ಬಿರುದು, ಬಿಮ್ಮಾನಗಳಿರದ ಹಾಡುಹಕ್ಕಿಯ ಸಂಗೀತ ಕಚೇರಿ ಇದು!

ಬಿರುದು, ಬಿಮ್ಮಾನಗಳಿರದ ಹಾಡುಹಕ್ಕಿಯ ಸಂಗೀತ ಕಚೇರಿ ಇದು!

ಬರಹ

‘ಹಕ್ಕಿಗಳುಲಿಯಲು, ಹೂವುಗಳರಳಲು
ತೆರೆವುದು ದಿನ ದಿನ ಸಗ್ಗದ ಬಾಗಿಲು’- ರಾಷ್ಟ್ರಕವಿ ಕುವೆಂಪು.

‘ಹಕ್ಕಿಯ ಗಾಯನ ಕೌಶಲ್ಯದ ಕುರಿತು ನಾನು ಲೇಖನ ಬರೆಯುತ್ತಿದ್ದೇನೆ’ ಎಂದಾಗ ನವಲಗುಂದದ ನನ್ನ ವಿದ್ಯಾರ್ಥಿ ಮಿತ್ರ ಸಿದ್ದು ಪೂಜಾರ ಅಚ್ಚರಿಯ ವಿಷಯ ತಿಳಿಸಿದರು.

‘ಟ್ಟೀ..ಟ್ಟೇ..ಟೀವ್..ಟ್ಟೀಂವ್’ ಎಂದು ಕೂಗುವ, ನೆಲದ ಮೇಲೆಯೇ ಗೂಡು ಕಟ್ಟುವ ಟಿಟ್ಟಿಭ ಹಕ್ಕಿ ಕೂಗಿದರೆ ಅವರ ಅಮ್ಮ ಅಪಶಕುನ ಎಂದು ಭಾವಿಸುತ್ತರಂತೆ! ಮುಂದಿನ ಕೆಲವೇ ದಿನಗಳಲ್ಲಿ ಆಪ್ತೇಷ್ಠರ ಸಾವಿನ ಸುದ್ದಿಯನ್ನು ಹೊತ್ತು ತರುವ ಸಂದೇಶದ ಪೂರ್ವಭಾವಿಯಾಗಿ ಈ ಹಕ್ಕಿ ಕೂಗುತ್ತದೆ ಎಂದು ನಮ್ಮ ಗ್ರಾಮೀಣ ಭಾಗದಲ್ಲಿ ಬಲವಾದ ನಂಬಿಕೆ ಇದೆ.

‘ಥೂ..ಥೂ..’ ಎಂದು ಮೂರು ಬಾರಿ ಉಗಿದು, ಮನೆ ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಿ ಬಿಟ್ಟರೆ ಅಪಶಕುನ ದೂರವಾಗುತ್ತದೆಯಂತೆ! ಹಾಗೆಯೇ ಕಾಗೆ ನಮ್ಮ ಮನೆಯ ಹಿತ್ತಲಿನ ಮಾಳಿಗೆಯ ಮೇಲೆ ಕುಳಿತು ಸತತ ಕೂಗಿದರೆ (ಅದು ಆಹಾರ ನೋಡಿ ತನ್ನ ಬಳಗ ಕರೆಯಲು ವಾಸ್ತವದಲ್ಲಿ ಕೂಗುತ್ತಿರುತ್ತದೆ.) ನೆಂಟರು, ಬೀಗರು ದೂರದ ಊರಿನಿಂದ ಬರುವರು ಎಂಬ ಪೂರ್ವ ಪೀಠಿಕೆ ಅದು! ಎಂದು ಭಾವಿಸಲಾಗುತ್ತದೆ.
ಒಟ್ಟಾರೆ ನಮ್ಮ ನಂಬಿಕೆ, ಆಚಾರ, ವಿಚಾರ, ಸಂಪ್ರದಾಯ, ಪದ್ಧತಿಗಳು ಹಕ್ಕಿಯ ಹಾಡಿಗೂ ಹಣೆಪಟ್ಟಿ ಅಂಟಿಸಿವೆ.

