ಶುಕ್ರ ಮತ್ತು ಮಂಗಳ- ಎರಡು ಎಚ್ಚರಿಕೆ ಗಂಟೆಗಳು

Submitted by ಎ.ಸುಬ್ರಮಣ್ಯ on Fri, 06/26/2009 - 22:02
ಬರಹ

ಭೂಮಿಯ ಕುರಿತಂತೆ ಮಾನವನಿಗೆ ಎರಡು ರೀತಿಯ ಭ್ರಮೆಗಳಿವೆ. ಅದೆಷ್ಟೇ ವ್ಶೆಜ್ಞಾನಿಕವಾಗಿ ಯೋಚಿಸಿದರೂ ‘ಭೂಮಿ ಗುಂಡಗಿದೆ’ ಎಂಬ ಕಲ್ಪನೆ ನಮ್ಮ ಆಂತರ್ಯಕ್ಕೆ ಬಾರದು. ನಮ್ಮ ಅನಿರ್ಭಂಧಿತ ಜೀವನಶೈಲಿ ಮತ್ತು ಅದರ ಪರಿಣಾಮವಾದ ಹಾನಿಕಾರಕ ರಾಸಾಯನಿಕಗಳು, ಅನಿಲಗಳು ಮತ್ತು ಮಾಲಿನ್ಯಗಳಿಂದ ಭೂಮಿಯ ವಾತಾವರಣಕ್ಕೆ ಏನೂ ಆಗದು ಎನ್ನುವುದು ಮಾನವನ ಇನ್ನ್ನೊಂದು ಭ್ರಮೆ. ಇದೊಂದು ಮುಂದೆ ದುಬಾರಿಯಾಗಬಹುದಾದ ಭ್ರಮೆಯೂ ಕೂಡ. ಬಹಳಷ್ಟು ಸಮಯ ಭೂಮಿಗೆ ಸೂಕ್ಷ್ಮವಾದ ವಾತಾವರಣ ಇದೆ ಎನ್ನುವುದರ ಅರಿವೇ ನಮಗಿರುವುದಿಲ್ಲ. ಈ ಎಲ್ಲಾ ಹಾನಿಕಾರಕಗಳನ್ನೂ ಹೇಗೋ ಜೀರ್ಣಿಸಿಕೊಂಡು ಭೂಮಿ ನಮಗೆ ಶುದ್ದವಾದ ಗಾಳಿ, ನೀರು, ಬೆಳಕುಗಳನ್ನು ನಿರಂತರವಾಗಿ ಪೂರೈಸುತ್ತದೆ ಎನ್ನುವ ಈ ಜಾಣ ಭ್ರಮೆ ನಮ್ಮದು. ಇವೆರಡೂ ಭ್ರಮೆಗಳಿಂದ ಮುಕ್ತರಾಗಬೇಕಾದರೆ ನಾವು ಬಾಹ್ಯಾಕಾಶದಿಂದ ಭೂಮಿಯನ್ನು ವೀಕ್ಷಿಸಬೇಕು. ೧೯೬೫ ರಲ್ಲಿ ಮೊಟ್ಟಮೊದಲು ‘ಅಂತರಿಕ್ಷ ನಡಿಗೆ’(sspace walk)ಮಾಡಿದ ಅಲೆಕ್ಸೈ ಲಿಯೋನೋವ್ (alexei leonov)ಭೂಮಿಯನ್ನು ನೋಡಿ ಉದ್ಗರಿಸಿದ್ದು “ಅಬ್ಬಾ, ಭೂಮಿ ಕೂಡ ಗುಂಡಗಿದೆ”. ದೂರದ ಆಕಾಶದಿಂದ ಭೂಮಿ ತನ್ನೆಲ್ಲಾ ಸತ್ವಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿರುವ, ಪ್ರತ್ಯೇಕ ವಾತಾವರಣವಿರುವ ನೀಲಿ ಚೆಂಡಿನಂತೆ ಕಾಣುತ್ತದೆ.

ಹೌದು. ಅಪರೂಪಕ್ಕೊಮ್ಮೆ ಹಾರಿಹೋಗುವ ಜಲಜನಕದ ಅಣುಗಳು, ಆಗಾಗ ಒಳಬಂದು ಬೂದಿಯಾದ cosmic dust , ದೂರದ ಸೂರ್ಯನಿಂದ ತನಗೆ ಬೇಕಾದಷ್ಟು ಬೆಳಕು ಶಾಖವನ್ನು ಹೀರಿ ಬೆಚ್ಚಗಿರುವ ಭೂಮಿ, ಇವಿಷ್ಟೇ ಅಂತರಿಕ್ಷಕ್ಕೂ ಭೂಮಿಗೂ ಇರುವ ಸಂಪರ್ಕ. ಉಳಿದಂತೆ ಈ ನಮ್ಮ ಸಣ್ಣ ಗ್ರಹ ತನ್ನ ಪಾಡನ್ನು ತಾನೇ ನೋಡಿಕೊಳ್ಳಬೇಕಾದ ಸರ್ವತಂತ್ರ ಸ್ವತಂತ್ರ.

