ಗೂಳೂರಿನ ಮುಸ್ಸಂಜೆಯ ಕಥಾ ಪ್ರಸಂಗ...೧

Submitted by manjunath.kunigal on Thu, 12/24/2009 - 14:04
ಬರಹ

(ಇದೊಂದು ನೈಜ ಘಟನೆಯನ್ನಾಧರಿಸಿದ ಕಥೆ. ಸುಮಾರು ಅರವತ್ತೈದು ವರ್ಷಗಳ ಹಿಂದೆ ನನ್ನ ತಂದೆಯ ಹುಟ್ಟೂರಾದ ಗೂಳೂರೆಂಬ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿತ್ತಂತೆ. ತಮ್ಮ ಜೀವನದ ಸ್ವಾರಸ್ಯ ಅನುಭವಗಳನ್ನು ಅತಿ ರೋಚಕವಾಗಿಯೇ ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದರು ನಮ್ಮ ತಂದೆ. ಅವರ ವಿಚಿತ್ರ-ವಿಶಿಷ್ಟ ಅನುಭವಗಳನ್ನು ಕೇಳಿ ಪುಳಕಿತನಾಗಿದ್ದು ಅದೆಷ್ಟು ಬಾರಿಯೋ.! ನನ್ನ ಬಾಲ್ಯದಲ್ಲಿ ನನಗೆ ತುಂಬಾ ಪ್ರಭಾವ ಬೀರಿದ್ದ ಈ ಘಟನೆಯನ್ನು ಕಥೆಯ ರೂಪದಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಅಷ್ಟೇ....)


 ನಿನ್ನೆ ಬಿದ್ದಿದ್ದ ವಿಪರೀತ ಮಳೆಗೆ ಕಂಟಿ ಬಯಲಿನ ಕಾಲು ದಾರಿ ಕೆಸರಿನ ಮಡುವಾಗಿತ್ತು. ಕಾಲು ಜಾರದಂತೆ, ತಲೆ ಮೇಲಿನ ಹುಲ್ಲು ಹೊರೆಯೊಂದಿಗೆ ಸಂಭಾಳಿಸಿಕೊಂಡು ತೊಪ್ಪೆಯಲ್ಲಿ ಹೆಜ್ಜೆ ಹಾಕುತ್ತಿದ್ದಳು ಪುಟ್ಟಕ್ಕ. ಅತ್ತ ಆಗಸದ ದಿಗಂತವದು ಕೆಂಪನೆಯ ಹಣ್ಣಾಗಿದ್ದ ಸೂರ್ಯನನ್ನು ನುಂಗಲು ಹೊಂಚು ಹಾಕುತ್ತಿದ್ದಂತಹ ಕ್ಷಣಗಳು. ವಾರದಿಂದಲೂ ಜಡಿಯಾಗಿ ನೆತ್ತಿಯ ಮೇಲೆ ಹೊಡೆಯುತ್ತಿದ್ದ ಮಳೆ ನಿನ್ನೆಯಂತೂ ಭೋ ಎಂದು ಆರ್ಭಟಿಸಿತ್ತು.ಎಂದೋ ಅಲ್ಲಿದ್ದ ಗುಡ್ಡವನ್ನ ಒತ್ತರಿಸಿದ್ದರಿಂದಲೋ ಏನೋ, ಊರ ಸ್ಮಶಾನವೂ ಸೇರಿದಂತೆ ಅದರ ಆಚೆಗಿನ ಬದಿಯಲ್ಲಿದ್ದ ಪುಟ್ಟೆಲ್ಲಯ್ಯನ ಹೊಲ, ಕಂಟಿ ಬಯಲಿನ ಕಡೆಗೆ ಕೊಂಚ ವಾರೆಯಾಗಿತ್ತು. ನಿನ್ನೆ ಬಿದ್ದಂತಹ ಭಾರೀ ಮಳೆಯು ವಾರೆ ಹೊಲದ ಒಡಲಾಳಕ್ಕಿಳಿಯಲಾಗಿರಲಿಲ್ಲ.


ಪುಟ್ಟೆಲ್ಲಯ್ಯ ಮಗ ರಂಗನೊಂದಿಗೆ ಮುಂಜಾನೆಯಿಂದಲೇ ನೇಗಿಲನ್ನು ಕಟ್ಟಿ ವಾರೆ ಹೊಲ ಉತ್ತಲು ಆರಂಭಿಸಿದ್ದ. ಇವರೀರ್ವರಿಗೆ ಬುತ್ತಿ ತೆಗೆದುಕೊಂಡು ಬಂದ ಪುಟ್ಟಕ್ಕ ಸಂಜೆಯವರೆಗೂ ಅದೂ ಇದೂ ಅಂತ ತನ್ನ ಗಂಡನಿಗೂ, ಹರೆಯದ ಮಗನಿಗೂ ನೆರವಾಗುತ್ತಿದ್ದಳು. "ಸೂರ್ಯ ಮುಳುಗ್ತಾವ್ನೆ.. ನಾವ್ ದನ ಒಡ್ಕೊಂಡು ಆಮೇಕ್ ಬರ್ತೀವಿ.. ನೀನು ಅಟ್ಟಿ ಕಡೆ ಬಿರ್ನೆ ಓಗವ್ವೋ.." ಎಂದ ರಂಗನ ಆದೇಶಕ್ಕೆ ’ಹೂ೦..’ ಎಂದು ತಲೆಯಾಡಿಸಿದಳು ಪುಟ್ಟಕ್ಕ. ಸಂಜೆಯವರೆಗೂ ಒತ್ತೆ ಮಾಡಿಟ್ಟಿದ್ದ ಹುಲ್ಲು ಹೊರೆಯನ್ನು ತಲೆಗೇರಿಸಿ, ಬಿದಿರಿನ ಖಾಲಿ ಬುತ್ತಿಯನ್ನು ಕಂಕುಳಲ್ಲಿ ಭದ್ರವಾಗಿಸಿ ಮನೆಯ ದಾರಿ ಹಿಡಿದಿದ್ದಳು.


