ಸಂಕ್ರಮಣ; ಕುರಿಗಳಿಗೆ ಸ್ನಾನ ಭಾಗ್ಯ ಒದಗಿಸುವ ಉತ್ತರಾಯಣ.

ಸಂಕ್ರಮಣ; ಕುರಿಗಳಿಗೆ ಸ್ನಾನ ಭಾಗ್ಯ ಒದಗಿಸುವ ಉತ್ತರಾಯಣ.

ಬರಹ

ಸಂಕ್ರಾಂತಿ!

ಅಬ್ಬಾ..ಮಕರ ಮಾಸ ಕಾಲಿಡುತ್ತಿದ್ದಂತೆಯೇ ಧನುರ್ಮಾಸದ ಮೈ ಕೊರೆಯುವ ಛಳಿಯಿಂದ ವಿನಾಯ್ತಿ. ಹಾಗೆಯೇ ದಕ್ಷಿಣಾಯಣ ಕಳೆದು ಉತ್ತರಾಯಣ ಪುಣ್ಯ ಪರ್ವ ಆರಂಭಗೊಳ್ಳುವ ಸಮಯ. ಕೃಷಿಕರ ಪಾಲಿಗಂತೂ ಇದು ವಿಶೇಷ ತಿಂಗಳು. ಗದ್ದೆಯ ಕೃಷಿ ಚಟುವಟಿಕೆಗಳೆಲ್ಲ ಮುಗಿದು, ಸುಗ್ಗಿಯ ಬೆಳೆ ಕಣ್ಣು ತುಂಬಿಸಿಕೊಳ್ಳುವ ತವಕದಲ್ಲಿ ರೈತಾಪಿ ಸಮೂಹ. ಭತ್ತದ ರಾಶಿ, ಗೋಮಾತೆ ಹಾಗು ಬಸವಣ್ಣ (ಎತ್ತುಗಳು) ನ್ನು ಪೂಜಿಸುತ್ತ "ಬೆಳಗಾಗ ಎದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ, ಭೂಮಿ ತಾಯಿ ಎದ್ದೊಂದು ಘಳಿಗೆ ನೆನೆದೇನ" ಎನ್ನುತ್ತ ಅನಾಮಿಕ ಜಾನಪದ ಕವಿಯ ಮಾತನ್ನು ಸ್ಮರಿಸುವ ದಿನವದು.

ಅದಿರಲಿ..ಸಂಕ್ರಮಣ ಮುಗಿದು ಒಂದು ವಾರದ ಮೇಲೆ ಸಂಪದದಲ್ಲಿ ಈ ಹಬ್ಬದ ಪ್ರಸ್ತಾಪ! ಸಂಪದಿಗರು ಹುಬ್ಬೇರಿಸಬಹುದು.

ಆದರೆ, ಸಂಕ್ರಾಂತಿಯ ಆಚರಣೆಯ ಕುರಿತು ಇಲ್ಲೊಂದು ವಿಶೇಷ ಹೊತ್ತು ತಂದಿದ್ದೇನೆ. ಅದೇನೆಂದರೆ..‘ವಾಕಿಂಗ್ ಬ್ಯಾಂಕರ್ ’ ಗಳೆಂದೇ ಪ್ರಸಿದ್ಧಿ ಪಡೆದಿರುವ ಕುರಿಗಾರರಿಗೂ ಇದೊಂದು ವಿಶೇಷ ಹಬ್ಬ. ಸದಾ ನೂರಾರು ಕುರಿಗಳನ್ನು ಬೆನ್ನಿಗೆ ಕಟ್ಟಿಕೊಂಡು ಹುಲ್ಲು, ನೀರು ಹಾಗು ತಮ್ಮ ಬದುಕು ಹೀಗೆಯೇ ಮೂರನ್ನೂ ಅರಸುತ್ತ ಹೋಗುವ ಇವರಿಗೆ ಯಾವ ಹಬ್ಬ ಆಚರಿಸಲು ಪುರುಸೊತ್ತು ಸಿಕ್ಕೀತು? ಆದರೂ ಸಂಕ್ರಮಣ ಸಂದರ್ಭದಲ್ಲಿ ವಿಶೇಷ ಪುರುಸೊತ್ತು ಮಾಡಿಕೊಂಡು ಅವರು ಕರ್ನಾಟಕದ ಬಯಲು ಸೀಮೆಯ ರೀತ್ಯಾ ಹಬ್ಬ ಆಚರಿಸುತ್ತಾರೆ.

