ನನ್ನ ತಲೆ ಎಂಬ ಕಸದ ತೊಟ್ಟಿಯು..
ಹೀಗೆ ಅಂದು ಕೊಂಡದ್ದು ಅದೆಷ್ಟು ಸಲವೋ.. ನಾನು ಯಾರ ಉಸಾಬರಿಗೂ ಹೋಗಲ್ಲ, ನನ್ನಷ್ಟಕ್ಕೆ ನಾನಿರುತ್ತೇನೆ ಅಂತ. ಆದ್ರೆ ದರಿದ್ರ ಮನಸ್ಸು ಮಂಗನಿಂದಲೇ ಮಾನವನಾದದ್ದು ಅಂತ ನಿರೂಪಿಸಿಬಿಡುತ್ತೆ. ಅಷ್ಟು ಚಂಚಲ ಮನಸ್ಸು. ನಾನು ಆಗ ಹಾಸ್ಟೆಲ್ ನಲ್ಲಿ ಇದ್ದೆ. ಅಲ್ಲಿ ವಿದ್ಯಾರ್ಥಿಗಳು ನನ್ನ ಮುಖ ನೋಡಿ ಪೆದ್ದು ಇರಬೇಕು, ನಿರುಪದ್ರವ ಜೀವ ಅಂದುಕೊಂಡು ಮಾತಾಡಿಸ್ತಿದ್ರು. ಸಂಶೋಧನಾ ವಿದ್ಯಾರ್ಥಿ ಅಂತ ಸೀನಿಯರ್ ಸ್ಟೂಡೆಂಟ್ಸ್ ಕೂಡ (ತೋರಿಕೆಯೋ ಗೊತ್ತಿಲ್ಲ) ಮರ್ಯಾದೆ ಕೊಡ್ತಿದ್ರು.
ಹೊಸದಾಗಿ ಬರುವ ವಿದ್ಯಾರ್ಥಿಗಳು ಹೊಸ ವಾತಾವರಣದಿಂದಾಗಿ ಸಣ್ಣ ಭಯ ಆತಂಕಗಳಿಂದಲೇ ಹಾಸ್ಟೆಲ್ ಗೆ ಕಾಲಿಡುತ್ತಿದ್ದರು. ಆಗಾಗ ಮನೆಯ ನೆನಪಾಗಿ ಅನಾಥ ಪ್ರಜ್ಞೆ ಕಾಡ್ತಾ ಇರುತ್ತೆ. ಇಂತಹ ಸಮಯದಲ್ಲಿ ಅವರಿಗೆ ಪ್ರತಿಯೊಂದಕ್ಕೂ ಉತ್ತರ ಹೇಳೊ ತಾಳ್ಮೆ ಸೀನಿಯರ್ ಗಳಿಗೆ ಇರೋದಿಲ್ಲ. ಹೇಳದೇ ವಿಧಿಯು ಇಲ್ಲ. ಸೀನಿಯರಿಟಿ ಪ್ರಶ್ನೆ. ಆಗೆಲ್ಲ ನಾನು ಅವರಿಗೆ ನೆನಪಾಗುತ್ತಿದ್ದೆ. ' ಸಾರ್, ಇವರು ನಿಮ್ಮ ಊರಿನವರು ಅಂತಲೋ ಅಥವಾ ಇವರು ತುಂಬಾ ಚೆನ್ನಾಗಿ ಬರೆಯುತ್ತಾರೆ ಹಾಗಾಗಿ ನಿಮ್ಮ ವಾಲ್ ಮ್ಯಾಗಝೀನ್ ಅಲ್ಲಿ ಇವರ ಅಂಕಣ ಬರೆಸಿ ಅಂತಲೋ' ನನಗೆ ಅಂಟಿಸಿ ಹೋಗುತ್ತಿದ್ರು. ಈಗ ನನ್ನ ಸರದಿ. ನಾನು ಇವರನ್ನು ನಿಭಾಯಿಸದಿದ್ದರೆ ನನ್ನ ಸೀನಿಯಾರಿಟಿ ಪ್ರಶ್ನೆ.
