ಹೊಸ ಸಮಾಜವಾದ ಇಂದಿನ ಅಗತ್ಯ: ಒಂದು ಸಂದರ್ಶನ

ಹೊಸ ಸಮಾಜವಾದ ಇಂದಿನ ಅಗತ್ಯ: ಒಂದು ಸಂದರ್ಶನ

ಬರಹ

ಹೊಸ ಸಮಾಜವಾದ ಇಂದಿನ ಅಗತ್ಯ: ಒಂದು ಸಂದರ್ಶನ

(ಇದು ಸಾಗರದ ಎಚ್.ಬಿ.ರಾಘವೇಂದ್ರ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಚಾರ್ವಾಕ ವಾರಪತ್ರಿಕೆಯ ವಾರ್ಷಿಕ ಸಂಚಿಕೆಗಾಗಿ ಭೀಮನಕೋಣೆಯ ಚರಕದ ಎಂ.ಎನ್. ಕುಲಕರ್ಣಿಯವರು ನನ್ನೊಡನೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು-ಲೇಖಕ)

ಕರ್ನಾಟಕದ ಕಳೆದ ಮೂರು ದಶಕದ ಸರಿ ಸುಮಾರು ಎಲ್ಲ ಪ್ರಮುಖ ಚಳುವಳಿಗಳಲ್ಲಿ ನೀವು ತೊಡಗಿಕೊಂಡವರು. ಅದು ಸಮಾಜವಾದಿ ಚಳುವಳಿಯಾಗಿರಬಹುದು, ರೈತ ಚಳುವಳಿಯಾಗಿರಬಹುದು, ದಲಿತ ಚಳುವಳಿಯಾಗಿರಬಹುದು ಅಥವಾ ಭಾಷಾ ಚಳುವಳಿಯಾಗಿರಬಹುದು. ಈ ಚಳುವಳಿಗಳಿಂದ ನೀವು ಆಕರ್ಷಿತರಾದದ್ದು ಹೇಗೆ? ಅದರ ಹಿನ್ನಲೆ ಸ್ವಲ್ಪ ವಿವರಿಸಿ.

ಮೊದಲನೆಯದಾಗಿ ನಾನು ಕರ್ನಾಟಕದ ಈ ಎಲ್ಲ ಚಳುವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದೆ ಅಂತ ಹೇಳಲಾರೆ. ಏಕೇಂದ್ರೆ ನಾನು ಒಬ್ಬ ಸರ್ಕಾರಿ ನೌಕರನಾಗಿದ್ದೆ. ಆದರೆ ಈ ಎಲ್ಲಾ ಚಳುವಳಿಗಳ ಬಗ್ಗೆ ನನಗ ಪ್ರೀತಿ - ವಿಶ್ವಾಸಗಳಿದ್ದವು. ಅವುಗಳ ಕಡೆ ನನ್ನ ಗಮನ ಮತ್ತು ಆಸಕ್ತಿಗಳೆರಡೂ ಇದ್ದವು. ನನ್ನ ಒಳ್ಳೆಯ ಸ್ನೇಹಿತರು ಆ ಚಳುವಳಿಗಳಲ್ಲಿದ್ದರು. ಒಬ್ಬ ಸಮಾಜವಾದಿಯಾಗಿ ಅವರ ಒಡನಾಡಿಯಾಗಿ ಆ ಚಳುವಳಿಗಳ ಕುರಿತು ನಾನು ವಿಮರ್ಶೆ ಮಾಡ್ತಿದ್ದೆ. ಈ ಕಾರಣದಿಂದಾಗಿ ಚಳುವಳಿಗಳಲ್ಲಿ ತೊಡಗಿದ ನನ್ನ ಸ್ನೇಹಿತರು ನನ್ನ ಅಭಿಪ್ರಾಯಗಳನ್ನು ಕೇಳ್ತಾಯಿದ್ದರು. ಅವರ ಅಧ್ಯಯನ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಅವರ ಸಭೆಗಳಲ್ಲಿ ವಿಶೇಷ ಆಹ್ವಾನಿತನಾಗಿ ನಾನು ಭಾಗವಹಿಸ್ತಾ ಇದ್ದೆ. ಮುಖ್ಯವಾಗಿ ನಾನು ರೈತ ಚಳುವಳಿ, ದಲಿತ ಚಳುವಳಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೆ ಅಂತ ಹೇಳಬಹುದು. ಭಾಷಾ ಚಳುವಳಿಯ ಬಗ್ಗೆ ನಾನು ವ್ಯಾಪಕವಾಗಿ ಬರೆದಿರುವೆನಾದರೂ, ಅದರೊಂದಿಗೆ ನನ್ನ ಸಂಬಂಧ ಅಷ್ಟಾಗಿ ಇರಲಿಲ್ಲ. ಕಾರಣ, ನನ್ನ ಅಭಿಪ್ರಾಯದಲ್ಲಿ ಅದು ಯಾವುದೇ ತಾತ್ವಿಕತೆ ಇಲ್ಲದೆ, ಬಹು ಸ್ಥೂಲವಾದ ಭಾಷಾಭಿಮಾನವೊಂದನ್ನೇ - ಅದೂ ಅನ್ಯಭಾಷಾ ಅಸಹಿಷ್ಣುತೆಯನ್ನು ಪೋಷಿಸುತ್ತಾ - ಏಕೈಕ ಕಾರ್ಯಕ್ರಮವನ್ನಾಗಿ ಮಾಡಿಕೊಂಡು, ತುಂಬಾ ಒರಟಾದ ಚಳುವಳಿಯಾಗಿ ಬೆಳೆಯತೊಡಗಿದ್ದುದು.

ಸಮಾಜವಾದಿ ಚಳುವಳಿಯಲ್ಲಿ ನಾನು ತೊಡಗಿಕೊಂಡಿದ್ದು ಕೂಡಾ ಅದರ ಅಂತಿಮ ಘಟ್ಟದಲ್ಲಿ, ೭೦ರ ದಶಕದ ತುರ್ತು ಪರಿಸ್ಥಿತಿಯ ಸದರ್ಭದಲ್ಲಿ. ಅದೊಂದು ಆಕಸ್ಮಿಕ ಎನ್ನಬಹುದು. ಡಾ|| ರಾಮಮನೋಹರ ಲೋಹಿಯಾರವರ ರಾಜಕೀಯದ ಮಧ್ಯ ಬಿಡುವು ಪುಸ್ತಕ ಓದಿ ಅದರಿಂದ ಪ್ರಭಾವಿತನಾಗಿ. ರಾಜಕೀಯ ಅಂದರೆ ಕೇವಲ ಚುನಾವಣಾ ರಾಜಕೀಯ ಅಂತ ತಿಳಿದಿದ್ದ ನನಗೆ ಆ ಪುಸ್ತಕ ಓದಿದ ನಂತರ ರಾಜಕೀಯದ ಆಳ, ವಿಸ್ತಾರ ಅರಿವಿಗೆ ಬಂತು. ನಂತರ ಕುತೂಹಲಿತನಾಗಿ ಅವರ ರಾಜಕೀಯ ದರ್ಶನದ ಇತರ ಪುಸ್ತಕಗಳನ್ನು ಓದತೊಡಗಿದೆ. ಹೀಗೆ ನಾನು ತಾತ್ವಿಕ ಕುತೂಹಲದಿಂದ ಸಮಾಜವಾದಿ ಚಳುವಳಿಯ ಸಂಪರ್ಕಕ್ಕೆ ಬಂದವನು.

ನಾನಾಗ ದೆಹಲಿಯ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದೆ. ತುರ್ತು ಪರಿಸ್ಥಿತಿಯ ದಿನಗಳವು. ಅಕಸ್ಮತ್ತಾಗಿ ತುರ್ತು ಪರಿಸ್ಥಿತಿ ವಿರೋಧಿ ಗುಂಪಿನ ಸಂಪರ್ಕಕ್ಕೆ ಬಂದ ನಾನು, ಅದರ ಚಟುವಟಿಕೆಗಳಲ್ಲಿ ಭಾಗವಹಿಸಿದೆ. ಅದರ ಭಾಗವಾಗಿಯೇ ಜೆಪಿಯವರ ಸೆರಮನೆ ದಿನಚರಿಯನ್ನು ಕನ್ನಡಕ್ಕೆ ಅನುವಾದಿಸಿದೆ. ಇದರಿಂದಾಗಿ ಕರ್ನಾಟಕದ ಅನೇಕ ಸಮಾಜವಾದಿಗಳ ಸಂಪರ್ಕ ಏರ್ಪಟ್ಟಿತು. ಮುಖ್ಯವಾಗಿ ದೇವನೂರ ಮಹಾದೇವ, ರಾಜಶೇಖರ ಕೋಟಿ, ನೆಲಮನೆ ದೇವೇಗೌಡ, ಎಂ.ಡಿ.ನಂಜುಂಡಸ್ವಾಮಿ, ತೇಜಸ್ವಿ, ಲಂಕೇಶ್, ಕೆ.ರಾಮದಾಸ್, ರವಿವರ್ಮಕುಮಾರ್, ಪ.ಮಲ್ಲೇಶ್, ಗೋವಿಂದಯ್ಯ ಇತ್ಯಾದಿ. ಇವರೆಲ್ಲ ಅಂದಿನ ಸಮಾಜವಾದಿಗಳಲ್ಲೇ ಕಿಶನ್ ಪಟ್ನಾಯಕ್ ಧಾರೆ ಅಂತ ಒಂದು ಗುಂಪೇನಿತ್ತು ಅದರ ಜೊತೆಗೆ ಗುರುತಿಸಿಕೊಂಡವರು. ಅದು ಅಧಿಕೃತ ಸಮಾಜವಾದಿ ಪಕ್ಷ ೧೯೭೭ರಲ್ಲಿ ಜನತಾ ಪಕ್ಷದಲ್ಲಿ ಲೀನವಾಗಿ ಹೋದ ನಂತರ ಸಮಾಜವಾದವನ್ನ ಪುರ್ನನಿರೂಪಿಸೋ ಮತ್ತು ಆ ಮೂಲಕ ಸಮಾಜವಾದಿ ಚಳುವಳಿಯನ್ನ ಪುರ್ನಸಂಘಟಿಸೋ ಪ್ರಯತ್ನ ಮಾಡ್ತಾ ಇತ್ತು. ಇದು ಸಹಜವಾಗಿಯೇ ನನ್ನನ್ನ ಆಕರ್ಷಿಸಿತು.

ಲೋಹಿಯಾರ ಆಪ್ತ ಶಿಷ್ಯರಲ್ಲೊಬ್ಬರಾದ ಕಿಷನ್ ಸಮಾಜವಾದಿಗಳಲ್ಲಿ ಅಪರೂಪವೆನಿಸತೊಡಗಿದ್ದ ಶಿಸ್ತು ಮತ್ತು ಸರಳ ಬದುಕಿನ ಪ್ರಾಮಾಣಿಕ ಮನುಷ್ಯ. ಇವರ ಸ್ಫೂರ್ತಿಯಲ್ಲಿ ನಾನು ೧೯೭೮ರಲ್ಲಿ ಹಾಸನದಲ್ಲಿ ತರುಣ ಲೋಹಿಯಾವಾದಿಗಳ ಸಮ್ಮೇಳನವೊಂದನ್ನು ಆಯೋಜಿಸಿದೆ. ಹಾಸನ ಆಗ ಹೊಸ ತಲೆಮಾರಿನ ಸಮಾಜವಾದಿಗಳ ಕೇಂದ್ರವಾಗಿತ್ತು. ಮಂಜುನಾಥ ದತ್ತ, ಕೆ.ಟಿ.ಶಿವಪ್ರಸಾದ್, ವೆಂಕಟೇಶಮೂರ್ತಿ ಮುಂತಾದವರಿದ್ದ ಈ ಗುಂಪೇ ಮುಂದೆ ಕರ್ನಾಟಕದ ರೈತ ಚಳುವಳಿಗೆ ಯುವಶಕ್ತಿಯ ಬೆನ್ನೆಲುಬನ್ನು ಒದಗಿಸಿದ್ದು. ನಂತರ ನಾನು ೧೯೮೦ರ ಸುಮಾರಿಗೆ ಬೆಂಗಳೂರಿನಲ್ಲಿ ಅಖಿಲ ಭಾರತ ಸಮಾಜವಾದಿ ಸಮ್ಮೇಳನವೊಂದನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಸಮ್ಮೇಳನಕ್ಕೆ ದೇಶದ ಹಲವಾರು ರಾಜ್ಯಗಳಿಂದ ಸಮಾಜವಾದಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಮಾಜವಾದಿ ಚಳುವಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಪುನಶ್ಚೇತನ ನೀಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಮಾಡಿದ್ದು. ಇದರಲ್ಲಿ ಕರ್ನಾಟಕದ ಸಮಾಜವಾದಿ ಚಿಂತಕರು, ಹೋರಾಟಗಾರರೆನಿಸಿದ್ದ ಪ್ರೊ|| ನಂಜುಂಡಸ್ವಾಮಿ, ಲಂಕೇಶ್, ಅನಂತಮೂರ್ತಿ, ರಾಮದಾಸ್, ತೇಜಸ್ವಿ, ಕಡಿದಾಳು ಶಾಮಣ್ಣ ಮೊದಲಾದವರೆಲ್ಲ ಭಾಗವಹಿಸಿದ್ದರು. ಆಗ ನಡೆಯುತ್ತಿದ್ದ ದಲಿತ ಜಾಥಾವೊಂದರಲ್ಲಿ ಭಾಗವಹಿಸುತ್ತಾ ಬೆಂಗಳೂರಿಗೆ ಬಂದಿದ್ದ ದೇವನೂರ ಮಹಾದೇವ ಮತ್ತು ಬಿ.ಕೃಷ್ಣಪ್ಪ ಸೇರಿದಂತೆ ದಲಿತ ಚಳುವಳಿಯ ಅನೇಕ ಹಿರಿಯ ನಾಯಕರೂ ಈ ಸಮ್ಮೇಳನಕ್ಕೆ ಸಾಕ್ಷಿಯಾದರು. ಜೊತೆಗೆ ರಾಚಪ್ಪ ಬೆಟ್ಸೂರ್, ರಾಚಪ್ಪ ಹಡಪದ್, ವೀರಣ್ಣ ತಿಮ್ಮಾಜಿ ಮುಂತಾದ ಲೋಹಿಯಾ ಕಾಲದ ಸಮಾಜವಾದಿ ಕಾರ್ಯಕರ್ತರು ಅಲ್ಲಿದ್ದರು. ಸಮ್ಮೇಳನದ ವಿಶೇಷತೆ ಏನೆಂದರೆ, ಸಮಾಜವಾದದ ಬಗ್ಗೆ ಅಷ್ಟೇನೂ ಗೊತ್ತಿರದ ಅನೇಕ ಯುವಕರು ಸಮಾಜವಾದದ ಕಲ್ಪನೆಯಿಂದ ಆಕರ್ಷಿತರಾಗಿ ದೊಡ್ಡ ಕನಸಿನೊಂದಿಗೆ ಭಾಗವಹಿಸಿದ್ದುದು. ಅಲ್ಲಿಯೇ ನನಗೆ ಮೊದಲ ಬಾರಿಗೆ ಕರ್ನಾಟಕದಲ್ಲಿನ ಬೃಹತ್ ಸಮಾಜವಾದಿ ಸಮೂಹದ ಪರಿಚಯವಾದದ್ದು.

