ಅಭ್ಯಾಸಗಳು

ಅಭ್ಯಾಸಗಳು

ಬರಹ

ಅಭ್ಯಾಸಗಳು ತೊಟ್ಟಿಲ ಸೊಳ್ಳೆಪರದೆಯಾಗಿ ಕವಿದುಕೊಂಡವು
ಗಿಲಕಿಯಾದವು, ಗುಬ್ಬಿಮಾತಾದವು, ಹೊಸ್ತಿಲು ದಾಟಿ
ಅಜ್ಜನ ಕೋಲಿನ ಕುದುರೆಗಳಾದವು. ಎಲ್ಲರೂ
"ಒಳ್ಳೆಯದೇ ಆಯ್ತಲ್ಲ, ಇನ್ನೇನು, ಬಿಡಿ" ಅಂದರು.

ಅಭ್ಯಾಸಗಳು ಗೆಳೆಯರ ಕೈಯಾಗಿ ಭುಜದ ಮೇಲಿಳಿದವು,
ಗೋಲಿಗೆ ಗುರಿಯಿಟ್ಟವು, ಇಪ್ಪತ್ತರವರೆಗೆ ಮಗ್ಗಿ ಪಾಂಡಿತ್ಯಗಳಾದವು.
"ನಾನು ಹೀರೋ ರಾಜಕುಮಾರ, ಸೆಂಚುರಿ ವೀರ ಗವಾಸ್ಕರ."
"ಒಳ್ಳೆಯದು, ಬೆಳೆದು ದೊಡ್ಡವನಾಗು" ಅಂದರು ಮಾಸ್ತರು.

ಆಮೇಲೆ, ಹೆಣ್ಣು ಬಂದಳು. ಅಭ್ಯಾಸಗಳು ಹೋಗಿಬಿಟ್ಟವೆ?
ಕಟು ಮಧುರ ಪಿಸುಮಾತುಗಳಾದವು.
ಜರೀಸೀರೆ ಸೂಟು ಮಾಂಗಲ್ಯಗಳಾಗಿ ಬಂದವು.
ಸಪರಿವಾರ ಬಂದು "ಒಳ್ಳೆಯಾದಗಲಿ" ಎಂದು ಎಲ್ಲರೂ ಅಂದರು.

ವಯಸ್ಸು ಮಧ್ಯಾಹ್ನವಾಯಿತು. ಅಭ್ಯಾಸಗಳು ಗಟ್ಟಿಯಾಗಿ
ತಿಂಗಳ ಆದಾಯವಾದವು, ಟೈಲರು ಹೊಲೆದುಕೊಟ್ಟ
ಎಲ್ಲರಂಥ ಪ್ಯಾಂಟು ಶರಟುಗಳಾದವು, ಸ್ಕೂಟರು, ಸೈಟು, ಮನೆಗಳಾದವು,
ನಿದ್ರೆಮಾತ್ರೆ, ಇನ್ಸುಲಿನ್ ಮದ್ದುಗಳಾದವು.
"ದೇವರ ದಯೆ, ಒಳ್ಳೆಯದಾಗುತ್ತೆ" ನೆರೆಯವರು ಅಂದರು.

ವಯಸ್ಸು ನಿಜವಾಯಿತು.
ಅಭ್ಯಾಸಗಳು ಕಾಲ ಮೀರಿಯೂ ಉಳಿದೇಬಿಟ್ಟ ಅತಿಥಿಗಳು
ಮನೆಬಿಟ್ಟು ತೊಲಗದ ನಂಟರು
ಬರೀ ಬತ್ತಲೆ
ಬರೀ ಅವೇ ಅಭ್ಯಾಸಗಳು
"ನೀವು ಹೋಗದಿದ್ದರೆ ನಾನು ಹೋಗುತ್ತೇನೆ" ಅಂದೆ.
"ಒಳ್ಳೆಯದು, ತಥಾಸ್ತು" ಅಂದ ದೇವರು.

[ಲೂಯಿ ಮ್ಯಾಕ್‌ನಿಸ್ ಕವಿಯ ಇಂಗ್ಲಿಶ್ ಪದ್ಯವನ್ನು ಓದಿ ಮಾಡಿದ ಅನುವಾದ.
ಇದು ೨೯ ಮೇ ೧೯೮೩ರಂದು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿತ್ತು.
ಊರು ಮನೆ ಬದಲಾಯಿಸಿ ಪುಸ್ತಕ ಜೋಡಿಸುವಾಗ ಹಳೆಯ ಪೇಪರು ಈಗ ಸಿಕ್ಕಿ
ನಿಮ್ಮೊಡನೆ ಹಂಚಿಕೊಂಡಿದ್ದೇನೆ.]