ಹೇಳಿ ನಿಮ್ಮಲ್ಲಾರಿಗಾದರೂ ಇದ್ದರೆ ಪತ್ರ ಓದುವಾಸೆ
ಅಂದಿದ್ದಿದ್ದರೂ ಊರಿಗೆಲ್ಲ ಫೋನು ಒಂದೇ ಒಂದು
ಕರೆ ಮಾಡಿ ವಿಚಾರಿಸುತ್ತಿದ್ದರು ಹೇಗಿರುವೆ ಎಂದು
ಫೋನು ಮಾಡಲಾಗದಿದ್ದಲ್ಲಿ ಬರೆದು ಉದ್ದುದ್ದ ಪತ್ರ
ಸದಾ ಸಂಪರ್ಕದಲ್ಲಿ ಇರುತ್ತಿದ್ದರೆಲ್ಲ ತಮ್ಮವರ ಹತ್ರ
ಆಗೆಲ್ಲರ ಮನದಲ್ಲಿ ತುಂಬಿತ್ತು ಪರರ ಬಗ್ಗೆ ಕಾಳಜಿ
ಮಾಡಿದ್ದೇ ಇಲ್ಲ ಯಾರೂ ಬಡತನದೊಂದಿಗೆ ರಾಜಿ
ಮತ್ತೆ ಬಂತು ಮನೆ ಮನೆಯಲ್ಲೊಂದೊಂದು ಫೋನು
ಮತ್ತೀಗ ಆಗಿದೆ ಪ್ರತೀ ತಲೆಗೂ ಒಂದೊಂದು ಫೋನು
ಆದರೂ ಒಬ್ಬರ ಜೊತೆಗೆ ಸಂಪರ್ಕ ಇನ್ನೊಬ್ಬರಿಗಿಲ್ಲ
ಎಲ್ಲರದೂ ರಿಂಗು ಮಿಸ್ಸ್ ಕಾಲುಗಳಲೇ ಲೆಕ್ಕ ಎಲ್ಲ
ಒಂದು ರಿಂಗಾದರೆ ತಿಳಿದುಕೋ ಇಲ್ಲಿ ಸೌಖ್ಯ ನಾನು
ಎರಡು ಆಯ್ತೆಂದರೆ ಹೇಳು ಹೇಗಿರುವೆಯೆಂದು ನೀನು
ಅಂದು ಮಾತಿಗೆ ಮೊದಲು ಹೇಗಿರುವೆ ಎನ್ನುತ್ತಿದ್ದರು
ಈಗ ಹಾಗಲ್ಲ ಫೋನೆತ್ತಿದೊಡನೆ ಎಲ್ಲಿರುವೆ ಎನ್ನುವರು
ಪತ್ರ ಬರೆಯುವಾಸೆ ಜೀವಂತವಾಗಿದೆ ಇನ್ನೂ ನನ್ನಲ್ಲಿ
ಆದರೆ ಓದುವವರು ಯಾರಿಲ್ಲವೆಂಬ ಚಿಂತೆಯಿದೆಯಿಲ್ಲಿ
ಹೇಳಿ ನಿಮ್ಮಲ್ಲಾರಿಗಾದರೂ ಇದ್ದರೆ ಪತ್ರ ಓದುವಾಸೆ
ನಾನು ಬರೆಯುತ್ತೇನೆ ತೀರುವಂತೆ ನನ್ನ ಮನದಾಸೆ
**************************