ಕರ್ನಾಟಕ ಕ್ರಿಕೆಟ್ - ೧

ಕರ್ನಾಟಕ ಕ್ರಿಕೆಟ್ - ೧

ಬರಹ

ನಿನ್ನೆ ಕರ್ನಾಟಕ - ತಮಿಳುನಾಡು ತಂಡಗಳ ನಡುವಿನ ಪಂದ್ಯದ ಬಗ್ಗೆ ಸಂಪದದಲ್ಲಿ ಪ್ರತಿಕ್ರಿಯೆ ಇತ್ತು. ಸಂಪದದಲ್ಲಿ 'ಕರ್ನಾಟಕ ಕ್ರಿಕೆಟ್' ಬಗ್ಗೆ ಓದಿ ಬಹಳ ಆನಂದವಾಯಿತು. ಸಣ್ಣಂದಿನಿಂದಲೂ ರಣಜಿ ಪಂದ್ಯಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ರಣಜಿ ಟ್ರೋಫಿ, ಕರ್ನಾಟಕ ಕ್ರಿಕೆಟ್ ಮತ್ತು ಕೆಲವು ಆಟಗಾರರ ಬಗ್ಗೆ ಸಂಪದದಲ್ಲಿ ನನಗೆ ತಿಳಿದಷ್ಟು ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ.

ವೀಕ್ಷಕ ವಿವರಣೆ - ಆಗ ಬೆಂಗಳೂರು ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಲ್ಲಿ ಕರ್ನಾಟಕದಲ್ಲಿ ನಡೆಯುತ್ತಿದ್ದ ಎಲ್ಲಾ ರಣಜಿ ಪಂದ್ಯಗಳ ವೀಕ್ಷಕ ವಿವರಣೆ ಕನ್ನಡದಲ್ಲಿ ಇರುತ್ತಿತ್ತು. ನನಗೆ ಸಮೀಪವಿದ್ದ ಮಂಗಳೂರು ಆಕಾಶವಾಣಿ ಕೆಲವೊಂದು ಆಯ್ದ ಪಂದ್ಯಗಳ ವೀಕ್ಷಕ ವಿವರಣೆಯನ್ನು ಮಾತ್ರ ಪ್ರಸಾರ ಮಾಡುತ್ತಿತ್ತು. ಕಷ್ಟದಿಂದ ಬೆಂಗಳೂರು ಅಥವಾ ಧಾರವಾಡ ಕೇಂದ್ರಗಳ ಸಿಗ್ನಲ್ ಸಿಗುತ್ತಿತ್ತು. ಆದರೂ ಬಿಡದೆ ವೀಕ್ಷಕ ವಿವರಣೆ ಕೇಳುವ ಗೀಳು ಹತ್ತಿತ್ತು. "ಮತ್ತೊಮ್ಮೆ ರಘುರಾಮ್ ಭಟ್, ಈ ಬಾರಿ ಕ್ರೀಸ್ ಹಿಂದಿನಿಂದ ಎಸೆದ ಎಸೆತ, ಆಫ್ ಸ್ಟ್ಂಪಿನ ಹೊರಗೆ ಪುಟಿದು ಮತ್ತಷ್ಟು ಹೊರಕ್ಕೆ ತೆರಳುತ್ತಿದ್ದ ಚೆಂಡನ್ನು ಹರಿಹರನ್ ಆಡದೆ ಹಾಗೆ ಬಿಟ್ಟಿದ್ದಾರೆ. ಚೆಂಡು ನೇರವಾಗಿ ಸದಾನಂದ್ ವಿಶ್ವನಾಥ್ ಕೈಗೆ..." ಹೀಗಿರುತ್ತಿತ್ತು ಕನ್ನಡ ವೀಕ್ಷಕ ವಿವರಣೆ. ಇನ್ನೆಲ್ಲಿ ಅದನ್ನು ಕೇಳುವ ಭಾಗ್ಯ?