ವಾಸ್ತವವಾಗಿ ಕೋಗಿಲೆ, ಕಾಜಾಣ, ಮಧುರಕಂಠ, ಸೂರಕ್ಕಿ, ಭಾರದ್ವಾಜ, ಬುಲ್ ಬುಲ್, ಬೆಟ್ಟದ ಮೈನಾ, ಟಿಟ್ಟಿಭ, ಮಲಬಾರ್ ಥ್ರಶ್, ಸುವ್ವಿ ಇವರೆಲ್ಲ ಅದ್ಭ್ತುತ ಗಾಯಕರು. ಇವರ ಸಂಗೀತ ಕಚೇರಿ ಅನನ್ನ್ಯವಾದುದು. ಇವರ ಗಾಯನ ಸಮೃಧ್ಧ ರಸದೌತಣ. ನಮ್ಮ ಗಾನ ಗಂಧರ್ವ, ಗಾನ ಸುಧಾಕರ, ಸಂಗೀತ ರತ್ನಾಕರ, ಗಾನ ವಿಶಾರದ, ಸಂಗೀತ ಸಾರ್ವಭೌಮ ಹಾಗು ಸಂಗೀತ ಕಲಾನಿಧ್ಗಿ ಬಿರುದಾಂಕಿತ ಕಲಾವಿದರಿಗೆ ಸರಿಸಾಟಿ ಪ್ರತಿಸ್ಪರ್ಧೆ ಈ ಸ್ವಚ್ಚಂದ ಹಕ್ಕಿಗಳು ಒಡ್ಡಬಲ್ಲವು!

ಒಟ್ಟಾರೆ ನೂರಾರು ಸುಮಧುರ ವಿಹಂಗಮಗಳ ಅಮರಗಾನ. ನಾದದ ಮಧುರ ನಂದನದ್ವಾರ ಈ ಹಕ್ಕಿಗಳ ನಿತ್ಯ ನೂತನ ಗಾನ. ಈ ಹಾಡುವ ಹಕ್ಕಿಗಳ ಪ್ರತ್ಯೇಕ ಗಣವೇ ಇದೆ. ಕೊಂಬೆಗಳನ್ನು ಏರಿ ಕುಳಿತುಕೊಳ್ಳುವ ‘ಪಸೇರಿ ಫಾರ್ಮಿಸ್’ ಕುಟುಂಬಕ್ಕೆ ಸೇರಿದ ಪಕ್ಷಿಗಳು ಪಕ್ಷಿ ಪ್ರಪಂಚದಲ್ಲಿಯೇ ಅತ್ಯಂತ ವಿಕಾಸ ಹೊಂದಿದ ಜೀವಿಗಳು. ಆ ಗಣದಲ್ಲಿ ‘ಆಸ್ಪೈನ್’ ಎಂಬ ಉಪಗಣಕ್ಕೆ ಸೇರಿದ ಹಕ್ಕಿಗಳಲ್ಲಿ ೪ ಸಾವಿರ ಪ್ರಭೇಧದ ‘ಗವಾಯಿ’ಗಳಿದ್ದಾರೆ.

ಮಡಿವಾಳ ಹಕ್ಕಿ ಅಥವಾ ಮ್ಯ್ಗಾಗ್ ಪೈರಾಬಿನ್ ಎಂದು ಕರೆಯಿಸಿಕೊಳ್ಳುವ ಸುವ್ವಿ ಪಕ್ಷಿ ಲೋಕದ ಅಸದೃಶ ಗಾಯಕ. ಹಾಡುವ ಎಲ್ಲ ಹಕ್ಕಿಗಳಿಗೂ ವಿಶೇಷವಾದ ಗಾಯನಾಂಗವಿದೆ. ಹಕ್ಕಿಗಳ ಧ್ವನಿ ಪೆಟ್ಟಿಗೆಯ ಕೆಳಭಾಗದಲ್ಲಿರುವ ಈ ‘ಸಿರಿಂಕ್ಸ್’ ಗಾಯನಾಂಗ ಶ್ವಾಸನಾಳದ ಎರಡು ಕವಲುಗಳು ಸೇರುವ ಜಾಗದಲ್ಲಿದೆ. ಗಾಯನಾಂಗದಲ್ಲಿರುವ ಪೊರಗಳ ಮೇಲಎ ಗಾಳಿ ಹಾಯ್ದಾಗ ಅವು ಕಂಪಿಸಿ ಧ್ವನಿ ತರಂಗಗಳನ್ನು ಉತ್ಪಾದಿಸುತ್ತವೆ. ‘ಟ್ಟೇ..ಟ್ಟೇ..ಟೀಂವ್’ ಎಂದು ಕೂಗುವ ಟಿಟ್ಟಿಭವೂ ಇದೇ ವ್ಯವಸ್ಥೆ ಹೊಂದಿದೆ.

