ಬಿಲ್ ಮತ್ತು ನನ್ನ ಭೇಟಿ

ಬಿಲ್ ಮತ್ತು ನನ್ನ ಭೇಟಿ

ಬರಹ
ನಿನ್ನೆಯೊಂದು ವಿಚಿತ್ರ ಸಂಗತಿ ನಡೆಯಿತು. ಏರ್‍ಪೋರ್ಟಿನಿಂದ ನನ್ನ ಸ್ನೇಹಿತ ಸತೀಶ ಫೋನ್ ಮಾಡಿದ್ದ. ಅವನು ಅಲ್ಲಿಯ ಕಸ್ಟಮ್ಸ್‍ನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿದ್ದಾನೆ. ಯಾಕಪ್ಪಾ ಇಷ್ಟು ಬೆಳಗ್ಗೆ ಫೋನ್ ಮಾಡಿದ್ದಾನೆ ಅಂತ ಯೋಚಿಸ್ತಿರುವಾಗಲೇ ಒಂದೇ ಉಸಿರಿನಲ್ಲಿ ಹೇಳಿದ್ದ. ಮುಂಬೈಗೆ ಬಿಲ್ ಗೇಟ್ಸ್ ಬಂದಿದ್ದಾನೆ. ಯಾರಾದ್ರೂ ಕನ್ನಡದವರ ಪರಿಚಯ ಮಾಡಿಸು ಅಂತಿದ್ದಾನೆ. ನಿನ್ನ ಬಗ್ಗೆ ಹೇಳ್ತಿದ್ದೀನಿ. ತಕ್ಷಣ ಬಂದು ಅವನನ್ನು ನಿಮ್ಮ ಮನೆಗೆ ಕರ್ಕೊಂಡು ಹೋಗು, ಎಂದ ಸತೀಶ. ನನಗೆ ತಲೆ ಬುಡ ಅರ್ಥ ಆಗ್ತಿಲ್ಲ. ಯಾರೀ ಬಿಲ್ ಗೇಟ್ಸ್, ಇವನ್ಯಾಕೆ ಕನ್ನಡದವರ ಮನೆಗೆ ಬರ್ಬೇಕು. ಇವನಿಗೆ ಕೆಂಪು ತೊಗಲಿನವರು ಇಲ್ಯಾರೂ ಸಿಗ್ಲಿಲ್ವಾ, ಅಂತ ಯೋಚಿಸುತ್ತಲೇ ಏರ್‍ಪೋರ್ಟಿಗೆ ಓಡಿದ್ದೆ ( ಮನೆ ಹತ್ರಾನೇ ಇರೋದು ). ಏರ್ ಪೋರ್ಟಿಗೆ ಹೋಗುತ್ತಲೇ ನನಗೆ ಶಾಕ್ ಆಯ್ತು. ಅಯ್ಯೋ ಈತನನ್ನು ಟೀವಿಲಿ, ಪತ್ರಿಕೇಲಿ ಬಹಳ ಸಲ ನೋಡಿದ್ದೀನಿ. ಇವನು ಮೈಕ್ರೋಸಾಫ್ಟ್ ಜನಕ ಅಲ್ವಾ? ನನ್ನ ಮೈಯ್ಯನ್ನು ಒಮ್ಮೆ ಚಿವುಟಿಕೊಂಡೆ. ಹೂಂ! ಅವನನ್ನೇ ನೋಡ್ತಿರೋದು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಸತೀಶ ಬಿಲ್ ಗೇಟ್ಸ್‍ನನ್ನು ಪರಿಚಯಿಸಿದ್ದ. ಬಿಲ್ ಮೊದಲು ಹೇಳಿದ್ದೇನು ಅಂದ್ರೆ, ನಡೀರಿ ಸರ್, ನಿಮ್ಮ ಮನೆಗೆ. ಒಂದು ಒಳ್ಳೇ ಕಾಫೀ ಕೊಡಿಸಿ. ಅಲೇ ಇದೇನಿದು ಇಷ್ಟು ನಿರರ್ಗಳವಾಗಿ ಕನ್ನಡ ಮಾತಾಡ್ತಿದ್ದಾನೆ. ಮೂಗಿನ ಮೇಲೆ ಬೆರಳು ಇಟ್ಕೊಳ್ತಿದ್ದಂತೆಯೇ (ಒಳಗಲ್ಲ), ಬಿಲ್ ಏನ್ ಸಾರ್ ನೀವು, ಅಷ್ಟೂ ಗೊತ್ತಾಗೋಲ್ವೇ? ನನ್ನ ಕಂಪನೀಲಿ ಎಷ್ಟೊಂದು ಕನ್ನಡದವರು ಇದ್ದಾರೆ. ಈಗ ಕರ್ನಾಟಕದಲ್ಲಿ ಕನ್ನಡ ಮಾತನಾಡೋವ್ರು ಕಡಿಮೆ ಆಗಿದ್ದಾರೇಂತ ಕನ್ನಡ ಪರ ಚಳುವಳಿ ಆರಂಭಿಸಿದ್ದಾರೆ. ಯು.