ಅರಬ್ಬರ ನಾಡಿನಲ್ಲಿ...೩ - ಹಾರಿ ಹೋದ ಪ್ರಾಣ ಪಕ್ಷಿ.

Submitted by manju787 on Sat, 05/15/2010 - 15:38
ಬರಹ

ಅಬುಧಾಬಿಯಲ್ಲಿ ಕೆಲಸ ಆರಂಭಿಸಿದ ನಂತರ ಅಲ್ಲಿನ ವಾತಾವರಣವನ್ನು ಅರ್ಥೈಸಿಕೊಂಡು ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.  ಥಟ್ಟಂತ ನನ್ನ ಗಮನಕ್ಕೆ ಬಂದ ಮುಖ್ಯ ಅಂಶವೆಂದರೆ ಕಛೇರಿಯಲ್ಲಿದ್ದ ಎರಡು "ಮಾಫಿಯಾ"ಗಳು.  ನಮ್ಮ ಭಾರತೀಯರು, ಅದರಲ್ಲಿ ಬಹುತೇಕರು ಮಲಯಾಳಿಗಳು, ಅವರದ್ದೇ ಒಂದು ಗುಂಪು ಕಟ್ಟಿಕೊಂಡು ಇಲ್ಲದ ರಾಜಕೀಯ ಮಾಡಿಕೊಂಡು ತಂತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ನಿರಂತರ ಯತ್ನದಲ್ಲಿದ್ದರು.  ಇನ್ನೊಂದು, ಇದಕ್ಕೆ ವಿರುದ್ಧವಾದ ಈಜಿಪ್ಟಿನವರ ಗುಂಪು, ಈಜಿಪ್ಟಿನವರನ್ನು ಇಲ್ಲಿ "ಮಿಶ್ರಿ"ಗಳು ಎಂದು ಕರೆಯುತ್ತಾರೆ.  ಭ್ರಷ್ಟಾಚಾರದಲ್ಲಿ ಭಾರತೀಯರನ್ನು ಮೀರಿಸುವ ಇವರು ತಮ್ಮದೇ ಒಂದು ಗುಂಪನ್ನು ಕಟ್ಟಿಕೊಂಡು, ಸಂಸ್ಥೆಯ ಮಾಲೀಕರೊಂದಿಗೆ, ಅವರ ಕುಟುಂಬದವರೊಂದಿಗೆ ಅರಬ್ಬಿಯಲ್ಲಿ ಮಾತಾಡುತ್ತಾ, ಯಾವ ಘನಂದಾರಿ ಕೆಲಸವನ್ನೂ ಮಾಡದಿದ್ದರೂ, ಎಲ್ಲವನ್ನೂ ತಾವೇ ಮಾಡಿದ್ದಾಗಿ ಹೇಳಿಕೊಂಡು ಮೆರೆದಾಡುತ್ತಿದ್ದರು.  ನಮ್ಮ ’ಯೆಮೆನಿ’ ಮುಖ್ಯ ವ್ಯವಸ್ಥಾಪಕ ಇವರ ನಡುವೆ ಸೂತ್ರದ ಗೊಂಬೆಯಂತೆ ಆಡುತ್ತಿದ್ದ.  ಈ ಎರಡೂ ಗುಂಪಿಗೆ ಸೇರದ ನಾನು ಒಂದೆಡೆ "ಮಲೆಯಾಳಿ ಮಾಫಿಯಾ", ಮತ್ತೊಂದೆಡೆ "ಮಿಶ್ರಿ ಮಾಫಿಯಾ" ಗಳ ನಡುವೆ ಅಡ್ಡದಾರಿಯಲ್ಲಿ ನಿಂತಿದ್ದೆ.  ಸದಾ ತಾವೇ ಮೇಲೆಂದು ತೋರಿಸಲು ಹೆಣಗಾಡುತ್ತಾ, ಮಾಡಬೇಕಿದ್ದ ಗುರುತರ ಕಾರ್ಯಗಳನ್ನು ನಿರ್ಲಕ್ಷಿಸಿದ್ದ ಎರಡೂ "ಮಾಫಿಯಾ"ಗಳನ್ನು ನಿಯಂತ್ರಿಸಿ, ಸಂಸ್ಥೆಯ ದೈನಂದಿನ ಚಟುವಟಿಕೆಗಳನ್ನು ತಹಬಂದಿಗೆ ತರುವ ಗುರುತರ ಜವಾಬ್ಧಾರಿಯನ್ನು ನನ್ನ ಪಾಲಿಗೆ ವಹಿಸಲಾಗಿತ್ತು.  