Laptop - ಒಂದು ಹಿನ್ನೋಟ !
ಈಗ ನಾನು ಹೇಳ ಹೊರಟಿರುವುದು ನನ್ನೀ ಲೇಖನ ಬರೆಯಲು ಸಹಾಯ ಮಾಡಿದ ಸಾಧನವಾದ ಲ್ಯಾಪ್-ಟಾಪ್ ಬಗ್ಗೆ ಅಲ್ಲ. ಬದಲಿಗೆ ತಲತಲಾಂತರಗಳಿಂದ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿರುವ ಲ್ಯಾಪ್-ಟಾಪ್ ಕಥಾನಕಗಳ ಬಗೆಗಿನ ಒಂದು ಹಿನ್ನೋಟ. ಇಲ್ಲಿ ಉಲ್ಲೇಖಿಸದ ವಿಚಾರದ ಬಗ್ಗೆಯಾಗಲಿ, ಉಲ್ಲೇಖಿಸದೇ ಹೋದ ವಿಚಾರಗಳನ್ನು ಹಂಚಿಕೊಂಡಲ್ಲಿ ಶಿವರಾತ್ರಿಯ ಹಬ್ಬದಂದು ಎಲ್ಲರಿಂದ ಪೂಜಿಸಿಕೊಳ್ವ ಪರಮೇಶ್ವರ ನಿಮ್ಮನ್ನು ಮೆಚ್ಚುವನು.
ರಾಜ ಉತ್ತಾನಪಾದ’ನಿಗೆ ಇಬ್ಬರು ಹೆಂಡಿರು. ಸುನೀತಿಯ ಪುತ್ರ ಧೃವ ಮತ್ತು ಸುರುಚಿಯ ಪುತ್ರ ಉತ್ತಮ. ಒಮ್ಮೆ ಹೀಗೆ ಆಟವಾಡುತ್ತ ಇಬ್ಬರೂ, ಉತ್ತಾನಪಾದನೆಡೆಗೆ ಓಡಿದರು. ಮೊದಲಿಗನಾಗಿ ಓಡಿದ ಉತ್ತಮ ತೊಡೆಯೇರಿ ಕುಳಿತ. ಮತ್ತೊಂದು ತೊಡೆಯೇರಲು ಹೋದ ಧೃವಕುಮಾರನಿಗೆ ಅಡ್ಡಿಪಡಿಸಿದ್ದು ಕಿರಿಯರಾಣಿ ಸುರುಚಿ. ತನ್ನ ಹೊಟ್ಟೆಯಲ್ಲಿ ಹುಟ್ಟದ ನಿನಗೆ ಆ ಅಧಿಕಾರವಿಲ್ಲವೆಂದು ದೂಷಿಸಿ ಹೊರಗಟ್ಟುತ್ತಾಳೆ. ದು:ಖಿತನಾಗಿ ತಾಯಿ ಸುನೀತಿ ಬಳಿ ಓಡಿಬಂದ ಧೃವ ಕುಮಾರ, ಅಳುತ್ತ ತನ್ನ ಅಳಲನ್ನು ಹೊರಹಾಕಿ ವಿಷ್ಣುವಿನಲ್ಲಿ ಮೊರೆಹೋಗುವ ಇರಾದೆ ತೋರುತ್ತಾನೆ. ಸುನೀತಿಗೆ ಬಾಲಕನ ನಿರ್ಧಾರ ಕೇಳಿ ಅಚ್ಚರಿಯೊಂದಿಗೆ ಭಯವನ್ನೂ ಮೂಡಿಸಿದರೂ ಅವನಲ್ಲಿದ್ದ ನಿಶ್ಚಲ ನಿರ್ಧಾರವನ್ನು ಕಂಡು ಹೋಗಗೊಡುತ್ತಾಳೆ. ಮಾರ್ಗದಲ್ಲಿ ಸಿಕ್ಕ ನಾರದರಿಂದ "ಓಮ್ ನಮೋ ಭಗವತೇ ವಿಷ್ಣುದೇವಾಯ" ಎಂಬ ಮಂತ್ರೋಪದೇಶವನ್ನು ಹೊಂದಿ ಮಹಾವಿಷ್ಣುವನ್ನು ಪ್ರೀತಗೊಳಿಸಿ, ’ಧೃವ ಸ್ತುತಿ’ಯನ್ನೂ ರಚಿಸುತ್ತಾನೆ.
