I.I.T ಯಲ್ಲಿ ಜನಸಂಖ್ಯೆ
I.I.T ಯ ಬಗ್ಗೆ, ಹೆಚ್ಚಿನ ಸತ್ಯಗಳು ಹೊರಜಗತ್ತಿಗೆ ತಿಳಿದಿರುವುದಿಲ್ಲ. ಇಂತಹ ಸತ್ಯಗಳನ್ನು ಹೊರಜಗತ್ತಿಗೆ ತೋರಿಸುವ ನಿಟ್ಟಿನಲ್ಲಿ, ನಾನು, ಕೆಲವು ಲಾಖನಗಳನ್ನು ಬರೆಯಲು ನಿರ್ಧರಿಸಿದ್ದೇನೆ. ಹುಡುಗರು ಮಾಡುವ ಮೋಜಿನಾಟ, ಇಲ್ಲಿನ ತಾಂತ್ರಿಕ ಪ್ರಾವೀಣ್ಯತೆ, ಕಾಣದ ಗಂಭೀರ ಸಮಸ್ಯೆಗಳು, ಎಲ್ಲವನ್ನೂ ಒಂದೊಂದಾಗಿ ಬರೆಯುತ್ತಾ ಹೋಗುತ್ತೇನೆ.
ಸೌಲಭ್ಯಗಲಲ್ಲಿ ಸಾಕಷ್ಟು ಸುಧಾರಿತವಾದರೂ, ಇಲ್ಲಿಯೂ ಜನಸಂಖ್ಯಾಸ್ಪೋಟ ಸಂಭವಿಸುವುದರಲ್ಲಿದೆ. ಈ ವಿಷಯ ಹೊರಗಿನವರಿಗೆ ತಿಳಿದಿರುವುದಿಲ್ಲ. ಈ ಲೇಖನದಲ್ಲಿ, ಇಲ್ಲಿನ ಜನಸಂಖ್ಯೆ ಈಗಾಗಲೇ ಮಿತಿ ಮೀರಿದೆ ಎನ್ನುವ ವಿಚಾರವನ್ನು ಬರೆದಿದ್ದೇನೆ.
ಸೆಮಿಸ್ಟರ್ ಪ್ರಾರಂಭವಾಗುವುದು, ರಿಜಿಷ್ಟ್ರೇಶನ್ ನಿಂದ. ಫೀಸ್ ಕಟ್ಟುವುದು ATM ಮೂಲಕ (ಈಗ ಚೆಲನ್ ಎಲ್ಲಾ ಯಾರು ಭರಿಸ್ತಾರೆ?). ಕ್ಯಾಂಪಸ್ ನಲ್ಲಿ ಇರುವುದು ಎರಡು SBI ATM. ಹೀಗಾಗಿ, ರಿಜಿಷ್ಟ್ರೇಶನ್ ದಿನ, ಎರಡೂ ATM ಗಳೆದುರು, ಹನುಮನ ಬಾಲದಂತೆ ಕ್ಯೂ ಬೆಳೆಯುತ್ತದೆ. ಬೆಳಿಗ್ಗೆ ಸುಮಾರು ೯ ಕ್ಕೆ ಶುರುವಾಗಿರುತ್ತದೆ ಈ ಕ್ಯೂ. ೧೨ರ ಹೊತ್ತಿಗೆ ATM ಕಟ್ಟಿರುತ್ತದೆ.(ಇದು ಪ್ರತೀ ಸೆಮಿಸ್ಟರ್ ನಲ್ಲೂ ಖಚಿತವಾಗಿ ನಡೆಯುವ ಘಟನೆ!). ಒಳಗಿನಿಂದ, ಒಬ್ಬ, "sorry, unable to process your request" ಎನ್ನುವ ಚೀಟಿ ಹಿಡಿದು ಹೊರಬಂದು, "ರಿಜಿಸ್ಟ್ರೇಶನ್ ನಹೀ ಹೋ ರಹಾ ಹೈ" ಎಂದು, ಕ್ಯೂ ನಲ್ಲಿನವರ ಫ್ರಶ್ಟ್ರೇಶನ್ ಗೆ ಉಪ್ಪು ಸುರಿಯುತ್ತಾನೆ. 'ಊಟ ಮುಗಿಸಿ ಬರುವ' ಎಂದು, ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡುತ್ತಾರೆ. ಮಧ್ಯಾಹ್ನ ATM ಚೇತರಿಸಿಕೊಂಡಿರುತ್ತದೆ. ೩ ಘಂಟೆಯ ಹೊತ್ತಿಗೆ, ಎಲ್ಲರೂ ATM ಕೆಲಸ ಮುಗಿಸಿ Id Card ಅಪ್ ಡೇಟ್ ಮಾಡಲು ತೆರಳುತ್ತಾರೆ. ಅಲ್ಲಿ, ಇನ್ನೊಂದು ಕ್ಯೂ(ಹೆಚ್ಚು ಕಮ್ಮಿ ಇದೇ ಜನಗಳ ಕ್ಯೂ!). ಹೀಗೆ ಅರ್ಧ ಘಂಟೆಯ ಕೆಲಸಕ್ಕೆ ಒಂದು ದಿನ ಹಿಡಿಯುತ್ತದೆ.
