ರಾತ್ರಿಯಲ್ಲಿ: ಕಾಫ್ಕಾ ಕಥೆ

ರಾತ್ರಿಯಲ್ಲಿ: ಕಾಫ್ಕಾ ಕಥೆ

ಬರಹ

ತಲೆ ಬಗ್ಗಿಸಿಕೊಂಡು ಯೋಚನೆಯಲ್ಲೇ ಕಳೆದು ಹೋಗುವ ಹಾಗೆ ಕತ್ತಲಲ್ಲಿ ಕಳೆದುಹೋಗಿರುವೆ. ಸುತ್ತಲೂ ಜನ ಮಲಗಿ ನಿದ್ರೆ ಹೋಗಿದಾರೆ. ಮನೆಯಲ್ಲಿ ಮಲಗಿದೇವೆ, ಕ್ಷೇಮವಾಗಿ ಹಾಸಿಗೆಯ ಮೇಲೆ, ಸುರಕ್ಷಿತವಾಗಿ ನಮ್ಮ ಮನೆಯ ಕೋಣೆಯಲ್ಲಿ ಮೈ ಚಾಚಿ, ಮುದುರಿಕೊಂಡು, ದುಪಟಿ ಹೊದ್ದು, ಕಂಬಳಿ ಸುತ್ತಿಕೊಂಡು ಮಲಗಿದೇವೆ ಅನ್ನುವುದು ಸುಮ್ಮನೆ ಆಡುತ್ತಿರುವ ನಾಟಕ, ಮುಗ್ಧ ಆತ್ಮವಂಚನೆ. ನಿಜವಾಗಿ ಅವರೆಲ್ಲರೂ ಹಿಂದೆ ಒಂದಾನೊಂದು ಕಾಲದಲ್ಲಿ ಕುರಿಮಂದೆಯ ಹಾಗೆ ಒಗ್ಗೂಡಿಕೊಂಡು, ಆಮೇಲೆ ನಿರ್ಜನ ಬಯಲಿನಲ್ಲಿ ಕ್ಯಾಂಪು ಮಾಡಿಕೊಂಡು ಇದ್ದ ಹಾಗೆಯೇ ಇದಾರೆ. ಅಸಂಖ್ಯಾತ ಜನ. ಬತ್ತಲೆ ಆಕಾಶದ ಕೆಳಗೆ, ಕೊರೆಯುವ ಬರಿ ನೆಲದ ಮೇಲೆ ತಾವು ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದ ಸೈನಿಕರು, ಮೊಳಕೈಗೆ ಹಣೆಯೊತ್ತಿ, ಸದ್ದಿಲ್ಲದೆ ಉಸಿರಾಡುತ್ತಾ ಬಿದ್ದುಕೊಂಡಿರುವವರು. ನೋಡುತ್ತಾ ಇರುವ ನೀನು ಕಾವಲುಗಾರರಲ್ಲಿ ಒಬ್ಬ. ಪಕ್ಕದಲ್ಲಿ ಬಿದ್ದಿರುವ ಕಟ್ಟಿಗೆ ರಾಶಿಯಿಂದ ಕೋಲೆಳೆದುಕೊಂಡು ಪಂಜು ಮಾಡಿ ಆಡಿಸುತ್ತಾ ಇನ್ನೊಬ್ಬ ಕಾವಲಿನವನು ಇದ್ದಾನೋ ಅಂತ ನೋಡುವೆ. 

ಏನು ನೋಡುತಾ ಇದೀಯ?

ನೋಡುತಾ ಇರುವವರು, ಕಾಯುತಾ ಇರುವವರು ಇರಬೇಕು ಅನ್ನುತಾರೆ. ಇನ್ನೂ ಯಾರೋ ಇರಲೇ ಬೇಕು.

 

ಕಥೆಯನ್ನು ಹೀಗೆ ಅನುವಾದ ಮಾಡಿದ್ದು ಸರಿ ಅನ್ನಿಸಲಿಲ್ಲ. ತೀರ ಕಡಮೆ ಮಾತಿನಲ್ಲಿ ಇದರ ಇನ್ನೊಂದು ರೂಪ: ಇಲ್ಲಿದೆ.

ಯೋಚನೆಯಲ್ಲಿ ಮುಳುಗಿದ ಹಾಗೆ

ಕತ್ತಲಲ್ಲಿ ಮುಳುಗಿರುವೆ

ಲೆಕ್ಕ ಮಾಡಲಾಗದಷ್ಟು ಜನ

ಅಂಗಾತ ಬೋರಲು ಹೊರಳಿ

ಹೇಗೆ ಹೇಗೋ ಮಲಗಿ

ಮನೆಯೊಳಗೆ ಕ್ಷೇಮ ನಿದ್ರೆ

ಅಂದುಕೊಂಡಿರುವ ಭ್ರಮೆ

ಮುಗ್ಧ ನಟನೆ

ಹಿಂಡಿನ ಹಾಗೆ ಗುಂಪಾಗಿ

ನಿರ್ಜನ ಬಯಲಲ್ಲಿ

ವಸತಿ ಹೂಡಿ

ಖಾಲಿ ಆಕಾಶ

ಬತ್ತಲೆ ಭೂಮಿಯ ನಡುವೆ

ತೋಳಿಗೆ ತಲೆ ಹಚ್ಚಿ

ನಿಂತಲ್ಲೆ ಕುಸಿದು ಬಿದ್ದ ಸೈನಿಕರು ಇವರು

ಎಚ್ಚರವಿರುವ ಕಾವಲುಗಾರ

ನೋಡುತಿರುವೆ

ಕಟ್ಟಿಗೆ ರಾಶಿಯಿಂದೊಂದು ಎಳೆದು

ಪಂಜು ಮಾಡಿ ಬೀಸುತಿರುವೆ

ಮತ್ತೊಬ್ಬ ಎಲ್ಲಿರುವನೆಂದು

ನೋಡುತಿರುವವರು ಬೇಕು 

ಕಾವಲಿರುವವರು ಬೇಕು

ಇನ್ನೊಬ್ಬ ಎಲ್ಲಿಯಾದರೂ ಇದ್ದಾನು

ನೋಡುತಿರು

 

ಎರಡು ರೂಪಗಳಲ್ಲಿ ಯಾವುದು ಪರಿಣಾಮಕಾರಿ ಅನಿಸಿತು, ಹೇಳಿ.