ಮಾಧ್ಯಮಗಳೆಂಬ ಸುದ್ದಿ ಕಾರ್ಖಾನೆಗಳು!

ಮಾಧ್ಯಮಗಳೆಂಬ ಸುದ್ದಿ ಕಾರ್ಖಾನೆಗಳು!

ಬರಹ

ವಾರದ ಒಳನೋಟ

ಮಾಧ್ಯಮಗಳೆಂಬ ಸುದ್ದಿ ಕಾರ್ಖಾನೆಗಳು!

ಚುನಾವಣೆಗಳು ಬಂತೆಂದರೆ ಮಾಧ್ಯಮಗಳಿಗೆ ಹಬ್ಬ. ದಿನದ ೨೪ ತಾಸುಗಳೂ ಸುದ್ದಿ ಹರಿಸುವುದಾಗಿ ಘೋಷಿಸಿಕೊಂಡಿರುವ ಟಿ.ವಿ ಸುದ್ದಿ ವಾಹಿನಿಗಳು, ಜಗತ್ತಿನಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನೂ ಸುದ್ದಿಯಾಗಿ ಪರಿವರ್ತಿಸಿ ವೀಕ್ಷಕರಿಗೆ ಉಣಬಡಿಸಬೇಕಾಗಿರುವುದು ಅವುಗಳ ಕರ್ಮವೂ, ಧರ್ಮವೂ ಆಗಿಬಿಟ್ಟಿದೆ. ಇಂದಿನ ಮಾಧ್ಯಮಗಳೆಂದರೆ ಕೋಟ್ಯಾಂತರ ರೂಪಾಯಿಗಳ ಒಂದು ಬೃಹತ್ ವ್ಯಾಪಾರ-ವ್ಯವಹಾರವೇ ಆಗಿದೆ. ಆದರೆ ಇಂದು ವಿಶ್ವ ವ್ಯಾಪಕವಾದ ಸದ್ಯದ ಆರ್ಥಿಕ ಹಿಂಜರಿತ ಈ ಮಾಧ್ಯಮಗಳನ್ನೂ ಘಾಸಿಗೊಳಿಸಿದೆ. ಇದರಿಂದಾಗಿ ಅವು ತಮ್ಮ ಸ್ವರೂಪದಲ್ಲಿ, ಅಂತಃರಚನೆಯಲ್ಲಿ, ಗಾತ್ರ ಹಾಗೂ ಉದ್ದೇಶಗಳಲ್ಲಿ(ಅಂದರೆ ತಮ್ಮ ಉತ್ಪನ್ನಗಳ ವೈವಿಧ್ಯತೆಗಳಲ್ಲಿ) ಕೊಂಚ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಕ್ಕಿವೆ. ಆದರೆ ಹಾಗೆನ್ನಿಸುತ್ತಿರುವಾಗಲೇ, ಈಗ ಭಾರತದ ಬಹುಕೋಟಿ ಉದ್ಯಮವೆನಿಸಿರುವ ಮಹಾ ಚುನಾವಣೆ ಬಂದಿದ! ಮಾಧ್ಯಮಗಳು ಮತ್ತೆ ಪೂರ್ಣ ಪ್ರಮಾಣದ ಸುದ್ದಿ ಕಾರ್ಖಾನೆಗಳಾಗಿ ವೈವಿಧ್ಯಮಯ ಸುದ್ದಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡತೊಡಗಿವೆ! ಬಹುಶಃ ಹೊಸ ಸರ್ಕಾರವೊಂದು ರಚಿತವಾಗಿ ಅಧಿಕಾರದ ಕುರ್ಚಿಯಲ್ಲಿ ಪಟ್ಟಾಗಿ ಕೂರುವವರೆಗೂ ಈ ಕಾರ್ಖಾನೆಗಳಿಗೆ ಬಂಡವಾಳ ಮತ್ತು ಕಚ್ಛಾ ವಸ್ತುಗಳ ಪೂರೈಕೆಗೇನೂ ಕೊರತೆ ಇರಲಾರದು. ಇಲ್ಲಿ ಬಂಡವಾಳವೆಂದರೆ ವೀಕ್ಷಕ ಕುತೂಹಲ ಹಾಗೂ ಅದನ್ನು ಆಧರಿಸಿ ಬರುವ ವಾಣಿಜ್ಯ ಆದಾಯ. ಕಚ್ಛಾ ವಸ್ತುವೆಂದರೆ ನಮ್ಮ ರಾಜಕೀಯ ಪಕ್ಷಗಳ ಬೆನ್ನೆಲುಬಿಲ್ಲದ ವರ್ತನೆ. ಇವೆರಡೂ ಒಂದನ್ನೊಂದು ಅವಲಂಬಿಸಿ, ಪೂರಕವಾಗಿ ಕೆಲಸ ಮಾಡುತ್ತಾ ಒಂದು ಮಾಧ್ಯಮ ವಿಷ ಚಕ್ರವನ್ನೇ ನಿರ್ಮಿಸಿಬಿಟ್ಟಿವೆ.