ನಂತರದ ದಿನಗಳಲ್ಲಿ ನಾನು ಸಮಾಜವಾದ ಕುರಿತು ಕನ್ನಡದಲ್ಲಿ ಬರೆಯುತ್ತಾ ಬಂದೆ. ಈಗಲೂ ಅದನ್ನು ಮುಂದುವರೆಸಿದ್ದೇನೆ. ೧೯೭೯ರಲ್ಲಿ ಸಮಾಜವಾದಿಗಳ ಮುಖವಾಣಿಯಾಗಿದ್ದು, ನಿಂತು ಹೋಗಿದ್ದ ಮಾನವ ಮಾಸಿಕದ ಜವಾಬ್ದಾರಿಯನ್ನು ಸಂಪಾದಕನಾಗಿ ವಹಿಸಿಕೊಂಡು ನೆಲೆಮನೆ ದೇವೇಗೌಡರ ನೆರವಿನಿಂದ ಒಂದು ವರ್ಷ ನಡೆಸಿದೆ. ಅಮೇಲೆ ಸ್ವಲ್ಪ ಸಮಯ ನಾನು ಆಕಾಶವಾಣಿ ಕೆಲಸ ಬಿಟ್ಟು ಲಂಕೇಶ್ ಪತ್ರಿಕೆಯಲ್ಲಿ ವಿಶೇಷ ವರದಿಗಾರನಾಗಿ ಕೆಲಸ ಮಾಡಿದೆ. ಅದು ಕರ್ನಾಟಕದಲ್ಲಿ ಸಮಾಜವಾದಿ ಚಳುವಳಿ ಮತ್ತೆ ಗರಿಗೆದರತೊಡಗಿದ್ದ ರೋಮಾಂಚನಕಾರಿ ಕಾಲ.

ಆ ಸಂದರ್ಭದಲ್ಲಿಯೇ ರೈತ ಚಳುವಳಿ ಹುಟ್ಟಿಕೊಂಡಿದ್ದು. ೧೯೮೦ರಲ್ಲಿ ಕಿಶನ್ ಪಟ್ನಾಯಕ್‌ರವರ ನೇತೃತ್ವದಲ್ಲಿ ರಾಷ್ಟ್ರೀಯ ಸಮಾಜವಾದಿ ಸಮ್ಮೇಳನ ಏನು ನಡೆಯಿತೋ ಅದು ಅಷ್ಟೇನೂ ಪರಿಣಾಮ ಬೀರಲಿಲ್ಲ. ಅದರಿಂದ ಹತಾಶರಾದ ಕರ್ನಾಟಕದ ಕೆಲವರು ಪ್ರೊ|| ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತ ಸಂಘವನ್ನು ಕಟ್ಟಲು ಹೊರಟರು. ನಾನು ನನ್ನ ಯುವ ಸ್ನೇಹಿತರಿಗೆ ರೈತ ಸಂಘ ಬೇಡ ಅಂತಲೇ ಹೇಳಿದೆ. ಸಮಾಜವಾದಿ ಚಳುವಳಿಯನ್ನು ಎಲ್ಲರ ಚಳುವಳಿಯಾಗಿ ಬೆಳೆಸಬೇಕು. ನೀವು ರೈತರಿಗೆ ಪ್ರತ್ಯೇಕ ಚಳುವಳಿ ಮಾಡಿ ಸಮಾಜವಾದದ ಸಮಗ್ರತೆಯನ್ನು ಹಾಳು ಮಾಡುವಿರಿ ಎಂದು ಎಚ್ಚರಿಸಿದೆ. ಆದರೆ ಅವರು ಸಮಾಜವಾದವನ್ನು ರೈತ ಚಳುವಳಿಯ ಮೂಲಕ ಕಟ್ಟುವ ಮಾತನ್ನಾಡಿ ನನ್ನ ಬಾಯಿ ಮುಚ್ಚಿಸಿದರು. ಮುಂದೇನಾಯಿತು ಎಂಬುದು ನಿಮಗೆ ತಿಳಿದೇ ಇದೆ. ಇದನ್ನು ತಡೆಯಲು ನಾವು ಕೆಲವು ಗೆಳೆಯರು ರೈತ ಚಳುವಳಿ ಮತ್ತು ದಲಿತ ಚಳುವಳಿಯನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದಿವಿ. ಇದನ್ನು ವಿರೋಧಿಸಿದ ಎರಡೂ ಚಳುವಳಿಗಳ ಕೆಲವು ನಾಯಕರು ಈ ಎರಡೂ ಚಳುವಳಿಗಳನ್ನು ಅವನತಿಯತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

೭೦-೮೦ರ ದಶಕದಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಸಮಾಜವಾದವನ್ನು ಮತ್ತೆ ಕಟ್ಟಬಹುದು ಎನ್ನೋ ಆಶಾವಾದ ಇತ್ತು, ರಾಜಕೀಯ ವಾತಾವರಣವೂ ಇತ್ತು. ೧೯೭೭ರಲ್ಲಿ ಜೆಪಿಯವರ ಆಗ್ರಹದ ಮೇರೆಗೆ ಭಾರತದ ಎಲ್ಲ ಮುಖ್ಯ ಕಾಂಗ್ರೆಸ್ಸೇತರ ಪಕ್ಷಗಳು ವಿಲೀನವಾಗಿ ರಚಿಸಿದ್ದ ಜನತಾ ಸರ್ಕಾರ, ಸಮಾಜವಾದವನ್ನು ತನ್ನ ನೀತಿಯನ್ನಾಗಿ ಅಳವಡಿಸಿಕೊಂಡು ಜನಮನ್ನಣೆ ಗಳಿಸಿತ್ತು ಎಂಬುದನ್ನು ನಾವು ಮರೆಯಬಾರದು. ಆದರೆ ನಾಯಕರ ದೂರದೃಷ್ಟಿಯ ಕೊರತೆ ಮತ್ತು ಅನೇಕ ವ್ಯಕ್ತಿಗತ ದೌರ್ಬಲ್ಯಗಳ ಕಾರಣದಿಂದ ಅದು ಕುಸಿದು ಬಿತ್ತು. ನಂತರ ನಡೆದ ಸಮಾಜವಾದದ ಅನೇಕ ಬೆರಕೆ ಪ್ರಯೋಗಗಳೂ ವಿಫಲಗೊಂಡು, ೯೦ರ ದಶಕದ ಹೊತ್ತಿಗೆ ಸಮಾಜವಾದ ಕುರಿತಂತೆ ಜನರ ಆಶಾಭಾವನೆಯಲ್ಲ ಕರಗಿ, ಅದು ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡು ಬಿಟ್ತು. ಇದರಿಂದಾಗಿಯೇ ಖಾಸಗೀಕರಣ ಮತ್ತು ಉದಾರೀಕರಣದ ಹುಯ್ಲು ಹೆಚ್ಚಿ, ಜಾಗತೀಕರಣದ ಸ್ವಾಗತಕ್ಕೆ ವೇದಿಕೆ ಸಿದ್ಧವಾಯ್ತು. ಇದೆಲ್ಲದರ ವಿವರವಾದ ವಿಶ್ಲೇಷಣೆಗೆ ಹೊರಟರೆ ತುಂಬಾ ವಿವರಕ್ಕೆ ಹೋಗಬೇಕಾಗುತ್ತೆ. ಈಗ ಬೇಡ ಅದು.

ಇತ್ತೀಚೆಗೆ ನಿಮ್ಮ ಮರಳಿ ಬರಲಿದೆ ಸಮಾಜವಾದ ಎಂಬ ಕೃತಿ ಬಿಡುಗಡೆಯಾಗಿದೆ. ನಾವೆಲ್ಲ ಅದೊಂದು ಆಶಾವಾದದ ಕನಸು ಎಂಬರ್ಥದಲ್ಲಿ ಬರೆದಿದ್ದೀರಿ ಅಂದುಕೊಂಡಿದ್ದೆವು. ಆದರೆ ಇವತ್ತಿನ ಜಾಗತಿಕ ಅರ್ಥವ್ಯವಸ್ಥೆಯ ಕುಸಿತವನ್ನು ಗಮನಿಸಿದರೆ ನಿಮ್ಮ ಆಶಾವಾದದ ಕನಸು ಚಿಗುರೊಡೆಯುತ್ತಿರುವಂತೆ ಕಾಣುತ್ತಿದೆಯಲ್ಲ?

ಮರಳಿ ಬರಲಿದೆ ಸಮಾಜವಾದ ಅಂತ ನಾನು ಹೇಳಿರುವುದು ಈ ಹಿಂದೆ ಕಂಡಿರುವ ಸಮಾಜವಾದವೇ ಮತ್ತೆ ಬರುತ್ತದೆ ಎಂಬರ್ಥದಲ್ಲಲ್ಲ. ಇಂದಿನ ಮುಕ್ತ ಮಾರುಕಟ್ಟೆಯ ಅರ್ಥವ್ಯವಸ್ಥೆಯ ದುಷ್ಪರಿಣಾಮಗಳಿಂದ ಮತ್ತು ಈ ಹಿಂದಿನ ಸಮಾಜವಾದಿ ಚಳುವಳಿಯ ತಪ್ಪುಗಳಿಂದ ಪಾಠ ಕಲಿತು ಮನುಷ್ಯ ಹೊಸದೊಂದು ಸಮಾಜವಾದವನ್ನು ಕಟ್ಟಿಕೊಳ್ಳುತ್ತಾನೆ. ಆ ಮೂಲಕ ಸಮಾಜವಾದ ಹೊಸ ರೂಪದಲ್ಲಿ ಮತ್ತೆ ಬರಲಿದೆ ಎಂಬುದು ನನ್ನ ತೀವ್ರ ಅನ್ನಿಸಿಕೆ. ನಿಮಗೆ ಈಗಾಗಲೇ ಗೊತ್ತಿರುವಂತೆ ಭಾರತದಲ್ಲಿ ಈ ಜಾಗತೀಕರಣದ ರೂವಾರಿ ಎನಿಸಿದ ನಮ್ಮ ಪ್ರಧಾನಿ ಮನಮೋಹನ್‌ಸಿಂಗ್‌ರವರೇ ಕಳೆದ - ೨೦೦೪ರ - ಚುನಾವಣೆಯ ಹೊತ್ತಿಗೆ ಆಮ್ ಆದ್ಮಿ ಸರ್ಕಾರದ ಬಗ್ಗೆ ಅಂದರೆ ಶ್ರೀಸಾಮಾನ್ಯನ ಸರ್ಕಾರದ ಬಗ್ಗೆ ಮಾತನಾಡಬೇಕಾಯಿತು. ಮತ್ತು ಅವರು ಹಣಕಾಸಿನ ಮಂತ್ರಿಯಾಗಿ ತಮ್ಮ ಉದಾರೀಕರಣ - ಖಾಸಗೀಕರಣ ಕಾರ್ಯಕ್ರಮದ ಭಾಗವಾಗಿ ರದ್ದುಗೊಳಿಸಿದ್ದ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮತ್ತು ಕೆಲವು ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರುವ ಭರವಸೆ ನೀಡಬೇಕಾಯಿತು. ಯಾಕೇಂದ್ರೆ ಹಿಂದಿನ ಚುನಾವಣೆಗಳಲ್ಲಿ ಹೆಚ್ಚಿದ ಅಭಿವೃದ್ಧಿ ದರದ ಹೊರತಾಗಿಯೂ, ಈ ಉದಾರೀಕರಣ ಮತ್ತು ಖಾಸಗೀಕರಣಗಳ ನೀತಿಯನ್ನು ಜನ ಒಪ್ಪದೆ ಕಾಂಗ್ರೆಸ್ಸನ್ನು ಸೋಲಿಸಿದ್ದರು. ಹಾಗೇ ಇವರ ಆರ್ಥಿಕ ನೀತಿಯನ್ನು ಇನ್ನಷ್ಟು ತೀವ್ರ ಗತಿಯಲ್ಲಿ ಮುಂದುವರೆಸಿ ಪ್ರಕಾಶಮಾನ ಭಾರತವನ್ನು ಸೃಷ್ಟಿಸಿದ ಭಾಜಪ ನೇತೃತ್ವದ ಸರ್ಕಾರವನ್ನೂ ಜನ ಸೋಲಿಸಿದರು. ಇದರ ಅರ್ಥ ಏನು? ಈ ಉದಾರೀಕರಣ ಮತ್ತು ಖಾಸಗೀಕರಣಗಳನ್ನಾಧರಿಸಿದ ಜಾಗತೀಕರಣ ದೇಶದ ಸಾಮಾನ್ಯ ಜನತೆಗೆ ಒಳಿತನ್ನು ಮಾಡಿಲ್ಲ. ಈಗ ಪ್ರಧಾನಿಯಾಗಿ ಮನಮೋಹನ ಸಿಂಗ್ ಅವರು, ಜಗತ್ತಿನಾದ್ಯಂತ ಮುಕ್ತ ಮಾರುಕಟ್ಟೆ ಆರ್ಥಿಕತೆ ಕುಸಿದು ಜನ ಮತ್ತು ಸರ್ಕಾರಗಳೆರಡೂ ಕಂಗಾಲಾಗಿರುವಾಗ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಸರ್ಕಾರಗಳ ನಿಯಂತ್ರಣದ ಅಗತ್ಯದ ಬಗ್ಗೆ ಮಾತನಾಡುತ್ತಿದ್ದಾರೆ!

