ಮನೆಯಿಂದ ಮನೆಗೆ......

Submitted by ramaswamy on Thu, 06/25/2009 - 14:04
ಬರಹ

ಒಂದೂರಿಂದ ಮತ್ತೊಂದೂರಿಗೆ ಹೋಗುವುದು, ಇದ್ದ ಮನೆ ಬಿಡುವ ಸಲುವಾಗಿ ಮತ್ತೊಂದನ್ನು ಹುಡುಕಿಕೊಳ್ಳುವುದು ಸ್ವಂತ ಮನೆಯಿರದ ಮತ್ತು ವ್ಯಾಪಾರ ವಹಿವಾಟುಗಳಿಲ್ಲದೇ ಬರಿಯ ಸರ್ಕಾರೀ ನೌಕರಿಯ ಸಂಬಳವನ್ನೇ ಆಶ್ರಯಿಸಿರುವ ನನ್ನಂಥವರ ಅನಿವಾರ್ಯ ಕರ್ಮ! ನಮ್ಮದೇ ಮನೆಯಾಗಿಬಿಟ್ಟರೆ ಎನ್ನುವ ಕನಸಲ್ಲೇ ಅರ್ಧ ಸರ್ವೀಸು ಮುಗಿಸಿ ಅಂತೂ ಇಂತೂ ಥರ್ಟಿ ಫಾರ್ಟಿಯ ಒಂದು ಸೈಟು ಮಾಡಿಕೊಳ್ಳುವ ಹೊತ್ತಿಗೇ ನೆತ್ತಿಯಲ್ಲಿ ನೀರು ಬಂದಿರುತ್ತೆ. ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಮಗಳ ಮದುವೆಯ ಕಾರಣಕ್ಕೋ ಅಥವಾ ಮಗನ ವಿದ್ಯಾಭ್ಯಾಸದ ನೆವದಿಂದಲೋ ಅಂತೂ ಇಂತೂ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಲಕ್ಷಕ್ಕೆ ಕೊಂಡ ಸೈಟಿನ ಬೆಲೆ ಯದ್ವಾತದ್ವಾ ಏರುತ್ತ ಹೋದಹಾಗೆಲ್ಲ ಒಳಗಿಂದೊಳಗೇ ನಮ್ಮ ಅದೃಷ್ಟಕ್ಕೆ ನಾವೇ ನಮ್ಮನ್ನು ಅಭಿನಂದಿಸಿಕೊಳ್ಳುತ್ತಾ ಖುಷಿಪಡುತ್ತಲೇ ಇರುತ್ತೇವೆ. ಇನ್ನೂ ಕಟ್ಟಿಕೊಳ್ಳದ ಮನೆಗೆ ವಾಸ್ತುವಿನ ಪ್ಲಾನು ಹಾಕಿಸು ಅಂತ ಒಬ್ಬರು ಹೇಳಿದರೆ ನಿಮ್ಮ ಜನ್ಮ ನಕ್ಷತ್ರಕ್ಕೆ ಹೊಂದುವ ಆಯ ನೋಡಿಸಿ ಮನೆ ಕಟ್ಟಿಸಿ ಅನ್ನುವ ಬಿಟ್ಟಿ ಸಲಹೆಗಳೂ ಬರುತ್ತಲೇ ಇರುತ್ತವೆ. ಇಂದೋ ನಾಳೆಯೋ ನಮ್ಮ ಮನೆ ಆಗಿಯೇ ಆಗುತ್ತೆ ಅಂತ ಅಂದುಕೊಳ್ಳುತ್ತಿರುವಾಗಲೇ ಪ್ರಮೋಷನ್ನು ಬಂದು ಆ ಊರನ್ನು ಬಿಟ್ಟು ಮುಂದಿನ ಊರಿಗೆ ಹೋಗಲೇ ಬೇಕಾಗುತ್ತೆ. ಹೊಸ ಊರು ಅಲ್ಲಿ ಮನೆ, ಮಕ್ಕಳಿಗೆ ಶಾಲೆ-ಕಾಲೇಜು ಅಂತೆಲ್ಲ ಒದ್ದಾಡಿ ಅಂತೂ ಇಂತೂ ಒಂದು ಹಂತ ಮುಟ್ಟುವ ಹೊತ್ತಿಗೆ ರಿಟೈರ್‌ಮೆಂಟಿನ ದಿನ ಹತ್ತಿರಕ್ಕೆ ಬಂದು ಅಯ್ಯೋ ಈ ವಯಸ್ಸಲ್ಲಿ ಮನೆ ಕಟ್ಟಿಕೊಳ್ಳೋ ಹುಮ್ಮಸ್ಸು, ಅದಕ್ಕೆ ಬೇಕಾದ ಮನಸ್ಸು ಎರಡೂ ಕಳಕೊಂಡಿರುವುದರಿಂದ ಹ್ಯಾಗೋ ಆಗುತ್ತೆ ಅನ್ನುವ ಹಾಗೇ ಹಣೆಬರಹ ತಪ್ಪಿಸಿಕೊಳ್ಳಲಿಕ್ಕಾದೀತೆ ಅನ್ನುವ ಸಮಾಧಾನದಲ್ಲೇ ಮಗನ ಮದುವೆಗೆ ತಯಾರಿ ನಡೆಸುತ್ತಿರುತ್ತೇವೆ.

