ನನ್ನ ಮಗುವಿಗೊಂದು ಹೆಸರು ಕೊಡಿ
-ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿದಂತೆ ಎಂಬ ಗಾದೆ ಮಾತನ್ನು ನೀವು ಕೇಳಿದ್ದೀರಿ. ಅದರ ಸಾಕ್ಷಾತ್ ಅನುಭವ ಆಗಬೇಕೆಂದರೆ ನೀವು ಅಪ್ಪನೋ ಅಮ್ಮನೋ ಆಗಿರಬೇಕು. ಅದರಲ್ಲೂ ಮೊದಲ ಮಗುವಿನ ನಿರೀಕ್ಷೆ ಇದಕ್ಕೆಲ್ಲ ಸುಸಂದರ್ಭ. ನಾನೀಗ ಆ ಕಾಲಘಟ್ಟದಲ್ಲಿದ್ದೇನೆ ಅನ್ನೋದನ್ನ ಬೇರೆ ಹೇಳೊಲ್ಲ ಬಿಡಿ.
ನನ್ನ ಮಗು ಈ ಹೊರ ಜಗತ್ತಿಗೆ ತನ್ನನ್ನು ತೆರೆದುಕೊಳ್ಳಲು ಇನ್ನೂ ಆರೇಳು ತಿಂಗಳು ಬಾಕಿ ಇರುವಾಗಲೇ ಹುಟ್ಟುವ ಮಗುವಿನ ಸಂಪೂರ್ಣ ಸ್ಕ್ರಿಪ್ಟ್ ತಯಾರಾಗಿಬಿಟ್ಟಿದೆ. ಗಂಡಾಗಲೀ ಹೆಣ್ಣಾಗಲೀ, ಮಗು ಯಾರ ಹಾಗಿರಬೇಕು, ಕಣ್ಣು ಹೇಗಿರಬೇಕು, ಮೂಗಿನ ಉದ್ದ-ಅಗಲ ಎಷ್ಟಿರಬೇಕು, ತುಟಿ ತೊಂಡೆ ಹಣ್ಣಂತಿರಬೇಕೋ ಅಥವಾ ಹಾಗಲ ಹಣ್ಣಂತಿರಬೇಕೋ, ಮಗುವಿಗೆ ಅಪ್ಪನ ಸಿಟ್ಟಿರಬೇಕೋ ಅಮ್ಮನ ಸಹನೆ (?!) ಇರಬೇಕೋ ಎಂಬ ವಿಷಯಗಳಿಂದ ಆರಂಭವಾಗಿರುವ ನನ್ನ ಮತ್ತು ನನ್ನ ಮಡದಿಯ ನಡುವಿನ ಚರ್ಚೆ ಮಗುವಿಗೆ ಎಂಥ ಬಟ್ಟೆ ಹಾಕಬೇಕು, ಎಂಥ ಶಿಕ್ಷಣ ಕೊಡಿಸಬೇಕು ಎಂಬುದನ್ನೂ ದಾಟಿ ಈಗ ಒಂದು ಹಂಪ್ ಬಳಿ ಬಂದು ನಿಂತುಬಿಟ್ಟಿದೆ. ಮಗುವಿಗೆ ಏನು ಹೆಸರಿಡಬೇಕು ಎಂಬ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದಕ್ಕೆಲ್ಲ ಯಾಕಿಷ್ಟು ಅವಸರ ಎಂಬ ನನ್ನ ಪ್ರಶ್ನೆಗೋ ನಿರ್ಲಕ್ಷ್ಯಕ್ಕೋ ಉತ್ತರವಾಗಿ ನನ್ನ ಹೆಂಡತಿ ಆಗಲೇ ಮಗುವಿಗಾಗಿ ಎರಡು ಗೋಲಾಕಾರದ ದಿಂಬುಗಳನ್ನು ತಯಾರಿಸಿಬಿಟ್ಟಿದ್ದಾಳೆ. ಅವುಗಳ ರೌಂಡ್ ಶೇಪ್ ಎಷ್ಟು ಕರಾರುವಾಕ್ಕಾಗಿದೆಯೆಂದರೆ ಅದರ ಮುಂದೆ ಈ ಫೋಟೋಶಾಪ್, ಪೇಜ್ ಮೇಕರ್ ಗಳ ರೌಂಡ್ ಶೇಪ್ ಗಳು ವೀಕಾಗಿ ಕಂಗೊಳಿಸುವುದಂತೂ ನಿಶ್ಚಿತ.