ಇನ್ನು ಇವತ್ತಿನ ಜಾಗತಿಕ ಆರ್ಥಿಕ ಹಿಂಜರಿತ ನೋಡಿದರಂತೂ ಮುಕ್ತ ಮಾರುಕಟ್ಟೆಯ ಅರ್ಥ ವ್ಯವಸ್ಥೆ ತನ್ನ ಆಂತರಿಕ ವಿರೋಧಾಭಾಸಗಳಿಂದಲೇ ಕುಸಿದು ಬಿದ್ದಿದೆ ಎಂಬುದು ದಿನೇ ದಿನೇ ಸಾಬೀತಾಗುತ್ತಿದೆ. ಸಮಾಜವಾದಕ್ಕೇನು ಈ ಹಿಂದೆ ಆಘಾತವಾಗಿತ್ತೋ ಅದಕ್ಕಿಂತ ದೊಡ್ಡ ಆಘಾತ ಈಗ ಇದಕ್ಕೆ ಆಗಿದೆ. ಅಮೇರಿಕದ ಲೆಹಮನ್ ಬ್ರದರ್‍ಸ್ ಆಗಲೀ, ಅದರ ಜೊತೆಗೇ ದಿವಾಳಿ ಎದ್ದ ಇನ್ಯಾವುದೇ ಕಂಪನಿಗಳಾಗಲಿ ಏಕೆ ಕುಸಿದು ಬಿದ್ದವು ಎಂದು ನೋಡಿದಾಗ ಅವುಗಳ ಹಿಂದೆ ಇದ್ದುದು ಯಾವುದೇ ಯಾವುದೇ ಸಾಧುವಾದ ಅಥವಾ ಸಂಗತವಾದ ಆರ್ಥಿಕ ತತ್ವವಲ್ಲ; ಬದಲಿಗೆ ಇದ್ದುದು ಬರೀ ದಗಾಕೋರತನ ಎಂಬುದು ಎದ್ದು ಕಾಣುವಂತಾಗಿದೆ. ನಮ್ಮ ಭಾರತದ ಸತ್ಯಂ ಕಂಪ್ಯೂಟರ್‍ಸ್ ಹಗರಣ ಇದಕ್ಕೊಂದು ತಾಜಾ ಉದಾಹರಣೆ. ಒಂದು ಮಿತಿ ಮೀರಿ ಹಣ, ಸಂಪತ್ತು ಎಲ್ಲಿ ಕ್ರೋಢೀಕರಣವಾಗುತ್ತದೋ ಅಲ್ಲಿ ಭ್ರಷ್ಟತೆ ಮತ್ತು ದುಷ್ಟತನ ಸಹಜವೆಂಬಂತೆ ಹುಟ್ಟುತ್ತದೆ. ಸಮಾಜವಾದ ಇದೆಲ್ಲಕ್ಕೂ ಆಂತರಿಕವಾಗಿಯೇ ಮಿತಿಗಳನ್ನು ಸೃಷ್ಟಿಸುವಂತಹ ಮಧ್ಯಮ ಮಾರ್ಗದ ಆರ್ಥಿಕತೆಯ ಮತ್ತು ಬದುಕಿನ ಸಿದ್ಧಾಂತ. ಒಂದು ಸಭ್ಯ ಸರಳ ಸಾಮಾಜಿಕ ಬದುಕು ಅದರ ಮೂಲ ಸ್ಫೂರ್ತಿ.

ಸಮಾಜವಾದದ ಹೆಸರೇ ಸೂಚಿಸುವಂತೆ, ಅದು ಮನುಷ್ಯ ಮೂಲತಃ ಸಮಾಜ ಜೀವಿ ಎನ್ನುವ ನಂಬಿಕೆಯನ್ನಾಧರಿಸಿದ ಸಿದ್ಧಾಂತ. ಅದಕ್ಕೆ ವಿರುದ್ಧವಾಗಿ ಬಂಡವಾಳಶಾಹಿ ಎನ್ನುವುದು ಮನುಷ್ಯನ ವೈಯಕ್ತಿಕ ಸಾಹಸ, ಆಶೆ, ಆಕಾಂಕ್ಷೆಗಳನ್ನು ಆಧರಿಸಿದ ಸಿದ್ಧಾಂತ. ಮನುಷ್ಯ ಮೂಲತಃ ಸಾಮಾಜಿಕ ಜೀವಿ ಎಂಬುದನ್ನು ಮರೆಯುವ ಅದು ಸಾಮೂಹಿಕತೆಯ ಸ್ಪರ್ಶವಿಲ್ಲದೆ, ಮನುಷ್ಯನನ್ನು ಬೇಜವಾಬ್ದಾರನನ್ನಾಗಿ ಮಾಡಿ ಭ್ರಷ್ಟಗೊಳಿಸುತ್ತದೆ, ದಗಾಕೋರನನ್ನಾಗಿ ಮಾಡುತ್ತದೆ ಎಂಬುದು ಇತಿಹಾಸದಲ್ಲಿ ಮತ್ತೆ ಮತ್ತೆ ಸಾಬೀತಾಗಿದೆ. ಇದನ್ನು ಸರಿಪಡಿಸಬೇಕೆಂದರೆ ನಾವು ಸಮಾಜದ ಜೊತೆಗೇ ಮನುಷ್ಯನನ್ನೂ ಕಟ್ಟಬೇಕಾಗಿದೆ. ವ್ಯಕ್ತಿಯನ್ನು ದಮನ ಮಾಡಿ ಸಮಾಜವನ್ನು ಕಟ್ಟಲಾಗುವುದಿಲ್ಲ. ವ್ಯಕ್ತಿ ಮತ್ತು ಸಮಾಜದ ನಡುವಣ ಸಮತೋಲನವನ್ನು ಸೃಷ್ಟಿಸುವುದೇ ಸಮಾಜವಾದ. ಇಂಥ ಸಮಾಜವಾದದ ಅಗತ್ಯವನ್ನು ಮನುಷ್ಯ ಒಂದಲ್ಲಾ ಒಂದು ದಿವಸ ಮನಗಾಣಲೇಬೇಕು ಎಂಬುದು ನನ್ನ ನಂಬಿಕೆ. ಆ ಸೂಚನೆಗಳು ಈಗಾಗಲೇ ಜಗತ್ತಿನಾದ್ಯಂತ ಕಾಣತೊಡಗಿವೆ. ಇನ್ನೊಂದು ಜಗತ್ತು ಸಾಧ್ಯ ಚಳುವಳಿ ಇದರ ಪ್ರತೀಕವಾಗಿದೆ. ಮುಕ್ತ ಮಾರುಕಟ್ಟೆ ಆರ್ಥಿಕತೆಯ ಹರಿಕಾರ್ತಿ ಎನ್ನಬಹುದಾದ ಥ್ಯಾಚರಳ ಬ್ರಿಟನ್ನಿನಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಈಗಾಗಲೇ ಆರಂಭವಾಗಿದ್ದರೆ, ಆಕೆಯ ರಾಜಕೀಯ ಗೆಣೆಕಾರನಾಗಿದ್ದ ರೇಗನ್ನನ ಅಮೆರಿಕಾದಲ್ಲಿ ಅದಕ್ಕಾಗಿ ಇಂದು ಒತ್ತಡ-ಒತ್ತಾಯಗಳು ಹೆಚ್ಚುತ್ತಿವೆ ಎಂಬುದೇ ಸಮಾಜವಾದದ ಅನಿವಾರ್ಯ ಪುನರಾಗಮನದ ಮೊದಲ ಸೂಚನೆಗಳು ಎಂದು ನಾನು ಭಾವಿಸಿದ್ದೇನೆ.

ಕಳೆದ ಎರಡು-ಮೂರು ದಶಕಗಳಲ್ಲಿ ಕರ್ನಾಟಕದಲ್ಲಿ ಕರ್ನಾಟಕದ ಸಮಾಜವಾದಕ್ಕೆ ಪ್ರೊ|| ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿ, ಅನಂತಮೂರ್ತಿ, ರಾಮದಾಸ್‌ರಂತಹ ಧೀಮಂತ ನಾಯಕರ ನಾಯಕತ್ವ ದೊರಕಿತ್ತು. ಅವರಿಂದಾಗಿ ಸಮಾಜವಾದ ಯಾವ ಒಂದು ಉತ್ತುಂಗ ಸ್ಥಿತಿಯನ್ನು ತಲುಪಿತ್ತೋ ಅದರ ನಂತರದ ಕಾಲ ಘಟ್ಟದಲ್ಲಿ ಈಗ ಸಮಾಜವಾದ ಮತ್ತೆ ಬೆಳೆಯಬಲ್ಲ ಸಾಧ್ಯತೆ ಇದೆ ಅಂತೀರಾ?

ಕ್ಷಮಿಸಿ, ಕರ್ನಾಟಕದ ಸಾಂಸ್ಕೃತಿಕ ನಾಯಕರ ಹೆಸರನ್ನು ನೀವೇನು ಹೇಳಿದಿರಿ, ಇವರ ಕಾಲದಲ್ಲಿ ಸಮಾಜವಾದ ತನ್ನ ದೃಷ್ಟಿ ಕೇಂದ್ರವನ್ನು ಕಳೆದುಕೊಂಡು ಗೊಂದಲದ ಗೂಡಾಯಿತೆಂದೇ ಹೇಳಬೇಕು. ಇವರೆಲ್ಲರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತಲೇ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಇವರಲ್ಲಿ ತೇಜಸ್ವಿ ಸ್ವಲ್ಪ ಮಟ್ಟಿಗೆ ಅಪವಾದವಷ್ಟೆ. ಅವರು ಅಖಿಲ ಕರ್ನಾಟಕ ಲೇಖಕ ಹಾಗೂ ಬರಹಗಾರರ ಒಕ್ಕೂಟದ ಹರಿಕಾರರಾಗಿ, ಕರ್ನಾಟಕದಲ್ಲಿ ಸಮಾಜವಾದಿ ತತ್ವ ಚಿಂತನೆಗೆ ಹೊಸ ಆಯಾಮ ನೀಡಿದರು. ಇವರೆಲ್ಲ ದೊಡ್ಡ ಲೇಖಕರು, ಚಿಂತಕರು. ನಂಜುಂಡಸ್ವಾಮಿ ಮತ್ತು ರಾಮದಾಸ್ ದೊಡ್ಡ ಹೋರಾಟಗಾರರು, ಅದರಲ್ಲಿ ಅನುಮಾನವೇ ಬೇಡ. ಇವರ ಚಿಂತನೆ-ಸಾಹಸಗಳ ಸ್ಫೂರ್ತಿಯಿಂದಲೇ ನವ್ಮ್ಮಂಥವರು ಸಮಾಜವಾದಿ ಚಳುವಳಿಯತ್ತ ಆಕರ್ಷಿತರಾದವರು. ಆದರೆ ಇವರೆಲ್ಲ ತಮ್ಮ ಎಲ್ಲ ದ್ವಂದ್ವಗಳನ್ನು, ದೌರ್ಬಲ್ಯಗಳನ್ನು ಇಟ್ಟುಕೊಡೇ ಸಮಾಜವಾದವನ್ನು ಕಟ್ಟಲಿಕ್ಕೆ ಹೊರಟವರು. ಆದರೆ ಈ ಪ್ರಕ್ರಿಯೆಯಲ್ಲಿ ಅವರ ದ್ವಂದ್ವಗಳು, ದೌರ್ಬಲ್ಯಗಳು ಹೆಚ್ಚಾದಂತೆ ಕಂಡವೇ ಹೊರತು ಕಡಿಮೆಯಾದಂತೆ ಕಾಣುವುದಿಲ್ಲ! ಅನಂತಮೂರ್ತಿಯವರ ಪೂರ್ವಕ್ಕೆ ಮುಖ ಪಶ್ಚಿಮಕ್ಕೆ ಪಯಣ ರೂಪಕವೇ ಇದಕ್ಕೊಂದು ಉದಾಹರಣೆ.

ಇದಕ್ಕೆ ಮುಖ್ಯ ಕಾರಣ ಇವರೆಲ್ಲ ಮೂಲತಃ ಲೇಖಕರು ಮತ್ತು ಬಂಡುಕೋರರು. ಹಾಗಾಗಿ ಅತಿ ವೈಯುಕ್ತಿಕ ಜೀವಿಗಳು. ಜೊತೆಗೆ ಇವರಲ್ಲಿ ಕೆಲವರು ಸಮಾಜವಾದ ಜಾರಿಗೆ ಬರಲಿಕ್ಕೆ ಸಾಧ್ಯವಿಲ್ಲವೇನೋ ಎಂಬ ಅನುಮಾನ ಇಟ್ಟುಕೊಂಡೇ ಸಮಾಜವಾದವನ್ನು ಕಟ್ಟಲಿಕ್ಕೆ ಹೊರಟವರು! ಏಕೆಂದರೆ, ಸಮಾಜವಾದ ಅನ್ನುವುದು ಅಷ್ಟು ದೊಡ್ಡ ಆದರ್ಶಗಳನ್ನು ಇಟ್ಟಕೊಂಡ ದೂರಗಾಮಿಯಾದ ಕನಸು. ಆದರೆ ಇವರೆಲ್ಲ ಬಹು ಅವಸರದಲ್ಲಿದ್ದವರು. ಹೀಗಾಗಿ ಇವರ ಬಹುಪಾಲು ಪ್ರತಿಭೆಯೆಲ್ಲ ಪ್ರಭುತ್ವ ವಿರೋಧಿ ತಾತ್ವಿಕ ಅನ್ವೇಷಣೆ ಮತ್ತು ಚಟುವಟಿಕೆಗಳಲ್ಲೇ ಸೋರಿಹೋಗಿ, ಸಮಾಜವಾದದ ರಚನಾತ್ಮಕ ಮುಖ ಸ್ಪಷ್ಟವಾಗಿ ಮೂಡದೇ ಹೋಯಿತು. ಇದೇ ಮಾತು ಸಮಾಜವಾದಿ ಚಳುವಳಿಗಳೆನಿಸಿದ ರೈತ ಮತ್ತು ದಲಿತ ಚಳುವಳಿಗಳ ಕಾರ್ಯಕ್ರಮಗಳಿಗೂ ಅನ್ವಯಿಸುತ್ತದೆ.

