ರಾಷ್ಟ್ರ ಒಡೆಯುವ ಅಭಿವೃದ್ಧಿ

Submitted by D.S.NAGABHUSHANA on Sat, 03/14/2009 - 18:49
ಬರಹ

ರಾಷ್ಟ್ರ ಒಡೆಯುವ ಅಭಿವೃದ್ಧಿ

ನಾನು ಎಚ್.ಟಿ. ಕೃಷ್ಣಪ್ಪನವನ್ನು ನೋಡಿಲ್ಲ. ಆದರೆ ಅವರು ನಮ್ಮ ಗೌರವಾನ್ವಿತ ರಾಜಕಾರಣಿಗಳಾಗಿದ್ದರು ಎಂಬುದನ್ನು ಬಲ್ಲೆ. ಮಂಡ್ಯದ ಕೆ.ವಿ. ಶಂಕರೇಗೌಡರ ಪರಂಪರೆಯಲ್ಲಿನ ಅನೇಕ ರಾಜಕಾರಣಿಗಳಂತೆ ನಾಗಮಂಗಲದ ಈ ಕೃಷ್ಣಪ್ಪನವರೂ ಎಂದೂ ಸಾರ್ವಜನಿಕ ಜೀವನದಲ್ಲಿ ಸಭ್ಯತೆಯ ಎಲ್ಲೆಗಳನ್ನು ಮೀರಿ ಹೋಗಲಿಲ್ಲ. ಕಳೆದ ಶತಮಾನದ ಎಂಭತ್ತರ ದಶಕದ ರಾಜಕಾರಣ, ಒಂದು ರೀತಿಯಲ್ಲಿ ಕರ್ನಾಟಕ ರಾಜ್ಯ ರಾಜಕಾರಣದ ಸಂಕ್ರಮಣ ಘಟ್ಟ. ಎಪ್ಪತ್ತರ ದಶಕದ ಜೆ.ಪಿ. ಚಳುವಳಿ ಹುಟ್ಟಿಸಿದ ಆಸೆಗಳೆಲ್ಲ ಕಮರಿ ಹೋಗಿ, ರಾಜಕಾರಣ ಹೊಸ ನೆಲೆಗಳನ್ನು ಹುಡುಕಿಕೊಳ್ಳುತ್ತಿದ್ದ ಕಾಲವದು. ಇಂತಹ ಕಾಲದಲ್ಲಿ ಆಂತರಿಕವಾಗಿ ದುರ್ಬಲರಾದವರು ಬಹು ಸುಲಭವಾಗಿ ಆಮಿಷಗಳಿಗೆ ಸಿಕ್ಕಿ ನಾಶವಾಗುವ ಅಪಾಯವಿರುತ್ತದೆ. ಆದರೆ ಕೃಷ್ಣಪ್ಪ ಅಂತಹ ಅಪಾಯಕ್ಕೆ ಸಿಕ್ಕದಂತೆ ತಮ್ಮನ್ನು ಸಾರ್ವಜನಿಕ ಜೀವನದ ಕೆಲವು ಮೂಲಭೂತ ಮೌಲ್ಯಗಳಿಂದ ರಕ್ಷಿಸಿಕೊಂಡಿದ್ದರು ಎಂಬುದೇ ಇಂದೂ ಅವರನ್ನು ಗೌರವದಿಂದ ನೆನಪಿಸಿಕೊಳ್ಳಲು ಕಾರಣವಾಗಿದೆ. ರಾಜಕೀಯದಲ್ಲಿ ಆರಕ್ಕೇರದೆ ಮೂರಕ್ಕಿಳಿಯದೆ ಬಾಳಿದ ಇವರು, ನಿಜವಾಗಿ ಹೆಸರಾಗಿದ್ದುದು ತಮ್ಮ ಕರ್ತೃತ್ವ ಶಕ್ತಿಯಿಂದಲ್ಲ; ರಾಜಕಾರಣದಲ್ಲಿದ್ದೂ ಯಾರಿಗೂ ಏನೂ ಕೆಟ್ಟದು ಮಾಡದ ತಮ್ಮ ಸಾತ್ವಿಕ ಗುಣದಿಂದಾಗಿ. ಇಂದು ಅದೇ ಒಂದು ದೊಡ್ಡ ಗುಣವಾಗಿ ಗುರುತಿಸಲ್ಪಡುವಂತಾಗಿದೆ ಮತ್ತು ಅವರ ರಾಜಕೀಯ ನಿವೃತ್ತಿಯ ಬಹುವರ್ಷಗಳ ನಂತರ ಅವರ ಗೌರವಾರ್ಥ ಅಭಿನಂದನ ಗ್ರಂಥವೊಂದನ್ನು ತರಬೇಕೆನ್ನುವ ಒತ್ತಡ ಸಮಾಜದಲ್ಲಿ ಉಂಟಾಗಿದೆ ಎಂದರೆ, ನಮ್ಮ ರಾಜಕಾರಣ ಇಂದು ಎಷ್ಟು ಕುಲಗೆಟ್ಟು ಹೋಗಿದೆ ಎಂಬುದು ಗೊತ್ತಾಗುತ್ತದೆ.