ಮನೆಯಿಂದ ಮನೆಗೆ ಲಗ್ಗೇಜು ಹೊತ್ತೊಯ್ದು ಹೈರಾಣಾಗಿಸುವ ಬಾಡಿಗೆಮನೆ ವಾಸವೂ ಹಣೆಗೆ ಹತ್ತಿದ ಶಿಕ್ಷೆಯೇ! ಮೂರುವರ್ಷಕ್ಕೊಂದು ಸಾರಿ ತಪ್ಪದೇ ವರ್ಗಾವಣೆ ಇರುವ ಕೆಲಸದಲ್ಲಿದ್ದವರಿಗಂತೂ ಅದು ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವನ್ನು, ಸಂತೋಷವನ್ನು ಅನುಭವಿಸುವವರ ಸಂಖ್ಯೆಯೇ ಅಧಿಕ. ಒಂದು ಮನೆಯಿಂದ ಮತ್ತೊಂದು ಮನೆಗೆ, ಒಂದೂರಿನಿಂದ ಮತ್ತೊಂದೂರಿಗೆ ಗುಳೇ ಹೋಗುತ್ತಲೇ ಇರುವುದರಲ್ಲೂ ಒಂದು ಬಗೆಯ ಜಂಗಮತನ ನಮ್ಮರಿವಿಗೆ ಬರದೇ ನಮ್ಮೊಳಗನ್ನು ತುಂಬಿಕೊಂಡಿರುತ್ತದೆ. ಏಕೆಂದರೆ ಮೂರು ಮೂರು ವರ್ಷಕ್ಕೆ ಬೇರೆ ಬೇರೆ ಊರಿನ ನೀರು ಕುಡಿಯುವ ತನ್ಮೂಲಕ ಹಲವು ಅನುಭವಗಳ ಮೂಟೆಯನ್ನೇ ನಮ್ಮೊಟ್ಟಿಗೇ ಒಯ್ಯುತ್ತಿರಬಹುದು.

ಹೀಗೆ ಮೂರು ಮೂರು ವರ್ಷಕ್ಕೆ ಹೊಸ ಹೊಸ ಊರು, ಹೊಸ ಜನರ ಸಂಪರ್ಕಕ್ಕೆ ಬರುವುದರಿಂದ ನಮ್ಮ ಬಾಲ್ಯದ ವೀಕ್‌ನೆಸ್‌ಗಳು, ನಮ್ಮ ಬದುಕಿಗೆ ಅಂಟಿಕೊಂಡಿದ್ದ ಕಪ್ಪು ಕಲೆಗಳೂ ಹೊಸಬರಿಗೆ ಗೊತ್ತಿಲ್ಲದ ಕಾರಣ ನಾವು ಹೊಸ ಊರಲ್ಲಿ ಅತಿ ಹೊಸಬರಾಗಿ ಗೌರವದಿಂದ ಬದುಕಲೂ ಸಾಧ್ಯವಾಗುತ್ತೆ. ಆದರೆ ಈ ಜಂಗಮತನ ಮಕ್ಕಳ ಓದಿಗೆ, ವಯಸ್ಸಾದ ಅಪ್ಪ ಅಮ್ಮರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಎಷ್ಟೋ ಸಾರಿ ನನ್ನ ಹಲವು ಸ್ನೇಹಿತರು ಹೊಸ ಊರಲ್ಲಿ ರೂಮಲ್ಲಿದ್ದುಕೊಂಡು ವಾರಕ್ಕೋ ಹತ್ತು ದಿನಕ್ಕೋ ಮಕ್ಕಳ ಮುಖ ನೋಡುವುದಕ್ಕೆ ಹಳೆಯ ಊರಿಗೆ ಅಂದರೆ ಹೆಂಡತಿ ಮಕ್ಕಳಿರುವ ಊರಿಗೆ ಓಡುತ್ತಿರುತ್ತಾರೆ. ಅವರ ಅವಸರ ಮಕ್ಕಳನ್ನು ನೋಡುವುದಕ್ಕೋ ಅಥವಾ ಆ ಮಕ್ಕಳ ತಾಯಿಯನ್ನು ಕಾಣುವುದಕ್ಕೋ ಅಂತ ಕುತೂಹಲ ತೋರಿಸಿ ನೋಡಿ, ನಿಮಗೇನಪ್ಪಾ, ಆರಾಮವಾಗಿ ಇದ್ದೂರಲ್ಲೇ ಪರ್ಮನೆಂಟಾಗಿ ಟೆಂಟು ಹಾಕ್ಕೊಂಡು ಕೂತಿದೀರಾ, ನಿಮಗೆಲ್ಲಿ ನಮ್ಮಂಥವರ ಕಷ್ಟ ಗೊತ್ತಾಗುತ್ತೆ ಅಂತ ಮಾತಲ್ಲೇ ತಿವಿದು ಸಮಾಧಾನದ ನಿಟ್ಟುಸಿರು ಹೊಮ್ಮಿಸುತ್ತಾರೆ.

