ನನಗಂತೂ ಅರ್ಥವಾಗೋಲ್ಲಾ !

Submitted by bhalle on Fri, 06/19/2009 - 03:22
ಬರಹ

ಚಿಕ್ಕದಾಗಿ ಚೊಕ್ಕವಾಗಿ ಹೇಳಿದರೆ, ಸಿದ್ಧಾರ್ಥನು ರಥವೇರಿ ಹೊರಟಾಗ ರೋಗಿ, ವೃದ್ದ, ಶವವನ್ನು ಕಂಡು ಜೀವನದಲ್ಲಿ ವಿರಕ್ತ ಭಾವ ಹೊಂದಿ ಸತ್ಯಾನ್ವೇಷಣೆಗಾಗಿ ಸರ್ವವನ್ನೂ ತ್ಯಜಿಸಿ ಸತ್ಯಾಸತ್ಯತೆಯ ಜ್ಞ್ನಾನೋದಯ ಹೊಂದಿ ಲೋಕವಿಖ್ಯಾತನಾದ.

ನಾನು, ಕೆಲವಾರು ವರ್ಷಗಳ ಕಾಲ, ನನ್ನ ಕಾರನ್ನೇರಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ಮುಂದಾಗಿ ಹೋಗುತ್ತ ಹತ್ತು ಹಲವಾರು ರೀತಿಯ ರೋಗಿಗಳನ್ನು, ಬೀದಿ ಬದಿಯ ಭಿಕ್ಷುಕರನ್ನು, ಲೆಕ್ಕವಿಲ್ಲದಷ್ಟು ಮಂದಿ ವೃದ್ದರನ್ನು, ಹರಿಶ್ಚಂದ್ರ ಘಾಟ್ ಮುಂದಾಗಿ ಸಾಗಬೇಕಾದರೆ ದಿನಕ್ಕೆರಡು ಶವಗಳನ್ನು ಕಂಡೂ ..... ನಾನೇಕೆ ಸಿದ್ದಾರ್ಥನಾಗಲಿಲ್ಲ ?
=========

ಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಚೆಯನರಿವ ಸತಿ ಇರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ್ನ

ನಾನು, ಓರ್ವ ಅಜ್ಞ್ನಾನಿಯಾಗಿ ಕೇಳೋ ಪ್ರಶ್ನೆ ಇಷ್ಟೇ .... ಒಳ್ಳೆಯ ಮನೆ ಇದ್ದು, ಖರ್ಚಿಗೆ ದುಡ್ಡಿದ್ದು, ಒಳ್ಳೇ ಹೆಂಡತಿಯೂ ಇದ್ದಲ್ಲಿ ಸುಖವಾಗಿರೋದು ಬಿಟ್ಟು ಇನ್ನೊಬ್ಬರ ಮನೇಗ್ಯಾಕ್ರೀ ಬೆಂಕಿ ಇಡೋದೂ ?
=========

ಯಾವುದೋ ಪಾರ್ಟಿ ನೆಡೆಯುತ್ತಿರುತ್ತದೆ ... ಗಂಡ ತನ್ನ ಸ್ನೇಹಿತರ ಜೊತೆ ರಾಜಕೀಯ, ರಿಸೆಶನ್, ಪ್ರಾಜೆಕ್ಟ್, ಬಾಸ್, ಟೈಪಿಸ್ಟ್ ಹೀಗೇ ಹತ್ತು ಹಲವು ವಿಚಾರಗಳನ್ನೂ ಮಧ್ಯೆ ಮಧ್ಯೆ ಹಸೀ ಹಸೀ ಜೋಕುಗಳನ್ನೂ ಬಿಡುತ್ತ ಸಂತೋಷವಾಗಿದ್ದಾನೆ. ಇನ್ನೊಂದೆಡೆ ಹೆಂಡತಿಯು ಸೀರೆ, ಒಡವೆ, ಮಕ್ಕಳು, ಆಟ-ಪಾಠ, ಸೇಲ್, ಅಡಿಗೆ ಹೀಗೇ ತನ್ನ ಲೋಕದಲ್ಲಿ ತಾನು ಮುಳುಗಿರುತ್ತಾಳೆ ...

ಒಬ್ಬೊಬ್ಬರೇ ಹೊರಡುತ್ತಿರುವಾಗ, ಇವರಿಗೂ ಹೊರಡುವ ಸಮಯವಾಯ್ತು ಎಂಬ ಅರಿವಾಗುತ್ತೆ ... ಗಂಡನು ಹೆಂಡತಿ ಇರುವಲ್ಲಿ ಅಥವಾ ಹೆಂಡತಿಯು ಗಂಡ ಇರುವಲ್ಲಿ ಬರುವ ಸನ್ನಿವೇಶ ... ಭೀಮ-ದುರ್ಯೋಧನರ ಅಥವಾ ಕರ್ಣ-ಅರ್ಜುನರ ಮುಖಾ ಮುಖಿ ನೆನಪಿಗೆ ತರಿಸುವ ಸನ್ನಿವೇಶ ... ಗಂಭೀರವದನರಾಗಿ (ಅಥವಾ ಸಿಡುಗುಟ್ಟುತ್ತ) ಕೇಳೋ ಪ್ರಶ್ನೆ ’ಹೊರಡೋಣ್ವಾ’ ... ಯಾಕೆ ಹೀಗೇ ?
==========

ಈ ವಿಚಾರ ಬಿಡಿ, ನೀವು ಹಲವು ರೀತಿಯಲ್ಲಿ ಕೇಳಿಯೇ ಇರುತ್ತೀರ.

