ಒಂದು ಬೆಳಗಿನ ಸಮಯ...
ಬರಹ
ಒದ್ದೆ ಕೂದಲನೊರೆಸಿ, ಬಳೆಯ ದನಿಯಾ ಜೊತೆಗೆ
ನಡೆದು ಬಂದಳು ಆಕೆ, ತುಳಸಿ ಗಿಡದೆಡೆಗೆ..
ಹೆಬ್ಬಾಗಿಲಿನ ಹೊರಗೆ, ಹಿತದ ಎಳೆ ಬಿಸಿಲು
ಮೊದಲೆ ಬಂಗಾರವೀಕೆ, ಈಗ ಮತ್ತೂ ಚಂದ..
ಗೆಜ್ಜೆ ಘಲ್ಲೆನಿಸುತಲಿ, ತುಳಸಿಗೆ ಪ್ರದಕ್ಷಿಣೆಯು
ಧೂಪದಾ ಘಮವಿಹುದು ಅಂಗಳದ ತುಂಬಾ
ಆತ ಮಲಗಿಹನಲ್ಲಿ ಒಳಮನೆಯ ಕತ್ತಲಲಿ
ಕಳೆದ ರಾತ್ರಿಯ ಸುಖದ ಕನಸಿನೊಳಗೆ..
ಬಿಳುಪು ಪಾದಗಳನ್ನ, ಮೆಲುವಾಗಿ ನಡೆಸುತ್ತ
ಮೆಲ್ಲನುಸುರಿದಳಾಕೆ, ಕೋಣೆ ಪರದೆಯ ಸರಿಸಿ,
ಮುಂಜಾವು ಬಂದಿಹುದು ಮನೆಯ ಬಾಗಿಲ ಬಳಿಗೆ
ಏಳಬಾರದೆ ದೊರೆಯೆ, ಹೊತ್ತು ಮೀರುತಿದೆ.
ಆಕೆಯಿನಿ ದನಿಯು, ಅವನ ಕಿವಿಯನು ಸವರಿ
ಮೆಲ್ಲನೆದ್ದನು ಅವಳ ಸೊಬಗ ನೋಡುತಲಿ
ಬಳಿ ಬಾರೆ ಎಂದವಳ ಪ್ರೇಮದಲಿ ಕರೆದವನು
ಬಾಚಿ ತಬ್ಬಿದನವಳ, ಕದವ ಮುಚ್ಚುತ್ತ..
ಬಾಗಿಲಿನ ಸಂದಿಯಲಿ ಬಿಸಿಲಕೋಲೊಂದಿತ್ತು
ಕದ್ದು ನೋಡುತಲವರ ಸರಸವನ್ನು..