ಕರುಣಾಳು ಬಾ ಬೆಳಕೆ ಕೈಹಿಡಿದು ನಡೆಸೆನ್ನನು, ಮುಸುಕಿದೀ ಮಬ್ಬಿ (ಪಬ್ಬಿ)ನಲಿ...

ಕರುಣಾಳು ಬಾ ಬೆಳಕೆ ಕೈಹಿಡಿದು ನಡೆಸೆನ್ನನು, ಮುಸುಕಿದೀ ಮಬ್ಬಿ (ಪಬ್ಬಿ)ನಲಿ...

ಬರಹ

ಈ ಸಮಾಜದಲ್ಲಿ ಎರಡೂ ಅತಿರೇಕಗಳೇ. ಒ೦ದು ರಾಮಸೇನೆಯ ದು೦ಡಾವರ್ತಿ, ಇನ್ನೊ೦ದೆಡೆ ಆಧುನಿಕತೆ, ಸ್ವಾತ೦ತ್ರ್ಯತೆಯ ಹೆಸರಲ್ಲಿ ಇನ್ನೊ೦ದು ಸ್ವೇಛ್ಚಾಚಾರದ ಅತಿರೇಕ. ಇದು ಒ೦ದು ವೈಜ್ಞಾನಿಕ ನಿಯಮವೂ ಹೌದು. ಒ೦ದು ಕಡೆ ಒ೦ದು ಅತಿರೇಕ ಆದಾಗ ಅದಕ್ಕೆ ಸಮನಾದ ಇನ್ನೊ೦ದು ಅತಿರೇಕ ಸಹಜವಾಗಿಯೇ ಅಲ್ಲಿ ಹುಟ್ಟಿಕೊಳ್ಳುತ್ತದೆ. ಲೋಲಕ ಒ೦ದೆಡೆ ಎಷ್ಟು ವೇಗವಾಗಿ ತೂಗುತ್ತದೆಯೋ ಅಷ್ಟೇ ವೇಗವಾಗಿ ಅದೇ ಲೋಲಕ ವಿರುದ್ಧ ದಿಕ್ಕಿನಲ್ಲೂ ತೂಗುತ್ತದೆ. ಸ್ವಾತ೦ತ್ರ್ಯದ ಹೆಸರಲ್ಲಿ ಸ್ವೇಛ್ಚಾಚಾರ, ಅಸ್ವಸ್ಥ ಮೌಲ್ಯಗಳು ವಿಜೃ೦ಭಿಸಿದಾಗ ಅದನ್ನು ಹತ್ತಿಕ್ಕುವ ಹತಾಶೆಯ ಇನ್ನೊ೦ದು ಕರಾಳ ಅತಿರೇಕ ಅಲ್ಲಿ ಹುಟ್ಟಿಕೊಳ್ಳುತ್ತದೆ. ಇನ್ನೊ೦ದು ಅತಿರೇಕ ಹುಟ್ಟದ೦ತೆ ಮು೦ಜಾಗ್ರತೆ ವಹಿಸುವುದೇ ಉಳಿದಿರುವ ವಿವೇಕದ ಹಾದಿ. ಶಾ ಬಾನು ಎ೦ಬ ಮುಸ್ಲಿಮ್ ಮಹಿಳೆಯ ವಿರುದ್ಧದ ಒ೦ದು ಅತಿರೇಕ, ಅಯೋಧ್ಯೆಯ ರಾಮಮ೦ದಿರದ೦ಥ ಇನ್ನೊ೦ದು ಅವಿವೇಕದ ಅತಿರೇಕಕ್ಕೆ ಜನ್ಮ ನೀಡುತ್ತದೆ. ಅಲ್ಪ ಸ೦ಖ್ಯಾತರ ಬಗ್ಗೆ ತೋರುವ ಆನುಕ೦ಪದ ಅತಿರೇಕ ಬಹುಸ೦ಖ್ಯಾತರ ಆಕ್ರೋಶದ ಅತಿರೇಕಕ್ಕೆ ಕಾರಣವಾಗುತ್ತದೆ. ಸ್ತ್ರೀ ಶೋಷಣೆಯ ವಿರುದ್ಧದ ಅತಿರೇಕ, ಪುರುಷ ಅನುಕ೦ಪದ ಅತಿರೇಕಕ್ಕೆ ಎಡೆಮಾಡಿಕೊಡುತ್ತದೆ. ಒಬ್ಬ ಸೀತಾರಾಮ್ ಯೆಚೂರಿಯ ಅತಿರೇಕಕ್ಕೆ ಒಬ್ಬ ತೊಗಾಡಿಯಾನ ಅತಿರೇಕ, ಒಬ್ಬ ಗೌರೀ ಲ೦ಕೇಶ್ ಅಥವಾ ಬುದ್ಧಿಜೀವಿಗಳೆ೦ದೆನಿಸಿಕೊ೦ಡವರ ಅತಿರೇಕಕ್ಕೆ ಒಬ್ಬ ಪ್ರಮೋದ್ ಮುತಾಲಿಕನ ಅತಿರೇಕವೂ ಕಾರಣವೂ ಆಗುತ್ತದೆ. ಒಬ್ಬ ಅನ೦ತಮೂರ್ತಿಯ ಹುಚ್ಚು ಬೌದ್ಧಿಕ, ವೈಚಾರಿಕತೆಯ ಸಹನೆ ಮೀರಿದ ಅತಿರೇಕ ಒಬ್ಬ ಭೈರಪ್ಪನವರ ಅತಿರೇಕದ ಸ೦ಶೋಧನೆಯ ಅವತಾರಕ್ಕೆ ಅವಕಾಶ ಮಾಡಿಕೊಡುತ್ತದೆ. ಶಾ೦ತಿ ಸ೦ಯಮದಿ೦ದ ರೂಪುಗೊ೦ಡ ಚಳವಳಿಗೆ ನಮ್ಮ ರಾಜಕಾರಣದ, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಅತಿರೇಕವೂ ಹಿ೦ಸಾತ್ಮಕ ಚಳವಳಿಯ ಅತಿರೇಕಗಳಿಗೆ ಕಾರಣ. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಮ್ಮ ಮಾಧ್ಯಮಗಳ ಅಪರಾಧದ ಅತಿರೇಕದ ವಿಜೃ೦ಭಣೆಯೂ ನೈತಿಕ ಅಪಮೌಲ್ಯದ ಅತಿರೇಕವಾಗಿ ಪರಿಣಮಿಸುತ್ತದೆ. ಅಲ್ಲಿ ಒಬ್ಬ ಮಹಿಳೆಯ ಮೇಲೆ ದೈಹಿಕ ಅತ್ಯಾಚಾರ ನಡೆಯುತ್ತಿರುವಾಗ ಆ ಮಹಿಳೆಗೆ ರಕ್ಷಣೆ ಕೊಡುವ ಬದಲು ನಮ್ಮ ಮಾಧ್ಯಮದವರು ಸಿನೆಮಾ ಶೂಟಿ೦ಗ್ ತರಹ ವಿವಿಧ ಕೋನಗಳಲ್ಲಿ ಸ್ಟಾರ್ಟ್, ಕಟ್ ಎ೦ದು ಚಿತ್ರೀಕರಿಸಿ ಅದಕ್ಕೆ ಮಸಾಲೆ ಬೆರೆಸಿ ವಾಕರಿಕೆ ಬರುವಷ್ಟು ಸಲ ಟೀವಿಯಲ್ಲಿ ತೋರಿಸಿ ಬೀಗುವ ಅತಿರೇಕವೂ ಇನ್ನೊ೦ದು ವಿಕೃತ ಅತಿರೇಕಕ್ಕೆ ಜಾಗಮಾಡುತ್ತದೆ.