ಸೆಮಿಸ್ಟರ್ ಮೊದಲ ದಿನ, ಕ್ಲಾಸ್ ಮುಗಿದ ಮೇಲೆ, ಲೈಬ್ರರಿಯಲ್ಲಿ ಎಂದೂ ಇಲ್ಲದ ರಶ್....ಮೊದಲ ಕ್ಲಾಸ್ ನಲ್ಲಿ ಪ್ರೊಫೆಸರ್ ಹೇಳಿದ ಪಠ್ಯಪುಸ್ತಕವನ್ನು, ಲೈಬ್ರರಿಯಿಂದ ಖಾಲಿಯಾಗುವ ಮುನ್ನ ಬ್ಯಾಗಿಗೆ ಸೇರಿಸಬೇಕು ಎಂಬ ಆತುರ ಎಲ್ಲರಿಗೂ!. ಅದಾದಮೇಲೆ, ಲೈಬ್ರರಿ ಸ್ಮಶಾಣವಾಗುತ್ತದೆ. ಕೊನೆಯ ಮಹಡಿಯಲ್ಲಿ, ಗಂಭೀರವಾಗಿ ಕೆಲಸಮಾಡುತ್ತಿರುವ ೫-೬ ಜನ ಮಟ್ಕಾ ಗಳನ್ನು('ಮಟ್ಕಾ' ಅಂದರೆ, MTech ಓದುತ್ತಿರುವ ಪಿಜಿ ಗಳು) ಬಿಟ್ಟರೆ, ಆ ೩ ಫ್ಲೋರ್ ಲೈಬ್ರರಿಯಲ್ಲಿ ಯಾರೂ ಇರುವುದಿಲ್ಲ. ಮುಂದೆ ಲೈಬ್ರರಿ ಗೆ ಜನ ಬರುವುದು, (ಅಥವ ಪುಸ್ತಕಗಳ ಬಗ್ಗೆ ನೆನಪಾಗುವುದು :D) MID Sem ಪರೀಕ್ಷೆ ಬಂದಾಗ. ಅಷ್ಟು ದೊಡ್ಡ ಲೈಬ್ರರಿಯಲ್ಲೂ ಜಾಗ ಸಾಲದೆ, ಜನ, ನೆಲದ ಮೇಲೆ, ಟೇಬಲ್ ಮೇಲೆ ಕುಳಿತು ಓದುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಆಗ ಹಾಸ್ಟಲ್ ಖಾಲಿ!. ಹಾಗಾಗಿ, ನಾನು, ಕಳೆದ ವರ್ಷ, ಪರೀಕ್ಷೆಯ ದಿನಗಳಲ್ಲಿ, ಹಾಸ್ಟೆಲ್ ನಲ್ಲಿದ್ದು, ಬೇರೆ ದಿನಗಳಲ್ಲಿ, ರಾತ್ರಿಯವರೆಗೂ ಲೈಬ್ರರಿಯಲ್ಲಿರುತ್ತಿದ್ದೆ!. ಪರೀಕ್ಷೆಗೆಂದು ಲೈಬ್ರರಿಯನ್ನು ೨೪ ಘಂಟೆ ತೆರೆದಿರುತ್ತಾರೆ. ಹಾಸ್ಟಲ್ ನಲ್ಲಿ ಇಲ್ಲದಿರುವ 'A.C' ಸೌಲಭ್ಯ ಲೈಬ್ರರಿಯಲ್ಲಿರುವುದರಿಂದ, ಅಲ್ಲೇ ’ಸುಖವಾಗಿ ನೈಟ್-ಔಟ್” ಮಾಡುವವರೂ ಇದ್ದಾರೆ.