ಶ್ವಾಸನಾಳದ ಎರಡು ಕವಲುಗಳಿಂದ ಬರುವ ಗಾಳಿ ಪ್ರತ್ಯೇಕವಾಗಿ ಧ್ವನಿಯನ್ನು ಉತ್ಪಾದಿಸುವುದರಿಂದ ಹಕ್ಕಿಗಳಲ್ಲಿ ಎರದೂ ಧ್ವನಿ ಮೂಲಗಳಿವೆ. ಈ ಎರಡು ಮೂಲಗಳಿಂದ ಬರುವ ಸ್ವರಗಳು ಶ್ವಾಸನಾಳದಲ್ಲಿ ಮಿಲನವಾಗಿ ಅದ್ಭುತ ಸಂಕೀರ್ಣತೆ, ವೈವಿಧ್ಯ ಹಾಗು ಮಾಧುರ್ಯಗಳಿರುವ ಸಪ್ತಸ್ವರ ಮೇಳವಾಗಿ ಇಂಪಾಗಿ ಹೊರಹೊಮ್ಮುತ್ತದೆ.

ಸುವ್ವಿ ಹಕ್ಕಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಸೈಜಿನಲ್ಲಿ ಗುಬ್ಬಿಗಿಂತ ತುಸು ದೊಡ್ಡಗಾತ್ರದ ಹಕ್ಕಿ. ದೇಹದ ಬಣ್ಣ ಹೊಳೆಯುವ ಕಪ್ಪು ಅಥವಾ ಬಿಳಿ. ನೀಳ ಕಾಲುಗಳಿಗೆ ಗುಲಾಬಿ ಬಣ್ಣ. ಎಪ್ರಿಲ್ ನಿಂದ ಜುಲೈ ವರೆಗೆ ಸಂತಾನೋತ್ಪತ್ತಿ ಅವಧಿ. ಈ ಅವಧಿಯಲ್ಲಿ ಹಕ್ಕಿಯ ಧ್ವನಿ ತೀರ ಇಂಪಾಗಿರುತ್ತದೆ. ಈ ಅವಧಿಯ ಹೊರಗೆ ಹಕ್ಕಿಯ ಧ್ವನಿ ಅತ್ಯಂತ ಕರ್ಕಶವಾಗುತ್ತದೆ. ಕೂಗುವುದು ಸಹ ಆಗೊಮ್ಮೆ-ಈಗೊಮ್ಮೆ ಮಾತ್ರ. ಈಗಾಗಲೇ ಕೈಗೊಳ್ಳಲಾದ ಸಮೀಕ್ಷೆ, ಸಂಶೋಧನೆ ಪ್ರಕಾರ ಹಕ್ಕಿಗಳ ಜಗತ್ತಿನಲ್ಲಿ ಹಾಡುವುದು ಕೇವಲ ಗಂಡು ಹಕ್ಕಿ ಮಾತ್ರ!

