ಮುಸ್ಲಿಂ ಬುದ್ಧಿಜೀವಿಗಳೇ ಎಚ್ಚೆತ್ತುಕೊಳ್ಳಿ!
ಕನ್ನಡದಲ್ಲಿ ಇಸ್ಲಾಂ ಧರ್ಮ ಮತ್ತು ಇತಿಹಾಸ ಕುರಿತ ಪುಸ್ತಕಗಳು ಬಹಳ ಇಲ್ಲ. ಕುರಾನ್ ಕನ್ನಡಕ್ಕೆ ಅನುವಾದವಾಗಿದೆ. ಅದರೆ ಅದನ್ನು ಓದಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಅದರ ಭಾಷೆ ಕನ್ನಡದ ಜಾಯಮಾನದಿಂದ ದೂರವಾಗಿದೆ. ಇನ್ನು ಮಂಗಳೂರಿನ ಶಾಂತಿ ಪ್ರಕಾಶನದವರು ಪ್ರಕಟಿಸಿರುವ ಪುಸ್ತಕಗಳು ಸುಲಭ ಮತ್ತು ಸರಳ ಕನ್ನಡದಲ್ಲಿವೆಯಾದರೂ, ಅವು ಮತ ಪ್ರಚಾರದ ದೃಷ್ಟಿಕೋನದಿಂದಲೇ ಬರೆಯಲ್ಪಟ್ಟು ಪ್ರಕಾಶಿತವಾಗುತ್ತಿರುವುದರಿಂದ ಅವುಗಳ ವಿಶ್ವಾಸಾರ್ಹತೆ ಯಾವಾಗಲೂ ಅನುಮಾನಾಸ್ಪದವೇ.
ಈ ದೃಷ್ಟಿಯಿಂದ ಸಾರ್ವತ್ರಿಕ ಓದಿಗೆ ಲಭ್ಯವಿರುವ ಒಂದೇ ಒಂದು ಒಳ್ಳೆಯ ಪುಸ್ತಕವೆಂದರೆ, ಬಿ.ಎಂ.ಶ್ರೀ. ಅವರು ಅನುವಾದಿಸಿ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಮಹಮ್ಮದ್ ಅಬ್ಬಾಸ್ ಷೂಸ್ತ್ರಿ ಅವರ ಇಸ್ಲಾಂ ಸಂಸ್ಕೃತಿ ಎಂದು ಕಾಣುತ್ತದೆ. ಇದಕ್ಕೆ ಕುವೆಂಪು ಅವರ ಒಂದು ಅದ್ಭುತ ಮುನ್ನುಡಿಯೂ ಇದೆ. ಆದರೆ, ಇದರ ಪ್ರತಿ ಇಂದು ದುರ್ಲಭವಾಗಿದೆಯೆಂದೇ ಕೇಳಿದ್ದೇನೆ. ಹಾಗಾಗಿ ಕನ್ನಡಿಗರಾದ ಮುಸ್ಲಿಮೇತರರಿಗೆ ಇಸ್ಲಾಂ ಧರ್ಮ ಮತ್ತು ಸಂಸ್ಕೃತಿಗಳನ್ನು ಅರಿಯುವ ಅವಕಾಶ ಕಡಿಮೆಯೇ ಎಂದು ಹೇಳಬೇಕು. ದರ್ಗಾ ಮತ್ತು ಮೊಹರಂ ಸಂಸ್ಕೃತಿ ಪ್ರಚಲಿತವಿರುವ ಕೆಲವು ಗ್ರಾಮಾಂತರ ಪ್ರದೇಶಗಳ ಸಾಮಾನ್ಯ ಜನಜೀವನದ ಪಾತಳಿಯಲ್ಲಿ, ಇದು ಒಂದಷ್ಟು ಅರಿವಿಗೆ ತೆರೆದುಕೊಂಡಿರಬಹುದಷ್ಟೆ. ನಗರ ಪ್ರದೇಶಗಳಲ್ಲಂತೂ, ಮುಸ್ಲಿಮೇತರರು ಮುಸ್ಲಿಂ ಹಬ್ಬಗಳಲ್ಲಿ ತಮ್ಮ ಮುಸ್ಲಿಂ ಸ್ನೇಹಿತರ ಮನೆಗಳಲ್ಲಿ ರುಚಿಕಟ್ಟಾದ ದಂ ಬಿರಿಯಾನಿ ತಿಂದು ಬರುವುದರ ಹೊರತಾಗಿ, ಅದನ್ನು ಮೀರಿ ಅವರೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನು ಸ್ಥಾಪಿಸಿಕೊಂಡ ಸುಳಿವುಗಳಿಲ್ಲ! ನಮ್ಮ ರಾಜ್ಯದಲ್ಲಿ ಕೋಮು ಪರಿಸ್ಥಿತಿ ಇಂದು ಒಂದು ಕುದಿ ಬಿಂದುವಿಗೆ ಬರುತ್ತಿರುವುದಕ್ಕೆ ಇಂತಹ ಪರಸ್ಪರ ಧಾರ್ಮಿಕ - ಸಾಂಸ್ಕೃತಿಕ ತಿಳುವಳಿಕೆಯ ಕೊರತೆಯೂ ಒಂದು ಕಾರಣವಾಗಿದ್ದರೆ ಆಶ್ಚರ್ಯವಿಲ್ಲ.
ಇಂತಹ ಸಂದರ್ಭದಲ್ಲಿ ಹಸನ್ ನಯೀಂ ಸುರಕೋಡ ಅವರು ಅನುವಾದಿಸಿರುವ ಇಸ್ಲಾಂ: ಹುಟ್ಟು ಮತ್ತು ವಿಕಾಸ ಪುಸ್ತಕದ (ಪ್ರ: ಲೋಹಿಯಾ ಪ್ರಕಾಶನ, ಬಳ್ಳಾರಿ) ಮಹತ್ವ ಮತ್ತು ಪ್ರಸ್ತುತತೆ ಎದ್ದು ಕಾಣುವಂತಿದೆ. ಇಂದು ಭಾರತದಲ್ಲಿ ಅಪರೂಪವಾಗಿರುವ ಮುಸ್ಲಿಂ ವೈಚಾರಿಕರಲ್ಲಿ ಒಬ್ಬರಾದ ಅಸ್ಗರ್ ಅಲಿ ಇಂಜಿನಿಯರ್ ಅವರ ‘The origin and development of Islam’ಎಂಬ ಇಂಗ್ಲಿಷ್ ಪುಸ್ತಕದ ಕನ್ನಡ ಅವತರಣಿಕೆಯಿದು. ಸುರಕೋಡ ಬೆಳಗಾವಿ ಜಿಲ್ಲೆಯ ರಾಮದುರ್ಗವೆಂಬ ಮೂಲೆಯೂರಿನಲ್ಲಿ ತಮ್ಮ ಪಾಡಿಗೆ ತಾವು ಮೌನವಾಗಿ ಸಮಾಜವಾದಿ ಕೆಲಸಗಳಲ್ಲಿ ತೊಡಗಿಕೊಂಡವರು. ಲೋಹಿಯಾ ವ್ಯಕ್ತಿ - ವಿಚಾರಗಳನ್ನು ಕನ್ನಡಕ್ಕೆ ತರುತ್ತಿರುವ ಪ್ರಮುಖರಲ್ಲಿ ಅವರೂ ಒಬ್ಬರು. ಜೊತೆಗೆ ಭಾರತದ ಇಸ್ಲಾಮೀ ಸಂಸ್ಕೃತಿ ಮತ್ತು ಅದರ ರಾಜಕೀಯ ಮುಖಗಳನ್ನು ವಿಶ್ಲೇಷಿಸುವ ಸಾಹಿತ್ಯವನ್ನೂ ಕನ್ನಡಕ್ಕೆ ತರುತ್ತಿರುವವರು. ಇವರ ಅನುವಾದಗಳಾದ ಹಿಂದೂ ಮಂದಿರಗಳು ಮತ್ತು ಔರಂಗಜೇಬನ ಆದೇಶಗಳು ಹಾಗೂ ಅಯೋಧ್ಯೆ: ವಿನಾಶಕಾರಿ ವೋಟ್‌ಬ್ಯಾಂಕ್ ರಾಜಕೀಯ ಈ ದೃಷ್ಟಿಯಿಂದ ಎಲ್ಲರೂ ಗಮನಿಸಬೇಕಾದ ಪುಸ್ತಕಗಳು. ಈಗ ಸುರಕೋಡ ಅವರಿಗೆ ಅಮೃತಾ ಪ್ರೀತಂ ಅವರ ಆತ್ಮಕತೆ ರಸೀದಿ ಟಿಕೆಟ್ ಅನುವಾದಕ್ಕಾಗಿ ೨೦೦೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಅವರಿಗೆ ಅಭಿನಂದನೆಗಳು!
