Even You cannot, ಶಕ್ತಿಮಾನ್....!
"ಶಕ್ತಿಮಾನ್.... ! ನೀನು ಸಂಹರಿಸಿರುವ ಎಲ್ಲಾ ದುಷ್ಟ ಶಕ್ತಿಗಳಿಗಿಂತ ತೀರಾ ವಿಭಿನ್ನವಾದ ಮತ್ತು ಅಷ್ಟೇ ಭಲಿಷ್ಟವಾದ ದುಷ್ಟ ಶಕ್ತಿಯೊಂದು ಭೂಮಿಯಲ್ಲಿ ಇನ್ನೂ ಅಡಗಿದೆ.. ಅದು ತಲೆ-ತಲಾಂತರದಿಂದ ಬೆಳೆದು ಭಲಿಷ್ಟವಾಗಿರುವ ರಾಕ್ಷಸ.. ಜನರ ರಕ್ತವನ್ನು ಹೀರಿ ಕೊಲ್ಲುತಿರುವ ಆ ಧುಷ್ಟ ಶಕ್ತಿಯನ್ನು ಕೂಡಲೇ ಸಂಹರಿಸು..."
ಎಲ್ಲೆಡೆ ಹರಡಿದ್ದ ದುಷ್ಟಶಕ್ತಿಗಳನ್ನು ನಿರ್ಮೂಲನೆ ಮಾಡಿ, ಜನರಿಂದ ಮರೆಯಾಗಿದ್ದ 'ಶಕ್ತಿಮಾನ್' ಇಂದು ದೂರ ಬ್ರಹ್ಮಾಂಡದಿಂದ ಬಂದ ಈ ವಾಣಿಗೆ, ಪುನ್ಹ ಭೂಮಿಯ ಮೇಲೆ ಪ್ರತ್ಯಕ್ಷನಾದ. ತನ್ನ ದಿವ್ಯದ್ರುಷ್ಟಿಯಿಂದ ಭೂಮಿಯನ್ನು ಒಮ್ಮೆ ನೋಡುತ್ತಾನೆ. ದೂರ ದೂರಕ್ಕೂ ಹೋದ ಆ ದ್ರುಷ್ಟಿ ರಾಕ್ಷಸನನ್ನು ಪತ್ತೆ ಹಚ್ಚಲು ವಿಪಲವಾದವು. ಮತ್ತೊಂದು ಪರ್ವತದ ಮೇಲೆ ಹೋಗಿ ನೋಡುತ್ತಾನೆ. ಎಲ್ಲಿಯೂ ಕಾಣದ ರಾಕ್ಷಸನನ್ನು ಹೇಗೆ ಹುಡುಕುವುದು ಎನ್ನುತಿರುವಾಗ ದೂರದಲ್ಲಿ ಕೆಲ ಜನರು ಘೋಷಣೆಗಳನ್ನು ಕೂಗುತ್ತಾ ಹೋಗುತ್ತಿದ್ದರು. ಅವರ ಬಲಗೈಯಲ್ಲಿ ಹಸಿರಾದ ಬಾವುಟ ಹಾಗು ಎಡಗೈಯಲ್ಲಿ ಬಂದೂಕನ್ನು ಹಿಡಿದಿದ್ದರು! ಮುಖವನ್ನು ಕಪ್ಪಾದ ಬಟ್ಟೆಯಿಂದ ಮುಚ್ಚಿದ್ದ ಆ ಗುಂಪಿನ ಹಿಂದೆ ಒಂದು ಕಾರು, ಕಾರಿನ ಹಿಂದಿನ ಸೀಟಿನಲ್ಲಿ ಒಬ್ಬ ಉದ್ದವಾದ ಕಪ್ಪಾದ ಗಡ್ಡ ಬಿಟ್ಟಿರುವ ವ್ಯಕ್ತಿ. ಸುತ್ತ ಮುತ್ತಲಿನ ಜನರೆಲ್ಲರೂ ಆತನನ್ನು ನೋಡಿ, ಕೈಮುಗಿದು, ಜೈಕಾರ ಹಾಕುತ್ತಿದ್ದರು. ಹಸಿರು ಬಾವುಟವಿಡಿದ ಇದೇ ಗುಂಪು ತಮ್ಮ ಎಡಗೈಯಲ್ಲಿದ್ದ ಬಂದೂಕಿನಿಂದ ಎಲ್ಲೆಂದರಲ್ಲಿ ಗುಂಡಿನ ಸುರಿಮಳೆಗೈದಿತ್ತು...