ಸೀಕರ್ಣೆ-ಕಥೆ, ಹೇಳಿ ಅಜ್ಜಿ !
ಮುದ್ದು ಗೌರಿ, ನಮಗೆಲ್ಲಾ ರಾಧಜ್ಜಿ ಮುನಿಸ್ಕೊಂಡು, 'ಸೀಕರ್ಣೆ ಬೇಡ ಅಂದ್ ಕಥೆ, ' ಹೇಳಿದಮೇಲೆ ನನಗೆ ಅದನ್ನು ಬರಿಬೇಕು ಅನ್ಸಿದ್ದು....
'ನಮ್ಮಮ್ಮ ರಾಧಮ್ಮ,' ಆಗ್ಲೇ' ರಾಧಜ್ಜಿ ' ಆಗಿದೃ. ನಮ್ಮ ಅತ್ತಿಗೆ, ಮತ್ತು ನನ್ನ ಹೆಂಡತಿ ಜೊತೆಗೆ ಆ ಪ್ರಸಂಗವನ್ನು ಹಂಚಿಕೊಂಡು ಸಂತಸಪಡುತ್ತಿರುವುದು...
ನಾವು ಚಿಕ್ಕೋರಾಗಿದ್ದಾಗ, ನಮ್ಮನ್ನ ಕಥೆ ಹೇಳು, ಹೇಳು ಅಂತ, ಗೋಳುಹೊಯ್ಕೊತಿದ್ವಿ. ಚಿಕ್ಕವರಾಗಿದ್ದಾಗಲ್ಲದೇ ಅಲ್ದೆ, ಈಗ ಕೇಳ್ತೀವಾ ? ನಮ್ಮಪ್ಪ, ಅಂತಹ ಕಥೆಗಾರರೇನಲ್ಲ. ಅವರಾಯಿತು, ಅವರ ವೇದಂತದ ಪುಸ್ತಕಗಳಾಯಿತು. ಭಕ್ತಿವಿಜಯ, ದಾಸ್ ಬೋಧ್, ಅನುಭವಾಮೃತ, ಶ್ರೀಧರ ಸ್ವಾಮಿಗಳ, 'ಪಾಂಡವಪ್ರತಾಪ,' ಗೊಂದಾವಳೀಕರ್ ಮಹರಾಜ್ ರವರ ಬೋಧನೆ, ಅಭ್ಯಾಸಗಳಲ್ಲೇ ಸದಾ ಮುಳುಗಿದ್ದ, ಅವರನ್ನು ಮಾತಾಡಿಸಲೂ ಹೆದರಿಕೆ. ಅದರಲ್ಲೂ., ನಮಗೂ ನಮ್ಮ ತಂದೆಯವರಿಗೂ ದಶಕಗಳ ವಯಸ್ಸಿನ ಅಂತರ. ನಾವು ಅವರಿಗೆ ಹೆದರುತ್ತಿದ್ದೆವೇ ವಿನಹಃ, ಹತ್ತಿರದಲ್ಲಿ ಕುಳಿತುಕೊಳ್ಳಲು, ಕಥೆಹೇಳಿ ಎನ್ನುವಷ್ಟು ಧಾರ್ಷ್ಟ್ಯ ವಿರಲಿಲ್ಲ.
ಅಮ್ಮನೋ, ಯಾವಾಗಲೂ ಹಸನ್ಮುಖಿ, ಗಾದೆಗಳು ಅವಳಬಾಯಿನಲ್ಲೇ ಉಧ್ಬವಿಸಿರಬಹುದೆಂದು ನನ್ನ ಅನಿಸಿಕೆ. ದಿನದ ಪ್ರತಿಕೆಲಸದ ಪ್ರಾರಂಭ್ಹ ಮಾಡುವಾಗಲೂ ಅದೇನೋ ಅಂತಾರಲ್ಲ ಅಂತ, ಸಮಯಕ್ಕೆ ತಕ್ಕ ಗಾದೆಯೊಂದನ್ನು ಜ್ಞಾಪಿಸಿಕೊಂಡು ಹೇಳುತ್ತಿದ್ದ ಪರಿ ಅನನ್ಯ ! ದೇವರ ನಾಮಗಳನ್ನು ಹಾಡುಗಳನ್ನು ತನ್ನ ಕಂಚಿನ ಕಂಠದಿಂದ ಗಂಟೆಗಳಕಾಲ, ಬೇಸರ, ನಿದ್ದೆ ನೀರಡಿಕೆಗಳಿಲ್ಲದೆ, ಸುಶ್ರಾವ್ಯವಾಗಿ ಹೇಳುತ್ತಿದ್ದರು.