ಇಸ್ಲಾಂ: ಹುಟ್ಟು ಮತ್ತು ವಿಕಾಸ, ಅದರ ಶೀರ್ಷಿಕೆಯೇ ಸೂಚಿಸುವಂತೆ ಅರೇಬಿಯಾದಲ್ಲಿ ಇಸ್ಲಾಂ ಧರ್ಮ ಹುಟ್ಟಲು ಇದ್ದ ಕಾರಣಗಳು, ಅದು ಮಹಮ್ಮದ್ ಪೈಗಂಬರರ ಮೂಲಕ ವ್ಯಕ್ತವಾದ ರೀತಿ-ನೀತಿಗಳು, ಅದು ವಿಕಾಸದ ಹಾದಿಯಲ್ಲಿ ಎದುರಿಸಿದ ಸವಾಲುಗಳು, ಬದಲಾಗುತ್ತಾ ಹೋದ ಅದರ ದೈವಶಾಸ್ತ್ರ ಹಾಗೂ ಆ ಮೂಲಕ ಇತಿಹಾಸದಲ್ಲಿ ಅದು ರೂಪಾಂತರವಾಗುತ್ತಾ ಹೋದ ಬಗೆಗಳನ್ನು ನಿರೂಪಿಸುತ್ತಾ, ಇಂದು ಈ ಧರ್ಮ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯದ ಸೂಚನೆ ನೀಡುತ್ತಾ ಮುಕ್ತಾಯವಾಗುತ್ತದೆ. ಪಾಶ್ಚಿಮಾತ್ಯ ಇತಿಹಾಸಕಾರರ ಹಾಗೂ ಮಾರ್ಕ್ಸ್‌ವಾದಿ ವಿಶ್ಲೇಷಕರ ಸಂಕೀರ್ಣ ಮತ್ತು ಪಾರಿಭಾಷಿಕ ಉಲ್ಲೇಖಗಳಿಂದ ತುಂಬಿ ಹೋಗಿರುವ ಈ ಪುಸ್ತಕ, ಪಶ್ಚಿಮದ ಪ್ರಪಂಚಕ್ಕೆ ಹೋಲಿಸಿದಂತೆ ನಮಗೆ ಸಂಪೂರ್ಣವಾಗಿ ಅಪರಿಚಿತವಾಗಿರುವ ಪ್ರದೇಶವೊಂದರ ಇತಿಹಾಸ - ರಾಜಕಾರಣಗಳ ಹೇಳುತ್ತಿರುವುದರಿಂದಲೋ ಏನೋ, ಮೊದಮೊದಲಿಗೆ ಗ್ರಹಿಕೆಗೆ ಕ್ಲಿಷ್ಟ ಎನಿಸುತ್ತದೆ. ಆದರೆ ನಮ್ಮ ಜೊತೆಯಲ್ಲಿ ಬಾಳುತ್ತಿರುವ ದೊಡ್ಡ ಸಮುದಾಯವೊಂದರ ಆಳದ ಮಾನಸಿಕತೆಯನ್ನು ಅರಿಯುವ ಅಗತ್ಯವನ್ನು ಮನಗಾಣಬಲ್ಲ ಯಾರಾದರೂ ಸ್ವಲ್ಪ ಕಷ್ಟಪಟ್ಟಾದರೂ ಇದನ್ನು ಓದಲೇ ಬೇಕಾಗುತ್ತದೆ. ಹಾಗೆ ಓದಿ ಮುಗಿಸಿದಾಗ, ಪುಸ್ತಕ ಇಂದಿನ ಕೋಮು ಪರಿಸ್ಥಿತಿಯನ್ನು ನಾವು ನೋಡುವ, ಅರ್ಥ ಮಾಡಿಕೊಳ್ಳುವ ಮತ್ತು ವಿಶ್ಲೇಷಿಸುವ ರೀತಿ ನೀತಿಗಳಲ್ಲಿ ಗುಣಾತ್ಮಕ ಬದಲಾವಣೆಯನ್ನು ಒತ್ತಾಯಿಸುತ್ತದೆ. ಇದೇ ಪುಸ್ತಕದ ಹೆಗ್ಗಳಿಕೆಯೂ ಆಗಿದೆ.
ಐದನೇ ಶತಮಾನದಲ್ಲಿ ಮಧ್ಯಪ್ರಾಚ್ಯದ, ನಿರ್ದಿಷ್ಟವಾಗಿ ಅರೇಬಿಯಾದ ಅನೇಕ ಬುಡಕಟ್ಟುಗಳ ನಡುವೆ, ಪಶು ಸಂಗೋಪನಾ ಮತ್ತು ವ್ಯಾಪಾರಿ ಸಮುದಾಯಗಳ ನಡುವೆ, ಅಲೆಮಾರಿ ಮತ್ತು ನಗರವಾಸಿಗಳ ನಡುವೆ - ಹೀಗೆ ಹಲವು ಸ್ತರಗಳಲ್ಲಿ ನಡೆದಿದ್ದ ಕಾಳಗಗಳಿಂದಾಗಿ ಹಿಂಸಾತ್ಮಕವೂ ಮತ್ತು ಅಶಾಂತವೂ ಆಗಿದ್ದ ಒಂದು ಪ್ರದೇಶದ ಜನ ಸಮುದಾಯದ ಮಧ್ಯೆ ಮಹಮ್ಮದ್ ದೇವದೂತರಾಗಿ ಪ್ರಸ್ತುತಗೊಂಡು, ಆ ಸಮುದಾಯದ ನೆಮ್ಮದಿ ಮತ್ತು ಐಕ್ಯತೆಗಾಗಿ ಒಂದು ಸಾಮಾಜಿಕ ಸಂಹಿತೆಯನ್ನು ಜಾರಿಗೊಳಿಸಲು ಹೆಣಗಿದರು. ಆ ಮೂಲಕ, ಅಲ್ಲಿನ ರಣರಂಗದಲ್ಲಿ ಸೃಷ್ಟಿಯಾಗಿದ್ದ ಅಸಂಖ್ಯಾತ ಅನಾಥ ಮಕ್ಕಳ, ವಿಧವೆಯರ ಮತ್ತು ಗುಲಾಮರ ಗೋಳು - ಸಂಕಷ್ಟಗಳನ್ನು ಒಂದು ತಹಬಂದಿಗೆ ತರಲು ಯತ್ನಿಸಿದರು. ಇದಕ್ಕಾಗಿ ಮುಖ್ಯವಾಗಿ ಪ್ರವಾದಿ ಬಳಸಿದ್ದು ಏಕದೇವತೋಪಾಸನೆಯ ತತ್ವ ಮತ್ತು ಮೂರ್ತಿಭಂಜನೆಯ ಕಾರ್ಯಕ್ರಮಗಳನ್ನು. ಏಕೆಂದರೆ ಅಲ್ಲಿನ ಬುಡಕಟ್ಟುಗಳು ಹಲವಾರು ಕಲ್ಲು - ಮರಗಳ ದೇವತೆಗಳನ್ನು ಪೂಜಿಸುತ್ತ, ಮೌಢ್ಯಾಚಾರಗಳಲ್ಲಿ ಮುಳುಗಿ, ಪರಸ್ಪರ ವೈರ ಮತ್ತು ಭೀಕರ ಹಿಂಸಾಚಾರಗಳಿಗೆ ಕಾರಣವಾಗಿದ್ದವು. ಅರೇಬಿಯಾ ಮೂಲತಃ ಮರುಭೂಮಿಯದುದರಿಂದ ಅಲ್ಲಿ ಕೃಷಿ ಸಮಾಜವೆಂಬುದೇ ವಿಕಾಸವಾಗಿರಲಿಲ್ಲ. ಹಾಗಾಗಿ ಅಲ್ಲಿ ಯಾವುದೇ ಸಂಸ್ಕೃತಿ ಎಂಬುದರ ಸುಳಿವಿರಲಿಲ್ಲ. ಒಂಟೆಗಳೇ ಏಕೈಕ ಜೀವನಾಧಾರವಾಗಿದ್ದ ಅಲ್ಲಿ, ಅವನ್ನು ಬಳಸಿಕೊಂಡೇ ಆಹಾರ ಮತ್ತು ಇತರ ಜೀವನಾವಶ್ಯಕತೆಗಳಿಗಾಗಿ ಖಂಡಾಂತರ ವ್ಯಾಪಾರ ಮತ್ತು ಲೂಟಿಗಳಲ್ಲಿ ತೊಡಗಿದ್ದವು. ಹಾಗಾಗಿ, ಅಲ್ಲಿನ ಬುಡಕಟ್ಟುಗಳು ಮೂಲತಃ ಅನಾಗರಿಕವಾಗಿದ್ದವು ಮತ್ತು ಬರ್ಬರತೆಯೇ ಅವರ ಸಹಜ ಧರ್ಮವಾಗಿತ್ತು.
