ಈಸಲು-ಬಯಲುಸೀಮೆಯ ಜನಪ್ರಿಯ ತಿನಿಸು

Submitted by Bhushanmedigeshi on Thu, 06/25/2009 - 11:40
ಬರಹ

ಹುತ್ತದೀಸಲಮ್ಮಾ ,ಹುತ್ತದೀಸಲು ಎಂದು ನಮ್ಮ ಚಿಕ್ಕಂದಿನ ದಿನಗಳಲ್ಲಿ ಯರಗುಂಟೆಯ ನರಸಿಂಹಪ್ಪ ತಲೆಯ ಮೇಲೆ ಸಣ್ಣಚೀಲವೊಂದನ್ನಿಟ್ಟುಕೊಂಡು ಊರೂರು ತಿರುಗುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.ನನಗಂತೂ ಈಸಲೆಂದರೆ ಪಂಚಪ್ರಾಣ.ಹಾಗಾಗಿ ಕೆಲವೊಮ್ಮೆ ನಮ್ಮಮ್ಮ ಕೂಡಾ ರಾಗಿಯನ್ನೋ,ಭತ್ತವನ್ನೋ ಕೊಟ್ಟು ಈಸಲು ತೆಗೆದುಕೊಳ್ಳುತ್ತಿದ್ದರು.

ಏನಿದು ಈಸಲು???

ಮುಂಗಾರು ಮಳೆ ಪ್ರಾರಂಭವಾದ ಕೂಡಲೇ ಗೆದ್ದಲಿನ ಇನ್ನೊಂದು ರೂಪಾಂತರವಾದ ಈಸಲು ಭೂಮಿಯೊಡಲಿನಿಂದ ರೆಕ್ಕೆಧರಿಸಿಕೊಂಡು ಹೊರಬರುತ್ತದೆ.ನೆಲ ತೇವವಾದೊಡನೆ ಹುತ್ತಗಳ ಬಳಿ,ಕೆಲವೊಮ್ಮೆ ನೆಲದಮೇಲಿನ ರಂಧ್ರಗಳ ಬಳಿ ರೆಕ್ಕೆ ಸಹಿತ ಹೊರಬರುವ ಈಸಲು ಹುಳುಗಳನ್ನು ಕಾಣಬಹುದು.ಹೊರಬಂದ ಕೂಡಲೇ ಅಲ್ಲಿಯೇ ಕಾದು ಕುಳಿತ ಓತಿಕ್ಯಾತಗಳಿಗೆ,ಹಲ್ಲಿಗಳಿಗೆ,ಕಾಗೆ ಗೊರವಂಕ,ಮುಂತಾದ ಪಕ್ಷಿಗಳಿಗೆ ದುತ್ತೆಂದು ಆಹಾರವಾಗುವ ಅತಿ ಪಾಪದ ಕೀಟ ಈ ಈಸಲು ಹುಳು.ಮುಂಜಾನೆಯಲ್ಲಿಯೇ ನೆಲದಿಂದ ಹೊರಬಂದರೆ ಈ ರೀತಿ ಅವಸಾನ ಕಾಣುವ ಇವು ರಾತ್ರಿ ವೇಳೆಯಲ್ಲಿ ಬೆಳಕಿನಾಸೆಗೆ ಬಂದು ಮನೆಗಳ ಬಳಿ,ವಿದ್ಯುತ್ ಕಂಬದ ಬಳಿ ಮಾನವನ ಮತ್ತು ಮಂಡರಗಬ್ಬೆ(ಚೇಳಿಗಿಂತ ದೊಡ್ಡದಾದ ಕಪ್ಪನೆಯ ಅಂಗೈ ಅಗಲದ ಚೇಳಿನ ಇನ್ನೊಂದು ಬಗೆ)ಗಳ ಜಿಹ್ವಾ ಚಾಪಲ್ಯಕ್ಕೆ ಗುರಿಯಾಗುತ್ತವೆ.