ದಿನಮುಗಿದು ರಾತ್ರಿ ಇನ್ನೇನು ಪ್ರಾರಂಭವಾಗುವ ವೇಳೆಗೇ ಬೇಗ ಉಟಮಾಡಿ, ಮಲಗುತ್ತಿದ್ದಕಾಲವದು. ಹಳ್ಳಿಯಲ್ಲಿ ಎಲೆಕ್ಟ್ರಿಕ್ ದೀಪವಿರಲಿಲ್ಲ. ಸೀಮೆಯೆಣ್ಣೆಯ ಲಾಂದ್ರದ. ಅಥವಾ ಬುಡ್ಡಿಯ ಕುರುಡು ದೀಪದಡಿಯಲ್ಲೇ ಓದಬೇಕು. ನಾವೆಲ್ಲಾ ೧೯೫೮ ರವರೆಗೂ, ಹಾಗೆಯೇ ಓದಿ ಬೆಳೆದೆವು. ಮನೆಯಹೊರಗಂತೂ, ಕಗ್ಗತ್ತಲು. ಗಾಡಾಂಧಕಾರ !!!
ಅಮ್ಮನ ಹಲವಾರು ಕಥೆಗಳಲ್ಲಿ, ಗಿಡ್ಡಿಕಥೆ, ರಾಜಕುಮಾರನ ಕಥೆ, ರಾಜಕುಮಾರಿ ಕನಸಿನಲ್ಲಿ ಬಂದಿದ್ದು, ಎಣ್ಣೆಕೊಪ್ಪರಿಗೆಯಲ್ಲಿ, ಒಬ್ಬರ ಮುಖ ಮತ್ತೊಬ್ಬರು, ನೋಡಿದ್ದು, ಇತ್ಯಾದಿ ಇತ್ಯಾದಿ. ಅವುಗಳ ಹೆಸರೆಲ್ಲಾ , ಈಗ ಮರೆತುಹೋಗಿದೆ. ಬಹುಶಃ, ಇಂದಿನ ಮಕ್ಕಳಿಗೆ ಅದನ್ನೇನಾದರೂ ಹೇಳಿದರೆ, ನಕ್ಕಾರು. ’ಬೋರ್ ಮಾಡ್ಬೇಡಿ,’ ಅಂತ, ಹೇಳೇಬಿಡ್ತಾರವ್ರು ! ನೂರಾರುಕಥೆಗಳಲ್ಲಿ ಅವರು ಬಹಳ ಅಸ್ಥೆಯಿಂದ ಮುಗುಳುನಗುತ್ತಾ, ನೆನೆಸಿಕೊಂಡು, ನಾಚುತ್ತಾ ,ನಾಚುತ್ತಾ, ಹೇಳುತ್ತಿದ್ದ ಕಥೆಯ ವರಸೆ, ನಮಗೆ ಇವತ್ತಿಗೂ ಇಷ್ಟ .
