ಸಿಡಿಜಾತ್ರೆ -ಒಂದು ಜಾನಪದ ಹಬ್ಬ

ಸಿಡಿಜಾತ್ರೆ -ಒಂದು ಜಾನಪದ ಹಬ್ಬ

ಬರಹ

ಮಾರ್ಚ್ ೨೧ ಕ್ಕೆ ನಮ್ಮೂರಿನಲ್ಲಿ ಸಿಡಿ ಜಾತ್ರೆ. ಹಾಸನ ಜಿಲ್ಲೆಯ ಹೊಳೇನರಸೀಪುರ ದ ಸಮೀಪ ಹರಿಹರಪುರ ನನ್ನ ಊರು. ಸಿಡಿ ಚಿತ್ರವನ್ನು ನೋಡಿದ ಮೇಲೆ ಅದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳ ಬೇಕೆಂಬ ಕುತೂಹಲ ಯಾರಿಗಾದರೂ ಇದ್ದೀತು. ಅದಕ್ಕಾಗಿ ಒಂದಿಷ್ಟು ಮಾಹಿತಿ ಇಲ್ಲಿದೆ.
ದಂತಕಥೆ:
ಒಮ್ಮೆ ಹರಿಹರಪುರಕ್ಕೆ ಸೇರಿದ ಚಾಕೇನಹಳ್ಳಿ ಗ್ರಾಮದ ಹರಿಜನ ಸಮುದಾಯದ ಕೆಲವು ಬಡ ಕುಟುಂಬದವರು ತಮ್ಮ ಹಸಿವು ನೀಗಲು ದಾರಿಕಾಣದೆ ಒಬ್ಬ ಶ್ರೀಮಂತ ಜಮೀನ್ದಾರನ ಕಣದಲ್ಲಿ ಒಟ್ಟಿದ್ದ ಬತ್ತದ ಮೂಟೆಯನ್ನು ಕದ್ದು ಎತ್ತಿನ ಗಾಡಿಯಲ್ಲಿ ತುಂಬಿರಾತ್ರಿ ವೇಳೆಯಲ್ಲಿ ತಮ್ಮೂರಿಗೆ ಸಾಗಿಸುತ್ತಾರೆ.ಬೆಳಗಾಗೆದ್ದು ಜಮೀನ್ದಾರ ಕಣಕ್ಕೆ ಬರುತ್ತಾನೆ. ಒಟ್ಟಿದ್ದ ಬತ್ತದ ಮೂಟೆ ನಾಪತ್ತೆ. ಸರಿ, ಹೊಳೇನರಸೀಪುರಕ್ಕೆ ಹೋಗಿ ಪೋಲೀಸರಲ್ಲಿ ದೂರು ದಾಖಲಿಸುತ್ತಾನೆ.ಪೋಲೀಸರು ಬರುತ್ತಾರೆ. ತನಿಖೆ ಶುರುಮಾಡುತ್ತಾರೆ. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಕಣದಿಂದ ಗಾಡಿಯಚಕ್ರ ಹರಿದಾಡಿರುವ ಗುರುತು ಹಿಡಿದು ಹೊರಡುತ್ತಾರೆ. ಅದು ಚಾಕೇನಹಳ್ಳಿಯೆಡೆಗೆ ಸಾಗಿದೆ. ಇತ್ತ ಬತ್ತ ಕದ್ದವರಿಗೆ ನಡುಕ ಪ್ರಾರಂಭವಾಗುತ್ತದೆ. ಒಂದು ನಿರ್ಧಾರಕ್ಕೆ ಬರುತ್ತಾರೆ. ನಾವೆಲ್ಲಾ ನಂಬಿರುವುದು ತಾಯಿ ಹಲ್ಪುರದಮ್ಮನನ್ನು[ದೇವಿ ಉಡುಸಲಮ್ಮ] ನಮಗೆ ಅವಳು ಅನ್ನ ಕೊಟ್ಟಿದ್ದರೆ ನಮಗೇಕೆ ಕಳ್ಳತನ ಮಾಡುವ ಸ್ಥಿತಿ ಬರುತ್ತಿತ್ತು? ಈಗ ಮಕ್ಕಳನ್ನು ಕಾಪಾಡಬೇಕಾದ್ದು ತಾಯಿಯ ಹೊಣೆ.