ಪಾರಂಪರಿಕ ಕೆರೆಗಳು: ನೀರಾವರಿ ಮತ್ತು ಕುಡಿನೀರಿನ ಆಕರಗಳು

ಪಾರಂಪರಿಕ ಕೆರೆಗಳು: ನೀರಾವರಿ ಮತ್ತು ಕುಡಿನೀರಿನ ಆಕರಗಳು

ಭಾರತದಂತಹ ಉಷ್ಣವಲಯ ದೇಶಗಳಲ್ಲಿ ಬಾವಿಗಳು, ಕೆರೆಗಳು ಮತ್ತು ಕಾಲುವೆಗಳು – ಈ ಮೂರು ನೀರಿನ ಆಕರಗಳೇ  ಕೃಷಿಗೆ ಆಧಾರ.
ಭಾರತದಲ್ಲಿ ೧೯೫೦ರ ದಶಕದಿಂದ ಶುರುವಾಯಿತು ಹಸುರು ಕ್ರಾಂತಿ. ಅದಕ್ಕಿಂತ ಮುಂಚೆ, ಕೃಷಿ ನೀರಾವರಿಗಾಗಿ ರೈತರು ಅಂತರ್ಜಲವನ್ನು ಅವಲಂಬಿಸಿರಲಿಲ್ಲ. ಆದರೆ ಈಗ ಇದುವೇ ಕೃಷಿ ನೀರಾವರಿಯ ಮೊದಲ ಆಕರವಾಗಿದೆ.
೧೯೭೦ರ ದಶಕದ ವರೆಗೆ ಹಲವು ರಾಜ್ಯಗಳಲ್ಲಿ ಕೆರೆಗಳೇ ಕೃಷಿ ನೀರಾವರಿಯ ಆಕರಗಳಾಗಿದ್ದವು. ಕ್ರಮೇಣ, ಬೃಹತ್ ನೀರಾವರಿ ಯೋಜನೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣವೇ ಪ್ರಧಾನವಾಯಿತು ಮತ್ತು ಕೆರೆ ನೀರಾವರಿಯಂತಹ ಸಣ್ಣ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಲಾಯಿತು.
ಇದರ ಪರಿಣಾಮವಾಗಿ, ಭಾರತದ ಎಲ್ಲ ರಾಜ್ಯಗಳಲ್ಲಿಯೂ ಪಾರಂಪರಿಕ ಕೆರೆಗಳಿಂದ ನೀರು ಪಡೆಯುತ್ತಿದ್ದ ಜಮೀನಿನ ವಿಸ್ತೀರ್ಣ ಕಡಿಮೆಯಾಗುತ್ತಾ ಬಂತು. ಅದೇನಿದ್ದರೂ, ಇಂದಿಗೂ ಕೆರೆಗಳು ವಿಸ್ತಾರವಾದ ಕೃಷಿಪ್ರದೇಶಕ್ಕೆ ನೀರು ಒದಗಿಸುತ್ತಿವೆ. ಮೊದಲನೆಯ ಸಣ್ಣ ನೀರಾವರಿ ಗಣತಿ (೧೯೮೬-೮೭) ಅನುಸಾರ, ನಮ್ಮ ದೇಶದಲ್ಲಿ ೬,೫೩,೩೬೪ ಸಣ್ಣ ನೀರಾವರಿ ಸಂರಚನೆಗಳು (ಕೆರೆ, ಬಾವಿ ಇತ್ಯಾದಿ) ೫.೭೭ ದಶಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ನೀರು ಒದಗಿಸುತ್ತಿದ್ದವು. ಐದನೆಯ ಸಣ್ಣ ನೀರಾವರಿ ಗಣತಿ (೨೦೧೩-೧೪) ಪ್ರಕಾರ ೫,೯೨,೧೫೩ ಸಣ್ಣ ನೀರಾವರಿ ಸಂರಚನೆಗಳು ಮಾತ್ರ ಬಳಕೆಯಲ್ಲಿವೆ. ಅಂದರೆ, ಮೂರು ದಶಕಗಳಲ್ಲಿ ಸುಮಾರು ೬೦,೦೦೦ ಸಣ್ಣ ನೀರಾವರಿ ಸಂರಚನೆಗಳು ನಾಶವಾಗಿವೆ. ಆದರೂ, ಈಗ ಬಳಕೆಯಲ್ಲಿರುವ ಸಣ್ಣ ನೀರಾವರಿ ಸಂರಚನೆಗಳಿಂದ ನೀರು ಪಡೆಯುತ್ತಿರುವ ಕೃಷಿ ಜಮೀನಿನ ವಿಸ್ತಾರ ೭.೭೮ ದಶಲಕ್ಷ ಹೆಕ್ಟೇರ್. ಈ ಸಂರಚನೆಗಳ ನಾಶಕ್ಕೆ ಮುಖ್ಯ ಕಾರಣಗಳು: ಗ್ರಾಮ ಪಂಚಾಯತುಗಳಿಂದ ನಿರ್ವಹಣಾ ವಿಫಲತೆ ಮತ್ತು ವಿದ್ಯುತ್ ಪಂಪ್‍ಸೆಟ್ ಆಧಾರಿತ ನೀರಾವರಿಯ ಹೆಚ್ಚಳ.