ಛಳಿಗಾಲದಲ್ಲಿ ಕುರಿಯ ಉಣ್ಣೆಯನ್ನು ಕತ್ತರಿಸುವಂತಿಲ್ಲ. ಏಕೆಂದರೆ ಥಂಡಿಯಿಂದ ಬಳಲಿ, ನೆಗಡಿಯಾಗಿ ಇಡೀ ಟೋಳಿ ರೋಗ ಪೀಡಿತವಾಗುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಧನುರ್ಮಾಸದ ಮೈಕೊರೆಯುವ ಛಳಿಯಿಂದ ಕೊಂಚ ಮಟ್ಟಿಗೆ ಬಿಡುವು ಸಿಗುತ್ತಲೇ..ಸಮೀಪದ ಕೆರೆಗೆ ನೂರಾರು ಕುರಿಗಳನ್ನು ಹೊಡೆದು ಕೊಂಡು ತರುತ್ತಾರೆ. ಇಡೀ ಕುಟುಂಬ ಹೆಗಲೇರಿಸಿ, ತೋಳೇರಿಸಿ, ಕಚ್ಚಿ ಕಟ್ಟಿ ಅವುಗಳಿಗೆ ಸ್ನಾನ ಮಾಡಿಸಲು ಸಿದ್ಧರಾಗುತ್ತಾರೆ. ಹೆಣ್ಣು ಮಕ್ಕಳೆಲ್ಲ ಕೆರೆಯ ದಂಡೆಯ ಮೇಲೆ ನಿಂತು ಕುರಿ ಕಾಯ್ದರೆ..ಗಂಡಸರೆಲ್ಲ ಕೆರೆಗೆ ಇಳಿದು ನಿಲ್ಲುತ್ತಾರೆ. ಒಂದೊಂದೇ ಕುರಿ, ಟಗರು ಹಾಗು ಆಡುಗಳನ್ನು ಎತ್ತಿ ನೀರಿಗೆ ಎಸೆಯುತ್ತಾರೆ. ಏಕೆಂದರೆ ಅವು ಮಾತು ಕೇಳದ ತೀರ ಮೊಂಡು ಜಾತಿಯಂತೆ! ನೀರಿನಲ್ಲಿ ನಿಂತ ಗಟ್ಟಿ ಆಳು ತಿಕ್ಕಿ, ತಿಕ್ಕಿ ಮೈ ಉಜ್ಜಿ ಅವುಗಳನ್ನು ಸ್ವಚ್ಛಗೊಳಿಸುತ್ತಾನೆ.