ಈ ತಾಕಲಾಟಗಳ ನಡುವೆ ಹಾರಿಹೋದ ಒಬ್ಬ ಬಡಪಾಯಿಯ ಪ್ರಾಣಪಕ್ಷಿಯ ಕಥೆ ನನ್ನನ್ನು ತುಂಬಾ ವಿಚಲಿತನನ್ನಾಗಿಸಿತ್ತು.ಒಮ್ಮೆ ಹೀಗೆಯೇ ಕಛೇರಿಯ ದೈನಂದಿನ ಕೆಲಸಗಳಲ್ಲಿ ನಿರತನಾಗಿದ್ದಾಗ ಒಬ್ಬ ಪಾಕಿಸ್ತಾನಿ ಹುಡುಗ ದುಬೈನಿಂದ ಮತ್ತೊಬ್ಬ ನೇಪಾಳಿ ಹುಡುಗನನ್ನು ಕರೆತಂದು ನನ್ನನ್ನು ನೋಡಬೇಕೆಂದು ಕಾಯುತ್ತಿದ್ದ.  ಅವನನ್ನು ಭೇಟಿಯಾಗಿ ಏನೆಂದು ವಿಚಾರಿಸಲಾಗಿ, ಆ ನೇಪಾಳಿ ಹುಡುಗ ಮಾನಸಿಕವಾಗಿ ಅಸ್ವಸ್ಥನಾಗಿದ್ದು ದುಬೈನಲ್ಲಿ ಕೆಲಸ ಮಾಡುತ್ತಿದ್ದ ಇತರ ರಕ್ಷಕರಿಗೂ ತುಂಬಾ ತೊಂದರೆ ಕೊಡುತ್ತಿದ್ದಾನೆಂದು ತಿಳಿಸಿದ.  ಹಲವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ, ಸುಮ್ಮನೆ ಮಲಗಿದ್ದವರಿಗೆ ಇದ್ದಕ್ಕಿದ್ದಂತೆ ರಾತ್ರಿಯಲ್ಲಿ ಎದ್ದು ಕಪಾಳ ಮೋಕ್ಷ ಮಾಡಿದ್ದ!  ಅವನನ್ನು ಅಬುಧಾಬಿಯಲ್ಲಿ ಇಟ್ಟುಕೊಂಡು ಸೂಕ್ತ ಚಿಕಿತ್ಸೆ ಕೊಡಿಸಿ ಸರಿಪಡಿಸಬೇಕೆಂದು ಕೋರಿದ.  ಸರಿ ಎಂದು ಹೇಳಿ ಆ ನೇಪಾಳಿ ಹುಡುಗನನ್ನು ಕರೆ ತರಲು ತಿಳಿಸಿದೆ, ನನ್ನೆದುರು ಬಂದ ಆ ನೇಪಾಳಿ ಹುಡುಗ, ದೀಪಕ್ ಶ್ರೇಷ್ಠನನ್ನು ’ಏನು ನಿನ್ನ ಸಮಸ್ಯೆ, ಯಾಕೆ ಹೀಗೆ ಬೇರೆಯವರಿಗೆ ತೊಂದರೆ ಕೊಡುತ್ತಿದ್ದೀಯ” ಎಂದು ಕೇಳಿದರೆ ಅವನು ಅಸ್ಪಷ್ಟವಾಗಿ ಅದೇನನ್ನೋ ಒದರಿದ.  ನೇರ ದೃಷ್ಟಿ ಮಿಲಾಯಿಸಿ ಮಾತಾಡುತ್ತಿರಲಿಲ್ಲ, ತಲೆ ಬಗ್ಗಿಸಿ ನೆಲವನ್ನು ನೋಡುತ್ತಾ ನಾನೇನೋ ಕೇಳಿದರೆ ಅವನು ಮತ್ತಿನ್ನೇನನ್ನೋ ಹೇಳುತ್ತಿದ್ದ!  ಕೊನೆಗೆ ತಲೆ ಮೇಲೆತ್ತಿ ನನ್ನ ಮುಖ ನೋಡುತ್ತಾ ಮಾತಾಡಲು ಹೇಳಿದೆ, ಅವನ ಕಣ್ಣುಗಳಲ್ಲಿ ಕಂಡ ಭೀಭತ್ಸ ಕ್ರೌರ್ಯ ನನ್ನನ್ನು ಅರೆಕ್ಷಣ ಅಯೋಮಯನನ್ನಾಗಿಸಿತು.   ನನ್ನ ಅನುಭವದ ಪ್ರಕಾರ ಅವನು ಅತಿಯಾದ ಖಿನ್ನತೆಯಿಂದ ನರಳುತ್ತಿರುವುದು ವೇದ್ಯವಾಯಿತು.  