ಇತ್ತೀಚೆಗೆ ಯಾಕೋ ಗೊತ್ತಿಲ್ಲ, ಈ ಥರದ ಚರ್ಚೆಗಳು ನನಗೂ ಖುಷಿ ಕೊಡುತ್ತಿವೆ. ಮಗುವಿನ ವಿಷಯ ಚರ್ಚೆಗೆ ಬಂದಾಗ ಅವಳ ಮುಖ ಹಿಗ್ಗಿ ಹೀರೇಕಾಯಿ ಆಗುವುದರಿಂದ ಹಿಡಿದು, ಇಷ್ಟಕ್ಕೆಲ್ಲ ನೀವೇ ಕಾರಣ ಎಂಬಂಥ ತುಂಟ ನೋಟವನ್ನು ಎದುರಿಸುವ ಮಜವೇ ಬೇರೆ ಅನ್ನಿಸತೊಡಗಿದೆ.
ಮಗುವಿಗೆ ಹೆಸರೇನಿಡಬೇಕು ಎಂಬ ನಮ್ಮ ಚರ್ಚೆ ಇನ್ನೂ ನಿಂತಿಲ್ಲ. ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ತಮಾಷೆ ಎಂದರೆ ಮಗುವಿಗೆ ಹೊಸ ಹೆಸರು ಇಡಬೇಕು ಎಂಬ ನಿಟ್ಟಿನಲ್ಲಿ ಮೊನ್ನೆ ಮೊನ್ನೆ ತಂದೆ ಎನಿಸಿಕೊಂಡ ಇಬ್ಬರು ಕಂಡ ಕಂಡ ವೆಬ್ ಸೈಟ್ ಗಳನ್ನೆಲ್ಲಾ ಜಾಲಾಡತೊಡಗಿದಾಗಲೇ ವಿಷಯ ಇಷ್ಟು ಸೀರಿಯಸ್ ಇದೆ ಎಂಬುದು ನನಗರಿವಾಗಿದ್ದು. ಯಾವುದಕ್ಕೂ ಇರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಅವರಿಬ್ಬರ ಬಳಿ ಆ ವೆಬ್ ಸೈಟ್ ವಿಳಾಸಗಳನ್ನೂ ಪಡೆದಿದ್ದೇನೆ. ಅಂದರೆ ನಾನೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂಬ ಸೂಚನೆಯನ್ನು ನನ್ನ ಮಡದಿಗೆ ರವಾನಿಸಿದ್ದೇನೆ.
ನಮ್ಮ ನಾಮಕರಣ ಚರ್ಚೆಯಲ್ಲಿ ಬಂದ ಹೆಸರುಗಳ ಪಟ್ಟಿ ಹೀಗಿದೆ- ದೀಪಕ್, ಸಂಕೇತ್, ದೀಪು, ನಿಶಾಂತ್, ತೇಜಸ್, ಅಭಿ, ಅನನ್ಯ, ಸಂಭ್ರಮ, ಲಕ್ಷಣ, ವಿನೀತಾ, ವಿನೀತ್, ಸುಜಯ್, ವಿಸ್ಮಿತಾ....... ಹೇಳಲು ಹೋದರೆ ನಮ್ಮ ದೇಶದಲ್ಲಿರುವ ಎಲ್ಲರಿಗೂ ಪುನರ್ ನಾಮಕರಣ ಮಾಡಬಹುದು, ಅಷ್ಟಿದೆ. ಮನಸ್ಸಿಗೆ ಬಂದ ಇಷ್ಟು ಹೆಸರುಗಳ ನಡುವೆಯೂ ಬೇರೇನಾದರೂ ಹೊಸ ಹೆಸರಿಡಬೇಕೆಂಬ ಹಂಬಲ ಮಾತ್ರ ಹೋಗಿಲ್ಲ. ಹೆಸರಿನ ಮೇಲಿನ ವ್ಯಾಮೋಹ ತುಸು ಹೆಚ್ಚೇ ಆಗಿದೆ. ಮೊನ್ನೆ ಮಕ್ಕಳ ದಿನಾಚರಣೆ ಪ್ರಯುಕ್ತ ಒಂದು ಪತ್ರಿಕೆ ಹೊರತಂದ ಮಕ್ಕಳ ಛಾಯಾಚಿತ್ರಗಳಿರುವ ಪುರವಣಿಯಲ್ಲೂ ಯಾವುದಾದರೂ ಹೊಸ ಹೆಸರು ಸಿಗಬಹುದೇ ಎಂದು ತಡಕಾಡಿದ್ದಾಯಿತು. ಅಲ್ಲೂ ನಾವು ಊಹಿಸಿದ ಹೆಸರುಗಳೇ ಇದ್ದವು ಎನ್ನಿ. ಅಪವಾದ ಎಂಬಂತೆ ಒಂದೆರಡು ಹೊಸ ಹೆಸರುಗಳೂ ಸಿಕ್ಕವು. ಒಂದು ವಿಚಿತ್ರ ಹೆಸರೂ ಸಿಕ್ಕಿತು- ಅವ್ಯಯ.