ಅವುಗಳ ಚೀರಾಟ, ಕಣ್ತಪ್ಪಿಸುವಿಕೆ, ಕುರಿಗಾರನ ಹೆಣಗಾಟ, ಸಾಲದ್ದಕ್ಕೆ ಮೈ ತೊಳೆದು ಸ್ವಚ್ಛಗೊಳಿಸಲಾದ ಕುರಿ ಓಡಿ ಹೋಗಿ ಕೆರೆಯ ದಂಡೆಯ ಮಣ್ಣಿನಲ್ಲಿ ಬಿದ್ದು ಹೊರಳಾಡಿದಾಗ ಆಗುವ ಫಜೀತಿ ನೋಡಲು ಮಜವಾಗಿರುತ್ತದೆ. ನಾವು ನಮ್ಮ ಮಕ್ಕಳನ್ನು ಬಾತ್ ಟಬ್ ನಲ್ಲಿ ಕೂಡಿಸಿ, ಜಾನ್ಸನ್ ಬೇಬಿ ಸೋಪ್ ಹಚ್ಚಿ ನಯವಾಗಿ ತಿಕ್ಕಿ, ತೀಡಿ ಸ್ನಾನ ಮಾಡಿಸುವಷ್ಟೇ ಕಾಳಜಿಯಿಂದ ಕುರಿಗಾರ ತನ್ನ ಕುರಿಗಳಿಗೆ ಉಪಾಯದಿಂದ ಸ್ನಾನ ಮಾಡಿಸುತ್ತಾನೆ. ವ್ಯತ್ಯಾಸವಿಷ್ಟೇ ಶೀಗೆಕಾಯಿ ಪುಡಿ ಇವುಗಳ ಬಾತ್ ಸೋಪ್! ಮರಿಗಳಂತೂ ಬಿಡಿ..ತಾಯಿಯನ್ನು ಎತ್ತಿ ನೀರಿಗೆ ಬಿಸಾಕುತ್ತಲೇ ಹಿಂದೆ-ಮುಂದೆ ನೋಡದೇ ಅವು ಸಹ ನೀರಿಗೆ ಧುಮುಕಿ ಈಜುತ್ತವೆ. ಮರಿ ಕುರಿಗಾರ(ಮಗ/ಮಗಳು) ಅವುಗಳನ್ನು ಗಟ್ಟಿಯಾಗಿ ಹಿಡಿದು ಅಲ್ಲಿಯೇ ಮೈ ಉಜ್ಜಿ, ತಾಯಿಯೊಂದಿಗೆ ದಡಕ್ಕೆ ಸಾಗಿಸುತ್ತಾನೆ/ಳೆ.

ಸ್ನಾನವೆಂಬ ಸಂಸ್ಕಾರವಾದ ನಂತರ ೨-೩ ದಿನಗಳಲ್ಲಿ ಕುರಿಗಾರರು ಅವುಗಳನ್ನು ಸಾಂಕೇತಿಕವಾಗಿ ಪೂಜೆ ಮಾಡುತ್ತಾರೆ. ನಂತರ ಅವುಗಳ ಉಣ್ಣೆಯನ್ನು ಕತ್ತರಿಸುವ ಕೆಲಸಕ್ಕೆ ಅಣಿಯಾಗುತ್ತಾರೆ. ಏಕೆಂದರೆ ಬಿಸಿಲಿನ ತಾಪ ತಡೆಯಲು ಅವು ಶಕ್ತವಾಗಬೇಕು. ಹಾಗೆ ಕತ್ತರಿಸಿದ ಉಣ್ಣೆಯನ್ನು ಕ್ರೊಢೀಕರಿಸಿ, ಸಂಸ್ಕರಿಸಿ ಮಾರಾಟ ಮಾಡಲು ಸಿದ್ಧಗೊಳಿಸಲಾಗುತ್ತದೆ. ಇದು ಹೊಸ ಕುರಿಗಳ ಖರೀದಿಗೆ, ಹೊಸ ಬಟ್ಟೆ, ಬರೆ ಅಥವಾ ಊರಿನಲ್ಲಿ ಬಿಟ್ಟು ಬಂದ ಹಿರಿಯ ವಯೋವೃದ್ಧ ತಂದೆ-ತಾಯಂದಿರಿಗೆ ಹಣಕಾಸಿನ ನೆರವು ಒದಗಿಸಲು ಸಹಕಾರಿಯಾಗುತ್ತದೆ. ಈ ಹಣದಿಂದ ಈ ಬಾರಿ ಮೊಬೈಲ್ ಖರೀದಿಸಿರುವ ವಿಟ್ಠಲ್ ಅನಿಸಿಕೆ ಕೇಳಿ..