ತಿರುಪಿರದ ಲಾಂಧ್ರಗಳು, ತಳವಿರದ ಗೂಡೆಗಳು, ಜರಡಿ, ತೊಟ್ಟಿಲು, ಒನಕೆ ಇವುಗಳದೆ ಮೆರವಣಿಗೆ-ಪುಷ್ಪ ಕವಿ ಅಂತಲೂ ಅನ್ನಿಸಿಕೊಂಡಿದ್ದ ನರಸಿಂಹಸ್ವಾಮಿಗಳ ಪದ್ಯ ಮನೆಯಿಂದ ಮನೆಗೆ ನೆನಪಾಗುತ್ತೆ. ಬೇಕಾದ್ದು ಬೇಡವಾದ್ದು ಎಲ್ಲವನ್ನೂ ಅನಿವಾರ್ಯವಾಗಿ ಊರಿಂದ ಊರಿಗೆ, ಮನೆಯಿಂದ ಮನೆಗೆ ಸಾಗಿಸಲೇ ಬೇಕಾದ ಅನಿವಾರ್ಯತೆಯನ್ನು ನಾವು-ನೀವೆಲ್ಲ ಅನುಭವಿಸಿಯೇ ಇದ್ದೇವೆ. ಸ್ವಂತ ಮನೆ ಕಟ್ಟಿಕೊಂಡವರಿಗೆ ಒಂದೇ ಮನೆಯಾದರೆ ಬಾಡಿಗೆಗೆ ಮನೆ ಹಿಡಿಯುವವರಿಗೆ ಬಯಸಿದಾಗೆಲ್ಲ ಅಥವ ಅವಕಾಶ ಒದಗಿದಾಗೆಲ್ಲ ಹೊಸ ಹೊಸ ಮನೆಗಳು, ಹೊಸ ಹೊಸ ಸೌಲಭ್ಯಗಳು ಹಾಗೇ ಹಳೆಯವಾದರೂ ಸುತ್ತಿಕೊಳ್ಳುವ ಮತ್ತವೇ ಸಮಸ್ಯೆಗಳು. ನಲ್ಲಿಯಲ್ಲಿ ಬರುವ ನೀರು ಓನರ್ ಜೊತೆಗೆ ಹಂಚಿಕೊಳ್ಳಬೇಕು, ನಾಕಕ್ಕಿಂತ ಹೆಚ್ಚು ಜನ ಮನೆಯಲ್ಲಿರಬಾರದು, ಮೀಟರು ಓಡಲಿ, ಬಿಡಲಿ ತಿಂಗಳಿಗೆ ಇಷ್ಟು ಅಂತ ನೀರಿಗಾಗಿ ಹೆಚ್ಚುವರಿ ವಿದ್ಯುತ್ ಶುಲ್ಕ, ಇತ್ಯಾದಿ, ಇತ್ಯಾದಿ. ಅಪಾರ್ಟ್‌ಮೆಂಟಿನಲ್ಲಿರುವ ಸ್ನೇಹಿತ ಗೊಣಗಿದ. ಕಾರು ಇಲ್ಲದೇ ಇದ್ದರೂ ಪಾರ್ಕಿಂಗ್ ಶುಲ್ಕ, ಕಾಯುವವನ ಮುಖ ನೋಡದೇ ಇದ್ದರೂ ಸೆಕ್ಯೂರಿಟಿ ಶುಲ್ಕ, ಸಾರ್ವಜನಿಕ ಅಂತ ಕರೆಸಿಕೊಳ್ಳುವ ಎಲ್ಲ ಜಾಗಗಳಿಗೂ ತಲೆಗಿಷ್ಟು ಅನ್ನುವ ತಲೆಗಂದಾಯ, ನೀವೇ ವಾಸಿ ಅಂತಾನೆ.

ಪ್ರತಿ ಬಾಡಿಗೆ ಮನೆಯೂ ಮುಂದಿನ ಮನೆಗೆ ಹೋಗುವವರೆಗೂ ಸ್ವಂತದ್ದೇ ಆಗಿರುವುದರಿಂದ ಪ್ರತಿ ಮನೆಯ ಮೇಲೂ ಅಕ್ಕರೆ, ಪ್ರೀತಿ, ದ್ವೇಷ, ಕೋಪ ಇತ್ಯಾದಿ ಮನುಷ್ಯನಿರ್ಮಿತ ಭಾವನೆಗಳೂ ಇದ್ದೇಇರ್ತವೆ. ಮನೆ ಬದಲಾಯಿಸುವುದು ಅಂದರೆ ಬರೀ ಸಾಮಾನುಗಳ ಮೆರವಣಿಗೆಯಲ್ಲ, ಬದಲಿಗೆ ಅದು ನಮ್ಮನುಭವಗಳ ಪಾರಮ್ಯದಲ್ಲಿ ವಿಕಸಿತಗೊಂಡ ಕುಶಲ ಕಲೆ. ಗಂಟು ಮೂಟೆ ಸಡಿಲಿಸಿ ಮನೆಗೆ ಹೊಂದಿಕೊಳ್ಳುವ ಹೊತ್ತಿಗೆ ಮನೆ ಮಾಲೀಕರ ಮಗ ಬೇರೆಯಾಗುತ್ತಾನೆ ಅಥವ ಅವರ ಅಳಿಯನಿಗೆ ನಾವಿದ್ದ ಊರಿಗೇ ವರ್ಗವಾಗಿ ಬರುತ್ತಾನೆ. ಹಾಗಾಗಿ ಅನಿವಾರ್ಯವಾಗಿ ಮನೆ ಬಿಟ್ಟುಕೊಡುವ ಪರಿಸ್ಥಿತಿ ನಮ್ಮದಾಗುತ್ತದೆ. ನಮ್ಮನೆಯ ಇಂಗಿನ ಒಗ್ಗರಣೆಯ ವಾಸನೆ ಪಕ್ಕದಲ್ಲೇ ಇರುವ ಮಾಲೀಕರ ಮಗಳಿಗೆ ತಲೆನೋವು ಬರಿಸುತ್ತೆ ಅಥವ ಪ್ರತಿ ಭಾನುವಾರ ಅವರ ಕಿಚನ್ನಿನಿಂದ ಹೊರಹೊಮ್ಮುವ ಗರಂ ಮಸಾಲೆಯ ವಾಸನೆ ನನ್ನ ಹೆಂಡತಿಗೆ ಓಕರಿಕೆ ತರಿಸಿದ್ದಕ್ಕೂ ಮನೆ ಬದಲಾಯಿಸಿದ ಉದಾಹರಣೆಗಳೂ ಇವೆ.