‘ಕಾಲ್ ಆಂಡ್ ಸಾಂಗ್’- ‘ಕೂಗು’ ಮತ್ತು ‘ಹಾಡು’ ಹಕ್ಶಿಗಳಿಗೆ ಅತ್ಯಗತ್ಯ. ಆದರೆ ಅವುಗಳ ಉದ್ದೇಶ ಬೇರೆ ಬೇರೆ. ಹಿರಿಯ ವಿಜ್ನಾನಿ/ ವೈಜ್ನಾನಿಕ ಬರಹಗಾರ, ಆಕಾಶವಾಣಿಯ ದಕ್ಷಿಣ ಭಾರತದ ಮಹಾನಿರ್ದೇಶಕ ಡಾ.ಎಚ್.ಆರ್. ಕೃಷ್ಣಮೂರ್ತಿ ತಮ್ಮ ಸಂಶೋಧನಾ ಲೇಖನದಲ್ಲಿ ಉಲ್ಲೇಖಿಸುವಂತೆ "ಪಕ್ಷಿಯ ಕೂಗು ಮತ್ತು ಹಾಡುಗಳೆರಡರ ಮೂಲ- ಸ್ವರಗಳೇ. ಆದರೆ ವ್ಯತ್ಯಾಸವಿರುವುದು ಸ್ವರಗಳ ಕಾಲಾವಧಿ, ಜೋಡಣೆ, ಏರಿಳಿತ ಮುಂತಾದವುಗಳಲ್ಲಿ. ಕೂಗಿನ ಅವಧಿ ಅತ್ಯಲ್ಪ. ಅದು ವಿವಿಧ ಕಂಪನಾಂಕಗಳ, ಕ್ರಮಬಧ್ಧವಿರದ ಮಶ್ರಣ. ಒಂದೇ ಪಕ್ಷಿ ತನ್ನ ಕರೆಗಳನ್ನು ಅಲ್ಪ-ಸ್ವಲ್ಪ ಬದಲಾವಣೆ ಮಾಡಿ ಸಂತಸ, ಸಂಕಟ, ಗಾಬರಿ, ಎಚ್ಚರಿಕೆ ಮುಂತಾದ ಸಂದರ್ಭಗಳಲ್ಲಿ ವಿವಿಧ ಬಗೆಯ ಕರೆಗಳನ್ನು ಬಳಸುತ್ತದೆ.
ಆದರೆ ಹಾಡು ಮಾತ್ರ ಈ ಎಲ್ಲ ಕರೆಗಳಿಗಿಂತ ಸಂಪೂರ್ಣವಾಗಿ ಭಿನ್ನ. ವೈಜ್ನಾನಿಕವಾಗಿ ಪಕ್ಷಿಯ ಹಾಡು ‘ಒಂದಾದಮೇಲೊಂದರಂತೆ ಹೊರಹೊಮ್ಮುವ, ಪ್ರತ್ಯೇಕವಾಗಿ ಗುರುತಿಸಬಲ್ಲ ವಿನ್ಯಾಸವುಳ್ಳ ವಿವಿಧ ಸ್ವರಗಳ ಮಾಲೆ’. ಹಾಡುಗಳ ವೈಶಿಷ್ಠ್ಯ ಅಡಗಿರುವುದು ಸ್ವರಗಳ ವಿಶಿಷ್ಠ ಸಂಯೋಜನೆ, ಕರಾರುವಾಕ್ ಏರಿಳಿತಗಳಲ್ಲಿ. ಕೋಗಿಲೆ, ಶಮಾ, ಮಧುರಕಂಠ, ಬುಶ್ ಚಾಟ್ ಮುಂತಾದ ಹಕ್ಕಿಗಳ ಹಾಡುಗಳನ್ನು ವಿಷ್ಲೇಶಿಸಿದಾಗ ಅನೇಕ ವಿಷಯಗಳು ತಿಳಿಯುತ್ತವೆ" ಎನ್ನುತ್ತಾರೆ.

ಹಕ್ಕಿಗಳ ಹಾಡುಗಳಲ್ಲಿ ಕೇವಲ ಶುದ್ಧ ಸ್ವರಗಳಿಲ್ಲ. ‘ಪ್ಯುರ್ ನೋಟ್ಸ್’ ಒಂದೇ ಆವರ್ತಾಂಕದ ಶುದ್ಧ ಸ್ವರವೆಂದರೆ ಸಂಗೀತದ ದೃಷ್ಠಿಯಿಂದ ಬಹುಸಪ್ಪೆ. ಶುದ್ಧ ಸ್ವರಗಳೊಡನೆ ಆದಿ ಸ್ವರಗಳು ‘ಓವರ್ ನೋಟ್ಸ್’ ಸೇರಿದರೆ ಹಕ್ಕಿಗಳ ಧ್ವನಿ, ಹಾಡು, ಕಂಠ ತುಂಬಿ ಕೇಳಲು ಇಂಪಾಗಿರುತ್ತದೆ.