ಈ ಚುನಾವಣೆಗಳ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು - ಟಿವಿ ವಾಹಿನಿಗಳು - ವರ್ತಿಸುತ್ತಿರುವ ರೀತಿ ನೋಡಿದರೆ ಆತಂಕವಾಗುತ್ತದೆ. ಸಂಸತ್ ಚುನಾವಣೆಗಳಂತಹ ಅಖಿಲ ಭಾರತ ಚುನಾವಣಾ ಸಂದರ್ಭದಲ್ಲಿ ಪ್ರಾದೇಶಿಕ ಭಾಷಾ ಟಿವಿ ವಾಹಿನಿಗಳಿಗೆ ಸಿಗುವ ಆಹಾರ ಕಡಿಮೆಯೇ. ಸಿಕ್ಕಿದರೂ ಅದು ಅಖಿಲ ಭಾರತ ಮಟ್ಟದಲ್ಲಿ ತಿಂದುಂಡು ಮಿಕ್ಕಿದ್ದು ಮಾತ್ರ. ಇಲ್ಲಿ ಏನಿದ್ದರೂ ಭೂರಿ ಭೋಜನ ರಾಷ್ಟ್ರೀಯವೆಂದು ಹೇಳಲಾಗುವ ಇಂಗ್ಲಿಷ್ ವಾಹಿನಿಗಳದ್ದೇ. ಇವುಗಳಿಗೆ ಈ ಬಾರಿ ಸಿಕ್ಕ ಮೊದಲ ಭಕ್ಷ್ಯ ವರುಣ್ ಗಾಂಧಿಯ ಭಾಷಣ. ಇದನ್ನು ಎಷ್ಟು ಸವಿದರೂ ನಮ್ಮ ಮಾಧ್ಯಮಗಳಿಗೆ ತೃಪ್ತಿಯಿಲ್ಲದಾಯಿತು. ಒಂದು ಸಮೀಕ್ಷೆ ಪ್ರಕಾರ ಆ ಒಂದು ವಾರ ನಮ್ಮ ಮಾಧ್ಯಮಗಳಲ್ಲಿ ಅತಿ ಹೆಚ್ಚು ಜಾಗ/ಕಾಲ ಅಕ್ರಮಿಸಿಕೊಂಡಿದ್ದುದು ಇದೇ - ಆ ಭಾಷಣದ ಸುದ್ದಿ, ಪ್ರಸಾರ, ಚರ್ಚೆ, ಸಂವಾದ, ಸಂದರ್ಶನಗಳು; ಮತ್ತೆ ಆನಂತರದ ಪರಿಣಾಮಗಳನ್ನು ಕುರಿತ ಸುದ್ದಿ, ವರದಿ, ಚರ್ಚೆ, ಸಂವಾದ, ಸಂದರ್ಶನಗಳು! ಅದರ ಅಂಗವಾಗಿ ಆತನ ಶಿಕ್ಷಣದ ವಿವರಗಳು, ಅದರ ತನಿಖಾ ವರದಿಗಳು, ಮಾಯಾವತಿಯವರ ಕೃಪೆಯಿಂದಾಗಿ ಸೆರೆಮನೆ ಸೇರಿದ ಆತನನ್ನು ಯಾರ್‍ಯಾರು ಯಾವ್ಯಾವ ವೇಳೆಯಲ್ಲಿ ಭೇಟಿ ಮಾಡಿದರು, ಆತನಿಗೆ ಊಟ ಎಲ್ಲಿಂದ ಬರುತ್ತದೆ, ಅದರಲ್ಲಿ ಏನೇನಿರುತ್ತದೆ, ಅದನ್ನು ಆತ ಎಷ್ಟು ಹೊತ್ತಿಗೆ ಉಂಡ, ಉಂಡು ಎಷ್ಟು ಹೊತ್ತಿಗೆ ಮಲಗಿದ, ಆತನಿಗೆ ನಿದ್ದೆ ಬಂತೇ ಇತ್ಯಾದಿ ಇತ್ಯಾದಿ! ಏಕೆ ಇದೆಲ್ಲ? ವರುಣ್ ಗಾಂಧಿಯ ಭಾಷಣದಿಂದ ಪ್ರಚೋದಿತರಾದ, ಹುರುಪುಗೊಂಡ ಜನಸ್ತೋಮದ ಕುತೂಹಲ ತಣಿಸಲೆಂದೇ? ಆ ಜನಸ್ತೋಮದ ಗಾತ್ರವನ್ನು ವಿಸ್ತರಿಸುವ ಮೂಲಕ ತಂತಮ್ಮ ವೀಕ್ಷಕ ಸಮೂಹದ ಗಾತ್ರವನ್ನು ವಿಸ್ತರಿಸಿಕೊಳ್ಳಲೆಂದೇ?

ಅಂದ ಹಾಗೆ ಯಾರೀ ವರುಣ್? ಈತನಿಗೇಕೆ ಇಷ್ಟೊಂದು ಪ್ರಾಮುಖ್ಯತೆ? ಈತನ ಹೇಳಿಕೆ ಈ ಮಟ್ಟದ ಅಖಿಲ ಭಾರತ ಸುದ್ದಿಯಾಗುವಂತಹ, ಅದನ್ನು ರಾಷ್ಟ್ರ ಗಂಭೀರವಾಗಿ ಪರಿಗಣಿಸುವ ಸಾಧನೆಯನ್ನೇನು ಮಾಡಿದ್ದಾನೆ ಈತ? ಈತನ ಹೇಳಿಕೆಗಳಿಗಿಂತ ಹೆಚ್ಚು ಭಯಂಕರವಾದ ಹೇಳಿಕೆಗಳನ್ನು ಈವರೆಗೆ ಎಷ್ಟು ಜನ ನೀಡಿಲ್ಲ ಮತ್ತು ಹೆಚ್ಚು ಭಯಂಕರವಾದ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಎಷ್ಟು ಆಗಿಲ್ಲ? ಇದಕ್ಕೆ ಉತ್ತರ: ಈತ ನೆಹರೂ - ಗಾಂಧಿ ಕುಟುಂಬದ ಸದಸ್ಯ! (ಇದರಲ್ಲಿ ನೆಹರೂ ಹೆಸರೇನೋ ಸರಿ. ಆದರೆ ಇಲ್ಲಿ ಗಾಂಧಿ ಎಂದರೆ ಯಾವ ಗಾಂಧಿ ಎಂಬುದು ಎಷ್ಟು ಜನ ಮಾಧ್ಯಮದವರಿಗೆ ಗೊತ್ತೋ ತಿಳಿಯದು!) ಆದರೇನು? ಅಲ್ಲಾ, ಕುಟುಂಬ ರಾಜಕಾರಣವನ್ನು ಪ್ರಶ್ನಿಸುವವರೂ ಇವರೇ, ಪೋಷಿಸುವವರೂ ಇವರೇ ಆಗಿದ್ದಾರಲ್ಲಾ! ಹೌದು. ಏಕೆಂದರೆ ಪ್ರಶ್ನಿಸುವುದೂ, ಪೋಷಿಸುವುದೂ ಎರಡೂ ಮಾಧ್ಯಮದವರಿಗೆ ಲಾಭದಾಯಕ ವ್ಯಾಪಾರವೇ ಆಗಿದೆಯಲ್ಲ?