ಪ್ರದೇಶ ಸಮಾಚಾರ - ಕರ್ನಾಟಕದಿಂದ ಹೊರಗೆ ನಡೆಯುತ್ತಿದ್ದ ಕರ್ನಾಟಕ ಆಡುತ್ತಿದ್ದ ಪಂದ್ಯಗಳ ಬಗ್ಗೆ ವಿವರವನ್ನು ಸಂಜೆ ೦೬.೪೦ ರ ಪ್ರದೇಶ ಸಮಾಚಾರವನ್ನು ತಪ್ಪದೆ ಕೇಳಿ ಪಡೆದುಕೊಳ್ಳುತ್ತಿದ್ದೆ. ಪ್ರದೇಶ ಸಮಾಚಾರ ಓದುವವರಲ್ಲಿ ಒಬ್ಬರಿದ್ದರು. ಅವರ ಹೆಸರು ಈಗ ನೆನಪಿಲ್ಲ. ಇವರೆಲ್ಲಾದರೂ ಮಧ್ಯಾಹ್ನದ ೨.೨೫ಕ್ಕೆ ಪ್ರಸಾರವಾಗುವ ಪ್ರದೇಶ ಸಮಾಚಾರ ಓದುವವರಾಗಿದ್ದಲ್ಲಿ ಕರ್ನಾಟಕದ ಹೊರಗೆ ನಡೆಯುತ್ತಿದ್ದ ರಣಜಿ ಪಂದ್ಯದ ಭೋಜನ ವಿರಾಮದ ತನಕದ ಸ್ಕೋರ್-ನ್ನು ತಪ್ಪದೆ ತಿಳಿಸುತ್ತಿದ್ದರು. ಇವರನ್ನು ಬಿಟ್ಟು ಬೇರೆ ಯಾರಾದರು ಓದಲು ಬಂದಲ್ಲಿ ಮಧ್ಯಾಹ್ನದ ಪ್ರದೇಶ ಸಮಾಚಾರ ಕೇಳುವುದೇ 'ವೇಸ್ಟ್' ಎಂದೆನಿಸುತ್ತಿತ್ತು.

ದಿನಪತ್ರಿಕೆಗಳು - ಉದಯವಾಣಿಗೆ ಮೊದಲಿಂದಲೂ ರಣಜಿ ಪಂದ್ಯಗಳೆಂದರೆ ನಂಬಲಾಗದಷ್ಟು ನಿರ್ಲಕ್ಷ್ಯ, ಈಗಲೂ ಅಷ್ಟೆ. ಕರ್ನಾಟಕ ಆಡುವ ರಣಜಿ ಪಂದ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಜಾವಾಣಿ/ ಡೆಕ್ಕನ್ ಹೆರಾಲ್ಡ್ ನಷ್ಟು ಚೆನ್ನಾಗಿ ಬೇರೆ ಯಾವ ದಿನಪತ್ರಿಕೆಯೂ ವಿವರಿಸುವುದಿಲ್ಲ. ಆದರೆ ಇಲ್ಲಿ 'ದ ಹಿಂದೂ' ಪತ್ರಿಕೆಯನ್ನು ಮೆಚ್ಚಲೇಬೇಕು. ದಕ್ಷಿಣ ವಲಯದ ಯಾವುದೇ ರಣಜಿ ಪಂದ್ಯವಿರಲಿ, ಯಾವುದೇ ತಂಡಗಳ ನಡುವೆ ಇರಲಿ, ಪ್ರತಿಯೊಂದು ಪಂದ್ಯಕ್ಕೆ ವರದಿಗಾರರನ್ನು ಕಳಿಸಿ ಪ್ರತಿಯೊಂದು ಪಂದ್ಯದ ಸಂಪೂರ್ಣ ವಿವರವನ್ನು ಸ್ಕೋರ್ ಪಟ್ಟಿಯ ಸಹಿತ ಪಂದ್ಯದ ಎಲ್ಲಾ ದಿನಗಳಲ್ಲೂ 'ದ ಹಿಂದೂ' ನೀಡುತ್ತದೆ. ಇದಕ್ಕೆ ಕಾರಣ 'ದ ಹಿಂದೂ' ಸಂಪಾದಕ ಎನ್.ರಾಮ್ ಓರ್ವ ಮಾಜಿ ತಮಿಳುನಾಡು ರಣಜಿ ಆಟಗಾರ (ವಿಕೆಟ್ ಕೀಪರ್ ಬ್ಯಾಟ್ಸ್-ಮನ್).