ಹೆಸರು ಓದಿ ತುಸು ಗಾಬರಿಯಾಗಿದ್ದು ನಿಜ. ಕೇಶೀರಾಜ ಇದ್ದಿದ್ದರೆ ಇಂಥ ವ್ಯಾಕರಣ ಸೂಚಿ ಪದಗಳನ್ನು ಮಕ್ಕಳಿಗೆ ಹೆಸರಾಗಿ ಇಡಬಾರದು ಎಂದು ತನ್ನ ಶಬ್ದಮಣಿದರ್ಪಣದ ಸೂತ್ರಗಳಲ್ಲೇ ಹೇಳಿಬಿಡುತ್ತಿದ್ದನೇನೋ. 'ಅವ್ಯಯ' ಎಂಬ ಹೆಸರು ಓದಿದಾಗಿನಿಂದ ಕನ್ನಡ ವ್ಯಾಕರಣ ಶಾಸ್ತ್ರದಲ್ಲಿ ಏನಾದರೂ ಹೊಸ ಹೆಸರು ಸಿಗಬಹುದೇನೋ ಅಂತ ಯೋಚಿಸಿದ್ದೂ ಆಯಿತು. ಈಗಾಗಲೇ ಅವ್ಯಯ ಅನ್ನೋ ಹೆಸರು ಬಂದಿರೋದ್ರಿಂದ ಅದಕ್ಕೆ ಹೊಂದಿಕೊಂಡಂತೇ ಇರುವ 'ಪ್ರತ್ಯಯ' ಹೆಸರೂ ಚಾಲ್ತಿಯಲ್ಲಿ ಬಂದಿರಬಹುದು ಅಂತಾನೂ ಯೋಚಿಸಿದೆವು. ಕೊನೆಗೆ ಹೆಚ್ಚುಕಡಿಮೆ 'ಯುರೇಕಾ...!' ಎಂಬ ಉದ್ಗಾರದೊಂದಿಗೆ, ಹೆಣ್ಣು ಹುಟ್ಟಿದರೆ 'ಸ್ವರ' ಅಂತಿಡೋಣವೇ ಎಂದು ಹೆಂಡತಿಯನ್ನು ಕಿಚಾಯಿಸಿದೆ. ಅವಳೋ, ಹಾಗೇ ಗಂಡು ಹುಟ್ಟಿದರೆ ವ್ಯಂಜನ ಅಂತಿಡೋಣ ಅಂತ ರಿವರ್ಸ್ ಸ್ವಿಂಗ್ ಮಾಡಿಬಿಟ್ಟಳು.
