ರಾಜ್ಯೋತ್ಸವ ರಸಪ್ರಶ್ನೆ -೨೦೦೫
(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ)
೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?
(ಕ) ತಮಿಳು
(ಚ) ಇಂಗ್ಲಿಷ್
(ಟ) ಕಂಗ್ಲಿಷ್
(ತ) ಕನ್ನಡ
(ಪ) ಎಲ್ಲವೂ
೨. ಕರ್ನಾಟಕವನ್ನು ಆಳುತ್ತಿರುವವರು ಯಾರು?
(ಕ) ದೇವೇಗೌಡ
(ಚ) ಮುಖ್ಯಮಂತ್ರಿ ಧರಮ್ ಸಿಂಗ್
(ಟ) ಐ.ಟಿ. ಲಾಬಿ
(ತ) ಎಲ್ಲರೂ
(ಪ) ಯಾರೂ ಅಲ್ಲ
೩. ಬೆಂಗಳೂರನ್ನು ಈಗ ಆಳುತ್ತಿರುವವರು ಯಾರು?
(ಕ) ರಿಕ್ಷಾ ಚಾಲಕರು
(ಚ) ತಮಿಳರು
(ಟ) ಐ.ಟಿ. ದೊರೆಗಳು
(ತ) ಎಲ್ಲರೂ
(ಪ) ಯಾರೂ ಅಲ್ಲ
೪. ಕನ್ನಡ ಚಲನಚಿತ್ರ ನಿರ್ದೇಶಕನಾಗಲು ಮುಖ್ಯ ಅರ್ಹತೆ ಏನು?
(ಕ) ಗಡ್ಡ ಬಿಟ್ಟಿರಬೇಕು
(ಚ) ತಮಿಳು, ತೆಲುಗು, ಹಿಂದಿ ಭಾಷೆ ಗೊತ್ತಿದ್ದು ಆ ಭಾಷೆಯ ಸಿನಿಮಾಗಳನ್ನು ದಿನಾ ನೋಡುತ್ತಿರಬೇಕು
(ಟ) ತಮಿಳು, ತೆಲುಗು, ಮಲಯಾಳಂ ಸಿನಿಮಾ ನಟಿಗಳ ಪರಿಚಯವಿರಬೇಕು
(ತ) ಎಲ್ಲವೂ
(ಪ) ಯಾವುದೂ ಅಲ್ಲ
೫. ಕರ್ನಾಟಕ ರಾಜ್ಯೋತ್ಸವ ಆಚರಿಸಲು ಮುಖ್ಯ ಕಾರಣ
(ಕ) ಸಾರ್ವಜನಿಕ ಗಣೇಶ ಚೌತಿಗೆ ಸಂಗ್ರಹಿಸಿ ಉಳಿದ ಹಣ ಮುಗಿಸಲು
(ಚ) ರಾಜ್ಯೋತ್ಸವ ಆಚರಣೆಯ ನೆವದಲ್ಲಿ ಮತ್ತಷ್ಟು ಹಣ ಸಂಗ್ರಹಿಸಲು
(ಟ) ಉಟ್ಟು ಓರಾಟಗಾರರಿಗೆ ಭಾಷಣ ಬಿಗಿಯಲು ವೇದಿಕೆ ಒದಗಿಸಲು
(ತ) ಎಲ್ಲವೂ
(ಪ) ಯಾವುದೂ ಅಲ್ಲ
೬. ಬೆಂಗಳೂರು ಕನ್ನಡಿಗರ ಮುಖ್ಯ ಲಕ್ಷಣ ಏನು?
(ಕ) ಮಾತು ಮಾತಿಗೆ ``ಅಯ್ಯೋ ಅದೆಲ್ಲಾ ಆಗೋಲ್ಲಾರಿ" ಎನ್ನುತ್ತಿರುತ್ತಾರೆ
(ಚ) ಕನ್ನಡ ಶಬ್ದಗಳ ಜೊತೆ ಇಂಗ್ಲಿಷ್ ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ
(ಟ) ಇಂಗ್ಲಿಷ್ ಶಬ್ದಗಳ ಜೊತೆ ಕನ್ನಡ ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ
(ತ) ಎಲ್ಲವೂ
(ಪ) ಯಾವುದೂ ಅಲ್ಲ
೭. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕರ್ತವ್ಯಗಳು ಯಾವುವು?