ಕಾರ್ಲ್ ಸಾಗನ್(carl sagan) ಹೇಳುವಂತೆ ವಾತಾವರಣದ ಅಣುಗಳಿಗೆ ತಲೆ ಇಲ್ಲ(stupid). ಕಾರ್ಖಾನೆಗಳು ಉಗುಳುವ ಕೊಳಕು ಮಾಲಿನ್ಯಗಳು, ವಾತಾವರಣದ ಶಾಖ ಹೆಚ್ಚಿಸುವ ಅನಿಲಗಳು, ಓಝೋನ್ ಪದರ ತಿನ್ನುವ ರಾಸಾಯನಿಕಗಳ ಬಗೆಗೆ ಅವುಗಳಿಗೆ ಯಾವುದೇ ಜೈವಿಕ ಜ್ಞಾನ ಇಲ್ಲ. ಈ ಎಲ್ಲಾ ಜ್ಞಾನಗಳನ್ನೂ ಅರಗಿಸಿಕೊಂಡು ಬುದ್ದಿವಂತರಾಗಿರುವ ನಮ್ಮ ದುರಾಸೆಯಿಂದ ಉಂಟಾದ ವಿಷಗಳೊಂದಿಗೆ ಭೌತಿಕವಾಗಿ ಮತ್ತು ರಾಸಾಯನಿಕವಾಗಿ ಸ್ಪಂದಿಸುತ್ತಾ ನಮ್ಮ ವಾತಾವರಣ ನಿರಂತರವಾಗಿ, ನಮ್ಮ ಅಪೇಕ್ಷೆಗೆ ವಿರುದ್ಧವಾಗಿ ಬದಲಾಗುತ್ತಿದೆ. ಈ ಎಲ್ಲಾ ಜಾಗತಿಕ ಸಮಸ್ಯೆಗಳಿಗೆ ಜಾಗತಿಕ ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಭೂಮಿಯ ಮೇಲಿನ ಬದುಕು ಅಸಹನೀಯವಾಗಲಿದೆ.

ನಮ್ಮ ಗ್ರಹ ಭೂಮಿಯ ವಾತಾವರಣ ಈಗ ಹೀಗಿದೆ. ಗ್ರಹಗಳು ಭೂಮಿಯಂತೆಯೇ ಇರಬೇಕೆಂಬ ನಿಯಮವೇನಿಲ್ಲ. ಸೌರಮಂಡಲದ ಬುಧ, ಶುಕ್ರ, ಮಂಗಳ ಮುಂತಾದ ಗ್ರಹಗಳನ್ನು ಗಮನಿಸಿದಾಗ ಗ್ರಹಗಳು ಬೇರೆ ರೀತಿಯಲ್ಲೂ ರೂಪುಗೊಳ್ಳಲು ಸಾಧ್ಯ ಎಂದು ತಿಳಿದುಬರುತ್ತದೆ. ಭೂಮಿ ಈ ರೀತಿ ರೂಪುಗೊಂಡಿರುವುದು ಆಕಸ್ಮಿಕ. ರೂಪುಗೊಂಡಾಗಿನಿಂದ ಹಲವಾರು ಬಿಲಿಯನ್ ವರ್ಷಗಳ ಭೌತಿಕ, ಜೈವಿಕ ಚಟುವಟಿಕೆಗಳಿಂದಾಗಿ ನಮ್ಮ ಭೂಮಿಯ ವಾತಾವರಣ ‘ಈಗ’ ಹೀಗಿದೆ. ಜಾಗತಿಕ ವಾತಾವರಣದ ಸಮಸ್ಯೆಗಳನ್ನು ಭೂಮಿಯಲ್ಲಿಯೇ ಕುಳಿತು ಮಾಹಿತಿ ವಿಶ್ಲೇಷಣೆ ಮಾಡಿ ತಿಳಿದುಕೊಳ್ಳಬಹುದು. ಆದರೆ ಇದು ‘ಕೂಪಮಂಡೂಕ’ ಮಾದರಿಯ ಅಧ್ಯಯನವಾಗುತ್ತದೆ. ಜಾಗತಿಕ ವಾತಾವರಣದಂತಹ ಸಂಕೀರ್ಣ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ಇದಿಷ್ಟೇ ಸಾಲದು. ಬೇರೆ ಗ್ರಹಗಳ ವಾತಾವರಣ ಹೇಗಿದೆ? ಅಲ್ಲೇಕೆ ಜೀವವಿಕಾಸ ಆಗಿಲ್ಲ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಅನ್ಯ ಗ್ರಹಗಳನ್ನು ಅಧ್ಯಯನ ಮಾಡಿದರೆ ನಮ್ಮ ಗ್ರಹದ ವಿಶೇಷತೆ ತಿಳಿಯುತ್ತದೆ. ಮತ್ತು ನಮ್ಮ ಅತಿರೇಕದಿಂದ ಬೇರೆ ಗ್ರಹಗಳ ದಾರಿಯನ್ನು ಭೂಮಿಯೂ ಹಿಡಿಯಬಾರದು ಎಂಬ ಅರಿವೂ ಮೂಡುತ್ತದೆ. ಈ ರೀತಿಯ ಅಧ್ಯಯನವನ್ನು ‘ಅನ್ವಯಿಕ ಗ್ರಹವಿಜ್ಞಾನ’(comparative planetology as called by Robert Goddard) ಎನ್ನಬಹುದು. ವಾಸ್ತವವಾಗಿ ಜಾಗತಿಕ ವಾತಾವರಣ ಸಮಸ್ಯೆಗಳಾದ ‘ತಾಪಮಾನ ಹೆಚ್ಚಳ’(global warming), ‘ಹಸಿರುಮನೆ ಪರಿಣಾಮ’(green house effect),’ಓಝೋನ್ ರಂಧ್ರ’ ಮೊದಲಾದವು ಆಕಸ್ಮಿಕವಾಗಿ ಬೆಳಕಿಗೆ ಬಂದಿದ್ದು ಈ ಅನ್ಯಗ್ರಹಗಳ ಅಧ್ಯಯನದಿಂದಲೇ.

ಓಝೋನ್ ಕವಚದಲ್ಲಿ ರಂಧ್ರ
------------------------
ಸಿ.ಎಫ್.ಸಿ ಅಥವ ಕ್ಲೋರೋಫ್ಲೂರೋಕಾರ್ಬನ್(chloroflorocarbon) ಎಂಬ ಹೆಸರನ್ನು ನಾವೆಲ್ಲರೂ ಕೇಳಿದ್ದೇವೆ. ಫ್ರಿಜ್, ಹವಾನಿಯಂತ್ರಕಗಳು, ಎಲೆಕ್ಟ್ರಾನಿಕ್ಸ್, ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ಬಳಸಲ್ಪಡುವ ಬಹು ಉಪಯೋಗಿ ವಸ್ತು ಸಿ.ಎಫ್.ಸಿ. ಭೂಮಿಯ ಮೇಲೆ ಅತ್ಯಂತ ನಿರುಪಾಯಕಾರಿಯಾದ ಜಡ ರಾಸಾಯನಿಕ ಈ ಸಿ.ಎಫ್.ಸಿ. ಆದರೆ ಓಝೋನ್ ವಲಯದ ಅತಿನೇರಳೆ ಕಿರಣಗಳ ಸಂಪರ್ಕಕ್ಕೆ ಬಂದೊಡನೆ ಇದು ವಿಭಜನೆಗೊಂಡು ಓಝೋನ್ ನೊಂದಿಗೆ ಪ್ರತಿಕ್ರಿಯಿಸಿ ಓಝೋನ್ ವಲಯವನ್ನು ಛಿದ್ರಗೊಳಿಸುತ್ತದೆ. ಕೇವಲ ಒಂದು ಕೆಜಿ ಸಿ.ಎಫ್.ಸಿ. ಹತ್ತುಸಾವಿರ ಕೆಜಿ ಓಝೋನ್ ಅಣುಗಳನ್ನು ನಿರ್ನಾಮ ಮಾಡಬಲ್ಲದು ಎಂದು ತಿಳಿದುಬಂದಿದೆ. ಸಿ.ಎಫ್.ಸಿ. ಗಳು ನೂರಾರು ವರ್ಷಗಳ ಕಾಲ ಉಳಿದು ನಿರಂತರವಾಗಿ ವಾತಾವರಣವನ್ನು ಹಾಳುಗೆಡುವುತ್ತವೆ. ಅಷ್ಟೇ ಅಲ್ಲ. ಈ ಸಿ.