ಇಂದು ನಾಗಮಂಗಲ ರಾಜ್ಯದಲ್ಲೇ ಅತ್ಯಂತ ರೂಕ್ಷ ರಾಜಕಾರಣಕ್ಕೆ ಹೆಸರಾಗಿದೆ. ಸಿಂಗಾರಿಗೌಡ ಮತ್ತು ಕೃಷ್ಣಪ್ಪನವರ ಸರಳ ರಾಜಕಾರಣಕ್ಕೆ ಎದುರಾಗಿ, ‘ನಂಗಾನಾಚ್’ ಮತ್ತು ಸಾರ್ವಜನಿಕ ‘ಬಾಡೂಟ’ಗಳು ಇಲ್ಲಿನ ಹೊಸ ರಾಜಕಾರಣದ ಹೆಗ್ಗುರುತುಗಳೆನಿಸಿಕೊಂಡಿವೆ! ಇಲ್ಲಿಂದ ಆಯ್ಕೆಯಾದ ಸಾಮಾನ್ಯ ಆರ್ಥಿಕ ನೆಲೆಗಳಿಂದ ಬಂದ ಇತ್ತೀಚಿನ ಶಾಸಕರುಗಳು ಇಂದು ಹಲವು ಕೋಟಿ ರೂಪಾಯಿಗಳ ಒಡೆಯರಾಗಿ, ಬೆಂಗಳೂರನ್ನು ತಮ್ಮ ಕಾರ್ಯಕೇಂದ್ರ ಮಾಡಿಕೊಂಡಿದ್ದಾರೆ. ಆದರೆ ನಾಗಮಂಗಲ ಕ್ಷೇತ್ರದ ಸಾಮಾನ್ಯ ಜನತೆಯ ಪಡಿಪಾಟಲು ಮಾತ್ರ ಹಾಗೇ ಮುಂದುವರೆದಿದೆ. ನಿಜ, ಈಗ ನಾಗಮಂಗಲ ನಗರದ ಮಧ್ಯೆ ಹಾದುಹೋದಾಗ, ಬದಲಾವಣೆ ಎದ್ದು ಕಾಣುವಂತಿದೆ. ಅಗಲವಾದ ಒಳ್ಳೆಯ ರಸ್ತೆ, ಆಕರ್ಷಕ ಕಟ್ಟಡಗಳು, ಆಧುನಿಕ ಮನೆಗಳು ಹಾಗೂ ಥಳಕು ಬಳುಕಿನ ಅಂಗಡಿ ಮುಂಗಟ್ಟುಗಳಿಂದ ಕಂಗೊಳಿಸುತ್ತಿರುವ ನಾಗಮಂಗಲ, ಮುಖ್ಯರಸ್ತೆಗೆ ಸಿಗುವ ನೋಟದಲ್ಲಿ ಇಂದು ದೊಡ್ಡ ವ್ಯಾಪಾರಿ ಕೇಂದ್ರದಂತೆ ಕಂಗೊಳಿಸುತ್ತಿದೆ. ಆದರೆ ಇದರ ಸೃಷ್ಟಿಕರ್ತರೂ ಮತ್ತು ಫಲದಾಯಿಗಳಿಬ್ಬರೂ ಒಬ್ಬರೇ ಆಗಿ; ಈ ‘ಪ್ರಗತಿ’ ಜನಪರವಾಗಿರದೆ, ಸ್ವಾರ್ಥಪರ ಎನ್ನಿಸಿಕೊಂಡಿದೆ. ಇದೆಲ್ಲವೂ ಸೃಷ್ಟಿಯಾಗಿರುವುದು ಇತ್ತೀಚಿನ ರೂಕ್ಷ ರಾಜಕಾರಣ ಸೃಷ್ಟಿ ಮಾಡಿರುವ ಹಡಬೆ ಹಣದ ಒಡೆಯರ ಶೋಕಿಗಾಗಿ.

ಆರ್ಥಿಕ ಉದಾರೀಕರಣದ ಭಾಗವಾಗಿ ‘ಸಮಾಜವಾದಿ’ ಬಡ ಭಾರತವನ್ನು ‘ಮುಕ್ತ ಮಾರುಕಟ್ಟೆ’ಯ ಶ್ರೀಮಂತ ಭಾರತವನ್ನಾಗಿ ಪುನಾರಚಿಸಲು ಆಗಿರುವ ಜಾಗತಿಕ ಒಪ್ಪಂದಗಳನ್ವಯ ವಿಶ್ವಬ್ಯಾಂಕ್ ಮತ್ತಿತರ ಜಾಗತಿಕ ಹಣಕಾಸು ಸಂಸ್ಥೆಗಳಿಂದ ‘ಅಭಿವೃದ್ಧಿ’ ಕಾಮಗಾರಿಗಳಿಗೆಂದು ಅಪಾರ ಹಣದ ರಾಶಿಯ ಪೂರೈಕೆಯಾಗುತ್ತಿದೆ. ಇದರಲ್ಲಿ ರಾಜಕಾಣಿಗಳ ಕಮಿಷನ್ ಭಾಗವಾಗಿ (ಇತರರ ಭಾಗವೂ ಉಂಟು!) ಬರುತ್ತಿರುವ ಹಡಬೆ ಹಣ ಇಂದು ಸಮಾಜದಲ್ಲಿ ಒಂದು ಹೊಸ ಐಷಾರಾಮಿ ವರ್ಗವನ್ನೇ ಸೃಷ್ಟಿಸಿದೆ. ಬೆಂಗಳೂರಿನ ರಾಜಕಾರಣಿಗಳ ಹಲವು ನೆಲೆಗಳ ಏಜೆಂಟರುಗಳಿಂದ ಕೂಡಿರುವ ಈ ವರ್ಗವು, ತಮ್ಮ ಪಾಲಿಗೆ ಬಂದ ಈ ಹಣದ ಪಾಲನ್ನು ಮಜವಾಗಿ ಖರ್ಚು ಮಾಡಲು ಮತ್ತು ಉಳಿದದ್ದನ್ನು ಲಾಭದಾಯಕವಾಗಿ ಹೂಡಲು ತಮ್ಮದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಅದರ ಫಲವೇ ನಾಗಮಂಗಲದಲ್ಲಿ ಎದ್ದುಕಾಣುವ ಈ ಹೊಸ ಅಭಿವೃದ್ಧಿಯ ನೋಟ! ನಾಯಕರುಗಳು ಮತ್ತು ಅವರ ಗೆಣೆಕಾರರಾದ ಅಧಿಕಾರಿಗಳು ಮತ್ತು ‘ಉದ್ಯಮಿ’ಗಳ ಪಾಲು ವಿಪರೀತ ದೊಡ್ಡದಿರುವುದರಿಂದ, ಅವರು ಬೆಂಗಳೂರು-ಮೈಸೂರುಗಳಂತಹ ದೊಡ್ಡ ಊರುಗಳಲ್ಲಿ ಅದರ ಹೂಡಿಕೆ ಮಾಡಿದ್ದರೆ, ಅವರ ಸಣ್ಣಪುಟ್ಟ ಏಜೆಂಟರುಗಳು ತಮ್ಮ ಯೋಗ್ಯತಾನುಸಾರ ತಮ್ಮ ಸ್ವಂತ ಊರುಗಳಲ್ಲಿ ಇಂತಹ ಹೂಡಿಕೆ ಮಾಡುತ್ತಿದ್ದಾರೆ. ಹಾಗಾಗಿ ಇಂದು ಅಭಿವೃದ್ಧಿ ಎಂದರೆ ಹೊಸ ವರ್ಗವೊಂದು ತನ್ನ ಸುಖ-ಶೋಕಿಗಾಗಿ ನಿರ್ಮಿಸಿಕೊಂಡಿರುವ ಹೊಸ ಕಾಲೋನಿ ಎಂಬಂತಾಗಿದೆ.