ಗೋಪಾಲಗೌಡರು?

ಗೋಪಾಲಗೌಡರು ಇವರಿಗಿಂತ ಹಿಂದಿನ ತಲೆಮಾರಿನವರು ಮತ್ತು ಕೆಟ್ಟದ್ದನ್ನು ಕೆಡುವುದರ ಜೊತೆಗೇ ಒಳ್ಳೆಯದನ್ನು ಕಟ್ಟಲೂ ಶ್ರಮಿಸಿದವರು. ಜೊತೆಗೆ ಅವರು ಸಾರ್ವಜನಿಕ ಜೀವನದಲ್ಲಿ ಎಷ್ಟು ಮುಳುಗಿ ಹೋಗಿರುತ್ತಿದ್ದರೆಂದರೆ, ಅವರ ಬೌದ್ಧಿಕತೆ ವಾಸ್ತವದಲ್ಲಿ ಪರೀಕ್ಷೆಗೆ ಒಳಪಟ್ಟೇ ಸಾಧುತ್ವವನ್ನು ಗಳಿಸಿಕೊಳ್ಳಬೇಕಿತ್ತು! ಲೋಹಿಯಾರವರಾಗಲಿ, ಗೋಪಾಲಗೌಡರಾಗಲಿ ಮತ್ತು ಅವರ ಗೆಳೆಯರಾಗಲಿ ನಿಜವಾಗಿ ದೊಡ್ಡ ತ್ಯಾಗಗಳನ್ನು ಮಾಡಿ ದೊಡ್ಡ ಮನಸ್ಸಿನೊಂದಿಗೆ, ದೊಡ್ಡ ಕನಸುಗಳೊಂದಿಗೆ ಸಮಾಜವಾದಿ ಚಳುವಳಿಯನ್ನು ಕಟ್ಟಿದರು. ಕರ್ನಾಟಕದಲ್ಲಿ ೬೦-೭೦ರ ದಶಕದಲ್ಲಿ ಇವರ ಪಕ್ಷದ ಶಾಸಕರ ಸಂಖ್ಯೆ ಎಷ್ಟೇ ಕಡಿಮೆಯಾಗಿದ್ದರೂ ಕೂಡಾ ಸಾಮಾನ್ಯ ಜನರ ನಿರೀಕ್ಷೆಗಳನ್ನು, ಆಶೋತ್ತರಗಳನ್ನು ಪ್ರತಿನಿಧಿಸಲು ಇದ್ದವರು ಅವರೇನೆ. ಇವತ್ತು ಸಮಾಜವಾದವೆಂದರೆ ವ್ಯಾವಹಾರಿಕವಾಗಿ ಒಂದು ತಮಾಷೆಯ ವಸ್ತು ಎನಿಸಿಕೊಂಡಿದ್ದರೂ ಕೂಡಾ, ಒಂದು ಆದರ್ಶವಾಗಿ ಅದಕ್ಕೆ ಅಷ್ಟೇ ಗೌರವ ಕೂಡಾ ಇದೆ. ಇತ್ತೀಚೆಗೆ ಬಿಜೆಪಿಯ ಮುಖ್ಯಮಂತ್ರಿ ಚಂದ್ರು ಅವರನ್ನ ಒಂದು ಸಮಾರಂಭದಲ್ಲಿ ಭೇಟಿ ಮಾಡಿದ್ದೆ. ಅಲ್ಲಿ ಯಾರೋ ಒಬ್ಬರು ಅವರು ಕೋಮುವಾದಿ ಪಕ್ಷದಲ್ಲಿದ್ದಾರೆಂದು ಆಕ್ಷೇಪಿಸಿದಾಗ ಅವರು, ಏ ನಾನೂ ಸಮಾಜವಾದಿನೇ ಕಣಪ್ಪ. ಈ ಪಕ್ಷದಲ್ಲಿ ಇರಬಹುದು ಅಷ್ಟೆ! ಅಂತ ತಮ್ಮ ರಾಜಕೀಯ ಗೌರವವನ್ನು ಕಾಪಾಡಿಕೊಳ್ಳಲು ಯತ್ನಿಸಿದರು! ಅಂಥವರು ಬಹಳಷ್ಟು ಜನ ಬೇರೆ ಬೇರೆ ಪಕ್ಷಗಳಲ್ಲಿದ್ದಾರೆ. ಸಮಾಜವಾದಿ ಚಳುವಳಿ ಒಂದು ರಾಜಕೀಯ ಪಕ್ಷವಾಗಿ ಉಳಿಯುವಂಥಹ ಶಿಸ್ತನ್ನು, ಧೃಡತೆಯನ್ನು ಉಳಿಸಿಕೊಂಡು ಬರಲಿಲ್ಲ.

ಗೋಪಾಲಗೌಡರೂ ತುಂಬಾ ಅಶಿಸ್ತಿನ ಮನುಷ್ಯ ಅಂತ ಹೇಳ್ತಾರಲ್ಲ?

ಗೋಪಾಲಗೌಡರು ಅಷ್ಟೇ ಅಲ್ಲ, ಲೋಹಿಯರವರೂ ಅಶಿಸ್ತಿನ ಮನುಷ್ಯರೇ ಅಂತ ಹೇಳ್ತಾರೆ. ಲೋಹಿಯರವರನ್ನು ಹಲವು ಬಾರಿ ಸಮಾಜವಾದಿ ಚಳುವಳಿಯಿಂದ ಹೊರ ಹಾಕಲಾಯಿತು, ಅಶಿಸ್ತಿನ ಹೆಸರಿನಲ್ಲಿ. ಸಮಾಜವಾದಿಗಳಲ್ಲಿ ಎರಡು ರೀತಿಯ ಅಶಿಸ್ತಿನ್ನು ನೋಡ್ತೇವೆ. ಒಂದು ರಾಜಕೀಯ ಅಶಿಸ್ತು. ಪಕ್ಷ ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸುವುದು, ಇತರ ನಾಯಕರ ಹೇಳಿಕೆಗಳ ಬಗ್ಗೆ ಬಹಿರಂಗವಾಗಿ ಭಿನ್ನಾಭಿಪ್ರಾಯ ವ್ಯಕ್ತ ಪಡಿಸುವುದು ಒಂದು ರೀತಿಯದಾದರೆ, ಇನ್ನೊಂದು ರೀತಿಯದು ವೈಯಕ್ತಿಕ ಬದುಕಿನ ಅಶಿಸ್ತು. ಹಣಕಾಸಿನ ವಿಷಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವುದು, ಸಮಯ ಪಾಲನೆ ಮಾಡದೇ ಇರುವುದು, ಇನ್ನೊಬ್ಬರ ಬಗ್ಗೆ ಉಡಾಫೆಯಿಂದ ಮಾತನಾಡುವುದು ಇದೆಲ್ಲಾ ಸಮಾಜವಾದಿ ಚಳುವಳಿಯಲ್ಲಿ ಜಾಸ್ತಿ. ಯಾಕೆಂದರೆ ಸಮಾಜವಾದ, ಸಾಮೂಹಿಕ ಬದುಕಿನ ಆದರ್ಶಗಳೊಂದಿಗೆ ವ್ಯಕ್ತಿ ಸ್ವಾತಂತ್ರ್ಯವನ್ನೂ ಎತ್ತಿ ಹಿಡಿಯುವ ಸಿದ್ಧಾಂತವಾಗಿತ್ತು. ಕೆಲವೊಮ್ಮೆ ಇದು ಅತೀಗೆ ಹೋಗುತ್ತಿತ್ತು.

ಗೋಪಾಲಗೌಡರ ವಿಷಯದಲ್ಲಿ ಹೇಳುವುದಾದರೆ ಅವರು ಎಷ್ಟು ಕಷ್ಟ ಪಟ್ಟಿದ್ದಾರೆ ಜೀವನದಲ್ಲಿ ಎಂದರೆ, ಅವರು ಎಷ್ಟೋ ಸಲ ಊಟಕ್ಕಿಲ್ಲದೆ ದಿನ ಕಳೆದಿದ್ದಾರೆ. ಎಷ್ಟೋ ಸಲ ಪಾರ್ಟಿ ಮೀಟಿಂಗ್‌ಗೆ ಹೋಗಬೇಕಿದ್ದರೆ ರೈಲ್ವೆ ಸ್ಟೇಷನ್‌ನಲ್ಲಿ ಕುಳಿತೇ ಇರುತ್ತಿದ್ದರು, ಯಾರಾದರೂ ಬಂದು ಟಿಕೆಟ್ ಕೊಡಿಸ್ತಾರೇನೋ ಅಂತ. ಇವತ್ತು ಯಾರೋ ಎರಡು ರೂಪಾಯಿ ಕೊಟ್ಟಿದ್ದರಿಂದ ಎರಡು ದಿನದ ಖರ್ಚಿಗೆ ತೊಂದರೆಯಿಲ್ಲ ಅಂತ ಬರೆಯುತ್ತಾರೆ ತಮ್ಮ ದಿನಚರಿಯಲ್ಲಿ... ಅಂತಹ ಬಡತನದಲ್ಲಿ ಇದ್ದುಕೊಂಡು ಒಂದು ಕಾಲಘಟ್ಟದ ಯುವಕರ ಕನಸುಗಳನ್ನು ಬಡಿದೆಬ್ಬಿಸುವಂತಹ ಚಳುವಳಿಯನ್ನು ಕಟ್ಟಿದರು ಎನ್ನುವುದು ತುಂಬಾ ದೊಡ್ಡ ವಿಷಯ. ಈ ಹಿನ್ನೆಲೆಯಲ್ಲಿ ಅವರ ಅಶಿಸ್ತಿನ ಬಗ್ಗೆ ಮಾತಾಡುವುದು ಜುಜುಬಿತನವಾದೀತು.

ವ್ಯಕ್ತಿಯನ್ನು ದಮನ ಮಾಡಿ ಸಮಾಜವಾದ ಕಟ್ಟಕ್ಕೆ ಆಗೋಲ್ಲ ಅಂದರಲ್ಲ, ವ್ಯಕ್ತಿಗಿಂತ ಸಮಾಜ ಮುಖ್ಯ ಅಲ್ವಾ? ಒಳ್ಳೆಯದನ್ನು ಕಟ್ಟಲು ಹೊರಟಾಗ ಅದಕ್ಕೆ ಎದುರಾಗುವವರನ್ನು ದಮನ ಮಾಡುವುದು ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗುವುದಿಲ್ಲವೆ?

ವ್ಯಕ್ತಿಯ ದಮನ ಅಥವಾ ವ್ಯಕ್ತಿ ಮತ್ತು ಸಮಾಜಗಳನ್ನು ಬೇರ್ಪಡಿಸಿ ನೋಡುವ ಕಲ್ಪನೆಗಳೇ ಸಮಾಜ ವಿರೋಧಿಯಾದವುಗಳು. ನೋಡಿ, ಸಮಾಜ ಅನ್ನುವುದು ನಾವು ಕಟ್ಟಿಕೊಂಡಿರುವುದು. ಮತ್ತೆ ಮತ್ತೆ ಕಟ್ಟಿಕೊಳ್ಳಬೇಕಾದುದು ಮತ್ತು ಕಟ್ಟಿಕೊಳ್ಳಬಹುದಾದುದು. ಹಾಗಾಗಿ ಮೂಲತಃ ಅದೊಂದು ಕಲ್ಪನೆ. ಆದರೆ ವ್ಯಕ್ತಿ ಕಲ್ಪನೆ ಅಲ್ಲ. ಅವನು ಹುಟ್ಟಿನಿಂದಲೇ ಒಂದು ಸ್ವಾಯತ್ತ ಜೈವಿಕ ಘಟಕ. ಅದೇ ಸಮಾಜದ ಮೂಲ ಶಕ್ತಿ ಕೂಡ. ಅದನ್ನು ದಮನ ಮಾಡಿ ನೀವು ಏನನ್ನೂ ಕಟ್ಟಲಿಕ್ಕೆ ಸಾಧ್ಯವಿಲ್ಲ. ಸಮಾಜವಾದದ ಮುಖ್ಯ ಆಕರ್ಷಣೆ ಏನೆಂದರೆ ಮನುಷ್ಯನ ಖಾಸಗಿತನದ ಮೇಲೆ, ಅವನ ಮೂಲ ಅಸ್ಮಿತೆಯ ಮೇಲೆ ಆಕ್ರಮಣ ಮಾಡದೆ ಸಮಾಜದ ಪುರ್ನನಿರ್ಮಾಣ ಸಾಧ್ಯ ಎಂಬ ಅದರ ನಂಬಿಕೆ. ಅದರಿಂದಾಗಿ ಅದು ರಾಜಕೀಯ ಪಕ್ಷವಾಗಿ ಬೆಳೆಯುವಲ್ಲಿ ಬಹಳಷ್ಟು ಕಡೆ ಎಡರು ತೊಡರುಗಳನ್ನು, ಸಂದಿಗ್ಧಗಳನ್ನು ಎದುರಿಸಬೇಕಾಯಿತು ನಿಜ. ಆದರೆ ವ್ಯಕ್ತಿಯನ್ನು ದಮನ ಮಾಡಿದ ಸಮಾಜವಾದಿ ರಾಷ್ಟ್ರಗಳು ಹೇಗೆ ಉರುಳಿ ಬಿದ್ದಿವೆ, ಹೇಗೆ ನರಳ್ತಾ ಇವೆ ಎಂಬುದನ್ನು ನಾವು ಇವತ್ತು ನೋಡ್ತಾ ಇದ್ದೇವೆ. ಅದು ರಷ್ಯಾ ಇರಬಹುದು, ಅದರ ಸುತ್ತಲಿದ್ದ ರಾಷ್ರಗಳಿರಬಹುದು. ಅಥವಾ ಚೀನ ಇರಬಹುದು.