ಮಹಿಳೆಯರು, ಮಕ್ಕಳು ಅನ್ನದೆ ಸಿಕ್ಕ ಸಿಕ್ಕವರನೆಲ್ಲ ಕೊಲ್ಲುತ್ತಿತ್ತು! ಕೆಲವರಂತೂ ತಮ್ಮ ಜೇಬಿನಲ್ಲಿದ್ದ ಚಾಕುವಿನಿಂದ ಯುವಕರ ಶಿರವನ್ನೇ ಕತ್ತರಿಸಿ ಹಾಕುತ್ತಿದ್ದರು. ತಮ್ಮವರನ್ನು ಕಳೆದುಕೊಂಡ ತಾಯಿಯಂದಿರ, ಮಡದಿಯರ,ಮಕ್ಕಳ, ಅಕ್ಕ-ತಮ್ಮಂದಿರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಈ ಗುಂಪು ಅವರುಗಳ ಮೇಲೂ ಗುಂಡಿನ ಸುರಿಮಳೆಗೈದಿತ್ತು. ಇವನ್ನೆಲ್ಲ ನೋಡಿದ ಶಕ್ತಿಮಾನ್ ದಿಗ್ಬ್ರಮೆಗೊಂಡ! ಇವರೆಲ್ಲಾ ಏನು ಮಾಡುತ್ತಿದ್ದಾರೆ, ಏಕೆ ಮಾಡುತಿದ್ದಾರೆ, ಈಷ್ಟೆಲ್ಲಾ ಪಾಪ ಕರ್ಮಗಳನ್ನು ಮಾಡಿದ ಇಂತವರಿಗೂ ಜನರು ಏಕೆ ಜೈಕಾರ ಹಾಕುತ್ತಿದ್ದಾರೆ? ಈತನಿಗೆ ತಿಳಿಯದೆ ಹೋಯಿತು.
ಮತ್ತೊಂದೆಡೆ... ಒಂದು ಹೆಂಗಸು, ಧಿಡೀರನೆ ಬಂದ ಸುದ್ದಿಗೆ ದಿಗ್ಬ್ರಮೆಗೊಂಡು ಆಳತೊಡಗುತ್ತಾಳೆ! ಹುಚ್ಚಿಯಂತೆ ಬಿದ್ದು ಓದ್ದಾಡುತ್ತಾಳೆ..'ಅಮ್ಮಾ..' ಎಂದು ಬೊಬ್ಬೆ ಇಡುತ್ತಾಳೆ. ಆಕೆಯ ಅಮ್ಮ, ವಯಸ್ಸಾದ ಮುದುಕಿ. ಮಂಡಿ ನೋವಿದ್ದರೂ ಕಷ್ಟ ಬಿದ್ದು, ಎಷ್ಟೋ ದಿನಗಳ ಮಗಳ ಕೂಗಿಗೆ ಖುಷಿಗೊಂಡು ಅವಳತ್ತಾ ಬರುತ್ತಾಳೆ. ಆದರೂ ಆಕೆ ಅಳುವುದನ್ನ ನಿಲ್ಲಿಸಲಿಲ್ಲ..'ನಿನ್ನ ಜೈಲಿಗೆ ಹಾಕಿರಲ್ಲ ಆ ಮನೆಹಾಳ್ ನನ್ ಮಕ್ಳು.. ಉದ್ದಾರ ಆಗಲ್ಲ ಅವ್ರು!!' ಎನ್ನುತಾ ಶಾಪ ಹಾಕ ತೊಡಗುತ್ತಾಳೆ. . . 'ಏನಾಗಿದೆ ನಿಂಗೆ! ನಿಮ್ಮಮ್ಮ ನಾನು, ಇಲ್ಲೇ ಇದ್ದೀನಿ. ನನ್ನ್ಯಾರು ಜೈಲಿಗೆ ಹಾಕ್ತಾರೆ' ಅಮ್ಮ ಕೇಳಿದಳು. ಅಮ್ಮನ ಮಾತು ಕಿವಿಗೆ ಬೀಳದಂತೆ ಆಕೆ ಬೊಬ್ಬೆ ಹಾಕ ತೊಡಗಿದಳು. ಬಿದ್ದು ಓದ್ದಾಡ ತೊಡಗಿದಳು. 