ಈ ಖಿನ್ನತೆಯಿಂದಾಗಿ ಅವನು ತನ್ನ ಸಮತೋಲನ ಕಳೆದುಕೊಂಡು ಬೇರೆಯವರ ಮೇಲೆ ಆಕ್ರಮಣ ಮಾಡುವ ಅಥವಾ ತನ್ನ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿದ್ದವು.  ತಕ್ಷಣ ಒಬ್ಬ ಮೇಲ್ವಿಚಾರಕನನ್ನು ಕರೆದು ಶೇಖ್ ಖಲೀಫಾ ಆಸ್ಪತ್ರೆಗೆ ಮನೋ ವೈದ್ಯರಲ್ಲಿಗೆ ಕಳುಹಿಸಿ ಕೊಟ್ಟೆ.  ಅವನಿಗೆ ಸುಮಾರು ಒಂದು ವಾರದ ಚಿಕಿತ್ಸೆ ಅಗತ್ಯವಿದೆಯೆಂದು ತಿಳಿಸಿದ ಮನೋವೈದ್ಯರು ಪ್ರತಿದಿನ ಅವನನ್ನು ಆಸ್ಪತ್ರೆಗೆ ಕರೆತರಲು ಸೂಚಿಸಿ, ಕೆಲವು ಔಷಧಿಗಳನ್ನು ನೀಡಿ ಕಳುಹಿಸಿದ್ದರು.

ಹಿಮಾಲಯದ ತಪ್ಪಲಿನ ಸುಂದರ ದೇಶ ನೇಪಾಳದಿಂದ ಕೆಲಸಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ಬರುವ ಯುವಕರು ಬಹು ಬೇಗ ತಮ್ಮ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾರೆ.  ಎತ್ತ ನೋಡಿದರೂ ಕಣ್ಣು ತುಂಬುವ ಹಸಿರು, ಜುಳುಜುಳನೆ ಹರಿಯುವ ಅಸಂಖ್ಯಾತ ನದಿ ತೊರೆಗಳು, ಆಹ್ಲಾದಕರ ವಾತಾವರಣದಲ್ಲಿ ಹುಟ್ಟಿ ಬೆಳೆದ ಇವರು, ಇಲ್ಲಿನ ಸುಡುಬಿಸಿಲು, ಮರಳುಗಾಡಿನ ಬಿಸಿಗಾಳಿ, ಕಣ್ಣು ಹರಿದಷ್ಟು ದೂರಕ್ಕೂ ಕಾಣುವ ಬರೀ ಮರಳು, ಸಂಸ್ಥೆಯ ಕಡೆಯಿಂದ ಸಿಗುವ ಅತ್ಯಂತ ಕಡಿಮೆ ಸವಲತ್ತುಗಳು, ಸಮಸ್ಯೆಗಳಿದ್ದಾಗ ಸಿಗದ ಸಾಂತ್ವನ ಮತ್ತು ಉಪೇಕ್ಷೆ, ಇವರನ್ನು ಧೃತಿಗೆಡಿಸುತ್ತವೆ.  ಕೆಲಸಕ್ಕೆಂದು ಬರುವಾಗ ಇದ್ದ ಹುರುಪು, ಇಲ್ಲಿನ ಬಿಸಿ ವಾತಾವರಣ ನೋಡುತ್ತಿದ್ದಂತೆ ಇಳಿದು ಹೋಗುತ್ತದೆ.  ಕೆಲವರು ಹೇಗೋ ಹೊಂದಿಕೊಂಡು ಹೋಗುತ್ತಾರೆ, ಮತ್ತೆ ಕೆಲವರು ಮನೋರೋಗಗಳಿಗೆ ತುತ್ತಾಗುತ್ತಾರೆ.  ಲಕ್ಷ ಲಕ್ಷ ದುಡಿಯುವ ಕನಸಿನೊಂದಿಗೆ ಬಂದವರು ಹೆಣವಾಗಿ ಹಿಂತಿರುಗುತ್ತಾರೆ.  ತಮ್ಮ ಅವಲಂಬಿತರ ಕನಸುಗಳನ್ನೂ ಛಿದ್ರಗೊಳಿಸುತ್ತಾರೆ.