ಆದ್ದರಿಂದ ವ್ಯಕ್ತಿ ಮತ್ತು ಸಮಾಜಗಳಿಗೆ ಸಂಬಂಧಿಸಿದಂತೆ, ಅಂದಿನ ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ರಾಜಕಾರಣಗಳೆಂಬ ಎರಡು ಅತಿಗಳ ನಡುವೆ ಮನುಷ್ಯನ ಖಾಸಗಿ ಪ್ರಪಂಚವನ್ನು ರಕ್ಷಿಸಿಕೊಂಡೇ ಸಮಾಜವಾದವನ್ನು ಕಟ್ಟಲು ಸಾಧ್ಯವೇ ಅಂತ ಲೋಹಿಯಾರವರು ಕೆಲವು ತಾತ್ವಿಕ ಪ್ರಮೇಯಗಳನ್ನು ಮಂಡಿಸಿದರು. ರಾಜಕೀಯ ಅಧಿಕಾರದ ಮೂಲಕ ಅದಕ್ಕೊಂದು ವಾಸ್ತವಿಕ ನೆಲಗಟ್ಟನ್ನು ಒದಗಿಸಲು ಅವರಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಅವರು ನೆಹರುರಂತಹ ಬಹಳ ಪ್ರಬಲವಾದ ರಾಜಕೀಯ ಎದುರಾಳಿಗೆ ಪ್ರತಿಯಾಗಿ ರಾಜಕಾರಣ ಮಾಡಬೇಕಿತ್ತು. ನೆಹರೂ ಅವರ ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯ ಹೋರಾಟದ ವಾರಸುದಾರಿಕೆ ಬೇರೆ ಇತ್ತು. ಹೀಗಾಗಿ ಅವರ ಜೊತೆ ಭಿನ್ನಾಭಿಪ್ರಾಯ ಇಟ್ಟುಕೊಳ್ಳೋದೇ ದೊಡ್ಡ ವಿಷಯ ಆಗ. ಆದರೂ ಲೋಹಿಯಾರವರು ವ್ಯಕ್ತಿ ಮತ್ತು ಸಮಾಜದ ನಡುವಣ ಸಮತೋಲನವನ್ನು ಕಾಯ್ದು ಕೊಳ್ಳಲು ಮೂರು ಮುಖ್ಯ ಸಂಗತಿಗಳನ್ನು ಪ್ರತಿಪಾದಿಸಿದ್ದರು.

ಮೊದಲನೆಯದಾಗಿ ಅಧಿಕಾರವನ್ನು ಕೇಂದ್ರೀಕರಿಸಬಾರದು. ಅದು ಸದಾ ವಿಕೇಂದ್ರಿಕೃತವಾಗಿರಬೇಕು. ಮತ್ತು ಈ ವಿಕೇಂದ್ರೀಕರಣ ಕೆಳಮಟ್ಟದಿಂದ ಶುರುವಾಗಬೇಕು. ಇದು ಅವರು ಪ್ರತಿಪಾದಿಸಿದ ಚತುಸ್ತಂಭ ರಾಷ್ಟ್ರದ ಕಲ್ಪನೆಯಲ್ಲಿ ಅಡಗಿದೆ. ಎರಡನೆಯದು ಸಂಪತ್ತಿನ ಉತ್ಪಾದನೆಯ ವಿಕೇಂದ್ರೀಕರಣ. ಸಂಪತ್ತು ಅಥವಾ ಮನುಷ್ಯನ ಲೌಕಿಕ ಅಗತ್ಯಗಳು ಅವನ ನೆರೆಹೊರೆಯಲ್ಲೇ ಉತ್ಪಾದಿತವಾಗುವಂತಿರಬೇಕು. ಅದಕ್ಕಾಗಿ ಸಣ್ಣ ಪ್ರಮಾಣದ ತಂತ್ರಜ್ಞಾನದ ಆವಿಷ್ಕಾರವಾಗಬೇಕು. ಇದರಿಂದ ಸಂಪತ್ತು ಅಥವಾ ಬಂಡವಾಳ ಒಂದೆಡೆ ಕೇಂದ್ರಿಕೃತಗೊಳ್ಳದೇ ಸಣ್ಣ ಸಣ್ಣ ಘಟಕಗಳಲ್ಲಿ ಹಂಚಿಹೋಗಿ, ವ್ಯಕ್ತಿ ಸ್ವಾತಂತ್ರ್ಯ ಹರಣ ಕೂಡ ನಿಯಂತ್ರಿಸಲ್ಪಡುತ್ತದೆ. ಮೂರನೆಯದು, ಅಭಿವೃದ್ಧಿ ಎಂದರೆ ಪಶ್ಚಿಮದ ಸದಾ ಏರುತ್ತಾ ಹೋಗುವ ಜೀವನ ಮಟ್ಟದ ಕಲ್ಪನೆಗೆ ಪ್ರತಿಯಾಗಿ, ನಮ್ಮ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗನುಣವಾದ ಸರಳ ಸಭ್ಯ ಜೀವನ ಮಟ್ಟದ ಕಲ್ಪನೆ.

ಇದು ಗಾಂಧೀಜಿಯವರಿಂದ ಅವರು ಪಡೆದ ಪ್ರೇರಣೆಯ ಫಲ. ಗ್ರಾಮ ಸ್ವರಾಜ್ಯ ಕಲ್ಪನೆಯ ವಿಸ್ತರಣೆ. ಆದರೆ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಕಾಂಗ್ರೆಸ್ ತೋರಿದ ಅವಸರದಲ್ಲಿ, ರಾಷ್ಟ್ರ ವಿಭಜನೆಯ ಗೊಂದಲದಲ್ಲಿ ಈ ಚಿಂತನೆಯೇ ನಮ್ಮ ಸಂವಿಧಾನ ಕರ್ತೃಗಳ ಮನದಿಂದ ಮರೆಯಾಯಿತು. ಅಧಿಕಾರ ಮತ್ತು ಸಂಪತ್ತಿನ ವಿಕೇಂದ್ರೀಕರಣದ ವಿಷಯ ಸಂವಿಧಾನದ ಮುಖ್ಯ ಆಶಯವಾಗಿ ನಿರೂಪಿತವಾಗದೇ ಹೋಯಿತು. ತಮ್ಮ ಕಾಂಗ್ರೆಸ್ ವಿರೋಧಿ ಧೋರಣೆಯಿಂದಾಗಿ ಸಮಾಜವಾದಿಗಳು ಸಂವಿಧಾನ ರಚನಾ ಸಭೆಯನ್ನೂ ಬಹಿಷ್ಕರಿಸಿದ್ದೂ ಇದಕ್ಕೆ ಪೂರಕವಾಯಿತು. ಇದು ಅವರು ಐತಿಹಾಸಿಕವಾಗಿ ಮಾಡಿದ ದೊಡ್ಡ ತಪ್ಪು. ಇನ್ರ್ನೆಂದು ಮುಖ್ಯ ವಿಷಯವೇನೆಂದರೆ - ನಾನು ಇದನ್ನು ಹೇಳಲೇ ಬೇಕು - ಅಂಬೇಡ್ಕರ್‌ರವರು ಸಂವಿಧಾನ ರಚನಾ ಸಮಿತಿಯಲ್ಲಿ ಬಹು ದೊಡ್ಡ ಪಾತ್ರ ವಹಿಸಿದ ಕಾರಣದಿಂದಾಗಿಯೋ ಏನೋ, ಸಂವಿಧಾನದಲ್ಲಿ ಕೇಂದ್ರೀಕೃತ ವ್ಯವಸ್ಥೆಗೇ ಹೆಚ್ಚು ಒತ್ತು ಬಿದ್ದಿತು. ಯಾಕೆಂದರೆ ವಿಕೇಂದ್ರೀಕರಣದಿಂದ ಹಳ್ಳಿಗಳಲ್ಲಿ ದಲಿತರಿಗೆ ಮತ್ತು ಹಿಂದುಳಿದವರಿಗೆ ನ್ಯಾಯ ಸಿಗಲಿಕ್ಕಿಲ್ಲ ಅನ್ನೋ ಭಯ ಅವರಿಗಿತ್ತು. ನಂತರ ಇತ್ತೀಚೆಗೆ ರಾಜೀವ್ ಗಾಂಧಿಯವರ ಕಾಲದಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಪಂಚಾಯ್ತತ್ ರಾಜ್‌ಗೆ ಸಂವಿಧಾನಿಕ ಮಾನ್ಯತೆ ನೀಡಲಾಯಿತಾದರೂ, ಅದು ಲೋಹಿಯಾ ಅಥವಾ ಗಾಂಧಿ ಕಲ್ಪನೆಯ ಅಧಿಕಾರ ಮತ್ತು ಸಂಪತ್ತುಗಳ ವಿಕೇಂದ್ರೀಕರಣ ವ್ಯವಸ್ಥೆಯಾಗಲು ಕಾಲ ಮಿಂಚಿ ಹೋಗಿತ್ತು. ಹೀಗಾಗಿ ನಮ್ಮ ರಾಷ್ಟ್ರ ತಾಂತ್ರಿಕವಾಗಿ ಒಕ್ಕೂಟವೆನಿಸಿದರೂ ಅದು ತಿರುಳಲ್ಲಿ, ಕಾರ್ಯಶೈಲಿಯಲ್ಲಿ ಏಕಾತ್ಮಕ ರಾಷ್ಟ್ರವೇ ಆಗಿದೆ.

ಅಂಬೇಡ್ಕರ್ ಅವರ ಅಂದಿನ ತೀರ್ಮಾನ ಇವತ್ತಿನ ಸಂದರ್ಭದಲ್ಲಿ ಗೊಂದಲಗಳನ್ನು ಸೃಷ್ಟಿಸಿದೇ ಅಂತೀರಾ?

ಅದು ಅಂಬೇಡ್ಕರ್ ಅವರ ವೈಯುಕ್ತಿಕ ತೀರ್ಮಾನ ಎಂದು ಹೇಳಲಾಗುವುದಿಲ್ಲ. ಅದೊಂದು ಸಾಮೂಹಿಕ ನಿರ್ಧಾರ. ಆದರೆ ಇದರ ಹಿಂದೆ ಪ್ರಧಾನವಾಗಿ ಅಂಬೇಡ್ಕರ್ ಪ್ರಭಾವ ಇದ್ದಿರಬಹುದೆಂದಷ್ಟೇ ನಾನು ಸೂಚಿಸುತ್ತಿರುವುದು. ಇದರ ಪರಿಣಾಮವಾಗಿ ಇವೊತ್ತು ಏಕಾತ್ಮಕ ರಾಷ್ಟ್ರ ಅನ್ನೋದು ಹುಸಿ ರಾಷ್ಟ್ರೀಯತೆಯೊಂದನ್ನು ಸೃಷ್ಟಿಸಿದೆ. ರಾಷ್ಟ್ರೀಯತೆಯನ್ನು ಕಲ್ಪಿಸಿಕೊಳ್ಳುವಲ್ಲಿಯೇ ನಮಗೆ ಗೊಂದಲಗಳನ್ನು ಸೃಷ್ಟಿಸಿದೆ. ಹಾಗೆ ನೋಡಿದರೆ, ನಿಜವಾದ ರಾಷ್ಟ್ರೀಯತೆ ಅಂದರೆ ನಮ್ಮ ಭಾಷಾ ರಾಷ್ಟ್ರೀಯತೆ. ಕನ್ನಡ ರಾಷ್ಟ್ರೀಯತೆ, ತಮಿಳು ರಾಷ್ಟ್ರೀಯತೆ, ಬಂಗಾಳಿ ರಾಷ್ಟ್ರೀಯತೆ ಇತ್ಯಾದಿ. ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟ ಸ್ಪೋಟಗೊಂಡಿದ್ದೇ ೧೯೦೫ರಲ್ಲಿ ಬಂಗಾಳ ವಿಭಜನೆ ಮಾಡಿದಾಗ ಎಂಬುದನ್ನು ನಾವು ಗಮನಿಸಬೇಕು. ಅಂದರೆ ಭಾಷಾ ರಾಷ್ಟ್ರೀಯತೆಗೆ ಆಘಾತವಾದಾಗಲೇ ರಾಷ್ಟ್ರೀಯ ಹೋರಾಟ ಆರಂಭವಾದದ್ದು. ಅದಕ್ಕಿಂತ ಮೊದಲು ರಾಷ್ಟ್ರೀಯ ಚಳುವಳಿ ಅನ್ನುವುದು ಕೆಲವು ವರ್ಗಗಳ ಹಿತಕ್ಕಾಗಿ ಕೆಲವು ವಿನಾಯ್ತಿ ಅಥವಾ ಸವಲತ್ತುಗಳನ್ನು ಕೇಳುತ್ತಾ ಮನವಿ ಸಲ್ಲಿಸುವುದು, ಅಪೀಲು ಕೊಡುವುದು ಅಷ್ಟಕ್ಕೇ ಸೀಮಿತವಾಗಿತ್ತು. ಹೀಗಾಗಿ, ಭಾಷಾ ರಾಷ್ಟ್ರೀಯತೆಗಳನ್ನು ಗುರುತಿಸಿ ಅವುಗಳ ಆಶೋತ್ತರಗಳ ಆಧಾರದ ಮೇಲೆ ಒಂದು ಒಕ್ಕೂಟ ರಾಷ್ಟ್ರವನ್ನು ಕಟ್ಟುವಂತಹ ಮತ್ತು ಅಧಿಕಾರ ಮತ್ತು ಸಂಪತ್ತಿನ ವಿಕೇಂದ್ರೀಕರಣವನ್ನು ನಿರ್ದೇಶಿಸುವ ಸಂವಿಧಾನವನ್ನು ನಾವು ರಚಿಸಿಕೊಂಡಿದ್ದರೆ, ಇವತ್ತು ಜಾಗತೀಕರಣದ ಜೊತೆ ಜೊತೆಗೇ ಕೋಮುವಾದಿ ರಾಷ್ಟ್ರೀಯತೆ ತಲೆ ಎತ್ತುತ್ತಿರಲಿಲ್ಲ. ಇಂದು ಕೋಮುವಾದಿಗಳು ಈ ಏಕಾತ್ಮಕ ರಾಷ್ಟ್ರ ಪರಿಕಲ್ಪನೆಯನ್ನು ತಮ್ಮ ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ಹ್ಶೆಜಾಕ್ ಮಾಡಿದ್ದಾರೆ.

ನೀವು ಹೇಳುವುದು ಕೇಂದ್ರೀಕೃತ ವ್ಯವಸ್ಥೆಗಿಂತ ಗಣರಾಜ್ಯ ವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಡಬೇಕು ಎನ್ನುವುದೆ?