ಇನ್ನು ಚುನಾವಣಾ ಆಯೋಗ ಈ ಬಾರಿ ಚುನಾವಣಾ ಪೂರ್ವ ಮತ್ತು ಮತದಾನೋತ್ತರ ಅಭಿಪ್ರಾಯ ಸಮೀಕ್ಷೆಗಳನ್ನು, ಅವು ಅಮಾಯಕ ಮತದಾರರನ್ನು ಪ್ರಭಾವಿಸುತ್ತವೆಂಬ ಕಾರಣದಿಂದ ಮತದಾನ ಪೂರ್ಣವಾಗುವವರೆಗೆ ನಿಷೇಧಿಸಿ, ಮಾಧ್ಯಮಗಳ ಹಾರಾಟವನ್ನು ಸ್ವಲ್ಪ ಮಟ್ಟಿಗೆ ತಹಬಂದಿಗೆ ತಂದಿದೆ ಎಂದೇ ಹೇಳಬೇಕು. ಇಂತಹ ಕ್ರಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಸ್ವಾತಂತ್ರ್ಯದ ಉಲ್ಲಂಘನೆಯಂತೆ ಕಂಡು ಬಂದರೂ, ಸಂಪೂರ್ಣ ವಾಣಿಜ್ಯೀಕರಣಗೊಂಡ ಇಂದಿನ ಮಾಧ್ಯಮ ಪ್ರಪಂಚದ ಸ್ವಾತಂತ್ರ್ಯವನ್ನು ನಿರಪೇಕ್ಷವಾಗಿ ಸಮರ್ಥಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಇದೆ. ಅದೇನೇ ಇರಲಿ, ಮಾಧ್ಯಮಗಳು ಈ ವಿಷಯದಲ್ಲಿ ರಂಗೋಲಿ ಕೆಳಗೇ ನುಸುಳಿ ಬೇರೆ ಬೇರೆ ರೂಪದಲ್ಲಿ ಚುನಾವಣಾ ಸಮೀಕ್ಷೆಗಳನ್ನು ಪ್ರಸಾರ ಮಾಡುತ್ತಲೇ ಇವೆ. ಅಷ್ಟೇನೂ ಕುತೂಹಲ ಹುಟ್ಟಿಸದಿರುವ ಈ ಸಮೀಕ್ಷೆಗಳ ಬಗೆಗೆ ಸಾಮಾನ್ಯ ವೀಕ್ಷಕರ ಆಸಕ್ತಿ ಕೆರಳಿಸಲು, ಅವುಗಳ ಕಡೆ ಗಮನ ಅನಿವಾರ್ಯ ಎಂಬ ವಾತಾವರಣ ಸೃಷ್ಟಿಸಲು, ಒಟ್ಟಾರೆ ತಮ್ಮ ಚುನಾವಣಾ ಕಾರ್ಯಕ್ರಮಗಳ ಪ್ರಸಾರದ ಜನಪ್ರಿಯತೆಯ ಮೌಲ್ಯ ಹೆಚ್ಚಿಸಲು ಮಾಧ್ಯಮಗಳು ಸ್ವತಃ ತಾವೇ ಚುನಾವಣಾ ಮಸಾಲಾ ಸುದ್ದಿಗಳನ್ನು ನಿರ್ಮಿಸತೊಡಗಿವೆ.

