ಮಹಾಭಾರತದಲ್ಲಿ ಭಾನುಮತಿ ಯಾರು ಗೊತ್ತಾ?

Submitted by Ashwin Rao K P on Tue, 07/14/2020 - 10:30

ಮಹಾಭಾರತ ಮತ್ತು ರಾಮಾಯಣ ಎಂಬ ಎರಡು ಮಹಾ ಕಥೆಗಳು ಮತ್ತು ಅವುಗಳ ಕಥಾ ಸಾರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಈ ಎರಡು ಮಹಾ ಗ್ರಂಥಗಳು ನಮ್ಮ ದೃಶ್ಯ ಮಾಧ್ಯಮದಲ್ಲಿ ಯಾವಾಗ ಪ್ರಸಾರವಾಯಿತೋ ಅದರಲ್ಲಿಯ ಪಾತ್ರಗಳೆಲ್ಲವೂ ನಮಗೆ ಬಹುತೇಕ ಪರಿಚಿತವಾದವು. ನಮ್ಮ ಸಂಸ್ಕೃತಿಯ ನಿಜವಾದ ಪರಿಚಯ ನಮಗೆ ಆಯಿತು. ಈಗ ಕೊರೋನಾ ಮಹಾಮಾರಿಯ ಸಮಯದಲ್ಲಿ ಬಹುತೇಕ ದೃಶ್ಯ ಮಾಧ್ಯಮಗಳು ರಾಮಾಯಣ, ಮಹಾಭಾರತ, ರಾಧಾ ಕೃಷ್ಣ ಇಂತಹ ಪೌರಾಣಿಕ ಸರಣಿಗಳನ್ನು ಮತ್ತೆ ಪ್ರಸಾರ ಮಾಡುತ್ತಿವೆ. ಆದರೂ ಈ ಧಾರವಾಹಿಗಳಲ್ಲಿ ಕೆಲವು ಪಾತ್ರಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೈ ಬಿಟ್ಟಿದ್ದಾರೆ. ಮಹಾಭಾರತದ ಕೆಲವು ಮರೆತುಹೋದ ಪಾತ್ರಗಳನ್ನು ನೆನಪಿಸುವ ಸಣ್ಣ ಪ್ರಯತ್ನ ಮಾಡುವೆ. ಆ ಪಾತ್ರಗಳಲ್ಲಿ ಒಂದು ದುರ್ಯೋಧನನ ಪತ್ನಿ ಭಾನುಮತಿ.