ಲ್ಯಾಪ್ ಎಂಬೋ ಕುರ್ಚಿ ಸಿಗದೆ ’ಲ್ಯಾಪ್-ಟಾಪ್’ ಆಗದ ಕಾರಣ, ತಪವನ್ನುಗೈದು ವಿಷ್ಣುವನ್ನು ಒಲಿಸಿಕೊಂಡು ಮಿನುಗೋ ನಕ್ಷತ್ರನಾದ ಭಕ್ತ ಧೃವ. ಕುರ್ಚಿ ಸಿಗದವರೆಲ್ಲ ಹಠ ಹಿಡಿದು ಕುಳಿತವರನ್ನು ದೂಷಿಸಿ ಕೆಡವದೆ, ಒಳ್ಳೆಯ ಕೆಲಸ ಮಾಡಿ ಕುರ್ಚಿ ತಮ್ಮತ್ತ ಬಾರುವಂತೆ ಮಾಡಿದರೆ, ಏನ್ ಚೆನ್ನ ಅಲ್ವೇ?
ಶಾಪಗೊಂಡ ಜಯವಿಜಯರು ಭೂಲೋಕದಲ್ಲಿ ರಕ್ಕಸರಾಗಿ ಹುಟ್ಟುತ್ತಾರೆ. ಅವರಲ್ಲಿ ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದಕುಮಾರ. ತಂದೆ "ಹರಿಯೇ ಅರಿ" ಎಂದಾದರೆ, ಮಗನು "ಹರಿಯನ್ನು ಅರಿ" ಎಂದು ಬುದ್ದಿ ಹೇಳುವಾತ. ತನ್ನ ವೈರಿಯನ್ನೇ ಸ್ತುತಿಸುವ ಮಗನನ್ನು ತಂದೆ ಎಂಬ ಮಮಕಾರದಿಂದ ಸುಮ್ಮನಾದರೂ ಅವನಲ್ಲಿದ್ದ ರಕ್ಕಸತನ ಪ್ರಹ್ಲಾದನನ್ನು ಹಲವಾರು ಕಷ್ಟಗಳಿಗೆ ಗುರಿ ಮಾಡಿತು. ಹಿರಣ್ಯಕಶಿಪುವು ಪ್ರತಿ ಬಾರಿ ಅವನನ್ನು ಕೊಲ್ಲಿಸಲು ಯತ್ನಿಸಿದಾಗಲೂ ಹರಿಯ ರಕ್ಷಣೆಯಿಂದಾಗಿ ಪ್ರಹ್ಲಾದನಿಗೆ ಯಾವ ಅಪಾಯವೂ ತಟ್ಟುವುದಿಲ್ಲ. ಮಗನನ್ನು ದಂಡಿಸುವ ಬದಲು ಹರಿಯನ್ನೇ ಇಲ್ಲವಾಗಿಸಿದರೆ, ಮಗನು ವಿಧಿಯಿಲ್ಲದೇ ತನ್ನನ್ನು ಸರ್ವಾಧಿಕಾರಿ ಎಂದು ಒಪ್ಪಿಕೊಳ್ಳುತ್ತಾನೆ ಎಂಬ ಆಶಯದಿಂದ, ಕಂಬ ಒಡೆದು ಬಂದ ಹರಿಯೊಂದಿಗೆ ಸೆಣಸಿ ತಾನೇ ಹತನಾದ. ವಿಷ್ಣುವಿನ ರೂಪವನ್ನು ಬೇರೆಯಾಗಿಯೇ ಊಹಿಸಿದ್ದ ಬಾಲಕನಿಗೆ ಭೀಕರ ನರಸಿಂಹ ಅವತಾರಿಯನ್ನು ಕಂಡು ಸಹಜವಾಗಿಯೇ ಭಯವಾಯಿತು. ಶಾಂತನಾದ ನರಸಿಂಹ ಬಾಲಕನನ್ನು ತನ್ನ ತೊಡೆಯ ಮೇಲೆ ಕುಳ್ಳರಿಸಿಕೊಂಡು ಸಮಾಧಾನ ಮಾಡಿದ.
ಇದು ಪ್ರಹ್ಲಾದಕುಮಾರನು ಲ್ಯಾಪ್-ಟಾಪ್ ಆದ ಕಥೆ.
ನನಗೆ ಪ್ರಿಯವಾದ ಮಹಾಭಾರತದಲ್ಲಿ ಲ್ಯಾಪ್-ಟಾಪ್ ಕಥಾನಕ, ನಾ ಕಂಡಂತೆ, ಎರಡು ರೀತಿಯಲ್ಲಿ ಬರುತ್ತದೆ.
