Life is more important than work…!

Life is more important than work…!

ಈ ಮೇಲಿನ ಮಾತುಗಳನ್ನು ಹೇಳಿದವನ ಹೆಸರು ನನಗೆ ಈಗಲೂ ನೆನಪಿಲ್ಲ. ಕೆಲಸಕ್ಕಿಂತಲೂ ಜೀವ ದೊಡ್ದದು ಎಂಬ ಬಹುತೂಕದ ಮಾತು ಹೇಳಿ ಹೋದವನ ಹೆಸರು ನೆನಪಿಲ್ಲವಾದರೂ ಅವನು ಕೊಟ್ಟ ಒಂದು ಬಾಟಲಿ ರಕ್ತ ಮಾತ್ರ ಜೀವ ಉಳಿಸಿತು ಎಂಬುವುದು ಸತ್ಯ. ಸುಮಾರು ಒಂದು ದಶಕದ ಹಿಂದಿನ ನೈಜ ಘಟನೆ ಇದು. ಬಹುಷಃ ೨೦೧೧ರ ಇಸವಿ ಇರಬೇಕು. ನನ್ನ ತಂಗಿಯ ಗೆಳತಿ ಒಂದು ಅವಘಡಕ್ಕೆ ತುತ್ತಾಗಿ ಜೀವನ್ಮರಣದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಳು. ತುರ್ತಾಗಿ ರಕ್ತದ ಅವಶ್ಯಕತೆ ಬಹಳ ಇತ್ತು. ಒಂದೆರಡು ದಿನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದರೂ ಅಲ್ಲಿಯ ಫೀಸ್ ಕಟ್ಟಲು ಆಕೆಯ ಮನೆಯವರಿಗೆ ಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಮೊದಲೇ ಬಡತನ, ಅದರ ಮೇಲೆ ಆಸ್ಪತ್ರೆಯ ಐಸಿಯು ಹಾಗೂ ರಕ್ತದ ವೆಚ್ಚವನ್ನು ಕೊಡುವವರಾದರೂ ಯಾರು. ಕೊನೆಗೆ ಆಕೆಯನ್ನು ಸರಕಾರಿ ಆಸ್ಪತ್ರೆಯಾದ ವೆನ್ಲಾಕ್ ಗೆ ವರ್ಗಾಯಿಸಲಾಯಿತು. 