ತಮಿಳುನಾಡಿನ ಉದಾಹರಣೆಯನ್ನು ಪರಿಶೀಲಿಸೋಣ. ಅಲ್ಲಿ ೪೧,೧೨೭ ಪಾರಂಪರಿಕ ನೀರಾವರಿ ಕೆರೆಗಳಿವೆ; ಭೂದಾಖಲೆಗಳ ಅನುಸಾರ, ಇವು ಸುಮಾರು ೧೦ ಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಒದಗಿಸುತ್ತಿದ್ದವು. ೧೯೬೦ನೇ ಇಸವಿಯ ತನಕ ಇವು ನೀರುಣಿಸುತ್ತಿದ್ದ ಕೃಷಿ ಜಮೀನಿನ ವಿಸ್ತೀರ್ಣ ೯ ಲಕ್ಷ ಹೆಕ್ಟೇರ್. ಅನಂತರ, ಈ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಾ ಬಂತು. ೨೦೧೦ರಲ್ಲಿ ಈ ಕೆರೆಗಳು ಕೇವಲ ೪ ಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಒದಗಿಸುತ್ತಿದ್ದವು.
ಯಾವ್ಯಾವ ಗ್ರಾಮಗಳ ಪಂಚಾಯತುಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿವೆಯೋ, ಅಲ್ಲಿನ ಪಾರಂಪರಿಕ ಕೆರೆ ಆಧಾರಿತ ನೀರಾವರಿ ವ್ಯವಸ್ಥೆ ಇಂದಿಗೂ ಚೆನ್ನಾಗಿದೆ ಎಂಬುದು ಗಮನಿಸತಕ್ಕ ಸಂಗತಿ. ಅದಲ್ಲದೆ, ಅಂತಹ ಹಲವಾರು ಗ್ರಾಮಗಳಲ್ಲಿ ಸರಕಾರ ಕುಡಿಯುವ ನೀರು ಸರಬರಾಜು ಮಾಡದಿರುವ ಕಾರಣ ಕುಡಿಯುವ ನೀರಿನ ಕೊರತೆ ಉಂಟಾದಾಗ ಅದನ್ನು ಪರಿಹರಿಸಲಿಕ್ಕೂ ಈ ಪಾರಂಪರಿಕ ಕೆರೆಗಳ ನೀರು ಬಳಕೆಯಾಗಿದೆ. ೨೦೧೭ರಿಂದ ೨೦೧೯ರ ಅವಧಿಯಲ್ಲಿ ತಮಿಳುನಾಡಿನ ಅನೇಕ ಹಳ್ಳಿಗಳಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿತ್ತು. ಆದರೂ, ಕಾವೇರಿಪಕ್ಕಂ ಕೆರೆ ಮತ್ತು ದುಸಿಮಾಮಂದೂರ್ ಕೆರೆ – ಈ ಎರಡು ಪಾರಂಪರಿಕ ನೀರಾವರಿ ಕೆರೆಗಳ ನೀರನ್ನು ಸರಬರಾಜು ಮಾಡುವ ಮೂಲಕ ಸುತ್ತಲಿನ ೩೨ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲಾಯಿತು.
ಈ ರೀತಿಯಲ್ಲಿ ಪಾರಂಪರಿಕ ಕೆರೆಗಳು ಬೇಸಗೆಯ ದಿನಗಳಿಗಾಗಿ ನೀರನ್ನು ಶೇಖರಿಸಿಡುವ ಮೂಲಕ ಕುಡಿಯುವ ನೀರಿನ ಕೊರತೆ ನೀಗಿಸಬಲ್ಲವು ಮತ್ತು ಅಂತರ್ಜಲ ಮರುಪೂರಣಕ್ಕೂ ಅವುಗಳಿಂದ ಸಹಾಯ. ಆದ್ದರಿಂದ, ಈ ಕೆರೆಗಳ ಅತಿಕ್ರಮಣವನ್ನು ಕಿತ್ತು ಹಾಕಿ, ಸರಕಾರ ಇವನ್ನು ಪುನರುಜ್ಜೀವನಗೊಳಿಸಬೇಕು. ಜೊತೆಗೆ, ಪಾರಂಪರಿಕ ಕೆರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯತುಗಳ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಆದೇಶ ನೀಡಿ, ಜ್ಯಾರಿಗೊಳಿಸಬೇಕು.