ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು

Submitted by olnswamy on Thu, 07/28/2005 - 19:39
ಬರಹ
ವಚನಗಳು ಕೇವಲ ಧರ್ಮದ ಕಂತೆಗಳಲ್ಲ. ಚೆಲುವಾದ ಕವಿತೆಗಳೂ ಅಲ್ಲ. ನಮ್ಮ ಡೈಲಿ ಲೈಫಿಗೆ ಅಗತ್ಯವಾದ ಚಿಂತನೆಯ ಆಹಾರಗಳು. ವಚನಗಳನ್ನು ನಾನು ಅರ್ಥಮಾಡಿಕೊಂಡ ರೀತಿಯಲ್ಲಿ ನಿಮ್ಮೊಡನೆ ದಿನವೂ ಒಂದಿಷ್ಟು ಹಂಚಿಕೊಳ್ಳುವುದು ಈ ಮಾಲೆಯ ಉದ್ದೇಶ. ಇಂದು ಅಲ್ಲಮನ ವಚನ ಕುರಿತು ಬರೆದಿದ್ದೇನೆ. ಅಲ್ಲಮ ಹನ್ನೆರಡನೆಯ ಶತಮಾನದಲ್ಲಿ ಬದುಕಿದ್ದ ಅನುಭಾವಿ, ಚಿಂತಕ. ತನು ಒಂದು ದ್ವೀಪ ಮನ ಒಂದು ದ್ವೀಪ ಆಪ್ಯಾಯನ ಒಂದು ದ್ವೀಪ ವಚನ ಒಂದು ದ್ವೀಪ ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ ಗುಹೇಶ್ವರ ನಿಮ್ಮ ಸ್ಥಾನಂಗಳುದು ನಮ್ಮ ದೇಹ, ಮನಸ್ಸು, ರುಚಿ-ತೃಪ್ತಿ, ನಾವು ಬಳಸುವ ಮಾತು ಇವೆಲ್ಲವೂ ಪರಸ್ಪರ ಸಂಬಂಧ ಕಡಿದುಕೊಂಡ ದ್ವೀಪಗಳಾಗಿವೆ. ಆದುದರಿಂದಲೇ ತಳಮಳ. ಅಖಂಡವಾಗಿ, ಒಂದೇ ಆಗಿರಬೇಕಾದ ಇವೆಲ್ಲ ತಾಳ ತಪ್ಪಿರುವುದರಿಂದಲೇ ನಮ್ಮ ಬದುಕು ಮೇಳವಾಗದೆ ನಿರ್ಥಕ ಸದ್ದುಗದ್ದಲಗಳ ಸಂತೆ. ಈ ನಾಲ್ಕೂ ದ್ವೀಪಗಳು ದ್ವೀಪಗಳಾಗಿರುವುದೇ ಅವನ್ನೆಲ್ಲ ಸಂಪರ್ಕಿಸುವ ನದಿಯ ಕಾರಣದಿಂದ ಎಂಬುದು ವಿಪರ್ಯಾಸ. ನಮ್ಮೊಳಗಿನ ಗುಹೇಶ್ವರ, ನಮ್ಮ ಅಖಂಡತೆ ನಾಲ್ಕು ದ್ವೀಪಗಳಲ್ಲಿ ಛಿದ್ರವಾಗಿದ್ದಾನೆ. ದೇಹ, ಮನಸ್ಸು, ಅಭಿರುಚಿ, ಮತ್ತು ಮಾತು ಒಂದಾಗಿ ಬೆಸುಗೆಯಾದಾಗ ಈಗ ನಾವು ಕಳೆದುಕೊಂಡಿರುವ ಐಕ್ಯತೆ, ಅಖಂಡತೆಗಳು ಮತ್ತೆ ದೊರೆಯುತ್ತವೆ. ಹೀಗೆ ಛಿದ್ರವಾಗಿರುವ ನಾಲ್ಕೂ ಅಂಶಗಳೂ ಮೂಲತಃ ಅಖಂಡ ದೈವತ್ವವೇ ಎಂಬುದನ್ನು ಅನುಭವಕ್ಕೆ, ಅರಿವಿಗೆ ತಂದುಕೊಳ್ಳುವುದು ಮುಖ್ಯ.