ಇದು ಬರೀ ನಾಗಮಂಗಲದ ಕಥೆಯಲ್ಲ. ಬಹುಶಃ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಕಥೆ ಇದೇ ಆಗಿದೆ. ಆದರೆ ಅದೇ ಹತ್ತಿರದ ಸಣ್ಣ ಊರು ಮತ್ತು ಹಳ್ಳಿಗಳಿಗೆ ಹೋಗಿ ನೋಡಿ, ಅದೇ ದಾರಿದ್ರ , ಅದೇ ಕೊಳಕು, ಅದೇ ದುಃಖ-ನೋವು-ಸಂಕಟ ಮತ್ತು ಅದೇ ಅಶಾಂತಿ! ಹಳ್ಳಿಗಳಲ್ಲಿ ಇಂದು ಯುವಕ-ಯುವತಿಯರೇ ಕಾಣೆಯಾಗಿ, ಅವುಗಳೆಲ್ಲ ಹಾಳು ಸುರಿದಂತೆ ಕಾಣುತ್ತಿವೆ. ಈ ಯುವಕ ಯುವತಿಯರೆಲ್ಲ ಪಟ್ಟಣಗಳಲ್ಲಿ ತಮ್ಮ ಭವಿಷ್ಯವನ್ನರಸಿ ಹೋಗಿದ್ದಾರೆ. ಇದರಿಂದಾಗಿ ನಮ್ಮ ಪಟ್ಟಣಗಳು ಅತಿಯಾದ ‘ಆರ್ಥಿಕ ಚಟುವಟಿಕೆ’ಗಳಿಂದ ಬಿರಿಯತೊಡಗಿದ್ದರೆ, ಹಳ್ಳಿಗಳು ದೆವ್ವ ಬಡಿದಂತೆ ಸ್ತಬ್ಧಗೊಳ್ಳುತ್ತಿವೆ. ಇಲ್ಲಿದೆ ಭಾರತದ ಇಂದಿನ ದುರಂತ.

ಈ ಭಾರತ ಕಳೆದ ಹತ್ತು ವರ್ಷಗಳಲ್ಲಿ ಸತತವಾಗಿ ತನ್ನ ಒಟ್ಟಾರೆ ದೇಶೀ ಉತ್ಪನ್ನದ ಎರಡಂಕಿ ದರದ ಆಸುಪಾಸಿನಲ್ಲೇ ಅಭಿವೃದ್ಧಿಯನ್ನು ಸಾಧಿಸುತ್ತಿದೆ. ಕೆಲಕಾಲ ಉಜ್ವಲವಾಗಿ ‘ಪ್ರಕಾಶಿ’ಸುತ್ತಿತ್ತು ಕೂಡಾ! ಆದರೆ ಇದೆಲ್ಲ ಆಗುತ್ತಿರುವುದು ಅದರ ಕೈಗಾರಿಕಾ, ಸೇವಾ ಹಾಗೂ ಮೂಲಭೂತ ಸೌಕರ್ಯಗಳ ವಲಯಗಳಲ್ಲಿ. ಆದರೆ ಗ್ರಾಮ ಭಾರತದ ಬಹುದೊಡ್ಡ ಚಟುವಟಿಕೆಯಾದ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಶೇಕಡಾ ಮೂರರ ಆಸುಪಾಸಿನಲ್ಲೇ ಉಳಿದುಬಿಟ್ಟಿದೆ. ಈ ಅಂತರದ ಪರಿಣಾಮವೇ, ಈ ಅವಧಿಯಲ್ಲಿ ರಾಷ್ಟ್ರ ಕಂಡ ಒಂದು ಲಕ್ಷಕ್ಕೂ ಹೆಚ್ಚು ಜನ ರೈತರ ಆತ್ಮಹತ್ಯೆ. ಅಂದರೆ ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರ ಕಂಡಿರುವ ಎರಡಂಕಿಯ ಅಭಿವೃದ್ಧಿ ದರ ರಾಷ್ಟ್ರವನ್ನು ಸ್ಫೋಟಕವಾಗಿ ಒಡೆದು ನಿಲ್ಲಿಸಿದೆ. ನಗರ-ಹಳ್ಳಿ ಎಂದಲ್ಲ. ಈ ಒಡಕು ಹಿಂದಿನಿಂದಲೂ ನೆಹರೂ ಕಾಲದಿಂದಲೂ ಇದೆ. ಆದರೆ ಇದು ಅದನ್ನು ಒಳಗೊಂಡಂತೆ ಅದಕ್ಕಿಂತ ಹೆಚ್ಚು ನಿರ್ಣಾಯಕವಾದ ಒಡಕು: ಅಶ್ಲೀಲ ಜೀವನ ಶೈಲಿಯ ಅತಿ ಶ್ರೀಮಂತರ ಮತ್ತು ಆತ್ಮಹತ್ಯೆ ಅಂಚಿನಲ್ಲಿರುವ ಅತಿ ಬಡವರ ನಡುವಣ ಒಡಕು. ಇದರರ್ಥ ಅಸಮಾನತೆಯ ಅಂತರ ಹತ್ತು-ನೂರು ಪಟ್ಟು ಇದ್ದುದು ಇಂದು ಸಾವಿರ ಪಟ್ಟಿಗೆ ಏರಿದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಶೇಕಡಾ ೭೭ರಷ್ಟು ಜನ ದಿನಕ್ಕೆ ಇಪ್ಪತ್ತು ರೂಪಾಯಿಗಳಿಗೂ ಕಡಿಮೆ ಆದಾಯದಲ್ಲಿ ಬದುಕುತ್ತಿರುವ ಈ ದೇಶದಲ್ಲಿ, ಒಬ್ಬನಿಗೆ ಒಂದು ವರ್ಷಕ್ಕೆ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಬಳ ಕೊಡುವಂತಹ ಆರ್ಥಿಕತೆಯನ್ನೂ ಇಂದು ಪ್ರೋತ್ಸಾಹಿಸಲಾಗುತ್ತಿದೆ. ಇದನ್ನು ವಿಕ್ಷಿಪ್ತ, ಅಭಿವೃದ್ಧಿ ಎನ್ನದೆ ಇನ್ನೇನೆನ್ನಬೇಕು?

