ಗಾಂಧಿ ಬಜಾರ್

ಗಾಂಧಿ ಬಜಾರ್

೨೦೦೩, ಇಂಜಿನಿಯರಿಂಗಿನ ಕೊನೇಯ ವರ್ಷ ಪ್ರಾಜೆಕ್ಟಿಗಾಗಿ ಬೆಂಗಳೂರಿಗೆ ಬಂದಾಗ ಮೊದಲು ಇಳಿದು ಕೊಂಡಿದ್ದು ಆಶ್ರಮದ ಸಮೀಪದ ಒಂದು ಮನೆಯಲ್ಲಿ. ೨ ಬೆಡ್ ರೂಂ ಮನೆ ೩೫೦೦ ರೂ ಬಾಡಿಗೆ, ೬ ಜನ ಮನೆಯ ಪಾಲುದಾರರು. ಅಂದಿನಿಂದ ನಾ ಮೆಚ್ಚಿದ ನನ್ನ ನೆಚ್ಚಿನ ತಿರುಗಾಟದ ತಾಣ ಗಾಂಧಿ ಬಜಾರ್. ಛಾಯಾಗ್ರಹಣದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆಂದು ಎಂದೂ ಕನಸು ಕಂಡಿರಲಿಲ್ಲ. ಇಂಜಿನಿಯರಿಂಗ್ ಮುಗಿಸಿ ಕೆಲಸದ ನಿಮಿತ್ತ ಮೈಸೂರಿಗೆ ಹೋದಾಗ, ನಮ್ಮ ಕಂಪೆನಿಯ ಪ್ರಾಜೆಕ್ಟಿನ ಕೆಲವು ಚಿತ್ರಗಳಿಗೆ ಸಹೋದ್ಯೋಗಿಯ ಜೊತೆ ಹೋದದ್ದಲ್ಲದೇ ಬೇರಾವ ಅನುಭವವೂ ಇರಲಿಲ್ಲ. ನಂತರ ಬೆಂಗಳೂರಿಗೆ ಬಂದು ಕೆಲಸ ಬದಲಾಯಿಸಿ, ಕೈಯಲ್ಲಿ ಸ್ವಲ್ಪ ಕಾಸು ಬಂದ ಮೇಲೆ ಮೊದಲು ಕೊಂಡು ಕೊಂಡಿದ್ದೇ ನನ್ನ ಸೋನಿ ಡಿ.ಎಸ್.ಸಿ ಎಚ್೨ ಕ್ಯಾಮರಾ. ನನ್ನ ಅದರ ಸಂಬಂಧ ಸುಮಾರು ೩.೫ ವರ್ಷಗಳಷ್ಟು. ೨೦೦೬ರ ಪ್ರವಾಸದಲ್ಲಿ ಗೆಳೆಯನಾದ ಪವನ್ ಜೊತೆಗೂಡಿ ಮಾಡಿದ ಕೇರಳದ ಪ್ರವಾಸದಲ್ಲಿ, ಆತನ ಚಿತ್ರ ನೋಡಿ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದೆ. ಪ್ರತ್ಯಕ್ಷವಾಗಿ ಛಾಯಾಗ್ರಹಣದ ಬಗ್ಗೆ ಯಾವ ಸಲಹೆ ಕೊಟ್ಟಿಲ್ಲವಾದರೂ ನನ್ನ ಅಭಿರುಚಿ ಕೆರಳಿಸುವಲ್ಲಿ ಆತನ ಚಿತ್ರಗಳು ತುಂಬಾ ಸಹಾಯಕವಾದವು. ಮುಂದೆ ಹನಿವೆಲ್ಲಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ "ಅರವಿಂದ್" ತಮ್ಮ ಅನುಭವ, ಪುಸ್ತಕಗಳನ್ನು ಹಂಚಿಕೊಂಡು ಇನ್ನಷ್ಟು ನೆರವಾದರು. ಹೀಗೆ ಒಂದು ದಿನ ನನಗೆ ಬೇಕಾದ ಯಾವುದೋ ಛಾಯಾಗ್ರಹಣದ ವಿಷಯದ ಬಗ್ಗೆ ಹುಡುಕಾಡುತ್ತಿತ್ತಾಗ ಕಣ್ಣಿಗೆ ಬಿದ್ದಿದ್ದು "ಡಿಜಟಲ್ ಫೋಟೋಗ್ರಫಿ ಸ್ಕೂಲ್" ಎಂಬ ತಾಣ. ಇಲ್ಲಿ ಬರೀ ಪಾಟಗಳಷ್ಟೇ ಅಲ್ಲದೇ ನೀವು ತೆಗೆದ ಚಿತ್ರವನ್ನು ಹಾಕಿದರೆ, ಆ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಪ್ರಪಂಚದ ನಾನಾ ಭಾಗದ ವೃತ್ತಿನಿರತ/ಹವ್ಯಾಸೀ ಛಾಯಾಚಿತ್ರಕಾರರಿಂದ ಬರುತ್ತದೆ. ಇಲ್ಲಿಯೇ ಭೇಟಿಯಾದ ವೃತ್ತಿಯಿಂದ ಚಿತ್ರಕಾರರಾಗಿರುವ "ಜಿಮ್" ಆರಂಭದಿಂದ ನನಗೆ ಸಲಹೆ ಸೂಚನೆ ನೀಡುತ್ತಾ ಇಲ್ಲಿಯವರೆಗೆ ತಂದು ಬಿಟ್ಟಿದ್ದಾರೆ. ಅದೂ ಅಲ್ಲದೇ ಯಾಹೂವಿನ ಫ್ಲಿಕರ್ ಕೂಡ ನನ್ನ ಅಭಿರುಚಿಯನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇದೆಲ್ಲದರ ಪ್ರಭಾವದಿಂದ ಎಸ್.ಎಲ್.ಎರ್ ಕ್ಯಾಮರಾ ಕೊಳ್ಳಬೇಕೆಂಬ ನನ್ನ ೨ ವರ್ಷದ ಬಯಕೆ ಈ ವಾರ ಕೊನೆಗೊಂಡಿದೆ. ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿದ ನಿಕಾನ್ ಕಂಪೆನಿಯ ಡಿ೯೦, ನನ್ನ ವಶವಾಗಿದೆ. ಕಳೆದು ೧ ವರ್ಷದಿಂದ ಕೂಡಿಟ್ಟ ಹಣ ಮುಂದಿನ ನನ್ನ ಸ್ವಸಂತೋಷಕ್ಕಾಗಿ. ಹೊಸ ಕ್ಯಾಮರಾದೊಂದಿಗೆ ನಿನ್ನೆ ಗಾಂಧಿ ಬಜಾರ್ ಸುತ್ತಲು ಹೊರಟಾಗ ಕಣ್ಣಿಗೆ ಬಿದ್ದ ಚಿತ್ರಗಳೇ ಇವು. ಹೊಸ ಕ್ಯಾಮರಾದ ಬಗ್ಗೆ ತಿಳಿದದ್ದು ಇನ್ನೂ ಅಲ್ಪ, ಆದರೂ ಮೊದಲ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ. ಹೂವು ಎಷ್ಟು ಮೊಳ ಕೊಡಲಮ್ಮ? ಹಣ್ಣಿನ ವ್ಯಾಪಾರಿ ಹೂಮಾಲೆಯೊಂದಿಗೆ ತರ ತರ ಹಣ್ಣುಗಳು ಹೂಮಾಲೆಗೆ ಜರಿ ಸುತ್ತುತ್ತಾ ಬಗೆ ಬಗೆ ಹೂಗೊಂಚಲು ತಕ್ಕಡಿಯ ಮೇಲೇನಿಡಲಿ ಇನ್ನಷ್ಟು ತರಕಾರಿ ಇಳಿ ವಯಸ್ಸಿನಲ್ಲಿ ನನ್ನ ಚಿತ್ರವೇಕೆ? ತೆಂಗಿನ ಕಾಯಿಗೆ ಗಿರಾಕಿ ಎಲ್ಲಿ ಕತ್ತಲಾದರೇನಂತೆ

Rating
No votes yet

Comments