"ಹಿರ್ಯಾರ..ನಮಗ ಮೊಬಿಲ್ ನಿಂದ ಸಾಕಷ್ಟು ಫಾಯದೇ ಆಗೇತ್ರಿ..ಗಾಂವಠಾಣೆದಾಗ (ಊರಾಗ) ಆಚಿತ, ಉಚಿತ ಆದರ..ಪಾವಣ್ಯಾರ ಆಸರಕಿ, ಬ್ಯಾಸರಕಿ, ಅನುವು, ಆಪತ್ತಿಗೆ ಸದಾಕಾಲ ಸಂಚಾರದಲ್ಲಿರೋ ನಮಗ ಅನುಕೂಲ ಆಗೇತ್ರಿ" ಚಿಕ್ಕೋಡಿ ತಾಲ್ಲೂಕು ಆಡಿ ಗ್ರಾಮದ ವಿಠ್ಠಲ ಬೀರಪ್ಪ ಪಡವಾಳೆ ತನ್ನ ನಾಲ್ಕು ಬುಡ್ಡಿ ಅಂಗಿ (ಬನಿಯನ್) ಅವಿಭಾಜ್ಯ ಅಂಗವಾಗಿರುವ ಮೊಬೈಲ್ ತೋರಿಸಿ, ಎಲೆ-ಅಡಿಕೆ (ಕವಳ) ತಿಂದು ರಂಗೇರಿದ್ದ ತುಟಿಗಳಿಂದ ನಕ್ಕ.

ಮೂಲತ: ಚಿಕ್ಕೋಡಿ ತಾಲೂಕಿನ ಆಡಿ, ಪಟ್ಟಣಕೋಡಿ, ಹೊನ್ನೂರಿ ಹಾಗು ಸದಲಗಾ ತಾಲೂಕಿನ ಮಿಣಕನಟ್ಟಿ, ಬಾಳಕ್ಕಿ, ಚಂದಡ್ಡಿ ಮೊದಲಾದ ಗ್ರಾಮದವರಾದ ಉಣ್ಣೆ ಕಂಕಣ ಹಾಲುಮತದ ಕುರಿಗಾರರು ಇವರು. ಮರಾಠಿ ಮಾಧ್ಯಮದಲ್ಲಿ ಗಂಡು ಮಕ್ಕಳು ೭ ರಿಂದ ೮ನೇ ತರಗತಿಯ ವರೆಗೆ, ಹೆಣ್ಣು ಮಕ್ಕಳು ೩ ರಿಂದ ೪ನೇ ತರಗತಿಯ ವರೆಗೆ ಮಾತ್ರ ಶಾಲೆಯಲ್ಲಿ ಓದಿದವರು. ಅವಿಭಕ್ತ ಕುಟುಂಬ ಪದ್ಧತಿ ಪಾಲಿಸಿಕೊಂಡು ಬಂದವರು. ಝಂಡೆ ಕುರುಬ, ಢಂಗೆ ಕುರುಬ, ಬಿಳಿ ಉಣ್ಣೆ ಹತ್ತಿ ಕಂಕಣ ಕುರುಬ ಎಂದು ತಮ್ಮಲ್ಲೇ ಒಳ ಪಂಗಡ ಹೊಂದಿ, ಬೀರ ದೇವರು, ವಿಠ್ಠಲ ರುಕ್ಮಾಯಿ, ಮಹಾಲಿಂಗರಾಯ, ಮಾಯಮ್ಮ, ಬಾಳೊಮಾಮಾ ಮುಂತಾದ ದೇವರುಗಳನ್ನು ಶೃದ್ಧೆ, ಭಕ್ತಿಯಿಂದ ಆರಾಧಿಸುವವರು.