'ಅಮ್ಮಾ.. ನೀ ಬರ್ಲಿಲ್ಲ ಅಂದ್ರೆ ನಾನ್ ನೇಣ್ ಹಾಕೊಂಡು ಸತ್ತ್ಹೊಗ್ ಬಿಡ್ತ್ಹಿನಿ..' ಮಗಳು ಕೂಗತೊಡಗಿದಳು.ಮುರುಕು ಮನೆಯ ತುಂಬೆಲ್ಲಾ ಮಗಳ ಅಳು ಹೊರಹೊಮ್ಮತೊಡಗಿತು. 'ಬಿಡ್ತು ಅನ್ನೇ! ಅದೇನು ಅಂತ ಮಾತಾಡ್ತಿಯ..' ಮಗಳ ಮಾತಿಗೆ ಅಮ್ಮ ಬಿಕ್ಕಳಿಸ ತೊಡಗಿದಳು. ಮಗುವಾಗಿದ್ದಾಗ ಮಾತ್ರ ಮಗಳು ಇಷ್ಟೊಂದು ಕೂಗುತ್ತಿದ್ದಳು.'ಕೂಲಿ ಕೆಲಸದ ನಂತರ ಎಲ್ಲೋ ಸಾರಾಯಿ ಏರಿಸಿರಬೇಕು..ಕುಡಿದು ಈ ರೀತಿ ಕೂಗುತ್ತಿದ್ದಾಳೆ' ಅಮ್ಮ ಮನದಲ್ಲೇ ಅಂದುಕೊಂಡಳು. ಸ್ವಲ್ಪ ಹೊತ್ತು ಬಿಟ್ಟರೆ ಅತ್ತು ಸುಮ್ಮನಾಗುತ್ತಾಳೆ ಅನ್ನುತ ಮನೆಯ ಹೊರಗೆ ಬಂದು ಮೂಮ್ಮಗ ಶಾಲೆಯಿಂದ ಬರುವುದನ್ನ ಎದುರು ನೋಡುತ್ತ ಅಜ್ಜಿ, ಆಸ್ತಗಳನ್ನು ಒಣ ಕೆನ್ನೆಗಳ ಮೇಲಿಟ್ಟು ಚಾವಡಿಯ ಮುಂದೆ ಕೂತು ದಾರಿ ನೋಡತೊಡಗಿದಳು. ಮಗಳ ಕೂಗು ಕೆಲ ಸಮಯದ ನಂತರ ತಣ್ಣಗಾಯಿತು.
ಅಜ್ಜಿ ನೋಡುತ್ತಿದ್ದ ದಾರಿಯಲ್ಲಿದ್ದ ದಿನಸಿ ಅಂಗಡಿಯ ಮುಂದೆ ಇಂದು ಜನರ ಸಂತೆಯೇ ಸೇರಿತ್ತು. ಹಿಂದೆಂದು ಕಾಣದ ಇಷ್ಟೊಂದು ಜನರನ್ನು ಕಂಡು ಅಜ್ಜಿ ದಿಗ್ಬ್ರಮೆಗೊಂಡು ಅತ್ತ ಕಡೆ ನಡೆದಳು. ಅಂಗಡಿಯ ಒಳಗೆ ಇಟ್ಟಿದ್ದ ಟೀವಿಯಲ್ಲಿ ಬರುತ್ತಿದ್ದ ವಾರ್ತೆಯನ್ನು ನೋಡುತ್ತಿತ್ತು ಗುಂಪು. ಕೆಲವರು ಇದ್ದಕ್ಕಿದಂತೆ ಕುಸಿದು ಕೆಳ ಬೀಳುತ್ತಿದ್ದರು. ಬಿದ್ದು ಒದ್ದಾಡ ತೊಡಗಿದರು. ಸುತ್ತಿದ್ದ ಲುಂಗಿ, ಒರಳಾಟಕ್ಕೆ ಮುದುಡಿ ಒಣ ಸಿಪ್ಪೆಯಂತಾಗಿ ದೂರ ಸರಿದು ಬೀಳುತಿತ್ತು. ಆದರೂ ಅವರು ಬಿದ್ದು, ಕೂಗುತ್ತಾ, ಒದ್ದಾಡುವುದನ್ನ ಬಿಡಲಿಲ್ಲ! "ಅಮ್ಮಾ..." ಎನ್ನುತಾ ತನ್ನ ಮಗಳಂತೆ ಇವರೂ ಕಿರುಚುತ್ತಾ, ಬೊಬ್ಬೆ ಹಾಕತೊಡಗಿದರು. ಯಾರೋ ಸತ್ತ ವಾತಾವರಣ ಊರ ತುಂಬೆಲ್ಲ.