ಭಾನುಮತಿ ಎಂಬ ಹೆಸರಿನ ಪಾತ್ರವೊಂದು ಮಹಾಭಾರತದಲ್ಲಿ ಇತ್ತು ಎಂದರೆ ಯಾರೂ ನಂಬಲಾರರು. ಯಾಕೆಂದರೆ ಬಹುತೇಕ ಯಾವುದೇ ಮಹಾಭಾರತದಲ್ಲಿ ಭಾನುಮತಿಯ ಪಾತ್ರದ ಉಲ್ಲೇಖವಿಲ್ಲ. ಭಾನುಮತಿ ದುರ್ಯೋಧನನ ಪತ್ನಿ. ಸ್ತ್ರೀ ಪರ್ವ ಹಾಗೂ ಮಹಾಭಾರತ ಶಾಂತಿ ಪರ್ವದಲ್ಲಿ ಭಾನುಮತಿಯ ಬಗ್ಗೆ ವಿವರಗಳು ದೊರಕುತ್ತವೆ. ಇವಳು ಕಳಿಂಗ ದೇಶದ ರಾಜ ಚಿತ್ರಾಂಗದನ ಮಗಳು ಎಂಬ ಉಲ್ಲೇಖ ಒಂದು ಕಡೆ ಇದ್ದರೆ ಮತ್ತೊಂದು ಕಡೆ ಇವಳು ರಾಜಾ ಭಗದತ್ತನ ಮಗಳು ಎನ್ನುವ ಬಗ್ಗೆಯೂ ಬರೆಯಲಾಗಿದೆ. ಇವಳು ಅಪ್ರತಿಮ ಸುಂದರಿಯಾದ ಕನ್ಯೆಯಾಗಿದ್ದಳು. ಇವಳ ನೀಳವಾದ ಕೇಶರಾಶಿ ಹಾಗೂ ಬಲಿಷ್ಟವಾದ ದೇಹ ಸೌಂದರ್ಯ ಯಾರನ್ನೂ ಮರುಳು ಮಾಡಿ ಬಿಡುತ್ತಿತ್ತು. ಇವಳ ಸ್ವಯಂವರ ಏರ್ಪಡಿಸಿದಾಗ ಆ ಸಮಯದ ಬಹುತೇಕ ರಾಜರು, ರಾಜಕುಮಾರರು ನೆರೆದಿದ್ದರು. ದುರ್ಯೋಧನನಿಗೆ ಇವಳ ಬಗ್ಗೆ ಮೊದಲೇ ತಿಳಿದಿತ್ತು ಹಾಗೂ ಅವಳನ್ನು ವರಿಸುವ ಇಚ್ಚೆ ಹೊಂದಿದ್ದ. ಸ್ವಯಂವರದಲ್ಲಿ ಶಿಶುಪಾಲ, ಜರಾಸಂಧ, ರುಕ್ಮಿ, ದುರ್ಯೋಧನ, ಕರ್ಣ ಮೊದಲಾದವರು ನೆರೆದಿದ್ದರು. ತನ್ನನ್ನು ಮದುವೆಯಾಗುವ ಇಚ್ಚೆಯನ್ನು ಇಟ್ಟು ಬಂದ ಎಲ್ಲಾ ವರರ ಬಗ್ಗೆ ಭಾನುಮತಿಗೆ ತಿಳಿದಿತ್ತು. ಭಾನುಮತಿ ವಿವಾಹದ ಮಾಲೆಯನ್ನು ಹಿಡಿದು ಒಬ್ಬೊಬ್ಬರನ್ನು ದಾಟಿ ಬರುವಾಗ ದುರ್ಯೋಧನನ ಮನಸ್ಸಿನಲ್ಲಿ ಇವಳು ಖಂಡಿತವಾಗಿಯೂ ತನ್ನನ್ನು ವರಿಸುತ್ತಾಳೆ ಎಂಬ ನಂಬಿಕೆ ಇತ್ತಂತೆ. ಆದರೆ ದುರ್ಯೋಧನನನ್ನು ದಾಟಿ ಮುಂದೆ ಹೋದಾಗ ಅವನ ಅಭಿಮಾನ ಭಂಗವಾಗುತ್ತೆ. ಅವನು ಭಾನುಮತಿಯನ್ನು ಬಲವಂತವಾಗಿ ಎಳೆದು ತನ್ನ ರಥದಲ್ಲಿ ಕುಳ್ಳಿರಿಸಿ ಹಸ್ತಿನಾಪುರಕ್ಕೆ ಕರೆದೊಯ್ಯಲು ತಯಾರಿ ನಡೆಸುತ್ತಾನೆ. ಉಳಿದ ರಾಜರು ವಿರೋಧ ವ್ಯಕ್ತ ಪಡಿಸಿದಾಗ ತನ್ನನ್ನು ಗೆದ್ದು ಭಾನುಮತಿಯನ್ನು ಕರೆದೊಯ್ಯಿರಿ ಎಂದು ಯುದ್ಧದ ಪಂಥಕ್ಕೆ ಆಹ್ವಾನ ನೀಡುತ್ತಾನೆ. ದುರ್ಯೋಧನನ ಪರವಾಗಿ ಅವನ ಪ್ರಾಣ ಮಿತ್ರ ಕರ್ಣನು, ಪಂಥ ಸ್ವೀಕರಿಸಿ ಬಂದ ರಾಜರನ್ನೆಲ್ಲಾ ಪರಾಜಯಗೊಳಿಸುತ್ತಾನೆ. 

ಹಸ್ತಿನಾಪುರಕ್ಕೆ ಭಾನುಮತಿಯನ್ನು ಕರೆದೊಯ್ದ ದುರ್ಯೋಧನ ಅವಳನ್ನು ಬಲವಂತವಾಗಿ ತನ್ನವಳನ್ನಾಗಿ ಮಾಡಲು ಹೋಗದೆ, ಅವಳಿಗೆ ಕ್ಷತ್ರಿಯ ಧರ್ಮದ ಅರಿವನ್ನು ಮೂಡಿಸುತ್ತಾನೆ. ಕ್ಷತ್ರಿಯ ಧರ್ಮದ ಪ್ರಕಾರ ಯಾವನೇ ಒಬ್ಬ ತನಗೆ ಬೇಕಾದ ಸ್ತ್ರೀಯನ್ನು ಯುದ್ಧ ಮಾಡಿ ಗೆದ್ದು ಪಡೆಯಬಹುದು. ತನ್ನ ಪಿತಾಮಹ ಭೀಷ್ಮರು ರಾಜಕುಮಾರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಸ್ವಯಂವರದಿಂದ ಅಪಹರಿಸಿ ತಂದ ಉದಾಹರಣೆಯನ್ನು ನೀಡುತ್ತಾನೆ. ಇದನ್ನು ಅರಿತ ಭಾನುಮತಿ ದುರ್ಯೋಧನನನ್ನು ವರಿಸಲು ಸಮ್ಮತಿಸುತ್ತಾಳೆ. ದುರ್ಯೋಧನ ಭಾನುಮತಿಯನ್ನು ವರಿಸಿದ ನಂತರ ಬೇರೆ ಯಾವುದೇ ಸ್ತ್ರೀಯನ್ನು ಮದುವೆಯಾಗುವುದಿಲ್ಲ. ಏಕ ಪತ್ನೀ ವೃತಸ್ತನಾಗಿ ಬಿಡುತ್ತಾನೆ. ಭಾನುಮತಿ ಹಾಗೂ ದುರ್ಯೋಧನರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು ಹುಟ್ಟುತ್ತಾರೆ. ಗಂಡು ಮಗ ಲಕ್ಷ್ಮಣ್ ನನ್ನು ಅಭಿಮನ್ಯು ಮಹಾಭಾರತದ ಯುದ್ಧದಲ್ಲಿ ಕೊಲ್ಲುತ್ತಾನೆ. 

