ಆರೋಗ್ಯ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಯ ತಾಣದಲ್ಲಿ ಸೌಕರ್ಯ
ಬರಹ
ಆರೋಗ್ಯ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಯ ತಾಣದಲ್ಲಿ ಸೌಕರ್ಯ
ಣಿಪಾಲ ಆಸ್ಪತ್ರೆಯ ಅಂತರ್ಜಾಲ ತಾಣದಲ್ಲಿ ಕಾಯಿಲೆಯ ಲಕ್ಷಣಗಳ ಆಧಾರದ ಮೇಲೆ ಕಾಯಿಲೆಯೇನಿರಬಹುದು ಎಂದು ತಿಳಿಸುವ ವ್ಯವಸ್ಥೆಯಿದೆ.ಅಂತರ್ಜಾಲ ತಾಣಕ್ಕೆ http://www.manipalhealth.comನಲ್ಲಿ symptom checker ಎನ್ನುವ ಕೊಂಡಿಯನ್ನು ಕ್ಲಿಕ್ಕಿಸಿದರೆ ಸರಿ.ಈಗ ತೆರೆದುಕೊಳ್ಳುವ ಪುಟದ ಲಿಪಿ ಪೆಟ್ಟಿಗೆಯಲ್ಲಿ ಕಾಯಿಲೆಯ ಲಕ್ಷಣಗಳನ್ನು ಒಂದೊಂದಾಗಿ ಟೈಪಿಸಬೇಕು. ಮೂರು ಕೀಲಿಗಳನ್ನು ಒತ್ತಿದೊಡನೆ ಈ ನೀವು ಟೈಪಿಸುತ್ತಿರುವ ಪದ ಏನಿರಬಹುದೆಂದು ಊಹಿಸಿ, ಸಂಭವನೀಯ ಪದಗಳ ಪಟ್ಟಿಗಳನ್ನು ಪ್ರದರ್ಶಿಸುವ ಮೂಲಕ ಬಳಕೆದಾರನಿಗೆ ಸಹಾಯ ಮಾಡುವ ಸೌಲಭ್ಯ ಇಲ್ಲಿದೆ.ಎಲ್ಲ ಲಕ್ಷಣಗಳನ್ನು ಪಟ್ಟಿ ಮಾಡಿದ ನಂತರ ಕುರುಹುಗಳನ್ನು ಪರೀಕ್ಷಿಸು ಎನ್ನುವ ಗುಂಡಿಯನ್ನು ಒತ್ತಿದರೆ,ಸಂಭವನೀಯ ಕಾಯಿಲೆಗಳ ಪಟ್ಟಿಯನ್ನು ಪ್ರದರ್ಶಿಸುವ ವ್ಯವಸ್ಥೆ ಇಲ್ಲಿದೆ.ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆಯನ್ನು ತಿಳಿಸುವ ಅಥವ ಹೆಚ್ಚಿನ ವಿವರಗಳನ್ನು ಮಿಂಚಂಚೆಯನ್ನು ನೀಡುವ ಮೂಲಕ ತಿಳಿದುಕೊಳ್ಳಬಹುದು.
http://healthcaremagic.com/ ಎನ್ನುವ ಅಂತರ್ಜಾಲ ತಾಣದಲ್ಲಿ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರ ಜತೆ ಚರ್ಚಿಸುವ ಸೌಲಭ್ಯವೂ ಇದೆ. ನಿಮ್ಮ ತೊಂದರೆಗಳಿಗೆ ಇರುವ ಪರಿಹಾರೋಪಾಯಗಳನ್ನೂ ಚರ್ಚಿಸುವ ಸೌಕರ್ಯ ಇಲ್ಲಿದೆ.ಪ್ರಾಯೋಗಿಕ ಸೇವೆ ಉಚಿತವಾಗಿಯೇ ಲಭ್ಯವಿದೆಯಾದರೂ, ಮರು ಬಳಕೆಗೆ ಶುಲ್ಕ ನೀಡಬೇಕಾಗುತ್ತದೆ.