ಎಫ್.ಸಿ. ಗಳನ್ನು ಶಾಖವನ್ನು ಹಿಡಿದಿಟ್ಟುಕೊಳ್ಳಬಲ್ಲವ ‘ಸ್ಪಂಜ್’ ಗಳೆನ್ನಬಹುದು. ಒಂದು ಸಿ.ಎಫ್.ಸಿ. ಅಣು ಹತ್ತುಸಾವಿರ ಇಂಗಾಲದ ಡಯಾಕ್ಸೈಡ್ ಗಳಷ್ಟು ಪ್ರಮಾಣದ ಶಾಖವನ್ನು ಹೀರಬಲ್ಲವು. ನಾವು ಚಳಿ, ಮಳೆಯಿಂದ ರಕ್ಷಣೆ ಪಡೆಯಲು ತಲೆಯ ಮೇಲೆ ಸೂರು ನಿರ್ಮಿಸಿಕೊಂಡಂತೆ, ನಿರಂತರವಾಗಿ ಬೀಳುವ ಅತಿನೇರಳೆ ಕಿರಣಗಳ ಮಳೆಯಿಂದ ಭೂಮಿ ರಕ್ಷಣೆ ಪಡೆಯುವುದು ಈ ‘ಓಝೋನ್ ವಲಯ’ ಎಂಬ ತೆಳ್ಳಗಿನ ರಕ್ಷಣಾ ಸೂರಿನಿಂದ. ಛಿದ್ರಗೊಂಡ ಓಝೋನ್ ಸೂರಿನಿಂದ ಒಳಬರುವ ಅತಿನೇರಳೆ ಕಿರಣಗಳು ಜೀವಿಗಳಲ್ಲಿ ಕ್ಯಾನ್ಸರ್ ಉಂಟುಮಾಡುತ್ತವೆ. ಮತ್ತು ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನೇ ಬುಡಮೇಲು ಮಾಡುತ್ತವೆ. ಓಝೋನ್ ರಕ್ಷಣೆ ಇಲ್ಲದಿದ್ದರೆ ಏನಾಗಬಹುದು?. ‘ಮಂಗಳ’ ಗ್ರಹದ ಪರಿಸ್ಠಿತಿ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡುತ್ತದೆ. ಮಂಗಳನಿಗೆ ಓಝೋನ್ ರಕ್ಷಣಾ ಕವಚ ಇಲ್ಲ. ಅತಿನೇರಳೆ ಕಿರಣಗಳು ನೇರವಾಗಿ ಮೇಲ್ಮೈ ತಲುಪಿ ಅದು ನಾವು ಗಾಯ ತೊಳೆಯಲು ಬಳಸುವ ಹೈಡ್ರೋಜನ್ ಪೆರಾಕ್ಸೈಡ್ ನಂತಹ ಅಣುಗಳಿಂದ ಕೂಡಿದೆ. ಮಂಗಳನಲ್ಲಿ ಇಳಿದ ಗಗನನೌಕೆಗಳು ಅಲ್ಲಿ ಜೀವಿಗಳು ಇಲ್ಲ ಎಂದು ದೃಢೀಕರಿಸಿವೆ. ಜೀವೋತ್ಪತ್ತಿಗೆ ಬೇಕಾದ organic molecules ಅಲ್ಲಿ ಕನಿಷ್ಟ ಪ್ರಮಾಣದಲ್ಲಿವೆ ಹಾಗೂ ಅತಿನೇರಳೆ ಕಿರಣಗಳಿಂದ ಭಸ್ಮವಾಗಿವೆ. ಭೂಮಿಯಿಂದ ಕೊಂಡೊಯ್ದು ಮಂಗಳನಲ್ಲಿ ಸಿಂಪಡಿಸಿದ organic molocules ಕ್ಷಣಾರ್ಧದಲ್ಲಿ ಭಸ್ಮವಾದವು ಎಂದು ವೈಕಿಂಗ್ ಗಗನನೌಕೆ ವರದಿ ರವಾನೆ ಮಾಡಿದೆ. ಭೂಮಿಯ ಓಝೋನ್ ಕವಚ ಛಿದ್ರಗೊಂಡರೆ ನಮಗೂ ಇದೇ ಗತಿಯಲ್ಲವೇ?