ತಾನು ಬ್ರಾಹ್ಮಣ’ನೆಂದು ಹೇಳಿಕೊಂಡು ಪರಶುರಾಮ’ನಲ್ಲಿ ವಿದ್ಯೆ ಕಲಿಯುತ್ತಾನೆ ಕರ್ಣ. ವಿದ್ಯಾಭ್ಯಾಸ ಮುಗಿದಾ ನಂತರ ಆಯಾಸಗೊಂಡಿದ್ದ ಪರಶುರಾಮ ಕರ್ಣನ ತೊಡೆಯ ಮೇಲೆ ತಲೆಯಿಟ್ಟು ಮಲಗುತ್ತಾರೆ. ಉತ್ತಮೋತ್ತಮ ಶಿಷ್ಯನಿರಲು ಗುರುವಿಗೆ ತಮ್ಮ ವಿದ್ಯೆ ಧಾರೆಯೆರೆಯುವವರೆಗೂ ನಿದ್ದೆ ಹತ್ತುವುದಿಲ್ಲ ಎಂದು ಅರ್ಥೈಸಿಕೊಳ್ಳಬಹುದೇ? ಇರಲಿ, ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದ ಗುರುಗಳನ್ನು ಹೊತ್ತವನೆಡೆಗೆ ದುಂಬಿಯೊಂದು ಬರುತ್ತದೆ. ದುಂಬಿಯು ಒಂದೇ ಸಮ ಕರ್ಣನ ತೊಡೆಯನ್ನು ಕೊರೆದರೂ ನೋವನ್ನು ಸಹಿಸಿಕೊಳ್ಳುತ್ತಾನೆ. ತೊಡೆಯಿಂದ ಹರಿದಿಳಿದ ರಕ್ತ ಪರಶುರಾಮರ ಬಟ್ಟೆಯನ್ನು ತೋಯಿಸುತ್ತದೆ. ಧಿಗ್ಗನೆ ಎದ್ದ ಗುರುಗಳು ಅಲ್ಲಿನ ಸನ್ನಿವೇಶ ಕಂಡು ಮೂಕರಾಗುತ್ತಾರೆ. ವಿಷಯದ ಅರಿವಾಗಿ ಕ್ರೋಧವೂ, ಮರುಕವೂ ಉಂಟಾಗುತ್ತದೆ. ಸುಳ್ಳು ಹೇಳಿ ವಿದ್ಯೆ ಕಲಿತ ತಪ್ಪಿಗೆ ದಂಡನೆಯೂ ಆಗುತ್ತದೆ.
ಇದು, ಗುರುಗಳು ಲ್ಯಾಪ್-ಟಾಪ್’ಆಗಿದ್ದು, ಶಿಷ್ಯನು ಕಲಿತ ವಿದ್ಯೆಯೆಲ್ಲ ಆಪತ್ಕಾಲಕ್ಕೆ ನಿಷ್ಪ್ರಯೋಜಕವಾಗಲಿ ಎಂಬ ಶಾಪಕೊಟ್ಟ ಕರುಣಾಜನಕದ ಕಥೆ. ಗುರುಗಳಿಗೆ ಸುಳ್ಳನ್ನು ಹೇಳಿದರೆ ದೊರಕದಣ್ಣ ಮುಕುತಿ.
ಕುರುಕುಮಾರನ ಅವನತಿಗೆ ಮೂಲವಾದ ಲ್ಯಾಪ್-ಟಾಪ್ ಕಥೆ ಅರಿಯದವರಾರು?
ಕುರು ಸಭೆಯಲ್ಲಿ ಅತ್ಯಂತ ಉದ್ದಟತನದೋರಿ, ಕುರುಕುಲದ ಸೊಸೆ ದ್ರೌಪದಿಯನ್ನು ತನ್ನ ತೊಡೆಯ ಮೇಲೆ ಕೂರೆಂದು ಸನ್ನೆ ಮಾಡಿ ತೋರುತ್ತಾನೆ ದುರ್ಯೋಧನ. ರೋಷಾಗ್ನಿಯಿಂದ ತತ್ತರಿಸಿದ ಭೀಮಸೇನ, ದುರ್ಯೋಧನನ ತೊಡೆಯನ್ನು ಮುರಿಯುವೆನೆಂದು ಶಪಥಗೈಯುತ್ತಾನೆ. ದುರ್ಯೋಧನ ತನ್ನ ಸಾವನ್ನು ತಾನಾಗೇ ಮೈಮೇಲೆ ಎಳೆದುಕೊಳ್ಳುತ್ತಾನೆ. ತಾಯಿ ಗಾಂಧಾರಿಯ ದಿವ್ಯದೃಷ್ಟಿಯು ದುರ್ಯೋಧನನನ್ನು ವಜ್ರದೇಹಿಯಾಗಿಸಿದರೂ, ಉಟ್ಟದಟ್ಟಿ ತೊಡೆಯನ್ನು ಮುಚ್ಚಿದ್ದರಿಂದ, ಭೀಮನ ಪ್ರತಿಜ್ಞೆಗೆ ಅಡ್ಡಿಯಾಗಲಿಲ್ಲ.