ಗಣರಾಜ್ಯ ಸ್ವರೂಪವನ್ನು ಈಗಿರುವಂತೆ ಇಟ್ಟುಕೊಂಡರೆ ಕಷ್ಟ ತಪ್ಪಿದ್ದಲ್ಲ. ಭಾಷಾ ರಾಷ್ಟ್ರೀಯತೆಗಳನ್ನು ಪ್ರಾದೇಶಿಕ ಸಂಕುಚಿತತೆ ಎಂದು ದಮನ ಮಾಡುವ ಏಕಾತ್ಮಕ ರಾಷ್ಟ್ರದ ರಾಜಕಾರಣ, ಇನ್ನಷ್ಟು ಗಲಭೆ-ಗೊಂದಲ-ಅಶಾಂತಿಗಳನ್ನಷ್ಟೇ ಸೃಷ್ಟಿಸಬಲ್ಲುದು. ಇದಕ್ಕೆ ಪರಿಹಾರವೆಂದರೆ, ರಾಷ್ಟ್ರವನ್ನು ನಿಜವಾದ ಒಕ್ಕೂಟ ವ್ಯವಸ್ಥೆಯನ್ನಾಗಿಸುವುದು. ಇವತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳಿರುವಂತೆ. ಕಳೆದ ೫೦-೬೦ ವರ್ಷಗಳಲ್ಲಿ ನಮ್ಮ ಸಂವಿಧಾನಕ್ಕೆ ತಂದಿರುವ ತಿದ್ದುಪಡಿಗಳನ್ನು ನೋಡಿದರೆ ನಮ್ಮ ಮೂಲ ಸಂವಿಧಾನದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರಗಳಲ್ಲಿ ಎಷ್ಟೋ ಸಮತೋಲನ ಇತ್ತು; ಆದರೆ ಸಂವಿಧಾನ ತಿದ್ದುಪಡಿ ಆಗ್ತಾ ಆಗ್ತಾ, ಇವತ್ತು ಹೆಚ್ಚಿನ ಅಧಿಕಾರವೆಲ್ಲ ಹೇಗೆ ಕೇಂದ್ರದ ಪಾಲಾಗಿದೆ ಎಂಬುದು ಗೊತ್ತಾಗುತ್ತದೆ. ಇತ್ತೀಚಿನ ಉದಾಹರಣೆ ಎಂದರೆ, ನಮ್ಮ ಸಂವಿಧಾನದ ಮೂಲ ಸ್ವರೂಪವನ್ನು ನಿರ್ಧರಿಸುವಂತಹ ರಾಜ್ಯ ಸಭೆ ಮತ್ತು ಲೋಕಸಭೆಗಳ ರಚನೆ ಏನಿದೆ, ಅದನ್ನು ಮೂಲಭೂತವಾಗಿ ಬದಲಾಯಿಸಲಾಗಿರುವುದು. ರಾಜ್ಯಸಭೆ ನಮ್ಮ ಭಾಷಾಧಾರಿತ ರಾಜ್ಯಗಳ ಅಧಿಕಾರಗಳನ್ನು ಕಾಯುವ ಸಭೆ. ಮೂಲ ಸಂವಿಧಾನದ ಪ್ರಕಾರ ಈ ರಾಜ್ಯಸಭೆಗೆ ರಾಜ್ಯಗಳ ಪ್ರತಿನಿಧಿಗಳಾಗಿ ಆಯ್ಕೆಯಾಗಬೇಕಾದವರು ಆಯಾ ರಾಜ್ಯಗಳ ನಿವಾಸಿಗಳೇ ಆಗಬೇಕಿತ್ತು. ಆದರೆ ಹಿಂದಿನ ಎನ್.ಡಿ.ಎ. ಸರ್ಕಾರ ತಂದ ತಿದ್ದುಪಡಿಯಿಂದಾಗಿ ಈಗ ಯಾರು ಯಾವ ರಾಜ್ಯವನ್ನಾದರೂ ಪ್ರತಿನಿಧಿಸಬಹುದಾಗಿದೆ! ಹೀಗಾದರೆ ಒಕ್ಕೂಟಕ್ಕೇನು ಅರ್ಥ? ಕುಲದೀಪ್ ನಯ್ಯಾರ್ ಇದನ್ನು ಪ್ರಶ್ನಿಸಿ ಕೋರ್ಟಿಗೆ ಹೋದಾಗ, ಸುಪ್ರೀಂ ಕೋರ್ಟ್ ಕೂಡ ಈ ತಿದ್ದುಪಡಿಯನ್ನು ಎತ್ತಿ ಹಿಡಿಯಿತು! ಅಂದರೆ, ಸಂವಿಧಾನವನ್ನು ಅರ್ಥೈಸುವ ಜವಾಬ್ದಾರಿ ಹೊಂದಿರುವ ನ್ಯಾಯಾಂಗ ಕೂಡ ಕಾಲದ ರಾಜಕೀಯ ಕರೆಗಳಿಗೆ ತಕ್ಕಂತೆ ತನ್ನ ಅರ್ಥೈಸುವಿಕೆಯನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ! ಇದು ನಿಜವಾದ ಅಪಾಯದ ಸೂಚನೆ.

ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಸುವ ಕುರಿತು ನಿಮ್ಮ ತೀವ್ರ ವಿರೋಧವನ್ನು ಈಗಾಗಲೇ ಪ್ರಕಟಪಡಿಸಿದ್ದೀರಿ. ಬಡವರು, ಹಿಂದುಳಿದ ವರ್ಗದವರು ಮತ್ತು ಗ್ರಾಮೀಣ ಮಕ್ಕಳು ಕನ್ನಡ ಮಾಧ್ಯಮ ಶಾಲೆಗೆ ಹೋಗುವುದು ಅನಿವಾರ್ಯವಾಗಿದೆ. ಔದ್ಯೋಗಿಕ ಕ್ಷೇತ್ರದಲ್ಲಿ ಇಂಗ್ಲೀಷ್ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ಇರುವುದರಿಂದ ಸಹಜವಾಗಿ ಅವರು ಹಿನ್ನಡೆ ಅನುಭವಿಸುತ್ತಾರೆ. ನಿಮ್ಮ ನಿಲುವು ಈ ಸಮೂಹಕ್ಕೆ ಅನ್ಯಾಯ ಮಾಡಿದಂತಲ್ಲವೆ?

ಇದಕ್ಕೆ ಸಾಕಷ್ಟು ಬಾರಿ ಉತ್ತರ ಕೊಟ್ಟಿದ್ದೀನಿ. ಮತ್ತೆ ಹೇಳೋದಾದರೆ ಇವೊತ್ತಿನ ಶಿಕ್ಷಣ ವ್ಯವಸ್ಥೆಯಲ್ಲಿ ಒಂದನೇ ತರಗತಿಯಿಂದಾಗಲಿ, ಐದನೇ ತರಗತಿಯಿಂದಾಗಲಿ ಇಂಗ್ಲೀಷ್ ಬೋಧಿಸುವುದರಿಂದ ಅಂತಹ ಮುಖ್ಯ ವ್ಯತ್ಯಾಸವೇನೂ ಆಗುವುದಿಲ್ಲ ಅಂತ ನನ್ನ ಸ್ಪಷ್ಟ ಅಭಿಪ್ರಾಯ. ಅದಕ್ಕಿಂತ ಮುಖ್ಯವಾಗಿ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಸುವ ನಿರ್ಧಾರ, ಇಂಗ್ಲೀಷ್ ಭಾಷೆಯನ್ನು ಸಾರ್ವಜನಿಕ ಜೀವನದ ಅಧಿಕೃತ ಭಾಷೆಯನ್ನಾಗಿ ಮಾಡೋದಕ್ಕೆ ಮತ್ತು ಮಾತೃಭಾಷೆ ಅಥವಾ ಪ್ರಾಂತೀಯ ಭಾಷೆಯನ್ನು ಎರಡನೆ ದರ್ಜೆಗೆ ತಳ್ಳೋದಕ್ಕೆ ಜಾಗತೀಕರಣದ ಹಿಂದಿರುವ ನವ ಸಾಮ್ರಾಜ್ಯಶಾಹಿ ಶಕ್ತಿಗಳು ನಡೆಸಿರೋ ರಾಜಕೀಯ ಹುನ್ನಾರ ಅಂತ ನಾನು ತಿಳಿದುಕೊಂಡಿದ್ದೇನೆ. ಇದಕ್ಕೆ ಸಾಕಷ್ಟು ಪುರಾವೆಗಳನ್ನು ಕೂಡಾ ನನ್ನ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಕೆ:ಏಕೆ ಬೇಡ? ಪುಸ್ತಕದಲ್ಲಿ ನೀಡಿದ್ದೇನೆ.

ಎರಡನೇಯದಾಗಿ; ಜಾಗತೀಕರಣವನ್ನು, ಅದರ ಆರ್ಥಿಕತೆಯನ್ನು ವಿರೋಧಿಸುವ ನೀವು, ಅದಕ್ಕೆ ಪೂರಕ ಶಕ್ತಿಯಾಗಿ ಜಾಗತೀಕರಣವಾದಿಗಳು ಎತ್ತಿ ಹಿಡಿಯುತ್ತಿರುವ ಶಿಕ್ಷಣದಲ್ಲಿನ ಇಂಗ್ಲಿಷ್ ಪ್ರಾಥಮಿಕತೆಗಾಗಿ ಆಗ್ರಹಿಸುವುದು ಒಂದು ದೊಡ್ಡ ವಿರೋಧಾಭಾಸವಲ್ಲವೆ? ನೀವು ಈಗ ಜಾರಿಯಲ್ಲಿರುವಂತಹ ಆರ್ಥಿಕತೆ, ಇದರ ಆಧಾರದ ಮೇಲೇ ರಾಷ್ಟ್ರವನ್ನು ಕಟ್ಟಬೇಕು ಅಂದ್ಕೊಂಡಿದ್ರೆ ಇಂಗ್ಲೀಷ್ ಬೇಕು ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ನೀವು ನಮ್ಮ ಈ ಅಭಿವೃದ್ಧಿಯ ಪರಿಕಲ್ಪನೆ ಸರಿಯಿಲ್ಲ, ರಾಷ್ಟ್ರ ಹೋಗುತ್ತಿರುವ ದಿಕ್ಕು ಸರಿಯಿಲ್ಲ, ಎಲ್ಲ ತಲೆಕೆಳಗಾಗಿದೆ ಅಂತ ಹೇಳ್ತಾ, ಇಂಗ್ಲೀಷ್ ಭಾಷೆಯ ಸ್ಥಾನಮಾನವನ್ನು ಹೆಚ್ಚಿಸಲೂ ಆಗ್ರಹಿಸುವುದು ಅಪ್ಪಟ ಅಪ್ರಾಮಾಣಿಕತೆ ಆಗುತ್ತದೆ. ಹೊಸ ಸಮಾಜವಾದದ ಅನ್ವೇಷಣೆಗಾಗಿ ನಾವು ನಮ್ಮ ಪ್ರಾದೇಶಿಕ ಭಾಷೆಗಳ ಕಡೆಗೇ ನೋಡಬೇಕಾಗುತ್ತದೆ. ಏಕೆಂದರೆ, ಭಾಷೆ ಅನ್ನೋದು ಕೇವಲ ಸಂಪರ್ಕ ಮಾಧ್ಯಮವಲ್ಲ. ಅದೊಂದು ಸಂಸ್ಕೃತಿ. ಜೀವನವನ್ನು ಗ್ರಹಿಸುವ, ಕಟ್ಟಿಕೊಳ್ಳುವ ಒಂದು ವಿಶಿಷ್ಟ ಕ್ರಮ ಕೂಡಾ. ಹೀಗಾಗಿ ನಮ್ಮ ಭಾಷೆಯನ್ನು ಎರಡನೇ ದರ್ಜೆಗೆ ಇಳಿಸಿ ಪ್ರತಿ ರಾಜಕಾರಣವನ್ನು ಕಟ್ಟುತ್ತೇವೆ ಅಂದ್ರೆ ಅದು ಆತ್ಮದ್ರೋಹದ ಮಾತಾಷ್ಟೇ ಆಗುತ್ತದೆ.

ದೇವನೂರ ಮಹಾದೇವ ಅವರು ಇಂಗ್ಲೀಷನ್ನ ಮಾಧ್ಯವನ್ನಾಗಿ ಕೇಳುತ್ತಿಲ್ಲ, ಕೇವಲ ಭಾಷೆಯನ್ನಾಗಿ ಕೇಳುತ್ತಿದ್ದೇವೆ ಎನ್ನುತ್ತಾರಲ್ಲ?

ಮಹದೇವ ನನ್ನ ಕ್ಲೋಸೆಸ್ಟ್ ಫ್ರೆಂಡ್. ನಾನು ಅವರನ್ನ ನನ್ನ ಒಬ್ಬ ಫಿಲಾಸಫರ್-ಗೈಡ್-ಫ್ರೆಂಡ್ ಅಂತ ತಿಳಿದವನು. ಭಾಷಾ ನೀತಿಯ ವಿಚಾರದಲ್ಲಿ ಯಾವಾಗ ಅಭಿಪ್ರಾಯ ಭೇದ ಉಂಟಾಯಿತೋ ಆಗಿನಿಂದ ನನ್ನ ಮತ್ತು ಅವರ ನಡುವೆ ಭಾವನಾತ್ಮಕ ಕಂದಕ ಉಂಟಾಗಿದೆ. ಮತ್ತೆ ಯಾರೋ ಒಬ್ಬ ದೊಡ್ಡ ವ್ಯಕ್ತಿ ಹೇಳಿದಾರೆ ಅನ್ನೋ ಕಾರಣಕ್ಕೆ ನಾನು ನನ್ನ ಅಭಿಪ್ರಾಯವನ್ನ ಬದಲಿಸಿಕೊಳ್ಳಲಾರೆ. ಅವರ ಅಭಿಪ್ರಾಯ ಅವರಿಗೆ, ನನ್ನ ಅಭಿಪ್ರಾಯ ನನಗೆ. ಇಂದು ಭಾಷೆಯನ್ನಾಗಿ ಕೇಳುತ್ತಿರುವುದು, ನಾಳೆ ಮಾಧ್ಯಮವನ್ನಾಗಿ ಕೇಳಲೆಂದೇ ಎಂಬುದು ಇವರು ಇಂಗ್ಲಿಷ್ ಪರವಾಗಿ ಮಂಡಿಸುತ್ತಿರುವ ವಾದದಿಂದಲೇ ಸ್ಪಷ್ಟವಾಗುವಂತಿದೆ. ಆದ್ದರಿಂದ ಇಂಗ್ಲೀಷ್ ಭಾಷೆಯಿಂದಲೇ ಇಂದು ಉದ್ಧಾರ ಸಾಧ್ಯ ಎಂದು ನಿಜವಾಗಿ ನಂಬಿರುವವರು ಅದನ್ನು ಭಾಷೆಯಾಗಿ ಮಾತ್ರವಲ್ಲ, ನೇರವಾಗಿ ಇಂಗ್ಲೀಷ್ ಮಾಧ್ಯಮವನ್ನೇ ಬೇಡುವುದರ ಮೂಲಕ ಹೆಚ್ಚು ಪ್ರಾಮಾಣಿಕರಾಗುವುದು ಒಳಿತು. ಆದರೆ ಆ ಧೈರ್ಯ ಇನ್ನೂ ಅವರಿಗೆ ಬಂದಿಲ್ಲ!