ಸಿ.ಎಫ್.ಸಿ ಓಝೋನ್ ಪದರದಲ್ಲಿ ರಂಧ್ರ ಮಾಡುತ್ತಿದೆ ಎಂದು ತಿಳಿದುಬಂದಿದ್ದು ‘ಡು ಪಾಂಟ್’(du pont) ನಂತಹ ದೈತ್ಯ ರಾಸಾಯನಿಕ ಕಂಪನಿಗಳಿಂದಲ್ಲ ಅಥವಾ ಸರ್ಕಾರಿ ಸಂಶೋಧನಾ ಸಂಸ್ಥೆಗಳಿಂದಲೂ ಅಲ್ಲ. ಇದನ್ನು ಆಕಸ್ಮಿಕವಾಗಿ ಬೆಳಕಿಗೆ ತಂದದ್ದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಭೌತವಿಜ್ಞಾನಿಗಳಾದ ಷೆರ್ವುಡ್ ರೋಲ್ಯಾಂಡ್(sherwood rowland) ಮತ್ತು ಮಾರಿಯೋ ಮೊಲೀನ(mario molina).ಇವರಿಗೂ ಸಿ.ಎಫ್.ಸಿ.ಗಳ ಕುರಿತು ಸಂಶೋಧನೆ ನಡೆಸುವ ಉದ್ದೇಶವಿರಲಿಲ್ಲ. ಶುಕ್ರ ಗ್ರಹದ ವಾತಾವರಣದಲ್ಲಿ ಕ್ಲೋರೀನ್ ಮತ್ತು ಫ್ಲೋರೀನ್ ರಾಸಾಯನಿಕಗಳು ಯಾವ ರೀತಿಯ ರಾಸಾಯನಿಕ ಕ್ರಿಯೆಗಳಲ್ಲಿ ಭಾಗಿಯಾಗಿವೆ ಎಂದು ತಿಳಿಯಲು ಇವರು ಸಂಶೋಧನೆ ನಡೆಸುತ್ತಿದ್ದರು. ಈ ಸಂಶೋಧನೆ ವೇಳೆಯಲ್ಲಿ ವಾತಾವರಣದಲ್ಲಿ ಸಿ.ಎಫ್.ಸಿ. ವಹಿಸುವ ಖಳನಾಯಕನ ಪಾತ್ರ ಬಯಲಾಯಿತು.

‘ಹಸಿರುಮನೆ ಪರಿಣಾಮ’
--------------------

‘ಶುಕ್ರ’ ಭೂಮಿಯದೇ ಗಾತ್ರದ, ಅದರ ಜತೆಯೇ ರೂಪುಗೊಂಡ, ನಮಗೆ ಅತಿಹತ್ತಿರದ ಗ್ರಹ. ಈ ಸುಂದರಿ(ವೀನಸ್ ಗ್ರೀಕರ ಸೌಂದರ್ಯ ದೇವತೆ) ಸೋದರಿಯಿಂದ ಬರುವ ರೇಡಿಯೋ ತರಂಗಗಳನ್ನು ಪ್ರಥಮ ಬಾರಿಗೆ ಸಂಗ್ರಹಿಸಿದ ವಿಜ್ಞಾನಿಗಳು ಅವಾಕ್ಕಾದರು. ಅತ್ಯಂತ ತಾಪಮಾನದ, ಕುದಿಯುತ್ತಿರುವ ವಸ್ತುವೊಂದು ಹೊರಡಿಸಬಹುದಾದ ರೇಡಿಯೋ ತರಂಗಗಳನ್ನು ಈ ಗ್ರಹ ಹೊರಡಿಸುತ್ತಿತ್ತು. ನಮ್ಮ ನೆರೆಯ ಸುಂದರಿ ಏಕೆ ಕೋಪದಿಂದ ಕುದಿಯುತ್ತಿದ್ದಾಳೆ?. ೧೯೭೮ ರಲ್ಲಿ ಶುಕ್ರಗ್ರಹಕ್ಕೆ ಭೇಟಿ ನೀಡಿದ ಪಯೋನೀರ್ ೧೨(pioneer 12) ಗಗನನೌಕೆ ಶುಕ್ರನಲ್ಲಿನ ಕುದಿಯುವ ವಾತಾವರಣಕ್ಕೆ ‘ಹಸಿರುಮನೆ ಪರಿಣಾಮ’ವೇ ಕಾರಣ ಎಂದು ತಿಳಿಸಿದೆ.

