ತರವಲ್ಲ ತಗಿ ನಿನ್ನ ತಂಬೂರಿ

To prevent automated spam submissions leave this field empty.
ಈ‌ ಕೆಳಗಿನ ರಚನೆ ಸಂತ ಶಿಶುನಾಳ ಶರೀಫರದ್ದು.

ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೆ ಬಾರಿಸದಿರೋ ತಂಬೂರಿ

ಸರಸ ಸಂಗೀತದ ಕುರುಹುಗಳರಿಯದೆ
ಕರದೊಳು ಹಿಡಿಯಬ್ಯಾಡ ತಂಬೂರಿ

ಮಧ್ಯದೊಳೇಳು ನಾದದ ತಂಬೂರಿ ಅದ
ತಿದ್ದಿ ನುಡಿಸಬೇಕೋ ತಂಬೂರಿ
ಸಿದ್ಧ ಸಾಧಕರ ಸುವಿದ್ಯೊಕ್ಕೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ

ಬಾಳ ಬಲ್ಲವರಿಗೆ ತಂಬೂರಿ ದೇವ
ಬಾಳಾಕ್ಷ ರಚಿಸಿದ ತಂಬೂರಿ
ಬಿತ್ತೀಸ ರಾಗದ ಬಗೆಯನು ತಿಳಿಯದ
ಕತ್ತೆಗಿನ್ನ್ಯಾತಕ್ಕ ತಂಬೂರಿ

ಅಸಮ ಸುಮ್ಯಾಳಕ್ಕ ತಂಬೂರಿ ಇದು
ಹಸನಾಗಿ ಆಡುವ ತಂಬೂರಿ
ಶಿಶುನಾಳಧೀಶನು ಓದ್ವ ಪುರಾಣದಿ
ಹಸನಾಗಿ ಬಾರಿಸೋ ತಂಬೂರಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾನು ಎಮ್ ಎಸ್ ಐ ಎಲ್ ನಿತ್ಯೋತ್ಸವ ನೋಡುತ್ತಿದ್ದಾಗ, ಈ ಸಾಲು " ಬರಿದೇ ಬಾರಿಸುತಿರು " ಎಂದು ಆ ಕಾರ್ಯಕ್ರಮದಲ್ಲಿ ತಿದ್ದಿದ ನೆನಪು.

ನಮ್ಮ ಅಮ್ಮ ಹೇಳ್ತಾ ಇದ್ರು, ಅದು "ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಬರದೇ ಬಾರಿಸದಿರು ತಂಬೂರಿ" ಅಲ್ಲ, ತರವಲ್ಲ ತಗಿ ನಿನ್ನ ತಂಬೂರಿ, ಸ್ವರ ಬಾರದೇ ಬಾರಿಸದಿರು ತಂಬೂರಿ"‌ ಅಂತ.. ಆದರೆ ಅದಕ್ಕೆ ಸಂಗೀತ ಕೂಡಿಸಿ ಹಾಡಿದಾಗ ಮೇಲಿನ ರೀತಿ ಬದಲಾವಣೆಯಾಯಿತು ಅಂತ.. ನಿಮಗೇನನ್ನಿಸತ್ತೆ? ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

ಬರದೇ ಬಾರಿದದಿರು, ಬಾರದೇ ಬಾರಿಸದಿರು ಎರಡಕ್ಕೂ ಒಂದೇ ಅರ್ಥ. ಸರಿಯಾಗಿ ತಿಳಿದುಕೊಳ್ಳದೇ ಎಂದು.
ಈ ಹಾಡಿನಲ್ಲಿ, ಬರದೇ, ಬಾರದೇ, ಬರಿದೇ (ಎಂದರೆ ಸುಮ್ಮನೇ) ಎಲ್ಲವೂ ಹೊಂದಿಕೆಯಾಗುತ್ತೆ ಅಂತ ನನ್ನೆಣಿಕೆ.