ಭಾಷಾ ಚಳುವಳಿಯನ್ನು (ಗೋಕಾಕ್ ಚಳುವಳಿ) ಒರಟು ಸ್ವರೂಪದ್ದೆಂದು ಹೇಳಿದಿರಿ. ಅದು ಕೂಡಾ ಭಾಷಾ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಚಳುವಳಿಯಲ್ಲವೇ?

ಗೋಕಾಕ್ ಚಳುವಳಿ ಶಿಕ್ಷಣದಲ್ಲಿ ಕನ್ನಡದ ಮಕ್ಕಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಲು ಆಗ್ರಹಿಸುವುದಕ್ಕೆ ಸೀಮಿತವಾದ ಒಂದು ಚಳುವಳಿ. ಭಾಷಾ ರಾಜಕಾರಣವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕರೆದೊಯ್ಯುವ ಯಾವುದೇ ಆಶಯವನ್ನು ಕೂಡ ಅದು ಪ್ರಕಟಪಡಿಸಲಿಲ್ಲವಾದ್ದರಿಂದ ಅದನ್ನು ಭಾಷಾ ರಾಷ್ಟ್ರೀಯತೆಯ ಚಳುವಳಿ ಎಂದು ಕರೆಯಲಾಗುವುದಿಲ್ಲ. ನಮ್ಮ ಎಲ್ಲ ಕನ್ನಡ ಚಳುವಳಿಗಳ ಮಿತಿ ಇದು. ಇದಕ್ಕೆ ಕಾರಣಗಳನ್ನು ತೇಜಸ್ವಿ ಕರ್ನಾಟಕ ಸಂಸ್ಕೃತಿ ವಿಶ್ಲೇಷಣೆ ಎಂಬ ತಮ್ಮ ಒಕ್ಕೂಟದ ಭಾಷಣದಲ್ಲಿ ವಿವರಿಸಿದ್ದಾರೆ.

ಕೋಮುವಾದ ನಮ್ಮ ದೇಶವನ್ನು ಕಾಡ್ತಿರೋ ಪ್ರಮುಖ ಸಮಸ್ಯೆ. ಇದನ್ನ ದೇಶದ ಒಳಗಿನ ಕೋಮುವಾದಿಗಳು ಮತ್ತು ಹೊರಗಿನ ಉಗ್ರವಾದಿಗಳಿಬ್ಬರೂ (ಪರಸ್ಪರರನ್ನು ದೂಷಿಸುತ್ತ) ಬೆಳೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾಜವಾದವನ್ನು ಒಪ್ಪಿಕೊಂಡ ಯುವಕರಿಗೆ ನಿಮ್ಮ ಕಿವಿ ಮಾತೇನು?

ನೋಡಿ ಸಮಾಜವಾದ ಚಳುವಳಿ, ವಿಶೇಷವಾಗಿ ಲೋಹಿಯಾ ಧಾರೆ ಧರ್ಮವನ್ನು ಕುರಿತು ಒಂದು ಸ್ಪಷ್ಟವಾದ ನಿಲುವನ್ನು ತಾಳಿದೆ. ಅದು ನಾವಿವತ್ತು ಎತ್ತಿ ಹಿಡಿಯುತ್ತಿರುವ ಸೆಕ್ಯೂಲರಿಸಮ್‌ಗಿಂತ ತುಂಬಾ ಭಿನ್ನವಾಗಿದೆ. ಈ ಮಾರ್ಕ್ಸ್‌ವಾದಿ ಸಮಾಜವಾದ ಇದೆಯಲ್ಲ - ಯಾವುದನ್ನ ನಾವು ವ್ಶೆಜ್ಞಾನಿಕ ಸಮಾಜವಾದ ಅಂತ ಕರೀತೀವಿ - ಅದು ಧರ್ಮವನ್ನು ಅಫೀಮು ಅಂತ ಕರೀತು. ಇದರಿಂದ ದೊಡ್ಡ ಗೊಂದಲವೇ ಆಗಿ ಹೋಗಿದೆ. ಧರ್ಮ ಅನ್ನೋದು ಭಾರತದಲ್ಲಿ ಬಹುಮುಖಿಯಾದದ್ದು. ಅದು ಸಾಂಸ್ಕೃತಿಕ ಮುಖವುಳ್ಳದ್ದು. ಅದು ಪಶ್ಚಿಮದಲ್ಲಿದ್ದಂತೆ ಕೇವಲ ಚರ್ಚಲ್ಲ. ಅಥವಾ ಇಲ್ಲಿನ ದೇವಸ್ಥಾನ ಮಾತ್ರವಲ್ಲ. ಕೃಷಿ ಸಂಸ್ಕೃತಿಗೆ, ಬುಡಕಟ್ಟು ಸಂಸ್ಕೃತಿಗೆ ಸಂಬಂಧಿಸಿದ ಆಚರಣೆಗಳು ಕೂಡ ಇಲ್ಲಿ ಧರ್ಮ ಎನ್ನಿಸಿಕೊಂಡಿದೆ. ತೇರು, ಜಾತ್ರೆ, ಭೂಮಿ ಹುಣ್ಣಿಮೆ ಇವೆಲ್ಲವೂ ಇಲ್ಲಿ ಧರ್ಮ. ಆದರೆ ಆಧುನಿಕ ರಾಷ್ಟ್ರವಾಗುವ ಭರದಲ್ಲಿ ನಾವು ಪಶ್ಚಿಮದ ಆಧುನಿಕತೆಯ ಸೃಷ್ಟಿಯಾದ ಧರ್ಮ ಮತ್ತು ರಾಜಕಾರಣವನ್ನ ಪ್ರತ್ಯೇಕ ಮಾಡುವ ಸೆಕ್ಯೂಲರ್ ತತ್ವವನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡೆವು. ರಾಜಕಾರಣ ಎಂದರೇನು? ಜನತಾ ಶಕ್ತಿಯ ನಿರ್ವಹಣೆ ತಾನೆ? ಈ ಜನತಾ ಶಕ್ತಿಯ ಸಾಂಸ್ಕೃತಿಕತೆಯನ್ನೇ ಅನುಮಾನಾಸ್ಪದಗೊಳಿಸಿ ನಾವೆಂತಹ ರಾಜಕಾರಣವನ್ನು ಮಾಡಬಲ್ಲೆವು? ನಮ್ಮ ರಾಜಕಾರಣದ ಇಂದಿನ ಎಲ್ಲ ಅನೈತಿಕತೆ ಮತ್ತು ಭ್ರಷ್ಟತೆಗಳು ಈ ಮೂಲದಿಂದಲೇ ಬಂದವು ಎಂದು ನಾನು ಭಾವಿಸಿದ್ದೇನೆ. ಇಲ್ಲಿ ಗಾಂಧಿಯವರ ನನಗೆ ದೀರ್ಘಕಾಲಿಕ ರಾಜಕಾರಣವೇ ಧರ್ಮ, ಅಲ್ಪಕಾಲಿಕ ಧರ್ಮವೇ ರಾಜಕಾರಣ ಎಂಬ ಮಾತು ನನಗೆ ನೆನಪಿಗೆ ಬರುತ್ತಿದೆ.

ಲೋಹಿಯಾ ಅವರು ಧರ್ಮಕ್ಕೆ ನಾಲ್ಕು ಮುಖಗಳಿವೆ ಅಂತ ಹೇಳ್ತಾ ಇದ್ದರು. ಮೊದಲನೆಯದು ಅಗಮ್ಯದೊಡನೆ ಸಂವಾದ. ಮನುಷ್ಯ ಪೂರ್ಣನಲ್ಲ. ಅವನ ಪೂರ್ಣತೆಯ ಹಂಬಲ ಚಿರಂತನವಾದದ್ದು. ಹಾಗಾಗಿ ಮನುಷ್ಯ ಅಗಮ್ಯ - ಅನೂಹ್ಯದ ಹಂಬಲದಲ್ಲಿ ಧ್ಯಾನಸ್ಥನಾಗುವುದು ಅವನ ಹುಟ್ಟು ಲಕ್ಷಣ. ಎರಡನೆಯದು ಸಾಮಾಜಿಕ ಸದ್ವರ್ತನೆಯ ತರಬೇತಿ: ಒಳ್ಳೆಯದು, ಕೆಟ್ಟದು, ಬೇಕು-ಬೇಡಗಳ ಶಿಕ್ಷಣ. ಮೂರನೆಯದು ಹೆಣ್ಣು ಗಂಡಿನ ನಡುವೆ ಮತ್ತು ಜಾತಿ-ವರ್ಗಗಳ ತರತಮಗಳನ್ನು ಬೋಧಿಸುವ ಕೆಲವು ಲಕ್ಷಣಗಳು ಧರ್ಮದಲ್ಲಿವೆ. ನಾಲ್ಕನೆಯ ಮುಖ ಅನ್ಯಮತ ಅಸಹಿಷ್ಣುತೆ ಅಥವಾ ಮತಾಂಧತೆ. ಧರ್ಮದ ಈ ನಾಲ್ಕು ಮುಖಗಳಲ್ಲಿ ಮೊದಲ ಎರಡನ್ನು ಇಟ್ಟುಕೊಂಡು, ಕೊನೆಯ ಎರಡನ್ನು ತಿರಸ್ಕರಿಸಬೇಕೆಂದು ಲೋಹಿಯಾ ಹೇಳುತ್ತಿದ್ದರು. ನಾವು ಆಧುನಿಕತೆಯ ಹೆಸರಿನಲ್ಲಿ ಧರ್ಮವನ್ನು ಸಾರ್ವಜನಿಕ ಜೀವನದಿಂದ ದೂರ ಇಡಬೇಕು ಅಂತ ಹೇಳಿದ್ದರಿಂದ ಜನತೆ ಈ ಸೆಕ್ಯೂಲರಿಸಂನ್ನು ಆಳದಲ್ಲಿ ಒಪ್ಪಲಿಲ್ಲ. ಜೊತೆಗೆ ಈ ಸೆಕ್ಯೂಲರ್ ರಾಷ್ಟ್ರವನ್ನು ಕಟ್ಟಲಿಕ್ಕೆ ಹೊರಟಾಗ, ಅದು ಧರ್ಮದ ಆಧಾರದ ಮೇಲೆ ವಿಭಜಿತವಾದ ಕಹಿ ನೆನಪು ಜನರ ಮನಸ್ಸಿನಲ್ಲಿದೆ ಎಂಬುದನ್ನೂ ನಾವು ಮರೆಯಬಾರದು. ನಮ್ಮದು ನಿಜವಾಗಿ ಸೆಕ್ಯುಲರ್ ರಾಷ್ಟ್ರವಾಗುವುದು, ನಾವು ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದಾಗ. ಹಾಗಾಗಿಯೇ ಎಲ್ಲ ರಾಜಕಿಯ ಪಕ್ಷಗಳು ಇದನ್ನು ಪ್ರಸ್ತಾಪಿಸಲು ಹಿಂದು ಮುಂದು ನೋಡುತ್ತಿದ್ದಾಗ ಲೋಹಿಯಾ ಇದನ್ನು ೧೯೬೨ರಲ್ಲಿಯೇ ಒಂದು ಚುನಾವಣಾ ವಿಷಯವನ್ನಾಗಿ ಘೋಷಿಸಿದರು. ಇದರಿಂದಾಗಿ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಹಲವೆಡೆ ಸೋಲುಂಟಾಯಿತು. ಅದರಿಂದೇನೂ ಅವರು ವಿಚಲಿತರಾಗಲಿಲ್ಲ. ಕಿಶನ್ ಪಟ್ನಾಯಕ್ ಎರಡನೇ ಬಾರಿ ಸೋತದ್ದು ಇದೇ ಕಾರಣಕ್ಕೆ. ಉದಾತ್ತ ಉದ್ದೇಶಗಳಿಗಾಗಿ ಜನಪ್ರಿತೆಯನ್ನು ಪಣಕ್ಕೊಡ್ಡುವ ಧೀಮಂತ ನಾಯಕರು ಸೃಷ್ಟಿಯಾಗದ ಹೊರತು ರಾಷ್ಟ್ರ ನಿರ್ಮಾಣವೆಂಬುದು ಕನಸಿನ ಮಾತೇ ಸರಿ!

ಈ ಮಧ್ಯೆ, ಗಾಂಧಿ ಹತ್ಯೆಯ ಕಾರಣದಿಂದಾಗಿ ದಮನಗೊಂಡಿದ್ದ ಹಿಂದೂ ಕೋಮುವಾದ ಎಂಭತ್ತರ ದಶಕದ ಹೊತ್ತಿಗೆ ಶಾಬಾನು ಪ್ರಕರಣದಿಂದ ಮತ್ತೆ ಚಿಗುರೊಡೆಯಲು ಅವಕಾಶವಾಯಿತು. ಇದರಿಂದ ಸಿಟ್ಟಿಗೆದ್ದ ಹಿಂದುಗಳನ್ನು ಸಂತೈಸಲು ರಾಜೀವ್ ಗಾಂಧಿ ಬಾಬ್ರಿ ಮಸೀದಿಯ ಬಾಗಿಲು ತೆಗಿಸಿ ಪೂಜೆ-ಕರಸೇವೆ ಇತ್ಯಾದಿಗಳಿಗೆ ಅವಕಾಶ ಮಾಡಿಕೊಟ್ಟು ದೊಡ್ಡ ಅನಾಹುತಕ್ಕೇ ದಾರಿ ಮಾಡಿಕೊಟ್ಟರು. ಹೀಗೆ ನಾವು ಅಪದ್ಧ ಸೆಕ್ಯುಲರಿಸಂನ್ನು ರಕ್ಷಿಸಿಕೊಳ್ಳುವ ನೆಪದಲ್ಲಿ ಸ್ಪರ್ಧಾತ್ಮಕ ಕೋಮುವಾದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ನನ್ನ ಪ್ರಕಾರ ಸೆಕ್ಯೂಲರಿಸಮ್‌ನ್ನು ನಾವು ಅಳವಡಿಸಿಕೊಂಡ ರೀತೀನೇ ಇಂದು ಭಯಂಕರ ಕೋಮುವಾದಕ್ಕೆ ಕಾರಣವಾಗಿದೆ. ಆದ್ದರಿಂದ ಸೆಕ್ಯೂಲರಿಸಮನ್ನು ಇಂದಿನ ಸಂದರ್ಭಕ್ಕೆ ರಿಡಿಫೈನ್ ಮಾಡಿಕೊಳ್ಳುವುದೆಂದರೆ, ಜನಪ್ರಿಯತೆಯನ್ನು ಪಣಕ್ಕೊಡ್ಡಿ ಯೂನಿಫಾರಂ ಸಿವಿಲ್ ಕೋಡ್‌ಗಾಗಿ ಆಗ್ರಹಿಸುವುದು.

ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರಿಗೆ ಕೆಲವು ಸವಲತ್ತುಗಳನ್ನು ಕೊಡುವುದು ತಪ್ಪು ಅಂತೀರಾ?

ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಟ್ಟ ಮೇಲೆ ಮತ್ತೆ ಅಲ್ಪಸಂಖ್ಯಾತತೆಯ ಪರಿಭಾಷೆಯಲ್ಲಿ ಮಾತಾಡುವುದು ಈ ಸಮಾನ ಹಕ್ಕುಗಳ ಜಾರಿಯ ಬಗ್ಗೆ ನಮಗಿರುವ ಅಪನಂಬಿಕೆ ಅಥವಾ ಸಂದೇಹಗಳನ್ನಷ್ಟೇ ಸೂಚಿಸುತ್ತದೆ. ಎಲ್ಲರಿಗೂ ಧರ್ಮ, ಸಂಸ್ಕೃತಿ, ಪೂಜಾ ವಿಧಾನ ಇತ್ಯಾದಿಗಳಿಗೆ ಸಂಬಂಧಪಟ್ಟಂತೆಯೂ ಸಮಾನ ಮೂಲಭೂತ ಹಕ್ಕುಗಳನ್ನು ಕೊಟ್ಟ ಮೇಲೆ ಮತ್ತೆ ಅಲ್ಪಸಂಖ್ಯಾತರ ಹೆಸರಲ್ಲಿ ಸವಲತ್ತು ಕೊಡುತ್ತೀರೆಂದರೆ ಏನೋ ಓಲೈಸುವಿಕೆ ನಡೀತಾ ಇದೆ ಅಂತ ಯಾರಿಗಾದರೂ ಅನಿಸೋದಕ್ಕೆ ಶುರುವಾಗುತ್ತೆ. ಸಾಮಾಜಿಕ-ಆರ್ಥಿಕ ಆಧಾರದ ಮೇಲೆ ಏನು ಬೇಕಾದರೂ ಸಾರ್ವತ್ರಿಕ ಸವಲತ್ತುಗಳನ್ನು ಕೊಡಲಿ. ಆದರೆ ಧಾರ್ಮಿಕ ಅಲ್ಪಸಂಖ್ಯಾತತೆಯ ಆಧಾರದ ಮೇಲೆ ಯಾವುದೇ ಪರಿಗಣನೆ ಇರಬಾರದು. ಸ್ವಾತಂತ್ರೋತ್ತರ ಭಾರತದಲ್ಲಿ ಮುಸ್ಲಿಂ ಕೋಮುವಾದ ಬೆಳೆದದ್ದೇ ಸೆಕ್ಯೂಲರಿಸಂ ಹೆಸರು ಹೇಳಿಕೊಂಡು. ಈಗ ಹಿಂದೂ ಕೋಮುವಾದ ಪುನರವತರಿಸಿರುವುದು ಮುಸ್ಲಿಂ ಕೋಮುವಾದವನ್ನು ಕಾರಣ ಮಾಡಿಕೊಂಡು! ಅಂದರೆ, ಸೆಕ್ಯೂಲರಿಸಮ್‌ನ್ನು ಮುಸ್ಲಿಮರು ಒಂದು ರೀತಿ ಅರ್ಥಮಾಡಿಕೊಂಡಿದ್ದಾರೆ, ಹಿಂದೂಗಳು ಇನ್ನೊಂದು ರೀತಿ ಅರ್ಥ ಮಾಡಿಕೊಂಡಿದ್ದಾರೆ. ಸರ್ಕಾರ ಮತ್ತೊಂದು ರೀತಿ ಅರ್ಥ ಮಾಡಿಕೊಂಡಿದೆ! ಇದೇ ಇಂದಿನ ಕೋಮುವಾದ ಸಂಬಂಧಿಯಾದ ಎಲ್ಲ ಅನಾಹುತಗಳಿಗೆ ಕಾರಣವಾಗಿದೆ.

ಬದಲಾವಣೆಗಳಿಗೆ ರಾಜಕೀಯ ಪಕ್ಷಗಳನ್ನು, ಸಿದ್ಧಾಂತಗಳನ್ನು ಅವಲಂಬಿಸುವ ಬದಲು ಈ ರಾಜಕಾರಣವನ್ನೇ ಅಪ್ರಸ್ತುತಗೊಳಿಸಿ ಚಳುವಳಿ ನಡೆಸುವ ಅಣ್ಣಾ ಹಜಾರೆ, ಮೇಧಾಪಾಟ್ಕರ್ ರೀತಿಯ ನಿಲುವು ಹೆಚ್ಚು ಪರಿಣಾಮಕಾರಿಯಲ್ಲವೆ?

ಅವರಿಬ್ಬರನ್ನೂ ನಾನು ಕಂಡಿದ್ದೇನೆ, ಮಾತಾಡಿಸಿದ್ದೇನೆ. ಅವರು ರಾಜಕಾರಣವನ್ನು ಅಪ್ರಸ್ತುತಗೊಳಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾದೀತು. ಅವರು ಮಾಡುತ್ತಿರುವುದೂ ರಾಜಕಾರಣವೇ. ಆದರೆ ಅದು ಚುನಾವಣಾ ರಾಜಕೀಯಕ್ಕೆ ಹೊರತಾದ ಪರ್ಯಾಯ ರಾಜಕಾರಣ. ರಾಜಕಾರಣಕ್ಕೆ, ಕಳೆದು ಹೋಗಿರುವ ಅದರ ತಾತ್ವಿಕತೆಯನ್ನು ಮರಳಿ ಗಳಿಸಿಕೊಡಲು ಯತ್ನಿಸುತ್ತಿರುವ ಜನತಾ ಚಳುವಳಿಗಳ ನಾಯಕರವರು. ಅವರು ಮಾತ್ರವಲ್ಲ, ನಮ್ಮ ಹಳ್ಳಿಗಳಿಗೆ ಹೋದರೆ ಅವರ ಹಾಗೇ, ಆದರೆ ತಮ್ಮ ಮಿತಿಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನೋಡಬಹುದು. ಅದನ್ನೊಂದು ಜನಶಕ್ತಿಯಾಗಿ ಪರಿವರ್ತಿಸುವ ಕೆಲಸವಾಗಬೇಕಿದೆ ಇಂದು.

ಪಾಳೇಕರ್ ಕೃಷಿಯಲ್ಲಿ ತೊಡಗಿದವರನ್ನೇ ತೆಗೆದುಕೊಳ್ಳಿ. ಪಾಳೇಕರ್ ಕೃಷಿಯನ್ನು ಒಂದು ಜನಶಕ್ತಿಯನ್ನಾಗಿ ರೂಪಿಸಲು ಸಾಧ್ಯವಾದರೆ, ಅದು ಕೈಗಾರಿಕೀಕರಣದ ವಿರುದ್ಧ ನಾವು ಈವರೆಗೆ ಮಾಡಿರದಂತಹ ದೊಡ್ಡ ಹೋರಾಟ ಆಗಲಿಕ್ಕೆ ಸಾಧ್ಯವಿದೆ. ಆದರೆ ಪಾಳೇಕರ್ ಕೃಷಿ ವಿರುದ್ಧವೇ ಅಪಪ್ರಚಾರ ಶುರುವಾಗಿದೆ ಇವತ್ತು. ಅದನ್ನು ಶುರು ಮಾಡಿದವರೇ ಇಂದು ಅಪಪ್ರಚಾರಕ್ಕೆ ತೊಡಗಿದ್ದಾರೆ ಎಂದರೆ ಏನು ಹೇಳುವುದು? ಬದಲಾವಣೆಯ ಮಾತನಾಡುವವರಲ್ಲೇ ಈ ರೀತಿಯ ಸಮಸ್ಯೆಗಳು ಕಾಣ್ತಿವೆ ಇವತ್ತು. ಇದಕ್ಕೆ ಕಾರಣ, ಬದಲಾವಣೆಯ ಉಮೇದು ವ್ಯಕ್ತಿತ್ವದ ಆಳದಿಂದ ಹೊಮ್ಮದೆ, ಕೇವಲ ಒಂದು ಖಯಾಲಿಯ ವಿಷಯವಾಗಿರುವುದು. ಮೊದಲಿಗೆ ಬದಲಾವಣೆಯ ಹೋರಾಟದಲ್ಲಿ ತೊಡಗಿದವರು ಎಷ್ಟರ ಮಟ್ಟಿಗೆ ತಮ್ಮ ತಾತ್ವಿಕ ನಂಬಿಕೆಗಳಲ್ಲಿ ನಿಷ್ಠೆಯನ್ನು ಇಟ್ಟುಕೊಂಡಿದ್ದಾರೆ ಅನ್ನೋದು ಮುಖ್ಯವಾಗುತ್ತದೆ. ಜನ ಎಲ್ಲವನ್ನೂ, ಎಲ್ಲರನ್ನೂ ಗಮನಿಸುತ್ತಿರುತ್ತಾರೆ. ನಾವು ಪದೇ ಪದೇ ನಮ್ಮ ಖಯಾಲಿಗೆ ತಕ್ಕಂತೆ ನಮ್ಮ ನಿಲುವುಗಳನ್ನು ಬದಲಾಯಿಸ್ತಾ ಹೋದರೆ ಕಷ್ಟ ಆಗುತ್ತದೆ. ಹೀಗಾಗಿ, ನಮ್ಮ ರಾಜಕೀಯ ಸಂಸ್ಕೃತಿ ನಾಶವಾಗಿದೆ ಅಂತ ನಾವು ಹೇಳ್ತಿರುವಾಗ, ಅದು ನಾಶ ಮಾಡಿರೋದು ಮುಖ್ಯವಾಗಿ ನಮ್ಮ ಶೀಲವನ್ನು ಎಂಬುದು ನಮ್ಮ ಗಮನದಲ್ಲಿರಬೇಕು.

ಜಾಗತೀಕರಣವನ್ನು ಅನಿವಾರ್ಯ ಎಂಬಂತೆ ಮಾಡಿರುವ ನಮ್ಮ ಕೇಂದ್ರ ಹೀನ ರಾಜಕೀಯ, ನಮ್ಮ ವ್ಯಕ್ತಿತ್ವದ ಅಡಿಗಲ್ಲುಗಳನ್ನೇ ನಾಶ ಮಾಡಿದೆ. ಅದನ್ನು ತಿಳಿದು ಅದನ್ನು ಕಟ್ಟುವ ಕಡೆಗೆ ಪ್ರಯತ್ನಪಟ್ಟರೆ, ನಾವು ಏನನ್ನಾದರೂ ಮಾಡಬಹುದು. ಹೊಸ ಸಮಾಜವಾದವನ್ನು ರೂಪಿಸಬಹುದು. ತುಂಬಾ ದೂರದ ಗುರಿ ಇದು. ಹಾಗೇ ಬಹಳ ಕಷ್ಟದ ಗುರಿ ಕೂಡಾ. ಆದರೆ ಮನುಷ್ಯ ಖಂಡಿತಾ ಆ ಗುರಿಯ ಕಡೆ ಸಾಗುತ್ತಾನೆ ಅಂತ ನಂಬುತ್ತೇನೆ ನಾನು. ಏಕೇಂದ್ರೆ, ಇಷ್ಟು ಕಡು ಭ್ರಷ್ಟತೆಯನ್ನು, ಅಸಮಾನತೆಯನ್ನು, ಹಿಂಸೆಯನ್ನು, ಅನೈತಿಕತೆಯನ್ನು ಮನುಷ್ಯ ಯಾವತ್ತೂ ಬಹಳ ದಿವಸ ಸಹಿಸುವುದಿಲ್ಲ. ಕಾಯಬೇಕು ಅಷ್ಟೇ ನಾವು. ಕಾಯುತ್ತಾ ಇದ್ದೀನಿ ನಾನಂತೂ. ಕಾಯುವುದೆಂದರೆ ಸುಮ್ಮನೆ ಕಾಯುವುದಲ್ಲ, ನಮ್ಮ ಕೆಲಸವನ್ನು ನಾವು ಮಾಡ್ತಾನೆ ಕಾಯಬೇಕು. ಅದಕ್ಕೆ, ನಾವು ನಂಬಿದ್ದರಲ್ಲಿ ಅಚಲ ನಂಬಿಕೆ ಬಹಳ ಮುಖ್ಯ.

ಈವರೆಗೆ ನಮ್ಮ ಅನೇಕ ಪ್ರಶ್ನೆಗಳಗೆ ವಿವರವಾದ ಉತ್ತರಗಳನ್ನು ನೀಡಿದ್ದೀರಿ. ಅದಕ್ಕಾಗಿ ನಿಮಗೆ ವಂದನೆಗಳು.

ನನ್ನನ್ನು ವಿವರವಾಗಿ ಪ್ರಶ್ನಿಸಿ ನನ್ನ ನೆನಪುಗಳನ್ನು ಕೆದಕಿದ್ದೀರಿ. ಒಮ್ಮೆ ನನ್ನನ್ನು ನಾನೇ ಹಿಂದಿರುಗಿನೋಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೀರಿ. ಅದಕ್ಕಾಗಿ ನಿಮಗೂ ವಂದನೆಗಳು.