ಇಬ್ಬರು ಹೆಂಗಸರ ನಡುವಿನ ಸಂಭಾಷಣೆ ನೆಡೆದಿತ್ತು. ಒಬ್ಬಾಕೆ ಮುಖದಲ್ಲಿ ಯದ್ವಾ-ತದ್ವಾ ಸಂತೋಷ ತುಂಬಿಕೊಂಡು ನುಡಿಯುತ್ತಿದ್ದಳು "ನನ್ನ ಮಗಳು ಪುಣ್ಯ ಮಾಡಿದ್ದಾಳೆ ಅಂಥಾ ಗಂಡನನ್ನ ಪಡೆಯೋಕ್ಕೆ. ಅವಳು ಏಳೋ ಹೊತ್ತಿಗೆ ಸರಿಯಾಗಿ ಬೆಡ್ ಕಾಫಿ ರೆಡಿ ಇರುತ್ತೆ. ಹೆಂಡತೀನ್ನ ಅಡಿಗೆ ಮಾಡೋಕ್ಕೆ ಬಿಡೋಲ್ಲ. ತಾನೇ ಮಾಡಿಟ್ಟು ಹೋಗ್ತಾನೆ. ವಾರಕ್ಕೊಂದು ಸಿನಿಮಾ. ಮದುವೆ ಆದ ಮೇಲೆ ಆರಾಮಾಗಿ ಇರೋಣ ಅಂತ ಬೇರೆ ಮನೆ ಮಾಡಿದ್ದಾನೆ ನನ್ನ ಅಳಿಯ". ಮತ್ತೊಬ್ಬಾಕೆ ಕೇಳಿದರು ’ನಿಮ್ಮ ಮಗನ ಸಂಸಾರ ಹೇಗಿದೆ’ ?

ಸಿಟ್ಟು, ಆಕ್ರೋಶ, ಹತಾಶೆ ಇತ್ಯಾದಿ ವದನರಾಗಿ ನುಡಿದರಾಕೆ "ನನ್ನ ಕರ್ಮ. ನನ್ನ ಮಗ ಅದೇನು ಪಾಪ ಮಾಡಿದ್ದನೋ ಇವಳನ್ನು ಕಟ್ಟಿಕೊಳ್ಳೋಕೆ? ಅವಳು ಏಳೋ ಹೊತ್ತಿಗೆ ಸರಿಯಾಗಿ ಬೆಡ್ ಕಾಫಿ ರೆಡಿ ಮಾಡಿ ಕೊಡ್ತಾನೆ. ಹೆಂಡತೀನ್ನ ಅಡಿಗೆ ಮಾಡೋಕ್ಕೆ ಬಿಡದೆ ತಾನೇ ಮಾಡಿಟ್ಟು ಹೋಗ್ತಾನೆ. ವಾರಕ್ಕೊಂದು ಸಿನಿಮಾ ಬೇರೆ ತೋರಿಸಬೇಕು ಆ ಬಿತ್ರಿಗೆ. ಮದುವೆ ಆದ ಇಬ್ರೆ ಇರ್ತೀವಿ ಅಂತ ಬೇರೆ ಮನೆ ಮಾಡಿದ್ದಾನೆ ನನ್ನ ಮಗ" ಅನ್ನುತ್ತ ಸೆರಗನ್ನು ಮೂಗಿನ ಬಳಿ ಕೊಂಡೊಯ್ದರು.
============

ಮದುವೆ ಮನೆ ಸನ್ನಿವೇಶ ... ಕೈಲಾಗದವರು, ಗುರುಹಿರಿಯರು ಚೇರುಗಳನ್ನು ಅಲಂಕರಿಸಿದ್ದಾರೆ. ಗತವೈಭವಗಳನ್ನು ಮೆಲುಕು ಹಾಕುತ್ತ, ಇಲ್ಲದವರನ್ನು ನೆನಪಿಸಿಕೊಳ್ಳುತ್ತ, ತಮ್ಮ ಲೇಟೆಸ್ತ್ ಖಾಯಿಲೆಗಳ ಬಗ್ಗೆ ಹೇಳಿಕೊಳ್ಳುತ್ತ ಟೈಮ್-ಪಾಸ್ ಮಾಡುತ್ತಿರುತ್ತಾರೆ. ಹೊಗೆಯನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತ ವಿಧಿಯಿಲ್ಲದೆ ವರಮಹಾಶಯ ಕುಳಿತಲ್ಲೇ ಮಿಸುಕಾಡುತ್ತ, ಕೈ-ಬೀಸಿ ಸ್ನೇಹಿತರಿಗೆ ಹಾಯ್ ಎನ್ನುತ್ತ ಕುಳಿತಿದ್ದಾನೆ. ಪುರೋಹಿತರು ಮಾತ್ರ ಘಂಟಾಘೋಷವಾಗಿ ಮಂತ್ರ ಹೇಳುತ್ತಾ ಮಧ್ಯೆ ಮಧ್ಯೆ ’ಬೇಗ ಬೇಗ’ ಎಂದು ಕೂಗುತ್ತಾ ದಾಂಧಲೆ ಮಾಡುತ್ತಿರುತ್ತಾ ಹೇಳುವ ಮಂತ್ರ ಮಾತ್ರ "ಸುಲಘ್ನಾ ಸಾವಧಾನ, ಸುಮುಹೂರ್ತ ಸಾವಧಾನ " ....
================

ನನಗಂತೂ ಅರ್ಥವಾಗೋಲ್ಲಾ... ನಿಮಗೇ ?