ಇದಕ್ಕೊಂದು ದೊಡ್ಡ ಉದಾಹರಣೆ ಎಂದರೆ, ತಮ್ಮನ್ನು ದುರ್ಬಲ ಪ್ರಧಾನ ಮಂತ್ರಿ ಎಂದ ಅಡ್ವಾನಿಯವರ ಮಾತುಗಳಿಗೆ ಮನಮೋಹನ ಸಿಂಗ್‌ರು ಪ್ರಬಲ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದನ್ನು ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದ್ದು. ಸುದ್ದಿ ಮಾಡುವುದೆಂದರೆ, ಅದರ ಬಗ್ಗೆ ದಿನಗಟ್ಟಲೆ ಚರ್ಚೆ ನಡೆಸುತ್ತಾ ವೀಕ್ಷಕರ ಬಾಯಲ್ಲಿ ನೀರೂರುವಂತಹ ಇನ್ನಷ್ಟು ಸ್ಟೋರಿಗಳನ್ನು ಸೃಷ್ಟಿಸುತ್ತಾ ಹೋಗುವುದು! ಮಾಧ್ಯಮಗಳು ಈ ವಿಷಯದಲ್ಲಿ ಇಷ್ಟಕ್ಕೇ ಸುಮ್ಮನಾಗದೆ ರಾಜಕಾರಣಿಗಳ ಇಂತಹ ಮಾತುಗಳಿಂದ ಚುನಾವಣಾ ವಾತಾವರಣವೇ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂಬ ನೈತಿಕ ನಿಲವನ್ನೂ ರೂಪಿಸುತ್ತಾ, ಸಾಮಾಜಿಕ ನಾಯಕತ್ವವನ್ನೂ ವಹಿಸಿಕೊಳ್ಳುವ ಪ್ರಯತ್ನ ಮಾಡಿದವು. ಅದನ್ನೂ ಒಂದು ದೊಡ್ಡ ಸುದ್ದಿ ಮಾಡುವ ಪ್ರಯತ್ನವಾಗಿ, ಈ ಬಗ್ಗೆ ಮನಮೋಹನರನ್ನೇ ಮಾತಿಗೆ ಎಳೆದಾಗ, ಹೃದಯ ಶಸ್ತ್ರಚಿಕಿತ್ಸೆಯ ನಂತರ ಇತ್ತೀಚೆಗೆ ಒಳ್ಳೆಯ ಫಾರ್ಮ್ನಲ್ಲಿರುವಂತೆ ತೋರುವ ಅವರು ನೀಡಿದ ಉತ್ತರ ಈ ಮಾಧ್ಯಮದವರ ಹುಚ್ಚು ಬಿಡಿಸುವಂತಿತ್ತು: ಇದೆಲ್ಲವೂ ನಿಮ್ಮ ಸೃಷ್ಟಿಯೇ ಆಗಿರುವಾಗ ನನ್ನನ್ನೇಕೆ ಕೇಳುತ್ತೀರಿ? ಪ್ರಶ್ನೆ ಕೇಳಿದ ಎನ್‌ಡಿಟಿವಿಯ ಬರ್ಖಾ ದತ್‌ಗೆ ಅವರು ವಿವರವಾಗಿ ಹೇಳಿದ್ದು: ನಾನು ಮುಂಬೈನಲ್ಲಿ ರಾಷ್ಟ್ರದ ಇಂದಿನ ಹಲವಾರು ಸಮಸ್ಯೆಗಳ ಬಗ್ಗೆ ಐದಾರು ಪುಟಗಳ ಭಾಷಣ ಮಾಡಿದೆ. ಕೊನೆಯ ಒಂದೆರಡು ಸಣ್ಣ ಪ್ಯಾರಾಗಳಲ್ಲಷ್ಟೇ ನಾನು ಅಡ್ವಾನಿಯವರ ಮಾತುಗಳ ಪ್ರಸ್ತಾಪ ಮಾಡಿದ್ದು. ಅದನ್ನೆಲ್ಲ ಬಿಟ್ಟು ನೀವು ಕೊನೆಯ ಆ ಒಂದೆರಡು ಪ್ಯಾರಾಗಳನ್ನಷ್ಟೇ ಪ್ರಚಾರ ಮಾಡಿದಿರಿ!

ಇದಕ್ಕೆ ಬರ್ಖಾ ದತ್ತರಿಂದ ಉತ್ತರವಿರಲಿಲ್ಲ. ಹಾಗೆ ನೋಡಿದರೆ ಬರ್ಖಾ ನಮ್ಮ ಕಾಲದ ಅತ್ಯುತ್ತಮ ಟಿವಿ ವರದಿಗಾರ್ತಿಯಲ್ಲೊಬ್ಬರು. ಆದರೆ ಅವರ ಟಿವಿಗೂ ವ್ಯಾಪಾರವಾಗಬೇಕಲ್ಲ! ಹಾಗಾಗಿ ಇಂತಹ ಅನೇಕ ಸುದ್ದಿಗಳನ್ನು ತಯಾರು ಮಾಡಿ ಮಾರುವ ದಂಧೆ ಅನಿವಾರ್ಯವೇನೋ! ಇಂತಹ ಇನ್ನೊಂದು ಸುದ್ದಿ: ರಾಹುಲ್ ಗಾಂಧಿಗೆ ಪ್ರಧಾನಿ ಪಟ್ಟ: ಪ್ರಿಯಾಂಕ ಇಂಗಿತ. ಇದು ಸುದ್ದಿ ಸ್ಫೋಟವೆನಿಸಿ ವಾಹಿನಿಗಳಲ್ಲಿ ಎರಡು-ಮೂರು ದಿವಸ ಚರ್ಚೆಯ ವಿಷಯವಾಯಿತು. ತಜ್ಞರು ವಿವಿಧ ಕೋನಗಳಿಂದ ಇದರ ಸಾಧ್ಯತೆಗಳ ಮತ್ತು ಪರಿಣಾಮಗಳ ಚರ್ಚೆ ಮಾಡಿದ್ದೂ ಮಾಡಿದ್ದೇ! ಪ್ರಜಾವಾಣಿಯಂತಹ ಪತ್ರಿಕೆಯೂ ಇದನ್ನು ಮುಖಪುಟದ ಸುದ್ದಿ ಮಾಡಿತು ಎಂದರೆ? ಆದರೆ ಇದರ ವಾಸ್ತವಾಂಶವಾದರೂ ಏನು? ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಪ್ರಿಯಾಂಕಾರನ್ನು ಯಾವನೋ ಒಬ್ಬ ಟಿವಿ ವರದಿಗಾರ ನೀವು ರಾಜಕೀಯಕ್ಕೆ ಬರುವಿರಾ? ಎಂದು ಕೇಳಿದ. ಅದಕ್ಕೆ ಅವರ ಉತ್ತರ: ಇಲ್ಲ. ಮತ್ತೆ ವರದಿಗಾರನ ಪ್ರಶ್ನೆ: ಎಂದೂ ಇಲ್ಲವೆ? ಆಕೆಯ ಉತ್ತರ: ಎಂದೂ (never) ಎಂದು ಇಂದು ಹೇಗೆ ಹೇಳಲಿ? ತಗೋ ಮತ್ತೊಂದು ಸುದ್ದಿ ಸ್ಫೋಟ: ಪ್ರಿಯಾಂಕ ರಾಜಕೀಯ ಪ್ರವೇಶ ಸನ್ನಿಹಿತ!. ಆತನ ಮುಂದಿನ ಪ್ರಶ್ನೆ: ರಾಹುಲ್ ಗಾಂಧಿ ಪ್ರಧಾನಿಯಾಗಬಲ್ಲರೆ? ಪ್ರಿಯಾಂಕ ಉತ್ತರ: ಆತ ಕಷ್ಟಪಟ್ಟು ಪಕ್ಷದ ಕೆಲಸ ಮಾಡುತ್ತಿದ್ದಾನೆ. ಆತನಿಗೆ ಒಳ್ಳೆಯ ಮನಸ್ಸಿದೆ. ಅರ್ಹತೆಯಿದೆ. ಹಾಗಾಗಿ ಮುಂದೊಂದು ದಿನ ಆತ ಪ್ರಧಾನಿಯಾಗುತ್ತಾನೆಂದು ಆತನ ಸೋದರಿಯಾಗಿ ನಾನು ಆಶಿಸುತ್ತೇನೆ. ಎರಡು ಮೂರು ನಿಮಿಷಗಳ ಈ ಅನೌಪಚಾರಿಕ ಬೀದಿ ಬದಿಯ ಮಾತುಕತೆಯೇ ಈ ಮೇಲಿನ ರಾಷ್ಟ್ರೀಯ ಮಹತ್ವದ ಸುದ್ದಿ ಸ್ಫೋಟಕ್ಕೆ ಕಾರಣವಾಯಿತೆಂದರೆ ನಮ್ಮ ಮಾಧ್ಯಮಗಳಲ್ಲಿ ಸುದ್ದಿ ಹೇಗೆ ತಯಾರಾಗುತ್ತದೆಂದು ನೀವು ಊಹಿಸಬಹುದು!

