ಕಂಡೆ ನಾ ಕನಸಿನಲಿ

ಕಂಡೆ ನಾ ಕನಸಿನಲಿ

೧೯೮೦ ಅಥವಾ ೧೯೮೧ರ ವಿಷಯ ಇರಬಹುದು. ನಮ್ಮೂರು ದೊಡ್ಡ ಪೇಟೆ ಅಲ್ಲ. ಬೆಂಗಳೂರು ಮೈಸೂರು ತರಹ ಯಾವಾಗೆಂದರೆ ಆಗ ನಾಟಕ ಸಂಗೀತ ಮೊದಲಾದುವು ಅಲ್ಲಿ ನಡೆಯುತ್ತಿರಲಿಲ್ಲ. ಸಂಗೀತ ಹರಿಕಥೆ ಬೇಕೂಂತಂದ್ರೆ ಗಣಪತಿ ಉತ್ಸವವೋ ರಾಮೋತ್ಸವವೋ ಆಗಬೇಕು. ಇನ್ನು ನಾಟಕ ರಸಮಂಜರಿ ಎಲ್ಲಾ ಬರಬೇಕು ಅಂತಿದ್ರೆ ಡಿಸೆಂಬರ್ ದನದ ಜಾತ್ರೆ ಕಾಲದಲ್ಲೇ. ಅಂತಹದ್ರಲ್ಲಿ ಒಮ್ಮೆ ನಮ್ಮೂರಲ್ಲಿ ಕರ್ನಾಟಕ ರಾಜ್ಯ ಲಾಟರಿಯ ಬಂಪರ್ ಡ್ರಾ ಇತ್ತು.  ಆ ನೆವದಲ್ಲಿ, ಎರಡು ಮೂರು ದಿವಸ ಒಳ್ಳೊಳ್ಳೆ ಕಾರ್ಯಕ್ರಮ ನಡೆಸಿದ್ದರು.

ಅವುಗಳಲ್ಲೊಂದು ಪ್ರಭಾತ್ ಕಲಾವಿದರು ನಡೆಸಿಕೊಟ್ಟ "ಕರ್ನಾಟಕ ವೈಭವ" ಆಗಿತ್ತು. ಪ್ರಭಾತ್ ಕಲಾವಿದರು ಕರ್ನಾಟಕದಲ್ಲೆಲ್ಲ ಮನೆಮಾತು ತಾನೇ. ಹಾಗಾಗಿ ಅವರ ವಿಷಯ ಏನೂ ಹೇಳೋದೇ ಬೇಕಿಲ್ಲ. ಆ ಕಾರ್ಯಕ್ರಮದಲ್ಲೊಂದು ಭಾಗದಲ್ಲಿ ಪುರಂದರ ದಾಸರು ಕಂಡ ಒಂದು ಕನಸಿನ ಚಿತ್ರಣ. ನಿದ್ದೆಹೋಗಿದ್ದ ದಾಸರು ಕನಸಿಂದ ಎಚ್ಚೆತ್ತು ತಾವು ಕಂಡ ಕನಸನ್ನು ಬಣ್ಣಿಸುವ ಚಿತ್ರ. ರಾಗಮಾಲಿಕೆಯಲ್ಲಿದ್ದ ಆ ಹಾಡೂ, ಆ ಪಾತ್ರ ವಹಿಸಿದ ನಟರ ಕಣ್ಣಿನ ಹೊಳಪೂ ಎಷ್ಟೋ ವರ್ಷವಾದರೂ ಇನ್ನೂ ಕಣ್ಣಲ್ಲೇ ಇದೆ ಅನ್ನಿಸುತ್ತೆ. ಆ ಹಾಡನ್ನ ಇಲ್ಲಿ ಬರೆದಿರುವೆ.

ಕಂಡೆ ನಾ ಕನಸಿನಲಿ ಗೋವಿಂದನ!

ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ
ನಂದನ ಕಂದ ಮುಕುಂದನ ಚರಣವ!

ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ
ಬಂದು ಕಾಳಿಂಗನ ಹೆಡೆಯನೇರಿ
ಧಿಂ ಧಿಮಿ ಧಿಮಿಕೆಂಧು ತಾಳಗತಿಗಳಿಂದಾ -
-ನಂದದಿ ಕುಣಿವ ಮುಕುಂದನ ಚರಣವ

ಉಟ್ಟ ಪೀತಾಂಬರ ಉಡಿಯ ಕಾಂಚಿಯ ಡಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವು
ಕಟ್ಟಿದ ವೈಜಯಂತಿ ತುಳಸಿ ವನಮಾಲೆ
ಇಟ್ಟ ದ್ವಾದಶನಾಮ ನಿಗಮ ಗೋಚರನ

ಕಿರು ಬೆರಳಿನ ಮುದ್ರೆ ಉಂಗುರ ಮುಂಗೈಯ
ಕರದಲಿ ಕಂಕಣ ನಲಿದೋಳುಗಳ
ವರ ಚತುರ್ಭುಜ ಶಂಖ ಚಕ್ರದಿ ಮೆರೆವನ
ನಿರತದಿ ಒಪ್ಪುವ ಕರುಣಾಮೂರುತಿಯ

ಬಣ್ಣದ ತುಟಿ ಭಾವ ರಚನೆಯ ಸುಳಿಪಲ್ಲು
ಸಣ್ಣ ನಗೆಯ ನುಡಿ ಸವಿಮಾತಿನ
ಪುಣ್ಯ ಚರಿತ್ರನ ಪೊಳೆವ ಕಿರೀಟವ
ಕಣ್ಣು ಮನ ತಣಿಯದು ಕಂಸಾರಿ ಕೃಷ್ಣನ

ಮಂಗಳ ವರ ತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ
ಶೃಂಗಾರಮೂರುತಿ ಪುರಂದರವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ

ನನಗೆ ಬಹುಶಃ ದಾಸರ ರಚನೆಗಳ ಮೇಲೆ ಪ್ರೀತಿ ಉಂಟಾಗಲಾರಂಭಿಸಿದ್ದೇ ಅಲ್ಲಿರಬಹುದು; ಅದಿರಲಿ.

ಕನ್ನಡದಲ್ಲಿ ಪುರಂದರ ದಾಸರು, ವಿಜಯದಾಸರು, ಶ್ರೀಪಾದರಾಜರು ಮೊದಲಾಗಿ ಹಲವು ಹರಿದಾಸರು ವಿಠಲನ ಮೇಲೆ ಹಾಡಿದಂತೆ, ಮರಾಠಿಯಲ್ಲಿ ಸಂತರಾದ ತುಕಾರಾಮ, ಜ್ಞಾನೇಶ್ವರ, ನಾಮದೇವ ಮೊದಲಾದವರೂ ವಿಠಲನ ಬಗ್ಗೆ ಹಾಡಿ ಹೊಗಳಿದ್ದಾರೆ. ಭೀಮಸೇನ ಜೋಶಿ ಅವರು ಹಾಡಿರುವ ಅಭಂಗಗಳಂತೂ ಬಹಳ ಮನ್ನಣೆ ಗಳಿಸಿವೆ.

ಹೀಗೆ ಕನ್ನಡಿಗರ, ಮರಾಠರ ಇಷ್ಟದೈವವಾದ ವಿಠಲನ ನೆಲೆ-ಹಿನ್ನೆಲೆಯ ಬಗ್ಗೆ ನಾನು ಬರೆದ ಬರಹವೊಂದು ಬೆಂಗಳೂರಿನ ಇಸ್ಕಾನ್ ಸಂಸ್ಥೆಯು ಹೊರತರುವ ಪತ್ರಿಕೆ - ಭಕ್ತಿ ವೇದಾಂತ ದರ್ಶನದ ಜುಲೈ ೨೦೦೮ ಸಂಚಿಕೆಯ ಮುಖಪುಟ ಲೇಖನವಾಗಿ ಮೂಡಿ ಬಂದಿದೆ. ಈ ಬರಹವನ್ನು ಓದಲು, ಕೆಳಗಿನ ಕೊಂಡಿಯ ಮೇಲೆ ಚಿಟಕಿಸಿ.

ಶ್ರೀ ಪಾಂಡುರಂಗ ವಿಟ್ಠಲ:  ನೆಲೆ - ಹಿನ್ನೆಲೆ

ಜುಲೈ ತಿಂಗಳ ಸಂಚಿಕೆಯ ಬೇರೆ ಬರಹಗಳನ್ನು ಓದಲು ಇಲ್ಲಿ ಚಿಟಕಿಸಿ.

ಈ ಬರಹವನ್ನು ಅಣಿಮಾಡುವಾಗ ನೆರವು ನೀಡಿದ ಸಂಪದಿಗರಾದ ಸುನಿಲ್ ಜಯಪ್ರಕಾಶ್ ಮತ್ತು ಶ್ರೀಕಾಂತ್ ಮಿಶ್ರಿಕೋಟಿ ಅವರಿಗೆ ನಾನು ಕೃತಜ್ಞ.

-ಹಂಸಾನಂದಿ

 

 

Rating
No votes yet

Comments