ಜಡ್ಜ್ ಪಾಠ ಕಲಿತರು

Submitted by addoor on Sat, 04/04/2020 - 12:38

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)

೧೯೫೪ರಲ್ಲಿ ಮ್ಯಾಜಿಸ್ಟ್ರೇಟಾಗಿ ನನ್ನ ಸೇವೆಯ ಮೊದಲ ದಿನಗಳಲ್ಲಿ ನಾನು ಮೋಟಾರು ವಾಹನಗಳ ಸಣ್ಣ ಪ್ರಕರಣವೊಂದರ ವಿಚಾರಣೆ ಮಾಡಬೇಕಾಯಿತು. ಈ ಪ್ರಕರಣ ನನ್ನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಹಾಗೂ ಪರಿಣಾಮ ಬೀರಿದೆ.
    ಹೆಡ್‍ಕಾನ್‍ಸ್ಟೇಬಲ್ ಒಬ್ಬರು ಲಾರಿ ತಪಾಸಣೆ ಮಾಡಿದಾಗ ಲಾರಿಚಾಲಕ ತನ್ನ ಡ್ರೈವಿಂಗ್ ಲೈಸೆನ್ಸ್ ಮತ್ತು ಇತರ ದಾಖಲಾತಿಗಳನ್ನು ಹಾಜರುಪಡಿಸಲು ವಿಫಲನಾದ ಆರೋಪ ಹೊತ್ತ ಪ್ರಕರಣದ ವಿಚಾರಣೆ ಅದಾಗಿತ್ತು.
    ಪ್ರಾಸಿಕ್ಯೂಷನ್ ಪ್ರಕರಣದ ಪರವಾಗಿ ಹೆಡ್‍ಕಾನ್‍ಸ್ಟೇಬಲ್ ಸಾಕ್ಷಿ ಕಟ್ಟೆಯಲ್ಲಿ ನಿಂತರು ಮತ್ತು ತಾನು ಲಾರಿಯನ್ನು ನಿಲ್ಲಿಸಿ, ಪರಿಶೀಲನೆ ಮಾಡಿದಾಗ ಈ ಆರೋಪಿಯೇ ಅದರ ಚಾಲಕನಾಗಿದ್ದ ಮತ್ತು ತಾನು ಕೇಳಿದಾಗ ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸಲು ಆತ ವಿಫಲನಾಗಿದ್ದ ಎಂದು ಹೇಳಿಕೆ ನೀಡಿದರು. ಆರೋಪಿ ಪರವಾಗಿ ಹಾಜರಾಗಿದ್ದ ಲಾಯರ್  ಹೆಡ್‍ಕಾನ್‌ಸ್ಟೇಬಲ್‌ನನ್ನು ಪಾಟೀಸವಾಲಿಗೆ ಒಳಪಡಿಸಲು ಅಪೇಕ್ಷಿಸುವುದಿಲ್ಲ ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು.
    ಸಹಜವಾಗಿಯೇ, ಪ್ರಾಸಿಕ್ಯೂಷನ್ ತನ್ನ ಮಂಡನೆ ಮುಗಿಸಿತು. ಪ್ರತಿವಾದಿ ವಕೀಲರು ಆರೋಪಿಯ ಪರವಾಗಿ ಯಾವುದೇ ಸಾಕ್ಷ್ಯವನ್ನು ಮುಂದಿಡಬಯಸುವುದಿಲ್ಲ ಎಂದು ಹೇಳಿದಾಗ ನನಗೆ ಮತ್ತಷ್ಟು ಆಶ್ಚರ್ಯವಾಯಿತು. ಇದರಿಂದ, ಹಾಗಾದರೆ ನಾನು ಯಾವುದೇ ವಾದಗಳನ್ನು ಕೇಳುವ ಅಗತ್ಯವಿಲ್ಲ ಎಂದು ಹೇಳುವಂತೆ ಮಾಡಿತು.