ಹೀಗೇ ಇನ್ನೂ ಹಲವಾರು ಮಸಾಲಾ ಸುದ್ದಿಗಳು ಕಳೆದ ೧೫-೨೦ ದಿನಗಳಲ್ಲಿ ಮಾಧ್ಯಮಗಳಲ್ಲಿ ಚಾಲ್ತಿಗೆ ಬಂದು ವೀಕ್ಷಕರಲ್ಲಿ ಸಲ್ಲದ ಕುತೂಹಲ ಹುಟ್ಟಿಸಿ ಮರೆಯಾಗಿರುವುದನ್ನು ನಾವು ನೋಡಿದ್ದೇವೆ. ನಾನು ಪ್ರಧಾನ ಮಂತ್ರಿ ಅಭ್ಯರ್ಥಿಯಲ್ಲ; ಏಕೆಂದರೆ, ಅದು ಸಾಧ್ಯವೂ ಅಲ್ಲ ಎಂದು ಯಾವ ವಾಹಿನಿಯಲ್ಲಿ ಶರದ್ ಪವಾರರು ಸ್ಪಷ್ಟವಾಗಿ ಹೇಳಿದ್ದರೋ, ಅದೇ ವಾಹಿನಿಯಲ್ಲಿ ಒಂದರೆಡು ದಿನಗಳಲ್ಲೇ ಶರದ್ ಪವಾರ್ ತೃತೀಯ ರಂಗದ ಪ್ರಧಾನ ಮಂತ್ರಿ ಅಭ್ಯರ್ಥಿ ಎಂಬ ಸುದ್ದಿ ಪ್ರಸಾರವಾಗುತ್ತದೆ! ಸುದ್ದಿಯ ಒಳಹೊಕ್ಕು ನೋಡಿದರೆ, ಅವರು ಎಡ ಪಕ್ಷಗಳ ಸಹಕಾರವಿಲ್ಲದೆ ಸರ್ಕಾರ ರಚನೆ ಅಸಾಧ್ಯವೆಂದು ಎಲ್ಲೋ ಅಂದಿರುವುದೇ ಈ ಸುದ್ದಿ ಸೃಷ್ಟಿಗೆ ಪ್ರೇರಣೆ ಎಂದು ಗೊತ್ತಾಗುತ್ತದೆ. ಇನ್ನು ಇಂಗ್ಲಿಷ್ ಬಾರದ ಅಥವಾ ಮಾತನಾಡದ ಕರುಣಾನಿಧಿಯವರನ್ನು ಸುತ್ತು ಬಳಸಿ, ಅದೂ ಇದೂ ಪ್ರಶ್ನೆ ಕೇಳುತ್ತಾ, ಕೊನೆಗೂ ಅವರ ಬಾಯಿಂದ ಪ್ರಭಾಕರನ್ ನನ್ನ ಸ್ನೇಹಿತ. ಎಲ್‌ಟಿಟಿಇ ಉಗ್ರ ಸಂಘಟನೆಯಲ್ಲ ಎಂಬ ಮಾತು ಹೊರಡಿಸಿ ಅದನ್ನು ಸ್ಫೋಟಕ ಸುದ್ದಿಯಂತೆ ಪ್ರಕಟಿಸಿ - ಇಕ್ಕಟ್ಟಿಗೆ ಸಿಕ್ಕಿದ ಕರುಣಾನಿಧಿ ರಾಜಕಾರಣಿಯ ಎಂದಿನ ಶೈಲಿಯಲಿ, ನನ್ನ ಮಾತುಗಳನ್ನು ಸಂದರ್ಭದಿಂದ ಕಿತ್ತು ಉಲ್ಲೇಖಿಸಿ ಅಪಾರ್ಥ ಕಲ್ಪಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡುವವರೆಗೂ - ರಾಷ್ಟ್ರೀಯ ಮತ್ತು ತಮಿಳ್ನಾಡು ರಾಜಕಾರಣದ ಮೇಲೆ ಅದು ಬೀರಬಹುದಾದ ಪರಿಣಾಮಗಳ ಬಗ್ಗೆ ತಜ್ಞ ಚರ್ಚೆ ನಡೆಸಲಾಗುತ್ತದೆ! ಹಾಗೇ, ಮಾತೇ ಹೊರಡದ ಸ್ಥಿತಿಯಲ್ಲಿರುವ ಅರ್ಜುನ ಸಿಂಗರನ್ನು - ಅವರನ್ನೇಕೆ ಇನ್ನೂ ಕೇಂದ್ರ ಸಚಿವರನ್ನಾಗಿ ಉಳಿಸಿಕೊಳ್ಳಲಾಗಿದೆಯೋ ತಿಳಿಯದು! - ಅವರ ಬಾಯಿಗೇ ಧ್ವನಿ ಗ್ರಾಹಕವನ್ನಿಟ್ಟು ಪದೇ ಪದೇ ಪ್ರಶ್ನೆ ಕೇಳಲಾಗುತ್ತದೆ. ಕೊನೆಗೆ ಅವರ ಮಗಳಿಗೆ ಈ ಬಾರಿ ಲೋಕಸಭಾ ಟಿಕೆಟ್ ನಿರಾಕರಿಸಿರುವುದನ್ನು ನೆನಪಿಸುವ ಮೂಲಕ ಅವರಿಂದ ನಿಷ್ಠರಿಗೆ ಪಕ್ಷದಲ್ಲಿ ಬೆಲೆಯಿಲ್ಲ ಎಂಬ ಅಸ್ಪಷ್ಟ ಹೇಳಿಕೆ ಪಡೆಯಲಾಗುತ್ತದೆ. ಆ ಮೂಲಕ ಅರ್ಜುನ್ ಸಿಂಗ್ ಅಸಮಧಾನ! ಎಂಬ ಸುದ್ದಿ ಸೃಷ್ಟಿ ಮಾಡಿ ಆ ಪಕ್ಷದ ವಕ್ತಾರರನ್ನು ಪೇಚಿಗೆ ಸಿಲುಕಿಸಿ, ಅಂದಿನ ಚುನಾವಣಾ ಚರ್ಚೆಯ ರಂಗೇರಿಸಲಾಗುತ್ತದೆ!