ನಮ್ಮ ಭೂಮಿಗೆ ಎಂದೂ ಮುಗಿಯದ ದಿನಚರಿಯೊಂದಿದೆ. ನಿರಂತರವಾಗಿ ಬೆಳಕು ಮತ್ತು ಶಾಖಗಳ ಸೂರ್ಯಸ್ನಾನ ಮಾಡುವುದು. ಒಳಬಂದ ಶಾಖವನ್ನು ಹೀರಿ, ಉಳಿದ ಶಾಖ ಬೆಳಕನ್ನು ಭೂಮಿ ಪ್ರತಿಫಲಿಸುತ್ತದೆ. ಪ್ರತಿಫಲನಗೊಂಡ ಶಾಖದ ಸ್ವಲ್ಪ ಭಾಗವನ್ನು ಗಾಳಿಯಲ್ಲಿರುವ ಇಂಗಾಲದ ಡಯಾಕ್ಸೈಡ್, ನೀರಿನ ಹಬೆ, ಮೀಥೇನ್, ಸಿ.ಎಫ್.ಸಿ. ಮೊದಲಾದ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಅನಿಲಗಳು ಹೀರಿ ಶೇಖರಿಸಿಟ್ಟುಕೊಳ್ಳುತ್ತವೆ. ಉಳಿದ ಶಾಖ ಅಂತರಿಕ್ಷಕ್ಕೆ ಚೆದುರಿಹೋಗುತ್ತದೆ. ವಾತಾವರಣದಲ್ಲಿನ ವಿವಿಧಾಂಶಗಳಾದ ಇಂಗಾಲದ ಡಯಾಕ್ಸೈಡ್, ನೈಟ್ರಿಕ್ ಆಕ್ಸೈಡ್, ನೀರಿನ ಹಬೆ, ಮೀಥೇನ್, ಮೊದಲಾದ ಅನಿಲಗಳು ಯಾವ ಪ್ರಮಾಣದಲ್ಲಿದ್ದರೆ ಅವು ಎಷ್ಟೆಷ್ಟು ಶಾಖವನ್ನು ಹೀರಿ ಸಂಗ್ರಹಿಸಬಲ್ಲವು ಎಂದು ಅಧ್ಯಯನ ಮಾಡಲಾಗಿದೆ ಮತ್ತು ಇದರ ಆಧಾರದಲ್ಲಿ ‘ಕಂಪ್ಯೂಟರ್ ವಾತಾವರಣದ ಮಾದರಿ’ಯನ್ನೂ ರೂಪಿಸಿದ್ದಾರೆ. ವಾತಾವರಣದಲ್ಲಿನ ವಿವಿಧ ಅನಿಲಗಳ ಪ್ರಮಾಣ ಮತ್ತು ಅವುಗಳ ವಾರ್ಷಿಕ ವೃದ್ಢಿಯ ಪ್ರಮಾಣವನ್ನು ಈ ‘ಮಾದರಿ’ಯಲ್ಲಿ ತುಂಬಿದರೆ ಅದು ಮುಂದಿನ ಸಂಭವನೀಯ ವಾತಾವರಣದ ಚಿತ್ರಣವನ್ನು ನೀಡುತ್ತದೆ. ಭೂಮಿಯಲ್ಲಿನ ವಾತಾವರಣ ಹಿಂದೆ ಹೇಗಿತ್ತು ಎಂದು ತಿಳಿದಿದೆ. ಈ ಮಾಹಿತಿಗಳನ್ನು ‘ಕಂಪ್ಯೂಟರ್ ವಾತಾವರಣ ಮಾದರಿ’ಗೆ ಅಳವಡಿಸಿದಾಗ ಅದು ಭೂಮಿಯ ವಿವಿಧ ಕಾಲಘಟ್ಟಗಳ ವಾತಾವರಣದ ಕುರಿತು ಸರಿಯಾದ ಊಹೆಯನ್ನೇ ಮಾಡಿದೆ. ವಾತಾವರಣದ ಇಂಗಾಲದ ಡಯಾಕ್ಸೈಡ್ ಮೊದಲಾದ ಅನಿಲಗಳು ಹೆಚ್ಚಿದರೆ ವಾತಾವರಣ ಏನಾಗಬಹುದು ಎಂದು ಈ ‘ಮಾದರಿ ದೃಷ್ಟಿ’ಯಲ್ಲಿ ನೋಡಿದಾಗ ಅವು ಭಯಾನಕ ಚಿತ್ರಣವನ್ನು ತೋರಿಸುತ್ತವೆ. ಈ ಚಿತ್ರಣ ಇತ್ತೀಚಿನ ದಿನಗಳಲ್ಲಿ ನಿಜವಾಗುತ್ತಲೂ ಇದೆ(ಜಾಗತಿಕ ತಾಪಮಾನ ಹೆಚ್ಚಳ, ಏರುವ ಸಾಗರದ ನೀರಿನ ಮಟ್ಟ, ದ್ವೀಪಗಳ ಮುಳುಗಡೆ, ಜೀವನಾಶ ಇತ್ಯಾದಿ). ಗಾಳಿಯಲ್ಲಿ ಇಂಗಾಲದ ಡಯಾಕ್ಸೈಡ್ ಒಂದು ನಿಗದಿತ ಮಟ್ಟವನ್ನು ಮೀರಿದನಂತರ ಇಂಗಾಲದ ಸರಣಿ ಸ್ಫೋಟ ಆರಂಭವಾಗುತ್ತದೆ. ವಾತಾವರಣದ ಶಾಖದಿಂದ ಭುಮಿಯೊಳಗಿನ ಇಂಗಾಲದ deposits ಗಳು ಕಾದು ಮತ್ತಷ್ಟು ಇಂಗಾಲದ ಡಯಾಕ್ಸೈಡ್ ವಾತಾವರಣವನ್ನು ಸೇರುತ್ತದೆ. ಇದರಿಂದ ಮತ್ತಷ್ಟು ಶಾಖ ಏರಿಕೆ, ಮತ್ತಷ್ಟು ಭೂಮಿಯೊಳಗಿನ ಇಂಗಾಲ ಗಾಳಿಗೆ ಬಿಡುಗಡೆ. ಹೀಗೆ ಸರಣಿ ಬಾಂಬ್ ಸ್ಪೋಟಕ್ಕಿಂತ ಭೀಕರವಾದ, ಯಾರೂ ತಡೆಹಿಡಿಯಲಾರದ, ಇಂಗಾಲದ ಸರಣಿ ಸ್ಪೋಟ ಶುರುವಾಗುತ್ತದೆ.