----------------------------------------------------------------------
ನಿಟ್ಟೆಯಲ್ಲಿ ಮೂರನೇಯ ಗ್ನೂ/ಲಿನಕ್ಸ್ ಹಬ್ಬ
ಸಂಪದ ಬಳಗದ ತಂತ್ರಜ್ಞರು ಆಯೋಜಿಸಿರುವ ಮೂರನೆಯ ಲಿನಕ್ಸ್ ಹಬ್ಬವು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ.ಫೆಬ್ರವರಿ ಏಳನೇ ತಾರೀಕು ಶನಿವಾರ ನಿಟ್ಟೆಯಲ್ಲಿ ನಡೆಯಲಿರುವ ಹಬ್ಬಕ್ಕೆ ಪ್ರವೇಶ ಮುಕ್ತ.ಮುಕ್ತ ತಂತ್ರಾಂಶ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಬಳಸಿಕೊಂಡು,ತಂತ್ರಾಂಶ ಚೌರ್ಯಕ್ಕೆ ವಿದಾಯ ಹೇಳಲು ಜನರಿಗೆ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ನೆರವಾಗುವುದು ಕಾರ್ಯಕ್ರಮದ ಮುಖ್ಯ ಉದ್ದೇಶ.ಸ್ಥಳದಲ್ಲೇ ಲಿನಕ್ಸ್ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಅನುಸ್ಥಾಪಿಸಲು ಸಹಾಯ ನೀಡಲಾಗುತ್ತದೆ.ದೈನಂದಿನ ಕಂಪ್ಯೂಟರ್ ಬಳಕೆಗೆ ಬೇಕಾಗುವ ತಂತ್ರಾಂಶಗಳ ಬಗ್ಗೆ ಮಾಹಿತಿ ಮತ್ತು ಅವುಗಳ ಬಳಕೆಯ ಬಗ್ಗೆ ಪ್ರದರ್ಶನವೂ ಇರುತ್ತದೆ.ಕಾರ್ಯಕ್ರಮದಲ್ಲಿ ಭಾಗವಹಿಸಲು http://habba.in ತಾಣದಲ್ಲಿ ನೋಂದಾಯಿಸಿಕೊಳ್ಳಬಹುದು.
---------------------------------------------------------------------------
ಬಡತನ ರೇಖೆ ಕೆಳಗಿರುವ ಜನರಿಗೆ ಉಚಿತ ಸೆಲ್‌ಫೋನ್?
ಹ್ಯಾಂಡ್‌ಸೆಟ್ ತಯಾರಕರು ಬಡತನ ರೇಖೆಯ ಕೆಳಗಿರುವ ಜನರಿಗೆ ಉಚಿತ ಹ್ಯಾಂಡ್‌ಸೆಟ್ ನೀಡಲು ಐದು ಸಾವಿರ ಕೋಟಿ ಸಬ್ಸಿಡಿಗಾಗಿ ಯು ಎಸ್ ಓ ನಿಧಿಗಾಗಿ ಆಗ್ರಹಿಸಿದ್ದಾರೆ.ಐವತ್ತು ದಶಲಕ್ಷ ಜನರಿಗೆ ಉಚಿತ ಸೆಲ್‌ಫೋನ್ ಮತ್ತು ತಿಂಗಳಿಗೆ ನೂರು ಉಚಿತ ಕರೆಗಳನ್ನು ನೀಡುವ ಮೂಲಕ ಅವರು ಪ್ರಯಾಣಕ್ಕೆ ವ್ಯಯಿಸುವ ಹಣವನ್ನು ಕಡಿತ ಮಾಡುವುದು ಮತ್ತು ಅವರಿಗೆ ಅವಶ್ಯಕ ಮಾಹಿತಿಗಳನ್ನು ಒದಗಿಸುವುದು ಯೋಜನೆಯಲ್ಲಿ ಸೇರಿದೆ.ಹ್ಯಾಂಡ್‌ಸೆಟ್‍ಗಳಲ್ಲಿ ರೇಡಿಯೋವನ್ನೂ ಲಭ್ಯವಾಗಿಸಿ, ಜನರು ಮಾಹಿತಿಯನ್ನು ಪಡೆಯಲು ನೆರವಾಗುವ ಉದ್ದೇಶವೂ ಇದೆ.ಸೋನಿ ಎರಿಕ್ಸನ್, ನೋಕಿಯ ಸೇರಿದಂತೆ ಹಲವು ಹ್ಯಾಂಡ್‌ಸೆಟ್ ತಯಾರಕರು ಈ ಬೇಡಿಕೆ ಮಂಡಿಸಿದ ಇಂಡಿಯನ್ ಸೆಲ್ಯುಲರ್ ಅಸೋಸಿಯೇಶನ್‌ನಲ್ಲಿ ಸೇರಿದ್ದಾರೆ.