ಕಂಟಿ ಗಿಡದ ಬಯಲಿನ ಚಡಾವನ್ನು ಏರಿದ ಮೇಲೆ ಸಿಗುವ ಬೀರೇಗೌಡರ ಸೀಗೆಮೆಳೆಯನ್ನು ದಾಟಿ ಎಡಕ್ಕೆ ಒಂದಿಪ್ಪತ್ತು ಹೆಜ್ಜೆ ಇಟ್ಟರೆ, ಸುಮಾರು ಇನ್ನೊರೈವತ್ತಕ್ಕೂ ಹೆಚ್ಚಿನದೇ ವಯಸ್ಸಾದ ಕಲ್ಲಿನ ಕಂಭಗಳೆರಡು ಅಜಾನುಬಾಹುಗಳಂತೆ ಎರಡಾಳೆತ್ತರಕ್ಕೆ ನಿಂತಿರುವ ಗೂಳೂರಿನ ನಾಯಕರಟ್ಟಿಯ ಮುಖ್ಯ ದ್ವಾರ ಎದುರಾಗುತ್ತದೆ.


ಕಂಟಿ ಬಯಲ ದಾರಿಯಲ್ಲಿ ಕಾಲಿಗೆ ಮೆತ್ತಿದ್ದ ಕೆಸರನ್ನು ಒದರುತ್ತಾ ಸೀಗೆಮೆಳೆಯ ಕಡೆ ಬರುತ್ತಿದ್ದ ಪುಟ್ಟಕ್ಕ, ಎಂಥದೋ ಒಂದು ಕಿರುಚುವ ಅಸ್ಪಷ್ಟ ದನಿ ಕೇಳಿ ಅಧೀರಳಾದಂತೆ ಕ್ಷಣ ಕಾಲ ಅಲ್ಲೇ ನಿಂತು,  ’ಈ ದಯ್ಯದ ಚಾಷ್ಟೆ ಈಟೊತ್ತಿಗೇ ಸುರ್ವಾಗೋಯ್ತಲ್ಲ’ಎಂದು ಗೊಣಗಿದವಳೇ ತನ್ನ ಹೆಜ್ಜೆಗಳ ವೇಗವನ್ನು ಹೆಚ್ಚಿಸಲಾರಂಭಿಸಿದ್ದಳು. ಬಿದಿರು ಬುತ್ತಿಯಲ್ಲಿದ್ದ ಪಾತ್ರೆಗಳ ’ಲೊಳ್ ಲೊಳ್’ ಶಬ್ದ ಆ ಕ್ಷಣಕ್ಕೆ ಅವಳ ಅಸಹನೆಯನ್ನು ಕೆದಕಿದಂತಿತ್ತು.


ಸರಿ ಸುಮಾರು ನಾಲ್ಕು ಎಕರೆಗಳಿಗಿಂತಲೂ ಹೆಚ್ಚಿನ ಜಾಗದಲ್ಲಿ ಬಹು ಒತ್ತೊತ್ತಾಗಿ, ಬೇರುಗಳಿಗೆ ಭೂಮಿಯಡಿಯಲ್ಲಿ ಇನ್ನು ಜಾಗವೇ ಇಲ್ಲವೇನೋ ಎಂಬಂತೆ ನೆಲದ ಮೇಲೆಲ್ಲಾ ಬೇರನ್ನರಡಿ ಬೆಳೆದಿತ್ತು ಬೀರೇಗೌಡನ ಸೀಗೆಮೆಳೆ. ಸಾಕ್ಷಾತ್ ದೆವ್ವವೇ ಕೈ ಬಾಯಿ ಹರಡಿಕೊಂಡಂತೆ ಕಾಣಿಸುತ್ತಿದ್ದ ಸೀಗೆಮೆಳೆಯ ಕಾಲುದಾರಿಯೇ ನಾಯಕರಟ್ಟಿಯ ಜನರ ರಾಜಮಾರ್ಗ.