ಹಕ್ಕಿಗಳ ಹಾಡಿನಲ್ಲಿರುವ ಸ್ವರಗಳ ಶ್ರುತಿ, ಭಾವ ಮತ್ತು ಘೋಷಗಳಲ್ಲಿ ಅಪಾರ ವೈವಿಧ್ಯವಿದೆ. ಹಾಡುಗಳ ಉದ್ದ, ಲಯ, ಶ್ರುತಿ, ತೀವ್ರತೆ, ಘೋಷ, ಸ್ವರ ಸಂಯೋಜನೆಗಳಲ್ಲಿನ ಸ್ವಂತಿಕೆ ಇವೆಲ್ಲವುಗಳಿಂದಾಗಿ ಪ್ರತಿಯೊಂದು ಪ್ರಭೇದದ ಹಕ್ಕಿ ತನ್ನದೇ ಆದ ವಿಶಿಷ್ಠ ಹಾಗು ನಿರ್ಧಿಷ್ಠ ಹಾಡನ್ನು ಹೊಂದಿದೆ. ಅಷ್ಟೇ ಅಲ್ಲದೆ ಒಂದೇ ಪ್ರಭೇಧದ ಹಕ್ಕಿ ಹತ್ತಾರು ವಿವಿಧ ರೀತಿಯಲ್ಲಿ ಹಾಡುವುದು ಉಂಟು. ಅಮೇರಿಕದ ಹಾಡುಗುಬ್ಬಿ ೨೪ ವಿವಿಧ ರೀತಿಗಳಲ್ಲಿ ಹಾಡುತ್ತದೆ ಎಂಬುದು ದಾಖಲಿಸಲಾಗಿದೆ.

ಹಕ್ಕಿಗಳ ಸಂಗೀತ ಕಛೇರಿಯನ್ನು ಕೇಳಬಯಸುವವರಿಗೆ ಎಪ್ರಿಲ್ ಬಹು ಪ್ರಶಸ್ತವಾದ ತಿಂಗಳು. ಸೂರಕ್ಕಿ, ಭಾರದ್ವಾಜ, ಬುಲ್ ಬುಲ್, ಕಾಜಾಣ, ಕೋಗಿಲೆ, ಮಧುರಕಂಠ, ಮಿನಿವೆಟ್, ಓರಿಯೋಲ್, ಸುವ್ವಿ ಮುಂತಾದ ಹಕ್ಕಿಗಳು ಒಂದೇ ಪ್ರದೇಶದಲ್ಲಿ ಸೇರಿ (ನಾವು ಅಖಿಲ ಭಾರತೀಯ ಸಂಗೀತ ಸಮ್ಮೇಳನ ನಡೆಸಿದಂತೆ!) ಸಾಮೂಹಿಕ ಗಾಯನಗೋಷ್ಠಿ ನಡೆಸುತ್ತವೆ. ಈ ನಮ್ಮ ಗಲಾಟೆಯಲ್ಲಿ ತನ್ನ ಸಂಗಾತಿಯನ್ನು ಮಾತ್ರ ತಲುಪುವಂತೆ ಸೂಕ್ತ ಗತಿ, ಏರಿಳಿತ ಬಳಸಿ ಸಂವಹನ ನೆರವೇರಿಸುವ ರೀತಿ ಬೆರಗು ಹುಟ್ಟಿಸುತ್ತದೆ.

ಎಲ್ಲ ಹಕ್ಕಿಗಳು ಒಟ್ಟಿಗೆ ಹಾಡಿದರೂ ಎಲ್ಲವೂ ಒಂದೇ ಶ್ರುತಿ, ಲಯ, ಘೋಷ್ ದಲ್ಲಿ ಹಾಡುವುದಿಲ್ಲ. ತಮ್ಮ ತಮ್ಮಲ್ಲಿಯೇ ಒಪ್ಪಂದಕ್ಕೆ ಬಂದಂತೆ ಭಾಸವಾಗುವ ರೀತಿಯಲ್ಲಿ ವಿವಿಧ ಶ್ರುತಿ, ಲಯಗಳಲ್ಲಿ ಹಾಡಿ ಹೆಣ್ಣಿನೊಡನೆ ಸಂವಹನ ನಡೆಸಿ ಪ್ರೇಮ ಸಂದೇಶ ರವಾನಿಸುತ್ತವೆ. ಬನ್ನಿ ಇನ್ನಾದರೂ ಈ ಚಡಪಡಿಕೆಯ, ಗೊಂದಲಮಯ ಜಗತ್ತಿನಲ್ಲಿ ತುಸು ಆನಂದ ಪಡೆಯುವ ಮನಸ್ಸು ಮಾಡೋಣ.

ಪಕ್ಷಿಗಳ ಲೋಕದ ಈ ಅಸ್ದೃಶ ಗಾಯಕರಿಗೆ ಮನ:ಪೂರ್ವಕ ಥ್ಯಾಂಕ್ಸ್ ಹೇಳೋಣ.