ಇವರಿಗೊಂದು ನಾಗರೀಕತೆಯನ್ನು ರೂಪಿಸುವ ಸಾಹಸ ಮಾಡಿದವರು ಮಹಮ್ಮದ್. ಹಾಗಾಗಿಯೇ ಇಸ್ಲಾಂ ಮೂಲತಃ ಒಂದು ಲೌಕಿಕ ಧರ್ಮವಾಗಿ, ಮನುಷ್ಯನ ಸಾಮಾಜಿಕ ಜೀವನದ ಬಗ್ಗೆ (ಊಟ, ಮದುವೆ, ದೈಹಿಕ ಶುಚಿ, ಉಡುಪಿನ ಶೈಲಿ, ಅತಿಥಿ ಸತ್ಕಾರ, ಆಸ್ತಿ ವಾರಸುದಾರಿಕೆ ಹಾಗೂ ವಿತರಣೆ, ಯುದ್ಧ ತಂತ್ರ, ಶತ್ರು ನಾಶ ಇತ್ಯಾದಿ) ವಿವರವಾದ ನಿರ್ದೇಶನಗಳನ್ನು ನೀಡುತ್ತದೆ. ಇದಕ್ಕೆ ಹಿನ್ನೆಲೆಯಾಗಿ ಮತ್ತು ಸಮರ್ಥನೆಯಾಗಷ್ಟೇ ಅದು ತನ್ನ ದೈವಶಾಸ್ತ್ರವನ್ನು ಸೃಷ್ಟಿಸಿಕೊಂಡಿದೆ. ಹಾಗಾಗಿ ಮಹಮ್ಮದರು ತಮ್ಮ ಧರ್ಮ ಪ್ರಸಾರಕ್ಕಾಗಿ ಒಬ್ಬ ಅಧ್ಯಾತ್ಮಿಕ ವ್ಯಕ್ತಿಯಾಗಿ ಮಾತ್ರವಲ್ಲ, ರಾಜಕೀಯ ನಾಯಕರಾಗಿಯೂ ಕೆಲಸ ಮಾಡಬೇಕಾಯಿತು. ಇಸ್ಲಾಂ ಧರ್ಮದೊಂದಿಗೆ ಇಸ್ಲಾಂ ರಾಜ್ಯವೊಂದನ್ನೂ ಸ್ಥಾಪಿಸಬೇಕಾಯಿತು. ಮೂಲತಃ ವ್ಯಾಪಾರಿ ಕಟುಂಬವೊಂದರಲ್ಲಿ ಜನಿಸಿ, ಶ್ರೀಮಂತ ವ್ಯಾಪಾರಿ ಮಹಿಳೆಯೊಬ್ಬರನ್ನು ಮದುವೆಯಾದ ಮಹಮ್ಮದರು ಆಸ್ತಿಕತೆ, ಸಮಾನತೆ ಮತ್ತು ಸೋದರತೆಗಳನ್ನು ಆಧರಿಸಿದ ಸಮಾಜವೊಂದನ್ನು ಕಟ್ಟುವ ತಮ್ಮ ಪ್ರಯತ್ನದಲ್ಲಿ ಪಟ್ಟಭದ್ರ ವ್ಯಾಪಾರಿ ಮತ್ತು ಅಲೆಮಾರಿ ಬುಡಕಟ್ಟು ಈ ಎರಡೂ ಸಮುದಾಯಗಳಿಂದಲೂ ವೈರ ಮತ್ತು ದಾಳಿಗಳನ್ನು ಎದುರಿಸಬೇಕಾಯಿತು. ಹಾಗಾಗಿ ಅವರು ತಮ್ಮ ಮೂಲ ಸ್ಥಳವಾದ ಅರಬ್ಬರ ಮುಖ್ಯ ವ್ಯಾಪಾರಿ ಕೇಂದ್ರವಾಗಿದ್ದ ಮೆಕ್ಕಾದಿಂದ, ಈಗಾಗಲೇ ಯಹೂದಿ ಮತ್ತು ಕ್ರಿಶ್ಚಿಯನ್ ಧರ್ಮಗಳಿಂದ ಪ್ರಭಾವಿತವಾಗಿ ಸ್ವಲ್ಪ ವೈಚಾರಿಕ ಸ್ಪಂದನಶೀಲತೆಯನ್ನು ಬೆಳೆಸಿಕೊಂಡ, ಮಿಶ್ರ ಸಮಾಜವಿದ್ದ ಮದೀನಾಗೆ ಓಡಿ ಹೋಗಬೇಕಾಯಿತು. ಅಲ್ಲಿ ಅವರು ತಮ್ಮ ಅನುಯಾಯಿಗಳ ದೊಡ್ಡ ಗುಂಪೊಂದನ್ನು ಕಟ್ಟಿಕೊಂಡು ತಮ್ಮ ಎದುರಾಳಿಗಳನ್ನು ಹಲವು ಪ್ರತಿ ದಾಳಿ - ಲೂಟಿ ಮುಂತಾದ ಸುಯೋಜಿತ ಯುದ್ಧೋಪಾಯಗಳ ಮೂಲಕ ನಿರ್ದಯವಾಗಿ ಬಗ್ಗು ಬಡಿದು, ಈ ಲೂಟಿಗಳಲ್ಲಿ ದೋಚಿದ ಸಂಪತ್ತನ್ನು ತಮ್ಮ ಅನುಯಾಯಿಗಳಲ್ಲಿ ಹಂಚುತ್ತಾ ಮುಸ್ಲಿಂ ಸಮಾಜವೆಂಬುದೊಂದರ ಅಸ್ತಿವಾರ ಹಾಕಬೇಕಾಯಿತು.
ಇಸ್ಲಾಂ ಧರ್ಮದ ನೀತಿಶಾಸ್ತ್ರ ಮೂಲತಃ ಈ ಪ್ರಕ್ರಿಯೆಯಲ್ಲಿ ಹುಟ್ಟಿದುದು. ಅಲ್ಲಿ ದಯೆ, ಕರುಣೆ, ಕ್ಷಮೆಗಳೆನ್ನುವುದು ಸಾರ್ವತ್ರಿಕ ಅಥವಾ ನಿರಪೇಕ್ಷ ಮೌಲ್ಯಗಳಲ್ಲ. ಅವೇನಿದ್ದರೂ ವ್ಯಾವಾಹಾರಿಕ ಮತ್ತು ಸಾಂದರ್ಭಿಕ. ಹೀಗಾಗಿ ಇಸ್ಲಾಮನ್ನು ಇತರ ಧರ್ಮಗಳ ಎರಕದಲ್ಲಿಟ್ಟು ವಿಮರ್ಶಿಸುವುದು ಅಸಂಗತವಾದೀತು. ಈಗ ನಾವು ಮಾಡುತ್ತಿರುವ ತಪ್ಪು ಇದೇ ಆಗಿದೆ. ಮಹಮ್ಮದರ ನಂತರದ ದಿನಗಳಲ್ಲಿ, ಏಳು - ಎಂಟನೇ ಶತಮಾನಗಳ ಹೊತ್ತಿಗೆ ಇಸ್ಲಾಂ ರಾಜ್ಯ ಒಂದು ಸಾಮ್ರಾಜ್ಯವಾಗಿ ವಿಸ್ತರಿಸುತ್ತಾ, ಹಲವು ಅನ್ಯ ಸಂಸ್ಕೃತಿಗಳ - ವಿಶೇಷವಾಗಿ ಪರ್ಷಿಯನ್, ಗ್ರೀಕ್ ಮತ್ತು ಭಾರತೀಯ - ಸಂಪರ್ಕಕ್ಕೆ ಬಂದಿತು. ಇದರಿಂದಾಗಿ ಅದು ತನ್ನ ಹುಟ್ಟಿನ ಕಟು ವಾಸ್ತವದ ಸ್ಮೃತಿಗಳಾಚೆ ಬೆಳೆದು, ತನ್ನ ಹಲವಾರು ಉದಾರವಾದಿ ಆವೃತ್ತಿಗಳಲ್ಲಿ ಅನುಭಾವಿಕ ಸ್ತರಗಳನ್ನು ಮುಟ್ಟುವ ಪ್ರಯತ್ನವನ್ನೂ ಮಾಡಿತು. ಇಂತಹ ಸಂದರ್ಭಗಳಲ್ಲೇ ಮುಸ್ಲಿಂ ಸಮುದಾಯ ಸಾಹಿತ್ಯ, ಸಂಗೀತ, ವಾಸ್ತು, ವಿಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಅನುಪಮವೆನ್ನಬಹುದಾದ ಸಾಧನೆಗಳನ್ನು ಮಾಡಲು ಸಾಧ್ಯವಾದದ್ದು ಮತ್ತು ಅದರ ಪರಿಣಾಮವಾಗಿ ಈ ಧರ್ಮ ಕಾಲದ ಕಟ್ಟುಗಳನ್ನು ಕಳಚಿಕೊಂಡು ಸ್ಪಂದನಶೀಲವೂ ಆದದ್ದು.