ಸಣ್ಣ ಸಣ್ಣ ಕಾರಣಗಳಿಗೂ ಮನೆ ಬದಲಾಯಿಸುವವರ ಸಂಖ್ಯೆಯೂ ಸಾಕಷ್ಟು ದೊಡ್ಡದೇ ಇದೆ. ಸಿಕ್ಕಸಿಕ್ಕವರಿಗೆಲ್ಲ ಹಲ್ಲು ಗಿಂಜಿ ಮನೆ ಹುಡುಕುವ ಕೆಲಸ ಸುಲಭದ್ದೇನೂ ಅಲ್ಲ. ಒಂದು ವೇಳೆ ನಮಗೊಪ್ಪಿತವಾದ ಮನೆ ಸಿಕ್ಕರೂ ಅದರ ಅಡ್ವಾನ್ಸು, ಬಾಡಿಗೆ ನಮ್ಮ ಮಿತಿ ಮೀರುವಷ್ಟು ದೊಡ್ಡದಿದ್ದರೆ ಮತ್ತೆ ಮತ್ತೆ ಚೌಕಾಶಿಗಿಳಿಯದೇ ಅನ್ಯ ದಾರಿಗಳಿರುವುದಿಲ್ಲ. ಈಗಿರುವ ಮನೆ ಯಾಕೆ ಬಿಡುತ್ತಿದ್ದೀರಾ ಅನ್ನುವ ಪ್ರಶ್ನೆಯನ್ನೂ ಸಾಮಾನ್ಯವಾಗಿ ಎದುರಿಸಲೇ ಬೇಕಾಗುತ್ತೆ. ಬರುವ ನೀರು ಸಾಕಾಗುವುದಿಲ್ಲವೆಂದೋ, ಟಾಯ್ಲೆಟ್ಟಿನ ಪಿಟ್ಟು ತುಂಬಿದ್ದರೂ ಗಮನ ಕೊಡದೇ ಇರುವ ಮಾಲಿಕರ ಜಾಣಮರೆವೋ ಇಲ್ಲಿ ನೆವವಾದರೆ ವಿಚಾರಣೆ ಮುಂದುವರೆಯುವುದಿಲ್ಲ. ಬೇರೆ ಏನೇ ಕಾರಣ ಕೊಟ್ಟು ನೋಡಿ ಅವರು ನಂಬಲು ಸಿದ್ಧವಿರುವುದಿಲ್ಲ. ಆದರೆ ನೀರು ಮತ್ತು ಟಾಯ್ಲೆಟ್ ವಿಚಾರಣಾತೀತ ಕಾರಣಗಳಾಗಿರುವುದರಿಂದ ಒಂದು ಬಗೆಯ ಸೆಕ್ಯೂರಿಟಿಯನ್ನೇ ನಮಗೆ ನೀಡುತ್ತವೆ.