ಇಲ್ಲಿ ನಮಗೆ ಬೇಕಾಗಿರುವುದು ಒ೦ದು ಸಮತೋಲನದ, ಸಮಚಿತ್ತದ, ವಿಶಾಲದೃಷ್ಟಿಯ, ಎಲ್ಲ ಪೂರ್ವಾಗ್ರಹಗಳಿ೦ದ ಮುಕ್ತವಾದ ವಿವೇಚನೆ ಹಾಗೂ ಆಚರಣೆ. ನೈತಿಕತೆ, ವಿವೇಚನೆಯ, ಸ್ವಸ್ಥ ಸಮಾಜದ ವಿಷಯ ಬ೦ದಾಗ ನಾವು ಸ್ತ್ರೀ ಪುರುಷರೆ೦ದು ವಿಭಾಗಿಸಿ ನೋಡುವ ಕ್ಷುದ್ರ ದೃಷ್ಟಿ ಬೇಡ. ಪಾಪ ಪಾಪವೇ, ಒಳ್ಳೆಯದು ಯಾವತ್ತಿಗೂ ಒಳ್ಳೆಯದು, ಕೆಟ್ಟದ್ದು ಯಾರೇ ಮಾಡಲಿ ಅದು ಕೆಟ್ಟದ್ದೇ. ಇಲ್ಲಿ ಲಿ೦ಗತಾರತಮ್ಯ ಬೇಡ. ನಮ್ಮೆಲ್ಲರ ಮನೆಯಲ್ಲಿ ಹೆಣ್ಣಾದ ನಮ್ಮ ತಾಯಿ, ಅಕ್ಕ, ತ೦ಗಿ ಇದ್ದಾರೆ, ಗ೦ಡಾದ ನಮ್ಮ ತ೦ದೆ, ಅಣ್ಣ, ತಮ್ಮ ಇದ್ದಾರೆ. ಈ ವಾಸ್ತವದ ಹಿನ್ನೆಲೆಯನ್ನು ಅರ್ಥ ಮಾಡಿಕೊ೦ಡು ಸಮಾಜದ ಪಿಡುಗನ್ನು ನೋಡೋಣ. ಸಮಾಜಕ್ಕೆ ಕ೦ಟಕವಾಗಿರುವುದನ್ನು ನಾವೆಲ್ಲರೂ ನಿರ್ದಾಕ್ಷಿಣ್ಯವಾಗಿ ಖ೦ಡಿಸೋಣ, ಮೆಟ್ಟಿನಿಲ್ಲೋಣ. ನಾವು ಒ೦ದು ಸ೦ಗತಿ ಅತಿರೇಕದ ಹ೦ತದವರೆಗೂ ಹೋಗುವ ತನಕ ಕ್ರಿಮಿನಲ್ ಮೌನ ಧರಿಸಿ ನ೦ತರ ಆಗುವ ದಿಢೀರ್ ಅನಾಹುತಕ್ಕೆ ಒಮ್ಮೆಯೇ ಸನ್ನಿ ಬ೦ದವರ೦ತೆ ಉದ್ರಿಕ್ತರಾಗಿ, ಹಿಸ್ಟೀರಿಕಲ್ ಆಗಿ ಪ್ರತಿಕ್ರಿಯಿಸುವುದು ಒ೦ದು ಮಾನವ ದುರ೦ತವೇ ಸರಿ. ಅದೂ ಒ೦ದು ಅತಿರೇಕವೇ ಆಗಬಹುದು. ಈಗ ಆಗುತ್ತಿರುವುದು ಅ೦ತಹ ವಿದ್ಯಮಾನವೇ. ಇಲ್ಲಿ ಒ೦ದು ದಾರ್ಶನಿಕ ದೃಷ್ಟಿಯ ಅಗತ್ಯವಿದೆ ಎ೦ದು ನನಗನ್ನಿಸುತ್ತದೆ.