ಆದರೆ, ನಿರ್ದಯ ಯುದ್ಧಗಳಲ್ಲೇ ಹುಟ್ಟಿ ಬೆಳೆದ ಈ ಧರ್ಮರಾಜ್ಯದಲ್ಲಿಅಂದರೆ ಧರ್ಮ ಮತ್ತು ಪ್ರಭುತ್ವ ಅವಿಭಾಜ್ಯವಾಗಿರುವ ವ್ಯವಸ್ಥೆಯಲ್ಲಿ - ಹಳೆಯ ಸ್ಮೃತಿಗಳನ್ನಾಧರಿಸಿದ ಗುಂಪುಗಳ ಬಂಡಾಯಗಳು ನಿರಂತರವಾಗಿ ಏಳುತ್ತಲೇ ಬಂದುದರಿಂದ ಮತ್ತು ಬರುತ್ತಿರುವುದರಿಂದ (ಉದಾ: ಇಂದಿನ ತಾಲಿಬಾನ್) ಇಸ್ಲಾಂ ತನ್ನೆಲ್ಲಾ ಅನುಭಾವಿಕತೆಯನ್ನು ವಿಸ್ಮೃತಿಗೆ ತಳ್ಳಿಕೊಳ್ಳುತ್ತಲೇ ಬಂದಿದೆ. ಇದರ ಪರಿಣಾಮವಾಗಿ ಅದು ಮುಲ್ಲಾಶಾಹಿ ಎಂದು ಕರೆಯಬಹುದಾದ ಪುರೋಹಿತಶಾಹಿಯೊಂದರ ಪ್ರಬಲ ಹಿಡಿತಕ್ಕೆ ಸಿಕ್ಕಿ ಹಾಕಿಕೊಂಡಿದೆ. ಹೀಗಾಗಿ ಅದು ಇತರ ಧರ್ಮೀಯರಿಗೆ ಒಂದು ಸಮಸ್ಯಾತ್ಮಕ ಧರ್ಮವೇ ಆಗಿ ಬೆಳೆದು ನಿಂತಿದೆ. ಮುಖ್ಯವಾಗಿ ಪ್ರಜಾಪ್ರಭುತ್ವ ಎಂಬ ಆಧುನಿಕ ತತ್ವ ಅದಕ್ಕೊಂದು ಸಂಪೂರ್ಣವಾಗಿ ಪರಿಹರಿಸಿಕೊಳ್ಳಲಾಗದ ಸಮಸ್ಯೆಯೇ ಆಗಿಬಿಟ್ಟಿದೆ. ಅದು ಪರಿಶುದ್ಧತೆಯ ಹೆಸರಿನಲ್ಲಿ, ಕೆಲವು ಸಂಕ್ಷಿಪ್ತ ಮತ್ತು ಸ್ಪಂದನಶೀಲ ವಿರಾಮಗಳ ಹೊರತಾಗಿ, ತನ್ನ ಮಧ್ಯಯುಗೀನತೆಯನ್ನು ಕಳೆದುಕೊಳ್ಳಲು ಸದಾ ನಿರಾಕರಿಸುತ್ತಲೇ ಬಂದಿದೆ.
ಈ ಪರಿಶುದ್ಧತೆಯ ಮಾದರಿಯಲ್ಲಿ ಸಮಾನತೆ ಹಾಗೂ ಸೋದರತೆಗಳ ಮತ್ತು ಅವುಗಳ ಸ್ಥಾಪನೆಗಾಗಿ ದಯೆ-ದಾನಗಳ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ, ನಿಜ. ಅದರೆ, ಅವುಗಳೆಲ್ಲವೂ ಮಹಮ್ಮದರ ಕಾಲದ ಧಾರ್ಮಿಕ ಆಡಳಿತದ ಮಾದರಿ ಚೌಕಟ್ಟಿನಲ್ಲಿಯೇ ಜಾರಿಯಾಗಬೇಕೆಂಬ ನಂಬಿಕೆಯೂ ಇದರಲ್ಲಿ ಅಂತರ್ಗತವಾಗಿರುವುದರಿಂದ, ಈ ಮೌಲ್ಯಗಳು ಅವುಗಳ ಮಧ್ಯಯುಗೀನ ಅರ್ಥದಲ್ಲಿಯಷ್ಟೇ ಪ್ರಸ್ತುತಗೊಳ್ಳುತ್ತಿವೆ. ಉದಾಹರಣೆಗೆ, ಗಂಡು ಹೆಣ್ಣುಗಳಿಬ್ಬರಿಗೂ ವಿವಾಹದ ಆಯ್ಕೆಯ ಮತ್ತು ವಿಚ್ಛೇದನದ ಹಕ್ಕು ನೀಡುವ ಇಸ್ಲಾಂ, ಹೆಣ್ಣು ಗಂಡಿಗಿಂತ ಕಡಿಮೆ ದರ್ಜೆಯ ಪ್ರಾಣಿ ಎಂಬ ನಂಬಿಕೆಯನ್ನು ಬಿತ್ತುತ್ತಾ, ಅವಳಿಗೆ ಆಸ್ತಿ, ವಿದ್ಯೆ, ಲೈಂಗಿಕತೆ, ಸಾರ್ವಜನಿಕ ಜೀವನ ಇತ್ಯಾದಿ ವಿಷಯಗಳಲ್ಲಿ ಸಮಾನತೆಯನ್ನು ನಿರಾಕರಿಸುತ್ತದೆ. ಇದು ಮಹಮ್ಮದರ ಕಾಲದಲ್ಲಿದ್ದ ಸಮಾಜದ ಸಂದರ್ಭದಲ್ಲಿ ಉಚಿತವೆನಿಸಬಹುದಾಗಿದ್ದರೂ, ಈಗ? ಜಗತ್ತಿನಾದ್ಯಂತ ಮುಸ್ಲಿಂ ಜಗತ್ತಿನಲ್ಲಿ ಇದನ್ನು ಪ್ರಶ್ನಿಸುವರನ್ನೆಲ್ಲ ಹೇಗೆ ಹೆದರಿಸಿ ಬಾಯಿ ಮುಚ್ಚಿಸುವ ಅನಾಗರಿಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ.
ಇದಕ್ಕೆ ಕಾರಣ, ಮಹಮ್ಮದರ ಕಾಲದಲ್ಲೇ ಈ ಸಮಾನತೆ, ಸೋದರತೆ ಮತ್ತು ಆ ಸಂಬಂಧದ ದಯೆ-ದಾನ ಇತ್ಯಾದಿ ಉದಾರವಾದಿ ಮೌಲ್ಯಗಳನ್ನು ಮೂರ್ತ ರೂಪಗಳಲ್ಲಿ ನೆಲೆಗೊಳಿಸುವುದು ಸಾಧ್ಯವಾಗದೇ ಹೋದದ್ದು. ಇದಕ್ಕೆ ಮತ್ತೆ, ಅವರು ಧರ್ಮ ಪ್ರಸಾರಕ್ಕಾಗಿ ಅನುಸರಿಸಿದ ಮಾರ್ಗ ಮತ್ತು ಅದರಿಂದಾಗಿಯೇ ಎದುರಿಸಬೇಕಾಗಿ ಬಂದ ಸಶಸ್ತ್ರ ಬಂಡಾಯಗಳ ವಿಷಮ ಸಂದರ್ಭಗಳೇ ಕಾರಣವೆಂದು ಅಸ್ಗರ್ ಅಲಿ ಅಭಿಪ್ರಾಯ ಪಡುತ್ತಾರೆ. (ವಿವೇಕಾನಂದರು, ಪೈಗಂಬರರ ಅಧ್ಯಾತ್ಮಿಕ ಸಾಧನೆ ಒಂದು ಹಂತದಾಚೆಗೆ ದಾಟದೇ ಇದ್ದುದೇ ಇದಕ್ಕೆ ಕಾರಣವೆಂದು ಹೇಳುತ್ತಾರೆ!) ಅಸ್ಗರ್ ಪ್ರಕಾರ ಇಸ್ಲಾಂನ ಹೆಗ್ಗುರುತುಗಳೆಂದು ಹೇಳಲಾಗುವ ಸೋದರತೆ ಮತ್ತು ಸಮಾನತೆಗಳು ನಮಾಜ್ಗೆ ಎಲ್ಲರೂ ಒಂದೇ ಸಾಲಿನಲ್ಲಿ ಸಮಾನವಾಗಿ ನಿಲ್ಲುವುದಕ್ಕಷ್ಟೇ ಸೀಮಿತವಾಗಿದ್ದರೆ, ದಯೆ-ದಾನಗಳು ಸಾಂದರ್ಭಿಕ ಮತ್ತು ಸಾಂಕೇತಿಕ ವಿಧಿಗಳಾಗಿ ಮಾತ್ರ ಜಾರಿಯಲ್ಲಿವೆ. ಹೀಗಾಗಿ ಮುಸ್ಲಿಂ ಸಮಾಜ ಎಲ್ಲ ಸಮಾಜಗಳಂತೆಯೇ ಐತಿಹಾಸಿಕವಾಗಿ ಆರ್ಥಿಕ ಮತ್ತು ಸಾಮಾಜಿಕ ಅಸಮತೆಗಳ ಸಮಾಜವಾಗಿ ಉಳಿದುಕೊಂಡು ಬಂದಿದೆ. ಹಾಗಾಗಿಯೇ ಮಹಮ್ಮದರು ಎತ್ತಿ ಹಿಡಿದ ಮೌಲ್ಯಗಳನ್ನು ಈ ಕಾಲಕ್ಕೂ ಪ್ರಸ್ತುತಗೊಳಿಸಿಕೊಳ್ಳಲು, ಅಂದರೆ ಸೋದರತೆ, ಸಮಾನತೆಗಳನ್ನು ಸ್ಥಾಪಿಸಲು ಇಸ್ಲಾಂ ಮೊದಲು ತನ್ನನ್ನು ತಾನು ದೇಶ-ಕಾಲಗಳ ಬಂಧನಗಳಿಂದ ಬಿಡಿಸಿಕೊಳ್ಳಬೇಕೆಂದು ಲೇಖಕರು ಸೂಚಿಸುತ್ತಾರೆ.
ಆದರೆ ಇಂದು ನಮ್ಮ ಕಣ್ಮುಂದೆಯೇ, ಬುರ್ಕಾಗಳ, ಟೋಪಿಗಳ, ವೈಭವೋಪೇತ ಮಸೀದಿಗಳ, ಮದರಸಾಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಇಂದು ಮೂಲೆ ಹಳ್ಳಿಗಳಲ್ಲೂ ತಬ್ಲೀಸ್(?)ಗಳೆಂದು ಹೇಳಲಾಗುವ ಪುಟ್ಟ ಹುಡುಗರಿಂದ ಹಿಡಿದು ವೃದ್ಧರವರೆಗಿನ ವಿವಿಧ ವಯೋಮಾನದವರು ಸೇರಿದ ಮತ ಪ್ರಚಾಕರ ತಂಡ, ಮುಸ್ಲಿಮರ ಮನೆ ಮನೆಗೂ ಭೇಟಿ ನೀಡಿ ಮತೀಯ ಸಂಪ್ರದಾಯಗಳನ್ನೂ, ಭೌತಿಕ ಗುರುತುಗಳನ್ನೂ ಪುನರುಜ್ಜೀವನಗೊಳಿಸಲು; ಮತ್ತೂ ಮುಖ್ಯವಾಗಿ, ಇತರ ಧರ್ಮಗಳ ಸಂಪರ್ಕದಲ್ಲಿ ಇಸ್ಲಾಂ ರೂಢಿಸಿಕೊಂಡ ಅಷ್ಟಿಷ್ಟು ಸ್ಥಳೀಯತೆಯ ಗುಣ-ಸ್ಪರ್ಶಗಳನ್ನೂ ಅಳಿಸಿ ಹಾಕುವ ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಇದರಿಂದಾಗಿ, ಭಾರತದ ಸ್ವಾತಂತ್ರ್ಯೋತ್ತರ ನವೋದಯದ ಸಂದರ್ಭದಲ್ಲಿ ಕಾಲ-ದೇಶಬದ್ಧವಾದ ಹೊರ ಚಹರೆಗಳನ್ನು ಕ್ರಮೇಣ ವಿಸರ್ಜಿಸಿಕೊಳ್ಳುತ್ತಾ ಪ್ರಗತಿಪರವಾಗತೊಡಗಿದ್ದ ಭಾರತೀಯ ಮುಸ್ಲಿಂ ಸಮುದಾಯ, ಈಗ ಸಾಮಾನ್ಯ ಜನಜೀವನದ ಮುಖ್ಯವಾಹಿನಿಯ ಮಧ್ಯೆ ತನ್ನ ಮತೀಯ ಗುರುತುಗಳೊಂದಿಗೆ, ತಾನು ಬೇರೆಯೇ ಎಂದು ಸಾರುವಂತೆ ಎದ್ದು ಕಾಣತೊಡಗಿದೆ. ಇದಕ್ಕೆ ಬಾಬ್ರಿ ಮಸೀದಿ ನಾಶದೊಂದಿಗೆ ವ್ಯಾಪಕವಾಗಿ ಸ್ಫೋಟಗೊಂಡ ಹಿಂದೂ ಕೋಮುವಾದದ ಒತ್ತಡಗಳೇ ಕಾರಣವೆಂದು ಹೇಳುವುದು ಒಂದು ಸುಲಭದ ಉತ್ತರವಾದೀತು. ಹೆಚ್ಚೆಂದರೆ, ಅದೊಂದು ನೆಪ ಮಾತ್ರ.
ಜಗತ್ತಿನಾದ್ಯಂತ ತೈಲಾಧಾರಿತ ನಾಗರೀಕತೆ ದಾಪುಗಾಲಿಟ್ಟು ಬೆಳೆಯುತ್ತಿದ್ದಂತೆ, ಮುಸ್ಲಿಂ ಮತೀಯತೆಯೂ ದಾಪುಗಾಲಿಟ್ಟು ಬೆಳೆಯತೊಡಗಿದ್ದನ್ನು ನಾವು ನೋಡುತ್ತಾ ಬಂದಿದ್ದೇವೆ. ಇದರ ಭಾಗವಾಗಿಯೇ ಮಧ್ಯ ಪ್ರಾಚ್ಯದ ಪೆಟ್ರೋ ಡಾಲರುಗಳು ಭಾರತದಾದ್ಯಂತ ಹರಿದಾಡಿ ಸಣ್ಣ ಪುಟ್ಟ ಊರುಗಳಲ್ಲೂ ವೈಭವೋಪೇತ ಮಸೀದಿಗಳು ಎದ್ದುದನ್ನೂ, ಅವುಗಳ ಜೊತೆಗೇ ಗಡ್ಡ, ಟೋಪಿ, ಬುರ್ಕಾಗಳ ಸಂಸ್ಕೃತಿ ದಟ್ಟವಾಗಿ ಬೆಳೆಯತೊಡಗಿದ್ದನ್ನೂ ನಾವು ಗಮನಿಸಿದ್ದೇವೆ. ತೊಂಭತ್ತರ ದಶಕದಲ್ಲಿ ರಾಜಕೀಯ ನೆಲೆಯಲ್ಲಿ ಅವತರಿಸಿದ ಹಿಂದೂ ಕೋಮುವಾದ ಹೆಚ್ಚೆಂದರೆ ಇದರ ವೇಗೋತ್ಕರ್ಷ ಮತ್ತು ತೀವ್ರತೆಯನ್ನು ಹೆಚ್ಚಿಸಿ, ಇದಕ್ಕೆ ಹುಸಿ ಸಮರ್ಥನೆಯೊಂದನ್ನು ಒದಗಿಸಿರಬಹುದಷ್ಟೆ. ಹಾಗೆ ನೋಡಿದರೆ, ಅಸ್ಗರ್ ಅಲಿಯವರು ತಮ್ಮ ಪುಸ್ತಕದಲ್ಲಿ; ಇತಿಹಾಸದಲ್ಲಿ ಮುಸ್ಲಿಂ ಸಾಮ್ರಾಜ್ಯ ವಿಸ್ತರಿಸುತ್ತಾ ಅದರ ಸಂಪತ್ತು ಹೆಚ್ಚಿದ ಸಂದರ್ಭದಲ್ಲೆಲ್ಲಾ ಇಸ್ಲಾಂನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಬೆಳೆದು, ಅದು ಮೂಲಭೂತವಾದಿಯಾಗತೊಡಗಿದ್ದನ್ನು ನಮ್ಮ ಗಮನಕ್ಕೆ ತರುತ್ತಾರೆ. ಬಹುಶಃ ಇದು ಇಸ್ಲಾಂಗೆ ಮಾತ್ರ ಅನ್ವಯಿಸುವ ಮಾತಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ ಐ.ಟಿ.-ಬಿ.ಟಿ. ಉದ್ಯಮಗಳು ವಿಪರೀತ ಗತಿಯಲ್ಲಿ ಬೆಳೆದು, ಅದರ ವೈವಿಧ್ಯಮಯ ಪರಿಣಾಮಗಳಿಂದಾಗಿ ಕೆಲವು ವರ್ಗಗಳಲ್ಲಿ ಅನುಚಿತವೆನಿಸುವಷ್ಟು ವಿಪರೀತ ಸಂಪತ್ತು ಸೃಷ್ಟಿಯಾಗುತ್ತಿದ್ದಂತೆ, ಈ ರಾಜ್ಯ ಹಿಂದೂ ಕೋಮುವಾದದ ದಟ್ಟ ಪ್ರಭಾವಕ್ಕೆ ಸಿಕ್ಕತೊಡಗಿದುದನ್ನು ಇದೇ ನೆಲೆಯಲ್ಲಿ ವಿವರಿಸಬಹುದೇನೋ!