ಆಗಾಗ ಘಟಿಸುತ್ತಿದ್ದ ಸೀಗೆಕಾಯಿ ಕಳ್ಳತನಕ್ಕೆ ಅಟ್ಟಿಯ ಜನರ ಓಡಾಟವನ್ನು ತಳುಕು ಹಾಕಿದ ಬೀರೇಗೌಡ ’ನಾಯಕರಟ್ಟಿಯವರು ನನ್ನ ಸೀಗೆಮೆಳೆಯಲ್ಲಿ ಓಡಾಡುವ ಹಾಗಿಲ್ಲ’ವೆಂದು ಒಮ್ಮೆ ಅಲಿಖಿತ ಫರ್ಮಾನು ಕೂಡ ಹೊರಡಿಸಿದ್ದ.


ಅಟ್ಟಿಯ ನಾಲ್ಕನೇ ಮೂರು ಭಾಗ ಊರ ಕೆರೆಯಿಂದ ಸುತ್ತುವರಿದಿದ್ದು ಮತ್ತೊಂದು ಭಾಗ ಸೀಗೆಮೆಳೆಯ ಪೌಳಿಯಿಂದ ಸುತ್ತುವರೆದಿತ್ತು. ನಾಯಕರಟ್ಟಿಗೆ ಕೇವಲ ಸೀಗೆಮೆಳೆಯ ಕಾಲುದಾರಿಯೊಂದೇ ಹೊರಗಿನ ಸಂಪರ್ಕ ಕಲ್ಪಿಸುವ ಮಾರ್ಗವಾಗಿತ್ತು.


ತನ್ನ ಫರ್ಮಾನಿಗೆ ಕಿಂಚಿತ್ತೂ ಗೌರವ ಕೊಡದ ಹಟ್ಟಿ ಜನರಿಂದ ಕುಪಿತನಾಗಿದ್ದ ಗೌಡ, ದಾರಿಗೆ ಸೀಗೆ ಮುಳ್ಳಿನ ಬೇಲಿಯನ್ನು ಬೆಸೆದಿದ್ದನಾದರೂ ಪ್ರಯೋಜನವಾಗಿರಲಿಲ್ಲ. ಯಾವುದಕ್ಕೂ ಹೇಸದ, ಕೈಗತ್ತಿಯೋ ಇಲ್ಲ ಮಚ್ಚನ್ನೋ ಸೊಂಟದಲ್ಲೇ ಸಿಕ್ಕಿಸಿಕೊಂಡು ಓಡಾಡುವ ನಾಯಕರಟ್ಟಿಯ ಬೇಡರಂತಹ ಒರಟು ಜನರನ್ನು ಎದುರು ಹಾಕಿಕೊಳ್ಳುವುದರ ಅಪಾಯ ಅವನಿಗೆ ತಿಳಿಯದ ವಿಚಾರವೇನೂ ಆಗಿರಲಿಲ್ಲ.


ಇತ್ತೇಚೆಗಂತೂ ಸೀಗೆಕಾಯಿ ಕಳ್ಳತನ ಮಿತಿ ಮೀರಿದ್ದರಿಂದ ಬೀರೇಗೌಡನಿಗೆ ಸೀಗೆಮುಳ್ಳು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಂತಾಗಿತ್ತು. ತಿಂಗಳ ಹಿಂದೆ ಸಂಭವಿಸಿದ ಅಪ್ಪನ ಸಾವು ಪೂರಕವೇ ಆಯ್ತೆಂಬಂತೆ, ’ದೊಡ್ಡಗೌಡ್ರು ಅವರ ಪಿರಾಣನೇ ಆಗಿದ್ದ ಸೀಗೆಮೆಳೇಲಿ ನೇತಾಡ್ತಾವ್ರಂತೆ.. ಮೊನ್ನೆ ನಮ್ಗೆಲ್ಲಾ ಬೆಳ್ಳುಗೆ ಕಾಣಿಸ್ಕೊಂಡ್ರು ಅಂತೀವ್ನಿ..’ ಎಂಬೆಲ್ಲ ಪುಕಾರನ್ನು ಅವನ ಆಳುಗಳಿಂದ ಹತ್ತಿಸಿದ ಮೇಲೆ ಕಳ್ಳತನ ಸ್ವಲ್ಪ ಹಿಡಿತಕ್ಕೆ ಬಂದಂತಿತ್ತಾದರೂ ಸಂಪೂರ್ಣ ಶಮನವಾಗಿರಲಿಲ್ಲ. ಕಳ್ಳರನ್ನು ಕದ್ದ ಕೈನಲ್ಲಿಯೇ ಹಿಡಿದು ಪಂಚಾಯ್ತಿಯಲ್ಲಿ ಮಾನ ಹರಾಜಾಕಿ, ಹಟ್ಟಿಯ ಜನರ ಮೇಲಿದ್ದ ತನ್ನ ಅಲ್ಪ ಸೇಡನ್ನಾದರೂ ತೀರಿಸಿಕೊಳ್ಳಬೇಕೆಂದು ಹವಣಿಸುತ್ತಲೇ ಇದ್ದ.


