ್ತ ಪ್ರಾಣಿ. ಹಾಗಾಗಿ ಬೆಸಿಲಿನಲ್ಲಿ ಬಿಲ ಬಿಟ್ಟು ಹೊರಬರುವುದು ತೀರ ಅಪರೂಪ. ಇರುವೆ ಹುತ್ತದಲ್ಲಿ ಮನೆ ಮಾಡಿಕೊಂಡು ಅವುಗಳನ್ನೇ ತಿಂದುಕೊಂಡು ಅದು ಜೀವಿಸುತ್ತದೆ. ರಾತ್ರಿಯ ವೇಳೆ ಅವು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಹಾಗೆ ಅದು ಮಾಂಸಾಹಾರಿ ಆಗಿರುವುದರಿಂದ ಪಕ್ಷಿಗಳು, ಸಣ್ಣ ಸಸ್ತನಿಗಳು, ಮೊಟ್ಟೆಗಳು, ಹುಳು ಹುಪ್ಪಡಿಗಳನ್ನು ತಿಂದು ಅದು ಬದುಕುತ್ತದೆ. ಆದರೆ ನಾಗ ಚವತಿಯಂದು ಹುತ್ತಿಗೆ ನಾವು ಹಾಲೆರುಯುವುದರಿಂದ ಹಾವು ಸತ್ತೇ ಹೋಗುತ್ತದೆ ಎಂದರು. ಮಕ್ಕಳಿಗೆ ಈ ಮಾಹಿತಿ ವಿಶೇಷ ಕುತೂಹಲ ಕೆರಳಿಸಿತು. ಹಾವು ಹಾಲು ಕುಡಿಯಲಾರದು, ಅದಕ್ಕೆ ಕಿವಿಗಳಿಲ್ಲ ಹಾಗಾಗಿ ಅದು ಕೇಳಿಸಕೊಳ್ಳಲಾರದು ಸಹ. ಈ ಪುಂಗಿ ಊದುವವ ಹಾವಿನ ಕಣ್ಣುಗಳ ಮುಂದೆ ಪುಂಗಿ ಮೇಲೆ-ಕೆಳಗೆ ಆಡಿಸುವುದರಿಂದ ಅದು ತನ್ನ ಹೆಡೆಯನ್ನು ಎತ್ತಿ ಕಚ್ಚಲು ಹವಣಿಸಿ ಆಡುತ್ತದೆ ಎಂದರು.

ಹಾವುಗಳು ರೈತನ ಮಿತ್ರ. ಹಾಗಾಗಿ ಹೊಲಗಳಲ್ಲಿ ಹಾವುಗಳ ಇರುವಿಕೆಯಿಂದ ಸಾಕಷ್ಟು ಪ್ರಮಾಣದಲ್ಲಿ ಇಲಿಗಳಿಂದಾಗುವ ಬೆಳೆಗಳ ಹಾನಿ ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ಅನ್ಯರೀತಿಯಲ್ಲೂ ಇಲಿಗಳ ಉಪಟಳ ನಿಯಂತ್ರಣದಲ್ಲಿರುತ್ತದೆ. ಇವುಗಳ ಸಂಖ್ಯೆ ಹೆಚ್ಚಾಗಲು ಕಾರಣ ಹದ್ದುಗಳ ಸಾವು. ನಾವು ವಿಷ ಹಾಕಿ ಕೊಲ್ಲುವ ಅಥವಾ ರಾಸಾಯನಿಕ ಮಿಷ್ರಿತ ಬೀಜಗಳನ್ನು ತಿಂದು ಅಸುನೀಗುವ ಇಲಿ, ಹೆಗ್ಗಣಗಳನ್ನು ಹದ್ದುಗಳು ತಿನ್ನುತ್ತಿರುವುದು ಸಹ ಕಾರಣ. ಈ ಆಹಾರ ಸರಪಳಿಯ ಒದೊಂದೇ ಕೊಂಡಿಗಳು ಹೀಗೆ ಕಳಚಿಕೊಳ್ಳುತ್ತಿರುವುದರಿಂದ ಮನುಷ್ಯರ ನಿವಾಸಗಳೆಡೆಗೆ ಅವು ಇತರೆ ಕಾಡು ಪ್ರಾಣಿಗಳಂತೆ ವಲಸೆ ಬರುತ್ತಿವೆ ಎಂದರು.

ಅಂತೂ ಆ ಶಾಲಾ ಮಕ್ಕಳಲ್ಲಿ ಹಾವಿನ ಪ್ರತಿ ಕಾಳಜಿ ಮೂಡಿಸುವಲ್ಲಿ ಪ್ರೊ.ಕಲ್ಲೂರ್ ಯಶಸ್ವಿಯಾದರು. ಕೊನೆಗೆ ಮಕ್ಕಳೇ ಆ ಹಾವನ್ನು ತಮ್ಮ ಕೈಯಲ್ಲಿ ಮುಟ್ಟಿ ನೋಡಿ, ಬಾಲ ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ದೂರ ಬಿಟ್ಟುಬರಲು ಕಲ್ಲೂರ್ ಅವರಿಗೆ ನೀಡಿದರು! ಇನ್ನು ಮುಂದೆ ಯಾವತ್ತೂ ಹಾವುಗಳನ್ನು ಹೊಡೆಯುವುದಿಲ್ಲ, ಸಾಯಿಸುವುದಿಲ್ಲ ಎಂದು ಮಕ್ಕಳು ಪ್ರತಿಜ್ಞೆ ಮಾಡಿದರು. ನಮ್ಮ ಛಾಯಾಪತ್ರಕರ್ತ ಕೇದಾರನಾಥೇಶ್ವರ ಸ್ವಾಮಿ ಅಂದು ಅಲರ್ಟ್ ಆಗಿರಲಿಲ್ಲ. ಮಕ್ಕಳ ಪ್ರಬುದ್ಧ ನಡವಳಿಕೆ ನೋಡುತ್ತ ಮೂಗಿನ ಮೇಲೆ ಬೆರಳಿಟ್ಟುಕೊಂಡು.. ಸಕಾಲದಲ್ಲಿ ಫೋಟೋ ಕ್ಲಿಕ್ಕಿಸದೇ..ರಿಟೇಕ್ ಗಳಿಗೆ ಅಣಿಯಾದರು!