ಆದರೆ ಹಿಂದೂ ಕೋಮುವಾದದ ಬಗ್ಗೆ ಎಚ್ಚರಿಸಲು, ಅದನ್ನು ಖಂಡಿಸಲು, ಎದುರಿಸಲು ಹಿಂದೂಗಳೆನಿಸಿಕೊಂಡ ಸಮುದಾಯದಲ್ಲೇ ಬುದ್ಧಿಜೀವಿ - ಲೇಖಕ - ಕಲಾವಿದರ ವರ್ಗವೊಂದು ಸದಾ ಕ್ರಿಯಾಶೀಲವಾಗಿರುತ್ತದೆ. ಇದು ಹಿಂದೂ ಧರ್ಮದ ಬತ್ತದ ಸೃಜನಶೀಲತೆಗೆ, ಜೀವಂತಿಕೆಗೆ, ವಿಶಿಷ್ಟ ಬಹುಮುಖ ಸೌಂದರ್ಯಕ್ಕೆ ಕಾರಣವೂ ಆಗಿದೆ. ಆದರೆ ಇಸ್ಲಾಂನಲ್ಲಿ? ಭಾರತದಲ್ಲಂತೂ ಈಗ ಅದರ ಸೆಲೆಯೇ ಕಾಣದಾಗಿದೆ. ಕರ್ನಾಟಕದ ಮಟ್ಟಿಗಂತೂ ಸಾರಾ ಅಬೂಬಕರ್ ಎಂಬ ದಿಟ್ಟ ಮತ್ತು ಸಾತ್ವಿಕ ಮಹಿಳೆಯ ಹೊರತಾಗಿ, ಇನ್ನೊಂದು ಪ್ರತಿಭಟನೆಯ ಧ್ವನಿ ಕೇಳದಾಗಿದೆ. ಶಾಬಾನು ಅವರ ಹೋರಾಟದಂತೆಯೇ, ಇವರ ಹೋರಾಟವನ್ನೂ ನಿಷ್ಕ್ರಿಯಗೊಳಿಸುವ ಪ್ರಯತ್ನಗಳು ಈಗಲೂ ನಡೆದೇ ಇವೆ. ಆಶ್ಚರ್ಯವೆಂದರೆ, ಇದರಲ್ಲಿ ಮುಸ್ಲಿಂ ಮೂಲಭೂತವಾದಿಗಳೊಂದಿಗೆ ಹಿಂದೂ ಕೋಮುವಾದಿಗಳೂ ಸೇರಿಕೊಂಡಿರುವುದು! ಯಾವಾಗಲೂ ಹಾಗೇ; ಇವರು ಇಂತಹ ಪರಸ್ಪರ ಅಂತಃಸ್ಫೂರ್ತಿಯ ಮತ್ತು ಪೂರಕ ಚಟುವಟಿಕೆಗಳ ಮೂಲಕವೇ ತಮ್ಮ ಸಾಮಾನ್ಯ ಶತ್ರುವನ್ನು ಗುರುತಿಸಿ ನಾಶ ಮಾಡುತ್ತಾ, ಬೆಳೆಯುತ್ತಾ ಹೋಗುವುದು! ಅದೇನೇ ಇರಲಿ, ಅಸ್ಗರ್ ಅಲಿ ಇಂಜಿನಿಯರ್‌ರ ಹಾಲಿ ಪುಸ್ತಕ, ದೈವಶಾಸ್ತ್ರಜ್ಞರ ಹೊರತಾಗಿ ಇಸ್ಲಾಮನ್ನು ಐತಿಹಾಸಿಕವಾಗಿ ವಿಶ್ಲೇಷಿಸಲು ಮಾಡಿರುವ ಭಾರತೀಯನೊಬ್ಬನ ಮೊದಲ ಪ್ರಯತ್ನವಾಗಿದೆ (ಇದನ್ನು ಲೇಖಕರೇ ಹೇಳಿಕೊಂಡಿದ್ದಾರೆ) ಎಂದ ಮೇಲೆ, ಭಾರತೀಯ ಇಸ್ಲಾಮಿನ ಇಂದಿನ ಸ್ಥಿತಿಗತಿಗಳ ಬಗ್ಗೆ ಹೇಳಲು ಇನ್ನೇನು ಉಳಿದಿದೆ?
ಭಾರತದಲ್ಲಿ ಮುಸ್ಲಿಂ ಬುದ್ಧಿಜೀವಿಗಳು ಇಲ್ಲವೆಂದಲ್ಲ. ಇರ್ಫಾನ್ ಹಬೀಬ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರಿಂದ ಹಿಡಿದು, ಶಬನಾ ಅಜ್ಮಿಯವರೂ ಸೇರಿದಂತೆ ನಮ್ಮ ಅನೇಕ ಮುಸ್ಲಿಂ ಕನ್ನಡ ಲೇಖಕರವರೆಗೆ ಬುದ್ಧಿಜೀವಿ - ಲೇಖಕ - ಕಲಾವಿದರ ಒಂದು ದೊಡ್ಡ ದಂಡೇ ಇದೆ! ಇವರಲ್ಲಿ ಬಹಳಷ್ಟು ಜನ ಮುಸ್ಲಿಂ ಧರ್ಮದಲ್ಲಿಯೇ, ಮುಸ್ಲಿ ಸಂಪ್ರದಾಯದಂತೆಯೇ ಮದುವೆಯಾಗಿ ತಮ್ಮ ಮಕ್ಕಳನ್ನೂ ಮುಸ್ಲಿಂ ಸಂಸ್ಕೃತಿಯಲ್ಲೇ ಬೆಳೆಸುತ್ತಿದ್ದರೂ (ಅದೊಂದು ಅಪರಾಧವೆಂದು ನಾನು ಖಂಡಿತ ಹೇಳುತ್ತಿಲ್ಲ!), ತಮ್ಮನ್ನು ಮುಸ್ಲಿಂ ಬುದ್ಧಿಜೀವಿಗಳೆಂದು ಮಾತ್ರ ಕರೆಯಬಾರದೆಂದು ಆಗ್ರಹಿಸುವ ವಿಶೇಷ ಎಚ್ಚರಿಕೆ ವಹಿಸುತ್ತಾರೆ! ಬಹುಶಃ ಹಾಗೆ ಕರೆದುಬಿಟ್ಟರೆ, ಭಾರತೀಯ ಸಮಾಜದ ವಿಮರ್ಶೆ ಎಂಬ ಸ್ಥೂಲ ಹೆಸರಿನಲ್ಲಿ, ಇತರರೊಂದಿಗೆ ಸೇರಿ ಹಿಂದೂ ಜೀವನ ಪದ್ಧತಿಯ ವಿಮರ್ಶೆ ಮಾಡುವ ತಮ್ಮ ಬೌದ್ಧಿಕ ಕರ್ತವ್ಯಕ್ಕೆ ಅಡ್ಡಿಯಾಗಬಹುದೆಂದು ಇವರು ಭಾವಿಸಿರಬಹುದು! ಅದೇನೇ ಇದ್ದರೂ, ಇವರ ಭಾರತೀಯ ಸಮಾಜದ ವಿಮರ್ಶೆಯ ಭಾಗವಾಗಿ ಮುಸ್ಲಿಂ ಸಮಾಜದ ವಿಮರ್ಶೆಯೂ ಸೇರಿಕೊಂಡಿದ್ದರೆ; ಹಿಂದೂ ಜಾತಿ ಪದ್ಧತಿ, ಅಸ್ಪೃಶ್ಯತೆ, ಮಠ ವ್ಯಸ್ಥೆ, ಮೌಢ್ಯಾಚಾರಗಳನ್ನು ಟೀಕಿಸುವಂತೆಯೇ ಮುಸ್ಲಿಂ ಧರ್ಮದ ಸದ್ಯದ ಜಡತೆ, ಕಂದಾಚಾರ, ಪ್ರತಿಗಾಮಿತನಗಳನ್ನೂ ಟೀಕಿಸತೊಡಗಿದ್ದರೆ ಮುಸ್ಲಿಂ ಮುಲ್ಲಾಶಾಹಿ ಇಷ್ಟೊಂದು ಬೆಳೆಯುತ್ತಿರಲಿಲ್ಲವೇನೋ. ಹಾಗೇ, ನಮ್ಮ ಕೋಮು ಪರಿಸ್ಥಿತಿ ಕೂಡ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲವೇನೋ!
