ಶ್ರೀಕಾಂತ ಕೃತಿ ಸೌರಭ

Submitted by hamsanandi on Sat, 11/28/2009 - 01:04
ಬರಹ

ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ ಹಲವು ರಚನೆಗಳನ್ನು ಕೇಳಿದ್ದರಿಂದ ಈ ಕಾಯುವಿಕೆ ಸಹಜವೂ ಆಗಿತ್ತು.
ಮೊನ್ನೆ ಮೊನ್ನೆ ಈ ಜೋಡಿ ಸಿಡಿಗಳು ಬಂದ ಮೇಲೆ ನಾಕಾರು ಬಾರಿ ಕೇಳಿದ್ದೂ ಆದಮೇಲೆ ಕೆಲವು ಅನಿಸಿಕೆಗಳನ್ನು ಬರೆಯಹೊರಟೆ.

ಈ ಜೋಡಿ ಸಿಡಿಗಳಲ್ಲಿ ಕನ್ನಡ, ಸಂಸ್ಕೃತ ಮತ್ತು ಸಂಕೇತಿ ನುಡಿಗಳಲ್ಲಿ ರಚಿತವಾದ ರಚನೆಗಳನ್ನು ಪ್ರಸ್ತುತಪಡಿಸಲಾಗಿದೆ. ಸಂಕೇತಿ ಮಾತಾಡುವರಲ್ಲಿ ಹಲವಾರು ಪ್ರಸಿದ್ಧ ಸಂಗೀತಗಾರರಿದ್ದರೂ, ಸಂಕೇತಿ ನುಡಿಯಲ್ಲಿ ಮೊದಮೊದಲು ಈ ರೀತಿ ಸಂಗೀತರಚನೆಗಳನ್ನು ಮಾಡಿರುವುದರಲ್ಲಿ ಮೊದಲಾಗಿರುವುದಕ್ಕೆ ಶ್ರೀಕಾಂತ್ ಮೂರ್ತಿ ಅವರನ್ನು ಅಭಿನಂದಿಸುವೆ. ಮೊದಲನೇ ಸಿಡಿಯಲ್ಲಿ ವಿದುಷಿ ಟಿ.ಎಸ್.ಸತ್ಯವತಿ ಮತ್ತು ಅವರ ಶಿಷ್ಯರು ಹಾಡಿರುವ ಒಂಬತ್ತು ರಚನೆಗಳಿದ್ದು, ಎರಡನೇ ಸಿಡಿ ಯಲ್ಲಿ ವಿದುಷಿ ಸುಕನ್ಯಾ ಪ್ರಭಾಕರ್ ಅವರು ಹಾಡಿರುವ ಐದು ರಚನೆಗಳಿವೆ.

ಕರ್ನಾಟಕ ಸಂಗೀತದಲ್ಲಿ ಇರುವ ಹಲವಾರು ಬಗೆಯ ರಚನೆಗಳಾದ ವರ್ಣ, ಕೃತಿ, ಪದ - ಇವೆಲ್ಲ ಪ್ರಕಾರಗಳೂ ಇಲ್ಲಿವೆ. ಜನಪ್ರಿಯ ರಾಗಗಳಾದ ಕಾಂಬೋಧಿ, ಮಧ್ಯಮಾವತಿ, ಆನಂದ ಭೈರವಿ, ಸುರಟಿ, ಗೌಳ ಮೊದಲಾದ ರಾಗಗಳಲ್ಲೂ, ಹಾಗೇ ಸಂಗೀತ ರಸಿಕರಿಗೆ ಸ್ವಲ್ಪ ಅಪರಿಚಿತವೇ ಎನ್ನಬಹುದಾದ ಗೌರೀವೇಳಾವಳಿ, ಜಯಶುದ್ಧಮಾಳವಿ, ಕೋಕಿಲಾರವ ಮೊದಲಾದ ಅಸಂಪೂರ್ಣ ಮೇಳರಾಗಗಳಲ್ಲಿರುವ ರಚನೆಗಳೂ ಇಲ್ಲಿವೆ. ಈ ಗೇಯ ರಚನೆಗಳು ಉತ್ತಮ ಸಾಹಿತ್ಯ ಹಾಗೂ ರಾಗ ಭಾವದಿಂದ ಕೂಡಿದ್ದು, ಸಂಗೀತ ಕಚೇರಿಯಲ್ಲಿ ಪ್ರಸ್ತುತ ಪಡಿಸಲು ಬಹಳ ತಕ್ಕವಾಗಿವೆ. ಈ ಸಿಡಿ ಗಳಲ್ಲಿ ರಾಜರಾಜಂದೇ ರಥು(ಮಧ್ಯಮಾವತಿ ರಾಗ), ಕಂಗಳು ಕಾಂಬೋದಿಲ್ಲವೆ (ಕಾಂಬೋದಿ ರಾಗ), ಮೀನಾಕ್ಷಿ ಮನಸು ಕಲ್ಲಾ? (ಆನಂದಭೈರವಿ ರಾಗ)- ಈ ರಚನೆಗಳನ್ನು ವಿಸ್ತಾರವಾಗಿ ಆಲಾಪನೆ, ನೆರವಲು, ಕಲ್ಪನಾ ಸ್ವರಗಳೊಂದಿಗೆ ಹಾಡಿರುವುದು ಹಾಡುಗಾರರು ಮನೋಧರ್ಮದೊಡನೆ ಈ ರಚನೆಗಳನ್ನು ರಂಜಕವಾಗಿ ಹಾಡಬಹುದು ಎನ್ನುವುದಕ್ಕೆ ತಕ್ಕ ನಿದರ್ಶನ.