-------------------------------------------------------------------------
ಅಂತರ್ಜಾಲವಿರದಾಗಲೂ ಜಿಮೇಲ್

ಅಂತರ್ಜಾಲ ಆಧಾರಿತ ಮಿಂಚಂಚೆ ಸೇವೆಯ ಸಮಸ್ಯೆಯೆಂದರೆ,ಅಂತರ್ಜಾಲ ಸಂಪರ್ಕವಿಲ್ಲದಾಗ, ನಿಮ್ಮ ಮಿಂಚಂಚೆಗಳನ್ನು ಓದಲಾಗಲಿ ಅಥವ ಹೊಸ ಸಂದೇಶಗಳನ್ನು ಓದಲಾಗಲಿ ಆಗುವುದಿಲ್ಲ.ಔಟ್‌ಲುಕ್ ಅಂತಹ ತಂತ್ರಾಂಶ ಬಳಸುವುದು ಇದಕ್ಕೆ ಒಂದು ಪರಿಹಾರ. ಇಂತಹ ತಂತ್ರಾಂಶ ಇದ್ದರೆ,ಹೊಸ ಸಂದೇಶವನ್ನು ರಚಿಸಲು ಅಂತರ್ಜಾಲ ಸಂಪರ್ಕ ಬೇಕಿಲ್ಲ. ಕಂಪ್ಯೂಟರಿಗೇ ಬಂದ ಸಂದೇಶಗಳನ್ನು ಇಳಿಸಿಕೊಳ್ಳುವ ಈ ತಂತ್ರಾಂಶ,ಹಳೆಯ ಸಂದೇಶಗಳನ್ನು ಕಂಪ್ಯೂಟರಿನಲ್ಲಿಯೇ ಉಳಿಸಿಕೊಳ್ಳುತ್ತದೆ.ಈಗ ಜಿಮೇಲ್ ಬಳಕೆದಾರರಿಗೆ ಅಂತರ್ಜಾಲವಿಲ್ಲದಾಗ ಹಳೆಯ ಮಿಂಚಂಚೆ ಓದುವ, ಹೊಸ ಸಂದೇಶ ರಚಿಸುವ ಸೌಲಭ್ಯವನ್ನು ಗೂಗಲ್ ನೀಡಲಿದೆ.ಈ ಸೌಕರ್ಯ ಪಡೆಯಲು ಜಿಮೇಲ್‌ನ ಗೂಗಲ್ ಲ್ಯಾಬ್ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಗೂಗಲ್ ಗೇರ್ ಅನುಸ್ಥಾಪಿಸಿಕೊಳ್ಳಿ. ನಂತರ ಮಿಂಚಂಚೆಯನ್ನು ಅಂತರ್ಜಾಲ ಸಂಪರ್ಕವಿಲ್ಲದಾಗಲೂ ಓದಲು,ರಚಿಸಲು ಸಾಧ್ಯ.