ಇದಕ್ಕೆ ಮುಖ್ಯ ಕಾರಣ, ಸಮಾಜದ ಸಾರ್ವತ್ರಿಕ ಕಣ್ಣುಗಳಂತಹ ನಮ್ಮ ಸಮೂಹ ಮಾಧ್ಯಮಗಳು ಮತ್ತು ಇದನ್ನು ನಿಯಂತ್ರಿಸಬಲ್ಲವರಾಗಿದ್ದ ಬುದ್ಧಿಜೀವಿಗಳು ಈಗ ಈ ಹೊಸ ಆರ್ಥಿಕತೆಯೊಡನೆ ಶಾಮೀಲಾಗಿರುವುದು. ಅದರ ‘ಲಾಭ’ಗಳಲ್ಲಿ ಪಾಲುದಾರರಾಗಿರುವುದು. ಹೀಗಾಗಿ ಸಮರ್ಥ ನಾಯಕತ್ವವಿಲ್ಲದ ಸಮಾಜ, ವರ್ಷಕ್ಕೆ ಒಂದು ಕೋಟಿ ರೂಪಾಯಿಗಳ ಸಂಬಳ ಪಡೆಯುವುದನ್ನೇ ಉನ್ನತ ಆದರ್ಶವನ್ನಾಗಿ ಮಾಡಿಕೊಂಡು, ಅದಕ್ಕೆ ಬೇಕಾದ ತರಬೇತಿಗಳಿಗಾಗಿ ಹಪಹಪಿಸುತ್ತಿದೆ. ಈ ಹಪಾಹಪಿಯನ್ನೇ ಹೊಸ ರೀತಿಯ ಬಂಡವಾಳ ಮಾಡಿಕೊಂಡಿರುವ ನವ ಶ್ರೀಮಂತಶಾಹಿ, ಇವರ ತರಬೇತಿ ದಾಹವನ್ನು ತಣಿಸಲು ಹೊಸ ಹೊಸ ರೀತಿಯ ‘ಕೈಗಾರಿಕಾ ಸೇವೆ’ಗಳನ್ನು ಆವಿಷ್ಕರಿಸುತ್ತಿದೆ ಹಾಗೂ ಬ್ಯುಸಿನೆಸ್‌ಗಿಂತ ಇಂದು ಬ್ಯುಸಿನೆಸ್ ಮ್ಯಾನೇಜ್‌ಮೆಂಟೇ ಒಂದು ದೊಡ್ಡ ಬ್ಯುಸಿನೆಸ್ ಆಗಿ ಬೆಳೆಯುತ್ತಿದೆ! ಇದರ ವಿವಿಧ ಅಂಗಗಳಲ್ಲಿ ನೆಲೆ ಪಡೆಯಲೆಂದೇ ಹಳ್ಳಿಗಳ ಮತ್ತು ಸಣ್ಣ ಊರುಗಳ ಯುವಕ ಯುವತಿಯರು ಪಟ್ಟಣಗಳ ಕಡೆಗೆ ಧಾವಿಸುತ್ತಿರುವುದು.