ವಾಗ್ಗೇಯಕಾರರ ಮೇಲೆ ಮುತ್ತುಸ್ವಾಮಿ ದೀಕ್ಷಿತರ ಪ್ರಭಾವ ಬಹಳಷ್ಟೇ ಆಗಿರುವುದು ಕಂಡುಬರುತ್ತದೆ. ಇಲ್ಲಿ ಬಳಸಿರುವ ರಾಗಗಳಲ್ಲಿ ನಾಗಧ್ವನಿ, ಕೋಕಿಲಾರವ, ನಾರೀ ರೀತಿಗೌಳ, ದೇಶಿ ಸಿಂಹರವ ಮೊದಲಾದವುಗಳೆಲ್ಲ ಮುತ್ತುಸ್ವಾಮಿ ದೀಕ್ಷಿತರ ಪರಂಪರೆಯವೇ. ಈ ರಾಗಗಳಲ್ಲಿ  ದೀಕ್ಷಿತರ ಕೆಲವೇ ರಚನೆಗಳನ್ನು ಬಿಟ್ಟು ಬೇರೆ ರಚನೆಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಇಂತಹ ರಾಗಗಳಲ್ಲಿ ರಚನೆ ಮಾಡಿ ಶ್ರೀಕಾಂತ್ ಅವರು ಈ ರಾಗಗಳಿಗೆ ಹೊಸ ಲಕ್ಷ್ಯ ಕಲ್ಪಿಸಿ ಮೆಚ್ಚಬೇಕಾದಂತಹ ಕೆಲಸ ಮಾಡಿದ್ದಾರೆ. ದೀಕ್ಷಿತರು ರಚನೆಗಳಲ್ಲಿ ರಾಗದ ಹೆಸರುಗಳನ್ನು ರಚನೆಗಳಲ್ಲಿ ಬರುವಂತೆ ಚಮತ್ಕಾರವಾದ ಸಾಹಿತ್ಯವನ್ನು ಬರೆದಿರುವುದನ್ನೇ ಶ್ರೀಕಾಂತ್ ಅವರು ಮೇಲ್ಪಂಕ್ತಿಯಾಗಿ ಮಾಡಿಕೊಂಡಿರುವಂತೆ ತೋರುತ್ತದೆ. ಈ ಸಿಡಿ ಗಳಲ್ಲಿ ಇರುವ ಕೆಲವು ಕೃತಿಗಳಲ್ಲಿ ಬರುವ ರಾಗಮುದ್ರೆಗಳನ್ನು ಇಲ್ಲಿ ಹೇಳುವುದು ಸರಿ ಎನ್ನಿಸುತ್ತೆ.

