kannada kavite

ಅಭಿನಂದನೆ ಹೇಳದಿದ್ದರೂ
ಮುಂಜಾವು ಮುನಿಸಿಕೊಂಡಿಲ್ಲ.
ಪ್ರತಿದಿನವೂ ಹೊತ್ತು ತರುತ್ತಿದೆ
ಹೊಸದೊಂದು ಆಹ್ಲಾದ.

ಹಗಲೆಲ್ಲ ಹರಿದು ಸುಸ್ತಾದ ನದಿ
ಮಲಗುವುದೇ ರಾತ್ರಿ ಕವದಿ ಹೊದ್ದು!
ಇಲ್ಲವಲ್ಲ,
ಮತ್ಯಾಕೆ ನಿಲ್ದಾಣ ನಮಗೆ ಮಾತ್ರ !?

ಈಗ್ಯಾರಿದ್ದಾರೆ ಚಂದ್ರನನ್ನು ನೋಡಿ
ಬೆಳದಿಂಗಳಲಿ ಪ್ರೇಮಿಸುವ ಪ್ರೇಮಿಗಳು
ಆದರೂ ಚಂದ್ರನಿಲ್ಲವೇ
ಮುಗುಳ್ನಗುತ್ತಾ !

ಅದೆಷ್ಟು ಜನ ಬೈದುಕೊಂಡಿಲ್ಲ.
ಅವಿರತವಾಗಿ ಸುರಿದ ಮಳೆಯ ಕಂಡು.
ಆದರೇನು ನೀರು ತನ್ನನ್ನೆ ತಾನು ಬಿಸಿಗೆ ಮೈಒಡ್ಡಿ
ಆವಿಯಾಗುವದ ನಿಲ್ಲಿಸಿತೇ!
ಮೋಡವಾಗಲು ಬೇಸರಿಸಿಕೊಂಡಿತೇ!
ಸುರಿಯಲಿಲ್ಲವೇ ಧಾರಾಕಾರವಾಗಿ ಮತ್ತೆ ಮತ್ತೆ!

ತೆಂಗಿನ ಮರವೇನು ಪಕ್ಕದ ಮಾವಿನ ಮರವ ಕಂಡು
ಕೋಪಿಸಿಕೊಂಡಿದೆಯಾ !?
ತನಗೆ ರೆಂಬೆಗಳಿಲ್ಲ ಎಂದು!
ತನ್ನನು ತಾನೆ ಸಂತೈಸಿಕೊಂಡು
ಆಗಸದೆತ್ತರಕೆ ಬೆಳೆಯುತ್ತಿಲ್ಲವೇ!

ಸಿಕ್ಕ ಕಾಳುಗಳು ರುಚಿ ಇಲ್ಲವೆಂದು
ಯಾವ ಹಕ್ಕಿ ತಾನೆ ಬೇಸರಿಸಿಕೊಂಡಿದೆ.
ನಗುತ್ತಲೇ ಹಾರಿಲ್ಲವೇ! ಗಾಳಿಯನ್ನು ತಬ್ಬುತ್ತ
ನಮಗ್ಯಾಕೆ ನಾಲಿಗೆ ಚಪಲ.

ಹೂವಿಗೆಂತಹ ಬೇದ,
ಕಿತ್ತು ಎಲ್ಲಿಗೆ ಕೊಂಡಯ್ದರೂ
ಶಕ್ತಿ ಇದ್ದಷ್ಟು ಬಣ್ಣಗೊಂಡು, ಸುವಾಸನೆ ಸೂಸಿ
ಮೌನವಾಗಿ ನಗುವುದಿಲ್ಲವೇ!

ಕಾಲ್ಬುಡದಲ್ಲಿ ಮುಳ್ಳಿದೆ ಎಂದು
ಯಾವ ಗುಲಾಬಿ ಕಣ್ಣೀರು ಸುರಿಸಿದೆ!

ಪ್ರಕೃತಿ ಎಂದೂ ಯಾರ ಹೊಗಳಿಕೆಯನ್ನೂ
ಬಯಸಲೇ ಇಲ್ಲ
ತನ್ನಷ್ಟಕ್ಕೆ ತಾನು
ತನ್ಮಯವಾಗಿ ಸುಖಿಸುತ್ತಿದೆ

-GKN