ಅಂತೂ ಇಂತೂ ಬಾಡಿಗೆಗೊಂದು ಮನೆ ಸಿಕ್ಕರೂ ಹಳೆಯ ಮನೆಯನ್ನು ಬದಲಾಯಿಸುವುದು ಸುಲಭದ ಕೆಲಸವೇನೂ ಅಲ್ಲವಲ್ಲ. ಮೊದಲೆಲ್ಲ ಮನೆ ಬದಲಾಯಿಸುವುದು ಅಂದರೆ ಅದೊಂದು ದೊಡ್ಡ ಯುದ್ಧ ಗೆದ್ದ ಹಾಗನ್ನಿಸುತ್ತಿತ್ತು. ಗೆಳೆಯರ ನೆರವಿರದೇ ಸಾಮಾನುಗಳನ್ನು ಶಿಫ್ಟು ಮಾಡುವುದು ಸಾಧ್ಯವೇ ಆಗುತ್ತಿರಲಿಲ್ಲ. ಅಟ್ಟದ ತುಂಬ ತುಂಬಿಟ್ಟುಕೊಂಡಿರುತ್ತಿದ್ದ ಬೇಕಾದದ್ದಕ್ಕಿಂತ ಬೇಡವಾದ ವಸ್ತುಗಳನ್ನೇನು ಮಾಡುವುದು ಎನ್ನುವ ವಿಷಯದ ಮೇಲೆ ಮೇಲಿಂದ ಮೇಲೆ ಸೆಮಿನಾರುಗಳು ನಡೆದರೂ ಕಡೆಗೂ ಆ ಎಲ್ಲ ಸಾಮಾನುಗಳು ಹೊಸಮನೆಗೂ ಬರುತ್ತಿದ್ದವು. ಮನೆಯ ಮುಂದೆ ನಿಂತ ಮೆಟಡೋರ್ ವಾಹನದಲ್ಲಿ ನಮ್ಮ ಸಕಲ ಅಷ್ಟೈಶ್ವರ್ಯಗಳನ್ನೂ ತುಂಬುವ ಅನಿವಾರ್ಯತೆ ಇರುತ್ತಿದ್ದುದರಿಂದ ಮನೆ ಬಿಡುವ ಮೂರು ದಿನದ ಮೊದಲೇ ಗಂಟು ಮೂಟೆಗಳನ್ನು ಕಟ್ಟುವ ಕೆಲಸ ಪ್ರಾರಂಭವಾಗುತ್ತಿತ್ತು. ಒಂದು ಟ್ರಿಪ್ಪಿನಲ್ಲೇ ನಮ್ಮೆಲ್ಲ ಸಾಮಾನು ಸರಂಜಾಮು ಹೊಸ ಮನೆಗೆ ಒಯ್ಯದಿದ್ದರೆ ಮತ್ತೆ ಕಾಸು ಬಿಚ್ಚಬೇಕಾಗುತ್ತದೆಂಬ ಸಹಜ ಭಯದಲ್ಲಿ ಮೊದಲು ನಿಲುವು ಕನ್ನಡಿಯನ್ನಿಟ್ಟು ಅದರ ಸುತ್ತಲೂ ಹಾಸಿಗೆ ಸಿಂಬೆಗಳನ್ನು ಪೇರಿಸಿ ಪಕ್ಕದಲ್ಲೇ ಮಂಚವನ್ನು ಒತ್ತಿಟ್ಟು ಅದರ ಮೇಲೆ ಅಡಿಗೆ ಮನೆಯ ಸಕಲ ಸರ್ವಸ್ವಗಳನ್ನೂ ಕಣ್ಣಿಗೆ ಕಾಣುವಂತೆ ಜೋಡಿಸಿ ಪಕ್ಕಕ್ಕೆ ಬಟ್ಟೆಗಂಟು, ಅಲ್ಮೆರಾ, ಪುಸ್ತಕಗಳ ಕಟ್ಟು, ಕುರ್ಚಿ, ಕೊಡ, ಬಕೀಟು. ಸಾಮಾನುಗಳನ್ನು ವ್ಯಾನಿನ ಅಳತೆಗೆ ತಕ್ಕಂತೆ ವಿಸ್ತರಿಸಿ ಇಡುವುದು ಅಥವ ಜಿಪ್ ಮಾಡಿ ಅದುಮಿಡುವ ಕಲೆ ಇದ್ದವರು ಬದುಕಿಕೊಳ್ಳುತ್ತಾರೆ. ಇಲ್ಲವಾದವರು ಹೊಸ ಮನೆ ಸೇರಿ ತಿಂಗಳಾದರೂ ಸಾಸಿವೆ ಡಬ್ಬಿ ಸಿಗಲಿಲ್ಲವೆಂದೋ ಶೇವಿಂಗ್ ಕಿಟ್ ಇಟ್ಟ ಬ್ಯಾಗು ಯಾವುದೆಂದು ಮರೆತುಹೋಯಿತೆಂದೋ ಗೊಣಗುತ್ತಲೇ ಇರುತ್ತಾರೆ.