ಖಾಸಗಿ ಆಸ್ಪತ್ರೆಯಲ್ಲಿ ಅದಾಗಲೇ ೮ ಬಾಟಲಿ ರಕ್ತ ನೀಡಿ ಆಗಿತ್ತು. ಆಕೆಗೆ ರಕ್ತದಿಂದ ತೆಗೆಯಲಾಗುವ ಪ್ಲಾಸ್ಮಾದ ತುರ್ತು ಅಗತ್ಯ ಇತ್ತು. ಅದನ್ನು ಕೂಡಲೇ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಇತ್ತು. ಆಕೆಯ ಸಂಬಂಧಿಕರ, ಪರಿಚಿತರ ಎಲ್ಲರ ರಕ್ತವನ್ನು ಪಡೆದಾಗಿತ್ತು. ಆದರೂ ಇನ್ನಷ್ಟು ರಕ್ತ ಬೇಕಾಗುತ್ತದೆ ಎಂದು ನನ್ನ ತಂಗಿ ಹೇಳಿದಾಗ ನಾನು ಆಸ್ಪತ್ರೆಗೆ ಹೋದೆ. ಅಲ್ಲಿ ಅವಳ ಅಮ್ಮ ನನ್ನೆದುರು ಕಣ್ಣೀರು ಹಾಕಿದಾಗಲೇ ನಾನು ನಿರ್ಧಾರ ಮಾಡಿದೆ ಹೇಗಾದರೂ ಇವಳನ್ನು ಉಳಿಸಿಕೊಳ್ಳಲೇ ಬೇಕು ಎಂದು. ಹಸಿ ರಕ್ತ (Fresh Blood) ದಿಂದ ಪ್ಲಾಸ್ಮಾ ತೆಗೆದು ನೇರವಾಗಿ ರೋಗಿಗೆ ನೀಡಬೇಕಾದುದರಿಂದ ಹೊಸ ಹೊಸ ದಾನಿಗಳನ್ನು ಹುಡುಕಬೇಕಿತ್ತು. ಹಲವಾರು ಮಂದಿಯನ್ನು ಸಂಪರ್ಕಿಸಿದೆ. ಈಗಿನಂತೆ ಆಗ ವಾಟ್ಸಾಪ್ ಹಾಗೂ ರಕ್ತದಾನಿಗಳ ಲಿಂಕ್, ಬಳಗವೆಲ್ಲಾ ಸಕ್ರಿಯವಾಗಿರಲಿಲ್ಲ. ನನ್ನ ತಂಗಿಯೊಬ್ಬಳು ಕಾಲ್ ಸೆಂಟರ್ ನಲ್ಲಿ ಉದ್ಯೋಗದಲ್ಲಿದ್ದಾಳೆ. ಅವಳಿಗೆ ಕರೆ ಮಾಡಿದೆ. ನಾನು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಅಂದಳು. ಅವಳು ಒಮ್ಮೆ ಹಿಡಿದ ಕೆಲಸ ನೆರವೇರುವವರೆಗೆ ಬಿಡುವುದಿಲ್ಲ. ಅವಳು ಪವಾಡವನ್ನೇ ಮಾಡಿದಳು. ಕೆಲವೇ ಗಂಟೆಗಳಲ್ಲಿ ಸುಮಾರು ೨೦ ಮಂದಿ ರಕ್ತ ನೀಡಲು ಬ್ಲಡ್ ಬ್ಯಾಂಕ್ ಎದುರು ಹಾಜರಿದ್ದರು. ಆದರೆ ಅಂದು ಆ ದಿನದ ರಕ್ತವನ್ನು ನೀಡಿಯಾಗಿತ್ತು. ಮರುದಿನ ಬನ್ನಿ ಎಂದು ಹೇಳಿದೆ. ನಂತರ ಮರುದಿನ ಶುರುವಾಯ್ತು ನೋಡಿ, ರಕ್ತದಾನಿಗಳ ಮೆರವಣಿಗೆ…

ಮೊದಲ ದಿನ ಎಂಟು, ಎರಡನೇ ದಿನ ಎಂಟು, ಮೂರನೇ ದಿನ ನಾಲ್ಕು, ನಾಲ್ಕನೇ ದಿನ ಎರಡು, ಐದನೇ ದಿನ ಮೂರು, ಆರನೇ ದಿನ ಐದು ಹೀಗೆ ಮೂವತ್ತು ಬಾಟಲಿ ರಕ್ತದ ವ್ಯವಸ್ಥೆಯಾಗಿ ಬಿಟ್ಟಿತು.  ಹುಡುಗಿಯ ಅಣ್ಣನೂ ತುಂಬಾ ಓಡಾಡಿ ಇದರ ಅರ್ಧದಷ್ಟು ರಕ್ತದ ವ್ಯವಸ್ಥೆ ಮಾಡಿದ. ಉಳಿದ ವ್ಯವಸ್ಥೆ ನನ್ನಿಂದ ಆಗಿಯೇ ಬಿಟ್ಟಿತು. 