೧. ಕೃಷ್ಣನ ಕಳ್ಳಾಟಗಳನ್ನು ಗೆಳತಿಗೆ ಅರುಹುವ ಗೋಪಿಯು ಹಾಡುವಂತಹ ಪದವು "ಕಳ್ಳನಾರೀ ರೀತಿ ಕೌಳಿಕವ ಮಾಡಿದ?" ಎಂದು  ಮಾತಿನಿಂದ ಮೊದಲಾಗಿದ್ದು, ಅದು 'ನಾರೀ ರೀತಿಗೌಳ' ದಲ್ಲಿ ರಚಿತವಾಗಿದೆ.
೨. "ಕಂಗಳು ಕಾಂಬೋದಿಲ್ಲವೇ? ಕಂದನ ನೋಡಲು ಲಕ್ಷ್ಮೀ" ಎಂದು ಮೊದಲಾಗುವ ಕಾಂಬೋದಿ ರಾಗದ ರಚನೆ
೩. "ರಾಮ ಉಂಕೋಕಿಲ್ಲ? ರವಯತ್ನೆಯೂ ಕನಿಕರೊ": (ರಾಮ ನಿನಗೇಕಿಲ್ಲ ರವೆಯಷ್ಟೂ ಕನಿಕರ) ಎಂದು ಮೊದಲಾಗುವ ಕೋಕಿಲಾರವ ರಾಗದ ರಚನೆ. (ಇದು ಸಂಕೇತಿ ಮಾತಿನಲ್ಲಿದೆ)
೪. "ಪಾಲನ ಪಣ್ಣ ಗೌರೀ ವೇಳ ವಳಿಕಾಣಾದಿಕ್ಕರ ಭಕ್ತಾಳಾ": (ಪಾಲಿಸುತಿರಲುದುವೇ ಸಮಯವು ಗೌರೀ, ದಾರಿ ಕಾಣದಿಹ ಭಕ್ತರನು) ಅಂದು ಮೊದಲಾಗುವ ಗೌರೀ ವೇಳಾವಳಿ ರಾಗದ ರಚನೆ (ಇದೂ ಸಂಕೇತಿ ಮಾತಿನಲ್ಲೇ ಇದೆ)

ಶ್ರೀಕಾಂತ್ ಅವರು ಹೀಗೆ ಅರ್ಥಗರ್ಭಿತವಾಗಿ ರಾಗಗಳ ಹೆಸರನ್ನು ರಚನೆಯಲ್ಲಿ ತಂದಿರುವ ಇನ್ನೂ ಕೆಲವು ಕೃತಿಗಳು ಈ ಸಿಡಿ ಗಳಲ್ಲಿವೆ.ಇವುಗಳನ್ನು ಕೇಳುವಾಗ ಮುತ್ತುಸ್ವಾಮಿ ದೀಕ್ಷಿತರ "ಸಂಸಾರ ಭೀತ್ಯಾಪಹೇ" (ಶ್ರೀ ಸರಸ್ವತೀ ನಮೋಸ್ತುತೇ), "ಚಿದ್ಬಿಂಬೌ ಲೀಲಾವಿಗ್ರಹೌ" (ಶ್ರೀ ಪಾರ್ವತೀ - ಬೌಲೀ), "ಅತಿ ಸಮೀಪ ಋಜುಮಾರ್ಗದರ್ಶಿತಂ" (ಚಿಂತಯೇ ಮಹಾಲಿಂಗ್- ಪರಜು)  ಮೊದಲಾದ ಸಾಲುಗಳ ನೆನಪಾಗದಿರದು.