ಶಕ್ತಿಮಾನ್ ತನ್ನ ದೃಷ್ಟಿಯನ್ನು ಇನ್ನೂ ಹತ್ತಿರ ತಂದ. ಬ್ರಹ್ಮಾಂಡದ ಅದೃಷ್ಟವಾಣಿ ಹೇಳಿದ ರಾಕ್ಷಸ ಎಲ್ಲೂ ಗೋಚರಿಸಲಿಲ್ಲ.
"ಥು.. ಮುಂಡೆ ಮಕ್ಳ! ನಿಮ್ಮವ್ವ ಅಲ್ಲಿ ಊಟ, ಬಟ್ಟೆ, ಸೂರ್ ಇಲ್ಲ ಅಂತ ನರಳ್ತಾ ಇದ್ದಾಳೆ. ನಿಮ್ಗೆ ಇನ್ನ್ಯಾರೋ ಆದ್ರ್ ಗಿತ್ತಿ ಅವ್ವ ಆದ್ಲ ?!" ಊರಿಗೆ ಹಿರಿಕಳಾದ ಅಜ್ಜಿ ಅಬ್ಬರಿಸಿದಳು. ಬಿದ್ದು ಒರಳಾಡುತ್ತಿರುವವರು ನೆಲದ ದೂಳನ್ನೆಲ್ಲ ತಮ್ಮ ಕಪ್ಪು ದೇಹದ ಮೇಲೆ ಬರುವಂತೆ, ಲೋಕದ ಕಡೆ ಅರಿವೇ ಇಲ್ಲದಂತೆ ಇನ್ನೂ ಕೂಗುತ್ತಿದ್ದರು. ಅವರ ದೇಹದಿಂದ ಸಾರಾಯಿಯ ವಾಸನೆ 'ಬಗ್ಹ್' ಎಂದು ಮುಖಕ್ಕೆ ಹೊಡೆಯುತಿತ್ತು. ಆಕಾಶವೇ ತಮ್ಮ ಮೇಲೆ ಬಿದ್ದಂತೆ ಗಂಭೀರವಾಗಿ ಟೀವಿ ನೋಡುತ್ತಿದ್ದ ಜನರು ಅಜ್ಜಿಯ ಕಡೆ ದುರುಗುಟ್ಟಿ ನೋಡತೊಡಗಿದರು.
"ಯಾಕ್ರ ಅಂಗ್ ನೋಡ್ತಿರ...ಆ ನನ್ ಮಕ್ಳಿಗಂತೂ ಗೇಯಕ್ಕೆ ಗ್ಯಾಮೆ ಇಲ್ಲ.. ನಿಮ್ಗೆಲ್ಲಾ ಎನಾಗಿತ್ರುಲಾ?! ಊರ್ ಹೋಗ್ನಯಿಸ್ ಹೋತು ಬಿಡಿ.."
"ಏಯ್! ಮುದ್ಕಿ, ಬಾಯಿ ಮುಚ್ಕೊಂಡು ತೆಪ್ಪಗ್ ಇದ್ರೆ ಸರಿ!! ಇಲ್ಲಾ ಅಂದ್ರೆ ನೆಟ್ಟಗಿರಕಿಲ್ಲ ನೋಡು.. ಅವ್ರ್ಯರೋ ಬಂದು ನಮ್ಮ್ ಅಮ್ಮನ ಕರ್ಕೊಂಡ್ ಹೋಗಿ ಜೈಲಿಗ್ ಹಾಕಿದ್ದಾರೆ..ನಾವೆಂಗ್ ಸುಮ್ಕಿರೋದು..ಹೊಟ್ಟೆಗ್ ಬೆಂಕಿ ಹಾಕ್ದಂಗ್ ಆಯ್ತದೆ" ಗುಂಪಿನಿಂದ ಒಬ್ಬ ಅರಚಿದ.