ನಮ್ಮ ಮಟ್ಟಿಗೆ ಇದು ಒಂದು ಪವಾಡವೇ ಸರಿ. ಆಸ್ಪತ್ರೆಯ ಎದುರುಗಡೆ ಆ ದಿನಗಳಂದು ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕ ಸಂಘದವರ ಪ್ರತಿಭಟನೆ ನಡೆಯುತ್ತಿತ್ತು. ಅವರಲ್ಲಿ ಓರ್ವರು ನನ್ನ ಪರಿಚಿತರು. ವಿಷಯ ತಿಳಿದ ಕೂಡಲೇ ಅವರು ಪ್ರತಿಭಟನೆಗೆ ಕುಳಿತಿದ್ದವರಿಂದ ನಾಲ್ಕು ಬಾಟಲಿ ರಕ್ತದ ವ್ಯವಸ್ಥೆ ಮಾಡಿಕೊಟ್ಟರು. ಒಂದೇ ಒಂದು ದಿನ ಕಣ್ಣಿನಲ್ಲಿ ನೋಡದವರು, ಮಾತನಾಡದೇ ಇದ್ದವರು, ಗುರುತೇ ಇಲ್ಲದವರು ಅಂದು ಬಂದು ತಮ್ಮ ಅಮೂಲ್ಯವಾದ ರಕ್ತವನ್ನು ದಾನ ಮಾಡಿ ಹೋದರು. ನಾವು ಮಾಡಿದ ವ್ಯವಸ್ಥೆಯನ್ನು ನೋಡಿ ಅಲ್ಲಿಯ ಬ್ಲಡ್ ಬ್ಯಾಂಕ್ ಸಿಬ್ಬಂದಿಗೆ ಹಾಗೂ ಡಾಕ್ಟರಿಗೂ ಆಶ್ಚರ್ಯವಾಗಿತ್ತು. ಅವರಿಗಿಂತ ಜಾಸ್ತಿ ನನಗೇ ಅಚ್ಚರಿಯಾಗಿತ್ತು. ಈ ಸಂದರ್ಭದಲ್ಲಿ ಕಾಲ್ ಸೆಂಟರ್ ನಿಂದ ಬಂದ ಹುಡುಗನೊಬ್ಬ ರಕ್ತ ಕೊಟ್ಟು ಹೊರ ಬಂದಾಗ ನಾನು ಹೇಳಿದೆ "ನಿಮಗೆಲ್ಲಾ ತುಂಬಾ ತೊಂದರೆಯಾಗಿರಬೇಕಲ್ವೇ? ಕೆಲಸದ ನಡುವೆ ಎದ್ದು ಬಂದಿದ್ದೀರಲ್ವಾ?" ಅದಕ್ಕೆ ಅವನು ಹೇಳಿದ ಮಾತು ಮೇಲೆ ಇದೆ." ಜೀವಕ್ಕಿಂತ ಕೆಲಸ ದೊಡ್ಡದ್ದಲ್ಲ. ಕೆಲಸ ನಾಳೆಯೂ ಮಾಡಬಹುದು ಆದರೆ ಒಮ್ಮೆ ಹೋದ ಜೀವ ಮತ್ತೆ ಬರುವುದಿಲ್ಲ." 