ಎಲ್ಲರೂ ಪಕ್ಕದ ಹೆಬ್ಬಳ್ಳದಲ್ಲಿ ಮಿಂದು ಕೈ ಮುಗಿದು ದೇವಿಯಲ್ಲಿ ಬೇಡುತ್ತಾರೆ" ನಮ್ಮ ಹಸಿವುತಾಳಲಾರದೆ ಜಮೀನ್ದಾರರ ಬತ್ತ ನಾವು ಕದ್ದಿದ್ದೇವೆ. ನಮ್ಮ ಮಾನ- ಪ್ರಾಣ ಈಗ ನಿನ್ನ ಕೈಲಿದೆ. ನೀನೇ ಕಾಪಾಡ ಬೇಕು, ನೀನು ನಮ್ಮನ್ನು ಕಾಪಾಡಿದರೆ ನಮ್ಮ ವಂಶಪಾರಂಪರ್ಯವಾಗಿ ನಿನ್ನ ಜಾತ್ರೆಯಲ್ಲಿ ಸಿಡಿ ಶೂಲಕ್ಕೇರುತ್ತೇವೆ." ತಾಯಿಯಲ್ಲಿ ಅಚಲ ಭಕ್ತಿಯಿಂದ ಪ್ರಾರ್ಥಿಸಿ ಮನೆಗೆ ಹಿಂದಿರುಗುತ್ತಾರೆ.
ತನಿಖೆಗಾಗಿ ಬಂದಿದ್ದ ಪೋಲೀಸರಿಗೆ ಹರಿಹರಪುರದಿಂದ ಚಾಕೇನಹಳ್ಳಿಗೆ ಹೋಗುವ ಮಾರ್ಗದಲ್ಲಿ ಗಾಡಿಜಾಡಿನಲ್ಲಿ ಅಲ್ಲಲ್ಲಿ ಭತ್ತದಕಾಳುಗಳು ಚೆಲ್ಲಿರುವುದನ್ನು ಕಂಡು ಸುಳಿವು ಸಿಕ್ಕಿತೆಂಬ ಖುಷಿಯಲ್ಲಿ ಚಾಕೇನಹಳ್ಳಿಗೆ ಬಂದು ಭತ್ತ ಕದ್ದವರ ಮನೆಯನ್ನು ತಪಾಸಣೆ ನಡೆಸುತ್ತಾರೆ. ಅಟ್ಟದಲ್ಲಿ ಪೇರಿಸಿದ್ದ ಭತ್ತದ ಮೂಟೆಯನ್ನು ಕಂಡವರೇ ಮನೆಯಲ್ಲಿದ ಪುರುಷರನ್ನೆಲ್ಲಾ ವಷಕ್ಕೆ ತೆಗೆದು ಕೊಳ್ಳುತ್ತಾರೆ. ಭತ್ತದ ಮೂಟೆಗಳನ್ನೆಲ್ಲಾ ತಪಾಸಣೆ ಮಾಡುತ್ತಾರೆ. ಎಲ್ಲಾ ಮೂಟೆಯಲ್ಲೂ ಕೆಂಪು ಭತ್ತ ತುಂಬಿದೆ.
ಇದೇನಾಷ್ಚರ್ಯ!! ಪೋಲೀಸರು ಜಮೀನ್ದಾರನ ಕಣದಲ್ಲಿ ಕಂಡಿದ್ದು ಬಿಳಿಯ ಸಣ್ಣ ಭತ್ತ. ಆದರೆ ಇಲ್ಲಿರುವುದು ಕೆಂಪು ದಪ್ಪ ಭತ್ತ. ಕದ್ದವರಿಗೂ ಆಷ್ಚರ್ಯ. ತನಿಖೆಗಾಗಿ ಬಂದ ಪೋಲೀಸರು ಕಕ್ಕಾಬಿಕ್ಕಿ. ಬಂದ ದಾರಿಗೆ ಸುಂಕವಿಲ್ಲವೆಂದು ಪೋಲೀಸರು ಹಿಂದಿರುಗುತ್ತಾರೆ.ತಾಯಿ ಕಾಪಾಡಿರುತ್ತಾಳೆ.ಅಂದಿನಿಂದ ಸಿಡಿ ಜಾತ್ರೆ ನಡೆದುಬಂದಿದೆ ಎಂಬುದು ಪ್ರತೀತಿ.[ಮುಂದುವರೆಯುವುದು]

ಜಾತ್ರೆಯ ಹೆಚ್ಚಿನ ಚಿತ್ರಗಳನ್ನು  ಈ ಕೊಂಡಿಯಲ್ಲಿ ನೋಡಿ

http://www.hariharapurasridhar.wordpress.com/