ಈಸಲನ್ನು ಹಿಡಿಯುವುದರಲ್ಲಿ ಎರಡು ಬಗೆಯಿದೆ.ಹುತ್ತಗಳನ್ನು ಊದಿ ಈಸಲನ್ನು ಹೊರಬರುವಂತೆ ಮಾಡಿ ಹಿಡಿಯುವುದು.(ಇದು ಅತಿ ಅಪಾಯಕಾರಿ,ಹಾಗೂ ಕೌಶಲ್ಯದ ಕೆಲಸ,ಹುತ್ತದೀಸಲು ಹಿಡಿಯುವುದರ ಬಗ್ಗೆ ವಿವರವಾಗಿ ಮತ್ತೊಮ್ಮೆ ಬರೆಯುತ್ತೇನೆ)ಗೆದ್ದಲಿರುವ ಹುತ್ತಗಳನ್ನು ಗುರ್ತಿಸಿ ಅವುಗಳನ್ನು ಕೃತಕವಾಗಿ ನೆನೆಸಿ ಬಲವಂತವಾಗಿ ಮೇಲೆ ಬರುವಂತೆ ಮಾಡಿ ಹಿಡಿಯುವುದು.ತನ್ನಿಂದ ತಾನೇ ನೈಸರ್ಗಿಕವಾಗಿ ಆದ ಮಳೆಗೆ ರೂಪಾಂತರಗೊಂಡು ಈಚೆ ಬರುವ ಈಸಲು ಹುಳುಗಳನ್ನು ಪೊರಕೆಯ ಸಹಾಯದಿಂದ ಗುಡಿಸಿ ಸಂಗ್ರಹಿಸುವುದು.ಈಸಲು ಹುಳುವಿನಲ್ಲಿ ಜಿಡ್ಡಿನ ಅಂಶ ಜಾಸ್ತಿ ಇರುವ ಕಾರಣದಿಂದ ಮನೆಯ ನೆಲವೆಲ್ಲಾ ಎಣ್ಣೆ ಬಳಿದ ರೀತಿ ಆಗುತ್ತದೆ.ಆದ್ದರಿಂದ ಮನೆಯೊಳಗಿನ ದೀಪಗಳನ್ನೆಲ್ಲಾ ಆರಿಸಿ ಬಯಲಿನಲ್ಲಿರುವ ವಿಶಾಲ ಬಂಡೆಗಳ ಬಳಿ ಸುಡಿಗೆ(ತೆಂಗಿನ ಗರಿಗೆ ಬೆಂಕಿ ಹಚ್ಚುವುದು) ಹಿಡಿದು ಈಸಲನ್ನು ಆಕರ್ಷಿಸಿ ಹಿಡಿಯುವುದು.ನೂರಾರು ಬಾರಿ ನಾನು ನಮ್ಮೂರಿನ ದೊಡ್ಡಬಂಡೆ ಮೇಲೆ ಸುಡಿಗೆ ಹಿಡಿದು ಈಸಲು ಗುಡಿಸಿದ್ದೇನೆ.
ಹಸಿಯಾಗಿಯೇ ಈಸಲನ್ನು ತಿನ್ನಲಾಗದು.ಹುತ್ತದಲ್ಲಿ ಹಿಡಿಯುವ ಈಸಲು ಕಪ್ಪು ಬಣ್ಣವುಳ್ಳವಾಗಿರುತ್ತವೆ.ಮಿರಮಿರ ಮಿಂಚುವ ಇವು ಒಣಗಿದ ಮೇಲೆ ಬೀರುವ ಗವುಲು(ವಾಸನೆ) ಹಲ್ಲಿಗಳನ್ನು ,ಕೆಲವೊಮ್ಮೆ ಹಾವುಗಳನ್ನೂ ಆಕರ್ಷಿಸುತ್ತದೆ.ಗುಡಿಸುವಾಗ ಮೆತ್ತಿಕೊಂಡ ಕಡ್ಡಿಕಸ,ಮಣ್ಣು ಮತ್ತಿತರ ವಸ್ತುಗಳನ್ನು ಆಯ್ದು,ಬಿಸಿಲಿನಲ್ಲಿ ಒಂದು ಅಥವಾ ಎರಡು ದಿನ ಒಣಗಿಸಿ ಖಾರದ ಪುಡಿ,ಬೆಳ್ಳುಳ್ಳಿ,ಉಪ್ಪು,ಸೇರಿಸಿ ತಿನ್ನುತ್ತಾರೆ.ಬಿಸಿಲಿಗಿಟ್ಟಾಗ ಬೆಕ್ಕಿನ ಕಾಟವೂ ಜಾಸ್ತಿ.
ಅತ್ಯಂತ ರುಚಿಕರವಾದ ಇದನ್ನು ಜೀವನೋಪಾಯಕ್ಕಾಗಿ ಹಿಡಿದು ಮಾರುತ್ತಿದ್ದ ದಿನಗಳು ಈಗಿಲ್ಲ.ಇದನ್ನೇ ಉಪಕಸುಬಾಗಿ ಮಾಡಿಕೊಂಡಿದ್ದ ಬಹುತೇಕ ಕುಟುಂಬಗಳು ಇನ್ನೂ ಬಯಲು ಸೀಮೆಯ ಅನೇಕ ಹಳ್ಳಿಗಳಲ್ಲಿ ಕಂಡುಬರುತ್ತವೆ.ಈಸಲನ್ನು ತಿನ್ನುವವರ ಸಂಖ್ಯೆಯೂ ಇಳಿಯುತ್ತಿದೆ.ಮೊನ್ನೆ ಊರಿಗೆ ಹೋದಾಗ ನನಗೆ ಅತಿ ಪ್ರಿಯವಾದ ಈಸಲನ್ನು ಎಲ್ಲಾದರೂ ತರಿಸಿಕೊಡುವಂತೆ ನನ್ನಮ್ಮನಿಗೆ ದುಂಬಾಲು ಬಿದ್ದಿದ್ದೆ.ಅದರ ಫಲವಾಗಿ ಕಳೆದ ಭಾನುವಾರ ಅಮ್ಮನಿಂದ ಕರೆ"ನಿನಗಿಷ್ಟವಾದ ಈಸಲು ಗುಂಡುಮಲೆಯಿಂದ ತರಿಸಿದ್ದೇನೆ ಬಾ".ಸರಿ ಮತ್ತಿನ್ನೇನು,..ಸಾಕಾಗುವಷ್ಟನ್ನು ತಿಂದು ಸಂಪದಿಗರಿಗಾಗಿ ಫೋಟೋ ಕ್ಲಿಕ್ಕಿಸಿಕೊಂಡು ಬಂದೆ.
ಈಸಲನ್ನು ಬಾಣಂತಿಗೆ,ಗೂರಲು ಕೆಮ್ಮಿನವರಿಗೆ,ನಾಯಿಕಚ್ಚಿದವರಿಗೆ ನಮ್ಮೂರಿನ ಕಡೆ ತಿನ್ನಲು ಕೊಡುವುದಿಲ್ಲ.