ನಿನ್ನೆ ಒಂದೆರಡು ಮರಗಳಲ್ಲಿನ ಕಾಯಿಗಳು ಉದುರಿದ್ದು ಬೀರೇಗೌಡನಿಗೆ ಇನ್ನಷ್ಟು ರೇಗಿಹೋಗಿತ್ತು. ’ಮಳೆಗೆ ಉದ್ರಿದ್ರೆ ಒಂದೇ ಜಾಗ್ದಾಗೆ ಈಟೊಂದು ಬೋಳಾಗ್ತಿತ್ತೆ..? ನೆಲ್ದ್ ಮೇಲೂ ಒಂದೂ ಕಾಯಿ ಕಾಣಿಸ್ತಿಲ್ಲ..! ಆಳ್ ಮಾಡಾದು ಹಾಳೆಯಾ ಅಂತ ಕೇಳಿಲ್ವಾ ನೀನು.. ಯಾವ್ ನನ್ಮಗ ಈ ಕೆಲ್ಸ ಮಾಡ್ತಿರೋದು ಅಂತ ನೀನೇ ನಿಂತು ನೋಡ್ಬಾರ್ದಾ?..’ಎಂದು ರೇಗಿದ್ದಳು ಗೌಡನ ತಾಯಿ ಸಾಕವ್ವ ಬೆಳಗ್ಗೆ ಸೀಗೆಮೆಳೆ ಕಡೆ ಬಂದಿದ್ದಾಗ. ’ಹೂಂ’ಗುಟ್ಟಿದವನೇ ಏನನ್ನೋ ಮನದಲ್ಲೇ ನಿಶ್ಚಯಿಸಿಕೊಂಡವನಂತೆ ಗೋಣಿ ಮುಸುಕು ತಲೆ ಮೇಲೇರಿಸಿಕೊಂಡು, ಬಿಸಿಲು ನೆತ್ತಿ ಮೇಲಿಂದ ಸರಿದ ಮೇಲೆ ಸೀಗೆಮೆಳೆಯ ಮಧ್ಯದ ಒಂದು ಮರವನ್ನು ಏರಿ ಹೊಂಚು ಹಾಕಿ ಕೂತಿದ್ದ.


ಪುಟ್ಟಕ್ಕನಿಗೀಗ ಯಾರೋ ಒಂದಿಬ್ಬರು ಕಾಲುದಾರಿಯ ಪಕ್ಕದಲಿದ್ದೊಂದು ಸೀಗೆ ಮರದ ಬಳಿ ನಿಂತಿರುವಂತೆ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕೆಲ ಕ್ಷಣಗಳ ಹಿಂದೆ ಕೇಳಿದ ದನಿ ಈಗ ಸ್ಪಷ್ಟವಾಗಿ ತೇಲಿಬರುತ್ತಿದೆ. ಹುಡುಗನೊಬ್ಬನ ಹೃದಯ ವಿದ್ರಾವಕವಾದ ಅರಚುವಿಕೆಯ ದನಿಯಂತೆ!. ಏನೋ ಅಪಾಯದ ಮುನ್ಸೂಚನೆಯ ಅಸ್ಪಷ್ಟ ಗೊಂದಲದೊಂದಿಗೇ ಹತ್ತಿರ ಬಂದ ಪುಟ್ಟಕ್ಕ ಅಲ್ಲಿನ ದೃಶ್ಯವನ್ನು ನೋಡಿ ಗರ ಬಡಿದವಳಂತೆ ಸ್ತಬ್ಧಳಾಗಿಹೋದಳು.


"ಇದೇನಾ ಬುದ್ದಿ, ಮಗೀಗೆ ಇಂಗಾ ಹೊಡ್ಯಾದು...? ಮೈ ಪೂರ್ತಿ ರಕ್ತ ಅರಿತಾಯ್ತೆ, ವಸಿ ಕರುಣೇನೇ ಬ್ಯಾಡ್ವಾ ನಿಮ್ಗೆ..? ಆ ಮಗ ಏನ್ಮಾಡ್ತೂಂತ ಇಂಗ್ ಸಾಯಬಡ್ದೀವ್ರಿ? ಭಾಗಿ ಏನಾರ ಇವ್ನ ಇಂಗ್ ನೋಡ್ಬಿಟ್ರೆ ಅವಳ ಪಿರಾಣ ಇರ್ತದಾ? ಬುಡ್ ಬುಡ್ ಬುದ್ದಿ ಸಾಕು...." ಏದುಸಿರು ಬಿಡುತ್ತಾ ಅಂದವಳೇ ಹುಲ್ಲು ಹೊರೆ, ಬುತ್ತಿಯನ್ನು ನೆಲಕ್ಕೆಸದು ನಾಗನ ಹತ್ತಿರ ಧಾವಿಸಿದಳು. ಬಹುಶಹ ಸೀಗೆ ಬೇರಿನಂತಿದ್ದ ಬಳ್ಳಿಯಿಂದ ಬಾರಿಸಿರಬೇಕು. ಸರಿಯಾಗಿ ಕಾಣುತ್ತಿಲ್ಲ. ಸಂಜೆಯ ಕೊನೆಯ ಕಿರಣಗಳನ್ನೂ ಒಳಗೆ ನುಸುಳದಂತೆ ತಡೆಯುತ್ತಿವೆ ಸೀಗೆಮೆಳೆ. ನಾಗನ ದೇಹದಲ್ಲಿ ಎದ್ದಿದ್ದ ಉಬ್ಬು ಬಾಸುಂಡೆಗಳಿಂದ ಒಸರುತ್ತಿದ್ದ ರಕ್ತ ಪುಟ್ಟಕ್ಕನ ಕೈಗಂಟಿತ್ತು. ಅನಾಮತ್ತಾಗಿ ಪುಟ್ಟಕ್ಕನ ಸೆರಗಿನಂಚು ನಾಗನ ಗಾಯದ ಆರೈಕೆಯಲ್ಲಿ ತೊಡಗಿತ್ತು. ಆ ತಿಳಿ ಕತ್ತಲಲ್ಲೂ ಪುಟ್ಟಕ್ಕನನ್ನು ಗುರುತಿಸಿದ ನಾಗ ನೋವಿಗೋ ಅಥವಾ ಪುಟ್ಟಕ್ಕನ ಸಹಾಯವನ್ನ ಅಂಗಲಾಚುವಂತೆಯೋ ಏನೋ ಇನ್ನೂ ಜೋರಾಗಿ ಕಿರುಚಲು ಶುರುವಿಟ್ಟ.


