ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ

ಬರಹ

ಮಾಹಿತಿ: ಶ್ರೀ ರಾಘವೇಂದ್ರ ತೀರ್ಥರ ಕೃತಿಯ ಪೂರ್ಣ ಸಾಹಿತ್ಯವನ್ನು ಇಲ್ಲಿ ಕೊಡಲಾಗಿದೆ. ಇದರ ಎರಡು ಚರಣಗಳನ್ನು ಮಂತ್ರಾಲಯ ಮಹಾತ್ಮೆ ಮತ್ತು
ಎರಡು ಕನಸು ಚಿತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ - ಸಂ

ಇಂದು ಎನಗೆ ಗೋವಿಂದ ನಿನ್ನ ಪಾದರ
ವಿಂದವ ತೋರೋ ಮುಕುಂದ |ಪ|
ಸುಂದರ ವದನೆನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ |ಅಪ|

ನೊಂದೆನೆಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನು ಎಂದೆನ್ನ ಕುಂದಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ |೧|

ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ |೨|

ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ |೩|