ಧೋತರ, ಮೂರು-ನಾಲ್ಕು ಬುಡ್ಡಿಗಳ ಅಂಗಿ, ಟೊಪಗಿ ಅಥವಾ ಪಟಗಾ, ಅಂಗವಸ್ತ್ರವಾಗಿ ಕಂಬಳಿ ಹೊದ್ದು ಸಾಂಪ್ರದಾಯಿಕ ದಿರಿಸಿನಲ್ಲಿದ್ದ ೭೦ರ ಆಸುಪಾಸಿನ ‘ದಡ್ಡಿ ಹಿರ್ಯಾ’ ಬೀರಪ್ಪ ಪಡುವಾಳೆ ಅವರನ್ನು ಮಾತನಾಡಿಸಿದಾಗ.."ನಾವು ಕಾಲು ಸಂಚಾರ ನಂಬಿದವರು. ಒಂದು ಠಿಕಾಣಿ ಅಂತ ಇಲ್ಲ. ಕುರಿಗೆ ಮೇವು, ಕುಡ್ಯಾಕ ನೀರು, ನಮಗ ಉಳಕೊಳ್ಳಾಕ ಬಯಲು ಸಿಕ್ಕಲ್ಲಿ ಝೋಪಡಿ ಹಾಕ್ತೇವಿ. ಇಂಥಾ ವೇಳ್ಯೆದಾಗ ಯಾವುದ ಮಾಹಿತಿ ಮುಜಕೂರ ಇದ್ರು ಸಿಗಾಣಿಲ್ರಿ" ಅಂದ್ರು. ಅಂದಹಾಗೆ ಕುರಿಗಾರರ ಈ ಆಚರಣೆ ಎಷ್ಟು ಐತಿಹಾಸಿಕವಾದದ್ದೋ, ಅವರು ಕುರಿಗಳಿಗೆ ಸ್ನಾನ ಮಾಡಿಸಿದ ಕೆರೆ ಸಹ ಅಷ್ಟೇ ಐತಿಹಾಸಿಕ ಮಹತ್ವವುಳ್ಳದ್ದು.

ರಾಷ್ಟ್ರ ಕಂಡ ಪ್ರತಿಭಾಶಾಲಿ ಇಂಜಿನೀಯರ್ ಭಾರತರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕನಸಿನ ಕೂಸು ಈ ಕೆಲಗೇರಿ ಕೆರೆ! ಆಶ್ಚರ್ಯವಾಯಿತೇ? ಕೆರೆಗಾಗಿ ಸೂಕ್ತ ಜಾಗೆ, ಮೇಲು ಸೇತುವೆ ಹಾಗು ಬಳಸುವ ವಿಧಾನ ಕುರಿತು ನೀಲನಕ್ಷೆ ತಯಾರಿಸಿದವರು ಅಂದಿನ ಮೈಸೂರು ಸಂಸ್ಥಾನದ ದಿವಾನರು, ಮೈಸೂರು ಸಂಸ್ಥಾನದ ‘ಸ್ಯಾನಿಟರಿ ಇಂಜಿನೀಯರ್’ ಸರ್ ಎಂ.ವಿ. ಅವರು.

ಅವರ ಕನಸನ್ನು ನನಸುಗೊಳಿಸಿದವರು ಬಹುತೇಕ ಬ್ರಿಟೀಷ ಇಂಜಿನೀಯರುಗಳಿದ್ದ ಸಮಿತಿ. ಕಾರ್ಯನಿರ್ವಾಹಕ ಅಭಿಯಂತರುಗಳಾದ ಜೆ.ಜಿ.ಛಾಪಮನ್, ಸಿ.ಡಿ.ಮ್ಯಾಕ್ಲೆವರ್, ಡಿ.ಆರ್.ಸತಾರ್ ವಾಲಾ, ಸೇರಿದಂತೆ ಸಹಾಯಕ ಅಭಿಯಂತರುಗಳಾದ ಎಚ್.ಜೆ.ಎಂ.ಕೌಸೆನ್ಸ್ ಹಾಗು ಬಾಲಾಜಿ ಬಾಬಜಿ. ಮಾರ್ಚ್ ೪, ೧೯೧೧. ಅಂದಿನ ಹಿರಿಯ ಶ್ರೇಣಿ ಐ.ಸಿ.ಎಸ್. ಅಧಿಕಾರಿ ಹಾಗು ಆಯುಕ್ತ ಎಂ.ಸಿ.ಗಿಬ್ಸ್. ಅಂದಿನ ಕಲೆಕ್ಟರ್ ಆಗಿದ್ದ ಐ.ಸಿ.ಎಸ್.ಅಧಿಕಾರಿ ಸಿ.ಡಬ್ಲೂ.ಏಂ.ಹಡ್ಸನ್ ಜೊತೆಗೆ ಕೆರೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಶಿಕ್ಷಣ ತಜ್ಞ ರಾವ್ ಬಹಾದ್ದೂರು ಎಸ್.ಕೆ.ರೊದ್ದ ವಿಧಿವತ್ ಆಗಿ ಕೆಲಗೇರಿ ಕೆರೆ ಉದ್ಘಾಟಿಸಿ ಲೋಕಾರ್ಪಣೆಗೈಯ್ದಿದ್ದರು.