ಇವರೆಲ್ಲ ಹೀಗೆ, ‘ಉತ್ಪತ್ತಿ’ ವಲಯಕ್ಕಿಂತ ‘ಸೇವಾ’ ವಲಯದಲ್ಲೇ ನೆಲೆ ಕಾಣುವಂತಾಗಿರುವುದು, ನಿಜವಾಗಿಯೂ ಆತಂಕಕಾರಿ ವಿಷಯವಾಗಿದೆ. ಏಕೆಂದರೆ ಈ ಸೇವೆ ಒರಟೊರಟಾದ ಸಾಲ ವಸೂಲಾತಿಯಿಂದ ಹಿಡಿದು ಬಹು ನಾಜೂಕಾದ ಆತಿಥ್ಯ ನಿರ್ವಹಣೆ (Hospitality) ಎಂಬ ‘ವೈವಿಧ್ಯಮಯ’ ಕೆಲಸದವರೆಗೆ ಹರಡಿಕೊಂಡಿದೆ. ಅಂದರೆ ಅತೃಪ್ತ ಯುವಜನ ವರ್ಗವನ್ನು ನವ ಶ್ರೀಮಂತಶಾಹಿ ತನ್ನೊಳಕ್ಕೆ ಅನುಸಂಧಾನಿಸಿಕೊಂಡು, ವಾಸ್ತವವಾಗಿ ತನ್ನ ವಿಧೇಯ ಸೇವಕ ವರ್ಗವನ್ನಾಗಿ ಮಾಡಿಕೊಳ್ಳುತ್ತಿರುವ ವಿದ್ಯಮಾನವದು. ಈ ವಿಧೇಯತೆಯನ್ನೇ ಇಂದು ಹೊಸ ಆರ್ಥಿಕತೆಯ ಹೊಸ ಶಿಸ್ತು ಮತ್ತು ಹೊಸ ಹುರುಪು ಎಂದು ಬಣ್ಣಿಸಲಾಗುತ್ತಿದೆ! ಏಕೆಂದರೆ ಈ ವಿಧೇಯ ವರ್ಗ ತಾನು ಗಳಿಸಿದ್ದನ್ನೆಲ್ಲ ನವ ಶ್ರೀಮಂತಶಾಹಿ ಸೃಷ್ಟಿಸುತ್ತಿರುವ ಹೊಸ ಗ್ರಾಹಕ ಸಮಾಜದ ಬೆಳವಣಿಗೆಗಾಗಿ ಖರ್ಚುಮಾಡಲು ಬದ್ಧವಾಗಿದೆ. ಅವರ ವೃತ್ತಿ ಸ್ವರೂಪವನ್ನೇ ಈ ಬದ್ಧತೆಯನ್ನುಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಅವರ ಉಡುಪು, ಪ್ರಸಾಧನ, ಭಾಷೆ, ಆಹಾರ ಪದ್ಧತಿ, ಮನರಂಜನೆ ಹಾಗೂ ಒಟ್ಟಾರೆ ಅವರ ಅಭಿರುಚಿ ಮತ್ತು ಜೀವನಶೈಲಿಗಳು ಒಂದು ನಿರ್ದಿಷ್ಟ ಆರ್ಥಿಕ ಮಾದರಿಯ ಆಸುಪಾಸಿನಲ್ಲೇ ರೂಪಿತವಾಗುವಂತೆ ನೋಡಿಕೊಳ್ಳಲಾಗಿದೆ. ಆದರೆ ಸದಾ ವೃತ್ತಿ ಅನಿಶ್ಚಿತತೆಯಲ್ಲಿ ತೊಳಲಾಡುವ ಇವರು, ಯಾವುದೇ ಜೀವನ ದರ್ಶನ ರೂಪಿತವಾಗಲು ಸಾಧ್ಯವಿಲ್ಲದಂತಹ ಮಾನಸಿಕ ಅಸ್ಥಿರತೆಯಲ್ಲಿ, ಅವಕಾಶಗಳ ಹೊಸ ಬಾಗಿಲುಗಳು ತೆರೆಯುವುದನ್ನೇ ಸದಾ ಕಾಯುತ್ತಿರುವ ಆತಂಕದಲ್ಲಿರುತ್ತಾರೆ.

ಹೊಸ ಆರ್ಥಿಕ ರಾಜಕಾರಣವೆಂದರೆ ಇದು! ಪಾರಮಾರ್ಥಿಕಕ್ಕೇ ಅವಕಾಶ ಕೊಡದ ಆರ್ಥಿಕತೆ ಇದು... ಈ ಆರ್ಥಿಕತೆಯಾದರೂ ಎಂತಹುದು? ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಇದರಲ್ಲಿ ಪಾಲ್ಗೊಂಡಿರುವ ಈ ಬಹುತೇಕ ಶಿಕ್ಷಿತ ಜನ ಉತ್ಪತ್ತಿ ಮಾಡುತ್ತಿರುವುದು ‘ಹಣ’ವನ್ನು ಮಾತ್ರ. ಅದೂ, ಕಾಣದ ತಮ್ಮ ಮಾಲೀಕರ ಸೇವೆಯಲ್ಲಿ. ಇದರಿಂದ ಸುಸ್ಥಿರವಾದ-ಆಪತ್ಕಾಲದಲ್ಲಿ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಆಸರೆಯಾಗಬಲ್ಲ-‘ಆಸ್ತಿ’ ನಿರ್ಮಾಣವಾಗುತ್ತಿಲ್ಲ. ನಿಜವಾಗಿ ಇಂತಹ ಆಸ್ತಿ ನಿರ್ಮಾಣವಾಗುತ್ತಿರುವುದು ಹಳ್ಳಿಗಳಿಂದ ಬಂದ ಅಶಿಕ್ಷಿತ ಕೂಲಿಕಾರರಿಂದ. ಆದರೆ ಇವರು ಹೊಸ ಆರ್ಥಿಕ ವ್ಯವಸ್ಥೆಯ ನಿಜವಾದ ಅಸ್ಪ ಶ್ಯರು. ತಾವೇ ಕೈಯ್ಯಾರೆ ನಿರ್ಮಿಸಿದ ಆಸ್ತಿಗಳಿಂದ-ವಿಶೇಷವಾಗಿ ಮೂಲಭೂತ ಸೌಕರ್ಯಗಳಿಂದ-ಇವರು ನಿಷೇಧಿತರು. ಇವರಲ್ಲಿ ನಮ್ಮ ಸಾಂಪ್ರದಾಯಿಕ ಅಸ್ಪ ಶ್ಯರೇ ಹೆಚ್ಚು ಎಂಬುದೂ ನಿಜ. ಅಂದರೆ ಇದು ಹಳೇ ಜಾತಿವ್ಯವಸ್ಥೆಯನ್ನೊಳಗೊಂಡ ಹೊಸ ಜಾತಿವ್ಯವಸ್ಥೆ. ಈ ವ್ಯವಸ್ಥೆಯ ಶೂದ್ರರು ಮತ್ತು ಅಸ್ಪ ಶ್ಯರು ಯಾವುದೇ ಅನುಸಂಧಾನಕ್ಕೆ ಸಿಗದಂತಹವರು. ಅಂತಹ ಅವಕಾಶವೇ ತೆರೆದುಕೊಳ್ಳಲಾಗದಂತಹ ಆದಾಯ ಸ್ತರಗಳಲ್ಲಿ ಸಿಕ್ಕಿಹಾಕಿಕೊಂಡವರು. ದುಡಿಮೆಯ ಹೊಸ ರೂಪಗಳಿಗೆ ಮತ್ತು ಕೌಶಲ್ಯಗಳಿಗೆ ತೆರೆದುಕೊಳ್ಳಲಾಗದವರು. ಹೊಸ ಚರಿತ್ರೆಯಿಂದಲೂ ಶಪಿತರಾದವರು.