ಹೀಗೆ ಮಾಧ್ಯಮಗಳು ತಮ್ಮ ಸ್ಟೋರಿಗಳಿಗಾಗಿ ಸದಾ ಕರುಣಾನಿಧಿ, ಅರ್ಜುನ್ ಸಿಂಗ್‌ರಂತಹ ಮಿಕಗಳ ಅನ್ವೇಷಣೆಯಲ್ಲಿ ಇರುತ್ತವೆ. ಪ್ರಚಾರ ಪ್ರಿಯತೆಯೇ ಎಲ್ಲ ರಾಜಕಾರಣಿಗಳ ದೌರ್ಬಲ್ಯವೆಂದು ಅವಕ್ಕೆ ಗೊತ್ತು. ಇದನ್ನು ಬಳಸಿ ಎನ್‌ಡಿಟಿ ಎಲೆಕ್ಷನ್ ಎಕ್ಸ್‌ಪ್ರೆಸ್‌ನ ಹೆಸರಲ್ಲಿ ಪ್ರಣಯ್‌ರಾಯ್ ಇತ್ತೀಚೆಗೆ ನಮ್ಮ ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ ಮತ್ತು ಎಸ್.ಎಂ. ಕೃಷ್ಣರನ್ನು ಸಂದರ್ಶಿಸಿ ತಮ್ಮ ಚರ್ಚೆಗೆ ಬೇಕಾದ ಮಾತುಗಳನ್ನು ಅವರಿಂದ ಹೊರಡಿಸಿಕೊಂಡು ಹೋಗಿ ದಿನಗಟ್ಟಲೆ ಚರ್ಚೆ ಮಾಡಲು ಸಾಧ್ಯವಾದದ್ದು. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಇಂಗ್ಲಿಷ್ ಮಾತನಾಡುವುದನ್ನು ನೋಡುವುದೇ ಒಂದು ಹಿಂಸೆ! ಇಂಗ್ಲಿಷ್ ಸರಿಯಾಗಿ ಬಾರದಿದ್ದರೆ ಈ ನಾಯಕರು ಕನ್ನಡದಲ್ಲಿ ಮಾತನಾಡಬಾರದೇಕೆ, ಕರುಣಾನಿಧಿ ತಮಿಳಿನಲ್ಲೇ ಮಾತಾಡಿ ತಮ್ಮ ರಾಜಕಾರಣವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಹಾಗೆ? ನಮ್ಮ ರಾಜಕಾರಣಿಗಳಿಗೆ ರಾಷ್ಟ್ರೀಯ ಮಾಧ್ಯಮಗಳು ಎಂದರೆ ಸಾಕು, ಬಾಯಿ ಬಾಯಿ ಬಿಡುತ್ತಾ ತಮ್ಮ ಮತ್ತು ತಮ್ಮ ಪಕ್ಷದ ಮಾನ ಮರ್ಯಾದೆಗಳನ್ನೂ ಅದಕ್ಕೆ ಒತ್ತೆಯಿಡಲು ಸಿದ್ಧರಾಗುತ್ತಾರೆ.