೧.೩.೧೯೬೨ರ ವರೆಗೆ ಮುನ್ಸಿಪಲ್ ಬರೋ ಕಾರ್ಯನಿರ್ವಹಿಸುತ್ತಿತ್ತು. ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂತು. ಅಲ್ಲಿಯ ವರೆಗೆ ಧಾರವಾಡಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದ್ದುದು ಕೆಲಗೇರಿ ಕೆರೆಯಿಂದ. ೧೯೬೩ರ ಸುಮಾರಿಗೆ ಸವದತ್ತಿಯ ಮಲಪ್ರಭಾ ನದಿಯ ನೀರು ಅವಳಿ ನಗರಕ್ಕೆ ಕುಡಿಯಲು ಸರಬರಾಜಾಗತೊಡಗಿತು. ನಂತರ ಕೆಲವೇ ವರ್ಷಗಳಲ್ಲಿ ಕೃಷಿ ವಿಶ್ವವಿದ್ಯಾಲಯದ ಸುಪರ್ದಿಗೆ ಈ ಕೆರೆಯನ್ನು ವಹಿಸಿಕೊಡಲಾಯಿತು. ಇಂದಿಗೂ ಇದೇ ಚಾಲ್ತಿಯಲ್ಲಿದೆ. ಕೆರೆಯ ಒಳ ಹರಿವಿನ ನಾಲ್ಕೂ ದಿಕ್ಕುಗಳಲ್ಲಿ ರಾಜಾರೋಷವಾಗಿ ಕೆರೆಯ ಅತಿಕ್ರಮಣ ನಡೆಯುತ್ತಿದೆ, ಮನೆಗಳನ್ನು ಕಟ್ಟಲಾಗುತ್ತಿದೆ, ‘ಕ್ಯಾಚ್ ಮೆಂಟ್’ ಪ್ರದೇಶ ಇನ್ನಿಲ್ಲವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದರೂ ‘ಸಂಬಂಧಪಟ್ಟವರು’ ತಲೆ ಕಡಿಸಿಕೊಂಡಿಲ್ಲ!

ಈ ಲೇಖನವನ್ನು ವಾರಕ್ಕೊಮ್ಮೆ..ಅದೂ ಸಮಯ ಸಿಕ್ಕರೆ, ಒಲ್ಲದ ಮನಸ್ಸಿನಿಂದ ಸ್ನಾನ ಮಾಡುವ ನನ್ನ ಗೆಳೆಯ ಲಿಂಗರಾಜನಿಗೆ ಅರ್ಪಿಸಿದ್ದೇನೆ! ಅವನ ಬಾಳಿನಲ್ಲಿಯೂ ಹೀಗೆ ಸಂಕ್ರಮಣ ಬರಲಿ..ಯಾರದರೂ ತರಲಿ ಎಂದು ಆಶಿಸುತ್ತೇನೆ.