ಹೀಗೆ, ರೈತರೂ ಸೇರಿದಂತೆ ನಿಜವಾದ ಆಸ್ತಿ ನಿರ್ಮಾಣಕಾರರಿಗೆ-ಸಮಾಜಸೇವಕರಿಗೆ-ಮುಕ್ತಿಯೇ ಇಲ್ಲದಂತಾಗಿದೆ. ಇವರನ್ನು ‘ಮುಕ್ತಿ’ಯ ಹಾದಿಯಲ್ಲಿ ಕರೆದುಕೊಂಡು ಹೋಗಬಲ್ಲವರೆಲ್ಲ-ಯುವಶಕ್ತಿಯೂ ಸೇರಿದಂತೆ-ಹೊಸ ವ್ಯವಸ್ಥೆಯೊಂದಿಗೆ ಶಾಮೀಲಾಗಿದ್ದಾರೆ. ಅಷ್ಟೇ ಅಲ್ಲ, ಇದರ ರಾಜಕಾರಣವನ್ನು ಹೊಸ ಸಂಭ್ರಮದೊಂದಿಗೆ ಎತ್ತಿ ಹಿಡಿಯುತ್ತಿದ್ದಾರೆ. ಇನ್ನು ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ಹಳ್ಳಿಗಳನ್ನು ‘ವಿಶೇಷ ಆರ್ಥಿಕ ವಲಯ’ಗಳ ಮೂಲಕ ನಿರ್ನಾಮ ಮಾಡಿ ಇಡೀ ಭಾರತವನ್ನು ನಗರೀಕರಿಸಲು ಉದ್ದೇಶಿಸಿರುವ (ಇದೇನೂ ಗುಪ್ತ ಕಾರ್ಯಕ್ರಮವಲ್ಲ; ಸರ್ಕಾರದ ಘೋಷಿತ ಕಾರ್ಯಕ್ರಮವೇ ಆಗಿದೆ) ಈ ರಾಜಕಾರಣ ಕೊನೆಗೆ ಕೆಲವೇ ಕೆಲವರ ರಾಜಕಾರಣವಾಗಿ ಕೊನೆಗೊಳ್ಳುವ ಎಲ್ಲ ಸಂಭವವಿದೆ. ಇಂದಿನ ರಾಜ್ಯ ರಾಜಕಾರಣ, ಈ ಆತಂಕ ನಿರಾಧಾರವಾದದ್ದರೇನೂ ಅಲ್ಲ ಎಂಬುವವರ ಸಾಕ್ಷಿಯಂತೆ ಇದೆ. ಇಂದು ಜನನಾಯಕರು ಸೃಷ್ಟಿಯಾಗುತ್ತಿರುವುದು ಜನರಿಂದ, ಜನರ ಮಧ್ಯದಿಂದ ಅಲ್ಲ; ಹಡಬೆ ಹಣದಿಂದ. ಇಂತಹ ನಾಯಕರು ಇನ್ನಷ್ಟು ಇಂತಹ ಹಡಬೆ ಹಣವನ್ನು ಸೃಷ್ಟಿಸುವಂತಹ ಹಡಬೆಗಳು ಮಾತ್ರ ಆಗಿರಲು ಸಾಧ್ಯ. ಇದರ ಸೂಚನೆಗಳನ್ನು ನಾವು ಇಂದು ವಿಷದಂತೆ ಏರುತ್ತಿರುವ ಸಾಮಾಜಿಕ ಅಭದ್ರತೆಯ ವೈವಿಧ್ಯಮಯ ಅಪರಾಧಗಳ ಮತ್ತು ಆತ್ಮಹತ್ಯೆಗಳ ಪ್ರಕರಣಗಳ ರೂಪದಲ್ಲಿ ಕಾಣತ್ತಿದ್ದೇವೆ.