ತನ್ನ ತೊಡೆಯೇರಿ ’ಕೂರು’ ಎಂದವನ ’ಊರುಭಂಗ’ ಕಥಾನಕವೇ ಸಂಸ್ಕೃತ ಭಾಷೆಯಲ್ಲಿ ನಾಟಕವಾಗಿ ಭಾಸ ಕವಿಯಿಂದ ರಚಿತವಾಯಿತು.
ಕಲಿಯುಗದಲ್ಲೂ ಲ್ಯಾಪ್-ಟಾಪ್ ಕಥೆಗಳು ಹಲವು ರೀತಿಯಲ್ಲಿ ಸಿಗುತ್ತವೆ. ಪ್ರತಿ ಕ್ರಿಸ್ಮಸ್ ಸಮಯದಲ್ಲಿ, ಅಮೇರಿಕದ ಮಾಲ್’ಗಳಲ್ಲಿ, ಸಾಂತಾ ಕ್ಲಾಸ್ ವೇಷಧಾರಿಯ ತೊಡೆಯ ಮೇಲೆ ಚಿಕ್ಕ ಮಕ್ಕಳು ಕುಳಿತು ಚಿತ್ರ ತೆಗೆಸಿಕೊಳ್ಳುವ ಪರಿಪಾಠವಿದೆ. ಕೆಲವೊಂದು ಸಾರಿ ಘಂಟೆಗಟ್ಟಲೆ ಕಾದು ಚಿತ್ರ ತೆಗೆಸಿಕೊಂಡ ಅನುಭವವೂ ಇದೆ. ಕೆಲವು ಘಂಟೆ ಕಾದ ನಂತರ ನಮ್ಮ ಸರದಿ ಮುಂದಿನದು ಎಂದಾಗ, ವಿಶ್ರಾಂತಿಗೆಂದು ಆ ಸಾಂತಾ ಅರ್ಧ ಘಂಟೆ ಹೋಗಿದ್ದೂ ಇದೆ.
ನನ್ನ ಮಗ ಚಿಕ್ಕಂದಿನಲ್ಲಿ ಸಾಂತನ ತೊಡೆಯೇರಿ ಕುಂತ ಚಿತ್ರವನ್ನು ನರಸಿಂಗನ ತೊಡೆಯೇರಿ ಕುಂತ ಪ್ರಹ್ಲಾದನ ಚಿತ್ರಕ್ಕೆ ಹೋಲಿಸಿ ನಾಲ್ಕು ಸಾಲು ಬರೆದಿದ್ದೆ.
ಬಾಸ್-ಸೆಕ್ರೇಟರಿ ಜೋಕುಗಳಲ್ಲಿ, ಬಾಸ್’ನ ಹೆಂಡತಿ ಗಂಡನ ಆಫೀಸ್ ರೂಮಿನೊಳಗೆ ನುಗ್ಗಿದಾಗ ಸೆಕ್ರೇಟರಿಯು ಬಾಸ್’ನ ಲ್ಯಾಪ್-ಟಾಪ್ ಅಗಿರುವ ದೃಶ್ಯ ಸರ್ವೇಸಾಮಾನ್ಯ.
ಒಮ್ಮೆ ಹೀಗೇ ಆಗಿತ್ತು. ಚಿಕ್ಕಂದಿನಲ್ಲಿ ನನ್ನ ಸ್ನೇಹಿತನೊಬ್ಬ ತನ್ನ ತಮ್ಮನನ್ನು ತೊಡೆ ಮೇಲೆ ಮಲಗಿಸಿಕೊಂಡು ಕೂತಿದ್ದ. ಬೀದಿಯಿಂದ ಕಾಂಪೌಂಡ್ ಒಳಗೆ ಬಂದ ಅವನ ಸ್ನೇಹಿತನನ್ನು ಎದುರುಗೊಳ್ಳಲು ಸೀದ ಎದ್ದು ನಿಂತೇ ಬಿಟ್ಟ ಅರ್ಥಾತ್ ಲ್ಯಾಪ್-ಟಾಪ್ ಅನ್ನು ಮರೆತು ಎದ್ದು ನಿಂತೇಬಿಟ್ಟ. ಧುಡುಮ್ ಎಂದು ಬಿದ್ದು ಅತ್ತ ಮಗುವಿನತ್ತ ಮಿಕ್ಕವರು ಓಡಿಬರುವ ವೇಳೆಗೆ ಎನೂ ಮಾಡದ ಆ ಸ್ನೇಹಿತ ನಾಪತ್ತೆ !