ಭೌತಿಕ ನಿಯಮಗಳು ಸಾರ್ವತ್ರಿಕವೆಂದಾದ ಮೇಲೆ ಈ ‘ಕಂಪ್ಯೂಟರ್ ವಾತಾವರಣದ ಮಾದರಿ’ಗಳು ಬೇರೆ ಗ್ರಹಗಳ ವಾತಾವರಣಕ್ಕೂ ಅನ್ವಯಿಸಬೇಕಲ್ಲವೆ? ಖಂಡಿತ ಆಗಿದೆ. ವಾಸ್ತವವಾಗಿ ಶುಕ್ರನ ವಾತಾವರಣವನ್ನು ಅಧ್ಯಯನ ಮಾಡಲೆಂದೇ ಈ ‘ವಾತಾವರಣ ಮಾದರಿ’ ರೂಪುಗೊಂಡಿದ್ದು. ನಾಸಾ(NASA)ದ ವಿಜ್ಞಾನಿ ಜೇಮ್ಸ್ ಹ್ಯಾನ್ಸೆನ್(james hansen) ಶುಕ್ರಗ್ರಹದ ಪರಿಣಿತ. ಶುಕ್ರನ ಬಗೆಗೆ ಗಂಭೀರ ಅಧ್ಯಯನಗಳನ್ನು ನಡೆಸಿದ್ದಾರೆ. ಅಲ್ಲಿನೆ ವಾತಾವರಣವನ್ನು ಅರ್ಥಮಾಡಿಕೊಳ್ಳಲೆಂದೇ ವಿಶೇಷ ‘ವಾತಾವರಣ ಮಾದರಿ’ ತಯಾರಿಸಿ ಅದು ನೀಡಿದ ಮಾಹಿತಿಯನ್ನು ವಿಶ್ಲೇಷಿಸಿ ಶುಕ್ರನ ಕುದಿಯುತ್ತಿರುವ ವಾತಾವರಣಕ್ಕೆ ‘ಹಸಿರುಮನೆ ಪರಿಣಾಮ’ವೇ ಕಾರಣ ಎಂದು ಅವರು ತೀರ್ಮಾನಿಸಿದ್ದಾರೆ. ಉಷ್ಣವಲಯದ ಹೂ,ಹಣ್ಣು, ತರಕಾರಿಗಳನ್ನು ಬೆಳೆಯಲು ಬಳಸುವ ‘ಹಸುರುಮನೆ’ಯಲ್ಲಿ ಶಾಖ ಹೊರಗೆ ಹೋಗದಂತೆ ಹೊದಿಕೆ ಇರುವಂತೆ ಶುಕ್ರನಲ್ಲೂ ಅಗಾಧ ಗಾತ್ರ್ರದ ಇಂಗಾಲದ ಡಯಾಕ್ಸೈಡ್ ಹೊದಿಕೆಯಿದೆ. ಸೂರ್ಯನಿಂದ ಪಡೆದ ಶಾಖ ಮತ್ತೆ ಅಂತರಿಕ್ಷಕ್ಕೆ ಚೆದುರಿಹೋಗದಂತೆ ಈ ಇಂಗಾಲದ ಡಯಾಕ್ಸೈಡ್ ಹೊದಿಕೆ ಅದನ್ನು ಹೀರಿ ಹಿಡಿದಿಟ್ಟಿದೆ. ಜೇಮ್ಸ್ ಹ್ಯಾನ್ಸನ್ ಶುಕ್ರಗ್ರಹ ಅದ್ಯಯನ ಮಾಡಲು ಬಳಸಿದ ಮಾದರಿಯನ್ನೇ ಭೂಮಿಗೂ ಬಳಸಿದರು. ಕಳೆದ ನೂರು ವರ್ಷಗಳ ವಾತಾವರಣದ ಮಾಹಿತಿಯನ್ನು ಕಲೆಹಾಕಿ ‘ಕಂಪ್ಯೂಟರ್ ವಾತಾವರಣ ಮಾದರಿ’ ನೀಡಿದಂತ ಊಹೆಗೆ ಹೋಲಿಸಿ ಅವೆರಡೂ ತಾಳೆಯಾಗುವುದನ್ನು ಪತ್ತೆಹಚ್ಚಿದರು. ಅಮೇರಿಕಾ ಕಾಂಗ್ರೆಸ್ ಮತ್ತು ಅಲ್ಲಿನ industry ಲಾಬಿಗೆ ಒಳಗಾಗದೆ ತಮ್ಮ ಅಧ್ಯಯನವನ್ನು ಪ್ರಚುರಪಡಿಸಿದ್ದಾರೆ.