ದುರ್ಯೋಧನನಿಗೆ ಭಾನುಮತಿಯ ಮೇಲೆ ಅಪಾರ ನಂಬಿಕೆ ಹಾಗೂ ಪ್ರೀತಿ ಇರುತ್ತದೆ. ಇದರ ಒಂದು ದೃಷ್ಟಾಂತವು ವಿಕ್ರಮಾರ್ಜುನ ವಿಜಯದಲ್ಲಿ ಉಲ್ಲೇಖವಾಗಿದೆ. ಒಮ್ಮೆ ಭಾನುಮತಿಯು ದುರ್ಯೋಧನನ ಪ್ರಾಣ ಮಿತ್ರ ಕರ್ಣನೊಡನೆ ಅಂತಃಪುರದಲ್ಲಿ ಪಗಡೆಯಾಡುತ್ತಾ ಇರುತ್ತಾಳೆ. ಕರ್ಣನು ಪಗಡೆಯಾಟದಲ್ಲಿ ಭಾನುಮತಿಯ ಮುತ್ತಿನ ಸರವನ್ನು  ಪಣಕ್ಕಿಡುವಂತೆ ಹೇಳುತ್ತಾನೆ. ಹಾಗೆಯೇ ಮಾಡುವ ಭಾನುಮತಿ ಅದನ್ನು ಸೋಲುತ್ತಾಳೆ. ಆದರೆ ಕೊಡಲು ನಿರಾಕರಿಸಿದಾಗ ಕರ್ಣನು ಅದನ್ನು ಅವಳ ಕತ್ತಿನಿಂದ ಕಸಿಯಲು ಹೋದಾಗ ಅದು ತುಂಡಾಗಿ ಮುತ್ತುಗಳು ನೆಲದಲ್ಲಿ ಚೆಲ್ಲಿ ಹೋಗುತ್ತವೆ. ಅದನ್ನು ಹೆಕ್ಕುತ್ತಿರುವಾಗ ದುರ್ಯೋಧನನು ಅಂತಃಪುರಕ್ಕೆ ಪ್ರವೇಶ ಮಾಡುತ್ತಾನೆ. ಅವನು ಕರ್ಣನಲ್ಲಿ ಕೇಳುತ್ತಾನೆ ' ನಾನು ಮುತ್ತನ್ನು ಹೆಕ್ಕಲು ಸಹಾಯ ಮಾಡಲೇ ಮಿತ್ರಾ’ ಎಂದು. ಇದು ದುರ್ಯೋಧನನಿಗೆ ತನ್ನ ಹೆಂಡತಿ ಭಾನುಮತಿ ಹಾಗೂ ಮಿತ್ರ ಕರ್ಣನ ಮೇಲಿದ್ದ ನಂಬಿಕೆ. ಇದೇ ವಿಷಯವನ್ನು ಮುಂದೆ ಕರ್ಣ ಶ್ರೀಕೃಷ್ಣನಿಗೆ ಹೇಳಿ, ತಾನು ಕುಂತೀ ಪುತ್ರನಾದರೂ ದುರ್ಯೋಧನನನ್ನು ಯಾಕೆ ಬಿಟ್ಟು ಬರುವುದಿಲ್ಲ ಎಂದು ಮನವರಿಕೆ ಮಾಡಿಕೊಡುತ್ತಾನೆ. ತನ್ನ ಮಿತ್ರ ದುರ್ಯೋಧನ ಅವನ ಹೆಂಡತಿಯ ಮುತ್ತಿನ ಸರಕ್ಕೆ ಕೈ ಹಾಕಿದರೂ ನನ್ನ ಮೇಲೆ ಅವನಿಗೆ ಅಪನಂಬಿಕೆ ಮೂಡಿ ಬರುವುದಿಲ್ಲ. ಅವನ ಪತ್ನಿ ಭಾನುಮತಿಯನ್ನೂ ಅಪನಂಬಿಕೆಯಿಂದ ನೋಡುವುದಿಲ್ಲ. ಅಂತಹ ಮಿತ್ರನನ್ನು ಹೇಗೆ ಬಿಟ್ಟು ಬರಲಿ ಕೃಷ್ಣಾ? ಎನ್ನುತ್ತಾನೆ.