"ಓಹೊಹೋ... ನಿಂಗ್ಯಾಕಮ್ಮೀ ಊರಿನ ಉಸಾಬ್ರಿ..? ಸುಮ್ಕೆ ಅಟ್ಟಿ ಕಡೆ ಓಗ್ತಿದ್ಯೇನೋ ಓಗು.. ಇವತ್ತು ಸೀಗೆಕಾಯಿ ಕದ್ಯೋ ಈ ನನ್ಮಕ್ಳುನ್ನ ಅಂಗೇ ಬುಟ್ಬುಟ್ರೆ ನಾಳೆ ನನ್ ಮನೆ ಕಬ್ಣುದ್ ಖಜಾನೆಗೇ ಕೈ ಹಾಕಕಿಲ್ಲ ಅಂತ ಎಂಗ್ ಯೋಳದು, ಓಗು.. ಓಗು.. ಗೊತ್ತಾಗ್ಲಿ ಸೂಳೇಮಕ್ಳುಗೆ ಈ ಬೀರೇಗೌಡುನ್ ಸವಾಸ ಸರಿಯಿರಕ್ಕಿಲ್ಲ ಅಂತಾ..." ಎಂದೆಲ್ಲಾ ಒಮ್ಮೆಗೇ ಒದರುತ್ತಿದ್ದ ಬೀರೇಗೌಡನಿಗೆ ಆವೇಶಕ್ಕೋ ಎನೋ ಅವನೆದೆಬಡಿತ ಹೆಚ್ಚಾಗಿ ಬುಸ್ ಬುಸ್ ಅಂತ ಉಸಿರಾಡುತ್ತಿದ್ದುದು ಸ್ಪಷ್ಟವಾಗೇ ಕೇಳಿಸುತ್ತಿತ್ತು. ಅವನ ಮಾತುಗಳಿಗೆ ಕಿವಿಯಾಗದ ಪುಟ್ಟಕ್ಕನ ನಾಗನ ಆರೈಕೆಯಲ್ಲಿದ್ದಳು. ಶೂನ್ಯಕ್ಕೆ ಬಾಣ ಬಿಟ್ಟಂತಾಗಿದ್ದ ಗೌಡನ ಮನಸ್ಸು ಕುದಿಯಹತ್ತಿತ್ತು. ಒಮ್ಮೆಂದೊಮ್ಮೆಲೆ ಆವೇಶಭರಿತನಾಗಿ, ದೆವ್ವ ಮೈಮೇಲೆ ಬಂದವನಂತೆ ತನ್ನ ದೇಹದ ವೇಗವನ್ನು ಭರ್ರನೆ ಹೆಚ್ಚಿಸಿಕೊಂಡವನೇ, "ಸೀಗೆಕಾಯಿ ಕದೀತ್ಯಾ ಸೂಳೆಮಗ್ನೇ... ಸೀಗೆಕಾಯಿ..?" ಎಂದು ನಾಗನ ಹೊಟ್ಟೆಗೇ ಗುರಿಯಿಟ್ಟವನಂತೆ ಬಲವಾಗಿ ಜಾಡಿಸಿ ಒದ್ದ. ಸೀಗೆ ಬಳ್ಳಿಯಿಂದ ಮರಕ್ಕೆ ಬಿಗಿದಿದ್ದ, ಈಗಾಗಲೇ ತೀವ್ರವಾಗಿ ಘಾಸಿಗೊಂಡಿದ್ದ ನಾಗ, ಕರುಳೆಲ್ಲಾ ಬಾಯಿಗೆ ಬಂದಂತಾಗಿ "ಯವ್ವಲೇ...!" ಎಂದು ಚೀರಲು ಬಾಯಿಬಿಟ್ಟವನು ಶಬ್ದ ಪೂರ್ಣವಾಗುವ ಮೊದಲೇ ಕತ್ತನ್ನು ಪಕ್ಕಕ್ಕೆ ವಾಲಿಸಿಬಿಟ್ಟ. ಪ್ರಾಣವೇ ಹಾರಿಹೋಯ್ತೆಂದು ಭಾವಿಸಿ, ನಾಗನ ಮೈಯನ್ನು ಬಲವಾಗಿ ಅಪ್ಪಿಕೊಂಡು ’ಅಯ್ಯೋ’ಎಂದು ಗೋಳಿಡುತ್ತಾ ಪುಟ್ಟಕ್ಕ ’ಥೂಕ್’ ಎಂದು ಗೌಡನಿಗೆ ಕುಂತಲ್ಲಿಂದಲೇ ಕ್ಯಾಕರಿಸಿ ಉಗಿದಳು. ಗುರಿ ಮತ್ತು ವೇಗ ಸರಿಯಾಗೇ ಇತ್ತು. ಪುಟ್ಟಕ್ಕನ ಹೊಗೆಸೊಪ್ಪು-ಸುಣ್ಣದ ಕೆಂಪು ಹೂರಣ ಗೌಡನ ಮುಖದ ರಂಗನ್ನು ಏರಿಸಿತ್ತು. ಆ ಕತ್ತಲಲ್ಲೂ!.