ಇನ್ನೇನು ವ್ಯಾನು ಸ್ಟಾರ್ಟ್ ಆಗಿ ಮುಂದೆ ಚಲಿಸಬೇಕು ಅನ್ನುವ ಹೊತ್ತಿಗೆ ಸರಿಯಾಗಿ ಪಕ್ಕದ ಮನೆಯವರು ಕುಂಕುಮ ಇಟ್ಟುಕೊಳ್ಳಿ ಅಂತ ಊರು ತೊರೆಯುತ್ತಿರುವ ಗೃಹಿಣಿಯನ್ನು ಕರೆಯುತ್ತಾರೆ. ಈಗ ಬಂದೆ ಅಂತ ಹೋದ ಆಕೆ ಪಕ್ಕದಮನೆಯಿಂದ ಆ ಪಕ್ಕದ ಮನೆಗೆ, ಅಲ್ಲಿಂದ ಪಕ್ಕದ ಬೀದಿಯ ಕಡೆಯ ಮನೆಗೆ ಹೇಳಿಬರಲಿಲ್ಲ ಎನ್ನುವ ಕಾರಣ ಕೊಟ್ಟು ಹೊತ್ತು ಏರಿಸುತ್ತಾಳೆ. ವ್ಯಾನಿನ ಡ್ರಯ್ವರು ಹೊತ್ತಾಗುತ್ತೆ ಸಾರ್ ಅಂತ ಅವಸರಿಸುತ್ತಾನೆ. ಅವನು ವ್ಯಾನಿಳಿದು ಚಕ್ರಗಳಿಗೆ ಅಕಾರಣ ಗುದ್ದು ಕೊಟ್ಟು ಬೀಡಿಯನ್ನೋ ಸಿಗರೇಟನ್ನೋ ಹಚ್ಚಿಕೊಳ್ಳುತ್ತಾನೆ. ವ್ಯಾನಿನ ಮುಂದಿನ ಸೀಟಲ್ಲಿ ಮಿಕ್ಸಿ, ಒಡವೆ ವಸ್ತು, ಬಿಳಿಚೌಕದಲ್ಲಿ ಕಟ್ಟಿದ ಬೆಳ್ಳಿ ಸಾಮಾನುಗಳನ್ನೂ ಇಟ್ಟುಕೊಂಡು ಕೂರಲು ಸಿದ್ಧಳಾಗಿದ್ದ ಆಕೆ ಡ್ರೈವರು ಬೀಡಿ ಸೇದುತ್ತಾನೆ ಅನ್ನುವ ಕಾರಣಕ್ಕೆ ಕಡೆಯಕ್ಷಣದಲ್ಲಿ ತಾನು ಮಕ್ಕಳ ಜೊತೆ ಬಸ್ಸಲ್ಲೋ ರೈಲಲ್ಲೋ ಬರುವುದಾಗಿ ಹಟ ಹಿಡಿಯುತ್ತಾಳೆ. ಸಾರಥಿಗೆ ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಹೇಳುವ ಸಮಯವಲ್ಲವಾದರೂ ಅವನನ್ನು ಪ್ರಯಾಣದ ಮಧ್ಯದಲ್ಲೆಲ್ಲೂ ಹೊಗೆ ಉಗುಳದಂತೆ ಯಜಮಾನ ಪುಸಲಾಯಿಸಲೇ ಬೇಕಾಗುತ್ತದೆ. ಅಂತೂ ಇಂತೂ ವ್ಯಾನು ಹೊರಟು ಹೊಸ ಮನೆಯ ಮುಂದೆ ತನ್ನ ಹೊಟ್ಟೆ ಇಳಿಸಿಕೊಳ್ಳುವ ಹೊತ್ತಿಗೆ ಆ ಮನೆಯ ಅಕ್ಕಪಕ್ಕದವರಾಗಲೇ ಕಿಟಕಿಗಳಿಂದ ಇಣುಕಿ ಅನುಮಾನದ ಕಣ್ಣುಗಳ ಸರ್ಚ್ ಲೈಟನ್ನು ಇವರ ಮೇಲೆ ಪ್ರಯೋಗಿಸುತ್ತಿರುವಾಗಲೇ ಹೊಸ ಓನರು ಬಂದು ಕುಡಿಯಲು ನೀರು ಬೇಕಿತ್ತಾ ಅಂತ ಕೇಳುತ್ತಲೋ, ಆ ರಾತ್ರಿಯ ಊಟ ತಮ್ಮ ಮನೆಯಲ್ಲೇ ಆಗಲಿ ಎನ್ನುತ್ತಲೋ ಸಾಮಾನು ಸರಂಜಾಮುಗಳು ಮನೆಯೊಳಗೆ ಸಾಗಿಸಲು ತಮ್ಮಿಂದ ಸಾಧ್ಯವಾದಷ್ಟೂ ಅಡಚಣೆ ಮಾಡುವುದೂ ಶಿಪ್ಟಿಂಗ್ ಸಮಯದಲ್ಲಿ ನಡೆದೇ ನಡೆಯುವ ಸಂಗತಿಗಳು.

ಈಚೆಗೆ ಬಿಡಿ, ಮನೆ ಬಿಟ್ಟು ಮನೆ ಸೇರಿಸಲು ಮೂವರ್ಸ್ ಮತ್ತು ಪ್ಯಾಕರ್ಸ್‌ಗಳಿದ್ದಾರೆ. ನಮ್ಮದೆಲ್ಲವನ್ನೂ ಚಂದವಾಗಿ ತುಂಬಿ ನಾವು ತಲುಪಬೇಕಾದಲ್ಲಿಗೆ ನಮಗಿಂತ ಮೊದಲೇ ತಲುಪಿಸಿ ಕಾಯುತ್ತಿರುತ್ತಾರೆ. ಜೊತೆಗೆ ಆಫೀಸು ಸಾಮಾನು ಸರಂಜಾಮು ಸಾಗಿಸಲು ಕೊಡುವ ಭತ್ಯೆಗೆ ತಕ್ಕನಾಗಿ ಬಿಲ್ಲನ್ನೂ ದಯಪಾಲಿಸುವುದರಿಂದಾಗಿ ಹಿಂದೆಲ್ಲ ಮನೆ ಬದಲಾಯಿಸಲು ತೆಗೆದುಕೊಳ್ಳುತ್ತಿದ್ದ ರಿಸ್ಕುಗಳು ಕಡಿಮೆಯಾಗಿವೆ.