"ಅಯ್ಯ ಸತಿಸ, ನಿಮ್ ಅವ್ವ ಬೆನ್ನ್ ನೋವು ಅಂತ ಹಾಸಿಗೆ ಸೇರಿ ೨ ತಿಂಗಳ್ ಆಯ್ತು! ಏನ್ ಮಾಡ್ದೆ? ಕೊನೆ ಪಕ್ಸ, ಹೇಗ್ ಇದ್ದಿಯಾ ಅಂತಾರು ಕೇಳ್ದ?? ಹೆತ್ತ್ ತಾಯಿ ನೋವು ನೋವಲ್ಲ..ಇನ್ನ್ಯಾರೋ ಮಿಟಕ್ಲಾರಿ ಬಿದ್ರೆ ನಿಮ್ ಹೊಟ್ಟೆಗೆ ಬೆಂಕಿ ಹಾಕ್ದಂಗ್ ಆಯ್ತ್ಹದ?! ಥು, ನಿಮ್ಮ್ ಜನ್ಮಕಿಷ್ಟು." ಗುಂಪಿನ ಸತೀಶ ಅಜ್ಜಿಯ ಮಾತಿಗೆ ಗುಂಪಲ್ಲೆ ಕಾಣೆಯಾದ. ಶಕ್ತಿಮಾನ್ ಒಮ್ಮೆ ಮುಗುಳ್ ನಕ್ಕ.
''ಏನೆಲ್ರ ಆಕೆ ನಿಮ್ಗೆ ಮಾಡವ್ಳೆ? ಕುಡಿಯೋಕ್ಕೆ ಯಂಡ, ಅವ್ರು ಇವ್ರಿಗೊಂದ್ ಟೀವಿ, ನಿಮ್ ಗೈಯ್ಯಾಳಿ ಹೆಂಡ್ರುಗಳಿಗೆ ಸೀರೆ! ಇವೆ ನೋಡಿ ನಿಮ್ಮುನ್ನ, ನಿಮ್ಮ್ ಮಕ್ಳುನ್ನ ಉದ್ದಾರ ಮಾಡೋದು. ಕೊಟ್ರು ಯಾರ್ ದುಡ್ಡಲ್ಲಿ ಕೊಡ್ತಾಳೆ.. ನಿಮ್ಮುದೆ ಕಂಡ್ರಲ್ಲ ಆ ದುಡ್ಡು...ನಿಮ್ದೆ! ಹೊಟ್ಟೆಗೆ ಹಿಟ್ಟ್ ಇಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಹೂವ ಮುಡುಸ್ತಾವ್ಲೆ ಅವ್ಳು...ತಪ್ಪ್ ಅವತ್ತೆ ಮಾಡ್ಲಿ ಇಲ್ಲ ಇವತ್ತೇ ಮಾಡ್ಲಿ..ತಪ್ಪ್ ತಪ್ಪೇನೆಯ! ಅವತ್ತ್ ಕದ್ದಿದ್ಲು, ಇವತ್ತ್ ಸಿಗ ಹಾಕೋನ್ಡ್ಲು..ಅವತ್ತ್ ಮಾಡಿದ್ ತಪ್ಪಿಗೆ ಇವತ್ತ್ ನಿಮ್ಗೆ ಪುಕ್ಸಾಟಿ ಯಂಡ ಕುಡುಸ್ತವಳೇ. ಅದೇ ತಪ್ಪಾ ನೀವ್ ಮಾಡಿದ್ರೆ ನಿಮ್ಮುನ್ನ ಸುಮ್ಕೆ ಬುಟ್ ಬಿಡ್ತಿದ್ರ.. ಹ? ನಿಮ್ಮ್ ಮಕ್ಳಿಗೆ ಕಳ್ರುನ್ಗೆ ಜೈಕಾರ ಹಾಕೋದನ್ನ ಕಲ್ಸಿ, ಕಳ್ರ ಗುಲಾಮ್ಗಲ್ ಮಾಡ್ಸಿ.. ಥು ನಿಮ್ ಯೋಕ್ತಿಗಿಷ್ಟು! ಅಮ್ಮಾ ಅಂತೆ ಅಮ್ಮಾ.. ನಿಮ್ ಅವ್ವುಂದಿರು ನಿಮ್ಗೆ ಏನೂ ಕೊಟ್ಟಿರ್ದೆ ಇರ್ಬಹುದು..