ಪುಟ್ಟಕ್ಕನಿಗೆ ಮುಂದಿನದರ ಯೋಚನೆಯೇ ಇರಲಿಲ್ಲವೇನೋ ಅನಿಸುತ್ತಿತ್ತು.


"ನಿಂಗ್ ಮಕ್ಳುಮರಿ ಏನೂ ಇಲ್ವಾ..?ನಿನ್ ಮನೆ ಕಾಯೋಗಾ..ಪುಕ್ಸಟ್ಟೆ ಸಿಕ್ದ ಅಂತ ಮಗೀನ ಸಾಯಾಕ್ಬುಟ್ಟಲ್ಲೋ ರಣಗೇಡಿ.. ನಿನ್ ವಂಸುಕ್ಕೆ ಗರ ಬಡ್ದೋಗ್ತದೆ.. ಆ ಗುಡ್ಡುದ್ ಎಲ್ಲವ್ವ ನಿನ್ ಸುಮ್ಕೆ ಬಿಟ್ಟಾಳಾ? ರಾಕ್ಸ.. ರಾಕ್ಸ.. ಊರಿನ್ ರಾಕ್ಸ ನೀನು..! ಅಯ್ಯೋ.. ಬರ್ರಪ್ಪೋ ಬನ್ನಿ..., ಈ ಹಾಳ್ ಗೌಡ ಭಾಗಿ ಮಗನ್ನ ಒದ್ದು ಸಾಯಾಕ್ಬುಟ್ಟ ನೋಡ್ರೀ.." ಎನ್ನುತ್ತಾ ತನ್ನೆದೆಯನ್ನು ಬಡಿದುಕೊಂಡು ’ಹೋ.. ಅಯ್ಯೋ..’ಎಂದು ಒಂದೇ ಸಮನೆ ಗಂಟಲೇರಿಸಿದಳು. ಬುಸುಗುಡುತ್ತಾ, ಮುಖದ ಮೇಲಿದ್ದ ಉಗುಳನ್ನು ಕೈಯಲ್ಲಿ ಉಜ್ಜಿಕೊಂಡು ನಿಂತಿದ್ದ ಗೌಡನಿಗೆ ಪುಟ್ಟಕ್ಕನ ಬೈಗುಳಗಳು ಮೂಲಕ್ಕೇ ತಗುಲಿದಂತಾಗಿ ಕುದ್ದು ಹೋದ. ಈಗಂತೂ ಅವನಿಗೆ ಪುಟ್ಟಕ್ಕನ ಮುಯ್ಯಿಯ ವರಸೆಗಳು ಪ್ರತೀಕಾರವನ್ನು ಬಿಟ್ಟು ಮತ್ತೇನನ್ನೂ ಯೋಚಿಸದ ಹಾಗೆ ಕುರುಡು ಮಾಡಿಬಿಟ್ಟಿತ್ತು. ಆವೇಶಭರಿತನಾಗಿ ಹೋಗಿದ್ದ ಗೌಡ, ಸರಕ್ಕನೆ ಪುಟ್ಟಕ್ಕನ ನೆತ್ತಿಗೆ ಕೈ ಹಾಕಿದವನೇ ಅಂಗೈಗೆ ಸಿಕ್ಕ ಕೂದಲನ್ನು ಹಿಡಿದು ಎಳೆದು ರೊಪ್ಪನೆ ಕೆಳಗುರುಳಿಸಿ ಜಾಡಿಸಿ ಮುಖದ ಮೇಲೆ ಒದ್ದ. ಆ ಹೊಡೆತಕ್ಕೆ ಪುಟ್ಟಕ್ಕ ಅದುರು ಹೋದಳು.