ಲ್ಯಾಪ್-ಟಾಪ್’ನಲ್ಲಿ ಅಡಕವಾಗಿರೋ ಮೆಮೊರಿ ಕಾರ್ಡ್’ನಂತೆ ಪಾರ್ವತೀದೇವಿಯನ್ನು ತನ್ನೊಳಗೇ ಹೊಂದಿ ಅರ್ಧನಾರೀಶ್ವರನಾದ ಪರಶಿವನು ನಿಮ್ಮನ್ನು ಕಾಪಾಡಲಿ. ಲ್ಯಾಪ್-ಟಾಪ್ ಆಗಿ ಪಾರ್ವತಿಯನ್ನೂ ಹೆಡ್-ಟಾಪ್ ಆಗಿ ಗಂಗೆಯನ್ನು ಹೊತ್ತ ಶಂಕರ ನಿಮ್ಮನ್ನು ರಕ್ಷಿಸಲಿ.
ನಾ ಮಾಡಿರುವ ಪಾಪವನ್ನು ಪರಿಹರಿಸೆಂದು ತುಳಸೀದಳವನ್ನೂ ಬಿಲ್ವಪತ್ರೆಯನ್ನೂ ಅರ್ಪಿಸುವೆನೈ ಹರಿಹರನೇ.
Comments
ಉ: Laptop - ಒಂದು ಹಿನ್ನೋಟ !
ಲ್ಯಾಪು ಟ್ಯಾಪುಗಳ ಸಂಗ್ರಹ ಚೆನ್ನಾಗಿದೆ. ಸದ್ಯ, ಇಷ್ಟಕ್ಕೇ ಮುಗಿಸಿದಿರಲ್ಲಾ! ಏಕೆಂದರೆ ಲ್ಯಾಪು ಟಾಪುಗಳ ಹಗರಣಗಳ ರಾಶಿಯೇ ಇರುತ್ತವೆ!
In reply to ಉ: Laptop - ಒಂದು ಹಿನ್ನೋಟ ! by kavinagaraj
ಉ: Laptop - ಒಂದು ಹಿನ್ನೋಟ !
ತುಂಬಾ ಡೀಟೈಲ್ಸ್'ಗೆ ಹೋದರೆ ವಾಕರಿಕೆ ಬಂದೀತು ಅಂತ 'ಟಚ್ ಅಂಡ್ ಗೋ' ತತ್ವ ಬಳಸಿದೆ :-) ಧನ್ಯವಾದಗಳು ಕವಿಗಳೇ !
ಉ: Laptop - ಒಂದು ಹಿನ್ನೋಟ !
:) :) ಭಲ್ಲೇಜಿ, ಎಲ್ಲಾ ಲ್ಯಾಪ್ ಟಾಪ್ಗಳ ಬಗ್ಗೆ ಹಿನ್ನೋಟ ಚೆನ್ನಾಗಿತ್ತು. ಟಾಪ್ ಒನ್ ಲ್ಯಾಪ್ ಟಾಪ್ ಯಾವುದು?:)
In reply to ಉ: Laptop - ಒಂದು ಹಿನ್ನೋಟ ! by ಗಣೇಶ
ಉ: Laptop - ಒಂದು ಹಿನ್ನೋಟ !
ಎಚ್.ಪಿ. ಲ್ಯಾಪ್-ಟಾಪ್ ನನಗೆ ಪ್ರಿಯ. ಎಚ್.ಪಿ. ಅಂದರೆ "ಹರಿನಾಮಪ್ರಿಯವೆಂದ ಪ್ರಹ್ಲಾದ".
ಉ: Laptop - ಒಂದು ಹಿನ್ನೋಟ !
Bombat!!
In reply to ಉ: Laptop - ಒಂದು ಹಿನ್ನೋಟ ! by Harish S k
ಉ: Laptop - ಒಂದು ಹಿನ್ನೋಟ !
ಧನ್ಯವಾದಗಳು ಹರೀಶ್