ಆದ್ರೆ ಕದ್ಯೋದ, ಸುಳ್ ಹೇಳದ, ಮೋಸ ಮಾಡದ ಹೇಳ್ ಕೊಟ್ಟಿಲ್ಲ. ಗೇಯಕ್ಕೆ ಕೈ, ಯೋಚ್ಸಕ್ಕೆ ತಲೆ, ಕೊಟ್ಟವ್ರೆ. ನೆನಪ್ ಇಟ್ಕಳಿ.......'' ಎಂದೂ ವಾರ್ತೆಗಳನ್ನು ಕೇಳದ, ನೋಡದ ಅಜ್ಜಿ ಇಷ್ಟೆಲ್ಲಾ ಮಾತಾಡಿದ್ದನ್ನು ಕಂಡು ಜನರ ಗುಂಪು ದಿಗ್ಬ್ರಮೆಗೊಂಡಿತು. ಬಿದ್ದು ಒರಳಾಡುತ್ತಿರುವವರು ನೆಲದಿಂದ ತಲೆಯನ್ನೊಮ್ಮೆ ಮೇಲೆತ್ತಿ ಅಜ್ಜಿಯನ್ನು ನೋಡಿ ಪುನ್ಹ ಒರಳಾಡುವುದನ್ನ ಮುಂದುವರೆಸಿದರು! ಅಷ್ಟರಲ್ಲಾಗಲೇ ಮೊಮ್ಮಗ ಶಾಲೆಯಿಂದ ಬಂದು ಅಜ್ಜಿಯ ಹಿಂದೆ ನಿಂತಿದ್ದ. ಅಜ್ಜಿಯ ಮಾತು ಅರ್ಥವಾಗದೆ ಹೋದರೂ, ಅವನ ದೃಷ್ಟಿ ನೇರ ಅಂಗಡಿಯ ಮಿಟಾಯಿ ಡಬ್ಬದ ಮೇಲಿದ್ದಿತ್ತು. ಅದನ್ನು ನೋಡಿದ ಅಜ್ಜಿ, "ಬಾರ್ಲಾ ಮಗ ಅಮ್ಮುಂಗೆಳಿ ನಿಂಗೆ ಕೀರ್ ಮಾಡಿಸ್ತೀನಿ..ಬಾ.." ಅನ್ನುತ ಮೊಮ್ಮಗನನ್ನು ಅಲ್ಲಿಂದ ಕರೆದೊಯ್ದಳು. ಮಿಟಾಯಿ ಬದಲು ಕೀರು ಸಿಗುತ್ತದೆ ಎಂದಾಗ ಮೊಮ್ಮಗ ಅಜ್ಜಿಗಿಂತ ಮೊದಲೇ ಮನೆಯಡೆ ಓಡಿದ. ಅಜ್ಜಿ ಒಂದೊಂದೇ ಹೆಜ್ಜೆಯಿಡುತ್ತಾ ನಡೆದಳು. ಅಜ್ಜಿ ಮನೆಯೊಳಗೇ ಬರುವ ಮೊದಲೇ ಮೊಮ್ಮಗ "ಅಮ್ಮಾ.. ಅಮ್ಮಾ.." ಎಂದು ಅರಚುತ್ತಿದ್ದ. 'ತಡಿಲಾ.. ಕೀರು ಅಂದ್ರೆ ಅಂದ್ರೆ ಮುಗಿತು ...ನಿಮ್ಮ್ ಅವ್ವ ಕುಡಿದಿರೋದು ಇಳ್ದಿದ್ರೆ ಮಾಡ್ತಾಳೆ ' ಅನ್ನುತ ಒಳ ಬಂದಳು. ಮುರುಕಲು ಮನೆಯ ಸೂರಿಗೆ ಹಗ್ಗ ಬಿಗಿದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ನೇತಾಡುತ್ತಿದ್ದ ಕಾಲುಗಳನ್ನು ಮಗ ಬಿಗಿಯಾಗಿ ಹಿಡಿದ್ದಿದ್ದ. "ಅಯ್ಯೋ..ಹುಚ್ಚಿ.." ಅನ್ನುತ್ತ ಅಜ್ಜಿ ನೆಲದ ಮೇಲೆ ಕುಸಿದಳು.