ರಂಜಿತ್ ಕನ್ವಿಲ್ಕರ್ - ಗುಂಗುರು ಕೂದಲಿನ, ೬.೫ ಅಡಿ ಎತ್ತರದ ಆಕರ್ಷಕ ವ್ಯಕ್ತಿತ್ವದ ಕನ್ವಿಲ್ಕರ್, ಸವ್ಯಸಾಚಿಯ ರೂಪದಲ್ಲಿ ಕರ್ನಾಟಕ ತಂಡದ ಮಧ್ಯ ಕ್ರಮಾಂಕದಲ್ಲಿ ಆಡುತ್ತಿದ್ದರು. ರೋಜರ್ ಬಿನ್ನಿ, ಶರದ್ ರಾವ್ ಇವರೊಂದಿಗೆ ಜೊತೆಯಾಗಿ ಆರಂಭಿಕ ಬೌಲರ್ ಆಗಿ ಯಶಸ್ಸನ್ನು ಕಂಡಿದ್ದ ಆಟಗಾರ. ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಮತ್ತು ವಿಕೆಟ್ ಟೇಕರ್ ಬೌಲರ್ ಆಗಿದ್ದ ಕನ್ವಿಲ್ಕರ್ ೧೯೮೨ರಿಂದ ೧೯೮೭ರವರೆಗೆ ಕರ್ನಾಟಕ ತಂಡದ ಪ್ರಮುಖ ಸದಸ್ಯರಾಗಿದ್ದರು. ನಾನು ಕನ್ವಿಲ್ಕರ್ ಅಭಿಮಾನಿಯಾಗಿದ್ದೆ. ಇಟ್ ವಾಸ್ ೧೯೮೮ ಜುಲೈ. ನಾನಾಗ ೧೦ನೇ ತರಗತಿಯಲ್ಲಿದ್ದೆ. ಆ ಋತುವಿನ ರಣಜಿ ಪಂದ್ಯಗಳು ಶುರುವಾಗಲು ಇನ್ನೂ ೪ ತಿಂಗಳಿದ್ದವು. ೧೯೮೮ರ ಜುಲೈ ತಿಂಗಳ ೯ನೇ ತಾರೀಕು. ಆ ದಿನ ಎಲ್ಲಾ ದಿನಪತ್ರಿಕೆಗಳಲ್ಲಿ ಬೆಂಗಳೂರು - ಕನ್ಯಾಕುಮಾರಿ ಐಲ್ಯಾಂಡ್ ಎಕ್ಸ್-ಪ್ರೆಸ್ ರೈಲು ಕೋಯಿಕ್ಕೋಡ್ ಸಮೀಪವಿರುವ ಅಷ್ಟಮುಡಿ ಕೆರೆಯ ಸೇತುವೆಯಿಂದ ಹಳಿ ತಪ್ಪಿ ಹಲವಾರು ಬೋಗಿಗಳು ಕೆರೆಗೆ ಉರುಳಿ ಸುಮಾರು ೧೦೦ ಪ್ರಯಾಣಿಕರು ಮೃತಪಟ್ಟ ಸುದ್ದಿ. ಅದೇ ರೈಲಿನಲ್ಲಿ ಕನ್ವಿಲ್ಕರ್ ಪ್ರಯಾಣಿಸುತ್ತಿದ್ದು ಅಪಘಾತದಲ್ಲಿ ಅವರು ಮೃತಪಟ್ಟಿರುವ ಸುದ್ದಿ ಮರುದಿನ ಮತ್ತೆ ಎಲ್ಲಾ ದಿನಪತ್ರಿಕೆಗಳಲ್ಲಿ. ರಂಜಿತ್ ಕನ್ವಿಲ್ಕರ್ ವಾಸ್ ಒನ್ಲೀ ೨೮. ಆ ದಿನಗಳಲ್ಲಿ ನಾನು ಬಹಳ ನೊಂದುಕೊಂಡಿದ್ದೆ. ಕನ್ವಿಲ್ಕರ್ ಮೃತರಾಗಿ ಇದೀಗ ಎರಡು ದಶಕಗಳೇ ಕಳೆದಿವೆ. ಆದರೂ ಕರ್ನಾಟಕಕ್ಕೆ ಇನ್ನೂ ಒಬ್ಬ ಸಮರ್ಥ ಸವ್ಯಸಾಚಿ ಆಟಗಾರ ಸಿಕ್ಕಿಲ್ಲ. ಜೆ ಅಭಿರಾಮ್ ಉತ್ತಮ್ ಬ್ಯಾಟಿಂಗ್ ಮಾಡುತ್ತಿದ್ದರು ಆದರೆ ಅವರ ಮಧ್ಯಮ ವೇಗದ ಬೌಲಿಂಗ್ ಅತಿ ಸಾಧಾರಣವಾಗಿತ್ತು. ಕಾರ್ತಿಕ್ ಜಸ್ವಂತ್ ಧೀರ ಹಾಗೂ ಉನ್ನತ ದರ್ಜೆಯ ಬ್ಯಾಟ್ಸ್-ಮನ್ ಆಗಿದ್ದರು ಆದರೆ ಅವರ ಸ್ಪಿನ್ ಬೌಲಿಂಗ್ ಕನ್ವಿಲ್ಕರ್-ರ್ ವೇಗದ ಬೌಲಿಂಗ್-ನಷ್ಟು ವಿಕೆಟ್ ಗಳಿಸುತ್ತಿರಲಿಲ್ಲ. ಈಗಿರುವ ಬಾಲಚಂದರ್ ಅಖಿಲ್ ಹೆಚ್ಚು ಕಡಿಮೆ ಅಭಿರಾಮ್ ಹಾಗೇನೇ. ಕನ್ವಿಲ್ಕರ್ ಅಕಾಲಿಕ ಮರಣ ಆಗಿನ ದಿನಗಳಲ್ಲಿ ಕರ್ನಾಟಕ ಕ್ರಿಕೆಟ್-ಗೆ ದೊಡ್ಡ ನಷ್ಟವಾಗಿತ್ತು.