ಹನುಮ ಹುಟ್ಟಿದ ನಾಡಲ್ಲಿ ಹನುಮನ ನೆನೆಯೋಣ...

ಹನುಮ ಹುಟ್ಟಿದ ನಾಡಲ್ಲಿ ಹನುಮನ ನೆನೆಯೋಣ...

ಬರಹ

ಇಂದು ಹನುಮ ಜಯಂತಿ*...

ಹನುಮ  ಹುಟ್ಟಿದ ನಾಡಲ್ಲಿ** ಹನುಮನ ನೆನೆಯೋಣ...


ಹನುಮನು ಮಾರ್ಗಶಿರ ಮಾಸ ಕೃಷ್ಣ ಪಕ್ಷ ತ್ರಯೋದಶಿಯಂದು ಹುಟ್ಟಿದನೆಂದು ಪ್ರತೀತಿ.

ನಮ್ಮ ದಾಸಶ್ರೇಷ್ಠರು ಹನುಮನ ಬಗ್ಗೆ ಹಲವಾರು ಪದಗಳನ್ನು ರಚಿಸಿದ್ದಾರೆ.
ಅವುಗಳಲ್ಲಿ ಕೆಲವನ್ನು ಹೆಕ್ಕಿ ನಿಮ್ಮ ಮುಂದೆ ಇಟ್ಟಿದ್ದೇನೆ...

~~~ * ~~~
ಮಾ ಮಝ ಭಾಪುರೆ ಭಳಿರೆ ಹನುಮಂತ || ಪಲ್ಲವಿ ||

ರಾಮಪದ ಸೇವಿಪ ವೀರ ಹನುಮಂತ || ಅನುಪಲ್ಲವಿ ||

ಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿ
ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು
ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಿಲಜನ
ಪಟ್ಟಕನುವಾದ ಸಿರಿವಂತ ಹನುಮಂತ || ೧ ||

ಅಂಬರಕೆ ಪುಟನೆಗೆದು ಅಂಬುಧಿಯ ನೆರೆದಾಟಿ
ಕುಂಭಿಣಿಯ ಮಗಳಿಗುಂಗುರವನಿತ್ತೆ
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾಧಿವೀರ ಹನುಮಂತ || ೨ ||

ಅತಿ ದುರುಳ ರಕ್ಕಸನು ರಥದ ಮೇಲಿರಲು ರಘು
ಪತಿಯು ಪದಚರಿಯಾಗಿ ನಿಂತಿರಲು
ಪೃಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ವವಂತ ಹನುಮಂತ || ೩ ||

ಒಡೆಯ ಉಣಕರೆಯಲಂದಡಿಗಡಿಗೆ ಕೈ ಮುಗಿದು
ದೃಢ ಭಕುತಿಯಿಂದ ಮೌನದಲಿ ಕುಳಿತು
ಎಡೆಯ ಕೊಂಡೆದ್ದೋಡಿ ಗಗನದಲಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ || ೪ ||

ಪ್ರಥಮದಲ್ಲಿ ಹನುಮಂತ ದ್ವಿತೀಯದಲ್ಲಿ ಕಲಿಭೀಮ
ತೃತೀಯದಲಿ ಗುರು ಮಧ್ವಮುನಿಯು ಎನಿಸಿ
ಪ್ರತಿಯಿಲ್ಲದೆಲೆ ಮೆರೆದೆ ಪುರಂದರವಿಠ್ಠಲನ
ಭಕ್ತ ನಿನಗಾರು ಸರಿ ವಿಜಯ ಹನುಮಂತ || ೫||

~~~ * ~~~

ಗೋಪಾಲ ದಾಸರು ಹನುಮನ ಮೇಲೆ ರಚಿಸಿದ ಒಂದು ಪದ ಇಲ್ಲಿದೆ...

