ನಿಸರ್ಗದಲ್ಲಿ ರಿಸೇಶನ್

ನಿಸರ್ಗದಲ್ಲಿ ರಿಸೇಶನ್

ಬರಹ

ಹಿನ್ನೆಲೆ:
ನಿಸರ್ಗದಲ್ಲಿ ಉತ್ಪಾದನೆಗಿಂತ ಬಳಕೆ ಜಾಸ್ತಿಯಾಗಿದ್ದು, ಈ ನಿಮಿತ್ತ ನಿಸರ್ಗ ಜಗತ್ತಿನ ಎಲ್ಲಾ ಜೀವಿಗಳ ಸಭೆ ಕರೆದು ಕೋಸ್ಟ್ ಕಟ್ಟಿಂಗ್ ಬಗ್ಗೆ ಸಮಾವೇಶ ನಡೆಸಿತ್ತು. ಉತ್ಪಾದನೆಗೆ ಯಾರ ಕೊಡುಗೆ ಎಷ್ಟು, ಯಾರ ಬಳಕೆ ಅತೀ ಹೆಚ್ಚು, ಹೇಗೆ ಈ ಸಂಕಷ್ಟದಿಂದ ಪಾರಾಗುವುದು ಎನ್ನುವುದೇ ಈ ಸಮಾವೇಶದ ಉದ್ದೇಶ. ಈ ಬಗ್ಗೆ ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲಾ ಜೀವಿಗಳ ಪರಿಶೀಲನೆ ಮಾಡಿ ಈ ನಿರ್ಧಾರಕ್ಕೆ ಬರುತ್ತದೆ.

ತೀರ್ಮಾನ:
ನನಗೆ ಬಹಳ ಕಾಲದಿಂದ ಇಂತಹ ಪರಿಸ್ಥಿತಿ ಎಂದೂ ಎದುರಾದದ್ದಿಲ್ಲ, ಈ ರೀತಿಯ ಅವನತಿ ತೀರಾ ಇತ್ತೀಚೆಗಿನದ್ದು. ಹಾಗಾದರೆ ಇತ್ತೀಚೆಗೆ ಸೇರ್ಪಡೆಯಾದ ಜೀವಿ, ಅಂದರೆ ಜೈವಿಕ ಸರಪಳಿಯಲ್ಲಿನ ಕೊನೇಯ ಕೊಂಡಿಯಾದ ಮಾನವ ಇದಕ್ಕೆ ಕಾರಣನೇ? ನನ್ನ ಕಾಲಮಾನದ ದೃಷ್ಟಿಯಲ್ಲಿ, ಇನ್ನಿತರ ಜೀವಿಗಳ ಎದುರಿನಲ್ಲಿ ಮನುಜರು ಇನ್ನೂ ಶಿಶು. ಉಳಿದ ಜೀವಿಗಳಾದರೋ ತಮ್ಮ ತ್ಯಾಗಮಯ ಜೀವನದಿಂದ, ಒಂದಕ್ಕೊಂದು ಆಸರೆಯಾಗಿ ನನ್ನ ಸಂಪತ್ತನ್ನು ವೃದ್ಧಿಸುತ್ತಾ ಬಂದಿವೆ. ಅವುಗಳ ಬದುಕು ಕೂಡಾ ಎಷ್ಟು ಸರಳ. ದೈನಿಂದಿನ ಆವಶ್ಯಕತೆಯಾದ ಆಹಾರ, ಗಾಳಿ, ನೀರು, ಕೆಲವೊಂದು ಬಾರಿ ಅನನುಕೂಲ ಪರಿಸ್ಥಿತಿಯಲ್ಲಿ ಹೆಚ್ಚಿನ ಆಹಾರ ಸಂಗ್ರಹಿಸುವುದಲ್ಲದೇ ಅವುಗಳ ಬಳಕೆ ಉತ್ಪಾದನೆಗಿಂತ ಕಡಿಮೆ. ಆದರೆ ಮಾನವರು ಇದಕ್ಕೆ ವ್ಯತಿರಿಕ್ತ. ಆವಶ್ಯಕತೆಗಿಂತ ಅಧಿಕ ಬಳಕೆ, ಉತ್ಪಾದನೆ ಶೂನ್ಯ. ಈ ಹಿಂದೆ ಹೆಚ್ಚು ಕಡಿಮೆ ಡೈನೋಸಾರ್ಗಳೂ ಮಾಡಿದ್ದು ಇದನ್ನೇ ಅಲ್ಲವೇ? ಜೈವಿಕ ಸರಪಳಿಯಲ್ಲಿ ಕೊನೇಯ ಕೊಂಡಿಯಾದ ಅದನ್ನು ಕಿತ್ತೊಗೆದದ್ದರಿಂದ ನನಗಾವ ನಷ್ಟವೂ ಆಗಿಲ್ಲ. ಇತರ ಜೀವಿಗಳ ಉತ್ಪಾದನೆಯನ್ನು ಕೊಳ್ಳೆ ಹೊಡೆಯುತ್ತಾ, ಉಳಿದ ಸಮಯದಲ್ಲಿ ನನ್ನ ಸಂಪತ್ತನ್ನು ಹೆಚ್ಚಿಸುವ ಕೆಲಸ ಮಾಡದೆ ವ್ಯರ್ಥ ಕಾಲಹರಣದಲ್ಲಿ ತೊಡಗುವ ಈ ಮಾನವರ ಕೊಂಡಿ ಕಳಚಿದರೆ ನನಗೆ ಲಾಭವಲ್ಲದೇ ನಷ್ಟ ಇದೆಯೇ?

ಪರಿಣಾಮ:
ರಿಸೇಶನ್, ಸರಳ ಜೀವನ ಮಿಕ್ಸ್ ಆಗಿ ಬಿದ್ದ ಕನಸು, ಮುಂದೇನಾಯ್ತೋ ನೀವೇ ಊಹಿಸಿಕೊಳ್ಳಿ.