ತ್ಯಾಗರಾಜ, ಪುರಂದರದಾಸರಂತಹ ವಾಗ್ಗೇಯಕಾರರು ತಮ್ಮ ಅಂಕಿತ (ವಾಗ್ಗೇಯಕಾರ ಮುದ್ರೆ)ವನ್ನು ಕೊನೆಯ ಚರಣದಲ್ಲೇ ಇಟ್ಟರೆ, ಮುತ್ತುಸ್ವಾಮಿ ದೀಕ್ಷಿತರು ತಮ್ಮ ಅಂಕಿತವನ್ನು ರಚನೆಯ ಎಲ್ಲಾ ಭಾಗಗಳಲ್ಲೂ ತಂದಿರುವುದು ಇದೆ. ಶ್ರೀಕಾಂತ್ ಅವರು ಸ್ವನಾಮ ಮುದ್ರೆಯನ್ನೇ (ಶ್ರೀಕಾಂತ) ಉಪಯೋಗಿಸಿದ್ದು, ಅದು ರಚನೆಯ ಪಲ್ಲವಿ,ಅನುಪಲ್ಲವಿ ಅಥವ ಚರಣ - ಹೀಗೆ ಯಾವುದಾದರೊಂದು ಭಾಗದಲ್ಲಿ ಇಟ್ಟಿದ್ದಾರೆ. ಉದಾಹರಣೆಗೆ 'ಕಳ್ಳನಾರೀ ರೀತಿ' ಯಲ್ಲಿ, ಮುದ್ರೆಯು 'ಸೃಷ್ಟಿಯಲ್ಲವನನ್ನು ಶ್ರೀಕಾಂತನೆನ್ನುವರಮ್ಮ' ಎಂಬ ಸಾಲು ಚರಣದಲ್ಲಿ ಬಂದರೆ, 'ರಾಮಾ ಉಂಕೋಕಿಲ್ಲ' ದಲ್ಲಿ "ಏಮಾರಿಪಿಯರದೆ ಉಂದೆ ಹೆಚ್ಚಳಮಾ? ಶ್ರೀಕಾಂತು" ಎಂದು ಅನುಪಲ್ಲವಿಯಲ್ಲಿಯೂ ಬಂದಿರುವುದನ್ನು ಗಮನಿಸಬಹುದು. ಹಾಗೇ ಮುತ್ತುಸ್ವಾಮಿ ದೀಕ್ಷಿತರ ರಚನೆಗಳಲ್ಲಿ ಕಂಡುಬರುವಂತಹ ಬಿಸುಪಾದ ಮಧ್ಯಮಕಾಲ ಸಾಹಿತ್ಯವೂ ಕೆಲವು ರಚನೆಗಳಲ್ಲಿ ಇದೆ. ಇವೆಲ್ಲಾ ಅಂಶಗಳಿರುವುದರಿಂದ ಸಂಸ್ಕೃತ ಭಾಷೆಯಲ್ಲಿರುವ, ವಿಳಂಬ ಕಾಲದ  ರಚನೆಗಳಲ್ಲಿ (ನಟರಾಜಂ ಆಲೋಕಯ-ಕೇದಾರ ರಾಗ; ನಾಚಾರಾಂಬಾಂ ನಮಾಮ್ಯಹಂ -ಎರುಕಲ ಕಾಂಭೋಜಿ) ಹಾಗೂ ಮಧ್ಯಮಕಾಲದ ರಚನೆಗಳಲ್ಲಿ (ನರಸಿಂಹ - ಝಂಝೂಟಿ, ಶ್ರಿತಜನ ಹಿತೇ- ನಾಗಧ್ವನಿ ಇತ್ಯಾದಿ) ದೀಕ್ಷಿತರ ಛಾಯೆ ಬಹಳವೇ ಇದೆ. ಎಲ್ಲ ರಚನೆಗಳಲ್ಲೂ ರಾಗ, ಮತ್ತೆ ಹಾಡಿನ ಭಾವಕ್ಕೆ ತಕ್ಕ ಸಂಗತಿಗಳು ಅಳವಡಿಸಲಾಗಿದೆ. ಕೆಲವು ರಚನೆಗಳಲ್ಲಿರುವ ಚಿಟ್ಟೆಸ್ವರಗಳು, ಮತ್ತೆ ಸ್ವರ ಸಾಹಿತ್ಯ ಪ್ರಯೋಗಗಳು ವಾಗ್ಗೇಯಕಾರರ ಪ್ರಬುದ್ಧತೆಗೆ ಸಾಕ್ಷಿಯಾಗಿವೆ.

ಇದಕ್ಕೆ ಬದಲಾಗಿ, ಕನ್ನಡ ಮತ್ತು ಸಂಕೇತಿ ನುಡಿಯಲ್ಲಿರುವ ರಚನೆಗಳು ಸಾಹಿತ್ಯದಲ್ಲಿ ಮನಸ್ಸಿಗೆ ಬಹಳ ಹತ್ತಿರವಾಗುತ್ತವೆ. ಈ ಜೋಡಿ ಸಿಡಿಗಳಲ್ಲಿರುವ ವರ್ಣ,ಪದ,ಮತ್ತೆ ಇನ್ನು ಕೆಲವು ಕೃತಿಗಳನ್ನು ಈ ಸಾಲಿಗೆ ಸೇರಿಸಬಹುದು. ಉದಾಹರಣೆಗೆಂದು ಒಂದು ರಚನೆಯ ಮಾತುವನ್ನು ಇಲ್ಲಿ ಕೊಟ್ಟಿರುವೆ:

ರಾಗ: ನಾರೀ ರೀತಿಗೌಳ ತಾಳ: ಖಂಡಚಾಪು

ಕಳ್ಳನಾರೀ ರೀತಿ ಕೌಳಿಕವ ಮಾಡಿದ?
ಕಂಡು ಪೇಳೆ ಗೆಳತಿ! ಕಾಣದೆ ಓಡಿದ! ||ಪಲ್ಲವಿ||

ಮಳ್ಳನಂತೆಯೆ ಬಂದು ಮರುಳು ಮಾಡಿದನಮ್ಮ
ಮಾಯಾವಿ ತಾ ಮಾತ್ರ ಮರುಳಾಗಲಿಲ್ಲಮ್ಮ ||ಅನುಪಲ್ಲವಿ||

ಎಲ್ಲೆಲ್ಲಿ ನೋಡಿದರು ಅವನೆ ಕಾಣುವನಮ್ಮ
ಎನ್ನವನು ಎನ್ನುತಲೆ ಮಾಯವಾಗುವನಮ್ಮ
'ಇಲ್ಲ ಬೇರಾವ ಗತಿ' ಎನೆ ಓಡಿ ಬಹನಮ್ಮ
ಇಳೆಯೊಳಿವನನ್ನು ಶ್ರೀಕಾಂತನೆನ್ನುವರಮ್ಮ ||ಚರಣ||