ಮಗುವಿಗೆ ಹೆಸರು ಹುಡುಕೋದು ಇಷ್ಟೊಂದು ಕಷ್ಟವೇ ಅಂತ ಅನ್ನಿಸತೊಡಗಿದಾಗ, ನಮಗೆಲ್ಲ ಹೆಸರಿಡುವಾಗ ಅಪ್ಪ-ಅಮ್ಮ ಯಾವ ಸೂತ್ರ ಅನುಸರಿಸಿದ್ದರು ಎಂಬ ಕುತೂಹಲ ಸಹಜವಾಗಿ ಹುಟ್ಟಿತು. ನನಗೆ ಹೀಗೊಂದು ಹೆಸರು ಹುಟ್ಟಿಕೊಂಡಿದ್ದು ಹೇಗೆ, ಈ ಹೆಸರು ಹೊಳೆದಿದ್ದು ಯಾರಿಗೆ ಅಂತ ಯಾವತ್ತೂ ನನ್ನಲ್ಲಿ ಪ್ರಶ್ನೆ ಮೂಡಿರಲಿಲ್ಲ. ಅದಕ್ಕೆಲ್ಲಾ ಕಾಲ ಕೂಡಿ ಬರಬೇಕು ಎಂಬ ದೊಡ್ಡವರ ಮಾತು ಎಷ್ಟು ನಿಜ ಎಂದು ನನಗೆ ನಾನೇ ಅಂದುಕೊಳ್ಳುತ್ತಾ ಅಮ್ಮನ ಬಳಿ ಈ ಬಗ್ಗೆ ಪ್ರಶ್ನಿಸಿದೆ. ಹಿಂದಿನ ಕಾಲದಲ್ಲೆಲ್ಲಾ ಹೆಸರು ಹುಡುಕುವುದೂ ಸಂಪ್ರದಾಯಬದ್ಧವಾಗಿ ನಡೆಯುತ್ತಿತ್ತು ಅಂತ ಅಮ್ಮ ಮಾತು ಶುರು ಮಾಡಿದರು- ಆಗೆಲ್ಲ ನಾಮಕರಣದ ದಿನ ಪುರೋಹಿತರು ಮಗು ಹುಟ್ಟಿದ ದಿನ, ಸಮಯ, ಗಳಿಗೆ, ರಾಶಿ ಎಲ್ಲವನ್ನೂ ಪರಿಶೀಲಿಸಿ, ಪಂಚಾಂಗದಲ್ಲಿ ಏನೇನೋ ಲೆಕ್ಕಾಚಾರ ಹಾಕಿ, ಮಗುವಿನ ಹೆಸರು ಇಂಥ ಅಕ್ಷರದಿಂದಲೇ ಆರಂಭವಾಗಬೇಕು, ಇಂಥ ಅಕ್ಷರದಲ್ಲೇ ಕೊನೆಗೊಳ್ಳಬೇಕು ಅಂತ ಸೂಚಿಸುತ್ತಿದ್ದರು. ಹಾಗೇ ಹೆಸರು ಹುಡುಕುತ್ತಿದ್ದೆವು. ಇನ್ನೂ ಕೆಲವರು ತಮ್ಮ ವಂಶಾವಳಿಯ ನೆನಪಿಗೆ ಅಂತ ತಮ್ಮ ಅಜ್ಜನ ಹೆಸರನ್ನೋ ಅಥವಾ ಮುತ್ತಜ್ಜನ ಹೆಸರನ್ನೋ ಮಕ್ಕಳಿಗೆ ಇಡುವ ಪದ್ಧತಿ ಇತ್ತು. ಕೆಲವರು ಅಪ್ಪನ ಹೆಸರನ್ನೇ ಮಗನಿಗೂ ಇಟ್ಟಿದ್ದಿದೆ.....