-----------------------------------------------------------
ನೀರಿನ ಮಟ್ಟಿಗೆ ದಿವಾಳಿಯಾಗಲಿರುವ ಭೂಮಿ
ಜಗತ್ತಿನ ಇಂಧನ ಮೂಲಗಳು ಬತ್ತುವ ಮೊದಲೇ ನೀರಿನ ಮೂಲಗಳು ಬತ್ತಿದರೆ ಅಚ್ಚರಿಯಿಲ್ಲ ಎಂದು ಜಾಗತಿಕ ಆರ್ಥಿಕ ವೇದಿಕೆಯ ವರದಿ ಎಚ್ಚರಿಸಿದೆ.ಇನ್ನು ಇಪ್ಪತ್ತು ವರ್ಷಗಳಲ್ಲಿ ನೀರಿನ ಕೊರತೆಯಿಂದ, ಬಹುಪಾಲು ಧಾನ್ಯ ಬೆಳೆ ವಿಫಲವಾಗಬಹುದು ಎಂದು ತಜ್ಞರ ಅಭಿಮತ.ನೀರಿನ ಪೂರೈಕೆ ವಿಧಿಸಲಾಗಿರುವ ಅಗ್ಗದ ದರ,ಮತ್ತು ಏರುತ್ತಿರುವ ಬಳಕೆ ನೀರಿನ ಕ್ಷಾಮಕ್ಕೆ ಕಾರಣವಾಗಲಿದೆ.ಹಿಮಾಲಯದ ಹಿಮರಾಶಿ ಮತ್ತು ಹೆಚ್ಚಿನ ನದಿಮೂಲಗಳು 2100ರ ವೇಳೆ ಬತ್ತಿ ಹೋಗಲಿವೆ.ನೀರಿನ ಮಿತ ಬಳಕೆ,ನೀರಿನ ಬಗ್ಗೆ ಜಾಗೃತಿ,ನೀರಿನ ಮರುಪೂರಣದಂತಹ ಕ್ರಮಗಳು ಮಾತ್ರ ಇಂತಹ ನೀರಿನ ಕ್ಷಾಮಕ್ಕೆ ತುತ್ತಾಗುವುದನ್ನು ತಪ್ಪಿಸಬಲ್ಲುವು.
--------------------------------------------------------------------------------
ಇಸ್ರೋ ನಿರ್ಮಿಸಿದ ಉಪಗ್ರಹ ವಿಫಲ
ಇಸ್ರೋವು ಯುಟೆಲ್ಸಾಟ್‌ಗಾಗಿ ನಿರ್ಮಿಸಿದ W2M ಉಪಗ್ರಹದಲ್ಲಿ ಅನಿರೀಕ್ಷಿತ ತೊಂದರೆಗಳು ಕಾಣಿಸಿಕೊಂಡಿದೆ.ಹದಿನೈದು ವರ್ಷ ಬಾಳಬೇಕಿದ್ದ ಉಪಗ್ರಹ ಒಂದು ತಿಂಗಳಲ್ಲೇ ವಿದ್ಯುತ್ ವೈಫಲ್ಯಕ್ಕೆ ತುತ್ತಾಗಿ,ಕೈಕೊಟ್ಟಿದೆ.ಈಗ ಯುಟೆಲ್ಸಾಟ್ ತನ್ನ ಸಂಪರ್ಕ ಅಗತ್ಯಗಳಿಗಾಗಿ ತನ್ನ ಹಳೆಯ ಉಪಗ್ರಹ W2ವನ್ನು ಅವಲಂಬಿಸಬೇಕಿದೆ.ಮುಂದಿನ ಉಪಗ್ರಹವನ್ನದು 2010ರ ವೇಳೆಗಷ್ಟೇ ಬಾಹ್ಯಾಕಾಶಕ್ಕೆ ಕಳುಹಿಸಲಿದೆ.ಈ ಉಪಗ್ರಹ ನಿರ್ಮಿಸಿ ಆರಂಭಿಕ ನಿಯಂತ್ರಣ ಸೇವೆ ನೀಡಿದ್ದಕ್ಕಾಗಿ ಇಸ್ರೋ ನೂರಾರುವತ್ತೈದು ಕೋಟಿ ರೂಪಾಯಿ ಪಡೆದಿತ್ತು.ಉಪಗ್ರಹ ನಿರ್ಮಿಸಿ ಕೊಡುವ ಗುತ್ತಿಗೆ ಪಡೆಯುವುದರ ಮೇಲೆ ಕಣ್ಣಿರಿಸಿದ್ದ ಇಸ್ರೋಗೆ ಇದು ಹಿನ್ನಡೆಯಾಗಿ ಕಾಡಲಿದೆ.
-----------------------------------------------------------------------
ಅಶೋಕ್‌ಕುಮಾರ್ ಎ