ಕೃಷ್ಣ ಮಾಡಿದ್ದೂ ಹಾಗೆ. ಪ್ರಣಯ್‌ರಾಯ್‌ನ ನಿಮ್ಮಂತಹ ಯಶಸ್ವೀ ಮತು ಜನಪ್ರಿಯ ನಾಯಕರಿಗೆ ಬೆಂಗಳೂರಿನಲ್ಲಿ ಟಿಕೆಟ್ ನೀಡದ ಕಾಂಗ್ರೆಸ್ ರಾಜ್ಯದಲ್ಲಿ ಈಗ ಅನಾಥವಾಗಿದೆಯಲ್ಲವೆ ಎಂಬ ಚಾಕೊಲೇಟ್ ಪ್ರಶ್ನೆಯಿಂದ ಉಬ್ಬಿ ಹೋದ ಕೃಷ್ಣ, ಪಕ್ಷದ ಹೈಕಮಾಂಡ್ ತಮ್ಮನ್ನು ರಾಜ್ಯಪಾಲರನ್ನಾಗಿ ರಾಜ್ಯದ ಹೊರಕ್ಕೆ ಕಳಿಸಿ ತಮಗೆ ಮತ್ತು ಪಕ್ಷದ ರಾಜ್ಯ ಘಟಕಕ್ಕೆ ಮಾಡಿದ ಅನ್ಯಾಯವನ್ನು ಅಲವತ್ತುಕೊಳ್ಳುತ್ತಾ ಹೇಳಿಕೊಳ್ಳತೊಡಗಿದರು. ಆದರೆ ಯಾವ ಕಾರಣದಿಂದಲೂ, ತಮ್ಮ ನಾಯಕತ್ವದಲ್ಲೇ ಪಕ್ಷ ಹೀನಾಯ ಸೋಲು ಅನುಭವಿಸಿತ್ತು ಎಂಬುದನ್ನು ಅವರು ಹೇಳಿಕೊಳ್ಳಲೂ ಇಲ್ಲ, ಜಾಣ ಪ್ರಣಯ್ ರಾಯ್ ಅದನ್ನು ಜ್ಞಾಪಿಸಲೂ ಇಲ್ಲ! ಹಾಗೇ, ಇನ್ನು ಮುಂದೆ ತಮ್ಮ ಪಕ್ಷ ಎಂದೂ ಬಿಜೆಪಿ ಅಥವಾ ಕಾಂಗ್ರೆಸ್ಸನ್ನು ಬೆಂಬಲಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ದೇವೇಗೌಡರ ಮಾತನ್ನು ಪ್ರಣಯ್‌ರಾಯ್, ಚುನಾವಣೆಗಳ ಕೊನೆಯ ಮತ್ತು ನಿರ್ಣಾಯಕ ಹಂತದ ಹೊತ್ತಿಗೆ ಇದ್ದಕ್ಕಿದ್ದಂತೆ ಹಳಸಲು ಬೋಫೊರ್ಸ್ ಪ್ರಕರಣಕ್ಕೆ ಜೀವ ತುಂಬುವ ಸುದ್ದಿ ಸ್ಫೋಟ ಮಾಡಿರುವ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕ ಶೇಖರ್ ಗುಪ್ತಾ ಮುಂದೆ ಇಟ್ಟಾಗ, ಗುಪ್ತಾ ಅಮಾಯಕ ನಗು ಬೀರುತ್ತ್ತಾ ಹೇಳಿದ್ದು; ದೇವೇಗೌಡ ಕಾಂಗ್ರೆಸ್ ಇರಲಿ, ಅಧಿಕಾರದ ಬಾಗಿಲು ತೆರೆಯುತ್ತದೆಂದರೆ ಯಾವುದೇ ಮುಲಾಜಿಲ್ಲದೆ ಕಳ್ಳ ನೆಪವೊಡ್ಡಿ ಬಿಜೆಪಿ ಜೊತೆಗೆ ಹೋದರೂ ನೀವು ಆಶ್ಚರ್ಯ ಪಡುವ ಅಗತ್ಯವಿಲ್ಲ! ಇದು ತಾವು ಬಹುವಾಗಿ ಆದರಿಸುವ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ನಮ್ಮ ನಾಯಕರಿಗಿರುವ ಬೆಲೆ ಮತ್ತು ವಿಶ್ವಾಸಾರ್ಹತೆ ಹಾಗೂ ನಮ್ಮ ಮಾಧ್ಯಮಗಳು ನಡೆಸುತ್ತಾ ಬಂದಿರುವ ರಾಜಕೀಯ ಶಿಕ್ಷಣದ ವೈಖರಿ!

ಇದೆಲ್ಲದರ ಹಿಂದೆ ಇರುವುದು ಯಾವುದೇ ರಾಷ್ಟ್ರೀಯ ಹಿತಾಸಕ್ತಿಯೂ ಅಲ್ಲ, ಮಾಧ್ಯಮ ಜವಾಬ್ದಾರಿಯೂ ಅಲ್ಲ. ಇದು ದಿನವಿಡೀ ಸುದ್ದಿ ವ್ಯಾಪಾರ ಮಾಡಲು ಬೇಕಾದ ಸರಕು ಸಂಗ್ರಹ ಹಾಗೂ ನಿರ್ಮಾಣ ಕೌಶಲ್ಯವಷ್ಟೆ. ಇದರ ಪರಿಣಾಮಗಳಾದರೂ ಏನು? ಆರೇಳು ತಿಂಗಳುಗಳ ಹಿಂದೆ ಬಾಗ್ದಾದ್‌ನಲ್ಲಿ ಅಂದಿನ ಅಮೆರಿಕಾದ ಅಧ್ಯಕ್ಷ ಬುಷ್ ಮೇಲೆ ಇರಾಕ್‌ನ ಪತ್ರಕರ್ತನೊಬ್ಬ ಷೂ ಎಸೆದ ಪ್ರಕರಣವನ್ನು ಮಾಧ್ಯಮಗಳು ವೈಭವೀಕರಿಸಿದ್ದರ ಪರಿಣಾಮವನ್ನು ನಾವಿಂದು ನಮ್ಮ ದೇಶದಲ್ಲಿ ನೋಡುತ್ತಿದ್ದೇವೆ. ಇದರಿಂದ ಸ್ಫೂರ್ತಿ ಪಡೆದಂತೆ ನಮ್ಮ ಹಣಕಾಸು ಮಂತ್ರಿ ಚಿದಂಬರಂ ಅವರ ಮೇಲೆ ಸಿಖ್ ಪತ್ರಕರ್ತನೊಬ್ಬ ಷೂ ಎಸೆದದ್ದನ್ನು ಪದೇ ಪದೇ - ಈಗಲೂ ಕೂಡ - ತೋರಿಸುವ ಮೂಲಕ ನಮ್ಮ ಟಿವಿ ವಾಹಿನಿಗಳು ಅದನ್ನು ನಿರ್ವಹಿಸಿದ ಮತ್ತು ನಿರ್ವಹಿಸುತ್ತಿರುವ ರೀತಿ ನಿಜವಾಗಿಯೂ ಆಘಾತಕಾರಿಯಾಗಿದೆ. (ಕೆಲವೆಡೆ ಕೆಲವು ಕಿಡಿಗೇಡಿಗಳು ಷೂ ಎಸೆಯುವುದನ್ನು ಅಭ್ಯಾಸ ಮಾಡುತ್ತಿರುವುದನ್ನೂ ಸುದ್ದಿ ಸ್ವಾರಸ್ಯತೋರಿಸಲಾಗುತ್ತಿದೆ!) ಈ ಬೇಜವಾಬ್ದಾರಿಯಲ್ಲಿ ನಿರ್ಮಾಣವಾದ ಆ ಸುದ್ದಿಯ ರೋಚಕತೆಯ ಫಲವನ್ನೀಗ ನಮ್ಮ ದೇಶದಲ್ಲಿ ಎಲ್ಲ ಕಡೆ ನೋಡುತ್ತಿದ್ದೇವೆ. ಸಾರ್ವಜನಿಕ ಸಭೆಗಳಲ್ಲಿ ಎಲ್ಲೆಲ್ಲೂ ಬೂಟುಗಳು ಮತ್ತು ಇತರೆ ಪದಾರ್ಥಗಳು ಹಾರಾಡತೊಡಗಿವೆ. ಅವುಗಳಲ್ಲೊಂದು ಮಾಧ್ಯಮದವರ ಕಡೆಗೂ ಹಾರಿ ಬರುವ ದಿನಗಳೇನೂ ದೂರವಿಲ್ಲವೇನೋ! ಏಕೆಂದರೆ, ಈ ಮಾಧ್ಯಮಗಳು ವ್ಯಾಪಾರದ ಅಮಲಿನಲ್ಲಿ ತಮ್ಮ ವಿವೇಕವನ್ನೇ ಕಳೆದುಕೊಂಡಂತಿವೆ.