ಈ ರಚನೆಯನ್ನು ಓದುವಾಗ "ಬೃಂದಾವನಕೆ ಹಾಲನು ಮಾರಲು" (ಕುವೆಂಪು), ಅಥವಾ "ಕೊಳಲನೂದುವ ಚದುರನಾರೇ ಪೇಳಮ್ಮ" (ವ್ಯಾಸರಾಯ), ಮೊದಲಾದ ಗೀತೆಗಳಲ್ಲಿರುವ ಆಪ್ತ ಭಾವ ಎದ್ದು ಕಾಣುತ್ತದೆ.

ಈಗಾಗಲೇ ಟಿ.ಎಸ್.ಸತ್ಯವತಿ, ಆರ್.ಎನ್.ಶ್ರೀಲತಾ ಮೊದಲಾದ ಹಾಡುಗಾರ್ತಿಯರು ಶ್ರೀಕಾಂತ್ ಮೂರ್ತಿ ಅವರ ರಚನೆಗಳನ್ನು ಕಚೇರಿಗಳಲ್ಲಿ ಹಾಡಿರುವುದುಂಟು. ಹೀಗೇ ಇನ್ನೂ ಹೆಚ್ಚಿಗೆ ಸಂಗೀತ ವಿದ್ವಾಂಸ ವಿದುಷಿಯರು ಈ ಯುವ ವಾಗ್ಗೇಯಕಾರರ ರಚನೆಗಳನ್ನು ಕಚೇರಿಗಳಲ್ಲಿ ಬೆಳಕಿಗೆ ತಂದು ಜನಪ್ರಿಯಗೊಳಿಸಲಿ ಅನ್ನುವ ಆಶಯ ನನ್ನದು.

ಈ ಸಿ.ಡಿ.ಗಳನ್ನು ಕಳೆದ ತಿಂಗಳು ಬೆಂಗಳೂರಿನ ಅನನ್ಯ ಸಭಾಂಗಣದಲ್ಲಿ ಅನಾವರಣಗೊಳಿಸಲಾಯಿತು. ಅಂದು ಬೆಂಗಳೂರು ಸಹೋದರರು ಮತ್ತು ವೃಂದದವರಿಂದ ಶ್ರೀಕಾಂತ್ ಅವರ ರಚನೆಗಳನ್ನೇ ಬಳಸಿ ಮಾಡಿದ ಸಂಗೀತ ಕಚೇರಿಯೂ ನಡೆದಿತ್ತು. ಅದರ ಭಾಗಗಳನ್ನು ನೋಡಬೇಕಾದರೆ, ಈ ಕೊಂಡಿಯನ್ನು ಚಿಟಕಿಸಿ (http://www.youtube.com/watch?v=1MGFdE9E2NA&feature=related) . ಈ ಸಿಡಿಗಳನ್ನು ಕೊಳ್ಳಬಯಸುವವರು ಈ ಕೆಳಗಿನ ಕೊಂಡಿಯಲ್ಲಿರುವ ಹಿಂದೂ ದಿನಪತ್ರಿಕೆಯ ವರದಿಯಲ್ಲಿರುವ ಫೋನ್ ನಂಬರ್ ಗಳನ್ನು ಸಂಪರ್ಕಿಸಬಹುದು: http://www.hindu.com/fr/2009/11/20/stories/2009112050760300.htm

ವೃತ್ತಿಯಲ್ಲಿ ಮನೋವೈದ್ಯರಾದ ಡಾ.ಶ್ರೀಕಾಂತ್ ಮೂರ್ತಿ ಅವರು ಸದ್ಯದಲ್ಲಿ ಮಡದಿ ಸಹನಾ, ಮತ್ತು ಮಗ ಪೃಥ್ವಿಯೊಡನೆ ಇಂಗ್ಲೆಂಡ್ ನಲ್ಲಿ ವಾಸವಾಗಿದ್ದಾರೆ


-ಹಂಸಾನಂದಿ