ಶಕ್ತಿಮಾನ್ಗೆ ಒಮ್ಮೆಲೇ ಸಿಡಿಲು ಬಡಿದಂತೆ ಆಯಿತು. ಎಲ್ಲೋ ಒಂದೆಡೆ ಭಯವು ಕಾಡಿತು! ಭಯದ ಕಾರಣ ತಿಳಿಯಲಿಲ್ಲ... "ಭೂಮಿಯ ಮೇಲಿನ ಜನರು ಇಷ್ಟೊಂದು ಮತಿಹೀನರಾಗಿದ್ದಾರ ..?!,, " ಶಕ್ತಿಮಾನ್ ತನ್ನಲ್ಲೇ ಕೇಳಿದ.
ಮತ್ತೊಂದೆಡೆ, ಬಂದೂಕು ಹಿಡಿದ್ದಿದ್ದ ಗುಂಪು ಜನರ ಮಾರಣ ಓಮವನ್ನೇ ಮುಂದುವರೆಸಿತ್ತು. ಕಾರಿನ ಒಳಗೆ ಕೂತಿದ್ದ ವ್ಯಕ್ತಿ ಕೈ ಮಾಡಿ ತೋರಿದಲೆಲ್ಲ ಗುಂಪು ಗುಂಡಿನ ಸುರಿಮಳೆಗೈದಿತ್ತು. ''ಇದು ದೇವರ ಕಾರ್ಯ, ಇದೇ ನಿಮ್ಮನ್ನು ಸ್ವರ್ಗಕ್ಕೆ ಕೊಂಡೊಯ್ಯುವುದು..ಕೊಲ್ಲಿ .. ಇನ್ನೂ ಕೊಲ್ಲಿ.. ನಮ್ಮ ಪಂಗಡ ಇನ್ನು ಬೆಳೆಯಬೇಕು.." ಕಾರಿನೊಳಗಿನ ಗಡ್ಡದಾರಿ ವ್ಯಕ್ತಿ ಅರಚುತ್ತಿದ್ದ. ಮತಿಹೀನ ಗುಂಪು ಅದನ್ನು ಚಾಚುತಪ್ಪದೆ ಆಚ್ಚುಕಟ್ಟಾಗಿ ನಿರ್ವಹಿಸುತ್ತಿತ್ತು. ಜನರ ಆಕ್ರಂದನ ತಾಳದೆ ಈ ಬಾರಿ ಶಕ್ತಿಮಾನ್ ಗುಂಪಿನ ಎಲ್ಲಾ ಬಂದೂಕುಗಳನ್ನು ಮಾಯವಾಗಿಸಿದ. ಗುಂಪು, ಬಾಂಬುಗಳನ್ನು ಎಸೆಯತೊಡಗಿತು. ಬಾಂಬುಗಳನ್ನು ಮಾಯವಗಿಸಿದ. ಗುಂಪು ಕಲ್ಲುಗಳನ್ನು ಎಸೆಯ ತೊಡಗಿತು. ಕಲ್ಲುಗಳು ಮಾಯವಾದರೆ ಮಾತಿನ ಬೈಗುಳದಿಂದ ನಿಂದಿಸ ತೊಡಗಿತು!! ಏನು ಮಾಡಬೇಕೆಂದು ಶಕ್ತಿಮಾನ್ಗೆ ಅರಿವಾಗಲಿಲ್ಲ. ತನ್ನೆಲ್ಲಾ ಶಕ್ತಿಯನ್ನು ಬಳಸಿದರೂ ಜನರ ಮತಿಯನ್ನು ಸರಿಪಡಿಸಲಾಗಲಿಲ್ಲ..!
ಜೀವನದಲ್ಲಿ ಮೊದಲ ಬಾರಿಗೆ ಶಕ್ತಿಮಾನ್ ಶಕ್ತಿಹೀನನಾದ! ಜನರ ಮನದಲ್ಲಿ ಅಡಗಿರುವ ಈ ಭಲಿಷ್ಟ ಮತಿಹೀನ ರಾಕ್ಷಸನನ್ನು ಸಂಹರಿಸಲು ಸಾಧ್ಯವಾಗಲೇ ಇಲ್ಲ! ಭಾರವಾದ ಮನದಿಂದ ಸತ್ತ ಆತ್ಮಗಳಿಗೆ ಶಾಂತಿ ಕೋರಿ ಮತ್ತೊಮ್ಮೆ ಶಕ್ತಿಮಾನ್ ಬ್ರಹ್ಮಾಂಡದಲ್ಲಿ ಮರೆಯಾದ....