ನಾನು, ಅವಳ ಅಣ್ಣ ರಕ್ತವನ್ನು ವ್ಯವಸ್ಥೆ ಮಾಡಬೇಕೆಂದು ವೈದ್ಯರು ಹೇಳಿದ ದಿನ ಬ್ಲಡ್ ಬ್ಯಾಂಕ್ ಮುಂದೆ ಕುಳಿತ ದಯನೀಯ ಸ್ಥಿತಿ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಯಾರ ಬಳಿ ಹೇಳುವುದು? ಈ ರಕ್ತಕ್ಕೆ ಹಣ ಕೊಡುವವರು ಯಾರು? ಹಣ ಕೊಟ್ಟರೂ ಬೇಕಾದ ರಕ್ತ ಸಿಗುತ್ತದೆಯೇ? ಆದರೆ ಯಾರ್ಯಾರೋ ಸಹಾಯ ಮಾಡಿದರು. ೬ ದಿನಗಳಲ್ಲಿ ಮೂವತ್ತು ಬಾಟಲಿ ರಕ್ತದ ವ್ಯವಸ್ಥೆ ಆಗಿತ್ತು. ಏಳನೇ ದಿನ ಡಾಕ್ಟರ್ ಬಂದು ಆಕೆಯ ಪರಿಸ್ಥಿತಿ ನಾರ್ಮಲ್ ಆಗಿದೆ. ಇನ್ನು ಅಪಾಯವಿಲ್ಲ ಎಂದಾಗ ನಮಗೆ ಜೀವ ಬಂದಿತ್ತು. ಆಕೆಯ ತಾಯಿಗೆ ಈ ಮಾತು ಹೇಳಿದಾಗ ಅವರಿಗೆ ಆದ ಸಂತೋಷ ಹೇಳ ತೀರದು. ನಮಗೂ ಅಂದು ರಕ್ತದಾನದ ಮಹತ್ವ ಅರಿವಿಗೆ ಬಂದಿತ್ತು. ಆದರೆ ರಕ್ತದಾನ ಮಾಡಿದ ಆ ಹುಡುಗ ಹೇಳಿದ ಆ ಮಾತುಗಳು ಮಾತ್ರ ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಲೇ ಇರುತ್ತವೆ. ಆ ಸಮಯದಲ್ಲಿ ಬ್ಲಡ್ ಬ್ಯಾಂಕ್ ನ ಸಿಬ್ಬಂದಿಗಳೂ ಬಹಳ ಉಪಕಾರ ಮಾಡಿದ್ದರು. ನಾವು ಬದಲಿ ರಕ್ತ ಕೊಡುವ ಮೊದಲೇ ನಮಗಾಗಿ ಬೇರೆಯವರ ರಕ್ತದಿಂದ ಪ್ಲಾಸ್ಮಾ ತಯಾರು ಮಾಡಿ ಇಡುತ್ತಿದ್ದರು. ಅವರನ್ನೂ ನಾನು ಈ ಸಮಯದಲ್ಲಿ ಸ್ಮರಿಸಲೇ ಬೇಕು.

ಇಂದು (ಜೂನ್ ೧೪) ವಿಶ್ವ ರಕ್ತದಾನಿಗಳ ದಿನ. ಬೆಳಿಗ್ಗೆ ಪತ್ರಿಕೆಯಲ್ಲಿ ಈ ದಿನದ ಬಗ್ಗೆ ಓದುವಾಗ ನನ್ನ ಮನಸ್ಸು ದಶಕಗಳ ಹಿಂದಿನ ಈ ಘಟನೆಯತ್ತ ಜಾರಿತು. ಅದೇ ನೆನಪಿನಲ್ಲಿ ಇಷ್ಟೆಲ್ಲಾ ಬರೆದೆ. ಆ ಹುಡುಗಿ ಈಗಲೂ ನನಗೆ ಸಿಗುತ್ತಾಳೆ. ಈಗ ಮದುವೆಯಾಗಿ ಎರಡು ಮಕ್ಕಳ ತಾಯಿ. ಸಂತೃಪ್ತ ಜೀವನ ಅವಳದ್ದು. 

(ಆಸ್ಪತ್ರೆಯ ಘಟನೆಯ ಯಾವ ವ್ಯಕ್ತಿಗಳ ಹೆಸರನ್ನು ನಾನು ಉದ್ದೇಶ ಪೂರ್ವಕವಾಗಿ ಬಳಸಿಕೊಂಡಿಲ್ಲ. ಎಲ್ಲಾ ಪಾತ್ರಗಳೂ ಜೀವಂತವಾಗಿ ನಮ್ಮ ನಡುವೆಯೇ ಇವೆ. ಎಲ್ಲರ ಖಾಸಗಿ ಬದುಕು ನನ್ನ ಬರಹಕ್ಕಿಂತಲೂ ದೊಡ್ಡದು)

***

ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು.

ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಪ್ರಯೋಜನಗಳು :

* ರಕ್ತದಾನ ಮಾಡುವುದರಿಂದ ದಾನಿಯ ರಕ್ತದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಸಿಗುತ್ತದೆ.

*  ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯತತ್ಪರತೆ, ಜಾಪಕ ಶಕ್ತಿ ವೃದ್ಧಿಯಾಗುತ್ತದೆ.

*  ದೇಹದಲ್ಲಿ ಕೊಬ್ಬಿನ ಅಂಶ (ಕೊಲೆಸ್ಟ್ರಾಲ್) ಕಡಿಮೆ ಮಾಡಲು ಸಹಾಯವಾಗುತ್ತದೆ.

*  ಹೃದಯಾಘಾತವನ್ನು ಶೇ 80ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ.

*  ರಕ್ತದ ಒತ್ತಡ, ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ.

* ಎಲ್ಲಕ್ಕಿಂತ ಮಿಗಿಲಾಗಿ ಒಂದು ‘ಜೀವ’ ಉಳಿಸಿದಂತಾಗುತ್ತದೆ.

ನೆನಪಿರಲಿ. . . . . . "ರಕ್ತದಾನ ಮಹಾದಾನ" 

ಯಾವುದೇ ಜಾತಿ ಇರಲಿ, ಧರ್ಮವಿರಲಿ ಎಲ್ಲರ ದೇಹದಲ್ಲೂ ಇರುವ ರಕ್ತ ಒಂದೇ ಅಲ್ಲವೇ? ಹೌದು, ಜಗತ್ತಿನೆಲ್ಲೆಡೆ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಮಂದಿ ರಕ್ತದ ಅಗತ್ಯದಲ್ಲಿರುತ್ತಾರೆ; ಸಾವಿರಾರು ಮಂದಿ ತಮಗೆ ಬೇಕಾದವರಿಗೆ ಬೇಕಿರುವ ರಕ್ತವನ್ನು ಹುಡುಕಿಕೊಂಡು ಆತಂಕದಿಂದ ಅಲೆಯುತ್ತಿರುತ್ತಾರೆ. ರಕ್ತ ಅಕ್ಷರಶಃ ಜೀವದ್ರವ್ಯ.

ಅಪಘಾತ, ಕ್ಯಾನ್ಸರ್‌, ಹೃದಯಸಂಬಂಧಿ ಸಮಸ್ಯೆಗಳು, ಹೆರಿಗೆ ಸಂಬಂಧಿ ಚಿಕಿತ್ಸೆಯ ವೇಳೆ ವ್ಯಾಪಕವಾಗಿ ರಕ್ತ ಬೇಕಾಗುತ್ತದೆ. ಆದರೆ, ಭಾರತವೂ ಸೇರಿದಂತೆ ಇಡೀ ವಿಶ್ವದಾದ್ಯಂತ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆಯಿಲ್ಲ. ಹೀಗಾಗಿ ಬದುಕುವ ಎಲ್ಲ ಅವಕಾಶಗಳಿದ್ದರೂ ಎಷ್ಟೋ ಜೀವಗಳು ರಕ್ತದ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿಅಸು ನೀಗಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ. ರಕ್ತದಾನ ಮಾಡಲು ದುಡ್ಡು ಬೇಕಾಗಿಲ್ಲ. ಅದಕ್ಕೆ ಬೇಕಾಗಿರುವುದು ಒಂದು ಜೀವಕ್ಕೆ ಮಿಡಿಯುವ ದೊಡ್ಡ ಮನಸ್ಸಷ್ಟೆ!

(ರಕ್ತದಾನಿ ದಿನದ ಮಾಹಿತಿ: ಅರುಣ್ ಡಿ'ಸೋಜ)

ಚಿತ್ರ ಕೃಪೆ: ಅಂತರ್ಜಾಲ ತಾಣ