    ಆದರೆ ಲಾಯರ್  ತಮ್ಮ ವಾದಗಳನ್ನು ಮಂಡಿಸಲು ಬಯಸುವುದಾಗಿ ಹೇಳಿದಾಗ ನನಗೆ ಮತ್ತಷ್ಟು ಆಶ್ಚರ್ಯವಾಯಿತು. ಅವರು ಸಾಕ್ಷಿಯನ್ನು ಪಾಟೀಸವಾಲಿಗೆ ಗುರಿಪಡಿಸಲು ವಿಫಲವಾದರು ಹಾಗೂ ಯಾವುದೇ ಪ್ರತಿರಕ್ಷಾ ಸಾಕ್ಷ್ಯವನ್ನು ಮಂಡಿಸದಿರುವಾಗ ಅವರು ಯಾವ ವಾದಗಳನ್ನು ಮಂಡಿಸುವರೆಂಬ ಬಗ್ಗೆ ಕುತೂಹಲವುಂಟಾಯಿತು.
    ತಮ್ಮ ವಾದಮಂಡನೆ ಮಾಡುತ್ತ ಪ್ರಾಜ್ಞಲಾಯರು ಮೋಟಾರು ವಾಹನಗಳ ನಿಯಮಗಳ ಒಂದು ನಿರ್ದಿಷ್ಟ ನಿಯಮದತ್ತ ನನ್ನ ಗಮನ ಸೆಳೆದರು. ಅದು ಈ ರೀತಿಯಿತ್ತು: “ಹೆಡ್‍ಕಾನ್‍ಸ್ಟೇಬಲ್ ದರ್ಜೆಗಿಂತ ಕೆಳಗಿನವರಲ್ಲದ ಯಾವುದೇ ಪೊಲೀಸು ಅಧಿಕಾರಿ ಸಮವಸ್ತ್ರಧಾರಿಯಾಗಿ ವಾಹನ ತಪಾಸಣೆ ಮಾಡಿದಾಗ ವಾಹನದ ಚಾಲಕ ಡ್ರೈವಿಂಗ್‍ಲೈಸೆನ್ಸ್ ಇತ್ಯಾದಿಗಳನ್ನು ಹಾಜರುಪಡಿಸತಕ್ಕದ್ದು.”
    ವಾಹನ ತಪಾಸಣೆ ಮಾಡುವ ಸಮಯದಲ್ಲಿ ಹೆಡ್‍ಕಾನ್‍ಸ್ಟೇಬಲ್ ಸಮವಸ್ತ್ರಧಾರಿಯಾಗಿದ್ದರು ಎಂಬುದನ್ನು ಸಾಬೀತುಪಡಿಸಬೇಕಾದುದು ಅಪರಾಧದ ಪ್ರಮುಖ ಅಂಶವಾಗಿದೆ ಎಂಬುದನ್ನು ಅವರು ತಮ್ಮ ವಾದದಲ್ಲಿ ಎತ್ತಿ ತೋರಿದರು. ಪ್ರಸಕ್ತ ಪ್ರಕರಣದಲ್ಲಿ, ವಾಹನ ತಪಾಸಣೆ ಸಮಯದಲ್ಲಿ ಹೆಚ್.ಸಿ. (ಹೆಡ್‍ಕಾನ್‍ಸ್ಟೇಬಲ್) ಸಮವಸ್ತ್ರ ಧರಿಸಿದ್ದರು ಎಂದು ಸಾಕ್ಷಿಯು ಹೇಳಿಲ್ಲ. ಹಾಗಾಗಿ ಚಾಲಕನು ಯಾವುದೇ ದಾಖಲೆ ಹಾಜರುಪಡಿಸಲು ಬದ್ಧನಲ್ಲ; ತತ್ವರಿಣಾಮವಾಗಿ, ತಮ್ಮ ಕಕ್ಷಿಗಾರರ ವಿರುದ್ಧದ ಪ್ರಾಸಿಕ್ಯೂಷನ್ ಸಾಬೀತಾಗಿಲ್ಲ. ಆಪಾದಿತನನ್ನು ನಾನು ಖುಲಾಸೆ ಮಾಡಲೇಬೇಕಾಯಿತು.
    ಈ ಪ್ರಕರಣ ನನಗೆ ಒಂದು ಪಾಠವನ್ನು ಕಲಿಸಿತು. ಆರೋಪಿಯ ವಿರುದ್ಧ ಹೊರಿಸಲಾದ ಆರೋಪಗಳಿಗೆ ಸಂಬಂಧಿಸಿದಂತೆ ಅಪರಾಧದ ಎಲ್ಲ ಘಟಕಗಳನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ನನ್ನ ಸೇವಾವಧಿಯ ಅವಧಿಯಲ್ಲಿ ಎಚ್ಚರಿಕೆಯಿಂದಿರುತ್ತಿದ್ದೆ.