ಅವರ ಪ್ರೀತಿಯ ಮೊಮ್ಮಗಳಲ್ಲಿ ಹರ್ಷನೂ ಒಬ್ಬಳು. ಅದಲ್ಲದೆ, ಹರ್ಷ, ನಮ್ಮಮ್ಮನ ಫ್ಯಾನು ಬೇರೆ ! ಈಗಲೂ ಸ್ವಲ್ಪ-ಹೆಚ್ಚು ಮಸಾಲೆ, ಉಪ್ಪು ಕಾರ ಹಾಕಿ, ತನ್ನ ಮಗಳು, ಗೌರಿಗೆ ಕಥೆ ಹೇಳುತ್ತಿದ್ದುದನ್ನು, ನಾನು ಅಮೆರಿಕದಲ್ಲಿ ಅವಳ ಮನೆಯಲ್ಲಿದ್ದಾಗ ಕೇಳಿ ವಿಸ್ಮಯಗೊಂಡಿದ್ದೆ !
ಈ ಚಿಕ್ಕ ಬರಹ ಬರೆಯಲೂ ನನಗೆ ಪ್ರೇರಣೆ, ನಮ್ಮ ಪ್ರೀತಿಯ ಮೊಮ್ಮಗಳು, ಚಿ. ಗೌರಿ. ಅವರ ಶಾಲೆಯಲ್ಲಿ ಫ್ರೆಂಚ್, ಸ್ಪಾನಿಷ್, ಹಂಗೇರಿಯನ್, ರಷ್ಯನ್, ಇಂಗ್ಲೀಷ್, ಅಥವಾ ಅಮೆರಿಕನ್ ಕಥೆಗಳನ್ನು ಕೇಳಿದರೂ ಅವರಮ್ಮ ಹೇಳುವ ರಾಧಜ್ಜಿ ಸೀಕರ್ಣೆ, ಬೇಡ ಅಂದಿದ್ರಲ್ಲ ಆ ಕಥೆ, ದಿನಕ್ಕೆ ಒಮ್ಮೆಯಾದರೂ ಹೇಳಿಸಿಕೊಂಡು ಕೇಳದಿದ್ದರೆ ಸಮಾಧಾನವಿಲ್ಲ. ನಾನು ಅವರ ಮನೆಗೆ ಹೋದದಿನ, ಅಜಾ, ನಿಮಗೆ ರಾಧಜ್ಜಿ ಸೀಕರ್ಣೆ ಬೇಡ ಅಂದಿದ್ರಲ್ಲಾ ಆ ಕಥೆ ಗೊತ್ತಾ ? ಎಂದಾಗ, ನಮಗಾದ ಆನಂದ ಅಷ್ಟಿಷ್ಟಲ್ಲ ; ನಾವಿಬ್ಬರೂ (ನಾನು ಮತ್ತೆ ನನ್ನ ಹೆಂಡತಿ) ಮತ್ತೆ ೫೯ ವರ್ಷ ನಮ್ಮ ಬಾಲ್ಯದ ಸವಿದಿನಗಳ ವಲಯಕ್ಕೆ ತೇಲಿ ಹೋದೆವು !
ನಿಜವಾಗಿಯೂ ಅ ಕಧೆಗಳನ್ನು ನಾನು ಮರೆತೆನೆ ? ನನಗೇ ತಿಳಿಯದು. ಕಾಲದ ಪ್ರವಾಹದಲ್ಲಿ ನಾವೆಲ್ಲಾ ಕೊಚ್ಚಿಕೊಂಡುಹೋಗುತ್ತಿದ್ದೇವೇನೋ ಅನ್ನಿಸಿತ್ತು !
