ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!
ಆ ಊರಿನ ಎಲ್ಲರ ಬಾಯಲ್ಲೂ ಮುಲ್ಲಾ ನಸ್ರುದ್ದೀನ್ ಮಾತೇ. ಮುಲ್ಲಾ ಆ ಊರಿನಲ್ಲಿ ಭಿಕ್ಷೆ ಬೇಡಲು ಹೋದ ಕಡೆಯಲ್ಲೆಲ್ಲ, ಯಾರೇ ಆಗಲಿ ಅವನ ಮುಂದೆ ಒಂದು ದೊಡ್ಡ ಮತ್ತು ಇನ್ನೊಂದು ಚಿಕ್ಕ ನಾಣ್ಯಗಳನ್ನು ಇಟ್ಟರೆ, ಮುಲ್ಲಾ ಚಿಕ್ಕ ನಾಣ್ಯವನ್ನೇ ಆರಿಸಿಕೊಳ್ಳುತ್ತಿದ್ದ. ಆ ಊರಿನಲ್ಲಿ ಚಿಕ್ಕ ನಾಣ್ಯದ ಬೆಲೆ ದೊಡ್ಡ ನಾಣ್ಯಕ್ಕಿಂತ ಕಡಿಮೆ. ಹಾಗಾಗಿ ಮುಲ್ಲಾನ ಈ ಆಯ್ಕೆ ಎಲ್ಲರಿಗೂ ಬಹಳ ತಮಾಶೆಯಾಗಿ ಕಾಣುತ್ತಿತ್ತು. ಜನ ನಾ ಮುಂದು, ತಾ ಮುಂದು ಅನ್ನುವಂತೆ ಮುನ್ನುಗ್ಗಿ ಭಿಕ್ಷೆ ಹಾಕಿ ಮಜ ತೆಗೆದುಕೊಳ್ಳುತ್ತಿದ್ದರು.
ದಿನವೂ ಹೀಗೆ ಜನರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ ಮುಲ್ಲಾನ ಬಗ್ಗೆ ಅಯ್ಯೋ ಎನಿಸಿ ಒಂದು ದಿನ ಗೆಳೆಯನೊಬ್ಬ ಮುಲ್ಲಾನನ್ನು ಕೇಳಿಯೇಬಿಟ್ಟ: "ಮುಲ್ಲಾ, ನೀನೇನು ಮಾಡುತ್ತಿದ್ದೀಯಾ ಅನ್ನುವ ಅರಿವೇ ಇಲ್ಲವಲ್ಲ. ಜನರು ನಿನ್ನ ಮುಂದೆ ಎರಡು ನಾಣ್ಯಗಳನ್ನು ಇಟ್ಟಾಗ ದೊಡ್ಡದನ್ನು ಆರಿಸಿಕೋ. ಬೇಗ ಹೆಚ್ಚು ಹಣ ಗಳಿಸಬಹುದು ಮತ್ತು ಜನರು ನಿನ್ನನ್ನು ನೋಡಿ ನಗುವುದಿಲ್ಲ".
ಮುಲ್ಲಾ ನಸ್ರುದ್ದೀನ್ ಹೇಳಿದ, "ಗೆಳೆಯಾ, ನೀನು ಹೇಳುವುದು ನಿಜ. ಆದರೆ ನಾನೇನಾದರೂ ಹಾಗೆ ಮಾಡಿದಲ್ಲಿ, ನಾಳೆಯಿಂದ ಜನರಿಗೆ ನನನ್ನು ಪೆದ್ದ ಅಂತ ಹಾಸ್ಯ ಮಾಡಿ ನಗುವ ಅವಕಾಶ ತಪ್ಪಿ ಹೋಗುತ್ತೆ. ಆಗವರು ನನಗೆ ದುಡ್ಡು ಕೊಡೋದನ್ನೇ ನಿಲ್ಲಿಸಬಹುದು. ಬರುವ ಹಣವೂ ನಿಂತು ಹೋದರೆ ಆಗೇನು ಮಾಡಲಿ? ನನಗೆ ಎಲ್ಲವೂ ಗೊತ್ತಿದ್ದೇ ಹೀಗೆ ಮಾಡುತ್ತಾ ಇದ್ದೀನಿ. ನಿಜಕ್ಕೂ ಪೆದ್ದನಾಗುತ್ತಿರುವುದು ನಾನಲ್ಲ, ಪದೇ ಪದೇ ಬಂದು ಹಣ ಹಾಕಿ ಹೋಗುತ್ತಾರಲ್ಲಾ ಅವರು!".