ಈ ಹೊಸ ಸಿರಿವಂತಿಕೆ, ಈ ಹೊಸ ದಾರಿದ್ರ ಹಾಗೂ ಈ ಹೊಸ ಅವನತಿಯ ದಾರಿಗಳು ಆರಂಭವಾದದ್ದೇ, ರಾಷ್ಟ್ರ ಆವರೆಗೆ ನಂಬಿಕೊಂಡು ಬಂದಿದ್ದ ‘ಸಮಾಜವಾದಿ’ ಆಡಳಿತ ಶೈಲಿ ವಿಫಲವಾಗಿದೆ ಎಂಬ ಪ್ರಚಾರದಿಂದ. ತೊಂಭತ್ತರ ದಶಕದಲ್ಲಿ ರಾಷ್ಟ್ರವನ್ನು ಕಾಪು ದಾಸ್ತಾನು ಚಿನ್ನವನ್ನೆಲ್ಲ ಅಡವಿಡುವಂತಹ ಸನ್ನಿವೇಶ ಸೃಷ್ಟಿಯಾದುದು ಇದಕ್ಕೆ ಪುರಾವೆಯಂತಿತ್ತು. ಆದರೆ ಇದು, ಅದಕ್ಷ ಮತ್ತು ಭ್ರಷ್ಟ ಆಡಳಿತಕ್ಕೆ ‘ಸಮಾಜವಾದ’ವೆಂದು ಹೆಸರಿಟ್ಟು, ಅದರ ವಿಶ್ವಾಸಾರ್ಹತೆಯನ್ನು ಹಾಳುಮಾಡುವ ಜಾಗತಿಕ ರಾಜಕಾರಣದ ಹುನ್ನಾರವಲ್ಲದೆ ಮತ್ತೇನಲ್ಲ. ಯಾವ ಸಮಾಜವಾದವೂ ಅದಕ್ಷತೆ ಮತ್ತು ಭ್ರಷ್ಟತೆಯನ್ನು ಸಹಿಸುವುದಿಲ್ಲ. ಸಹಿಸಿತೆಂದರೆ ಅದು ಸಮಾಜವಾದವೂ ಅಲ್ಲ. ಸಮಾಜವಾದ ಸಮಾನತೆಯಲ್ಲಿ ನಂಬಿಕೆಯಿಟ್ಟ ಒಂದು ಧರ್ಮ. ಹಾಗೇ, ಅದರ ಸಾಕ್ಷಾತ್ಕಾರಕ್ಕಾಗಿ ರೂಪುಗೊಂಡಿರುವ ಒಂದು ರಾಜಕೀಯ ಸಾಧನವೂ ಹೌದು. ಅದು ಉತ್ಪಾದನೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಸಮಾನತೆಯನ್ನು ಸಾಧಿಸ ಬಯಸುತ್ತದೆ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು ಅದರ ಮೊದಲ ಆದ್ಯತೆ. ಅದು ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟರಮಟ್ಟಿಗೆ ಮಾತ್ರ ‘ಅಭಿವೃದ್ಧಿ’ ಸಾಕು ಎನ್ನುತ್ತದೆ ಅದು. ಹಾಗೆ ಎಲ್ಲರೂ ಸಮಾನ ಉತ್ಪಾದಕತೆಯೊಡನೆ ಉತ್ಪಾದನೆಯಲ್ಲಿ ತೊಡಗಲು ಸಾಧ್ಯವಿರುವಂತಹ ತಂತ್ರಜ್ಞಾನವನ್ನು ಮಾತ್ರ ಅದು ಒಪ್ಪುತ್ತದೆ. ಇದರ ಜೊತೆಗೆ, ಇದನ್ನು ಸಾಧ್ಯಮಾಡುವಂತಹ ಆಡಳಿತ ವಿಕೇಂದ್ರೀಕರಣವನ್ನು ಒತ್ತಾಯಿಸುತ್ತದೆ ಅದು. ಇಂತಹ ಸಮಾಜವಾದ ಭಾರತದಲ್ಲಿ ಎಲ್ಲಿ ಜಾರಿಯಲ್ಲಿತ್ತು? ರಷ್ಯಾ ಮತ್ತು ಅಮೆರಿಕಾದ ಅಭಿವೃದ್ಧಿ ಮಾದರಿಗಳ ಮಧ್ಯೆ ದೇಶ ತುಯ್ದಾಡುತ್ತಾ ತೊಳಲಾಡುತ್ತಾ ಕೊಳೆತದ್ದನ್ನೇ ಸಮಾಜವಾದದ ವೈಫಲ್ಯವೆಂದು ಕರೆದು, ಆ ಕಾಲ ಮುಗಿಯಿತು ಎನ್ನುತ್ತಿದ್ದಾರೆ ನವ ಶ್ರೀಮಂತಶಾಹಿ ಹಾಗೂ ಅವರ ಚೇಲಾಗಳು. ಹೋಗಲಿ, ಅವರೀಗ ನಮ್ಮನ್ನು ಕರೆದುಕೊಂಡು ಹೋಗುತ್ತಿರುವುದಾದರೂ ಎಲ್ಲಿಗೆ?