ATM ಮುಂದೆ ಹನುಮನ ಬಾಲ ಮತ್ತೆ ಬೆಳೆಯುವುದು MID Semester recess ನಲ್ಲಿ. ಆಲ್ಲಿಯವರೆಗೂ ಖಾಲಿ ಹೊಡೆಯುತ್ತಿದ್ದ ATM, ರೆಜೆಯ ಹಿಂದಿನ ದಿನ, ಮನೆಗೆ ಹೊರಡಲು, ದುಡ್ಡು ಡ್ರಾ ಮಾಡಲು ಬರುವವರಿಂದ ತುಂಬಿಕೊಂಡಿರುತ್ತದೆ. ಕಳೆದ ವರ್ಷ ದೀಪಾವಳಿಯ ದಿನ, ನಾನು, ನನ್ನ ೭-೮ ಜನ ಗೆಳೆಯರೊಂದಿಗೆ, ರಾತ್ರಿ, ಸಿನೆಮಾ ನೋಡಿ, ಅಲ್ಲೇ ಯಾವುದಾದರೂ ಹೋಟೆಲ್ ನಲ್ಲಿ ಊಟ ಮುಗಿಸಿ ಬರಲು ಹೊರಟೆ. ಹೊರಡುವುದು ತಡವಾಗಿ, ಊಟ ಮುಗಿಸಿ, ನಂತರ ಸೆಕೆಂಡ್ ಶೋ ಗೆ ಹೋಗೋಣವೆಂದು ನಿರ್ಧರಿಸಿದೆವು. ದೀಪಾವಳಿಯ ಪ್ರಯುಕ್ತ, ಊರಲ್ಲೆಲ್ಲಾ ಹೋಟೆಲ್ ಗಳು ಬಾಗಿಲು ಮುಚ್ಚಿದ್ದವು(ಅದು ಕಾನ್ಪುರ!). ಊರೆಲ್ಲಾ ಸುತ್ತಿ, ಕಡೆಗೆ, ೯:೩೦ರ ವೇಳೆಗೆ, ’ಲಕಿ ರೆಸ್ಟೋರೆಂಟ್’ ಎಂಬಲ್ಲಿಗೆ ಬಂದೆವು. ಅಂದು, ಆ ಊರಿನಲ್ಲಿ ತೆರೆದಿದ್ದ ಹೋಟೆಲ್ ಅದೊಂದೇ ಎಂದೇ ನಾನು ಇಂದಿಗೂ ಧೃಡವಾಗಿ ನಂಬಿದ್ದೇನೆ :D. ಒಳೆಗೆ, ಒಂದು ಟೇಬಲ್ ಕೂಡ ಖಾಲಿ ಇಲ್ಲ. ಆಶ್ಚರ್ಯವೆಂದರೆ, ಎಲ್ಲಾ ಟೇಬಲ್ ನಲ್ಲೂ ಕೂತಿದ್ದವರು ನಮ್ಮರೇ!! ನಮ್ಮ ಕಾಲೇಜಿನವರೆಲ್ಲಾ ನಮ್ಮ ಹಾಗೇ ಊಟಕ್ಕೆಂದು ಹೊರಬಂದು, ಎಲ್ಲಿಯೂ ತೆರೆದಿರುವ ಹೋಟೆಲ್ ಕಾಣದೆ, ಕಡೆಗೆ ಇದೇ ಹೋಟೆಲ್ ಗೆ ಬಂದಿದ್ದಾರೆ!! ಆಗ ನಾನು 1st ಇಯರಿನಲ್ಲಿದ್ದೆ. ಈಗ ನನಗೆ ತಿಳಿದಿದೆ: ರಜಾ ದಿನಗಳಲ್ಲಿ, ರಾತ್ರಿ, ಕಾನ್ಪುರದ ಪ್ರಮುಖ ಬೀದಿ ಸುತ್ತಿದರೆ, ಸಿಗುವವರೆಲ್ಲಾ ನಮ್ಮವರೇ!. ಬೇಸಿಗೆಯಲ್ಲಿ, ಸ್ವಿಮ್ಮಿಂಗ್ ಗೆ ಹೋದರೆ ಚೆನ್ನ ಎಂದು, ನಾನು ನಿತ್ಯವೂ ಸಂಜೆ ಕ್ಯಾಂಪಸ್ ನ ಪೂಲ್ ಗೆ ಹೋಗುತ್ತಿದ್ದೆ. ಒಲಂಪಿಕ್ ಸೈಜ್ ಪೂಲ್ ಆದರೂ ಒಬ್ಬರಿಗೊಬ್ಬರು ತಲೆಗೆ ಡಿಕ್ಕಿ ಹೊಡೆಯುವಷ್ಟು ಜನ. ’ಎಲ್ಲರೂ’ ಹೋಗುತ್ತಾರೆ ಎಂದೇ ”ಎಲ್ಲರೂ’ ಹೋಗುವುದು!
