ಸೇತುವೆ: ಕಾಫ್ಕಾ ಕಥೆ

ಸೇತುವೆ: ಕಾಫ್ಕಾ ಕಥೆ

ಬರಹ
ಚಳಿಗೆ ಸೆಟೆದು ಹೋಗಿದ್ದೆ. ನಾನು ಸೇತುವೆ. ಕಮರಿಯ ಮೇಲೆ ಒರಗಿದ್ದೆ. ಕಾಲ ಬೆರಳು ಒಂದು ತುದಿಯಲ್ಲಿ, ಕೈ ಬೆರಳು ಇನ್ನೊಂದು ತುದಿಯಲ್ಲಿ, ಕುಸಿಯುತ್ತಿರುವ ಮಣ್ಣನ್ನು ಬಿಗಿಯಾಗಿ ಹಿಡಿದಿದ್ದವು. ನನ್ನ ಎರಡೂ ಪಕ್ಕದಲ್ಲಿ ಕೋಟಿನ ತುದಿಗಳು ಗಾಳಿಗೆ ಪಟಪಟಿಸುತ್ತಾ ಇದ್ದವು. ತೀರ ತೀರ ಕೆಳಗೆ ಹರಿಯುತ್ತಿರುವ ಹಿಮದಷ್ಟು ಕೊರೆಯುವ ನದಿ. ಎಷ್ಟು ಎತ್ತರದ ಜಾಗಕ್ಕೆ ಯಾವ ಪ್ರವಾಸಿಗರೂ ಬರುತ್ತಿರಲಿಲ್ಲ. ಯಾವ ಮ್ಯಾಪಿನಲ್ಲೂ ಈ ಸೇತುವೆಯ ಗುರುತು ಇರಲಿಲ್ಲ. ಸುಮ್ಮನೆ ಒರಗಿ ಕಾಯುತ್ತಿದ್ದೆ. ಕಾಯುತ್ತಲೇ ಇರಬೇಕು. ಕುಸಿದು ಬೀಳದೆ ಇದ್ದರೆ ಒಮ್ಮೆ ಕಟ್ಟಿದ ಸೇತುವೆ ಯಾವಾಗಲೂ ಸೇತುವೆಯಾಗೇ ಇರದೆ ವಿಧಿಯಿಲ್ಲ. 
ಒಂದು ದಿನ ಸಂಜೆ-ಯಾವತ್ತು, ಮೊದಲ ದಿನವೋ ಸಾವಿರದ ನೂರನೆಯ ದಿನವೋ ಹೇಳಲಾರೆ-ನನ್ನ ಯೋಚನೆಗಳು ಇದ್ದಲ್ಲದೇ ಗಿರಕಿ ಹೊಡೆಯುತ್ತಾ ಸುತ್ತುತ್ತಾ ಇದ್ದವು. ಬೇಸಗೆ ಕಾಲದ ಸಂಜೆ. ಕೆಳಗೆ ಹರಿಯುವ ನದಿಯ ಮೊರೆತ ಹೆಚ್ಚಾಗಿತ್ತು. ಯಾರೋ ಮನುಷ್ಯನ ಹೆಜ್ಜೆಯ ಸದ್ದು ಕೇಳಿಸಿತು! ನನ್ನತ್ತ, ನನ್ನತ್ತ ಬರುತ್ತಿರುವ ಹೆಜ್ಜೆ ಸದ್ದು. ಸೇತುವೇ, ಸಿದ್ಧವಾಗು, ಕಟಕಟೆ ಇಲ್ಲದ ತೊಲೆಗಳೇ ನಿಮ್ಮನ್ನು ನಂಬಿ ನಿಮ್ಮ ವಶಕ್ಕೆ ಒಪ್ಪಿಸಿಕೊಳ್ಳುವ ಸಂಚಾರಿಯನ್ನು ಎತ್ತಿ ಹಿಡಿಯಲು ಸಿದ್ಧರಾಗಿ. ಅವನ ಹೆಜ್ಜೆ ತಡವರಿಸುತ್ತಿದ್ದರೆ ಸ್ಥಿರಗೊಳಿಸಿ, ಅವನಿಗೆ ಅಡಚಣೆ ಆಗದ ಹಾಗೆ. ಅವನು ಮುಗ್ಗರಿಸಿದರೆ ಸಾವರಿಸಿಕೊಳ್ಳಲು ಸಹಾಯಮಾಡಿ, ಪರ್ವತದ ದೇವತೆಯ ಹಾಗೆ. ಕ್ಷೇಮವಾಗಿ ಆಚೆಯ ನೆಲಕ್ಕೆ ತಲುಪಿಸಿ. 
ಬಂದ. ಕೈಯಲ್ಲಿ ಕೋಲಿತ್ತು. ಕೋಲಿನ ಕಬ್ಬಿಣದ ತುದಿಯಿಂದ ನನ್ನ ತಟ್ಟಿದ. ನನ್ನ ಕೋಟಿನ ಅಂಚುಗಳನ್ನು ಕೋಲಿನಿಂದ ಎತ್ತಿ ಸರಿಯಾಗಿ ಜೋಡಿಸಿದ. ಕೋಲಿನ ತುದಿಯನ್ನು ನನ್ನ ತಲೆಗೂದಲಿಗೆ ನುಗ್ಗಿಸಿ ಬಹಳ ಹೊತ್ತು ಅಲ್ಲೇ ಇಟ್ಟಿದ್ದ. ಸುತ್ತಲೂ ನೋಡುತ್ತಾ ನನ್ನನ್ನು ಮರೆತೇ ಬಿಟ್ಟಿರಬಹುದು. ಪರ್ವತ, ಕಣಿವೆಗಳಲ್ಲಿ ಅಲೆಯುವ ಅವನ ಯೋಚನೆಗಳನ್ನೇ ಹಿಂಬಾಲಿಸುತ್ತಾ ಇದ್ದೆ. ಎರಡೂ ಕಾಲೆತ್ತಿ ನನ್ನ ಬೆನ್ನ ಮೇಲೆ ಕುಪ್ಪಳಿಸಿದ.  ಜೋರಾಗಿ ನೋವಾಯಿತು. ಮೈ ನಡುಗಿತು. ಏನಾಗುತ್ತಿದೆ ತಿಳಿಯಲಿಲ್ಲ. ಯಾರದು? ಮಗುವೆ? ಕನಸೆ? ದಾರಿಹೋಕನೆ? ಆತ್ಮಹತ್ಯೆಯೆ? ಕೋಪವೆ? ವಿನಾಶಕನೆ? ಅವನ ಮುಖ ನೋಡಲೆಂದು ತಿರುಗಿದೆ. ಸೇತುವೆ ತಿರುಗುವುದೆಂದರೆ! ನಾನಿನ್ನೂ ಪೂರ್ತಿ ತಿರುಗಿರಲಿಲ್ಲ, ಆಗಲೇ ಬೀಳುತ್ತಿದ್ದೆ. ಬಿದ್ದುಬಿಟ್ಟೆ. ಒಂದೇ ಕ್ಷಣ. ಧುಮುಕಿ ಓಡುವ ನದಿಯಲ್ಲಿದ್ದುಕೊಂಡು ಅಷ್ಟು ಸಮಾಧಾನವಾಗಿ ನನ್ನನ್ನು ನೋಡುತ್ತಿದ್ದ ಚೂಪು ಬಂಡೆಗಳು ಸೀಳಿ ಬಿಟ್ಟವು.