ಅವರು ಆಸ್ಪತ್ರೆಯಿಂದ ಹಿಂತಿರುಗಿ ಬಂದ ನಂತರ ಸಂಸ್ಥೆಯ ಮುಖ್ಯಸ್ಥೆಯಾಗಿದ್ದ ಮಾಲೀಕರ ಪುತ್ರಿಯ ಬಳಿಗೆ ಕರೆದೊಯ್ದು ಅವನ ಖಿನ್ನತೆಯ ಲಕ್ಷಣಗಳನ್ನು, ಅದರಿಂದ ಆಗಬಹುದಾದ ತೊಂದರೆಗಳನ್ನು ವಿವರಿಸಿ, ಆದಷ್ಟು ಬೇಗ ಅವನನ್ನು ಕೆಲಸದಿಂದ ವಜಾ ಮಾಡಿ ನೇಪಾಳಕ್ಕೆ ವಾಪಸ್ ಕಳುಹಿಸಬೇಕೆಂದು ಶಿಫಾರಸು ಮಾಡಿದೆ. ಅದಕ್ಕೆ ಒಪ್ಪಿದ ಆಕೆ ಮಾನವ ಸಂಪನ್ಮೂಲ ವಿಭಾಗದ ರಫೀಕನಿಗೆ ತಕ್ಷಣ ಅವನ ವಜಾ ಕಾರ್ಯ ಶುರು ಮಾಡಲು ಆದೇಶಿಸಿದಳು.  ಆದರೆ ಈ "ಮಿಶ್ರಿ" ರಫೀಕ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ನನ್ನೊಡನೆ ವಾದಕ್ಕಿಳಿದು ಭಾರತೀಯರೆಂದರೆ ಒಂದು ರೀತಿಯ ’ಅಲರ್ಜಿ’ಯನ್ನು ಬೆಳೆಸಿಕೊಂಡಿದ್ದ. ಹೀಗಾಗಿ ನನ್ನ ಶಿಫಾರಸನ್ನು, ಸಂಸ್ಥೆಯ ಮುಖ್ಯಸ್ಥೆಯ ಆದೇಶವನ್ನು ಉಪೇಕ್ಷಿಸಿದ.  ಎರಡು ದಿನಗಳಲ್ಲಿ ಮಾಡಬಹುದಾಗಿದ್ದ ಕೆಲಸಕ್ಕೆ ಸಾಕಷ್ಟು ನಿಧಾನ ಮಾಡಿದ.

ಇದಾದ ಮೂರನೆಯ ದಿನ, ಬೆಳಿಗ್ಗೆ ಸುಮಾರು ೫ ಘಂಟೆಗೇ ನನ್ನ ಮೊಬೈಲ್ ಫೋನ್ ಮೊಳಗತೊಡಗಿತ್ತು, ಅತ್ತಲಿಂದ ವಸತಿಗೃಹದ ಮುಖ್ಯಸ್ಥ ಮಾತನಾಡುತ್ತಿದ್ದ, "ಸರ್, ಆ ದೀಪಕ್ ಶೇಷ್ಠ ವಸತಿಗೃಹದಲ್ಲಿ ಕಾಣುತ್ತಿಲ್ಲ, ನಾವು ಹುಡುಕಿ ನೋಡಿದಾಗ ಹತ್ತಿರದಲ್ಲೆ ಇರುವ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ" ಎಂದು ಹೇಳಿದ ಸುದ್ಧಿ ನನ್ನ ಮಂಜಾವಿನ ಸವಿ ನಿದ್ದೆಯನ್ನು ಹಾರಿಸಿತ್ತು. ಐದೇ ನಿಮಿಷಗಳಲ್ಲಿ ಅಲ್ಲಿಗೆ ತಲುಪಿದ್ದ ಪೊಲೀಸರು ಅವನ ಕಳೇಬರವನ್ನು ಮರದಿಂದ ಇಳಿಸಿ, ಖಲೀಫಾ ಆಸ್ಪತ್ರೆಗೆ ಸಾಗಿಸಿದ್ದರು.  