ಅಮ್ಮ ಹೇಳಿದ ಪದ್ಧತಿಯ ಬಗ್ಗೆ ತುಸು ಗಂಭೀರವಾಗಿ ಯೋಚಿಸಿದೆ. ಇಂಥ ಅಕ್ಷರದಲ್ಲೇ ಆರಂಭವಾಗಬೇಕು, ಇಂಥ ಅಕ್ಷರದಲ್ಲೇ ಕೊನೆಗೊಳ್ಳಬೇಕು ಎಂಬುದು ಓ.ಸಿ. ಆಟದ ಓಪನ್, ಕ್ಲೋಸ್ ಥರ ಅನ್ನಿಸಿ ಆ ನಿಟ್ಟಿನಲ್ಲಿ ಯೋಚಿಸುವುದನ್ನೇ ಬಿಟ್ಟುಬಿಟ್ಟೆ. ಅಜ್ಜನ ಹೆಸರನ್ನೋ ಮುತ್ತಜ್ಜನ ಹೆಸರನ್ನೋ ಇಟ್ಟರೆ ಹೇಗೆ ಎಂಬ ನಿಟ್ಟಿನಲ್ಲಿ ಯೋಚಿಸತೊಡಗಿದೆ. ಗಂಡು ಮಗು ಹುಟ್ಟಿದರೆ ಪದ್ಧತಿ ಪ್ರಕಾರ ನನ್ನ ಅಜ್ಜನ ಹೆಸರು ಪರಮೇಶ್ವರ ಅಂತಿಡಬೇಕು ಅಥವಾ ಮುತ್ತಜ್ಜನ ಹೆಸರು ಗಣಪತಿ ಅಂತಿಡಬೇಕಾಗುತ್ತೆ. ಆದರೂ ಇಲ್ಲೊಂದು ಸಮಸ್ಯೆ ಇದೆ. ಈಗಿನ ಕಾಲದಲ್ಲೆಲ್ಲಾ ಚುಪ್ಪಿ, ಚುಮ್ಮಿ, ಚಿಂಕು, ರಿಂಕು, ಟಿಂಕು, ಮುನ್ನಿ, ಪಿಂಕಿ, ಮಂಕಿ.... ಅಂತೆಲ್ಲಾ ಸ್ವೀಟ್ ಮತ್ತು ಶಾರ್ಟ್ ಹೆಸರಿಡುತ್ತಿರುವಾಗ ನಮ್ಮ ಮಕ್ಕಳಿಗೆ ಪರಮೇಶ್ವರ, ಲಕ್ಷ್ಸೀನಾರಾಯಣ, ಗಣಪತಿ, ಕೋದಂಡರಾಮ- ಅಂತೆಲ್ಲಾ ಹೆಸರಿಡಲಿಕ್ಕಾಗುತ್ತದೆಯೇ? ನಾಳೆ ನನ್ನ ಮಗ ಶಾಲೆಗೋ ಕಾಲೇಜಿಗೋ ಹೋಗಿ, ಅಲ್ಲೆಲ್ಲಾ ಚಿಂಕು, ರಿಂಕು, ಪಿಂಕಿಯಂಥ ಹೆಸರುಗಳೇ ಓಡಾಡುತ್ತಾ, ಓಲಾಡುತ್ತಾ ಇರುವಾಗ ಅವರ ಮುಂದೆ ಈತನ ಕೋದಂಡರಾಮ ಅಥವಾ ಪರಮೇಶ್ವರ ಎಂಬಂಥ ಹೆಸರುಗಳು ಪೇಲವವಾಗಿಬಿಟ್ಟರೆ...? 'ಅಪ್ಪ ನನ್ಮಗ ನನಗೆ ಅದೇನಿಂಥ ಈ ಹೆಸರಿಟ್ಟನೋ?' ಅಂಥ ನನ್ನ ಮಗನೇ ತನ್ನ ಸ್ನೇಹಿತರ ಬಳಿ ಟೀಕೆ ಮಾಡಿದರೆ...? ಭಯವಾಗುವುದು ಸಹಜ ತಾನೆ?
...ಹೀಗೆ ತನ್ಮಯನಾಗಿ ಯೋಚಿಸುತ್ತಿರುವಾಗ ತನ್ಮಯ ಎಂಬ ಹೆಸರು ಕಣ್ಮುಂದೆ ಬರುತ್ತೆ. ನನ್ನ ಮಗ ಅಥವಾ ಮಗಳು ಹಾಗಿರಬೇಕು, ಹೀಗಿರಬೇಕು, ಲಕ್ಷಣವಾಗಿರಬೇಕು ಎಂದು ಚರ್ಚಿಸುವಾಗ ಲಕ್ಷಣ ಎಂಬ ಹೆಸರು ಕಣ್ಮುಂದೆ ಕುಣಿದಾಡುತ್ತೆ. ತಾಯಿಯಾಗುತ್ತಿದ್ದೇನೆ ಎಂಬ ನನ್ನ ಹೆಂಡತಿಯ ಸಂಭ್ರಮವನ್ನು ನೋಡಿದಾಗ, ನೆನೆಸಿಕೊಂಡಾಗೆಲ್ಲ ಸಂಭ್ರಮ ಎಂಬ ಹೆಸರೂ ಸಂಭ್ರಮಿಸುತ್ತಾ ಬರುತ್ತೆ. ಸಂಪದಕ್ಕಾಗಿ ಏನಾದರೂ ಬರೆಯಬೇಕು ಅಂತ ಯೋಚಿಸಿದಾಗೆಲ್ಲ ಸಂಪದ ಎಂಬ ಹೆಸರೂ.....