ಆದರೂ ಟಿವಿ ವಾಹಿನಿಗಳ ಸಂದರ್ಶನ-ಚರ್ಚೆ-ಸಂವಾದಗಳಲ್ಲಿ ಭಾಗವಹಿಸುವ ರಾಜಕಾರಣಿಗಳ ಉತ್ಸಾಹ ಇನ್ನೂ ತಗ್ಗಿದಂತಿಲ್ಲ. ಪ್ರತಿಯೊಂದು ಪಕ್ಷಕ್ಕೂ, ಮಾಧ್ಯಮಗಳಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ದೃಷ್ಟಿಕೋನವೆಲ್ಲಿ ಪ್ರತಿಬಿಂಬಿತವಾಗುವುದಿಲ್ಲವೋ ಎಂಬ ಆತಂಕವಿರುವುದೇ ಇದಕ್ಕೆ ಕಾರಣವಿರಬಹುದು. ಆದರೂ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳನ್ನು ಕುರಿತ ಮಾಧ್ಯಮ ನಿರ್ವಾಹಕರ ಲಘು ಟೀಕೆ ಮತ್ತು ಕಟಕಿ ವ್ಯಂಗ್ಯಗಳಿಗೆ ಅದೇ ಭಾಷೆಯಲ್ಲಿ ಮತ್ತು ಅಷ್ಟೇ ತೀವ್ರತೆಯಲ್ಲಿ ಮಾರುತ್ತರ ನೀಡುವ ಆತ್ಮ ವಿಶ್ವಾಸ ರಾಜಕೀಯ ವಕ್ತಾರರಿಗೆ ಬಂದಿದೆ. ನಿಮ್ಮ ಮಾಧ್ಯಮ ಕ್ಷೇತ್ರದಲ್ಲಿಯೂ ರಾಜಕಾರಣ, ಭ್ರಷ್ಟಾಚಾರ ಮತ್ತು ಅನೈತಿಕತೆಗಳಿಗೇನೂ ಕೊರತೆಯಿಲ್ಲ ಎಂತಲೋ, ನಿಮ್ಮ ಪ್ರಶ್ನೆಗೆ ನೀವು ನಿರೀಕ್ಷಿಸುವ ಭಾಷೆಯಲ್ಲಾಗಲೀ, ರೀತಿಯಲ್ಲಾಗಲೀ ಉತ್ತರ ಕೊಡಲು ನಾನಿಲ್ಲ ಬಂದಿಲ್ಲ ಎಂತಲೋ ಹೇಳುವ ದಿಟ್ಟತನ ಅವರಿಗೆ ಬಂದಿದೆ. ರಾಜಕಾರಣಿಗಳಿಗೆ ಹೀಗೆ ಬೆನ್ನೆಲುಬು ಮೂಡಿದಷ್ಟೂ ಮತ್ತು ಅದು ಆದಷ್ಟೂ ನೆಟ್ಟಗಾದಷ್ಟೂ ಈ ಮಾಧ್ಯಮಗಳ ನೈತಿಕ ಯಜಮಾನಿಕೆಯ ಧಾರ್ಷ್ಟ್ಯ ಮುರಿದು ಬೀಳುತ್ತದೆ. ಆಗಷ್ಟೇ ಸಮುದಾಯ ಮತ್ತು ರಾಜಕಾರಣದ ಮಧ್ಯೆ ಮಧ್ಯವರ್ತಿಯಲ್ಲದ ನಿಜ ಮಾಧ್ಯಮವೊಂದು ಸೃಷ್ಟಿಯಾಗಲು ಸಾಧ್ಯವಾಗುತ್ತದೆ. ಅದರಿಂದ ಆತ್ಯಂತಿಕವಾಗಿ ಜನ ಸಮುದಾಯಕ್ಕೂ, ರಾಜಕಾರಣಕ್ಕೂ, ಪ್ರಜಾಪ್ರಭುತ್ವಕ್ಕೂ ಒಳ್ಳೆಯದಾಗುತ್ತದೆ. ಇದು ಆದಷ್ಟೂ ಬೇಗ ನಮ್ಮ ಮಾಧ್ಯಮ ನಿರ್ವಾಹಕರಿಗೆ ಗೊತ್ತಾದರೆ ಒಳ್ಳೆಯದು.