ರಾಷ್ಟ್ರ ಒಡೆಯುತ್ತಿದೆ: ಸ್ಫೋಟಕ ಅಸಮಾನತೆಯ ಅಂತರಗಳಲ್ಲಿ ; ಅಶ್ಲೀಲ ಗ್ರಾಹಕವಾದದಲ್ಲಿ ; ಆತಂಕಪೂರಿತವಾದ ಅಭದ್ರತೆ ಹಾಗೂ ಅಪರಾಧ ವೈವಿಧ್ಯಗಳಲ್ಲಿ. ಈ ಒಡಕನ್ನು ಮುಚ್ಚಲು ಕಾರ್ಪೊರೇಟ್ ವಲಯವೆಂಬ ನವಶ್ರೀಮಂತಶಾಹಿ ಮುಂದೆ ಬರಬೇಕೆಂದು ಈ ಹೊಸ ಆರ್ಥಿಕತೆಯ ಹರಿಕಾರರಾದ ಪ್ರಧಾನಿ ಮನಮೋಹನಸಿಂಗರೇ ಈಗ ಪದೇ ಪದೇ ಕರೆಕೊಡುವ ಒತ್ತಾಯಕ್ಕೆ ಒಳಗಾಗಿದ್ದಾರೆ! ಏಕೆಂದರೆ ಇವರು ಒಪ್ಪಿಕೊಂಡ ಜಾಗತಿಕ ಆರ್ಥಿಕತೆ ಈಗ ದೊಡ್ಡದೊಂದು ಬಿಕ್ಕಟ್ಟಿಗೆ ಸಿಕ್ಕಿದೆ. ಹಾಗಾಗಿ ಮೇಲ್ವರ್ಗದವರ ದಾನ-ಧರ್ಮಗಳ ಮೂಲಕ ಕೆಳವರ್ಗದವರ-ವಂಚಿತರ-ಉದ್ಧಾರಕ್ಕಾಗಿ ಕರೆ! ಈ ಕಾರ್ಪೋರೇಟ್ ‘ದಯಾಳು’ಗಳಾದ ಕೆಲವರು ಇದಕ್ಕೆ ತಲೆಯಲ್ಲಾಡಿಸುತ್ತಾ, ತಮ್ಮ ಸಹವರ್ತಿಗಳಿಗೆ ನಮ್ಮ ಪ್ರಾಚೀನ ಪರಂಪರೆಯ ದಾನದ ಪರಿಕಲ್ಪನೆಯನ್ನು ನೆನಪಿಸತೊಡಗಿದ್ದಾರೆ... ಕೆಲವರಂತೂ ‘ಮನುಧರ್ಮ’ದಂತೆ ದಾನಗಳಲ್ಲಿ ತೊಡಗಬೇಕೆಂದು ಕರೆಕೊಡತೊಡಗಿದ್ದಾರೆ-ಆ ಧರ್ಮದ ಪ್ರಕಾರ, ದಾನ ಯಾವ ಉದ್ದೇಶಗಳಿಗೆಂದು ಅರಿಯದೆ! ವಿಕಾರವೆಂದರೆ ಇದು. ಹೊಸ ಜಾತಿ ವಿಕಾರವಿದು. ಅಸಮಾನತೆ ನಿಸರ್ಗದತ್ತವಾದದ್ದು (ಅಂದರೆ ಹುಟ್ಟಿಗೆ ಸಂಬಂಧಿಸಿದ್ದು) ಮತ್ತು ಅದರ ಹಾಹಾಕಾರವನ್ನು ದಾನ ಧರ್ಮಗಳೆಂಬ ಪುಣ್ಯಕಾರ್ಯಗಳ ಮೂಲಕ ಶಮನಗೊಳಿಸಬಹುದೆಂಬ ಪ್ರಾಚೀನ ಕೌಶಲ್ಯದ ಪ್ರದರ್ಶನವಿದು. ಇದೇ, ಈ ಹೊಸ ವ್ಯವಸ್ಥೆ ನಿಜವಾಗಿ ಹೊಸದೇನಲ್ಲ ಎಂದು ಸೂಚಿಸುತ್ತಿರುವುದು; ಹಳೆಯ ವ್ಯವಸ್ಥೆಯ ಹೊಸ ರೂಪವೆಂದು ಸಾರಿ ಹೇಳುತ್ತಿರುವುದು! ಹಾಗಾಗಿ ಇದರ ಪರಿಣಾಮಗಳೂ ಹಿಂದಿನದಕ್ಕಿಂತ ಬೇರೆಯಾಗಿರಲಾರವು ಅಲ್ಲವೇ? ಆದರೆ ಹೊಸ ಸರಕು ಸಾಮ್ರಾಜ್ಯದಲ್ಲಿ ಕಳೆದುಹೋಗಿರುವವರಿಗೆ ಇದು ಅರ್ಥವಾಗಲಾರದು...

ಈ ಹಿನ್ನೆಲೆಯಲ್ಲಿ ಈಗ ಆಯ್ಕೆ ನಮ್ಮ ಮುಂದಿದೆ. ಅಭಿವೃದ್ಧಿ ಪಥದ ಆದಿಯಿಂದ ಅಂತ್ಯದವರೆಗೂ ‘ಸಮಾನತೆ’ಯನ್ನೇ ಆದರ್ಶವಾಗಿರಿಸಿಕೊಂಡ ಸರಳ ಸಭ್ಯ ಜೀವನ ಮಾದರಿಯ ಸಮಾಜವಾದವನ್ನು-ಅದೇ ಹೆಸರಿನಿಂದಲೋ ಅಥವಾ ಮತ್ತೊಂದು ಹೆಸರಿನಿಂದಲೋ-ನಾವು ಪುನರಾವಿಷ್ಕರಿಸಿಕೊಳ್ಳಬೇಕೋ ಅಥವಾ ಕೆಲವರ ಸಮೃದ್ಧಿ ಕಾಲಕ್ರಮೇಣ ಇಡೀ ಸಮಾಜಕ್ಕೆ ಹರಡುವುದೆಂದು ನಂಬಿಸುತ್ತಾ ಸಮಾಜವನ್ನೇ ಅಶ್ಲೀಲತೆ, ಅಭದ್ರತೆ ಮತ್ತು ಆತ್ಮಹತ್ಯೆಗಳ ಪಾಪಕೂಪಕ್ಕೆ ತಳ್ಳುತ್ತಿರುವ ಇಂದಿನ ಮುಕ್ತಮಾರುಕಟ್ಟೆ ಆರ್ಥಿಕತೆಯೊಂದಿಗೇ ಮುಂದುವರಿಯಬೇಕೋ?

ಕಳೆದ ಹತ್ತು ವರ್ಷಗಳಲ್ಲಿ, ಈಚಿನ ದಿನಗಳಲ್ಲಿ ಮೊದಲ ಬಾರಿಗೆ ಎಲ್ಲರನ್ನೂ ಒಳಗೊಂಡೇ ನಡೆಯಬೇಕಾದ ಆವೃತ ಅಭಿವೃದ್ಧಿಯ ಮಾತುಗಳು ನಮ್ಮ ಆಡಳಿತಗಾರರಿಂದಲೇ ಕೇಳಿಬರುತ್ತಿವೆ. ಇದು ಹೊಸ ಸಮಾಜವಾದದ ಆರಂಭದ ಸೂಚನೆ ಎಂದು ನಂಬೋಣವೇ?

(ಹಿರಿಯ ರಾಜಕಾರಣಿ ಎಚ್.ಟಿ. ಕೃಷ್ಣಪ್ಪ ಅವರ ಅಭಿನಂದನ ಗ್ರಂಥಕ್ಕಾಗಿ ಬರೆದುದು)