(ಕ) ಕನ್ನಡ ಪರ ಸುತ್ತೋಲೆಗಳನ್ನು ಹೊರಡಿಸುವುದು
(ಚ) ಬೆಂಗಳೂರಿನಲ್ಲಿರುವ ಅಂಗಡಿಗಳ ಇಂಗ್ಲಿಷ್ ಫಲಕಗಳಿಗೆ ಟಾರು, ಸೆಗಣಿ ಬಳಿಯುವುದು
(ಟ) ಕಂಪೆನಿಗಳು ಉಪಯೋಗಿಸುತ್ತಿರುವ, ಇಂಗ್ಲಿಷ್ ಭಾಷೆಯಲ್ಲಿರುವ, ರಬ್ಬರ್ ಸ್ಟಾಂಪ್, ಲೆಟರ್ ಹೆಡ್ಗಳನ್ನು ಸಂಗ್ರಹಿಸುವುದು
(ತ) ಎಲ್ಲವೂ
(ಪ) ಯಾವುದೂ ಅಲ್ಲ
೮. ಕನ್ನಡದ ಖಾಸಗಿ ಟಿವಿ ಚ್ಯಾನಲುಗಳಲ್ಲಿ ಸುದ್ದಿ ಓದಲು, ಕಾರ್ಯಕ್ರಮ ನಡೆಸಿ ಕೊಡಲು, ಸಂದರ್ಶನ ಮಾಡಿಕೊಡಲು, ಇತ್ಯಾದಿಗಳಿಗೆ ಇರಬೇಕಾದ ಅರ್ಹತೆಗಳೇನು?
(ಕ) ಚ್ಯಾನೆಲ್ಗಳ ಒಡೆಯರಾದ ತಮಿಳರು, ಮಲೆಯಾಳಿಗರು, ತೆಲುಗರು ಇತ್ಯಾದಿ ಕನ್ನಡೇತರರ ಪರಿಚಯ ಇರತಕ್ಕದ್ದು
(ಚ) ``ಆಸನ"ಕ್ಕೆ ``ಹಾಸನ", ``ಆದರ"ಕ್ಕೆ ``ಹಾದರ", ``ಹೋಗು"ಗೆ ``ಓಗು" ಇತ್ಯಾದಿಯಾಗಿ ಖನ್ನಡ ಮಾತನಾಡಲು ಕಲಿತಿರಬೇಕು
(ಟ) ಕನ್ನಡ ಸಿನಿಮಾ ರಂಗದ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು -ಇವರ ಪರಿಚಯ ಇರಬೇಕು
(ತ) ಎಲ್ಲವೂ
(ಪ) ಯಾವುದೂ ಅಲ್ಲ
೯. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಕರ್ತವ್ಯಗಳೇನು?
(ಕ) ಮಂತ್ರಿಗಳ, ಅಧಿಕಾರಿಗಳ ಮಕ್ಕಳು, ಸಂಬಂಧಿಕರನ್ನು ಕಲಾವಿದರೆಂದು ವಿದೇಶಕ್ಕೆ ಕಳುಹಿಸಿಕೊಡುವುದು
(ಚ) ವಿಧಾನ ಸೌಧದಲ್ಲಿ ಡೊಳ್ಳು ಕುಣಿತ ಏರ್ಪಡಿಸುವುದು
(ಟ) ಲೆಟರ್ಹೆಡ್ ಸಂಘ ಸಂಸ್ಥೆಗಳಿಗೆ ಸರಕಾರದಿಂದ ಅನುದಾನ ನೀಡುವುದು
(ತ) ಮಂತ್ರಿವರೇಣ್ಯರ ಪ್ರಭಾವದಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಹಂಚುವುದು
(ಪ) ಎಲ್ಲವೂ
೧೦. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳೇನು?
(ಕ) ವರ್ಷಕ್ಕೊಮ್ಮೆ ಸಾಹಿತ್ಯ some ಮೇಳ ನಡೆಸುವುದು
(ಚ) ಸಮ್ಮೇಳನದ ಅಧ್ಯಕ್ಷರನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದು
(ಟ) ಸಾಹಿತಿಗಳಲ್ಲದವರನ್ನು ಪರಿಷತ್ತಿನ ಸದಸ್ಯರನ್ನಾಗಿ ನೋಂದಾಯಿಸುವುದು
(ತ) ಎಲ್ಲವೂ
(ಪ) ಯಾವುದೂ ಅಲ್ಲ
-ಪವನಜ