-ಹಂಸಾನಂದಿ

ತಂಬೂರಿ ಅ೦ದರೇನು ?? ಅದು ಒ೦ದು ವಾದ್ಯ ಮಾತ್ರವೇ ? ಬಹುಶ: ತಂಬೂರಿ ಅ೦ದರೆ ಇಲ್ಲಿ ಧಾರ್ಮಿಕ ಸಾಧನೆ ಅಥವ ಬಾಳಿನ ಸಾಧನೆ. ಶ್ರೀ ರಾಮಕೃಷ್ಣಾ ಅವರ ಒ೦ದು ಮಾತು ಇಲ್ಲೆ ವಿಚಾರ ಮಾಡಬೇಕು. ಬಾಯಲ್ಲಿ ಸ ರಿ ಗ ಮ ಪ ದ ನಿ ಸ ... ಅನೋದೊ ಸುಲಭ, ಆದರೆ ಒ೦ದು ವಾದ್ಯದಲ್ಲಿ ನುಡಿಸುವುದು ಕಷ್ಟ. ಆದೆ ರೀತಿ ಯೋಗ, ಸಮತ್ವ, ಅಹಿ೦ಸೆ, ಸತ್ಯ ಇವೆಲ್ಲಾ ಮಾತಾಡೊದು ಸುಲಭ ಅದರೆ ಆಚಾರಕ್ಕೆ ತರುವುದು ಕಷ್ಟ. ವಿಚಾರ ಮಾಡೋದು ಸುಲಭ, ಆಚಾರಣಗೆ ತರುವುದು ಕಷ್ಟ.

ಷರೀಫರ ಪ್ರಸ್ತುತ ರಚನೆಯಲ್ಲಿ ತಂಬೂರಿ ಕೇವಲ ಒಂದು ವಾದ್ಯ ಮಾತ್ರವಲ್ಲ,ಬದುಕಿನ ಸಂಕೀರ್ಣತೆಯ ಪ್ರಬುದ್ಧ ಚಿಂತನೆ.ಧರ್ಮಾಧಾರಿತ ಎನ್ನುವ ವ್ಯಾಖ್ಯೆ ಸಮಂಜಸ ಎನ್ನಿಸಿದರೂ ಧರ್ಮ ಪದದ ವ್ಯಾಪ್ತಿ ನಮ್ಮ ಸಮಾಜ ಪರಂಪರಾಗತವಾಗಿ ನಂಬಿರುವ ಕೇವಲ ಆಚರಣೆಗಳಲ್ಲ ಬದಲಾಗಿ ಜೀವನ ಪ್ರಜ್ಞೆ.

ಸಂತ ಶಿಶುನಾಳ ಷರೀಫ ಹಾಡಿದ ಈ ಜನಪದ ಉತ್ತರ ಕರ್ನಾಟಕದ ಮನೆ ಮನೆ, ಮನಮನದಲ್ಲಿ ಇಂದಿಗೂ ಪ್ರಚಲಿತ.
ಈ ಹಾಡಲ್ಲಿ ತುಂಬ ಅರ್ಥ ಇದೆ. ನಮಗೆ ತಿಳಿದುಕೊಳ್ಳೊ ತಾಕತ್ತು ಇರಬೇಕಷ್ಟೆ.

ನನ್ನಿಗಳು ಗುರುರಾಜರವರೆ,

ಇಲ್ಲಿ
ತಗಿ ಅಂದ್ರೆ ತ್ಯಾಗಿ ಅತ್ವ ತೆಗಿ ಅಂತ ತಿಳಿವಾ?

ಈ ಕೆಳಗಿನ ಒರೆಗಳಿಗೆ ತಿಳಿವುಗಳೇನು

ಸುವಿದ್ಯೊ=?
ಬಾಳಾಕ್ಷ=?
ಬಿತ್ತೀಸ = ?

ತಗಿ ಅಂದರೆ ತೆಗಿಯೇ.

ಇನ್ನು ಅದು ಬಿತ್ತೀಸ್ ಅಲ್ಲ - ಬತ್ತೀಸ ಆಗಬೇಕು (ಮೂವತ್ತೆರಡು).
ನಮ್ಮ ಸಂಗೀತದಲ್ಲಿ ಹಿಂದಿನಿಂದ ಮೂವತ್ತೆರಡು ರಾಗಗಳು ಪ್ರಖ್ಯಾತವಾಗಿದ್ದವು. ಇದು ಅದರ ಬಗ್ಗೆಯೇ.

ಇನ್ನೊಮ್ಮೆ ಬತ್ತೀಸರಾಗಗಳ ಬ್ಗ್ಗೆ ಸ್ವಲ್ಪ ವಿವರವಾಗಿ ಬರೆಯುವೆ.

ಹಂಸಾನಂದಿ