ಎಸ್. ನಲ್ಲಿ ಬಹಳ ಜೋರಾಗಿ ಕನ್ನಡ ಪರ ಹೋರಾಟ ಮತ್ತು ಕನ್ನಡ ಕಲಿಸಲು ತರಗತಿಗಳು ಶುರುವಾಗಿವೆ. ನಾನೂ ಕನ್ನಡ ಕಲ್ತಿದ್ದೀನಿ. ನಿಮ್ಮ ಪಂಪು, ರನ್ನು, ರ್‍ಯಾಗ್ ಎಲ್ಲ ಹೆಸರುಗಳನ್ನೂ ತಿಳ್ಕೊಂಡಿದ್ದೀನಿ. ಎಲಾ ಇವನಾ, ಬಲೇ ಘಾಟಿ ಮನುಷ್ಯ. ಪಂಪ, ರನ್ನ, ರಾಘವಾಂಕರ ಹೆಸರುಗಳು ಸರಿಯಾಗಿ ಹೇಳಕ್ಕೆ ಬರ್ದೇ ಇದ್ರೂ ಕನ್ನಡ ಚೆನ್ನಾಗಿ ಮಾತಾಡ್ತಾನೆ. ಸರಿ ಅಂತ ಮನೆಗೆ ಕರೆದುಕೊಂಡು ಹೊರಟೆ. ಟ್ಯಾಕ್ಸಿಯಲ್ಲಿ ಹೋಗೋಕ್ಕೆ ಇಲ್ಲಿಯ ಸರ್ದಾರ್ಜಿ ಡ್ರೈವರ್ ಗಳು ಸ್ವಲ್ಪ ಸರಿ ಇಲ್ಲ ಅಂತ ಯೋಚಿಸ್ತಿದ್ದಾಗ, ಅರ್ರೇ ಯಾಕೆ ಯೋಚ್ನೆ ಮಾಡ್ತೀರ ಸರ್, ಆಟೋ ಭೈಯ್ಯಾ ಇದ್ದಾನಲ್ಲ ಕರೀರಿ, ಅನ್ನೋದೇ. ಸರಿ, ಮನೆಗೆ ಕರ್ಕೊಂಡು ಹೋಗಿ ಕಾಫೀ ಕೊಟ್ಟ ನಂತರ, ಮಕ್ಕಳು ಅವನನ್ನೇ ಗಮನಿಸ್ತಿರೋದು ಅವನಿಗೆ ಗೋಚರವಾಯ್ತು. ಯಾಕೆ ಹಾಗೆ ನೋಡ್ತೀರ. ನನ್ನಲ್ಲಿ ಏನು ಹುಡುಕ್ತಿದ್ದೀರ? ಅಂತ ಕೇಳಿದ ಬಿಲ್. ಸ್ವಲ್ಪ ಧೈರ್ಯ ಮಾಡಿದ ಮಗಳು, ಅಲ್ಲ ನಿಮ್ಮ ಹತ್ರ ಲ್ಯಾಪ್ ಟಾಪ್ ಅಥವಾ ಪಾಮ್ ಟಾಪ್ ಕಾಣಿಸ್ತಾನೇ ಇಲ್ಲ. ಇಲ್ಲಮ್ಮ ಪುಟ್ಟಿ, ನಾನೀಗ ಕಂಪ್ಯೂಟರ್ ಉಪಯೋಗಿಸೋದು ಬಿಟ್ಟು ಬಿಟ್ಟಿದ್ದೀನಿ. ಈಗೇನಿದ್ರೂ ಬರೀ ಅಧ್ಯಾತ್ಮ ಚಿಂತನೆ. ಇವತ್ತು ಇಲ್ಲಿಯ ಭಾರತೀಯ ವಿದ್ಯಾ ಭವನದಲ್ಲಿ ಒಂದು ಉಪನ್ಯಾಸ ಕೊಡ್ಬೇಕು ಅದಕ್ಕೇ ಬಂದೆ. ನನಗೆ ಕನ್ನಡದವರು, ಅವರ ಮನೆ ಕಾಫೀ ತುಂಬಾ ಇಷ್ಟ. ಅದಕ್ಕೇ ನಿಮ್ಮ ಮನೆಗೆ ಬಂದೆ. ಸರಿ ಹೊರಟೆ ಅಂತ ಹೊರಟೇ ಬಿಟ್ಟ. ಪಕ್ಕದಲ್ಲಿ ಹೆಂಡತಿ ತಿವಿದಾಗಲೇ ಎಚ್ಚರವಾಗಿದ್ದು, ಅಯ್ಯೋ ಇದು ಕನಸು ಅಂತ.