’ಗೂಬೆಯ ಪ್ರವೃತ್ತಿ’, ಇಲ್ಲಿನ ವಿಧ್ಯಾರ್ಥಿವೃಂದದಲ್ಲಿರುವ ಮತ್ತೊಂದು ಸಂಸ್ಕೃತಿ. ಒಂದು ರಾತ್ರಿ ಇಡೀ ಎಚ್ಚರವಿದ್ದರೆ ಸಾಕು, ಏನೋ ಭಯಂಕರ ಸಾಧನ ಮಾಡಿಬಿಡಬಹುದು ಎಂಬ ನಂಬಿಕೆಯನ್ನು ಇಲ್ಲಿನ ವಿಧ್ಯಾರ್ಥಿಗಲಲ್ಲಿ ಪ್ರಭಲವಾಗಿ ಕಾಣಬಹುದು. ಜತೆಗೆ ಇಲ್ಲಿ ಹವಮಾನದ ವೈಪರೀತ್ಯ ಬೇರೆ. ಹಾಗಾಗಿ, ಹಾಸ್ಟೆಲ್ ನಲ್ಲಿ, ಮೆಸ್, ಬೆಳಿಗ್ಗೆ ೭.೩೦ ರಿಂದ ೧೦.೦೦ರವರೆಗೆ ತೆರೆದಿದ್ದರೂ, ನಿತ್ಯವೂ ನಾಷ್ಟಾ ಮಾಡುವವರ ಸಂಖ್ಯೆ ತೀರಾ ಕಡಿಮೆ. ಮಧ್ಯಾಹ್ನದವರೆಗೂ ಶಾಂತವಾಗಿರುವ ಕ್ಯಾಂಪಸ್ ರಸ್ತೆಗಳು, ೧.೦೦ಕ್ಕೆ, ಕ್ಲಾಸ್ ನಿಂದ ಹಾಸ್ಟೆಲ್ ಗೆ ಹಿಂದಿರುಗುವ ಸೈಕಲ್ ಗಳಿಂದ ಜಾಮ್ ಆಗಿರುತ್ತದೆ. ಇದೇ ಜಾಮ್, ೧೦ ನಿಮಿಷಗಳಲ್ಲಿ, ಮೆಸ್ ಗೆ ಟ್ರಾನ್ಸ್ ಫರ್ ಆಗಿರುತ್ತದೆ. ಕೆಲವೊಮ್ಮೆ, ಕ್ಯೂ, ಕೌಂಟರಿನಿಂದ ಬಾಗಿಲತನಕ ಬೆಳೆದಿರುತ್ತದೆ. ೨.೦೦ ಘಂಟೆಗೆ ಲ್ಯಾಬ್, ಅಷ್ಟರಲ್ಲಿ ಊಟಮುಗಿಸಿ ಹೊರಡಬೇಕೆಂಬ ಕಾತರದಲ್ಲಿ, ವಿಧ್ಯಾರ್ಥಿಗಳು, ರೋಟಿಗಳಿಗಾಗಿ ನಾಯಿಗಳಂತೆ ಕಾದಾಡಿ, ಹರಿದ ರೋಟಿಗಳನ್ನು ಊಟಮಾಡುವುದೂ ಉಂಟು. ಬೇರೆ ಸಮಯದಲ್ಲಿ ಮೆಸ್ ತೆರೆದಿದ್ದರೂ, ಅಲ್ಲಿ, ವಿಧ್ಯಾರ್ಥಿಗಳು, ಅಲ್ಲಿನ ಕೆಲಸಗಾರರಿಗಿಂತಾ ಕಡಿಮೆ ಸಂಖ್ಯೆಯಲ್ಲಿರುತ್ತಾರೆ. ರಾತ್ರಿ ಹೊತ್ತು, ಮೆಸ್ ನಲ್ಲಿ ಏನಾದರೂ ಒಳ್ಳೆ ಐಟಮ್ ಮಾಡಿದ್ದರೆ ಮಾತ್ರಾ ರಶ್ ಎದ್ವಾ ತದ್ವಾ ಏರುತ್ತದೆ. ಮಧ್ಯಾಹ್ನ ಬಿಡುವಿರುವವರು, (ಇಲ್ಲಿ, ಕೆಲವರಿಗೆ ಬಿಡುವಿನ ವೇಳೆ, ಸ್ವಲ್ಪ ಜಾಸ್ತಿಯೇ) ಎಚ್ಚರವಿದ್ದರೆ, ಗಂಭೀರವಾಗಿ, ಕಂಪ್ಯೂಟರ್ ಗೇಮ್ಸ್ ಆಡುತಿರುತ್ತಾರೆ. ಪ್ರತೀ ರೂಮಿಗೂ ಫ್ರೀ ಇಂಟರ್ನೆಟ್ ಇರುವುದರ ಪ್ರಭಾವವಿದು. ೧೦೫೫ ಎಕರೆ ಕ್ಯಾಂಪಸ್ ಇದ್ದೂ, ಈ ರೀತಿಯ ಅನುಭವಗಳಾದರೆ, ಅದು ಜನಸಂಖ್ಯೆಯ ಪ್ರಭಾವವಲ್ಲದೆ ಮತ್ತೇನು?