ಆರಂಭದಲ್ಲಿ ಏನೂ ಅನಿಸದಿದ್ದರೂ ನಂತರ ಎಲ್ಲ ವಿಷಯಕ್ಕೂ ನಮ್ಮನ್ನೇ ಅವಲಂಬಿಸತೊಡಗಿದಾಗ ಹೊರೆಯಾಗುತ್ತದೆ. ಈ ವಿದ್ಯಾರ್ಥಿಗಳು ನಂತರ ಎಷ್ಟು ಹಚ್ಚಿ ಕೊಂಡರೆಂದರೆ ತಮ್ಮ ತೀರ ಖಾಸಗಿ ಎನಿಸುವ ಯಾರೊಡನೆಯು ಹಂಚಿಕೊಳ್ಳಲಾಗದ ವಿಷಯಗಳನ್ನು ನನ್ನಲ್ಲಿ ಹೇಳಿಕೊಳ್ಳಲು ಆರಂಭಿಸಿದ್ದು. ಅವರ ಮುಗ್ಧತೆ, ನನ್ನಂಥ ಅಪರಿಚಿತರನ್ನು ಸುಲಭವಾಗಿ ನಂಬಿಬಿಡುವ ಈ ಗುಣಕ್ಕೆ ಏನು ಹೇಳಬೇಕೊ ತಿಳಿಯದು. ಆದರೆ ಅದುವೇ ನನಗೆ ತಲೆ ನೋವಾಯ್ತು. ಅವರ ಇಡೀ ಸಮಸ್ಯೆಗಳು ನನ್ನ ಸಮಸ್ಯೆಗಳೇನೊ ಎಂಬಂತೆ ಯೋಚಿಸುವ ಪರಿಹಾರ ಹುಡುಕುವುದರಲ್ಲೇ ನನ್ನ ಇಡೀ ಸಮಯ ಕಳೆದು ಹೋಗುತ್ತಿತ್ತು. ಇದರಿಂದಾಗಿ ನನಗೆ ಬಂದ ತಾಪತ್ರಯಗಳು ಲೆಕ್ಕವಿಲ್ಲ. ತಮ್ಮ ಸಮಸ್ಯೆಗಳನ್ನು ನನ್ನ ತಲೆಗೆ ಸುರಿದು ತಾವು ನಿರಾಳರಾಗಿ ಬಿಡುವಾಗ ಅದೆಷ್ಟು ಸಲ ಹೇಳಿಕೊಂಡಿದ್ದೇನೋ ಇನ್ನು ಯಾರ ವಿಷಯಕ್ಕೂ ತಲೆ ಬಿಸಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನನ್ನಷ್ಟಕ್ಕೆ ನಾನು ಅಂತ. ಆದರೂ ಪ್ರತಿವರ್ಷ ಬಾಡಿದ ಮುಖದ ಕಿರಿಯ ವಿದ್ಯಾರ್ಥಿಗಳನ್ನು ನೋಡುವಾಗ ನನ್ನ ಪ್ರತಿಜ್ಞೆ ಮೂಲೆಗೆ.
ಇವರ ಸಮಸ್ಯೆಗಳ ಮುಖಗಳೊ ದೇವರು ಬಂದರೂ ಬಗೆಹರಿಸಲಾರ. 'ಅವಳು ನನ್ನನ್ನು ಇವತ್ತು ಮಾತಾಡಿಸ್ಲಿಲ್ಲ ಸಾರ್' ಅನ್ನೊ ವಿಷಯದಿಂದ ಹಿಡಿದು ' ಮಾರ್ಕ್ಸ್ ಬಾರದ ನಾನು ಬದುಕ್ಕಿದ್ದು ಏನು ಪ್ರಯೋಜನ ಸಾರ್' ಅನ್ನೋವರಗೆ ನೂರಾರು ಸಮಸ್ಯೆಗಳು. ಇಂಥ ಜಟಿಲ ಪ್ರಶ್ನೆಗಳಿಗೆ ಉತ್ತರ ಹುಡುಕುವುದಕ್ಕಾಗಿ ನಾನು ತಡಕಿದ ಪುಸ್ತಕಗಳು ಅದೆಷ್ಟೋ. ಆದರೆ ಇಂಥ ಸಮಸ್ಯೆಗಳ ನಡುವೆಯೇ ನಾನು ಇಷ್ಟು ಜನರ ವಿಶ್ವಾಸದಲ್ಲಿದ್ದೇನಲ್ಲ ಅನ್ನೊ ತೃಪ್ತಿ. ಹೀಗೆ ಸಿಕ್ಕ ಎಷ್ಟೋ ಕಿರಿಯ ಸ್ನೇಹಿತರು ಇಂದು ಒಳ್ಳೆಯ ಸ್ಥಾನದಲ್ಲಿದ್ದಾರೆ.
ಇದು ಅಲ್ಲಿಗೆ ಮಾತ್ರ ಮುಗಿಯಲಿಲ್ಲ, ನಾಯಿಬಾಲ ಡೊಂಕೆ. ಇವತ್ತಿಗೂ ನನ್ನ ಪೆದ್ದುತನ ನಿಂತಿಲ್ಲ. ಏನು ಮಾಡೋದು ತಿಳಿತಿಲ್ಲ ನನ್ನ ಸಮಸ್ಯೆಯನ್ನು ಯಾರಿಗಾದರೂ ಹೇಳಬೇಕು.