ಕಥೆ, ಪ್ರಾರಂಭ : ಸಮಯ : ಸನ್ . ೧೯೨೨ ರ ಕೊನೆಯ ಹಂತ...... ಆಗಿನ್ನೂ ನಮ್ಮಮ್ಮ, ಹೊಸದಾಗಿ ಗಂಡನ ಮನೆಗೆ ಬಂದ ಸಮಯ. ಪಟ್ಟಣದಿಂದ ಹಳ್ಳಿಗೆ, ಅದೂ ಕಾನ್ವೆಂಟ್ ನಲ್ಲಿ ಒದಿದ ಹುಡುಗಿಗೆ, ಎಲ್ಲವೂ ಹೊಸದು ; ರೀತಿ ರಿವಾಜ್, ಆಚಾರ ವ್ಯವಹಾರ, ಪೂಜೆ ಪುನಸ್ಕಾರ, ಮಡಿ ಹುಡಿ ಇತ್ಯಾದಿ. ನಮ್ಮಜ್ಜಿ ಕೇಳ್ಬೇಕೆ, ’ಏನಮ್ಮಾ ನೀನ್ ಬೆಂಗ್ಳುರ್ ನಲ್ಲಿ ಬೆಳೆದೋಳು , ನಮ್ಗೆಲ್ಲ ತಿಳಿಯಲ್ಲ. ಎಲ್ಲ ಸವರ್ಸ್ಕೊಂಡ್ ಹೊಗ್ಬೇಕಮ್ಮ. ಯಾವ್ದಕ್ಕೂ ಸಂಕೋಚ ಪಡ್ಬೇಡ, ರಂಗಣ್ಣಗೆ ಹೇಳಿದೀನಿ ; ಮಾಳೆನಹಳ್ಳಿ ರಂಗನಾಥ ದೇವರ ದರ್ಶನ ಮಾಡಿಸ್ಕೊಂಡ್ ಬಾಪ್ಪ ’ ಅಂತ, ಒಪ್ಪಿಸ್ತಿದ್ರು. ಮನೇಲಿ, ರಾಗಿಮುದ್ದೆ, ವಿಶೇಷ ಅಡಿಗೆ. ಹೊಳಲ್ಕೆರೆ ಜೋಳ-ರಾಗಿಗೆ ಪ್ರಸಿದ್ಧಿ ಅಲ್ವೇ, ರಾಗಿ ರೊಟ್ಟಿ, ರಾಗಿ ಉಪ್ಪಿಟ್ಟು, ಜೋಳದ ಹಿಟ್ಟಿನ ಭಾಕರಿ, ಪಲ್ಯ, ವಡ್ಡರಾಗಿಹಿಟ್ಟಿನ ಹಾಲ್ಬಾಯಿ ಮಾಡಿ, ಸೊಸೆಗೆ ತಿನ್ನಿಸಿದ್ದೂ ತಿನ್ಸಿದ್ದೇ. ಅಮ್ಮಂಗೋ ಅವಕ್ಕೆಲ್ಲಾ ಹೊಂದಿಕೊಳ್ಳಲು ಬಹಳ ಸಮಯ ಹಿಡಿದಿತ್ತಂತೆ. ೧೪ ವರ್ಷದ ಹುಡುಗಿಗೆ ಏನ್ತಾನೆ ಗೊತ್ತಾಗತ್ತೆ ! ಪಾಪ....
ಒಂದ್ ದಿನ, ಅವರ ಅತ್ತೆ, ಬಲು-ಪ್ರೀತಿಯಿಂದ, ರಸಪುರಿ-ಮಾವಿನಹಣ್ಣಿನ-ಸೀಕರಣೆ, ಪೂರಿ-ಸಾಗು ಮಾಡಿದ್ರಂತೆ. ಅಮ್ಮ ಹೊಳಲ್ಕೆರೆಯ ಪ್ರತಿ ವ್ಯಂಜನನೂ ರುಚಿನೋಡ್, ರುಚಿ ನೊಡ್, ತಿನ್ನೋಳಂತೆ ! ಆದ್ರೆ ಸೀಕರ್ಣೆ ಬಡಿಸಕ್ ಬಂದಾಗ, ಬೇಡ.. ಬೇಡ, ಅಂತ ಕೈಹಿಡಿದರಂತೆ. ಆದರೆ ಅವರ ಅತ್ತೆ ಉಪಚಾರ ಮಾಡಿದ್ದೂ ಮಾಡಿದ್ದೇ, ’ಸ್ವಲ್ಪ ತಿನ್ನಮ್ಮ, ನಿಂಗೆ ಖಂಡಿತ ಇಷ್ಟಾ ಆಗತ್ತೆ, ನಂಗ್ ಗೊತ್ತು”.. ಅಂತ ಅಂಗಲಾಚಿದರೂ, ಹುಡುಗ್ ಬುದ್ಧಿ. ಬೇಡ ಅಂದ್ರೆ, ಬೇಡ ; ಮುಖ ಸೊಟ್ಟಗೆ ಮಾಡಿಕೊಂದು ಒಳಗೆ ಒಢೊಗ್ಬಿತ್ರಂಟೆ. ’ಏ ರಂಗಣ್ಣಾ ನಿನ್ ಹೆಂಡ್ತೀಗ್ ಸ್ವಲ್ಪ ಜೋರ್ಮಾಡ್ ಹೇಳೊ, ಏನೊ, ಎಲ್ಲಾರ್ಗೂ ಇಷ್ಟಾ ಅಂತ ’ಸೀಕರ್ಣೆ” ಮಾಡಿದ್ರೆ, ಸ್ವಲ್ಪನೂ ತಿನ್ನದಿದ್ದ್ರೆ, ಹೆಂಗೋ.. ನಾವ್ ತಾನೇ ಹ್ಯಾಗ್ ತಿನ್ನೋದು, ’ ಅಂತ ನೊಂದ್ಕೊಂಡ್ರಂತೆ. ನಮ್ಮಪ್ಪನಿಗೋ, ಅವರಮ್ಮ ಅಂದ್ರೆ, ಎಲ್ಲಿಲ್ಲದ ಗೌರವ, ಆದರ, ಪ್ರಿತಿ. ರೂಮ್ ನಲ್ಲಿ ಓಡಿಬಂದು, ಹೆಂಡತಿಗೆ ಸಮಝಾಯಿಸಿದರಂತೆ. ಆದ್ರೆ, ಆ ಜಂಭದ ಹುಡುಗಿ ರಾಧಮ್ಮ, ಕೇಳಬೇಕಲ್ಲಾ ?
(ರಾಧಮ್ಮ ಅಜ್ಜಿ ಆಗಕ್ ಮುಂಚೆ, ಒಳ್ಳೆ ಚಂದದ ಹುಡುಗಿ ಆಗಿದ್ರು. ತಲೆತುಂಬಾ ಕಪ್ಪು-ಕೂದ್ಲು.. ಕೂದ್ಲು, ಕಾಲಿನ ತನಕ, ಬರ್ತಿತ್ತಂತೆ !ಫೋಟೋ ನೋಡಿ; ಗೊತ್ತಾಗತ್ತೆ !!) ಎಲ್ರೂ ಪೂರಿಸೀಕರ್ಣೆ, ಎಷ್ಟ್ ಚಿನ್ನಾಗಿದೆ, ಅಂತ ಹೊಟ್ಟೆತುಂಬಾ ಊಟಾಮಾಡಿದ್ರು, ಯಾಲಕ್ಕಿಯ ಸು-ವಾಸನೆಯ ಮಾವಿನ ಹಣ್ಣಿನ ಸೀಕರಣೆಯನ್ನು ಯಾರುತಾನೇ ಬೇಡ ಅಂತಾರೆ ? ಅದೇ ಎಲ್ಲಾ, ಹುಡುಗ್ತನದ ಮಹಿಮೆ ! ಇದಾದ ಕೆಲವು ದಿನಗಳನಂತರ, ಮತ್ತೆ, ಅವರ ಅತ್ತೆ, ಮಾವಿನ ಹಣ್ಣಿನ ಸೀಕರ್ಣೆ ಹಾಗೂ ಚಪಾತಿ, ಪೂರಿ ಮಾಡಿದರು. ಎಲ್ರೂ ಹಾಕಿಸ್ಕೊಂಡ್ ತಿನ್ತಿದ್ರೆ, ಅಮ್ಮನ ಬಾಯಲ್ಲಿ ನಿರ್ಬರ್ತಿತ್ತಂತೆ. ಸುವಾಸನೆ ಮೂಗಿಗೆ ಬಡೀತಿತ್ತು. ಒಂದ್ಸಾರಿ ಬೇಡ ಅಂತ ಹೇಳಿದ್ದು, ಒಳ್ಳೆ ತಾಪತ್ರಯಕ್ಕಿತ್ಕೊಂಡ್ತಂತೆ.