ವಿವಿಧ ಲೇಖಕರು ಬರೆದ ಮಹಾಭಾರತದಲ್ಲಿ ಭಾನುಮತಿಯ ಬಗ್ಗೆ ನಮಗೆ ಸಿಗುವ ಕತೆ ಇಷ್ಟೇ. ಕೆಲವೊಂದು ಕಡೆ ಪಾಂಡವರು ದುರ್ಯೋಧನ ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಸರೋವರದಲ್ಲಿ ಅಡಗಿ ಕುಳಿತಾಗ ಅವನನ್ನು ಲೇವಡಿ ಮಾಡಲು ಭಾನುಮತಿ ಅತ್ತಿಗೆಯ ಸೆರಗಿನ ಹಿಂದೆ ಅಡಗಿ ಕುಳಿತೆಯಾ? ಎಂದು ಹೇಳುವ ಉಲ್ಲೇಖವಿದೆ ಎನ್ನುವುದನ್ನು ಬಿಟ್ಟರೆ ಭಾನುಮತಿ ಎಂಬ ಸ್ತ್ರೀ ಮಹಾಭಾರತದಲ್ಲಿ ಕಳೆದು ಹೋಗಿ ಅಪರಿಚಿತಳಾಗಿಯೇ ಉಳಿದು ಬಿಡುತ್ತಾಳೆ. ಪ್ರತಿಯೊಬ್ಬ ದುಷ್ಟನಲ್ಲೂ ಒಳ್ಳೆಯತನ ಇರುತ್ತದೆ ಎಂದು ದುರ್ಯೋಧನ ನಿರೂಪಿಸುತ್ತಾನೆ. ಪತ್ನಿ ಮತ್ತು ಗೆಳೆಯನ ಮೇಲೆ ಅವನು ಯಾವತ್ತೂ ಅಪನಂಬಿಕೆಯನ್ನು ತೋರ್ಪಡಿಸುವುದಿಲ್ಲ.

ಇನ್ನೂ ಹಲವಾರು ಕಳೆದುಹೋದ ಪಾತ್ರಗಳು ಮಹಾಭಾರತದಲ್ಲಿ ಅಡಗಿವೆ. ಮುಂದಿನ ದಿನಗಳಲ್ಲಿ ಅವನ್ನೂ ಒಂದೊಂದಾಗಿ ಅನಾವರಣ ಮಾಡೋಣ.

ವಿ.ಸೂ: ಒಂದೊಂದು ಗ್ರಂಥಗಳಲ್ಲಿ ಭಾನುಮತಿಯ ತಂದೆಯ ಬಗ್ಗೆ ಒಂದೊಂದು ರೀತಿಯ ವಿವರಗಳಿವೆ. ಕೆಲವೊಂದು ಕಡೆ ಕಂಬೋಜದ ರಾಜ ಚಂದ್ರವರ್ಮನ ಮಗಳು ಎಂದೂ ಉಲ್ಲೇಖವಿದೆ.

ಚಿತ್ರ: ಅಂತರ್ಜಾಲ ಕೃಪೆ

Comments

Ashwin Rao K P

Wed, 07/15/2020 - 08:29

ಮಾನ್ಯ ಶ್ರೀ ವೆಂಕಟೇಶ್ ಅವರೇ,

ಪ್ರತಿಕ್ರಿಯೆಗೆ ಧನ್ಯವಾದಗಳು. ಹಲವಾರು ಜನ ಮಹಾಭಾರತವನ್ನು ತಮ್ಮ ತಮ್ಮ ಅನಿಸಿಕೆಯಂತೆ ಬರೆದಿದ್ದಾರೆ. ಭಾನುಮತಿಯ ತಂದೆಯ ಬಗ್ಗೆ ನಾನು ಪರಿಶೀಲಿಸಿದಾಗ ೩ ಬೇರೆ ಬೇರೆ ಉಲ್ಲೇಖಗಳು ಕಂಡು ಬಂದವು. ಹೀಗೆ ಹಲವಾರು ವಿಭಿನ್ನ ಮಜಲುಗಳಿವೆ. ನೀವು ತಿಳಿದುಕೊಂಡ ಬೇರೊಂದು ಭಾನುಮತಿಯ ಬಗ್ಗೆ ಬರೆದರೆ ಸಂಪದ ಓದುಗರಿಗೂ ಪ್ರಯೋಜಕಾರಿಯಾದೀತು. ದಯವಿಟ್ಟು ಬರೆಯಿರಿ ಸರ್.