ಜಾಗತಿಕ ತಾಪಮಾನ ಹೆಚ್ಚಳ(global warming) ಕುರಿತು ಇನ್ನೂ (ಜಾಣ)ಸಂಶಯ ವ್ಯಕ್ತಪಡಿಸುವವರು, ಶುಕ್ರನ ಮೇಲೆ ವಿಜೃಂಭಿಸುತ್ತಿರುವ ‘ಹಸುರುಮನೆ ಪರಿಣಾಮ’ದಿಂದ ಪಾಠ ಕಲಿಯಬೇಕು. ಇದರರ್ಥ ಶುಕ್ರನ ಮೇಲಿನ ಜೀವಿಗಳು ಅತಿಯಾಗಿ ಕಲ್ಲಿದ್ದಲು ಅಥವಾ ಪೆಟ್ರೂಲ್ ಉರಿಸಿದರು ಅಥವಾ ಮಂಗಳನ ಮೇಲೆ ಅತಿಯಾದ ಹವಾನಿಯಂತ್ರಕಗಳನ್ನು ಅಳವಡಿಸಿದ್ದರಿಂದ ಅಲ್ಲಿನ ಓಝೋನ್ ನಾಶವಾಯಿತು ಎಂದಲ್ಲ. ಅವೆರಡೂ ಗ್ರಹಗಳಲ್ಲಿ ಜೀವಿಗಳ ಉಗಮ ಅಥವಾ ವಿಕಾಸಕ್ಕೆ ಬೇಕಾದ ವಾತಾವರಣ ಮೂಡಲೇ ಇಲ್ಲ. ಆದರೆ ಜೀವವಿಕಾಸಕ್ಕೆ ಪೂರಕವಾದ ವಾತಾವರಣವಿರುವ ಈ ಏಕೈಕ ಭೂಮಿ ನಮ್ಮೆಲ್ಲಾ ಅನಾಹುತಕಾರಿ ನಡವಳಿಕೆಗಳ ಹೊರತಾಗಿಯೂ ತನ್ನ ವಾತಾವರಣವನ್ನು ತನ್ನಷ್ಟಕ್ಕೆ ತಾನೇ ಸರಿಪಡಿಸಿಕೊಳ್ಳಬಹುದು ಎನ್ನುವವರು ಶುಕ್ರ ಮತ್ತು ಮಂಗಳ ಗ್ರಹಗಳನ್ನು ನೋಡಬೇಕು. ವಾತಾವರಣವನ್ನು ಬಿಟ್ಟರೆ ಭೂಮಿಯನ್ನು ಬಹುತೇಕ ಹೋಲುವ ಈ ಗ್ರಹಗಳ ವಾತಾವರಣದ ಇತಿಹಾಸ ನಮ್ಮಗಳ ಕಣ್ಣನ್ನು ತೆರೆಸಬೇಕು.

ಮತ್ತೊಮ್ಮೆ ಬಾಹ್ಯಾಕಾಶದಿಂದ ಭೂಮಿಯನ್ನು ವೀಕ್ಷಿಸೋಣ. ಜಗತ್ತನ್ನು ಇಂದು ಕಾಡುತ್ತಿರುವ ಧರ್ಮಾಂಧತೆ, ಭಾಷಾಂಧತೆ, ಭಯೋತ್ಪಾದನೆ ಮೊದಲಾದ ಸಮಸ್ಯೆಗಳು, ದೂರದ ನೀಲಿ ಚೆಂಡಿನಲ್ಲಿ ಕ್ಷುಲ್ಲಕವೆನಿಸಿ ‘ನಮಗಿರುವುದೊಂದೇ ಭೂಮಿ’ ಎಂಬ
ಅರಿವು ಮೂಡಲು ಸಾಧ್ಯ.