ಇನ್ನು ಕರ್ನಾಟಕದ ಮುಸ್ಲಿಂ ಬುದ್ಧಿಜೀವಿಗಳಲ್ಲ್ಲಿ ಕೆಲವರು ತಮ್ಮ ಹೆಂಡತಿಗೆ ಬುರ್ಕಾ ಹಾಕಿಸಿಕೊಂಡು ಓಡಾಡುತ್ತಾ, ಪ್ರಗತಿಪರ ಚಟುವಟಿಕೆಗಳಲ್ಲೂ ಮಿಂಚಲು ಯತ್ನಿಸಿದರೆ, ಇನ್ನು ಕೆಲವರು ಯಾರಿಗೂ ಕಾಣದಂತೆ ಟೋಪಿ ಏರಿಸಿಕೊಂಡು ಕಳ್ಳ ಮಾರ್ಗದಲ್ಲಿ ಮಸೀದಿಗೆ ಹೋಗಿ ಬಂದರೂ ಬಂಡಾಯದ ಬಡಾಯಿ ಕೊಚ್ಚಲು ಮಾತ್ರ ಹಿಂಜರಿಯುವುದಿಲ್ಲ! ಹೀಗಾಗಿ, ಭಾರತೀಯ ಮುಸ್ಲಿಂ ಮೂಲಭೂತವಾದದ ಅತ್ಯಂತ ನಿರ್ಲಜ್ಜ ಉದಾಹರಣೆಯಂತಿರುವ ಶಾಬಾನು ಪ್ರಕರಣದ ಬಗ್ಗೆ ಒಂದೂ ಸೊಲ್ಲೆತ್ತದ, ಅದರಲ್ಲಿ ಅಂತರ್ಗತವಾಗಿದ್ದ ಅಮಾನವೀಯತೆಯ ವಿರುದ್ಧ ಒಂದು ಕಾರ್ಯಕ್ರಮವನ್ನೂ ಸಂಘಟಿಸಲಾಗದ ನಮ್ಮ ಈ ಮುಸ್ಲಿಂ ಬುದ್ಧಿಜೀವಿ ವರ್ಗದ ಯಾವುದೇ ವಿದ್ವತ್ತು, ಪ್ರತಿಭೆ ಮತ್ತು ಕ್ರಾಂತಿಕಾರತ್ವಗಳು ಪ್ರದರ್ಶನದ, ಮಾರಾಟದ ಸರಕಿಗಿಂತ ಹೆಚ್ಚಿನದೇನಲ್ಲ.
ಈ ದೃಷ್ಟಿಯಿಂದ ಅಸ್ಗರ್ ಅಲಿಯವರ ಪುಸ್ತಕದಲ್ಲಿ ಎದ್ದು ಕಾಣುವ ಒಂದು ಕೊರತೆ ಎಂದರೆ, ಇಸ್ಲಾಂನ ಭಾರತೀಯ ಆವೃತ್ತಿಯ ಐತಿಹಾಸಿಕತೆ ಮತ್ತು ಅದರ ವಿಶ್ಲೇಷಣೆ ಇಲ್ಲದಿರುವುದು. ಏಕೆಂದರೆ, ಭಾರತೀಯ ಇಸ್ಲಾಂಗೆ ಎರಡು ಮುಖಗಳಿವೆ; ಒಂದು ಪಶ್ಚಿಮದ ಕಡಲ ಮೂಲಕ ಬಂದ ನಾಜೂಕಿನ ವ್ಯಾಪಾರಿ ಇಸ್ಲಾಂ, ಮತ್ತೊಂದು ವಾಯುವ್ಯ ಗಡಿ ಮೂಲಕ ಬಂದ ಆಕ್ರಮಣಕಾರಿಯಾದ ಒರಟು ಇಸ್ಲಾಂ ಎಂದು ಹೇಳಲಾಗುತ್ತದೆ. ಆದರೆ ಇಂದು ಈ ಸೂಕ್ಷ್ಮ ವಿಂಗಡಣೆಯೇ ಕಾಣೆಯಾಗಿ, ಇವು ಒಂದು ಅಖಂಡ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಗೊಳ್ಳುತ್ತಿರುವುದರ ಹಿಂದೆ ಇರುವ ರಾಜಕಾರಣವಾದರೂ ಯಾವುದು ಎಂಬುದನ್ನೂ ಲೇಖಕರು ಚರ್ಚಿಸಿದ್ದರೆ ಪುಸ್ತಕ ಇಂದಿಗೆ ಹೆಚ್ಚು ಪ್ರಸ್ತುತವೆನಿಸುತ್ತಿತ್ತು. ಜೊತೆಗೆ ಹಿಂದೂ ಧರ್ಮದೊಡನೆಯ ಸಂಘರ್ಷ - ಸಂವಾದಗಳಲ್ಲಿ; ಜಾತಿ ಪದ್ಧತಿಯಿಂದಾಗಿ ಭ್ರಷ್ಟಗೊಂಡು ಅವನತಿಯ ಸ್ಥಿತಿಯಲ್ಲಿದ್ದ ಅದಕ್ಕೆ ಸಮಾನತೆ ಮತ್ತು ಸೋದರತೆಗಳ ಲೌಕಿಕ ಪಾಠಗಳನ್ನು ಹೇಳಿದ ಇಸ್ಲಾಂ (ಇಸ್ಲಾಂ ಪ್ರವೇಶದ ನಂತರವೇ ಹಿಂದೂ ಧರ್ಮದಲ್ಲಿ ಆತ್ಮಾವಲೋಕನ ಹಾಗೂ ಸುಧಾರಣೆಗಳ ಯುಗ ಆರಂಭವಾದುದೆಂಬುದನ್ನೂ ಇಲ್ಲಿ ಗಮನಿಸಬೇಕು), ಹಿಂದೂ ಧರ್ಮದ ಸುಧಾರಣಾಶೀಲತೆ ಮತ್ತು ಅಧ್ಯಾತ್ಮಿಕ ಸುಭಗತೆಗಳನ್ನು ಕಲಿಯದೇ ಹೋದದ್ದೇಕೆ ಎಂಬುದನ್ನೂ ವಿಶ್ಲೇಷಿಸಿದ್ದರೆ ಪುಸ್ತಕ ಹೆಚ್ಚು ಅರ್ಥಪೂರ್ಣವೆನಿಸುತ್ತಿತ್ತು.