ಮರಣೋತ್ತರ ಪರೀಕ್ಷೆಯ ನಂತರ ಅಲ್ಲಿನ ಶವಾಗಾರದಲ್ಲಿರಿಸಿದ್ದ ಅವನ ಶರೀರವನ್ನು ನೋಡಿ ಕರುಳು ಹಿಂಡಿದಂತಾಯಿತು.  ಸುಮಾರು ೨೬ ದಿನಗಳು ಅವನ ಶರೀರ ಅದೇ ಶವಾಗಾರದ ಶೈತ್ಯಾಗಾರದಲ್ಲಿತ್ತು, ಆ ದಿನಗಳಲ್ಲಿ ಮತ್ತೆ ಈ "ಮಿಶ್ರಿ ಮಾಫಿಯಾ"ದ ಜೊತೆಗೆ ನನ್ನ ಜಟಾಪಟಿ ಹೆಚ್ಚಾಯಿತು.  ಇಲ್ಲಿನ ಸರ್ಕಾರದ ಕಾನೂನಿನ ಪ್ರಕಾರ ಎಲ್ಲ ರೀತಿರಿವಾಜುಗಳನ್ನು ಪೂರೈಸಿ ಅವನ ಮೃತಶರೀರ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದು ೨೭ನೆಯ ದಿನ.  ಪ್ರತಿಯೊಂದು ಹಂತದಲ್ಲಿಯೂ ನಿಧಾನಗತಿಯಲ್ಲಿಯೇ ಕಾರ್ಯ ನಿರ್ವಹಿಸಿದ ಮಾನವ ಸಂಪನ್ಮೂಲ ವಿಭಾಗದ "ಮಿಶ್ರಿ" ರಫೀಕ ಎಲ್ಲರಿಂದ ಟೀಕೆಗೆ ಗುರಿಯಾಗಿದ್ದ.  ಸಂಸ್ಥೆಗೆ ಅತಿಯಾದ ನಷ್ಟಕ್ಕೆ ಕಾರಣನಾಗಿದ್ದ.  ಆದರೂ ಅವನು ಮಾಲೀಕರಿಂದ ಕ್ಷಮಿಸಲ್ಪಟ್ಟಿದ್ದ, ಏಕೆಂದರೆ ಅವನು ಅರಬ್ಬಿ ಮಾತಾಡುತ್ತಾನಲ್ಲ!

ಎರಡು ದಿನಗಳಲ್ಲಿ ವಜಾ ಮಾಡಿ ಅವನನ್ನು ನೇಪಾಳಕ್ಕೆ ಕಳುಹಿಸಿದ್ದರೆ ಸಂಸ್ಥೆಗೆ ಆಗುತ್ತಿದ್ದ ಖರ್ಚು ಸುಮಾರು ೨ ಸಾವಿರ ದಿರ್ಹಾಂಗಳು.  ಆದರೆ ಅದನ್ನು ಕಾರ್ಯಗತಗೊಳಿಸದೆ ಉಪೇಕ್ಷಿಸಿದ್ದುದರಿಂದ ಸಂಸ್ಥೆಗೆ ಆದ ನಷ್ಟ ೧೦ ಸಾವಿರ ದಿರ್ಹಾಂಗಳು! ಜೊತೆಗೆ ಆ ಅಮಾಯಕನ ಬೆಲೆ ಕಟ್ಟಲಾಗದ ಜೀವವೂ ನಷ್ಟವಾಗಿತ್ತು.  ಸಕಾಲದಲ್ಲಿ ಎಲ್ಲ ಕಾರ್ಯವನ್ನು ಮುಗಿಸಿ ಅವನನ್ನು ವಾಪಸ್ಸು ಕಳುಹಿಸಿದ್ದಿದ್ದರೆ ಸೂಕ್ತ ಚಿಕಿತ್ಸೆ ಮತ್ತು ತನ್ನ ಪ್ರೀತಿಪಾತ್ರರ ಜೊತೆಗಿನ ಒಡನಾಟ ಅವನನ್ನು ಉಳಿಸಬಹುದಿತ್ತೇನೋ!  ಈ ಮಾಫಿಯಾಗಳ ಮೇಲು ಕೀಳಿನಾಟದಲ್ಲಿ ಒಬ್ಬ ಬಡ ಹುಡುಗನ ಪ್ರಾಣ ಪಕ್ಷಿ ಹಾರಿಹೋಗಿತ್ತು.