 "ಏನಂದೇ ರಂಡೀ.. ನನ್ ವಂಸದ್ ಬಗ್ಗೆ ಮಾತಾಡಂಗಾಗ್ಬುಟ್ಯಾ ನೀನು..? ಎಷ್ಟೇ ಸೊಕ್ಕು ನಿಂಗೇ..? ಪುಟ್ಟೆಲ್ಲನ್ ಒಳ್ಗಾಕ್ಕೊಂಡು ಅವ್ನ ಆಸ್ತಿ ಎಲ್ಲ ನೀರ್ಕುಡ್ದು, ಅವ್ನ್ ವಂಸನ ನಿರ್ವಂಸ ಮಾಡ್ದಂಗ್ ಅಂದ್ಕೊಂಬುಟ್ಯಾ ಲೌಡಿ ಮುಂಡೆ.. ಬಂದ್ಬುಟ್ಳು ಗರತಿ ಅಂಗೆ.." ಎಂದವನೇ, ಬುಸ್ ಬುಸ್ ಎಂದು ಗಟ್ಟಿಯಾಗಿ ಉಸಿರಾಡುತ್ತಲೇ ನೆಲದ ಮೇಲೆ ಬಿದ್ದು ಮಣ್ಣು ತಿನ್ನುತ್ತಿದ್ದ ತನ್ನ ಚೌಕವನ್ನು ಒಮ್ಮೆ ರಪ್ ಅಂತ ಜಾಡಿಸಿ ಹೆಗಲ ಮೇಲೆಸೆದು ನಿಂತನು. ಪುಟ್ಟಕ್ಕನ ಪ್ರತಿಕ್ರಿಯೆಗೆ ಕಾಯುತ್ತಲೆಯೋ ಏನೋ ಎಂಬಂತೆ.


ಗೌಡನ ದೈಹಿಕ ಪ್ರಹಾರಕ್ಕಿಂತಲೂ ಬಹುಶಹ ಮಾತಿನ ಪ್ರಹಾರಕ್ಕೇ ನಲುಗಿ ಹೋಗಿದ್ದಳು ಅನಿಸುತ್ತೆ.


ಪುಟ್ಟಕ್ಕ ಯಾರೊಟ್ಟಿಗೂ ಹೀಗೆ ಬಾಯ್ಮಾಡಿದ್ದಿರಲಿ ಎದುರು ನಿಂತು ಮುಖ ಕೊಟ್ಟು ಮಾತಾಡಿದ್ದನ್ನು ಊರಿನವರು ನೋಡಿಯೇ ಇಲ್ಲ. ತುಟಿ ಹರಿದು ರಕ್ತ ಒಸರುತ್ತಿದ್ದಲ್ಲಿ ಮಣ್ಣು ಮೆತ್ತಿದ್ದನ್ನು ಒರೆಸಿಕುಳ್ಳುತ್ತಿದ್ದ ಪುಟ್ಟಕ್ಕ ಗೌಡನ ದಿಢೀರ್ ಧಾಳಿಗೆ ಭಾವ ಶೂನ್ಯಳಾಗಿ ಹೋಗಿದ್ದಳು. ಕನಿಷ್ಟ ಅಳುವೂ ಒತ್ತರಿಸುತ್ತಿಲ್ಲ. ಪುಟ್ಟಕ್ಕನಿಂದ ಏನಾದರೂ ಪ್ರತಿಕ್ರಿಯೆ ನಿರೀಕ್ಷಿಸುತ್ತಾ ನಿಂತಿದ್ದವನಿಗೆ ಈಗ ಕಸಿವಿಸಿಯಾಗತೊಡಗಿತ್ತು.


"ಯಾರನ್ ಕರ್ಕೊಂಬರ್ತ್ಯೋ ಬಾ.. ನಾನೂ ಒಂದ್ಕೈ ನೋಡೇ ಬಿಡ್ತೀನಿ.. ನಮ್ ಮನೆ ಮಚ್ಚೂನುವ ವಸಿ ನಿಮ್ಗಳ್ ರಕ್ತದ್ ರುಚಿ ನೋಡ್ಲಿ.. ನಂಗೂ ಈ ಅಟ್ಟಿ ಜನ್ರು ಕಾಟ ಸಾಕಾಗೋಗ್ಬುಟ್ಟದೆ... ಆಗ್ಬುಡ್ಳಿ ಒಂದುಕ್ಕೊಂದು ತೀರ್ಮಾನ ಇವತ್ತು.." ಎನ್ನುತ್ತಾ ಏನೋ ನೆನೆಸಿಕೊಂಡವನಂತೆ ಅಲ್ಲಿಂದ ಕಂಟಿ ಬಯಲಿನ ಚಡಾವಿನ ಕಡೆ ಬಿರ ಬಿರನೆ ನಡೆದೇಬಿಟ್ಟ. ಕನಿಷ್ಟ ನಾಗನ ಸ್ಥಿತಿಯನ್ನೂ ಗಮನಿಸದೆ. ಗೌಡನ ಮಾತಿನಲ್ಲಿ ಸ್ವಲ್ಪ ಹಿಂದಿದ್ದ ಆವೇಶಕ್ಕೆ ಭಯವೂ ಮಿಳಿತವಾದಂತಿತ್ತು. ಪ್ರಾಯಶಹ ಮುಂದಿನದೆಲ್ಲಾ ಕಂಗಳ ಮುಂದೆ ಹಾಯ್ದಂತೆ ಅನಿಸಿತ್ತೇನೋ ಗೌಡನಿಗೆ.