ಅದೇನೇ ಇರಲಿ, ಈ ಪುಸ್ತಕದ ಓದನ್ನು ನೆಪವಾಗಿಸಿಕೊಂಡು ನಾನು ಇಷ್ಟೆಲ್ಲ ವಿಸ್ತೃತವಾಗಿ ಬರೆಯಲು ಎರಡು ತುರ್ತು ಕಾರಣಗಳಿವೆ. ಒಂದು, ಅನಿಯಂತ್ರಿತ ಮತ್ತು ಅವಿಮರ್ಶಿತ ಮುಸ್ಲಿಂ ಮೂಲಭೂತವಾದ ತನ್ನ ಸಮುದಾಯವನ್ನು ಕತ್ತಲ ಕೂಪಕ್ಕೆ (ಮೊದಲು ಮುಖವಾದರೂ ಕಾಣುವಂತಿದ್ದ ಬುರ್ಖಾಗಳಲ್ಲೀಗ ಕಣ್ಣುಗಳ ಕಿಂಡಿಗಳು ಮಾತ್ರ ತೆರೆದಿವೆ!) ತಳ್ಳುತ್ತಿದ್ದರೆ, ಅದರ ಸಾದೃಶ್ಯದಲ್ಲಿ ಹಿಂದೂ ಮೂಲಭೂತವಾದ ತನ್ನಲ್ಲಿ ತಾನೇ ಅಲ್ಲದೆ ಜನಸಾಮಾನ್ಯರ ಮಧ್ಯೆಯೂ ವ್ಯಾಪಕ ಸಮರ್ಥನೆ ಕಂಡುಕೊಳ್ಳುತ್ತಾ, ಹಣೆ ತುಂಬಾ ಕುಂಕುಮ ಬಳಿದುಕೊಂಡು ಭೀಕರ ರಾಜಕೀಯ ರೂಪವನ್ನು ತಾಳುತ್ತಿರುವುದು. ಈ ಬಜೆಟ್‌ನಲ್ಲಿ ನಮ್ಮ ಮುಖ್ಯಮಂತ್ರಿಗಳು ಹತ್ತಾರು ಜಾತಿ ಮಠಗಳಿಗೆ ಮತ್ತು ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿಗಳ ನೆರವು ಘೋಷಿಸಿರುವುದು ಮತ್ತು ಶಿವರಾತ್ರಿ ಸಂದರ್ಭದಲ್ಲಿ ನಮ್ಮ ಮುಜರಾಯಿ ಮಂತ್ರಿಗಳು ಹೃಷಿಕೇಷದಿಂದ ರೈಲಿನಲ್ಲಿ ಸಾವಿರಾರು ಲೀಟರ್‌ಗಟ್ಟಲೇ ಗಂಗಾಜಲ ತರಿಸಿ, ಅದನ್ನು ಶಿವನ ಚಿತ್ರದೊಂದಿಗೆ ಯಡಿಯೂರಪ್ಪನವರ ಚಿತ್ರವೂ ಮುದ್ರಿತವಾಗಿರುವ ಕ್ಯಾಲೆಂಡೆರಿನೊಂದಿಗೆ ಶಿವ ದೇವಾಲಯಗಳಲ್ಲಿ ಹಂಚುವ ಕಾರ್ಯಕ್ರಮ ಹಾಕಿಕೊಂಡಿರುವುದು ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕತೆಯ, ಘನತೆ - ಗೌರವಗಳ ಸರ್ವನಾಶದ ಪ್ರಯತ್ನವಲ್ಲದೆ ಮತ್ತೇನಲ್ಲ. ಇನ್ನು ಸಂವಿಧಾನದ ಘನತೆ - ಗೌರವಗಳ ಪ್ರಶ್ನೆಯಂತೂ ಈ ಕೋಮುವಾದಿ ಸರ್ಕಾರಕ್ಕೆ ಲೆಕ್ಕಕ್ಕೇ ಇಲ್ಲದಂತಾಗಿದೆ. ಕಲಾವಿದರಿಗೇ ಸಂಬಂಧಪಟ್ಟ ಸಾರ್ವಜನಿಕ ಸಮಾರಂಭವೊಂದರಲ್ಲಿ ವೈದ್ಯಕೀಯ ಶಿಕ್ಷಣ ಮಂತ್ರಿ ರಾಮಚಂದ್ರೇ ಗೌಡರು (ಇವರೇಕೆ ಇಲ್ಲಿಗೆ ಬಂದರೋ ತಿಳಿಯದು!) ತಮ್ಮ ಭಾಷಣದಲ್ಲಿನ ಕಲಾ ವಿಮರ್ಶೆಗೆ ಅಡ್ಡಿ ಬಂದರೆಂದು; ಎಚ್ಚರಿಕೆ! ನಾನು.... ಸರ್ಕಾರ ಮಾತಾಡುತ್ತಿರುವುದು ಎಂದು ಅರಚುತ್ತಾ ನಮ್ಮ ಪ್ರತಿಭಾವಂತ ಕಲಾವಿದರೊಬ್ಬರನ್ನು ಸಮಾರಂಭದಿಂದಲೇ ಹೊರಹಾಕಲು ಆಜ್ಞೆ ಮಾಡಿದ ಪ್ರಸಂಗ, ಕೋಮುವಾದವೂ ಸರ್ವಾಧಿಕಾರವೂ ಜೊತೆ ಜೊತೆಗೇ ಬೆಳೆಯುಂತಹವು ಎಂಬುದನ್ನು ಈವರೆಗೆ ಗೊತ್ತಿಲ್ಲದವರಿಗೆ ಗೊತ್ತು ಮಾಡಿದೆ.
ಇನ್ನೊಂದು, ಪಾಕಿಸ್ತಾನದ ಸರ್ಕಾರ ತನ್ನ ವಾಯುವ್ಯ ಗಡಿ ಪ್ರಾಂತ್ಯದ ಸ್ವಾತ್ ಪ್ರದೇಶದಲ್ಲಿ ತಾಲೀಬಾನ್‌ಗೆ ಮಣಿದು ಅಲ್ಲಿ, ಹೆಣ್ಣು ಮಕ್ಕಳು ಶಾಲೆಗಳಿಗೆ ಹೋಗುವುದನ್ನೂ (ಈ ಹಿಂದೆ ಇಂತಹ ಶಾಲೆಗಳ ಮೇಲೆ ಬಾಂಬ್ ಹಾಕಲಾಗಿದೆ), ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದನ್ನೂ ಮತ್ತು ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೂ ನಿಷೇಧಿಸುವ ಹಾಗೂ ವಿವಿಧ ಅಪರಾಧಗಳಿಗೆ ತಲೆ ಕಡಿಯುವ, ಕೈ ಕತ್ತರಿಸುವ, ಕಲ್ಲೆಸೆದು ಕೊಲ್ಲುವ ಇತ್ಯಾದಿ ಅನಾಗರಿಕ ರೀತಿಯ ಶಿಕ್ಷೆಗಳನ್ನೊಳಗೊಂಡ ಷರಿಯತ್ ಕಾನೂನುಗಳ ಜಾರಿಗೆ ಅವಕಾಶ ಮಾಡಿಕೊಟ್ಟಿರುವುದು. ಪಾಕಿಸ್ತಾನ ತನ್ನ ಐತಿಹಾಸಿಕ ತಪ್ಪುಗಳಿಂದಾಗಿ ಈಗ ಇಡೀ ದೇಶಾದ್ಯಂತ ತಾಲೀಬಾನಿನ ಆಕ್ರಮಣದ ಆತಂಕವನ್ನು ಎದುರಿಸುವಂತಾಗಿದೆ. ಏಕೆಂದರೆ, ಪಾಕಿಸ್ತಾನ ತನ್ನ ರಾಷ್ಟ್ರ ಜೀವನದಲ್ಲಿ ಅನೇಕ ಆಧುನಿಕತೆಗಳನ್ನು ಅಳವಡಿಸಿಕೊಂಡಿದ್ದರೂ ಸಂವಿಧಾನಾತ್ಮಕವಾಗಿ ಇಸ್ಲಾಮೀ ರಾಷ್ಟ್ರವಾಗಿಯೇ ಉಳಿದಿದೆ. ಆದುದರಿಂದ ತಾಲೀಬಾನ್ ಕಾರ್ಯಾಚರಣೆ ಹೀಗೇ ಮುಂದುವರೆದರೆ, ಅಮೆರಿಕಾದ ಎಷ್ಟೇ ನೆರವು ಬಂದರೂ, ಅದು ತನ್ನ ಆಧುನಿಕತೆಯನ್ನೆಲ್ಲ ಕಳೆದುಕೊಂಡು ಮುಸ್ಲಿಂ ಮೂಲಭೂತವಾದಿ ರಾಷ್ಟ್ರವಾಗುವ ಅಪಾಯವನ್ನು ತನ್ನ ಹತ್ತಿರಕ್ಕೇ ತಂದುಕೊಂಡಿದೆ: ತಾಲಿಬಾನಿಗಳ ಸ್ವಾತ್, ಇಸ್ಲಾಮಾಬಾದ್‌ನಿಂದ ಕೇವಲ ೨೫೦ ಕಿಲೋಮೀಟರ್ ದೂರದಲ್ಲಿದೆ! ಅಲ್ಲಿಂದ ಭಾರತದ ಗಡಿ ಮತ್ತೆ ಕೇವಲ ೨೫೦ ಕಿಲೋಮೀಟರುಗಳಷ್ಟೇ! ಈವರೆಗಿನ ಬೆಳವಣಿಗೆಗಳನ್ನು ನೋಡಿದರೆ, ಭಾರತದಲ್ಲಿ ತಾಲಿಬಾನಿಗಳ ಅಭಿಮಾನಿಗಳಿಗೇನೂ ಕೊರತೆ ಇರಲಾರದು! ಹಾಗಾಗಿ, ಮುಸ್ಲಿಂ ಬುದ್ಧಿಜೀವಿಗಳೇ ಈಗಲಾದರೂ ಎಚ್ಚರಗೊಳ್ಳಿ! ನಿಮಗೆ, ನಮಗೆ ಇಬ್ಬರಿಗೂ ಕಾಲ ಮಿಂಚಿ ಹೋದೀತು!