ಇದೊಂಥರಾ ಮುಗಿಯದ ಹಾಡಾಗಿಬಿಟ್ಟಿದೆ. ಹಾಡಿದ್ದೇ ಹಾಡುವ ರಾಗವಾಗಿಬಟ್ಟಿದೆ (ರಾಗ ಅಂತ ಹೆಸರಿಟ್ಟರೆ ಹೇಗೆ?). ಹೊಸ ಹೆಸರು ಹುಡುಕಿ ಹುಡುಕಿ ಎಷ್ಟು ಬೇಜಾರಾಗಿಬಿಟ್ಟಿದೆಯೆಂದರೆ ಇನ್ನು ಹುಡುಕಾಟ ಸಾಕು ಅಂತನ್ನಿಸಿ, ಮೊನ್ನೆ ಹೆಂಡತಿ ಬಳಿ ಯಾವ ಹೆಸರೂ ಬೇಡ, ಗಂಡು ಮಗುವಾದರೆ ಬಾಣ ಭಟ್ಟ ಅಂತಿಡೋಣ ಅಂದುಬಿಟ್ಟಿದ್ದೇನೆ. ನನ್ನ ಹೊಸ ಹೆಸರಿನ ಸಂಶೋಧನೆಗೆ ಖುಷಿಪಟ್ಟಳೋ ಅಥವಾ ಕ್ರಿಯೇಟಿವಿಟಿಯನ್ನು ಮೆಚ್ಚಿಕೊಂಡಳೋ ಅಥವಾ ನನಗಿರುವ 'ಕಾಮೆಡಿ ಸೆನ್ಸ್' ನೋಡಿ ಎಂಜಾಯ್ ಮಾಡಿದಳೋ, ಅಂತೂ ಆ ಹೆಸರು ಕೇಳಿ ಜೋರಾಗಿ ನಕ್ಕ ನನ್ನ ಹೆಂಡತಿ, ಇತ್ತೀಚೆಗೆ ಮಗುವಿನ ಕುರಿತಾದ ಏನೇ ಚರ್ಚೆ ಬಂದಾಗಲೂ ನಿಮ್ಮ ಬಾಣ ಭಟ್ಟ ಅಥವಾ ನಮ್ಮ ಬಾಣ ಭಟ್ಟ ಅಂತ ಅದಕ್ಕೊಂದು ಐಡೆಂಟಿಟಿ ಕೊಡಲು ಮಾತ್ರ ಮರೆಯುತ್ತಿಲ್ಲ.
ಇರಲಿ, ಹುಟ್ಟದ ಮಗುವಿಗೆ ಹೆಸರು ಹುಡುಕುವ ಅನುಭವ ಹೇಗಿರುತ್ತೆ ಎಂಬುದನ್ನು ಇಲ್ಲಿ ನಿಮ್ಮ ಬಳಿ ಹಂಚಿಕೊಂಡೆ, ಅಷ್ಟೆ. ಇಂಥ ವಿಷಯಗಳನ್ನೆಲ್ಲ ಸಖತ್ತಾಗಿ ಎಂಜಾಯ್ ಮಾಡಬೇಕು. ಅದೇ ಜೀವನದ ಖುಷಿಯ ಕ್ಷಣಗಳು, ಅಲ್ಲವೇ?
ಬಾಣ ಭಟ್ಟ ಹೊರತಾದ ಹೊಸ ಹೆಸರೇನಾದರೂ ನಿಮಗೆ ಹೊಳೆದರೆ ದಯವಿಟ್ಟು ನನಗೂ ಹೇಳಿ.
-ಸುರೇಶ್ ಕೆ.
sumasureshk @ gmail.com