ಹೊಸ ಊರಿಗೆ ಹೊರಡುವ ಮುನ್ನಾ ದಿನ ಅಡುಗೆ ಗ್ಯಾಸ್ ಕನೆಕ್ಷನ್, ಬ್ಯಾಂಕ್ ಖಾತೆಯ ಟ್ರಾನ್ಸ್‌ಫರ್‌ಗೆ ಹಾಗೇ ಲ್ಯಾಂಡ್ ಲೈನಿನ ಸರಂಡರಿಗೆ ಅರ್ಜಿ ಗುಜರಾಯಿಸಿ ಬಂದಿದ್ದರೂ ಹೊಸ ಊರು ಮುಟ್ಟಿ ಎಂಟು ದಿನ ಕಳೆದರೂ ಗ್ಯಾಸ್ ಏಜೆನ್ಸಿಯವರು ಯಾರು ಯಾರದ್ದೊ ಬರುತ್ತಲೇ ಇರುತ್ತೆ ಸಾರ್, ನಿಮ್ಮ ನಂಬರ್ ಮಾತ್ರ ಯಾಕೋ ಬರುತ್ತಿಲ್ಲ ಅಂತ ರಾಗ ಎಳೆಯುತ್ತಾನೆ. ಅವನಿಗೆ ಗೋಗರೆದು ಡಿಪಾಸಿಟ್ ರಿಫಂಡಿನ ವೋಚರು ತೋರಿಸಿ ಒಂದು ರೆಗ್ಯುಲೇಟರಿನ ಜೊತೆಗೆ ಸಿಲಿಂಡರು ಪಡೆಯುವ ಕೆಲಸಕ್ಕೆ ಹತ್ತೆಂಟು ಸಾರಿ ಓಡಾಡಿರಬೇಕಾಗುತ್ತೆ. ಬ್ಯಾಂಕಿನ ಕೆಲಸವೇನೋ ಆಗಿಬಿಟ್ಟಿದ್ದರೂ ಫೋನು ಬರುವುದು ಮಾತ್ರ ಸಿಕ್ಕಾಪಟ್ಟೆ ವಿಳಂಬವಾಗುತ್ತದೆ. ಹೊಸ ಊರಲ್ಲಿ ವೇವ್ ಲೆಂಗ್ತ್ ಸಿಕ್ಕದ ಜನಗಳ ಜೊತೆಗೆ ಏಗುತ್ತೇಗುತ್ತಲೇ ಹೊಂದಾಣಿಕೆ ಮಾಡಿಕೊಳ್ಳುತ್ತಿರುವಾಗ ಇಂಟರ್‌ನೆಟ್ಟು ಕೂಡ ಇಲ್ಲದೇ ಗೆಳೆಯರ ಮೇಲ್, ಬ್ಲಾಗುಗಳೆಲ್ಲ ತುಕ್ಕು ಹಿಡಿಯುವ ಹೊತ್ತಿಗೆ ಅಂತೂ ಇಂತೂ ಕುಂಟಿಕೊಂಡು ಲ್ಯಾಂಡ್ ಲೈನು ಹೊಸ ನಂಬರಿನೊಂದಿಗೆ ಹಾಜರಾಗುತ್ತೆ. ಗೆಳೆಯರಿಗೆ ನೆಂಟರಿಗೆ ಬದಲಾದ ನಂಬರು ತಿಳಿಸಿಬಿಡು ಅಂತ ಮಗಳಿಗೆ ಹೇಳಿದರೆ ತನ್ನ ನೆಟ್ ವರ್ಕಲ್ಲಿ ಮೆಸೇಜಿಗೂ ಕರೆನ್ಸಿ ಕಟ್ಟಾಗುತ್ತೆ ಅಂತ ಗೊಣಗುತ್ತಾಳೆ. ಮನೆಯಂತೂ ಬದಲಾಯಿತು, ಸರಿ. ಆದರೆ ಮನಸ್ಸು ಇದ್ದಹಾಗೇ ಇರುತ್ತಲ್ಲ. ಅದು ತನಗೆ ಬೇಕಾದ ಸ್ನೇಹಿತರನ್ನು ಹುಡುಕಿಕೊಳ್ಳಲು ತವಕಿಸುತ್ತೆ. ಆಫೀಸಿನ ಕೆಲಸ ಕಾರ್ಯ ಯಾವ ಊರಿಗೆ ಹೋದರೂ ಅದೇ ಫಾರಂ, ಅವೇ ಲೆಡ್ಜರು, ಅವೇ ಮೆನುಗಳಲ್ಲಿದ್ದರೂ ಯಾಕೋ ಇತರ ಸಹೋದ್ಯೋಗಿಗಳ ಜೊತೆ ಹೊಂದಿಕೊಳ್ಳಲು ಕೆಲ ಕಾಲ ತೆಗೆದುಕೊಳ್ಳುತ್ತೆ. ಕಾಫಿ ಬ್ರೇಕಲ್ಲಿ ಯಾರ ಜೊತೆ ಹೋದರೆ ಸೂಕ್ತ ಅಂತ ಅಂದುಕೊಳ್ಳುತ್ತಿರುವಾಗಲೇ ಯಾವುದೋ ಬಾದರಾಯಣ ಸಂಬಂಧ ನೆನಪಿಸಿ ಹತ್ತಿರ ಬರುವ ಅಪರಿಚಿತ ಸುಪರಿಚತನ ಹಾಗೇ ವರ್ತಿಸುತ್ತ ಅವರಿವರ ಕುರಿತು ಸಣ್ಣದೊಂದು ನೋಟ್ ಕೊಡುತ್ತಾನೆ, ಹಿಂದಿನ ಬ್ರಾಂಚಿನಂತಲ್ಲ, ಹುಷಾರಾಗಿರಿ ಅನ್ನುವ ಎಚ್ಚರ ಕೂಡ ಮಾತಲ್ಲಿ ಇರುತ್ತೆ. ಕಾಲ ಕಳೆದ ಹಾಗೆ, ಎಲ್ಲವೂ ಚಕ್ರ ತಿರುಗಿದ ಹಾಗೇ ನಡೆಯುತ್ತೆ, ಎಚ್ಚರಿಕೆ ಕೊಟ್ಟ ಮನುಷ್ಯನ ಹೊರತಾಗಿ ಉಳಿದವರೆಲ್ಲ ತಮ್ಮ ಪಾಡಿಗೆ ತಾವಿರುವವರೆಂದು ನಮಗೆ ನಿಧಾನವಾಗಿ ಅರಿವಾಗುತ್ತ ಹೋಗುತ್ತೆ.

ಹಿಂದಿದ್ದ ಮನೆಗಿಂತ ಈಗ ಬಂದಿರುವ ಮನೆ ದೊಡ್ಡದೇ ಇದ್ದರೂ ಈ ಹೆಂಗಸರು ಮಾತ್ರ ಒರಳಿರುವ ಜಾಗ ಕತ್ತಲು ಎನ್ನುತ್ತಲೋ ರೂಮಿಗೆ ಮಂಚ ಹಾಕಿದ ಮೇಲೆ ಕಾಲಿಡಲೂ ಜಾಗ ಇಲ್ಲ ಎನ್ನುತ್ತಲೋ ಎಂದಿನ ತಮ್ಮ ಅಸಹನೆಯನ್ನು ತೋರ್ಪಡಿಸುತ್ತಲೇ ಇರುತ್ತಾರೆ. ಸ್ವಾರಸ್ಯದ ಸಂಗತಿಯೆಂದರೆ ಹಿಂದಿನ ಮನೆಯಲ್ಲಿ ಶಿಸ್ತಾಗಿ ಇಟ್ಟಿದ್ದ ಜಾಗದಲ್ಲಿ ಕೈ ಹಾಕಿದ ಕೂಡಲೇ ಸಿಗುತ್ತಿದ್ದ ಸಾಮಾನುಗಳೆಲ್ಲ ಈ ವಿಶಾಲವಾದ ಮನೆಗೆ ಬಂದಮೇಲೆ ಮಿಸ್ಸಾಗುತ್ತಿವೆ ಅಥವ ಹೆಚ್ಚು ಜಾಗ ಬೇಡುತ್ತಿವೆ!

ಅದೇನೇ ಇರಲಿ, ಹೀಗೆ ಊರಿಂದ ಊರಿಗೆ ನಮ್ಮ ಕ್ಯಾರವಾನು ಸಾಗುತ್ತಿರುವುದರಿಂದ ನನಗೆಂಥೆಂಥಾ ಅನುಭವಗಳಾಗಿವೆ ಎಂದರೆ ಈಗ ಯಾರದೇ ಮನೆಯಲ್ಲಿರುವ ಸಾಮಾನು ನೋಡಿದ ಕೂಡಲೇ ಅದನ್ನು ಸಾಗಿಸಲು ಯಾವ ಮಾಡೆಲ್ಲಿನ ವ್ಯಾನು/ಲಾರಿ ಬೇಕೆಂಬುದನ್ನು ಕ್ಷಣಾರ್ಧದಲ್ಲಿ ಹೇಳಬಲ್ಲೆ. ಹಾಗೆಯೇ ಎಂಥ ಸಣ್ಣ ಬಾಗಿಲಲ್ಲೂ ದೊಡ್ಡ ಅಲ್ಮೆರಾವನ್ನು ಒಳಕ್ಕೆ ಸಾಗಿಸುವ ಉಪಾಯ ಸೂಚಿಸಬಲ್ಲೆ. ಹೆಣಭಾರದ ಸಾಮಾನು ತುಂಬಿದ ಜಾಕಾಯಿ ಪೆಟ್ಟಿಗೆಯ ಕೆಳಗೊಂದು ಸಣ್ಣ ಕಲ್ಲಿಟ್ಟು ಹಾರೆಯಿಂದ ಮೀಟಿ ಸುಲಭವಾಗಿ ಜಾರಿಸುವ ವಿಧಾನವನ್ನೂ ತೋರಿಸಬಲ್ಲೆ. ಗಾಜಿನ ವಸ್ತುಗಳು ಒಡೆಯದಂತೆ ವ್ಯಾನು/ಲಾರಿಗೆ ಪ್ಯಾಕ್ ಮಾಡುವ ವಿಧಾನವನ್ನೂ ತಿಳಿಯ ಹೇಳಬಲ್ಲೆ. ಆದರೇನು ಮಾಡೋದು? ನನಗಿಂತಲೂ ಸುಲಭವಾಗಿ ಇತರರಿಗೂ ಈ ವಿದ್ಯೆಗಳು ಒಲಿದಿರುವುದರಿಂದ ಯಾರೊಬ್ಬರೂ ಈ ಕುರಿತು ಕೇಳುವುದೇ ಇಲ್ಲ. ನಿಮಗೆಂದಾದರೂ ಸಾಮಾನು ಸಾಗಿಸುವ ಕೆಲಸ ಬಿದ್ದರೆ ತಪ್ಪದೇ ನನ್ನನ್ನು ಭೇಟಿಯಾಗಿ, ಆಗಬಹುದಾ?

(ಈ ದಿನದ ವಿಜಯಕರ್ನಾಟಕಪತ್ರಿಕೆಯಲ್ಲಿ ಪ್ರಕಟಿತ ಪ್ರಬಂಧ)