ಆಮೇಲೆ ಯಾರೂ ಬಲವಂತಮಾಡೋದೇ, ಬಿಟ್ಟರಂತೆ. ’ಹೋಗ್ಲಿ ಬಿಡೊ... ಅವಳಿಗೆ, ನಾನು, ಗಸಗಸೆ ಪಾಯ್ಸ ಮಾಡಿದೀನಿ, ಅಥವಾ ಶ್ಯಾಮಿಗೇ ಪಾಯ್ಸಮಾಡಿದೀನಿ ಅದನ್ನೇ ಕುಡೀಲಿ.’ ಅಂದ್ರಂತೆ. ಆದ್ರೆ, ಇಗ ಅಮ್ಮನಿಗೆ, ಪೂರಿಸೀಕರ್ಣೆನೇ ಬೇಕು. ಏನ್ಮಾಡೊದು ? ನಿಧಾನವಾಗಿ ಪತಿರಾಯರ ಹತ್ತಿರಬಂದು, ಬಾಯ್ ಬಿಟ್ರಂತೆ. ಸರಿ, ನಮ್ಮಪ್ಪ ಅವರಮ್ಮನ್ನ ಹತ್ರ ಮತ್ತೆ ಓಢೋಗಿ, ಒಪ್ಪಿಸಿ, ರಾಜಿಮಾಡಿಸಿದರಂತೆ. "ಅದಕ್ಕೇ ನಾನ್ ಹೇಳೋದು, ಯಾವತ್ತೂ ಸರಿಯಗಿ ತಿಳ್ಕೊಳ್ಳದೆ, ಬೇಡ ಅಂತ ಹೇಳ್ಬಾರ್ದು. ನೀವು ಅಷ್ಟೆ, ಮಕ್ಳ " ?
ಕಥೆ ಕೇಳ್ತಿರೊರ್ಯಾರು ? ಗೊರಕೆ ಸದ್ದು ಏರ್ತಾ ಇದೆ. ಸರಿ. ನಮ್ಮಮ್ಮ ತನಗೆ ತಾನೇ ನಕ್ಕಳಂತೆ !
ಸಮಯ : ೧೯೮೫ ರ ನಂತರ .... ನಾವುಗಳೆಲ್ಲಾ ದೊಡ್ಡೋರಾಗಿ, ಅಲ್ಲಿ ಇಲ್ಲಿ ಕೆಲಸಕಾರ್ಯ ಅಂತ ಹೊರಗೆಹೊದಮೇಲೆ, ಮೊಮ್ಮಕ್ಕಳು ಅದೇ ಕಥೆಗಳನ್ನು ಪ್ರೀತಿಯಿಂದ ಕೇಳ್ತಾ ಕೇಳ್ತಾ ನಿದ್ದೆಮಾಡ್ತಿದ್ರು. ಅದಕ್ಕೆ, ಆ ಕಥೆಗಳು, ಕಾಲಾತೀತವಾದವುಗಳಾಗಿ, ನಮ್ಮ ಮನೆಯಲ್ಲಿ ಈಗಲೂ ಕೇಳಬರುತ್ತಿವೆ.
* ಚಿತ್ರದಲ್ಲಿರೋರು, ನಮ್ಮ ಲಲಿತತ್ಗೆ, ನಮ್ಮಮ್ಮ,, ಹಾಗೂ ನನ್ನ ಹೆಂಡತಿ., ಸರೋಜ... ನಮ್ಮಮ್ಮನ ’ಸೀಕರ್ಣೆ ಕಥೆ,’ ಕೇಳಿ ಇಬ್ರೂ ನಗ್ತಿದಾರೆ; ಅಮ್ಮನೂ... !!!