ಇದು ಏನು ಚರಿತ
ಯಂತ್ರೋದ್ಧಾರ || ಪಲ್ಲವಿ ||

ಇದು ಏನು ಚರಿತ ಶ್ರೀ
ಪದುಮನಾಭನ ದೂತ
ಸದಾಕಾಲ ಸರ್ವರ
ಹೃದಯಾಂತರ್ಗತನಾಗಿ || ಅನು ಪಲ್ಲವಿ ||

ವಾರಿಧಿಗೋಷ್ಪಾದ
ನೀರಂತೆ ದಾಟಿದ
ಧೀರ ಯೋಗಾಸನ
ದಾರಿಯಾಗಿಪ್ಪುದು || ೧ ||

ದುರುಳ ಕೌರವರನ್ನು
ವರಗದೆಯಲಿ ಕೊಂದು
ಕರದಲ್ಲಿ ಜಪಮಾಲೆ
ಧರಿಸಿ ಎಣಿಸುವುದು || ೨ ||

ಹೀನ ಮತಗಳನ್ನು
ವಾಣಿಲಿ ತರಿದಂತ
ಜ್ಞಾನವಂತನೆ ಹೀಗೆ
ಮೌನವಾಗಿಪ್ಪುದು || ೩ ||

ಸರ್ವ ವ್ಯಾಪಕ ನೀನು
ಪೂರ್ವಿಕ ದೇವನೆ
ಶರ್ವನ ಪಿತ ಬಂಧು
ಪರ್ವತ ಸೇರಿದ್ದು || ೪ ||

ಗೋಪಾಲವಿಠಲಗೆ
ನೀ ಪ್ರೀತಿ ಮಂತ್ರಿಯು
ವ್ಯಾಪಾರ ಮಾಡದೆ
ಈ ಪರಿ ಕುಳಿತಿಹೆ || ೫ ||

~~~ * ~~~

ವಿಜಯವಿಠಲದಾಸರು ರಚಿಸಿದ ಪ್ರಖ್ಯಾತ ಕೃತಿ ’ಪವಮಾನ’ ಶ್ರೀ ವಿದ್ಯಾಭೂಷಣರ ದನಿಯಲ್ಲಿ ಕೇಳಲು ಇಲ್ಲಿ ಚಿಟಕಿಸಿ.

ಸಿಕ್ಕಿಲ್ ಗುರುಚರಣ್ ಹಾಡಿದ ’ಪ್ರಾಣನಾಥ ಪಾಲಿಸು’ ಕೇಳಲು ಇಲ್ಲಿ ಚಿಟಕಿಸಿ.

ಇನ್ನೂ ಹಲವಾರು ಪುರಂದರ ದಾಸರು ಹನುಮನ ಬಗ್ಗೆ ರಚಿಸಿದ ಪದಗಳನ್ನು ಹರಿದಾಸ ಸಂಪದದಲ್ಲಿ ಹಾಕಿದ್ದೇನೆ.

--ಶ್ರೀ


*ಹನುಮ ಜಯಂತಿ:
ಹನುಮ ಜಯಂತಿಯನ್ನು ಚೈತ್ರ ಶುಕ್ಲ ಹುಣ್ಣಿಮೆಯಂದು ಆಚರಿಸುವುದೂ ಉಂಟು.

**ಹನುಮ ಹುಟ್ಟಿದ ನಾಡು:
- ಕೆಲವು ಇತಿಹಾಸಕಾರರ ಪ್ರಕಾರ ಹನುಮಂತನು ಕರ್ನಾಟಕದ ಗೋಕರ್ಣದಲ್ಲಿ ಹುಟ್ಟಿದನೆಂದು ಹೇಳುವರು.
- ಇನ್ನು ಕೆಲವರು, ಹನುಮನು ಕಿಷ್ಕಿಂದೆಯಲ್ಲಿಯೇ ಹುಟ್ಟಿದನೆಂದೂ, ಕಿಷ್ಕಿಂದೆ ನಮ್ಮ ಹಂಪಿ ಪ್ರದೇಶವೆಂದೂ ಹೇಳುವರು.
- ಕೆಲವರು ಹನುಮನು ಜಾರ್ಖಂಡ್ ಪ್ರದೇಶದಲ್ಲಿ ಹುಟ್ಟಿದನೆಂದು ಹೇಳುವರಾದರೂ ಹನುಮನು ನಮ್ಮವನೇ ಅನ್ನೋಣ, ಏನಂತೀರಿ? :)