ಕೊನೆಯಲ್ಲಿ ಆಡಿ ಹೋದ ಗೌಡನ ಮಾತು ಪುಟ್ಟಕ್ಕನಿಗೆ ತಾಗಿದ್ದಿರಬಹುದು. ಸಾವರಿಸಿಕೊಂಡು ಎದ್ದವಳೇ ಸೀರೆಗಂಟಿದ್ದ ಒಣಸೀಗೆಎಲೆ, ಮುಳ್ಳುಗಳನ್ನು ಒಮ್ಮೆ ಒದರಿ ಸೆರಗನ್ನು ಸರಿ ಮಾಡಿಕೊಂಡು ನಾಗನ ಬಳಿ ಬಂದಳು. ನಾಗನ ಎದೆಯ ಏರಿಳಿತದ ಸ್ಪರ್ಶವಾದಾಗ ಆ ಕ್ಷಣ ತನಗೇ ಮರು ಜೀವ ಬಂದಷ್ಟು ಖುಷಿಯಾಗಿ ಹೋಯ್ತು. ಈಗ ಸ್ವಲ್ಪ ಚೇತರಿಸಿಕೊಂಡವಳಂತೆ "ಏಳೋ ಮಗಾ... " ಎನ್ನುತ್ತಾ ನಾಗನ ಕೆನ್ನೆಗೆ ಮೃದುವಾಗಿ ಬಾರಿಸುತ್ತಿದ್ದಳು. ಕೆಲ ಕ್ಷಣಗಳ ಪ್ರಯತ್ನದ ಫಲವಾಗಿ ನಿಧಾನವಾಗಿ ಕಣ್ಣನ್ನು ತೆರೆದ ನಾಗ ತನಗಾದ ಅವಮಾನಕ್ಕೋ ಅಥವಾ ಗಾಯದ ನೋವಿಗೋ ’ಯವ್ವೋ’ಎಂದು ಬಿಕ್ಕಲು ಶುರು ಮಾಡಿದ್ದ. ಸೀಗೆ ಬಳ್ಳಿಯ ಕಟ್ಟನ್ನು ಬಿಚ್ಚಿ, ಅವನ ಕಾಲಡಿ ಬಿದ್ದಿದ್ದ ಅಂಗಿಯನ್ನೆತ್ತಿ ಅವನ ಕೈಗಿತ್ತು, "ಸುಮ್ನಿರು ಮಗಾ.. ಅಳ್ಬೇಡಾ.. ಅಟ್ಟಿಕಡೆ ಓಗುವಾ ನಡೀ.." ಎಂದು ಸಂತೈಸಿದಳು. ನಾಗ ಅಳುವನ್ನು ನಿಲ್ಲಿಸಿರಲಿಲ್ಲ.


ಕೈ ಕಾಲುಗಳು ಬರೆಗಳಿಂದ ಘಾಸಿಯಾಗಿತ್ತಾದ್ದರಿಂದ ನಾಗ ನಡೆಯುವಾಗ ತನ್ನ ದೇಹ ಸಮತೋಲನ ತಪ್ಪಿ ತೂರುತ್ತಿದ್ದ. ಅವನ ಎಡಗೈಯನ್ನು ತನ್ನ ಭುಜಕ್ಕೆ ಹಾಕಿಕೊಂಡ ಪುಟ್ಟಕ್ಕ ತನ್ನ ಬಲಗೈಯಿಂದ ಅವನ ಸೊಂಟ ಬಳಸಿ ಅವನಿಗೆ ನಡೆಯಲು ಆಸರೆಯಾದಳು. ನಾಯಕರ ಅಟ್ಟಿಯ ಕಡೆಗೆ ನಡೆಯುತ್ತಿದ್ದ ಇಬ್ಬರೂ ಕತ್ತಲಲ್ಲಿ ಕರಗುತ್ತಿದ್ದರು. ಹೊಲದ ಕಡೆಯಿಂದ ಹೊತ್ತು ತಂದಿದ್ದ ಹುಲ್ಲು ಹೊರೆ ಮತ್ತು ಬುತ್ತಿಯು ಸೀಗೆಮೆಳೆಯಲ್ಲಿ ನಡೆದ ಘಟನೆಗೆ ಮೂಕ ಸಾಕ್ಷಿಗಳಂತೆ ಅನಾಥವಾಗಿ ಬಿದ್ದದ್ದು ಪುಟ್ಟಕ್ಕನ ಗಮನಕ್ಕೆ ಬಾರದಷ್ಟು ಅವಳ ಯೋಚನಾಲಹರಿಗೆ ಓಘ ಸಿಕ್ಕು ಮತ್ತೆಲ್ಲೋ ಓಡುತ್ತಿತ್ತು.


(ಮುಂದುವರೆಯುವುದು.......................)